ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಂಬೇಡ್ಕರ್ ವಚನ ಸಂಗ್ರಹದಂತಿದೆ ಡಿ.ಎಸ್ ವೀರಯ್ಯರ ಕೃತಿ: ದೆಹಲಿಯ ಉಪರಾಷ್ಟ್ರಪತಿ ಭವನದಲ್ಲಿ ಬಿಡುಗಡೆಯಾದ ಕೃತಿ ಬಗ್ಗೆ ಗಣ್ಯರ ಚರ್ಚೆ

ಕನ್ನಡದ ಕವಿಯೊಬ್ಬರ ಕೃತಿ ಉಪರಾಷ್ಟ್ರಪತಿ ಭವನದಲ್ಲಿ ಬಿಡುಗಡೆಯಾಗಿರುವುದು ಐತಿಹಾಸಿಕ ದಾಖಲೆ. ಅಂಬೇಡ್ಕರ್ ಕುರಿತ ವೀರಯ್ಯ ಅವರ ಕಾಳಜಿಯ ಕುರಿತು ಹೆಚ್ಚು ಹೇಳುವ ಅಗತ್ಯವಿಲ್ಲ. ಅವರು ಹೋರಾಟದ ಮೂಲಕ ಅಂಬೇಡ್ಕರ್ ಅವರನ್ನು ಜೀವಂತವಾಗಿರಿಸಿದ್ದಾರೆ. ಜತೆಗೆ, ಅವರ ಬರಹಗಳನ್ನು ಹಿಂದಿ, ಇಂಗ್ಲೀಷ್ ಗೆ ಭಾಷಾಂತರ ಮಾಡುವ ಮೂಲಕ ದೇಶಾದ್ಯಂತ ಪಸರಿಸುವಂತೆ ಮಾಡಿದ್ದಾರೆ

ಅಂಬೇಡ್ಕರ್ ವಚನ ಸಂಗ್ರಹದಂತಿದೆ ಡಿ.ಎಸ್ ವೀರಯ್ಯರ ಕೃತಿ

Profile Ashok Nayak Jul 20, 2025 10:11 PM

ಬೆಂಗಳೂರು: ದೆಹಲಿಯ ಉಪರಾಷ್ಟ್ರಪತಿ ಭವನದಲ್ಲಿ ಬಿಡುಗಡೆಯಾದ ಡಿ.ಎಸ್. ವೀರಯ್ಯ ಅವರ ಡಾ. ಬಿ.ಆರ್. ಅಂಬೇಡ್ಕರ್ ಸಂದೇಶಗಳು ಕೃತಿಯ ಹಿಂದಿ ಮತ್ತು ಇಂಗ್ಲೀಷ್ ಅನುವಾದಿತ ಕೃತಿಗಳ ಕುರಿತು ಇಂದು ಶಾಸಕರ ಭವನದ ಸಭಾಂಗಣದಲ್ಲಿ ಗಂಭೀರ ಚರ್ಚೆ ನಡೆಯಿತು.

ದೆಹಲಿಯಲ್ಲಿ ನಡೆದ ಕಾರ್ಯಕ್ರಮದ ಕುರಿತು ಅಭಿನಂದನೆ ಸಲ್ಲಿಸಲು ಕರೆದಿದ್ದ ಸಭೆಯಲ್ಲಿ ಗಣ್ಯರು ವೀರಯ್ಯ ಅವರ ಕೃತಿಯಲ್ಲಿ ಮೂಡಿಬಂದಿರುವ ಅಂಬೇಡ್ಕರ್ ಸಂದೇಶದ ವ್ಯಾಖ್ಯಾನ ಗಳನ್ನು ವಚನ ಸಾಹಿತ್ಯಕ್ಕೆ ಹೋಲಿಸಿದರು. ಬಸವಣ್ಣನವರ ವಚನಗಳಂತೆ ಅಂಬೇಡ್ಕರ್ ಅವರ ಬರಹಗಳನ್ನು ವಚನ ಸಾಹಿತ್ಯ ರೂಪಕ್ಕಿಳಿಸಿದ ಖ್ಯಾತಿ ವೀರಯ್ಯ ಅವರದ್ದು ಎಂದು ಶ್ಲಾಘಿಸಿದರು.

ಹಿರಿಯ ಲೇಖಕರಾದ ಬಿ.ಟಿ. ಲಲಿತಾ ನಾಯಕ್ ಮಾತನಾಡಿ, ಕನ್ನಡದ ಕವಿಯೊಬ್ಬರ ಕೃತಿ ಉಪರಾಷ್ಟ್ರಪತಿ ಭವನದಲ್ಲಿ ಬಿಡುಗಡೆಯಾಗಿರುವುದು ಐತಿಹಾಸಿಕ ದಾಖಲೆ. ಅಂಬೇಡ್ಕರ್ ಕುರಿತ ವೀರಯ್ಯ ಅವರ ಕಾಳಜಿಯ ಕುರಿತು ಹೆಚ್ಚು ಹೇಳುವ ಅಗತ್ಯವಿಲ್ಲ. ಅವರು ಹೋರಾಟದ ಮೂಲಕ ಅಂಬೇಡ್ಕರ್ ಅವರನ್ನು ಜೀವಂತವಾಗಿರಿಸಿದ್ದಾರೆ. ಜತೆಗೆ, ಅವರ ಬರಹಗಳನ್ನು ಹಿಂದಿ, ಇಂಗ್ಲೀಷ್ ಗೆ ಭಾಷಾಂತರ ಮಾಡುವ ಮೂಲಕ ದೇಶಾದ್ಯಂತ ಪಸರಿಸುವಂತೆ ಮಾಡಿದ್ದಾರೆ. ಇದು ತೆಲುಗು, ತಮಿಳು ಭಾಷೆಗೂ ಭಾಷಾಂತರವಾಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Vishwavani Editorial: ಅಕ್ರಮವಾಸಿಗಳನ್ನು ಒಕ್ಕಲೆಬ್ಬಿಸಿ

ಲೇಖಕರಾದ ಡಿ.ಎಸ್. ವೀರಯ್ಯ ಮಾತನಾಡಿ, ಉಪರಾಷ್ಟ್ರಪತಿ ಅವರು ಪುಸ್ತಕ ಮೆಚ್ಚಿ ತಮ್ಮದೇ ಕಚೇರಿಯಲ್ಲಿ ಬಿಡುಗಡೆ ಮಾಡುವ ನಿರ್ಧಾರ ಮಾಡಿದ್ದರು. ಅಂತೆಯೇ ಕಾರ್ಯಕ್ರಮ ಆಯೋಜನೆ ಮಾಡಿ ಪುಸ್ತಕ ಬಿಡುಗಡೆ ಮಾಡಿ, ಅಂಬೇಡ್ಕರ್ ಆಶಯಗಳು ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು. ದೇಶದ ಎಲ್ಲ ರಾಜಕಾರಣಿಗಳೂ ಓದಲೇ ಬೇಕಾದ ಪುಸ್ತಕ ಎಂದು ಶ್ಲಾಘಿಸಿದ್ದು ನನಗೆ ಹೆಮ್ಮೆಯ ಕ್ಷಣ ಎಂದರು.

ಅಂಬೇಡ್ಕರ್ ಸಂವಿಧಾನದ ಮಹತ್ವ ಹಾಗೂ ಅಂಬೇಡ್ಕರ್ ಪ್ರಸ್ತುತ ದಿನಮಾನದಲ್ಲಿ ಎಷ್ಟು ಮುಖ್ಯವಾಗುತ್ತಾರೆ ಎಂಬ ಮೂಲಕ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು, ಬಾಬಾ ಸಾಹೇ ಬರ ಮೇಲಿನ ತಮ್ಮ ಗೌರವ ಹೊರಹಾಕಿದರು. ಕರ್ನಾಟಕದಿಂದ ಆಗಮಿಸಿದ್ದ ಎಲ್ಲ ಗಣ್ಯರಿಗೆ ತಮ್ಮ ಕಚೇರಿಯಲ್ಲಿ ಆತಿಥ್ಯ ನೀಡಿ ಸತ್ಕರಿಸಿದ್ದು ಮರೆಯಲಾಗದ ಕ್ಷಣ ಎಂದರು.

ಕಾರ್ಯಕ್ರಮ ಆರಂಭದಲ್ಲಿ ಡಿ.ಎಸ್. ವೀರಯ್ಯ ಅವರು ವಿರಚಿತ ಗೀತೆಗಳನ್ನು ಪ್ರದರ್ಶನ ಮಾಡಲಾಯಿತು. ಅವರ ಗೀತೆಗಳನ್ನು ಹಾಡಿ ಗಾಯಕರು ರಂಜಿಸಿದರು. ವಿಧಾನಪರಿಷತ್ ಮಾಜಿ ಸದಸ್ಯ ಅ.ದೇವೇಗೌಡ, ಕಾವೇರಿ ಸಂರಕ್ಷಣಾ ವೇದಿಕೆಯ ರಾಮು ಸೇರಿ ಅನೇಕ ಗಣ್ಯರು ವೀರಯ್ಯ ಅವರನ್ನು ಸನ್ಮಾನಿಸಿದರು.

ಪುಸ್ತಕಗಳ ಅನುವಾದಕರಾದ ಎಚ್.ಎಸ್. ಎನ್ ಪ್ರಕಾಶ್, ಶ್ರೀನಿವಾಸಯ್ಯ ಅವರಿಗೆ ಸನ್ಮಾನ ಮಾಡಲಾಯಿತು. ದೆಹಲಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಡಿ.ಎಸ್. ವೀರಯ್ಯ ಅವರು ಸ್ಮರಣಿಕೆ ನೀಡಿ ಅಭಿನಂದನೆ ಸಲ್ಲಿಸಿದರು. ಮಾಜಿ ಸಚಿವೆ ಹಾಗೂ ಲೇಖಕಿ ಬಿ.ಟಿ. ಲಲಿತಾ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು.