ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kannada flag: ಕನ್ನಡ ಧ್ವಜಕ್ಕೆ ಕೇಂದ್ರದ ಮುಂದೆ ಮತ್ತೆ ಹಕ್ಕು ಮಂಡಿಸಿದ ಕರ್ನಾಟಕ

Kannada Flag: 2017ರಲ್ಲೇ ಕನ್ನಡ ಬಾವುಟ ಅಧಿಕೃತಗೊಳಿಸಲು ಕೋರಿ ಕೇಂದ್ರ ಸರಕಾರಕ್ಕೆ ಅಂದು ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ (CM Siddaramaiah) ಸರ್ಕಾರ ಮನವಿ ಸಲ್ಲಿಸಿತ್ತು. ಇದೀಗ ಮತ್ತೊಮ್ಮೆ ಪತ್ರ ಬರೆಯುವ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಿದೆ.

ಕನ್ನಡ ಧ್ವಜಕ್ಕೆ ಕೇಂದ್ರದ ಮುಂದೆ ಮತ್ತೆ ಹಕ್ಕು ಮಂಡಿಸಿದ ಕರ್ನಾಟಕ

ಹರೀಶ್‌ ಕೇರ ಹರೀಶ್‌ ಕೇರ Jul 19, 2025 12:19 PM

ಬೆಂಗಳೂರು: ರಾಜ್ಯ ಸರ್ಕಾರ (Karnataka Government) ಕನ್ನಡ ಧ್ವಜಕ್ಕೆ (Kannada flag) ಮತ್ತೆ ಹಕ್ಕು ಮಂಡಿಸಿದೆ. ಹಳದಿ- ಕೆಂಪು ಬಾವುಟಕ್ಕೆ ಅಧಿಕೃತ ಮಾನ್ಯತೆ ಕೊಡುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ (Shivraj Tangadagi) ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 2017ರಲ್ಲೇ ಬಾವುಟ ಅಧಿಕೃತಗೊಳಿಸಲು ಕೋರಿ ಕೇಂದ್ರಕ್ಕೆ ಅಂದಿನ ಸಿದ್ದರಾಮಯ್ಯ (CM Siddaramaiah) ಸರ್ಕಾರ ಮನವಿ ಸಲ್ಲಿಸಿತ್ತು. ಇದೀಗ ಮತ್ತೊಮ್ಮೆ ಪತ್ರ ಬರೆಯುವ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಿದೆ.

ಶೀಘ್ರದಲ್ಲೇ ಕೇಂದ್ರದ ಸಂಸ್ಕೃತಿ ಸಚಿವರನ್ನು ಭೇಟಿ ಮಾಡಿ ಕನ್ನಡ ಬಾವುಟಕ್ಕೆ ಅಧಿಕೃತತೆ ಹಾಗೂ ಶಾಸ್ತ್ರೀಯ ಭಾಷೆ ಅನುದಾನ ಕೋರಿ ಸಚಿವರು ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬರೀ ಹೆಸರಿಗೆ ಮಾತ್ರ ಇದೆ. ಈಗಿರುವ ಕನ್ನಡದ ಬಾವುಟ ಅಧಿಕೃತ ಅಲ್ಲ. ಅದೇ ಬಾವುಟ ಅಧಿಕೃತಗೊಳಿಸಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಕನ್ನಡ ಬಾವುಟಕ್ಕೆ ಒಪ್ಪಿಗೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಶೋಭಾ ಕರಂದ್ಲಾಜೆ ದಯಮಾಡಿ ಕೇಂದ್ರದಿಂದ ಕನ್ನಡ ಬಾವುಟಕ್ಕೆ ಒಪ್ಪಿಗೆ ಕೊಡಿಸಲಿ. ಶಾಸ್ತ್ರೀಯ ಸ್ಥಾನಮಾನ ವಿಚಾರದಲ್ಲಿ ಅನುದಾನ ಕೊಡಿಸಲಿ. ತಮಿಳುನಾಡಿಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಆದರೆ ಕನ್ನಡಕ್ಕಿಲ್ಲ. ಜುಲೈ ಅಂತ್ಯ ವೇಳೆಗೆ ನಿಯೋಗದ ಜತೆ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿ ಅನುದಾನಕ್ಕೆ ಮನವಿ ಮಾಡುತ್ತೇವೆ ಎಂದಿದ್ದಾರೆ.

ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್​ ಈ ಬಗ್ಗೆ ಹೇಳಿಕೆ ನೀಡಿದ್ದು, ನಾವು ಕನ್ನಡದ ವಿರೋಧಿಗಳಲ್ಲ. ಕಾಂಗ್ರೆಸ್‌ಗಿಂತ ಜಾಸ್ತಿ ಹೋರಾಟ ನಾನು ಮಾಡಿದ್ದೇನೆ. ಗೋಕಾಕ್ ಚಳುವಳಿಯಲ್ಲಿ ನಾನೂ ಭಾಗಿಯಾಗಿ ಲಾಠಿ ಏಟು ತಿಂದಿದ್ದೇನೆ. ಕನ್ನಡ ನೆಲ, ಜಲ, ಭಾಷೆಯ ವಿಚಾರವಾಗಿ ನಾವು ಏನು ಮಾಡಿದ್ದೇವೆ ಎಂದು ಆತ್ಮಸಾಕ್ಷಿಯಾಗಿ ಪ್ರಶ್ನೆ ಮಾಡಿಕೊಂಡು ಆಮೇಲೆ ಮುಂದೆ ಹೋಗಲಿ. ಎಸ್​​ಎಸ್​​ಎಲ್​​​ಸಿ ಕನ್ನಡ ಭಾಷೆಯ ಅಂಕ ಕಡಿತ ಮಾಡಿ, ಅಲ್ಲಿ ಧ್ವಜ ಅಂತ ಹೋದರೆ ಹೇಗೆ? ರಾಜ್ಯದಲ್ಲಿ ಅಭಿವೃದ್ಧಿ ಆಗಿಲ್ಲ, ಗಮನ ಬೇರೆಡೆ ಸೆಳೆಯಲು ಕನ್ನಡ ಧ್ವಜದ ವಿಚಾರ ತಂದಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: Language Row: ಬೆಂಗಳೂರಲ್ಲಿ ಕನ್ನಡ ಮಾತಾಡೋದೇ ತಪ್ಪಾ?; ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ ಉಪನ್ಯಾಸಕ ವಜಾ!