ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tumkur News: ಕಿಪ್ಪಿ ಕೀರ್ತಿಗಾಗಿ ಚಾಕು ಹಿಡಿದು ರೀಲ್ಸ್ ಮಾಡಿದ್ದ ಯುವಕನಿಗೆ ಬಿಸಿ ಮುಟ್ಟಿಸಿದ ಪೊಲೀಸರು

Tumkur News: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕಿಪ್ಪಿ ಕೀರ್ತಿಗಾಗಿ ಬಿಲ್ಡಪ್‌ ಕೊಟ್ಟು ಚಾಕು ಹಿಡಿದು ರೀಲ್ಸ್ ಮಾಡಿದ್ದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೊಬಳಿಯ ಹೊಸಕೆರೆ ಮೂಲದ ಮುತ್ತು ಅಲಿಯಾಸ್ ಬ್ಲಾಕ್ ಕೋಬ್ರಾ ಎಂಬಾತನಿಗೆ ತುಮಕೂರಿನ ಕ್ಯಾತ್ಸಂದ್ರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಚಾಕು ಹಿಡಿದು ರೀಲ್ಸ್ ಮಾಡಿದ್ದ ಯುವಕನಿಗೆ ಬಿಸಿ ಮುಟ್ಟಿಸಿದ ಪೊಲೀಸರು

Profile Siddalinga Swamy Jul 19, 2025 9:59 PM

ತುಮಕೂರು: ಚಾಕು ಹಿಡಿದು ರೀಲ್ಸ್ ಮಾಡಿದ್ದ ಯುವಕನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕಿಪ್ಪಿ ಕೀರ್ತಿಗಾಗಿ ಬಿಲ್ಡಪ್‌ ಕೊಟ್ಟು ಚಾಕು ಹಿಡಿದು ರೀಲ್ಸ್ ಮಾಡಿದ್ದ ಮುತ್ತು ಅಲಿಯಾಸ್ ಬ್ಲಾಕ್ ಕೋಬ್ರಾ ಎಂಬಾತನಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ತುಮಕೂರು ಜಿಲ್ಲೆಯ (Tumkur News) ಮಧುಗಿರಿ ತಾಲೂಕಿನ ಮಿಡಿಗೇಶಿ ಹೊಬಳಿಯ ಹೊಸಕೆರೆ ಮೂಲದ ಮುತ್ತು, ನಗರದ ಸುತ್ತಮುತ್ತ ಕಡಲೆಕಾಯಿ ವ್ಯಾಪಾರ ಮಾಡಿಕೊಂಡಿದ್ದಾನೆ. ಕಿಪ್ಪಿ ಕೀರ್ತಿ ವಿಚಾರವಾಗಿ ಸಾಕಷ್ಟು ವಿಡಿಯೋಗಳನ್ನು ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದ.

ಚಾಕು ಹಿಡಿದು ವಿಡಿಯೋ

ಮುತ್ತು ಹನುಮಕ್ಕ ಎಂಬ ಸೋಶಿಯಲ್ ಮೀಡಿಯಾ ಐಡಿಯಲ್ಲಿ ಚಾಕು ಹಿಡಿದು ವಿಡಿಯೋ ಮಾಡಿದ್ದ ಮುತ್ತು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದನು. ಕಿಪ್ಪಿ ಕೀರ್ತಿ ಹೆಸರೇಳಿದರೆ ನಾಲಿಗೆ ಕತ್ತರಿಸುತ್ತೇನೆ ಎಂದು ಬಿಲ್ಡಪ್ ಕೊಟ್ಟಿದ್ದನು. ಚಾಕು ಹಿಡಿದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಕ್ಯಾತ್ಸಂದ್ರ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದರು.

ಮುತ್ತನನ್ನು ಠಾಣೆಗೆ ಕರೆಸಿ ಪೊಲೀಸರು ಮತ್ತೊಮ್ಮೆ ಈ ರೀತಿ ವಿಡಿಯೋ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಮತ್ತೊಮ್ಮೆ ಚಾಕು ಹಿಡಿದು ಈ ರೀಲ್ಸ್ ಮಾಡುವುದಿಲ್ಲ ಎಂದು ಮುತ್ತು ಪೊಲೀಸರ ಮುಂದೆ ಹೇಳಿಕೆಯನ್ನು ದಾಖಲಿಸಿದ್ದಾನೆ. ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಎಚ್ಚರಿಕೆ ನೀಡಿ ಮುತ್ತುನನ್ನು ಬಿಟ್ಟು ಕಳುಹಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಏಯ್ ಕಪ್ಪೆ, ನರಸೇಪುರದ ಸುನಿಲ್ ಕಪ್ಪೆ. ಏನೋ ನಿಂದು, ಯಾರನ್ನು ಮೂಟೆ ಕಟ್ಟಿ ಹಾಕ್ತಿನಿ ಅಂತ ಹೇಳ್ತಿದ್ದೀಯಾ? ಜಾಸ್ತಿ ಮಾಡ್ತಿದ್ದೀಯಾ? ತುಮಕೂರಿಗೆ ಬಂದು ಮುತ್ತು ಬ್ಲಾಕ್ ಕೋಬ್ರಾ ಯಾರು ಅಂತ ಕೇಳು? ತುಮಕೂರಿನ ಜನ ನನ್ನ ಹಿಸ್ಟರಿ ಹೇಳುತ್ತಾರೆ. ನನ್ನ ಹೆಸರು ಕೇಳಿದ್ರೆ ನೀನು ದಂಗಾಗಿ ಹೋಗ್ತಿಯಾ. ತುಮಕೂರಿಗೆ ಬಂದ್ರೆ ನಿನ್ನನ್ನು ಚುಚ್ಚಿ ಸಾಯಿಸ್ತೀನಿ. ತುಮಕೂರಿಗೆ ಬಂದಾಗ ನನ್ನ ಕೈಗೆ ಸಿಕ್ಕರೆ ನೀನು ಫಿನಿಶ್. ಇನ್ನೊಮ್ಮೆ ಕಿಪಿ ಕೀರ್ತಿ ಹೆಸರು ಹೇಳಿದರೆ ನಿನ್ನ ನಾಲಿಗೆ ಕತ್ತರಿಸುತ್ತೇನೆ. ಉಸಿರಾಡೋಕ್ಕೆ ಆಗದಂತೆ ಕೊಂದು ಮೂಟೆ ಕಟ್ಟಿ ಸಕಲೇಶಪುರಕ್ಕೆ ಬಂದು ಹೇಮಾವತಿ ನದಿಗೆ ಎಸೆಯುತ್ತೇನೆ ಎಂದು ಚಾಕು ಹಿಡಿದು ಮುತ್ತು ಜೀವ ಬೆದರಿಕೆ ಹಾಕಿದ್ದನು.

ಕ್ಷಮೆ ಕೇಳಿದ ವಿಡಿಯೋ

ನಮಸ್ಕಾರ, ನಾನು ಇವತ್ತು ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿದ್ದೇನೆ. ರೀಲ್ಸ್ ಮಾಡುವ ಹುಚ್ಚಾಟದಲ್ಲಿ ಚಾಕು ತೋರಿಸೋದು, ಬೇರೆಯವರಿಗೆ ಜೀವ ಬೆದರಿಕೆ ಹಾಕೋದನ್ನು ಮಾಡಿದ್ದೆ. ಈ ರೀತಿ ಮಾಡೋದು ಕಾನೂನಿನಲ್ಲಿ ಅಕ್ಷಮ್ಯ ಅಪರಾಧ. ನನಗೆ ಈ ಮಾಹಿತಿ ಇಲ್ಲದೇ ವಿಡಿಯೋ ಮಾಡಿದ್ದೆ. ಚಾಕು ತೋರಿಸಿ, ಜೀವ ಬೆದರಿಕೆ ಹಾಕುವಂತಹ ರೀಲ್ಸ್ ಗಳನ್ನು ಯಾರು ಮಾಡಬಾರದು ಎಂದು ನಾನು ಕೇಳಿಕೊಳ್ಳುತ್ತೇನೆ. ನೀವು ಯಾರೇ ಇಂತಹ ವಿಡಿಯೋ ಮಾಡಿದ್ರೆ ಪೊಲೀಸರು ಬಿಡಲ್ಲ. ನಾನು ಹೊಸಕರೆಯಲ್ಲಿದ್ದರೂ ಪೊಲೀಸರು ನನ್ನನ್ನು ಎತ್ತಾಕೊಂಡು ಬಂದಿದ್ದಾರೆ. ಈ ಬಗ್ಗೆ ಯುವಕರಲ್ಲಿಯೂ ಭಯ ಇರಬೇಕು. ಪೊಲೀಸರು ಕರೆಸಿ ನನಗೆ ಬುದ್ಧಿ ಹೇಳಿದ್ದಾರೆ. ಇನ್ಮುಂದೆ ನಾನು ಸಹ ಇಂತಹ ವಿಡಿಯೋಗಳನ್ನು ಮಾಡಲ್ಲ ಎಂದು ಕ್ಷಮೆ ಯಾಚಿಸಿದ್ದಾನೆ.‌

ಈ ಸುದ್ದಿಯನ್ನೂ ಓದಿ | Fraud Case: ಐಷಾರಾಮಿ ಮನೆ ತೋರಿಸಿ ಉದ್ಯಮಿಗಳಿಂದ ಕೋಟಿ ಕೋಟಿ ವಂಚಿಸಿದವನ ಬಂಧನ

image

ಸಾಮಾಜಿಕ ಜಾಲತಾಣವನ್ನು ಉತ್ತಮ ಕಾರ್ಯಕ್ಕಾಗಿ ಬಳಸಿಕೊಳ್ಳಬೇಕು ಯಾವುದೇ ರೀತಿಯಿಂದಲೂ ದುರ್ಬಳಕೆ ಮಾಡಿಕೊಳ್ಳಬಾರದು. ಸಾಮಾಜಿಕವಾಗಿ ಪರಿಣಾಮ ಬೀರುವ ವಿಡಿಯೋಗಳನ್ನು ಹರಿಬಿಟ್ಟರೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತದೆ.

ಅಶೋಕ್, ಪೊಲೀಸ್ ವರಿಷ್ಠಾಧಿಕಾರಿ, ತುಮಕೂರು.