About Us Advertise with us Be a Reporter E-Paper

ಯಾತ್ರಾಯಾತ್ರಾ panel2

ಕಾಸ್ ಪುಷ್ಪ ಮೈದಾನ ಆಹ್ಲಾದಕರ ಅನುಭವ ನೀಡುವ ನಿಸರ್ಗ ತಾಣ

ರಾಜೀವ ನಾರಾಯಣ ನಾಯಕ

ತ್ತರಾಖಂಡ ರಾಜ್ಯದಲ್ಲಿರುವ ಹಿಮಾಲಯ ಪರ್ವತ ಶ್ರೇಣಿಗಳ ನಡುವಿನ ಪ್ರಸಿದ್ಧ ಫ್ಲವರ್ ವ್ಯಾಲೀ ಬಗ್ಗೆ ನೀವು ಕೇಳಿರುತ್ತೀರಿ. ಸಹಸ್ರಾರು ಹೂಗಳು ಅರಳಿರುವ ಅದ್ಭುತ ಸೌಂದರ್ಯವನ್ನು ಸವಿಯಲು ನಿಸರ್ಗ ಪ್ರೇಮಿಗಳು ಈ ಹೂ ಕಣಿವೆಗೆ ಚಾರಣಗೈಯುವುದು ಎಲ್ಲರಿಗೂ ತಿಳಿದದ್ದೇ! ಆದರೆ ಮಹಾರಾಷ್ಟ್ರದ ಹೂಕಣಿವೆ ಎಂದು ಪ್ರಸಿದ್ಧವಾಗಿರುವ ಕಾಸ್ ಪುಷ್ಪ ಪಠಾರ್ (ಕಾಸ್ ಫ್ಲವರ್ ಬಗ್ಗೆ ಕೇಳಿದ್ದೀರಾ?

ಮಹಾರಾಷ್ಟ್ರ ರಾಜ್ಯದ ಸಾತಾರಾ ಜಿಲ್ಲೆಯು ಮಹಾಬಲೇಶ್ವರ, ಪಂಚಗಣಿಯಂಥ ಸುಂದರ ಗಿರಿಧಾಮಗಳಿಗೂ ಹಲವಾರು ಕೋಟೆ ಕೊತ್ತಲಗಳಿಗೂ, ಅಲ್ಲಿಯ ವಿಶಿಷ್ಟ ಸಿಹಿತಿನಿಸು ಕಂದಿ ಪೇಡೆಗೂ ಪ್ರಸಿದ್ಧಿ ಪಡೆದಿದ್ದರೂ ಇಲ್ಲಿ ಕಾಸ್ ಪಠಾರ್ ಎಂಬ ವಿಶ್ವ ಪ್ರಸಿದ್ಧಿಯನ್ನು ಹೊಂದಿದ ಅಪರೂಪದ ತಾಣವೊಂದಿದೆ. ಸಾತಾರಾ ಪಟ್ಟಣದಿಂದ ಇಪ್ಪತೈದು ಕಿಲೋ ಮೀಟರ್ ದೂರದಲ್ಲಿ, ಸಮುದ್ರಮಟ್ಟದಿಂದ ಮೂರೂವರೆ ಸಾವಿರ ಅಡಿ ಎತ್ತರದ ಸಹ್ಯಾದ್ರಿ ಪರ್ವತ ಶ್ರೇಣಿಗಳ ತುದಿಯಲ್ಲಿ ಈ ಪುಷ್ಪ ಮೈದಾನವು ಕಂಗೊಳಿಸುತ್ತಿದೆ. ಸುಮಾರು ಚದರ ಕಿಮಿ ವಿಸ್ತಾರದ ಸಮತಟ್ಟಾದ ಭೂಮಿಯಲ್ಲಿ ನೂರಾರು ಬಗೆಯ ಮನಸೂರೆ ಗೊಳ್ಳುವ ಹೂ ಸಸ್ಯಗಳಿವೆ.

ಇಡೀ ಪ್ರದೇಶವು ಚೀರಿಕಲ್ಲಿನ ಮೈದಾನವಾಗಿದ್ದು ಅದರ ಮೇಲೆ ಚಾಪೆಯಂತೆ ಹಾಸಿರುವ ಒಂದೆರಡು ಇಂಚು ಮಾತ್ರ ಮಣ್ಣಿನ ಪದರವಿದೆ. ಮಳೆಗಾಲದಲ್ಲಿ ಏಳೆಂಟು ಇಂಚು ಎತ್ತರಕ್ಕೆ ಬೆಳೆಯುವ ಚಿಕ್ಕಚಿಕ್ಕ ಹುಲ್ಲಿನಂಥ ಸಸ್ಯಗಳು ಸುಂದರ ಸುಮಗಳನ್ನು ಎತ್ತಿ ತೂಗುವ ದೃಶ್ಯ ಮೋಹಕವಾಗಿರುತ್ತದೆ. ಹಲವು ಬಣ್ಣ ಮತ್ತು ಹಲವು ಆಕಾರಗಳ ಹೂಗಳು, ಮೆಲ್ಲನೆ ಬೀಸುವ ತಂಗಾಳಿ, ನೀಲಿ ಆಕಾಶ, ಒತ್ತುವ ಮೋಡಗಳುಈ ಅದ್ಭುತ ದೃಶ್ಯ ಸಂಯೋಜನೆಯಲ್ಲಿ ನೀವು ಮೈಮರೆಯುತ್ತೀರಿ.

ಕಾಸ್ ಪಠಾರದಲ್ಲಿ ಸುಮಾರು ಎಂಟುನೂರೈವತ್ತು ಬಗೆಯ ಹೂಗಳು ಅರಳುತ್ತವಂತೆ. ಕೆಲವಂತೂ ಕಾಸ್ ಪಠಾರದಲ್ಲಿ ಮಾತ್ರ ಅರಳುವ ಹೂಗಳಂತೆ. ಏಳು ವರ್ಷಕ್ಕೊಮ್ಮೆ ಹೂ ಅರಳಿಸುವ ವಿಶಿಷ್ಟ ಸಸ್ಯಗಳೂ ಇಲ್ಲಿವೆ. ದೂರದ ವರೆಗೂ ಕಣ್ಣು ಹಾಯಿಸಿದರೆ ಇಡೀ ಹೂ ಮೈದಾನವು ಹಸಿರು ಕ್ಯಾನ್ವಾಸ್ ಮೇಲೆ ಹಲವು ಬಣ್ಣಗಳ ಕುಂಚವನ್ನು ಬಳಸಿದ ಕಲಾವಿದನ ಕೈಚಳಕದಂತೆ ಕಂಗೊಳಿಸುತ್ತದೆ. ಹೂ ಅರಳಿಸುವ ಪ್ರಕ್ರಿಯೆಯು ಬೇರೆಬೇರೆ ಬೇರೆಬೇರೆ ಸಮಯದಲ್ಲಿ ಜರುಗುವುದರಿಂದ ಮೈದಾನದ ವರ್ಣ ವಿನ್ಯಾಸವು ಬದಲಾಗುತ್ತಿರುತ್ತದೆ. ಒಮ್ಮೆ ಕಾಮನಬಿಲ್ಲೇ ಧರೆಗಿಳಿದಂತೆ ಕಂಡರೆ ಇನ್ನೊಮ್ಮೆ ಇಡೀ ಮೈದಾನದಲ್ಲಿ ಏಕವರ್ಣದ ಚಾಪೆ ಹಾಸಿದಂತೆ ಭಾಸವಾಗುತ್ತದೆ. ಹತ್ತಿರದಲ್ಲೇ ನೈದಿಲೆ ಅರಳಿರುವ ಚಿಕ್ಕ ಸರೋವರವೂ, ಕಣಿವೆಯಲ್ಲಿ ಹರಿವ ನದಿಗೆ ಒಡ್ಡು ಕಟ್ಟಿ ಉಂಟಾದ ಜಲಾಶಯವೂ ಇವೆ. ಅಲ್ಲಿಂದಲೇ ಅರ್ಧ ಸಾತಾರಾ ಪಟ್ಟಣಕ್ಕೆ ನೀರು ಪಂಪಿಂಗ್ ಅಗತ್ಯವಿಲ್ಲದೇ ಸರಾಗವಾಗಿ ಸರಬರಾಜು ಆಗುತ್ತದಂತೆ! ಈ ಜಲಾಶಯದ ಬಳಿ ಆದಿವಾಸಿ ಮಹಿಳೆಯರು ಮಾರುವ ಝುಣ್ಕಾ ಭಾಕ್ರಿಯ ನೋಡಲು ಮರೆಯದಿರಿ!

ಕಾಸ್ ಪಠಾರವು ತಿಂದುಂಡು ಕುಡಿದು ಮಜಾ ಮಾಡಿ ಬರುವ ಜಾಗವಲ್ಲ. ಖುಶಿಗೆ ಎಲ್ಲಿಬೇಕಾದಲ್ಲಿ ನಡೆದಾಡಿ ಕುಣಿದಾಡಿ ಬರುವ ಫುಟಬಾಲ್ ಮೈದಾನವೂ ಅಲ್ಲ. ಕೋಮಲ ಪುಷ್ಪಗಳು ನಿಮ್ಮ ಕಾಲಡಿಗೆ ಸಿಕ್ಕಿ ಅಪ್ಪಚ್ಚಿಯಾಗದಂತೆ ಜಾಗ್ರತೆ ವಹಿಸಿ ನಿರ್ದಿಷ್ಟ ದಾರಿಯಲ್ಲಿ ಮಾತ್ರ ನಡೆಯಬೇಕಾಗುತ್ತದೆ. ನಡೆದಾಡುವ ದಾರಿ ಯಲ್ಲಿ ತೇವಾಂಶವಿರುವುದರಿಂದ ಜಾರದಂತ ಶ್ಯೂಸ್ ಅಥವಾ ಪಾದರಕ್ಷೆಗಳನ್ನು ಧರಿಸಬೇಕು.

ಇಡೀ ಪ್ರದೇಶವು ಅರಣ್ಯ ಇಲಾಖೆಯ ಮುತುವರ್ಜಿಯಲ್ಲಿದೆ. ಕಾಸ್ ಪಠಾರವು ಈಗ ವಿಶ್ವದ ನಿಸರ್ಗ ತಾಣವೆಂದು ಘೋಷಿಸಲ್ಪಟ್ಟಿದೆ. ಸೂಕ್ಷ್ಮ ಮತ್ತು ವಿಶಿಷ್ಟವಾಗಿರುವ ಇಲ್ಲಿಯ ಇಕಾಲಜಿಗೆ ಹಾನಿಯಾಗದಿರಲು ಅನೇಕ ನಿರ್ಬಂಧಗಳಿವೆ. ಸಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿಯ ಕೆಲವು ದಿನಗಳು ಮಾತ್ರ ಈ ಸೌಂದರ್ಯವನ್ನು ಸವಿಯಲು ಸಾಧ್ಯ. ಯಾಕೆಂದರೆ ಹೂವುಗಳು ಅರಳುವುದು ಈ ಕೆಲವೇ ದಿನಗಳಲ್ಲಿ ಮಾತ್ರ.

ಪುಷ್ಪ ಪಠಾರ್ ಪ್ರವೇಶಕ್ಕೆ ಅನುಮತಿ ಸಿಗುವ ಅವಧಿ, ಆಯಾ ಸಮಯದಲ್ಲಿ ಅರಳಿರುವ ಹೂಗಳ ಚಿತ್ರಗಳುಇತ್ಯಾದಿ ವಿವರಗಳು ಅಧಿಕೃತ ವೆಬ್ ಸೈಟ್ಡಿಡಿಡಿ..ಜ್ಞಿ.ಜ್ಞಿನಲ್ಲಿ ಸಿಗುತ್ತವೆ. ಇಲ್ಲಿಯ ವಿಶಿಷ್ಟ ಪರಿಸರಕ್ಕೆ ಧಕ್ಕೆ ಎಚ್ಚರಿಕೆ ವಹಿಸಲು ದಿನಕ್ಕೆ ನಾಲ್ಕು ಬ್ಯಾಚುಗಳಲ್ಲಿ ಮೂರುಸಾವಿರ ಪ್ರವಾಸಿಗರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಆನ್ ಲೈನಿನಲ್ಲಿ ಮುಂಚಿತವಾಗಿ ನೋಂದಾಯಿಸಿಕೊಳ್ಳುವುದು ಕಡ್ಡಾಯ.

ಕಾಸ್ ಪಠಾರವು ವಿರಳ ಸಸ್ಯಗಳ ಕುರಿತ ಸಸ್ಯಶಾಸ್ತ್ರೀಯ ಅಧ್ಯಯನಕ್ಕೂ, ತಂಗಾಳಿಯಲ್ಲಿ ನಾಜೂಕು ಸಸ್ಯಗಳೊಂದಿಗೆ ಉಯ್ಯಾಲೆಯಾಡುವ ಚಿಕ್ಕಚಿಕ್ಕ ಹೂಗಳು ನೀಡುವ ಆಹ್ಲಾದಕರ ಅನುಭವಕ್ಕೂ ಹೇಳಿ ಮಾಡಿಸಿದ ತಾಣ!

Tags

Related Articles

Leave a Reply

Your email address will not be published. Required fields are marked *

Language
Close