ಸಾಫ್ಟ್ವೇರ್ ಉದ್ಯೋಗಿ ಪೂಜಾಳ ಆರು ವರ್ಷದ ಮಗ ಗೌತಮ್ಗೆ ಇತ್ತೀಚೆಗೆ ಅತಿಯಾದ ಕೋಪ. ಸಿಟ್ಟಿನ ಭರದಲ್ಲಿ ಮನೆಯಲ್ಲಿರುವ ವಸ್ತುಗಳನ್ನೆಲ್ಲಾ ಎಸೆಯುವುದು, ಕಿತ್ತು ಹಾಕುವುದು ಮಾಡುತ್ತಿದ್ದ. ಮಕ್ಕಳ ಜತೆ ಸೇರಿ ಈ ರೀತಿ ಕಲಿತನೆಂದು, ಆತ ಹೊರಗಡೆ ಮಕ್ಕಳ ಜತೆ ಆಟ ಆಡದಂತೆ ನಿರ್ಭಂದಿಸಲಾಯಿತು. ಇದೇ ವರ್ತನೆ ಮುಂದುವರಿದಾಗ ವೈದ್ಯರನ್ನು ಸಂಪರ್ಕಿಸಲಾಯಿತು. ಆಗಲೇ ತಮ್ಮ ಮಗ ಎಡಿಎಚ್ಡಿ (ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್)ನಿಂದ ಬಳಲುತ್ತಿದ್ದಾನೆಂಬುದು ಪೋಷಕರಿಗೆ ತಿಳಿದದ್ದು. ಅನೇಕ ಪೋಷಕರು ಎಡಿಎಚ್ಡಿ ಲಕ್ಷಣಗಳನ್ನು ಗುರುತಿಸಲು ವಿಫಲರಾಗುತ್ತಿದ್ದಾರೆ. ಈ ಕಾರಣಕ್ಕಾಗಿ ತಮ್ಮ ಮಕ್ಕಳ ಜತೆಗೆ ಕಠಿಣವಾಗಿ ನಡೆದುಕೊಂಡು ತಮ್ಮ ಮಕ್ಕಳ ಉತ್ತಮ ಭವಿಷ್ಯದ ಕನಸನ್ನು ತಾವೇ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.
ಎಡಿಎಚ್ಡಿ ಎಂದರೇನು?
ಇತ್ತೀಚಿನ ಅಧ್ಯಯನಗಳ ಪ್ರಕಾರ ಜಾಗತಿಕ ಮಟ್ಟದಲ್ಲಿ ಗಮನ ಕೊರತೆ ( ಹೈಪರ್ಆ್ಯಕ್ಟಿವಿಟಿ ಡಿಸಾರ್ಡರ್) 29%ರಷ್ಟಿದೆ. ಈ ಖಾಯಿಲೆಯು 39 ರಿಂದ 41 ವಾರಗಳ ನಂತರ ಜನಿಸಿದ ಮಗುವಿಗಿಂತ, ಅಕಾಲಿಕವಾಗಿ ಪ್ರಸವ ಪೂರ್ವ ಜನನ ಅಥವಾ ಕಡಿಮೆ ತೂಕವಿರುವ ಶಿಶುಗಳಲ್ಲಿ 3 ಪಟ್ಟೂ ಅಧಿಕವಾಗಿ ಕಂಡುಬರುತ್ತದೆ. ಈ ಸಮಸ್ಯೆಗೆ ಪ್ರಮುಖ ಕಾರಣ ಮಗುವಿನ ಪ್ರಮುಖ ಅಂಗಾಂಗಳ ಬೆಳವಣಿಗೆಯ ಕೊರತೆ, ಅಪೂರ್ಣ ಬೆಳವಣಿಗೆಯ ಒತ್ತಡ ಹಾಗೂ ಇದರಿಂದಾಗುವ ಹಾರ್ಮೋನುಗಳ ಬದಲಾವಣೆ ಉರಿಯೂತ. ಧೂಮಪಾನ ಮತ್ತು ಮದ್ಯಪಾನ ಸೇವಿಸುವ ತಾಯಿಯಂದಿರ ಮಕ್ಕಳಲ್ಲೂ ಈ ತೊಂದರೆ ಕಾಣಿಸಿಕೊಳ್ಳಬಹುದು.
ಎಡಿಎಚ್ಡಿಗೆ ತುತ್ತಾದ ಮಕ್ಕಳು ಯಾವುದೇ ವಿಷಯಗಳಲ್ಲಿ, ಸಂಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಾರರು. ಅವರನ್ನು ತಿರಸ್ಕರಿಸಿದಾಗ, ತಮ್ಮ ಚಟುವಟಿಕೆಗಳನ್ನು ಬಚ್ಚಿಟ್ಟು ಯಾರೊಡನೆಯೂ ಮಾತನಾಡದೆ ಸುಮ್ಮನೆ ಕುಳಿತು ಬಿಡುತ್ತಾರೆ. ಶೈಕ್ಷಣಿಕ ಮತ್ತು ಸಾಮಾಜಿಕವಾಗಿಯೂ ತೊಂದರೆ ಅನುಭವಿಸುತ್ತಾರೆ.
ಭಾರತದಲ್ಲಿ ಎಡಿಎಚ್ಡಿ
ಇತ್ತೀಚಿನ ಅಧ್ಯಯನದ ಪ್ರಕಾರ ದಕ್ಷಿಣ ಭಾರತದಲ್ಲಿ ಪ್ರಾಥಮಿಕ ಶಾಲಾ ಮಕ್ಕಳಲ್ಲಿ 11.3% ರಷ್ಟಿದೆ. ಹೆತ್ತವರು ಮತ್ತು ಮಗುವಿಗೆ ಈ ಖಾಯಿಲೆ ಇರಬಹುದೆಂದು ಗುರುತಿಸಲು ಸಾಧ್ಯವಾಗದಿರುವುದೇ ಸಮಸ್ಯೆಯ ಹೆಚ್ಚಳಕ್ಕೆ ಕಾರಣ. ಇದರ ಲಕ್ಷಣಗಳ ಬಗ್ಗೆ ಮಾಹಿತಿ ಇರದ ಭಾರತೀಯರು ಮಕ್ಕಳು ಹೈಪರ್ಆ್ಯಕ್ಟಿವ್ ಇದ್ದರೆ, ಅವರನ್ನು ಹಠಮಾರಿ ಎಂದು ಪರಿಗಣಿಸುತ್ತಾರೆ. ಖಾಯಿಲೆಯನ್ನು ಗುರುತಿಸುವುದೇ ಕಷ್ಟವಾದ್ದರಿಂದ ಚಿಕಿತ್ಸೆ ವಿಳಂಬವಾಗುತ್ತದೆ. ಈ ಅಸ್ವಸ್ಥತೆಯು ವಯಸ್ಸಾದಂತೆ ಹೆಚ್ಚಾಗುತ್ತಾ ಹೋಗುತ್ತದೆ.
ಈ ರೋಗವನ್ನು ಕಂಡುಹಿಡಿಯಲು ನಮ್ಮ ದೇಶದಲ್ಲಿ ಯಾವುದೇ ನಿರ್ದಿಷ್ಟ ಮಾರ್ಗದರ್ಶಿ ಇಲ್ಲ. ಈ ನ್ಯೂನತೆಯ ಕಾರಣದಿಂದಾಗಿ, ಮಕ್ಕಳಿಗೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತಿಲ್ಲ. ಪಡೆಯದ ಮಕ್ಕಳು ಸಾಮಾಜಿಕ ಕೌಶಲ್ಯಗಳನ್ನು, ಭಾವನೆ ಮತ್ತು ಉದ್ವೇಗದ ನಿಯಂತ್ರಣಗಳನ್ನು ಕಲಿಯುವುದಿಲ್ಲ. ಅಲ್ಲದೇ ರಕ್ತದೊತ್ತಡ, ನಿಧಾನಗತಿಯ ಬೆಳವಣಿಗೆ, ಹಸಿವಾಗದಿರುವುದು ಮುಂತಾದ ದೀರ್ಘಕಾಲದ ರೋಗಗಳಿಗೆ ತುತ್ತಾಗುತ್ತಾರೆ.
ರೋಗನಿರ್ಣಯ ಮತ್ತು ನಿರ್ವಹಣೆ
ಸದ್ಯದ ಮಟ್ಟಿಗೆ ದೀರ್ಘ ಸಂದರ್ಶನ ಮತ್ತು ಮೌಲ್ಯಮಾಪನ ಪರೀಕ್ಷೆಗಳ ಸಹಾಯದಿಂದ ಶಿಶುತಜ್ಞರು ಎಡಿಎಚ್ಡಿಯನ್ನು ನಿರ್ಣಯಿಸಬಹುದು. ಇದಕ್ಕೆ ಪರಿಹಾರವಾಗಿ ವಿವಿಧ ಪರೀಕ್ಷೆ, ತಪಾಸಣೆ ಮತ್ತು ದೃಷ್ಟಿಗೋಚರ ತರಬೇತಿಗಳು ಮಗುವಿನ ಏಕಾಗ್ರತೆಯನ್ನು ಸುಧಾರಿಸಬಹುದು. ಪೋಷಕರು, ಶಿಕ್ಷಕರು ಮತ್ತು ವೈದ್ಯರಲ್ಲಿ ಈ ಮಕ್ಕಳನ್ನು ನಿರ್ವಹಿಸಬೇಕು ಹಾಗೂ ವ್ಯವಹರಿಸಬೇಕು ಎಂಬುದರ ಬಗ್ಗೆ ಅರಿವು/ಜಾಗೃತಿ ಮೂಡಿಸಬೇಕು. ಮಗುವಿನ ನಡವಳಿಕೆಯಲ್ಲಿ ಸ್ಥಿರವಾದ ಮಾದರಿಯನ್ನು ವೀಕ್ಷಿಸಲು ಶಿಕ್ಷಕರು ಮತ್ತು ಪೋಷಕರು ಯತ್ನಿಸಬೇಕು. ಮಗು ಹಠಾತ್ತನೆ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದಾಗ, ಭಾವನಾತ್ಮಕ ಪ್ರಕೋಪವನ್ನು ಹೊಂದಿರುವಾಗ ಅಥವಾ ಅವರು ಶಾಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ, ಅವರನ್ನು ಗಮನಿಸಬೇಕು.
ಸರಿಯಾದ ಆಹಾರವನ್ನು ನಿರ್ವಹಿಸುವುದು ಮತ್ತು ಮಕ್ಕಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದರಿಂದ ಮಕ್ಕಳು ನಿಧಾನವಾಗಿ ಚೇತರಿಸಿಕೊಳ್ಳುತ್ತಾರೆ. ಸರಿಯಾದ ವೈದ್ಯರು, ಹಾಗೂ ಔಷದೋಪಚಾರ ಮತ್ತು ಚಿಕಿತ್ಸೆಯ ಮಕ್ಕಳನ್ನು ಕಾಪಾಡಬಹುದು ಮತ್ತು ಅವರ ಮುಂದಿನ ಶೈಕ್ಷಣಿಕ, ಸಾಮಾಜಿಕ ಹಾಗೂ ಆರೋಗ್ಯಕರ ಜೀವನವನ್ನು ಸುಖಕರವಾಗಿಸಬಹುದು.
(ಲೇಖಕಿ, ಹಿರಿಯ ವೈದ್ಯೆ, ಶಿಶು ಹಾಗೂ ಮಕ್ಕಳ ತಜ್ಞೆ)