About Us Advertise with us Be a Reporter E-Paper

ಅಂಕಣಗಳು

ಸಂತಸ್ತರ ಆರೋಗ್ಯದ ಬಗ್ಗೆಯೂ ಗಮನವಿರಲಿ

ಪ್ರಕೃತಿ ಮುನಿದರೆ ಜಗತ್ತಿನಲ್ಲಿ ಮನುಷ್ಯರಾದಿಯಾಗಿ ಯಾವ ಜೀವಸಂಕುಲವೂ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಇದರ ಆಟದ ಮುಂದೆ ಬಡವ-ಬಲ್ಲಿದ ಎಂಬ ವ್ಯತ್ಯಾಸವೇ ಇರುವುದಿಲ್ಲ. ಈಗ ಪ್ರಕೃತಿ ತಾಯಿ ಮುನಿದಿದ್ದಾಳೆ. ಆಕೆಯ ಮುನಿಸಿಗೆ ಸಿಲುಕಿರುವ ಕೊಡಗು ಮತ್ತು ಕರಾವಳಿ ಜಿಲ್ಲೆಗಳ ಜನತೆ ತತ್ತರಿಸಿ ಹೋಗಿದ್ದಾರೆ. ಹತ್ತಾರು ಜನರಿಗೆ ಒಪ್ಪೊತ್ತಿನ ತುತ್ತು ನೀಡುತ್ತಿದ್ದ ಸ್ಥಿತಿವಂತರು ನಿರಾಶ್ರಿತರ ಪುನರ್‌ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ದಾನಿಗಳು ನೀಡಿರುವ ಆಹಾರಕ್ಕಾಗಿ ಕೈಯೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಮುಖವಾಗಿ ಕೊಡಗಿನ ಅರ್ಧಕ್ಕೂ ಹೆಚ್ಚು ಜನರು ಇಂದು ಸೂರಿಲ್ಲದೇ ಪರಿತಪಿಸುತ್ತಿದ್ದಾರೆ. ಈ ಜಲಪ್ರಳಯಕ್ಕೆ ಕಾರಣ ಏನೆಂಬುದನ್ನು ಕೆಲವರು ಹುಡುಕುತ್ತಾ ಹೊರಟಿದ್ದಾರೆ. ಅದಕ್ಕೆ ಸಮಯ ಇದಲ್ಲ. ಪ್ರಸ್ತುತ ನೆರೆ ಹಾವಳಿಗೆ ತುತ್ತಾಗಿ ಮನೆ ಮಠ ಕಳೆದುಕೊಂಡಿರುವವರಿಗೆ ನೆರವಿನ ಹಸ್ತವನ್ನು ಚಾಚಬೇಕಾಗಿರುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಇಂತಹ ಸಂದರ್ಭಗಳಲ್ಲಿ ಜನರು ಕೇವಲ ಸರಕಾರದ ಕಡೆಯಿಂದಲೇ ಪರಿಹಾರ ಕೊಡಲಿ ಎಂದು ಅದರ ಕಡೆಗೆ ಬೆರಳು ತೋರಿಸುವ ಬದಲು ಸರಕಾರದೊಂದಿಗೆ ಕೈಜೋಡಿಸಿ ನೆರೆ ಸಂತ್ರಸ್ತರ ನೆರವಿಗೆ ಧಾವಿಸಬೇಕಾಗಿದೆ. ಕಳೆದ ಒಂದು ವಾರದಿಂದ ರಾಜ್ಯದ ನಾನಾ ಮೂಲೆಗಳಿಂದ ಕೊಡಗಿನತ್ತ ಪರಿಹಾರ ಸಾಮಗ್ರಿಗಳು, ಆಹಾರ ಪದಾರ್ಥಗಳು ಭರಪೂರವಾಗಿ ಬರತೊಡಗಿವೆ. ಜನತೆ ನೀಡಿರುವ ಮತ್ತು ನೀಡಲಿರುವ ಪರಿಹಾರ ಸಾಮಗ್ರಿಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕಾದ ಜವಾಬ್ದಾರಿಯನ್ನು ಸರಕಾರ ವಹಿಸಿಕೊಳ್ಳಬೇಕಾಗಿದೆ. ಸರಕಾರ ವೈಮಾನಿಕ ಸಮೀಕ್ಷೆ ನಡೆಸಿ ತುರ್ತಾಗಿ ೧೦೦ ಕೋಟಿ ರುಪಾಯಿ ಪರಿಹಾರ ಬಿಡುಗಡೆ ಮಾಡಿದೆ. ಸಾವಿರಾರು ಕೋಟಿ ರುಪಾಯಿ ಮೌಲ್ಯದ ಆಸ್ತಿ- ಪಾಸ್ತಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿರುವುದಿಂದ ಈ ಹಣ ಯಾವುದಕ್ಕೂ ಸಾಕಾಗುವುದಿಲ್ಲ. ಆದರೂ, ಜಿಲ್ಲೆಯಲ್ಲಿ ಆಗಿರುವ ಹಾನಿಯನ್ನು ಪರಿಶೀಲಿಸಿ ಪರಿಹಾರ ಕಾರ್ಯಗಳನ್ನು ಕೈಗೊಂಡು ಅಲ್ಲಿನ ಜನರಿಗೆ ನೆಮ್ಮದಿಯ ನಿಟ್ಟುಸಿರುವ ಬಿಡುವಂತೆ ಮಾಡಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಹುತೇಕ ಕೊಡಗು ಕೊಚ್ಚಿ ಹೋಗಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿಯನ್ನು ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜರೂರಾಗಿ ಪರಿಹಾರ ಕ್ರಮಗಳ ಜತೆಯಲ್ಲಿ ಜರೂರಾಗಿ ಅಲ್ಲಿನ ಜನರ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ.

Tags

Related Articles

Leave a Reply

Your email address will not be published. Required fields are marked *

Language
Close