About Us Advertise with us Be a Reporter E-Paper

ಅಂಕಣಗಳು

ಜನರ ಸಂಕಷ್ಟಗಳತ್ತ ಗಮನವಿರಲಿ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಮುಖ ಮೂರೂ ಪಕ್ಷಗಳಲ್ಲಿ ಹೊಸ ಹುರುಪನ್ನು ತಂದಿದೆ. ಆದರೆ,  ಸರಕಾರದ ಮೈತ್ರಿಕೂಟದ ಎರಡು ಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್‌ನಲ್ಲಿ ಆಂತರಿಕ ತುಮುಲವನ್ನು ತಂದಿದೆ. ಈ ಫಲಿತಾಂಶ ಹರ್ಷದ ಜತೆ ಜತೆಯಲ್ಲೇ ಅಧಿಕಾರದ ಗದ್ದುಗೆಯ ಗುದ್ದಾಟವನ್ನೂ ತಂದಿಟ್ಟಿದೆ. ಎರಡೂ ಪಕ್ಷಗಳ ರಾಜ್ಯ ಮಟ್ಟದ ನಾಯಕರು ಮೈತ್ರಿ ಮುಂದುವರಿಸುವ ಉತ್ಸಾಹದಲ್ಲಿದ್ದರೆ, ಸ್ಥಳೀಯ ಮಟ್ಟದಲ್ಲಿ ಇದಕ್ಕೆ ಅಪಸ್ವರ ಕೇಳಿಬರುತ್ತಿದೆ. ಹೀಗಾಗಿ ಅತಂತ್ರವಾಗಿರುವ ಪಾಲಿಕೆ, ಪುರಸಭೆ, ನಗರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ತಾಮುಂದು ನಾಮುಂದು ಎಂಬಂತೆ ಸ್ಥಳೀಯ ಮಟ್ಟದ ನಾಯಕರು ಪೈಪೋಟಿ ನಡೆಸಿದ್ದಾರೆ.  ಅಧಿಕಾರಕ್ಕೆ ಬಂದ ದಿನದಿಂದ ಈ ಮೈತ್ರಿ ಪಕ್ಷಗಳಲ್ಲಿ ಅಧಿಕಾರಕ್ಕಾಗಿ ಒಂದಿಲ್ಲೊಂದು ವಿವಾದಗಳು ಎದುರಾಗಿದ್ದವು. ಈಗ ಸ್ಥಳೀಯ ಸಂಸ್ಥೆಗಳ ಸಮಸ್ಯೆ ಎರಡೂ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈಗಾಗಲೇ ಅಧಿಕಾರಕ್ಕೆ ಬಂದು ಮೂರು ತಿಂಗಳುಗಳು ಮುಗಿದುಹೋಗಿವೆ. ಈ ಮೂರು ತಿಂಗಳಲ್ಲಿ ಅಧಿಕಾರ ಹಂಚಿಕೆ ಸೇರಿ ಹಲವಾರು ವಿಚಾರದಲ್ಲಿಯೇ ಕಾಲಹರಣ ಮಾಡಿದ್ದಾಗಿದೆ. ಈಗ ಎದುರಾಗಿರುವ ಸ್ಥಳೀಯ ಮಟ್ಟದ ರಾಜಕೀಯದ ವಿಚಾರದಲ್ಲಿ ಮತ್ತಷ್ಟು ದಿನಗಳನ್ನು ತಳ್ಳುತ್ತಾ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ಎಲ್ಲರೂ ಸಾರ್ವಜನಿಕರ ಸೇವೆಗಾಗಿ  ಬಂದಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ತ್ವರಿತವೆಂಬಂತೆ ಅಧಿಕಾರದ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಮುಖ್ಯವಾಗಿದೆ. ಇನ್ನು ಈ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೈತ್ರಿಪಕ್ಷಗಳ ಬಲವರ್ಧನೆ ಮಾಡಿರುವುದರಲ್ಲಿ ಎರಡು ಮಾತಿಲ್ಲ. ಅದೇ ರೀತಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿದೆ. ಆದರೆ, ಇದು ಬಿಜೆಪಿಗೆ ಎಚ್ಚರಿಕೆಯನ್ನೂ ನೀಡಿರುವ ಫಲಿತಾಂಶವಾಗಿದೆ. ಈಗಾಗಲೇ ಮೈತ್ರಿಪಕ್ಷಗಳು ಲೋಸಭೆ ಚುನಾವಣೆಯಲ್ಲೂ  ಮಾಡಿಕೊಳ್ಳುವುದಾಗಿ ಹೇಳಿಕೊಂಡಿವೆ. ಆದರೆ, ಸ್ಥಳೀಯ ಮಟ್ಟದಲ್ಲಿ ವಿಶೇಷವಾಗಿ ಹಳೆಯ ಮೈಸೂರು ಭಾಗದಲ್ಲಿ ಮೈತ್ರಿಗೆ ಕಾಂಗ್ರೆಸ್‌ನಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈಗಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಲೋಕಸಭೆ ಚುನಾವಣೆವರೆಗೂ ಚುರುಕಿನ ಆಡಳಿತ ನಡೆಯುವುದು ಅನುಮಾನವಾಗಿದೆ. ಏಕೆಂದರೆ, ಇದುವರೆಗೆ ಸ್ಥಳೀಯ ಸಂಸ್ಥೆ ಚುನಾವಣೆ ಎಂದು ಅದರಲ್ಲಿ ತಲ್ಲೀನವಾಗಿದ್ದ ಆಡಳಿತಾರೂಢ ಪಕ್ಷಗಳು, ಸದ್ಯದಲ್ಲೇ ನಡೆಯುವ ಸಂಪುಟ ವಿಸ್ತರಣೆ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿವೆ. ಇದಾಗುತ್ತಿದ್ದಂತೆಯೇ ಲೋಕಸಭೆ ಚುನಾವಣೆಗೆ ತಯಾರಿಯಲ್ಲಿ ಬ್ಯುಸಿಯಾಗುತ್ತವೆ. ಹೀಗಾಗಿ, ಮೈತ್ರಿಕೂಟದ ಪಕ್ಷಗಳು  ನಡೆಸುವುದಕ್ಕಿಂತ ಹೆಚ್ಚಾಗಿ ರಾಜಕೀಯ ಚಟುವಟಿಕೆಗಳಲ್ಲೇ ಹೆಚ್ಚಿನ ಕಾಲವನ್ನು ವ್ಯಯ ಮಾಡುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ. ಆದರೆ, ಈ ರಾಜಕೀಯ ಪ್ರಕ್ರಿಯೆಗಳನ್ನು ಬದಿಗಿಟ್ಟು ಜನರ ಸಂಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪಕ್ಷಗಳು ಗಮನಹರಿಸಬೇಕಿದೆ.

Tags

Related Articles

Leave a Reply

Your email address will not be published. Required fields are marked *

Language
Close