About Us Advertise with us Be a Reporter E-Paper

ವಿವಾಹ್

‘ಕಿಮೋ’ಕ್ಕೂ ಕರಗದ ಶಾನ್-ಶ್ರುತಿ ಪ್ರೀತಿ!

ಹಿಂದೂ ಪುರಾಣಗಳಲ್ಲಿ ಬರುವ ಕೃಷ್ಣ ರಾಧೆ, ಇತಿಹಾಸದಲ್ಲಿನ ಲೈಲಾ-ಮಜ್ನು, ಸಲೀಂ ಅನಾರ್ಕಲಿ, ರೋಮಿಯೋ-ಜೂಲಿಯಟ್, ಹೀರಾ-ರಾಂಝಾ, ಹೀಗೆ ಸಾಕಷ್ಟು ಜೋಡಿಗಳ ಪ್ರೇಮ ವಿವಾಹದ ಉಲ್ಲೇಖವಿದೆ. ಅಂದರೆ ಅವರು ಕೇವಲ ತಮ್ಮ ಪ್ರೀತಿಗಾಗಿ ಕುಟುಂಬ, ಸಮಾಜ, ಧರ್ಮ ಹಾಗೂ ಇಡೀ ಜಗತ್ತನ್ನೇ ಎದುರಿಸಿ ನಿಂತವರು. ಜಯಿಸಿದವರು. ಕೆಲವರು ತಾವು ನಂಬಿದ ಪ್ರೀತಿಗಾಗಿ, ಪ್ರೀತಿಸಿದವರಿಗಾಗಿ ಜೀವವನ್ನೇ ಬಲಿ ನೀಡಿದವರು. ಹೀಗಾಗಿಯೇ ಹೆಸರು ಇಂದಿಗೂ ಎಲ್ಲರ ಬಾಯಲ್ಲೂ ಜನಜನಿತ. ಈಗಿನ ಜಮಾನಾದಲ್ಲೂ ಹಳೆಯ ಪ್ರೇಮಿಗಳನ್ನು ಮೀರಿಸುವಂಥ ಬಲು ಅಪರೂಪದ ಜೋಡಿಗಳಿಗೇನೂ ಕೊರತೆ ಇಲ್ಲ. ಈಗಲೂ ಜಾತಿ, ಧರ್ಮ, ಪಂಥ, ಇತ್ಯಾದಿಗಳ ಹೆಸರಿನಲ್ಲಿ ನಡೆಯುವ ಹತ್ಯೆಗಳನ್ನೂ ದಾಟಿ, ಎಲ್ಲ ಎಲ್ಲೆಗಳನ್ನೂ ಮೀರಿ ಸಪ್ತಪದಿ ತುಳಿದು ಸಮಾಜದಲ್ಲಿ ಎಲ್ಲರಿಗೂ ಮಾದರಿಯಾಗಿ ನಿಂತವರಿದ್ದಾರೆ. ಇಂಥವರಲ್ಲಿ ಕೇರಳ ರಾಜ್ಯದ ತ್ರಿಶೂರ್ ಮೂಲದ ಶಾನ್ ಇಬ್ರಾಹಿಂ ಬಾದ್‌ಶಾ ಹಾಗೂ ಶ್ರುತಿಯವರ ಸಂಬಂಧವೂ ವಿಭಿನ್ನ, ವಿಶಿಷ್ಟವಾಗಿ ನಿಲ್ಲುತ್ತದೆ. ಅವರ ಪರಿಚಯ, ಪ್ರೀತಿ, ಬಾಂಧವ್ಯ ಹೃದಯಸ್ಪರ್ಶಿ ಎಂದರೂ ತಪ್ಪಾಗದು.

ಶಾನ್ ಹಾಗೂ ಶ್ರುತಿಯವರ ಪರಿಚಯದ ಆರಂಭಿಕ ದಿನಗಳು, ಪ್ರೀತಿ ಎಲ್ಲವೂ ಉಳಿದವರಂತೆಯೇ ಇತ್ತು. ಕಾಲೇಜಿನಲ್ಲಿದ್ದಾಗಲೇ ಶಾನ್‌ಗೆ ಶ್ರುತಿಯ ಮೇಲೆ ಪ್ರೀತಿಯಾಗಿತ್ತು. ಆದರೆ ಬಳಿಕ ನಡೆದ ಒಂದಷ್ಟು ಘಟನೆಗಳು ಅವರ ಸಂಬಂಧವನ್ನು ಗಟ್ಟಿಗೊಳಿಸಿ ಮದುವೆಯ ಬಂಧನದಲ್ಲಿ ಕಟ್ಟಿಹಾಕಿದೆ. ಕಾಲೇಜು ಮುಗಿಸಿ ಮದುವೆಯಾದ ಕೆಲವೇ ದಿನಗಳಲ್ಲಿ ಶ್ರುತಿಗೆ ಕ್ಯಾನ್ಸರ್ ಇರುವುದು ಗೊತ್ತಾಯಿತು. ಕೈಗೆ ಹಚ್ಚಿದ್ದ ಮೆಹಂದಿಯ ಘಮ ಆರುವ ಮೊದಲೇ ಅಪಾಯಕಾರಿ ರೋಗ ನವ ಬಾಳಿಗೆ ಬಿರುಗಾಳಿಯಂತೆ ಬಂದೆರಗಿತ್ತು. ಇದ್ಯಾವುದಕ್ಕೂ ದೃತಿಗೆಡದ ಶಾನ್, ಪತ್ನಿ ಶ್ರುತಿಗೆ ಆಸರೆಯಾಗಿ ನಿಂತರು. ಆದರೆ ಇಬ್ಬರ ಕುಟುಂಬ, ಸುತ್ತಲಿನ ಸಮಾಜ ಏನೇನೋ ಮಾತನಾಡಿದರೂ ದಂಪತಿ ಮಾತ್ರ ಒಗ್ಗಟ್ಟಾಗಿದ್ದರು. ಏನೇ ಬಂದರೂ ಒಂದಾಗಿ ಎದುರಿಸುವ ಮನಸ್ಸು ಮಾಡಿದ್ದರು. ಪತ್ನಿಯ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆಗಳನ್ನು ಪತಿ ಶಾನ್ ಅಚ್ಚುಕಟ್ಟಾಗಿ ಮಾಡತೊಡಗಿದರು.

ಇತ್ತ ಶ್ರುತಿಗೆ ಕಿಮೋಥೆರಪಿ ಆರಂಭವಾಗುತ್ತಿದ್ದಂತೆ ತಲೆಯ ಮೇಲಿದ್ದ ಮಾರುದ್ದದ ಕೂದಲು ಕರಗಲು ಪ್ರಾರಂಭಿಸಿತ್ತು. ಚಿಕಿತ್ಸೆಯ ಪ್ರಭಾವ ಅವಳ ಅಂದವನ್ನೇ ನಿಧಾನವಾಗಿ ಇದಕ್ಕೆ ಪ್ರತಿಯಾಗಿ ಶಾನ್ ಕೂಡ ತನ್ನ ತಲೆಯ ಮೇಲಿದ್ದ ಕೂದಲಿಗೆ ಕತ್ತರಿ ಹಾಕಿಸಿಕೊಂಡರು. ಸದ್ಯ ಶ್ರುತಿಗೆ ಒಂಬತ್ತನೇ ಕಿಮೋ ಥೆರಪಿ ನಡೆಯುತ್ತಿದೆ. ಇದರ ಮಧ್ಯೆಯೂ ದಂಪತಿ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಿಕೊಂಡರು. ಈ ಖುಷಿಯನ್ನು ವಿಭಿನ್ನವಾಗಿ ಸಂಭ್ರಮಿಸಿದ ಪತಿ ಶಾನ್, ಇಬ್ಬರದ್ದೂ ಕೂದಲಿಲ್ಲದ ಚಿತ್ರವನ್ನು ಪ್ರಿಂಟ್ ಹಾಕಿಸಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

‘ಅವಳೊಂದಿಗಿನ ಪರಿಚಯಕ್ಕೆ ಕಾರಣವಾಗಿದ್ದು ಒಂದು ದಾಸವಾಳದ ಹೂವು. ನನ್ನ ಕಾಲೇಜು ಜೀವನದ ದಿನವೇ ಅವಳೊಂದು ದಾಸವಾಳದ ಹೂವನ್ನು ಹಾಗೂ ಚಾಲೆಂಜ್‌ನ್ನು ಹಿಡಿದು ನನ್ನೆದುರು ಬಂದಿದ್ದಳು. ಅಂದರೆ ನನ್ನ ಕಿವಿಯ ಮೇಲೆ ಹೂವನ್ನು ಇಟ್ಟುಕೊಂಡು ಕಾಲೇಜು ವರಾಂಡದಲ್ಲಿ ನಡೆದುಕೊಂಡು ಹೋಗಬೇಕೆನ್ನುವುದು ಅಂದಿನ ಸವಾಲಾಗಿತ್ತು. ಅದಕ್ಕೆ ನಾನು, ಹುಡುಗಿಯೊಬ್ಬಳು ನನ್ನ ಕೈ ಹಿಡಿದು ನಡೆಯುವುವಾದದ್ದರೆ ನಾನೂ ಹೂವನ್ನು ಕಿವಿಯ ಮೇಲೆ ಮುಡಿಯಲು ಸಿದ್ಧ ಎಂದು ಅವಳಿಗೆ ಪ್ರತ್ಯುತ್ತರ ನೀಡಿದೆ.

ಹೀಗೆ ನನ್ನ ಬದುಕಿಗೆ ಸದಾ ನಗುವ ಸೂಸುವ ದಾಸವಾಳ ಹೂವಿನಂತೆ ಹೆಜ್ಜೆ ಹಾಕಿದ್ದಳು. ಮೊದಲು ದಾಸವಾಳವಾಗಿ ಬಂದವಳು ನಂತರ ಸಂಗಾತಿಯೂ, ಪ್ರೀತಿಯೂ, ನಿಧಾನವಾಗಿ ಸಂಪೂರ್ಣ ಬದುಕೇ ಆಗಿಹೋಗಿದ್ದಳು. ನನ್ನ ಕಷ್ಟದ ಸಮಯದಲ್ಲಿ ಕೈ ಹಿಡಿದು ನಡೆಸಿದ್ದಳು, ಕಣ್ಣೀರು ಒರೆಸಿದ್ದಳು, ಶಕ್ತಿ ತುಂಬಿದ್ದಳು, ಯಶಸ್ಸಿನ ದಾರಿ ತೋರಿಸಿದ್ದಳು. ತನ್ನ ಪ್ರೀತಿಯ ಅಮೃತದ ರುಚಿ ಉಣಬಡಿಸಿದ್ದಳು. ಅವಳ ಪ್ರೀತಿಯ ಗೌರವಕ್ಕಾಗಿ ಅವಳಿಗೆ ಮಾಂಗಲ್ಯ ಸೂತ್ರ ನೀಡಿ ಎಂದೆಂದಿಗೂ ನನ್ನವಳನ್ನಾಗಿಸಿಕೊಂಡಿದ್ದೆ. ಕಳೆದೊಂದು ವರ್ಷದ ಸಾಂಗತ್ಯ, ಸಂಬಂಧ, ಮೊದಲ ವರ್ಷದ ಅನುಬಂಧ, ಇತ್ಯಾದಿಗಳಿಂದ ಬದುಕು ಬಂಗಾರವಾಗಿಸಿದೆ’ ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಇದಷ್ಟೇ ಅಲ್ಲದೆ, ಪತ್ನಿ ಶ್ರುತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಶಾನ್ ಒಂದಷ್ಟು ಚಿತ್ರಗಳನ್ನು ಬಿಡಿಸಿ ಅವಳ ಸಂತಸಕ್ಕೆ ಕಾರಣನಾಗಿದ್ದ. ತನ್ನ ಭಾವನೆ, ಪ್ರೀತಿಯನ್ನು ಚಿತ್ರಗಳ ಮೂಲಕ ಹೊರಹಾಕಿ ಅವಳೆದುರು ಬಿಡಿಸಿಟ್ಟಿದ್ದ. ಈಗಷ್ಟೆ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ ನೂರ್ಕಾಲ ಸುಖವಾಗಿ ಬಾಳಲಿ ಎಂಬುದು ಎಲ್ಲರ ಹಾರೈಕೆ.

Tags

Related Articles

Leave a Reply

Your email address will not be published. Required fields are marked *

Language
Close