About Us Advertise with us Be a Reporter E-Paper

ವಿ +

ಅರಿತ ಜೀವ ಜತೆಯಲಿದ್ದರೆ ಮೌನವೇ ಸಾಕು

-  ರೇವಣ್ಣಾ ಅರಳಿ

ನನ್ನ ಮನದ ಅಂಗಳದಿ ಎಂದೂ ಬತ್ತದ ಜೀವನದಿಯ ಹರಿಸುತ್ತಿರುವವಳೆ, ನಿನ್ನ ಹುಚ್ಚುತನಕ್ಕೆ ಬೆಚ್ಚಾಗಿ ನನ್ನ ಎದೆಯಲ್ಲಿ ಅಚ್ಚಾಗಿಸಿಕೊಂಡು ನೆನಪುಗಳ ಸರಮಾಲೆಯನ್ನು ಎಳೆಯಾಗಿ ಬಿಡಿಸುತ್ತಾ ನಿನ್ನತ್ತ ಈ ಪತ್ರವ ಕಳಿಸುತ್ತಿದ್ದೇನೆ. ಸ್ವೀಕರಿಸು ಇಲ್ಲಾ ತಿರಸ್ಕರಿಸು. ನನ್ನ ಪ್ರೀತಿಯ ಅನುಮಾನಿಸಿದರೂ, ಅವಮಾನಿಸದಿರು. ನನ್ನ ನಿನ್ನ ಸ್ನೇಹ ಆಕಸ್ಮಿಕವಾದರೂ, ನಮ್ಮಸ ಬಾಂಧವ್ಯ ಬೆಸುಗೆ ಬಲವಾಗುತ್ತಾ ಹೋಗಲು ನಮ್ಮಿಬ್ಬರ ನಡುವಿನ ಕಾರಣ ಎಂದರೆ ನೀನೂ ಕೂಡಾ ಒಪ್ಪುತ್ತೀಯಾ? ನಿನ್ನಂಥ ಮೂಡಿ ಫೆಲೋನ ನಾನು ನೋಡಿಯೆ ಇಲ್ಲಾ. ಮನಸ್ಸಿಗೆ ತೋಚಿದಾಗಲೆಲ್ಲಾ ನಿನ್ನ ಮೇಲೆ ಕವನಗಳ ಸಾಲನ್ನು ಬರೆಯುತ್ತಿದ್ದೆ. ನನ್ನಲ್ಲಿ ಬಂದಂತಹ ಕಾವ್ಯ ರಚನೆಯ ಶಕ್ತಿಯನ್ನು ಅರಳಿಸಿದೆ. ನಾನು ಹೆಚ್ಚೆಚ್ಚು ಬರೆಯತೊಡಗಿದಾಗ ನೀ ನನ್ನ ಲೇಖನಿಯಾದೆ.

ಬಣ್ಣಿಸಲಿ ಹೇಗೆ ನನ್ನ ಸಂತಸವನ್ನು? ಎಷ್ಟೋ ದಿನದಿಂದ ಕಾದಿದ್ದ ಆ ಕ್ಷಣವನ್ನು.. ಮಾತೇ ಬಾರದಂತಾಗಿದೆ. ನೀ ನನ್ನ ಬಾಳಷ್ಟೇ ಅಲ್ಲ ಮನಸ್ಸಿನಲ್ಲೂ ಮಧುರ ಕ್ಷಣವನ್ನು ಅರಳಿಸಿದೆ. ಹೇಗೆ ನಿನ್ನನ್ನು.. ಮರೆಯಲಾರೆ ನಮ್ಮಿಬ್ಬರ ಪ್ರೀತಿಯನ್ನು. ಗೆಳೆತನ ಮೀರಿದ ಬಾಂಧವ್ಯ ನಮ್ಮಲ್ಲಿ ಯಾವಾಗ ಮೂಡಿತೋ ನಾ ಕಾಣೆ. ನೀನಂತೂ ಏನನ್ನೂ ಬಾಯಿ ಬಿಟ್ಟು ಹೇಳುವವಳಲ್ಲ. ಪಕ್ಕದಲ್ಲಿ ಬಾಂಬ್ ಬಿದ್ದರೂ ಒಮ್ಮೆ ನೋಡಿ ಸುಮ್ಮನಾಗುವ ಜಾಯಮಾನದವಳು ನೀನು. ಜಢಭರತನಂತೆ ಇದ್ದು ಬಿಡುತ್ತೀಯಾ. ಆದರೆ ನನ್ನಿದಂತೂ ಅದು ಸಾಧ್ಯವಿಲ್ಲ ಕಣೇ..

ನೀನು ಸಣ್ಣ ಪುಟ್ಟ ನೋವಿಗೂ ಕಣ್ಣೀರಿಡುವ ಸ್ವಭಾವದವಳು. ನನ್ನನ್ನು ನೀ ಸಂತೈಸುವ ರೀತಿ ನನಗಿಷ್ಟ. ಭಾವನೆಗಳು ನಮ್ಮನ್ನು ಆವರಿಸಿ ಆಳುವ ನಾವು ಎಚ್ಚೆತ್ತುಕೊಳ್ಳಬೇಕು.. ಎಂದೆನ್ನುವ ತತ್ವಪದಗಳು ನನಗೆ ಅರ್ಥವಾಗದಿದ್ದರೂ ನೀನು ಹೇಳುವ ರೀತಿ ನನಗೆ ಆಪ್ತ.

ನೀನು ಮೊದಮೊದಲು ನನ್ನೊಂದಿಗೆ ಸ್ನೇಹದಿಂದಲೇ ಮಾತನಾಡುತ್ತಿದ್ದೆ. ಆದರೆ ಆ ಮಾತುಗಳಿಂದು ಪ್ರೀತಿಯ ಗೊಂಚಲುಗಳಾಗಿ ನನ್ನನ್ನು ಕಾಡುತ್ತಿವೆ. ಅಲ್ಲಿಂದ ಹೆಕ್ಕಿದ ಸಾಲುಗಳು, ಕೂಡಿ ಕಳೆಯುವ ಲೆಕ್ಕದಲ್ಲಿನ ಪ್ರೀತಿ ಒಂದೇ ಮೊತ್ತದಲ್ಲಿದೆ. ನನ್ನ ನಿನ್ನ ಒಲವನ್ನು ಭಾಗಿಸೊ ವಿರಹ ಎಂದು ಸುಳಿಯದಿರಲಿ. ಹರುಷವನ್ನು ದ್ವಿಗುಣಗೊಳಿಸೋ ಪ್ರೇಮ ಸುಧೆಯ ನೀಡಲು ನೀನು ಯಾವಾಗಲೂ ನನ್ನ ಜತೆಯಿರಬೇಕು. ನಿನ್ನನ್ನು ಅದೇನೊ ಖುಷಿ. ಆದರೆ, ಅರೇ ಕ್ಷಣ ನಿನ್ನೊಂದಿಗೆ ಮಾತನಾಡದಿದ್ದರೆ ಏನನ್ನೋ ಕಳೆದುಕೊಂಡ ಭಾವ ನನ್ನ ಕಾಡುತ್ತದೆ. ನನ್ನ ಮನ ಬಯಸುವುದು ಗುಳಿ ಕೆನ್ನೆಯಲ್ಲಿ ನಗು ಅರಳಿದ ನಿನ್ನ ಮುಖವನ್ನು. ಭಾವ, ಆನಂದ ಭಾಷ್ಪ ತುಂಬಿದ ಕಣ್ಣುಗಳನ್ನು. ನಿನ್ನ ಮೌನದಲ್ಲಿ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವ ಕಲೆಯನ್ನು ನಾನು ಅರಿತಿದ್ದೇನೆ.

ಇರಲಿ ನಿನ್ನ ಒಲವು ನನಗೆ.. ನಮ್ಮ ನಡುವೆ ಸ್ನೇಹ, ಪ್ರೀತಿ ಎಲ್ಲವೂ ಅವಿರತವಾಗಿ ಹರಿಯುವ ಹೊಳೆಯಾಗಲಿ. ಒಂದು ದಿನದ ಸಂಭ್ರಮ, ಗೊಡವೆ ನಮಗ್ಯಾಕೆ? ನೂರಾರು ಮಾತೇಕೆ ಬೇಕು.. ಅರಿತ ಜೀವವಿದ್ದರೆ ಜತೆಯಲ್ಲಿದ್ದರೆ ಮೌನವೇ ಸಾಕು. ಅನಿಶ್ಚಿತತೆಯ ಬದುಕಿನಲ್ಲಿ ನಿನ್ನ ಮೇಲಿನ ನಂಬಿಕೆ ಮಾತ್ರ ನಿಶ್ಚಿತ. ಹೀಗೆ ಹೇಳುತ್ತಾ ಹೋದಾಗ ಅಕ್ಷರಗಳ ಖಜಾನೆಯೇ ಖಾಲಿಯಾದರೂ ನಿಲ್ಲದು ನಿನ್ನ ವರ್ಣಿಸುವ ಖಯಾಲಿ.. ನಿನ್ನ ನೆನಪಿನಲ್ಲಿ ನನ್ನ ಮನಸ್ಸಿನ ಎಲ್ಲ ಭಾವನೆಗಳನ್ನು ಬರೆದಿದ್ದೇನೆ.. ಎಲ್ಲಿಯೂ ಹೋಗದೆ ನಿನ್ನ ಮನದಂಗಳದಲ್ಲಿ ಬಂಧಿತನಾಗಿರುವೆ. ನನಗೆ ಪ್ರೀತಿಯ ಕರೆಯೋಲೆ ಕಳಿಸುತ್ತಿಯಾ ಎಂಬುದರ ನಿರೀಕ್ಷೆಯಲ್ಲಿ ಸಮಯ ಕಳೆಯುತ್ತಿರುವೆ..

Tags

Related Articles

Leave a Reply

Your email address will not be published. Required fields are marked *

Language
Close