About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಕೊಡಗು ಪ್ರವಾಹ: ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರ ಸಂಖ್ಯೆ 4 ಸಾವಿರದಿಂದ 1,666ಕ್ಕೆ ಇಳಿಕೆ

ಪರಿಹಾರದ ಕೇಂದ್ರಗಳಿಂದ ಸ್ವಗ್ರಾಮಗಳತ್ತ ಜನರು, ತಾತ್ಕಾಲಿಕ ಶೆಡ್ ಬಗ್ಗೆ ಸಂತ್ರಸ್ತರ ನಿರಾಸಕ್ತಿ

ಮಡಿಕೇರಿ: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಭಾರೀ ಮಳೆೆಯಿಂದ ಸಂಕಷ್ಟಕ್ಕೆ ಸಿಲುಕಿದವರ ನೆರವಿಗಾಗಿ ಸ್ಥಾಪಿಸಿದ ಪರಿಹಾರ ಕೇಂದ್ರಗಳಲ್ಲಿ ದಿನದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಸಂತ್ರಸ್ತರು ನೆಲೆಸಿದ್ದರು. ಆದರೆ ಕಳೆದ ನಾಲ್ಕು ದಿನದಿಂದ ವಾತಾವರಣದಲ್ಲಾದ ಬದಲಾವಣೆಯಿಂದ ಈ ಸಂಖ್ಯೆ ಪ್ರಸ್ತುತ 1,666 ಕ್ಕೆ ಇಳಿದಿದೆ.

ಬಹಳಷ್ಟು ಮಂದಿಯಲ್ಲಿ ತಮ್ಮ ಬದುಕಿನ ಹಾದಿಯನ್ನು ತಾವೇ ಕಂಡುಕೊಳ್ಳುವ ಹುಮ್ಮಸ್ಸು ಸರಕಾರದ ಶಾಶ್ವತ ನೆರವಿಗೂ ಮೊದಲೇ ಚಿಗುರೊಡೆಯ ತೊಡಗಿದೆ. ಜಿಲ್ಲಾಡಳಿತ ಮತ್ತು ಶಾಸಕರ ಪ್ರಯತ್ನದಿಂದ ಸಂಪರ್ಕ ಕಳೆದುಕೊಂಡಿರುವ ಗ್ರಾಮೀಣ ಭಾಗಗಳಿಗೆ ಕನಿಷ್ಠ ಜೀಪನ್ನಾದರು ತೆಗೆದುಕೊಂಡು ಹೋಗಲು ಸಾಧ್ಯವಾಗಬಲ್ಲ ಸಣ್ಣ ಹಾದಿಗಳ ನಿರ್ಮಾಣ ಸಾಕಷ್ಟು ಭರದಿಂದ ನಡೆಯುತ್ತಿದೆ. ರಸ್ತೆ ಸಂಪರ್ಕವೇರ್ಪಟ್ಟಲ್ಲಿ ಗ್ರಾಮೀಣ ಭಾಗಗಳಲ್ಲಿ ಜೀವಕಳೆ ಮತ್ತೆ ಮೂಡಲಿದೆ ಎನ್ನುವ ವಿಶ್ವಾಸ ಗ್ರಾಮಸ್ಥರದ್ದು.

ಭೂಕುಸಿತ ಹಾಗೂ ಪ್ರವಾಹದಿಂದಾಗಿ ಹಲವು ಮಂದಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಲಾಗುತ್ತಿದೆ. ಸಂತ್ರಸ್ತರಿಗೆ ವಿತರಿಸಲು ರಾಜ್ಯ, ಜಿಲ್ಲೆಯ ವಿವಿಧೆಡೆಗಳಿಂದ, ಜನಪ್ರತಿನಿಧಿಗಳಿಂದ, ಸಾರ್ವಜನಿಕರಿಂದ, ಸಂಘ ಸಂಸ್ಥೆಗಳಿಂದ ಸ್ವೀಕೃತವಾಗುತ್ತಿರುವ ಪರಿಹಾರ ಸಾಮಾಗ್ರಿಗಳನ್ನು ಜಿಲ್ಲೆಯ ದಾಸ್ತಾನು ಕೇಂದ್ರಗಳಾದ ನಗರದ ಜಿಲ್ಲಾಡಳಿತ ಭವನ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡ, ಕೃಷಿ ಮಾರುಕಟ್ಟೆ ಸಮಿತಿಯ ಗೋದಾಮು, ಕುಶಾಲನಗರ ಮತ್ತು ಪೊನ್ನಂಪೇಟೆಯ ಹಳೇ ನ್ಯಾಯಾಲಯ ಕಟ್ಟಡ ಕೇಂದ್ರಗಳಲ್ಲಿ ದಾಸ್ತಾನು ಮಾಡಲು ವ್ಯವಸ್ಥೆ ಮಾಡಲಾಗಿದೆ.

ತಾತ್ಕಾಲಿಕ ಶೆಡ್ ಬೇಡ: ನಿರಾಶ್ರಿತ ಕುಟುಂಬಗಳಿಗೆ ತಾತ್ಕಾಲಿಕವಾಗಿ ಗುರುತಿಸಲ್ಪಟ್ಟ ಪ್ರದೇಶದಲ್ಲಿ ಶೆಡ್‌ಗಳನ್ನು ನಿರ್ಮಿಸಲು ಜಿಲ್ಲಾಡಳಿತ ಈಗಾಗಲೇ ಕ್ರಮ ಕೈಗೊಂಡಿದ್ದು, ಮಾದರಿ ಶೆಡ್‌ನ್ನು ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿಡಲಾಗಿದೆ. ಆದರೆ ಸಂತ್ರಸ್ತರು ಈ ಶೆಡ್‌ನಲ್ಲಿರಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಮಳೆ ಕಡಿಮೆಯಾಗಿ ಬಿಸಿಲು ಕಾಣಿಸಿಕೊಂಡಿದ್ದು, ಜಿಂಕ್‌ಶೀಟ್‌ನಿಂದ ನಿರ್ಮಿಸಿದ ಶೆಡ್ ಅತಿ ತಾಪಮಾನ ಉಂಟು ಮಾಡುವುದಲ್ಲದೆ ವಾಸಕ್ಕೆ ಯೋಗ್ಯವಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಹಸಿರು ಪರಿಸರದೊಂದಿಗೆ ಪ್ರಕೃತಿಯನ್ನೇ ಮನೆ ಮಾಡಿಕೊಂಡು ಇದ್ದ ಗ್ರಾಮಸ್ಥರಿಗೆ ಈ ಶೆಡ್ ಬಗ್ಗೆ ಒಲವಿಲ್ಲ. ಅಲ್ಲದೆ ತಾತ್ಕಾಲಿಕ ಶೆಡ್‌ನಲ್ಲಿ ಒಂದು ಬಾರಿ ನೆಲೆಸಲು ಆರಂಭಿಸಿದರೆ ನಂತರದ ದಿನಗಳಲ್ಲಿ ಶಾಶ್ವತ ನೆಲೆ ಕಲ್ಪಿಸುವ ಕಾಳಜಿಯನ್ನು ಸರಕಾರ ಕಳೆದುಕೊಳ್ಳಲಿದೆ ಎನ್ನುವ ಆತಂಕವೂ ಸಂತ್ರಸ್ತರಲ್ಲಿದೆ. ಈ ಬೆಳವಣಿಗೆ ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಲಿದೆ.

Tags

Related Articles

Leave a Reply

Your email address will not be published. Required fields are marked *

Language
Close