Breaking Newsಪ್ರಚಲಿತರಾಜ್ಯ
ಕೊಡಗಿನಲ್ಲಿ ಪ್ರಕೃತಿಯ ಕೋಪದ ನಡುವೆಯೂ ವಿವಾಹದ ಸಂಭ್ರಮ
ಹೊಸ ಜೀವನಕ್ಕೆ ಕಾಲಿಟ್ಟ ವಾರಿಜ, ರುದ್ರೇಶ್

ಮಡಿಕೇರಿ: ಕೊಡಗಿನಲ್ಲಿ ಪ್ರಕೃತಿ ಮುನಿಸಿಕೊಂಡ ಪರಿಣಾಮ ಶುಭ ಕಾರ್ಯಗಳಿಗೂ ವಿಘ್ನ ಎದುರಾಗಬಹುದೆನ್ನುವ ಆತಂಕದ ನಡುವೆಯೇ ಹೃದಯವಂತ ಸಮಾಜದ ಸಹಕಾರದಿಂದ ಸಂತ್ರಸ್ತ ಕುಟುಂಬಗಳ ವಿವಾಹ ನಿರ್ವಿಘ್ನವಾಗಿ ನಡೆಯುತ್ತಿವೆ.
ಈಗಾಗಲೇ ನಿಗಧಿಯಾಗಿದ್ದ ವಿವಾಹಗಳು ಗುಡ್ಡಗಳು ಕುಸಿದಷ್ಟೇ ವೇಗವಾಗಿ ಮುರಿದು ಬೀಳಬಹುದೆನ್ನುವ ಬೇಸರ ಹೆಣ್ಣು ಹೆತ್ತ ಕುಟುಂಬಗಳಲ್ಲಿತ್ತು. ಆದರೆ ಆಪತ್ಕಾಲದ ಬಾಂಧವರಂತೆ ಬಂದ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ನಿಶ್ಚಿತಾರ್ಥವಾಗಿದ್ದ ಮದುವೆಯನ್ನು ನಿಗಧಿತ ದಿನಾಂಕದಂದೇ ಮಾಡಿ ಮುಗಿಸುವ ಮೂಲಕ ನೊಂದ ಮನಗಳಲ್ಲಿ ಮುಗುಳ್ನಗೆ ಬೀರುವಂತೆ ಮಾಡಿದ್ದಾರೆ.
ಮಹಾಮಳೆಯ ನಂತರ ಜಿಲ್ಲೆಯಲ್ಲಿ ಎರಡು ಜೋಡಿಯ ವಿವಾಹ ಸಾರ್ವಜನಿಕರ ಸಹಕಾರದಿಂದಲೇ ನಡೆದಿದ್ದು, ಗುರುವಾರ ಮೂರನೇ ಜೋಡಿಯ ಸಮಾರಂಭ ಕೂಡ ವಿವಿಧ ಸಂಘ, ಸಂಸ್ಥೆಗಳ ಸಹಾಯ ಹಸ್ತದ ಮೂಲಕವೇ ನೆರವೇರಿತು.
ಆ.17 ರಂದು ಸುರಿದ ಧಾರಾಕಾರ ಮಳೆಗೆ ಎರಡನೇ ಮೊಣ್ಣಂಗೇರಿ ಯ ಮನೆಯೊಂದು ಕೆಸರಿನಾರ್ಭಟದಲ್ಲಿ ಕೊಚ್ಚಿ ಹೋಗಿತ್ತು. ಮನೆಯೊಂದಿಗೆ ಮದುವೆಗಾಗಿ ಸೇರಿಸಿಟ್ಟಿದ್ದ ಚಿನ್ನಾಭರಣ ಹಾಗೂ ಇತರ ವಸ್ತುಗಳು ಕೂಡ ನೀರು ಪಾಲಾಗಿತ್ತು. ಎಲ್ಲವನ್ನು ಕಳೆದುಕೊಂಡ ಆ ಮನೆಯ ನಿವಾಸಿಗಳು ಕಲ್ಲುಗುಂಡಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ವಿವಾಹ ನಿಶ್ಚಯವಾಗಿದ್ದ ವಾರಿಜಳ ಸ್ಥಿತಿ ಕಣ್ಣೀರ ಕೋಡಿಯಾಗಿತ್ತು. ಇನ್ನು ನನ್ನ ಮದುವೆಯ ಗಳಿಗೆ ಮತ್ತೆ ಕೂಡಿ ಬರುವುದೇ ಅಥವಾ ಇಲ್ಲವೇ ಎಂದು ಚಿಂತೆಯಲ್ಲಿದ್ದಾಗಲೇ ಸ್ಥಳೀಯ ಸಂಘ, ಸಂಸ್ಥೆಗಳ ಪ್ರಮುಖರು ವಾರಿಜಾಳಿಗೆ ವಿವಾಹ ಭಾಗ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ.
ವಾರಿಜಳ ಮದುವೆ ಪುಣೆ ಮೂಲದ ರುದ್ರೇಶ್ ಅವರೊಂದಿಗೆ ನಗರದ ಅಶ್ವಿನ ಆಸ್ಪತ್ರೆ ಆವರಣದಲ್ಲಿರುವ ಗಣಪತಿ ದೇವಾಲಯದಲ್ಲಿ ನೆರವೇರಿತು. ಬೆಂಗಳೂರಿನಲ್ಲಿ ನರ್ಸ್ ಆಗಿರುವ ವಾರಿಜ, ಪುಣೆ ಮೂಲದ ರುದ್ರೇಶ್ನನ್ನು ವರಿಸಿದ್ದಾರೆ. ಬುಧವಾರ ಸಂಜೆ ಸ್ಥಳೀಯರು ಪರಿಹಾರ ಕೇಂದ್ರದಲ್ಲಿ ಮದರಂಗಿ ಶಾಸ್ತ್ರ ನಡೆಸಿದರು.
ಸಂಘ, ಸಂಸ್ಥೆಗಳ ಕಾರ್ಯಕರ್ತರು, ಹಾಗೂ ಬಂಧು, ಬಳಗ ಸರಳ ರೀತಿಯಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದರು. ನವ ಜೀವನಕ್ಕೆ ಕಾಲಿರಿಸಿದ ವಾರಿಜ ಹಾಗೂ ರುದ್ರೇಶ್ ಸಂಘ, ಸಂಸ್ಥೆ ಮತ್ತು ಸಾರ್ವಜನಿಕರ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.