About Us Advertise with us Be a Reporter E-Paper

ವಿರಾಮ

ಲತಾ…ಜಾನಕಿಯರವನ್ನು ಮರೆಸುವ ಕಂಠ ಕೋಗಿಲೆ ಕೂಲಿ ಗಂಗಮ್ಮ!

ಶಶಿಧರ ಹಾಲಾಡಿ

ವಿಶ್ವವಾಣಿ: ನಮಸ್ಕಾರ ಗಂಗಮ್ಮ. ನಿಮ್ಮನ್ನು ಎಲ್ಲರೂ ಜ್ಯೂನಿಯರ್ ಜಾನಕಿ ಅಂತಲೇ ಕರೆಯಲು ಆರಂಭಿಸಿದ್ದಾರೆ.  ಚಲನ ಚಿತ್ರವೊಂದಕ್ಕೆ ಹಾಡುವ ಮೂಲಕ, ಹಿನ್ನೆಲೆಗಾಯಕಿ ಯಾದಿರಿ. ಏನನ್ನಿಸುತ್ತೆ?

ಗಂಗಮ್ಮ: ತುಂಬಾ ಖುಷಿ ಆಗುತ್ತೆ ಸಾರ್. ನನ್ನ ಹಾಡುಗಳನ್ನು ಫೇಸ್‌ಬುಕ್‌ನಲ್ಲಿ ನೋಡಿ, ಟಿವಿಯಲ್ಲಿ ಕೇಳಿ, ಚಲನ ಚಿತ್ರ ನಿರ್ದೇಶಕರಾದ ರಾಜಶೇಖರ್ ಅವರು ‘ಪರದೇಶಿ ಕೇರ್‌ಆಫ್ ಲಂಡನ್’ ಚಿತ್ರದಲ್ಲಿ ಹಾಡಲು ಅವಕಾಶ ನೀಡಿದ್ದಾರೆ. ಹಾಡಲು ಅನುವುಮಾಡಿಕೊಟ್ಟ ಸಿನಿಮಾ ನಿರ್ಮಾಪಕ ಬಿ.ಬದರಿನಾರಾಯಣ್ ಅವರಿಗೆ ಧನ್ಯವಾದ. ಕೊಪ್ಪಳದ ಆರ್ಕೆಸ್ಟ್ರಾ ಕಲಾವಿದ ಶಿವಪ್ರಸಾದ್ ಮಠಪತಿಯವರು ನಾನು ಹಾಡಿದ ‘ಸತ್ಯಂಶಿವಂ ಸುಂದರಂ’ ಹಾಡನ್ನು  ಫೇಸ್‌ಬುಕ್‌ನಲ್ಲಿ ಹಾಕುವ  ನನಗೆ ಪ್ರಚಾರ ಕೊಟ್ಟರು.

ನಿಮ್ಮ ಮೊದಲ ಗುರುಗಳು ಯಾರು ಗಂಗಮ್ಮ?

ಅಂಬಣ್ಣ ಮಾಸ್ಟರ್ ಅಂತ ನಮ್ಮ ಕೊಪ್ಪಳದಲ್ಲಿ ಇದಾರೆ. ಅವರು ಐದು ತಿಂಗಳು ನನಗೆ ಕೆಲವು ಗೀತೆಗಳನ್ನು ಹೇಳೀಕೊಟ್ಟರು. ಹಕ್ಕಿ ಹಾರುತಾವ, ಮುದ್ದು ತಾರೋ ರಂಗ ಎದ್ದು ಬಾರೋ .. ಈ ರೀತಿಯ ಸರಳವಾದ ಹಾಡುಗಳನ್ನು ಹೇಳಿಕೊಟ್ಟರು. ಅಂಬಣ್ಣ ಗುರುಗಳು ಸಂಗೀತ ಕ್ಲಾಸ್ ಮಾಡುತ್ತಿದ್ದರು. ಗುರುಗಳು ಒಂದೊಂದೇ ಸ್ಟಾಂಜಾ ಹೇಳಿಕೊಡಲು ಒಂದು ವಾರ ತೆಗೆದುಕೊಳ್ಳುತ್ತಿದ್ದರು.

ಈಗ  ಯಶಸ್ಸನ್ನು ಕೇಳಿ ಅವರಿಗೆ ಖುಷಿ ಆಯಿತಾ?

‘ನೀನು ಟಿವಿಗೆಲ್ಲಾ ಹಾಡಿದೀಯಂತೆ, ಖುಷಿ ಆಯ್ತು, ಧನ್ಯವಾದಗಳು  ಕಣಮ್ಮಾ’ ಅಂತ ಅಂದರು ಸರ್. ಅದಕ್ಕೆ ನಾನು ‘ಸರ್, ನೀವು ನನಗೆ ಧನ್ಯವಾದ ಹೇಳಬಾರದು, ನೀವು ನನ್ನ ಗುರುಗಳು, ನಾನು ನಿಮ್ಮ ಶಿಷ್ಯೆ. ನಾನು ನಿಮ್ಮ ಆಶೀರ್ವಾದ ತಕೊಂತೀನಿ, ನಿಮಗೆ ಯಾವ ರೀತಿ ಧನ್ಯವಾದ ಹೇಳಬೇಕು ಅಂತ ಗೊತ್ತಾಗ್ತಿಲ್ಲ’ ಎಂದು ನಾನು ಅವರಿಗೆ ನಮಸ್ಕಾರ ಮಾಡಿ ಬಂದೆ, ಸರ್. ಅವರಿಗೆ ಈಗ 80  ಕಣ್ಣು ಕಾಣಿಸುವುದಿಲ್ಲ, ಆದರೂ ಹಾರ್ಮೊನಿಯಂ ಮತ್ತು ಕೊಳಲು ನುಡಿಸುತ್ತಾರೆ.

ಯಾವಾಗ ನೀವು ಅವರ ಹತ್ತಿರ ಹಾಡುಗಳನ್ನು ಹೇಳಿಸಿಕೊಂಡಿದ್ದು?

ನನಗೆ ಆಗ ಸುಮಾರು 25 ವರ್ಷ ಸರ್. ಆಗ ಅಂಬಣ್ಣ ಮಾಸ್ಟ್ರ ಹತ್ತಿರ ಸಂಗೀತ ಹೇಳಿಸಿಕೊಂಡೆ. ನನ್ನ ಮದುವೆ ಆದಮೇಲೆ ಆ ಹಾಡುಗಳನ್ನು ಗುರುಗಳು ನನಗೆ ಕಲಿಸಿದರು. ನಾವು ತುಂಬಾ ಬಡವರು ಸರ್. ಶಾಸ್ತ್ರೀಯ ಕಲಿಕೆ ನನ್ನಿಂದ ಆಗಲೇ ಇಲ್ಲ.

ನೀವು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಗ ಹಾಡು

ಹೊಲದಲ್ಲಿ ಕೆಲಸ ಮಾಡುವಾಗ ನನ್ನಷ್ಟಕ್ಕೆ ನಾನೇ ಹಾಡು ಹೇಳಿಕೊಳ್ಳುತ್ತಿದ್ದೆ. ಕೂಲಿ ಕೆಲಸವೇ ನಮ್ಮ ಮುಖ್ಯ ವೃತ್ತಿ ಸರ್. ಕೆಲಸ ಮಾಡುವಾಗ ನಮ್ಮ ಜೊತೆಯವರೆಲ್ಲಾ ಸಂಪ್ರದಾಯದ ಹಾಡುಗಳನ್ನು ಹೇಳುತ್ತಿದ್ದರು. ನಾನು ಮಾತ್ರ ಸಿನಿಮಾ ಹಾಡು ಹೇಳುತ್ತಿದ್ದೆ.  ನಮ್ಮ ಜೊತೆಯವರು ಹೇಳುತ್ತಿದ್ದರು, ‘ಗಂಗಮ್ಮಾ, ನೀನ್ಯಾಕವ್ವಾ ಸಿನಿಮಾ ಹಾಡಿನ ಹುಚ್ಚು ಹತ್ತಿಸಿಕಂಡಿದ್ದೀ? ಅದನ್ನು ಬಿಡು, ಅದು ಎಲ್ಲಿಗೆ ಕರೆದುಕೊಂಡು ಹೋಗುತ್ತೋ ಗೊತ್ತಿಲ್ಲವ್ವ…ಜಾಗ್ರತೆಯಾಗಿರು’ ಎನ್ನುತ್ತಿದ್ದರು.

ಮೊದಲ ಬಾರಿ ಆರ್ಕೆಸ್ಟ್ರಾಗಳಲ್ಲಿ ಹಾಡಿದ್ದು ಯಾವಾಗ?

ಸುಮಾರು  ವರ್ಷದ ಹಿಂದೆ ಮೊದಲ ಬಾರಿ ಆರ್ಕೆಸ್ಟ್ರಾದಲ್ಲಿ ಹಾಡಿದ್ದೆ. ‘ಮುಳ್ಳಿನ ಗುಲಾಬಿ’ ಚಿತ್ರದ ಹಾಡನ್ನು ಅವತ್ತು ಹಾಡುವ ಅವಕಾಶ. ಆ ನಂತರ ಕಳೆದ ಇಪ್ಪತ್ತು ವರ್ಷಗಳಿಂದ ಬೇರೆ ಬೇರೆ ವೇದಿಕೆಗಳಲ್ಲಿ ಹಾಡುತ್ತಲೇ ಇದೀನಿ ಸರ್. ಕೊಪ್ಪಳ ಸುತ್ತ ಮುತ್ತ, ಹಾವೇರಿ, ದಾವಣಗೆರೆ, ಹರಿಹರ, ಭದ್ರಾವತಿ, ಶಿವಮೊಗ್ಗ ಮೊದಲಾದ ಕಡೆ ಎಲ್ಲಾ ಹಾಡಿದ್ದೇನೆ. ಕೊಪ್ಪಳದ ಶಿವಪ್ರಸಾದ್ ಮಠಪತಿಯವರ ಆರ್ಕೆಸ್ಟ್ರಾಕ್ಕಿಂತ ಮುಂಚೆ, ಕೊಪ್ಪಳದ ಮಧುಮೆಲೊಡೀಸ್ ಆರ್ಕೆಸ್ಟ್ರಾ, ಎನ್‌ಕೆಮೆಲೊಡೀಸ್, ಭದ್ರಾವತಿಯ ಬ್ರದರ್‌ಸ್ ಆರ್ಕೆಸ್ಟ್ರಾ ಮತ್ತು  ಬೇರೆ ವೇದಿಕೆಗಳಲ್ಲಿ ಹಾಡಿದ್ದೇನೆ.

ನಿಮಗೆ ತುಂಬಾ ಇಷ್ಟವಾದ ಹಾಡು ಯಾವುದು?

ನನ್ನ ಮನದಾಳದಿಂದ ಹೇಳಬೇಕೆಂದರೆ, ‘ಮೂಕ ಹಕ್ಕಿಯು ಹಾಡುತಿದೆ’ ಎಂಬ ಹಾಡನ್ನು ಹೇಳುವಾಗ ನನ್ನ ಕಥೆಯನ್ನೇ ಹೇಳಿದಂತೆ ಅನಿಸುತ್ತೆ. ನಾನು ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿದ್ದೀನಿ ಸರ್. ಆ ಸಿನಿಮಾದಲ್ಲಿ ಆರತಿಯವರು ತುಂಬಾ ಕಷ್ಟ ಪಟ್ಟರು, ಅದೇ ಸ್ಟೋರಿ ನನ್ನ ಕತೆಯ ರೀತಿಯೇ ಇದೆಯಲ್ಲಾ ಅಂತ ಸ್ವಲ್ಪ ಫೀಲಿಂಗ್ ತಕೊಂಡು, ಆ ಹಾಡನ್ನು ಹಾಡುತ್ತೀನಿ ಸರ್. ಅಲ್ಲದೆ  ಬರೆದ ‘ತೆರೆದಿದೆ ಮನೆ ಓ ಬಾ ಅತಿಥಿ’ ಹಾಡುವುದೆಂದರೆ ನನಗೆ ತುಂಬಾ ಇಷ್ಟ.

ನೀವು ಬೇರೆ ಊರುಗಳಲ್ಲಿ ಹಾಡುಗಳನ್ನು ಹಾಡಿದಾಗ, ಜನ ಯಾವ ರೀತಿ ಮೆಚ್ಚುಗೆ ವ್ಯಕ್ತಪಡಿಸ್ತಾರೆ? ಫೇಸ್‌ಬುಕ್‌ನಲ್ಲಿ ನಿಮ್ಮ ಹಾಡನ್ನು ಕೇಳಿದವರು ಏನಂದರು?

‘ಎಷ್ಟು ಚೆನ್ನಾಗಿ ಹಾಡ್ತೀರಾ ಗಂಗಮ್ಮವರೆ’ ಎಂದು ಪ್ರೋತ್ಸಾಹಿಸುತ್ತಾರೆ. ಕನ್ನಡದಲ್ಲಿ ನನಗೆ ಐವತ್ತಕ್ಕಿಂತ ಹೆಚ್ಚುಹಾಡು ಬಾಯಿಪಾಠ ಆಗಿದೆ. ಹಿಂದಿಯ ಐದು ಹಾಡು ಗೊತ್ತಿದೆ. ಅದರಲ್ಲಿ, ಸತ್ಯಂ ಶಿವಂ ಸುಂದರಂ ಹಾಡನ್ನು ಫೇಸ್‌ಬುಕ್ ಲೈವ್‌ನಲ್ಲಿ  ಲಕ್ಷಗಟ್ಟಲೆ ಲೈಕ್ ಬಂದಿವೆ ಅಂತ ಶಿವಪ್ರಸಾದ್ ಹೇಳ್ತಿದಾರೆ. ಕೊಪ್ಪಳದ ಸ್ಟಾರ್ ಕರೊಕೆ ಸ್ಟುಡಿಯೋದ ಶಿವಪ್ರಸಾದ್ ಮಠಪತಿಯವರು ಆ ಹಾಡನ್ನು ಫೇಸ್‌ಬುಕ್‌ಗೆ ಹಾಕಿದರು. ತುಂಬಾ ಜನ ನನ್ನ ಹಾಡನ್ನು ಇಷ್ಟಪಟ್ಟಿದ್ದಾರೆ. ನಾಲ್ಕೈದು ಸಿನಿಮಾ ಕ್ಷೇತ್ರದ ಗಣ್ಯರು ಸಹ ಫೋನ್ ಮಾಡಿದ್ದರು. ಅವರ ಹೆಸರು ಮಾತ್ರ ನನಗೆ ಗೊತ್ತಿಲ್ಲ. ನನಗೆ ಈ ಕ್ಷೇತ್ರದಲ್ಲಿ ಯಾರದ್ದೂ ಹೆಸರು ಗೊತ್ತಿಲ್ಲ ನೋಡ್ರಿ.

ಮತ್ತೆ, ನಿಮಗೆ ನಿಮ್ಮ ಮೊದಲ ಫೇಸ್‌ಬುಕ್ ಲೈವ್ ಹಾಡು ಅಷ್ಟು  ಆಯ್ತು ಅಂತ ಹೇಗೆ ಗೊತ್ತಾಯ್ರು ಗಂಗಮ್ಮನವರೆ?

ಒಂದಿನ ನನ್ನ ಮಗಳು ಹೇಳಿದಳು, ಪಕ್ಕದ ಮನೆ ಟಿವಿಯಲ್ಲಿ ನಾನು ಹಾಡಿದ್ದು ಬರ್ತಾ ಇದೆ ಅಂತ ಹೇಳಿದ್ಲು. ನಾನು ಏನೋಂತ ಸುಮ್ಮನೆ ಇದ್ದೆ. ಇನ್ನೊಂದು ಸಲ ಹೇಳಿದಳು, ಅಮ್ಮಾ ನೋಡಮ್ಮಾ ನೀನು ಹಾಡಿದ ವಿಡಿಯೋ ಟಿವಿನಲ್ಲಿ ಬರತಾ ಇದೆ ಅಂತ. ನಾನು ಪಕ್ಕದ ಮನೆಗೆ ಹೋಗಿ ನೋಡಿದೆ. ನನ್ನ ಚಿತ್ರ ಬರ್ತಾ ಇತ್ತು, ನಾನು ಹಾಡೋದು ಸಹ ಅಲ್ಲಿ ಪದೇ ಪದೇ  ಇತ್ತು. ನಿಜವಾಗಿಯೂ ಟಿವಿಯಲ್ಲಿ ನಾನು ಹಾಡಿದ್ದೇ ಬರ್ತಾ ಇದೆ ಅಂತ ನೋಡಿ, ನನಗೆ ಬಹಳ ಖುಷಿ ಆಯ್ತು. ಇವೆಲ್ಲಾ ಆಗಿ ಇನ್ನೂ ಏಳೆಂಟು ದಿನ ಆಗಿದೆ ಸರ್. …

ಫೇಸ್‌ಬುಕ್‌ನಲ್ಲಿ ಲೈವ್ ಆದ  ‘ಸತ್ಯಂ ಶಿವಂ ಸುಂದರಂ’ ಹಾಡಿನ ಬಗ್ಗೆ ಹೇಳಿ.

ಸತ್ಯಂ ಶಿವಂ ಸುಂದರಂ ಹಾಡನ್ನು ಬಹಳ ಮುಂಚೆ ನಾನು ನವರಂಗ್ ಮೆಲೊಡೀಸ್ ಜೊತೆ ಹೊಸಪೇಟೆಲಿ ಹಾಡಿದ್ದೆ ಸರ್.  ಫೇಸ್‌ಬುಕ್‌ನಲ್ಲಿ ಅದು ಪ್ರಖ್ಯಾತಿ ಆದ ನಂತರ,  ನನ್ನ ಹಾಡನ್ನು ಹಾಕಲು ಆರಂಭಿಸಿದರು. ಮೊದಲ ಸಲ ಕಳೆದ ವಾರ ಟಿವಿಯಲ್ಲಿ ಆ ಹಾಡನ್ನು ನೋಡಿದಾಗ, ನಮ್ಮ ಅಕ್ಕ ಪಕ್ಕದವರು ಕೆಲವರು ‘ಯಾರೋ ಕ್ಯಾಸೆಟ್ ಹಾಕಿದ್ದಾರೆ, ಈ ಗಂಗಮ್ಮ ಸುಮ್ಮನೆ ಹಾಡಿದ ರೀತಿ ಮಾಡಿದಾಳೆ’ ಅಂತ ಅಂದಕೊಂಡಿದ್ದರು ಸಾರ್! ಅವರಿಗೆ ಇದು ಒಳ್ಳೆ ತಮಾಷೆ ಥರ ಇತ್ತು! ಆಮೇಲೆ ಎಲ್ಲಾ ಟಿವಿಲೂ ನಾನು ಹಾಡಿದ್ದು ಬರೋಕೆ ಶುರು ಆದ ಮೇಲೆ, ನಾನೇ ಸ್ವತಃ ಈ ಹಾಡನ್ನು ಹಾಡಿದ್ದು ಅಂತ  ಗೊತ್ತಾಯಿತು.

ಈಗ ಸ್ಟುಡಿಯೋದಲ್ಲಿ ಹಾಡುವುದಕ್ಕೆ ಖುಷಿನಾ? ನೀವು ಈ ರೀತಿ ಬಂದು ಸಿನಿಮಾಕ್ಕೆ ಹಾಡ್ತೀರಿ ಅಂತ ಯೋಚಿಸಿದ್ದಿರಾ?

ಇಲ್ಲ ಸರ್, ನಾನು ಈ ರೀತಿ ಸ್ಟುಡಿಯೋಕ್ಕೆ ಬಂದು ಹಾಡ್ತೀನಿ ಅಂತ ಕನಸಿನಲ್ಲೂ ಯೋಚಿಸಿರಲಿಲ್ಲ. ಈಗ ‘ಪರಮೇಶಿ ಕೇರ್‌ಆಫ್ ಲಂಡನ್’ ಸಿನಿಮಾದ ನಿರ್ದೇಶಕ ರಾಜಶೇಖರ್ ನನಗೆ ಈ ಒಂದು ಹಾಡನ್ನು ಹೇಳಲು ಅವಕಾಶ ನೀಡಿದ್ದಾರೆ. ವೀರ್‌ಸಮರ್ಥ ಅವರ ಸಂಗೀತ ನಿರ್ದೇಶನ. ನಾನು ಹೊಸಬಳಾದರೂ ಸಹ, ನನ್ನನ್ನು ತಮ್ಮ ಹಾಡಿಗೆ  ಮಾಡಿ, ಸಂಗೀತ ನಿರ್ದೇಶಕರು, ನಿರ್ಮಾಪಕರು ಮತ್ತು ನಿರ್ದೇಶಕರು ಬಹಳ ಸಹಾಯ ಮಾಡಿದ್ದಾರೆ ಸರ್.

ಇಷ್ಟು ದಿನ ಸ್ಟೇಜ್ ಮೇಲೆ ನಿಂತು, ಕರೋಕೆ ಸಂಗೀತಕ್ಕೆ ಹಾಡಿದ್ದಿರಿ. ಈಗ ಸ್ಟುಡಿಯೋ ಕೊಠಡಿಯಲ್ಲಿ ಹಾಡನ್ನು ಹಾಡುತ್ತಿದ್ದೀರಿ. ಏನು ಅನಿಸುತ್ತೆ?

ಖುಷಿ ಆಗುತ್ತೆ. ಇಲ್ಲಿ ಒಂದೇ ಸಾಲನ್ನು ಹತ್ತಾರು ಸಲ ಹಾಡಬೇಕು, ಸಣ್ಣ ಪುಟ್ಟ ತಪ್ಪಾದಾಗ ವೀರ್ ಸಮರ್ಥ ಅವರು ತಿದ್ದಿ ಹೇಳಿಕೊಡುತ್ತಾರೆ. ಇಲ್ಲಿ ಹಾಡುವುದೇ ಒಂದು ಬೇರೆ ಅನುಭವ. ಒಂದೇ ಹಾಡನ್ನು  ಎಷ್ಟು  ಸಲ ಹಾಡಿದ್ದೇನೋ ಲೆಕ್ಕವೇ ಇಲ್ಲ. ಆದರೂ, ಅದು ತುಂಬಾ ಖುಷಿ ಕೊಡುತ್ತಿದೆ. ನಾಲ್ಕೆಂಟು ಸಲ ಹಾಡಿದ ಮೇಲೆ,  ಪಲ್ಲವಿ ಮತ್ತು ಚರಣ ಸರಿಯಾಗಿ ರೆಕಾರ್ಡ್ ಆಗಿದೆ ಎಂದು ಸಂಗೀತ ನಿರ್ದೇಶಕರು ಹೇಳಿದಾಗ ತುಂಬಾ ಸಂತೋಷ ಆಯಿತು. ಸ್ಟುಡಿಯೋ ಒಳಗೆ ಹೋದ ಕೂಡಲೆ ಸ್ವಲ್ಪ ಭಯವೂ ಆಯಿತು. ಕಿವಿಗೆ ಹಾಕಿದ್ದ ಆ ಸ್ಪೀಕರನ್ನು ಯಾವಾಗ ತೆಗೆಯುವುದು ಅನಿಸುತ್ತಿತ್ತು. ಈಗ ಅಭ್ಯಾಸ ಆಗಿದೆ, ಖುಷಿಯೂ ಆಗ್ತಿದೆ.

ಸಂಗೀತ ಕ್ಷೇತ್ರದಲ್ಲಿ  ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಅನಿಸುತ್ತಾ?

ಹೌದು ಸರ್, ಈ ಕ್ಷೇತ್ರದಲ್ಲಿ ಯಾರಾದರೂ ಒಬ್ಬ ಸಂಗೀತ ಟೀಚರ್ ಸಿಕ್ಕಿದರೆ, ನನಗೆ ಇಲ್ಲೇ ಇದ್ದು ಕಲಿಯಲು ಅವಕಾಶ ಮಾಡಿಕೊಟ್ಟರೆ, ಇನ್ನಷ್ಟು ಕಲಿಯ ಬೇಕು ಅಂತ ಆಸೆ ಸರ್. ಇಲ್ಲೇ ಇದ್ದು ಇನ್ನೂ ಚೆನ್ನಾಗಿ, ಇನ್ನಷ್ಟು ಹಾಡುಗಳನ್ನು ಹಾಡಬೇಕು ಅಂತ ನನ್ನ ಆಸೆ.

ಹಂಸಲೇಖಾ ಅವರ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ನೀವು ನಿಮ್ಮ ಮೊದಲ ಚಲನಚಿತ್ರ ಗೀತೆ ರೆಕಾರ್ಡಿಂಗ್ ಮಾಡಿದ್ದೀರಿ. ಚೆನ್ನಾಗಿ  ಏನನ್ನಿಸುತ್ತೆ?

ಇಲ್ಲಿಗೆ ಬಂದ ಮೇಲೆ ‘ಇದು ಹಂಸಲೇಖ ಅವರ ರೆಕಾರ್ಡಿಂಗ್ ಸ್ಟುಡಿಯೋ’ ಅಂತ ನಮ್ಮ ನಿರ್ದೇಶಕರು ಹೇಳಿದರು. ನನಗೆ ಅವರನ್ನು ಒಮ್ಮೆ ನೋಡಬೇಕು, ಅವರನ್ನು ಮಾತನಾಡಿಸಬೇಕು ಅಂತ ಅನ್ನಿಸ್ತಾ ಇದೆ. ಅವರ ಮಾರ್ಗದರ್ಶನದಲ್ಲಿ ಹಾಡಬೇಕು ಅಂತ ಆಸೆ ಇದೆ ಸರ್. ನನಗೂ ಇನ್ನಷ್ಟು ಹಾಡಬೇಕು, ಹೊಸತನ್ನು ಕಲಿಯಬೇಕು ಅಂತ ಆಸೆ. ಸ್ವಲ್ಪ ಶಾಸ್ತ್ರೀಯ ಹಿನ್ನೆಲೆ ಕಲಿಯ ಬೇಕು ಅಂತ ಆಸೆ. ಹಂಸಲೇಖಾ ಅವರ ಆಶೀರ್ವಾದ ನನಗೆ ಬೇಕು ಸರ್.

 ನೀವು ನಾಟಕದ ಹಾಡುಗಳನ್ನೂ ಕಲ್ತಿದೀರಾ, ಗಂಗಮ್ಮವರೆ?

ಕೆಲವು ಹಾಡುಗಳು ಗೊತ್ತಿದೆ ಸಾರ್. ಪುಸ್ತಕದಲ್ಲಿ ಬರೆದು ಇಟ್ಟಿದ್ದೀನಿ. ಬೆಂಗಳೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ, ಎಂಟು ವರ್ಷದ ಹಿಂದೆ ‘ಕಿವುಡ ಮಾಡಿದ ಕಿತಾಪತಿ’ ನಾಟಕಕ್ಕೆ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದೀನಿ ಸರ್. ಆ ನಾಟಕದಲ್ಲಿ ಐದು ಹಾಡನ್ನು ಹಾಡಿದೀನಿ. ‘ಭಂಡ ನನ ಗಂಡ’ ಮತ್ತು ಇತರ ನಾಟಕಕ್ಕೆ ಬೆಂಗಳೂರಿನಲ್ಲಿ ಮತ್ತು ಬೇರೆ ಕಡೆನೂ ಹಾಡಿದೀನಿ. ಗವಿಸಿದ್ದೇಶ್ವರ ಜಾತ್ರೆ ಆದಾಗ, ಆ ನಾಟಕ ಕಂಪನಿ  ಊರಿಗೆ ಬಂದಿತ್ತು. ಆಗ ನಮ್ಮೂರಿನವರು ನನ್ನ ಪರಿಚಯ ಮಾಡಿ, ಇವರು ಹಾಡು ಹೇಳ್ತಾರೆ ಅಂತ ಹೇಳಿದ್ರು. ಆಗ ಅವರು ನಾಟಕಕ್ಕೆ ಹಾಡು ಹೇಳಲು ನನ್ನನ್ನು ಆಯ್ಕೆ ಮಾಡಿದರು.

ಅಂದರೆ, ಎಂಟು ವರ್ಷದ ಹಿಂದೆನೇ ನೀವು ನಾಟಕಕ್ಕೆ ‘ಹಿನ್ನೆಲೆ ಗಾಯಕಿ’ಯಾಗಿ ಆಯ್ಕೆ ಆಗಿದ್ದೀರಿ, ಅಲ್ವೆ ಗಂಗಮ್ಮ?

ಹೌದು ಸಾರ್. ಇಲ್ಲೆ ಎರಡು ವರ್ಷ ಇದ್ದು ಬೇರೆ ಬೇರೆ ನಾಟಕಕ್ಕೆ ಹಿನ್ನಲೆ ಗಾಯಕಿಯಾಗಿ ಹಾಡಿದ್ದೆ ಸಾರ್. ಆಗ ನನಗೆ ವಾರಕ್ಕೆ  ಅಂತ ಸಂಬಳ ಕೊಡುತ್ತಿದ್ದರು. ಇರೋದಿಕ್ಕೆ ರೂಮು, ಊಟ ತಿಂಡಿ ಕೊಟ್ಟು, ವಾರಕ್ಕೆ 750 ರೂಪಾಯಿ ಕೊಡುತ್ತಿದ್ದರು ಸಾರ್. ಪ್ರತಿದಿನ ನಾಟಕಕ್ಕೆ ಹಿನ್ನೆಲೆ ಗಾಯನ ಮಾಡಿದೀನಿ ಸಾರ್. ಎರಡು ವರ್ಷ ಬೆಂಗಳೂರಿನಲ್ಲೇ ಇದ್ದೆ. ಆದರೆ, ಬಣ್ಣ ಹಚ್ಚಿ ನಟನೆ ಮಾಡಿಲ್ಲ ಸರ್, ನನಗೆ ಏನಿದ್ದರೂ ಹಾಡುವುದರಲ್ಲೇ ಬಹಳ ಆಸಕ್ತಿ ಸಾರ್. ಹಾಡಿನಲ್ಲೇ ನಾನು ಮುಂದೆ ಬರಬೇಕು ಅಂತ ಆಸೆ ಸಾರ್.

Tags

Related Articles

Leave a Reply

Your email address will not be published. Required fields are marked *

Language
Close