ಕೆಪಿಸಿಸಿ ಅಧ್ಯಕ್ಷ ಸ್ಥಾನವೇ ನನ್ನ ಮೊದಲ ಆಯ್ಕೆ

Posted In : ಸಂಗಮ, ಸಂಪುಟ

ಪಕ್ಷ ಸಂಘಟನೆಗಾಗಿ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧನಿದ್ದೇನೆ, ನನಗಿಂತ ಸಮರ್ಥರು ಆಯ್ಕೆಯಾದರೆ ಸಂತಸ: ಪರಮೇಶ್ವರ

ಕೆಪಿಸಿಸಿ ಅಧ್ಯಕ್ಷನಾಗಿ ಹತ್ತಾರು ಚುನಾವಣೆ ನಡೆಸಿದ ಅನುಭವ ನನಗಿದೆ. ತಪ್ಪು-ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ಅರ್ಥೈಸಿಕೊಂಡಿದ್ದೇನೆ. ಹಳೆಯ ಘಟನೆಗಳ ಆಧಾರದ ಮೇಲೆ ಹೊಸದನ್ನು ಎದುರಿಸುವ ಶಕ್ತಿಯೂ ಇದೆ. ನಾನು ಅಧ್ಯಕ್ಷನಾಗಿ ಮುಂದುವರಿಯಬೇಕೆ ಬೇಡವೇ ಎಂಬುದನ್ನು ನಿರ್ಧರಿಸುವುದು ಹೈಕಮಾಂಡ್. ಒಂದೊಮ್ಮೆ ಸಚಿವ ಸ್ಥಾನ ಹಾಗೂ ಕೆಪಿಸಿಸಿ ಸಾರಥ್ಯದ ಪೈಕಿ ಯಾವುದು ನಿನ್ನ ಆಯ್ಕೆ ಎಂದು ವರಿಷ್ಠರು ಕೇಳಿದರೆ, ಖಂಡಿತವಾಗಿಯೂ ಪಕ್ಷಕ್ಕಾಗಿ ದುಡಿಯುವುದು ನನ್ನ ಮೊದಲ ಆದ್ಯತೆ. ಇದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಸ್ಪಷ್ಟೋಕ್ತಿ. ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರದ ಉಪಚುನಾವಣೆ ಪ್ರಚಾರಕ್ಕಾಗಿ ಆಗಮಿಸಿರುವ ಅವರು ‘ವಿಶ್ವವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮತ್ತೊಮ್ಮೆ ಕೆಪಿಸಿಸಿ ಸಾರಥ್ಯ ನಡೆಸುವುದಕ್ಕೆ ಹೈಕಮಾಂಡ್ ಅವಕಾಶ ನೀಡಿದರೆ ಸಚಿವ ಸ್ಥಾನ ತೊರೆಯುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಸಂದರ್ಶನದ ಪೂರ್ಣಪಾಠ ಹೀಗಿದೆ…

ನಿಜ, ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯೇ ನಮ್ಮಲ್ಲಿ ಚರ್ಚೆಯಾಗುತ್ತಿದೆ. ಎರಡು ಉಪಚುನಾವಣೆಯಲ್ಲಿ ಗೆದ್ದರೆ ನಾನು ಮುಂದುವರಿಯುತ್ತೇನೆ. ಇಲ್ಲವಾದರೆ ತೆಗೆದುಬಿಡುತ್ತಾರೆ ಎಂದೆಲ್ಲ ಚರ್ಚೆ ನಡೆಯುತ್ತಿದೆ. ಆದರೆ ಇದು ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರ. ಒಂದು ವೇಳೆ ಸಾಧಕ-ಬಾಧಕಗಳನ್ನು ಯೋಚಿಸಿ ನನಗಿಂತ ಸಮರ್ಥರನ್ನು ಹೈಕಮಾಂಡ್ ಆಯ್ಕೆ ಮಾಡಿದರೆ ಸಂತೋಷ. ಅವರು ತೆಗೆದುಕೊಂಡ ತೀರ್ಮಾನವನ್ನು ನಾನು ಒಪ್ಪಿಕೊಳ್ಳುತ್ತೇನೆ. ಪಕ್ಷದ ಶಿಸ್ತು ಕಾಪಾಡಲು ಹೈಕಮಾಂಡ್ ಆದೇಶವನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಆದರೆ ದೇಶದ ಯಾವುದೇ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಇಷ್ಟು ವರ್ಷಗಳ ಕಾಲ ಪಕ್ಷವನ್ನು ಮುನ್ನಡೆಸಿದ ಉದಾಹರಣೆ ನಮ್ಮಲ್ಲಿ ಇಲ್ಲ.

7 ವರ್ಷಗಳ ಕಾಲ ನಾನು ಕಾಂಗ್ರೆಸ್‌ನ ಕಾಯಕ ನಡೆಸಿದ್ದೇನೆ. ಇಷ್ಟು ದಿನಗಳ ಕಾಲ ನಾನು ಈ ಹುದ್ದೆಯಲ್ಲಿ ಮುಂದುವರಿಯಬೇಕು ಎಂದಾದರೆ ನಮ್ಮ ರಾಷ್ಟ್ರೀಯ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನನ್ನಲ್ಲಿ ಯಾವುದೋ ಒಂದು ಸಾಮರ್ಥ್ಯವನ್ನು ಗುರುತಿಸಿದ್ದಾರೆ ಎಂದೇ ಅರ್ಥವಲ್ಲವೇ ? ಹೀಗಾಗಿ ನೀನು ಮತ್ತೊಮ್ಮೆ ಪಕ್ಷದ ಅಧ್ಯಕ್ಷನಾಗಿ ಮುಂದುವರಿ ಯುತ್ತೀಯಾ ಎಂದು ಪಕ್ಷ ಕೇಳಿದರೆ ನಾನು ಖಂಡಿತ ಒಪ್ಪಿಕೊಳ್ಳುತ್ತೇನೆ.

ಈಗ ಮಾಧ್ಯಮದಲ್ಲಿ, ಪಕ್ಷದಲ್ಲಿ ಹಾಗೂ ಕೆಲ ಪ್ರತಿಪಕ್ಷ ಮುಖಂಡರೂ ಕೂಡಾ 2012-13ರಲ್ಲಿ ಕಾಂಗ್ರೆಸ್ ಸಂಘಟನೆಗೆ ನೀಡಿದ ಆಸ್ಥೆಯನ್ನು ಪರಮೇಶ್ವರ ನೀಡುತ್ತಿಲ್ಲ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಆದರೆ ಆ ರೀತಿ ಟೀಕೆ ಮಾಡುವವರು ಒಂದು ವಿಚಾರ ನೆನಪಿಟ್ಟುಕೊಳ್ಳಬೇಕು. ಆಡಳಿತಾರೂಢ ಪಕ್ಷದ ಅಧ್ಯಕ್ಷನಾಗಿ ಸಂಘಟನೆ ನಡೆಸುವುದಕ್ಕೂ, ಪ್ರತಿಪಕ್ಷದಲ್ಲಿದ್ದಾಗ ಹೋರಾಟ ನಡೆಸುವುದಕ್ಕೂ ತುಂಬಾ ವ್ಯತ್ಯಾಸವಿದೆ. ನಾನೀಗ ಸರಕಾರದ ಒಂದು ಭಾಗವೂ ಹೌದು. ಹೀಗಾಗಿ ಸರಕಾರದ ಕಾರ್ಯಕ್ರಮವನ್ನು ಜನರಿಗೆ ಮುಟ್ಟಿಸುವ ಮೂಲಕ ಪಕ್ಷ ಕಟ್ಟಬೇಕಾಗುತ್ತದೆ. ವ್ಯೂಹ ರಚಿಸುವಾಗ, ಹೋರಾಟ ನಡೆಸುವಾಗ ತುಂಬಾ ಸಂಯಮ ಬೇಕಾಗುತ್ತದೆ. ಈಗ ನಾವು ಗೆದ್ದ 120 ಸ್ಥಾನಗಳನ್ನು ಉಳಿಸಿಕೊಳ್ಳುವುದರ ಜತೆಗೆ ಸೋತ ಕಡೆಗಳಲ್ಲಿ ಗೆಲುವು ಸಾಧಿಸುವ ಬಗ್ಗೆಯೂ ಚಿಂತನೆ ನಡೆಸಬೇಕಾಗುತ್ತದೆ. ಹೀಗಾಗಿ ಪಕ್ಷ ಸಂಘಟನೆ ವಿಚಾರದಲ್ಲಿ ಈ ಬಾರಿ ನನ್ನ ಸ್ಟ್ಯಾಟಜಿ ಬೇರೆಯದೇ ಆಗಿರುತ್ತದೆ.

ಪರಿವರ್ತನೆಯಾಗುವಾಗ ಇದೆಲ್ಲ ಸಹಜ

ಪಕ್ಷದ ನಾಯಕತ್ವವನ್ನು ಪ್ರಶ್ನಿಸಿ ಈಗ ನಮ್ಮಲ್ಲಿ ಕೆಲ ನಾಯಕರು ವರಿಷ್ಠರನ್ನು ಟೀಕಿಸುವುದು ಹಾಗೂ ಪಕ್ಷ ತ್ಯಜಿಸುವುದನ್ನು ಮಾಡುತ್ತಿದ್ದಾರೆ. ಒಂದು ರಾಜಕೀಯ ಪಕ್ಷಕ್ಕೆ ಹೊಸ ನಾಯಕತ್ವ ಹಾಗೂ ಹೊಸ ಚಿಂತನೆ ಹರಿದು ಬರುವಾಗ ಇದೆಲ್ಲ ಸಹಜ. ರಾಷ್ಟ್ರಮಟ್ಟದಲ್ಲಿ ಸೋನಿಯಾ ಗಾಂಧಿ ಅವರು ಕಳೆದ 20 ವರ್ಷದಿಂದ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದರು. ಈಗ ಹೊಸ ನಾಯಕತ್ವ ಬರುತ್ತಿದೆ. ಹೀಗಾಗಿ ಪರಿವರ್ಥನೆಯ ಘಟ್ಟದಲ್ಲಿ ಕೆಲ ಬೆಳವಣಿಗೆಗಳಾಗುತ್ತವೆ. ಸಮಾಧಾನ-ಅಸಮಾಧಾನಗಳನ್ನೆಲ್ಲ ಹಿರಿಯರು ಒಪ್ಪಿಕೊಳ್ಳಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ನಿರ್ನಾಮವಾಯಿತು ಎಂದು ವ್ಯಾಖ್ಯಾನ ಮಾಡುವುದರಲ್ಲಿ ಅರ್ಥವಿಲ್ಲ. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ. ಅಧಿಕಾರಕ್ಕೆ ಬರುವುದು ಹಾಗೂ ಹೋಗುವುದು ಇಲ್ಲಿ ತೀರಾ ಸಹಜ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದೇ ಬರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ರಾಷ್ಟ್ರಮಟ್ಟದಲ್ಲಿ ಆಗುವ ಬದಲಾವಣೆಗಳು ಕರ್ನಾಟಕದ ಮೇಲೆ ಎಂದು ಪರಿಣಾಮ ಬೀರಿಲ್ಲ. ಇದಕ್ಕೆ ಹಲವು ಉದಾಹರಣೆಗಳಿವೆ. ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ಎಸ್.ಎಂ.ಕೃಷ್ಣವರೆಗೆ ಹಲವು ಬದಲಾವಣೆಯಾಗಿದೆ. ನಿಜಲಿಂಗಪ್ಪ ಅವರ ಕಾಲದಲ್ಲಿ ರಾಜ್ಯ ಕಾಂಗ್ರೆಸ್ ಒಡೆದಿದ್ದನ್ನು ಬಿಟ್ಟರೆ ರಾಷ್ಟ್ರಮಟ್ಟದ ಪ್ರತಿಫಲನ ಇಲ್ಲಾಗುವುದಿಲ್ಲ. ನಾವು ಸದಾ ಹೈಕಮಾಂಡ್ ಜತೆಗೆ ನಿಂತಿದ್ದೇವೆ. ದೇಶದ ಇತರೆ ಪ್ರದೇಶ ಕಾಂಗ್ರೆಸ್ ಘಟಕಕ್ಕೆ ಹೋಲಿಸಿದರೆ ಕರ್ನಾಟಕ ಭಿನ್ನವಾಗಿದೆ.

ಕೃಷ್ಣ ನಿರ್ಗಮನದಿಂದ ಶೇಕ್ ಆಗಿಲ್ಲ

ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ತೊರೆದ ಬಳಿಕ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಭಾರಿ ಪ್ರಮಾಣದಲ್ಲಿ ಶೇಕ್ ಆಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು.
ಅವರ ವ್ಯಕ್ತಿತ್ವ ಹಾಗೂ ಅನುಭವವನ್ನು ಕಾಂಗ್ರೆಸ್ ಕಳೆದುಕೊಂಡಿದೆಯೇ ಹೊರತು ಪಕ್ಷಕ್ಕೆ ರಾಜಕೀಯವಾಗಿ ಯಾವುದೇ ಹಾನಿಯಾಗಿಲ್ಲ. ನನಗೆ ಮತ್ತು ಅವರಿಗೆ ಆತ್ಮೀಯ ಹಾಗೂ ವೈಯಕ್ತಿಕ ಸಂಬಂಧ ಇತ್ತು.  ನಿಜ ಹೇಳಬೇಕೆಂದರೆ ರಾಜಕಾರಣದಲ್ಲಿ ನನ್ನನ್ನು ಸೇರಿದಂತೆ ಹಲವರಿಗೆ ಕೃಷ್ಣ ಮೆಂಟರ್. ರಾಜಕಾರಣದಲ್ಲಿ ಅಂಥ ಬೆಂಬಲವೊಂದು ಬೇಕಾಗುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ನಾವುಗಳೇ ಮೆಂಟರ್ ಆಗಿದ್ದೇವೆ. ಹೀಗಾಗಿ ಎಲ್ಲರ ಜತೆ ಸೇರಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದೇವೆ. ಕೃಷ್ಣ ಅವರ ನಿರ್ಗಮನದಿಂದ ಪಕ್ಷಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ.

ದಲಿತರಲ್ಲಿ ಬಿರುಕಿಲ್ಲ

ಶ್ರೀನಿವಾಸ್ ಪ್ರಸಾದ್ ಅವರು ಪಕ್ಷ ತ್ಯಜಿಸಿದ ಕಾರಣಕ್ಕೆ ದಲಿತರಲ್ಲಿ ಬಿರುಕು ಮೂಡಿದೆ ಎಂದು ಅರ್ಥೈಸುವುದರಲ್ಲಿ ಹುರುಳಿಲ್ಲ. ಸ್ವಾತಂತ್ರ್ಯಾ ನಂತರ ಇಡಿ ದೇಶದಲ್ಲಿ ದಲಿತ ವರ್ಗ ಕಾಂಗ್ರೆಸ್ ಜತೆಗೆ ನಿಂತಿದೆ. ಅಂಬೇಡ್ಕರ್ ವಿಚಾರಧಾರೆಯನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ. ಉತ್ತರ ಪ್ರದೇಶದಲ್ಲಿ ಸ್ಥಳೀಯ ದಲಿತ ನಾಯಕತ್ವ ಗಟ್ಟಿಯಾಗಿ ಇಲ್ಲದ ಕಾರಣಕ್ಕಾಗಿ ಅವರು ನಮ್ಮಿಂದ ಕೆಲ ಮಟ್ಟಿಗೆ ದೂರ ಹೋಗಿರಬಹುದು. ಆದರೆ ಕರ್ನಾಟಕದಲ್ಲಿ ಅಂಥ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ. ಬಸವಲಿಂಗಪ್ಪ, ಕೆ.ಎಚ್.ರಂಗನಾಥ್, ಮಲ್ಲಿಕಾರ್ಜುನ ಖರ್ಗೆ, ನಾನು, ಮಹಾದೇವಪ್ಪ ಮೊದಲಾದವರು ಕಾಲಾನುಕ್ರಮವಾಗಿ ಕಾಂಗ್ರಸ್‌ನಲ್ಲಿ ದಲಿತ ಧ್ವನಿಯಾಗಿದ್ದೇವೆ. ಶ್ರೀನಿವಾಸ್ ಪ್ರಸಾದ್ ಅವರು ಪಕ್ಷ ತ್ಯಜಿಸಿದ ಮಾತ್ರಕ್ಕೆ ದಲಿತರು ಕಾಂಗ್ರೆಸ್ ಮೇಲೆ ಇಟ್ಟಿದ್ದ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಅರ್ಥವಲ್ಲ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ ಅವರ ಪ್ರಾಬಲ್ಯವಿತ್ತು. ಆದರೆ ಈಗ ಪ್ರಸಾದ್ ಜಾಗವನ್ನು ನಮ್ಮ ಧ್ರುವನಾರಾಯಣ ತುಂಬುತ್ತಿದ್ದಾರೆ. ಹೀಗಾಗಿ ದಲಿತರಲ್ಲಿ ಯಾವುದೇ ಕಾರಣಕ್ಕೂ ಬಿರುಕಿಲ್ಲ. ಆ ರೀತಿ ವ್ಯಾಖ್ಯಾನ ಮಾಡುವ ಮೂಲಕ ಬಿರುಕು ಮೂಡಿಸಲು ಪ್ರಯತ್ನಿಸುವವರು ಯಶಸ್ವಿಯಾಗುವುದಿಲ್ಲ

ಜಾತಿ ಗಣತಿಗೆ ನಾನು ವಿರೋಧಿಯಲ್ಲ

ನಾನು ಜಾತಿ ಗಣತಿ ವರದಿ ಬಿಡುಗಡೆಗೆ ಅಡ್ಡಿ ಮಾಡುತ್ತಿದ್ದೇನೆ ಎಂದು ಅಪಪ್ರಚಾರ ನಡೆಸಲಾಗುತ್ತಿದೆ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಈಶ್ವರಪ್ಪ ಅವರೂ ಇದನ್ನೇ ಪ್ರಶ್ನಿಸಿದ್ದರು. ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವವರಿಗೆ ನಾನು ಕೇಳ ಬಯಸುತ್ತೇನೆ. ನಾನು ಯಾವ ವೇದಿಕೆಯಲ್ಲಿ ಈ ವಿರೋಧ ವ್ಯಕ್ತಪಡಿಸಿದ್ದೇನೆ ಎಂಬುದನ್ನು ಸಾಬೀತು ಮಾಡಿ. ಸರಕಾರದ ಯೋಜನೆಗಳು ಜನರಿಗೆ ಹೇಗೆ ತಲುಪುತ್ತಿದೆ ಎಂಬುದನ್ನು ವಿಶ್ಲೇಷಿಸುವುದಕ್ಕಾಗಿ ಮತ್ತು ಅದರ ಆಧಾರದ ಮೇಲೆ ಹೊಸ ಯೋಜನೆ ರೂಪಿಸುವುಕ್ಕಾಗಿ ಸರಕಾರ ಜಾತಿ ಸಮೀಕ್ಷೆ ನಡೆಸಿದೆ. ನಾನು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದೇನೆ ಎಂಬುದು ಸಂಪೂರ್ಣ ಸುಳ್ಳು ಎಂದು ಅಭಿಪ್ರಾಯಪಟ್ಟರು.

ಸ್ವಾಭಿಮಾನ ಎಂಬುದನ್ನು ಹೇಗೆ ಅರ್ಥೈಸುತ್ತೀರಿ?

ಶ್ರೀನಿವಾಸ್ ಪ್ರಸಾದ್ ಅವರು ಈ ಚುಣಾವಣೆಯನ್ನು ಸ್ವಾಭಿಮಾನದ ಪ್ರಶ್ನೆ ಎಂದು ಹೇಳುತ್ತಿ ದ್ದಾರೆ. ಆದರೆ ಈ ಸ್ವಾಭಿಮಾನ ಎಂಬುದನ್ನು ಹೇಗೆ ಅರ್ಥೈಸುತ್ತೀರಿ? ಇದು ಅವರ ವೈಯಕ್ತಿಕ ಸ್ವಾಭಿಮಾನವೇ ಅಥವಾ ಸಮುದಾಯದ ಸ್ವಾಭಿಮಾನವೇ ಅಥವಾ ಪಕ್ಷದ ಸ್ವಾಭಿಮಾನವೇ? ಅವರು ಇದೆಲ್ಲವನ್ನೂ ಒಟ್ಟಿಗೆ ಕ್ರೋಢೀಕರಿಸುತ್ತಾರೆಯೇ? ಒಂದು ರಾಷ್ಟ್ರೀಯ ಪಕ್ಷವಾಗಿ ನಾವು ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಸಹಜ ಪ್ರಕ್ರಿಯೆ ಎಂದು ಪರಿಗಣಿಸಿದ್ದೇವೆ. ಯಡಿಯೂರಪ್ಪನವರು ಹೇಳುವಂತೆ ಇದು ಮುಂದಿನ ಚುನಾವಣೆಯ ದಿಕ್ಸೂಚಿ ಎಂಬುದು ಸುಳ್ಳು.

ಪ್ರಸಾದ್ ದೊಡ್ಡತನ ತೋರಿದ್ದರೆ ಚುನಾವಣೆ ತಪ್ಪಿಸಬಹುದಿತ್ತು

ಶ್ರೀನಿವಾಸ್ ಪ್ರಸಾದ್ ಅವರು ಒಂದಿಷ್ಟು ದೊಡ್ಡತನ ತೋರಿದ್ದರೆ ಈ ಚುನಾವಣೆ ತಪ್ಪಿಸಬಹುದಿತ್ತು. ಅವರು ಇದನ್ನು ತೀರಾ ವೈಯಕ್ತಿಕವಾಗಿ ತೆಗೆದುಕೊಂಡರು. ನೀವು ಈ ವಯಸಿನಲ್ಲಿ ಇಂಥ ರಿಸ್‌ಕ್‌ ತೆಗೆದುಕೊಳ್ಳಬೇಡಿ ಎಂದು ಸ್ನೇಹಿತರು ಹಾಗೂ ಆಪ್ತರು ಸಲಹೆ ನೀಡಿದರು. ಆದರೆ ಅವರು ಕೇಳಲಿಲ್ಲ. ಅವರು ಬಿಜೆಪಿ ಸೇರದಂತೆ ಅವೈಡ್ ಮಾಡುವುದಕ್ಕೂ ಅವಕಾಶವಿತ್ತು. ಆದರೆ ಯಾರ ಪ್ರಯತ್ನವೂ ಅವರಿಗೆ ಸಮಾಧಾನ ತಂದಿಲ್ಲವೆಂದು ಕಾಣುತ್ತದೆ.

ರಾಘವೇಂದ್ರ ಭಟ್ /ಕೆ.ಬಿ.ರಮೇಶ ನಾಯಕ
ಮೈಸೂರು

Leave a Reply

Your email address will not be published. Required fields are marked *

fifteen − 4 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top