About Us Advertise with us Be a Reporter E-Paper

ಯಾತ್ರಾ

ಅಚ್ಚರಿ ಎನಿಸುವ ‘ಕುಚಿಂಗ್’ ಕಹಾನಿ..!

ಯಾವ ದೇಶವನ್ನೂ ಪೂರ್ತಿಯಾಗಿ ನೋಡಲು ಆಗುವುದಿಲ್ಲವಂತೆ. ಅಷ್ಟಕ್ಕೂ ನಾನು ಕಳೆದ ೨೫ ವರ್ಷ-ಗಳಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸಿಸುತ್ತಿದ್ದೇನೆ. ಆದರೆ ಈ ಬಡಾವಣೆಯನ್ನೇ ಪೂರ್ತಿಯಾಗಿ ನೋಡಿಲ್ಲ. ಇನ್ನೂ ಬೆಂಗಳೂರಿನಲ್ಲಿ ನೋಡುವ ಅನೇಕ ಸ್ಥಳಗಳಿವೆ. ಅಮೆರಿಕದ ವೈಟ್ ಹೌಸ್ ಮುಂದೆ ನಿಂತು -ಟೊ ತೆಗೆಸಿಕೊಂಡಿದ್ದೇನೆ. ಆದರೆ, ವಿಧಾನಸೌಧದ ಮುಂದೆ ನಿಂತು ತೆಗೆಸಿಕೊಂಡ -ಟೋಗಳಿಲ್ಲ. ಏಕೆಂದರೆ ಅಲ್ಲಿ ಎಂದೂ -ಟೊಕ್ಕೆ ನಿಂತೇ ಇಲ್ಲ. ಪಕ್ಕದ ಮನೆಯನ್ನೇ ನೋಡಿರುವುದಿಲ್ಲ, ಇನ್ನು ಪಕ್ಕದ ದೇಶ ಯಾವ ಲೆಕ್ಕ? ಬೆಂಗಳೂರಿನಿಂದ ಕೇವಲ ಒಂದು ಗಂಟೆಯ ವಿಮಾನ ಪ್ರಯಾಣದ ದೂರ ಅಥವಾ ಹತ್ತಿರದಲ್ಲಿ ಶ್ರೀಲಂಕಾ ರಾಜಧಾನಿ ಕೊಲಂಬೋ ಇದೆ. ಅಷ್ಟೇ ದೂರ ಅಥವಾ ಹತ್ತಿರದಲ್ಲಿ ಗೋವಾ ಇದೆ. ಆದರೆ ಪಕ್ಕದ ರಾಜ್ಯವಾದ ಗೋವಾಕ್ಕೆ, ಪಕ್ಕದ ದೇಶವಾದ ಶ್ರೀಲಂಕಾಕ್ಕಿಂತ ಹೆಚ್ಚು ಜನ (ಕನ್ನಡಿಗರು) ಹೋಗುತ್ತಾರೆ.

ವಿದೇಶ ಯಾತ್ರೆ ಮಾಡಿ, ಎಲ್ಲ ನೋಡಿ, ಮರಳಿದ ನಂತರ ಅಲ್ಲಿನ ಸಾಮಾನ್ಯ ಸಂಗತಿ ಬಗ್ಗೆ ತಿಳಿದಿರುವುದಿಲ್ಲ. ಇತ್ತೀಚೆಗೆ ಇಸ್ರೇಲಿ-ನಲ್ಲಿ ಮೂರು ವರ್ಷ ವಾಸವಿದ್ದ, ಬೆಂಗಳೂರಿನ ಕಂಪ್ಯೂಟರ್ ಎಂಜಿನಿಯರ್‌ರೊಬ್ಬರು ಸಿಕ್ಕಿದ್ದರು. ಅವರಿಗೆ ಇಸ್ರೇಲಿ-ನಲ್ಲಿ ಮನುಷ್ಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬೆಕ್ಕುಗಳಿವೆ ಎಂಬುದು ಗೊತ್ತಿರಲಿಲ್ಲ. ಅಲ್ಲಲ್ಲಿ ಅವರಿಗೆ ಬೆಕ್ಕುಗಳು ಕಣ್ಣಿಗೆ ಬಿದ್ದಿದ್ದವು. ಆದರೆ, ಅವರು ಅದರಲ್ಲಿ ಯಾವ ವಿಶೇಷವಿದೆ ಎಂದು ಸುಮ್ಮನಾ-ಗಿದ್ದಿರಬೇಕು. ‘ಹೌದು? ನನಗೆ ಗೊತ್ತೇ ಇಲ್ಲ. ಮೂರು ವರ್ಷ-ವಿದ್ದರೂ ಈ ವಿಷಯ ನನಗೆ ಗೊತ್ತೇ ಆಗಲಿಲ್ಲ’ ಎಂದು ಅವರು ಅಚ್ಚರಿಯಿಂದ ಹೇಳಿದರು.

ಐಸ್‌ಲ್ಯಾಂಡಿನ ರಾಜಧಾನಿ ರೆಕ್ಯಾವಿಕ್‌ನಲ್ಲಿ ಹದಿನೈದು ದಿನಗಳ ಕಾಲ ಶೂಟಿಂಗ್ ಮುಗಿಸಿ ಬಂದ ಕನ್ನಡದ ನಟರೊಬ್ಬರಿಗೆ, ಆ ದೇಶದಲ್ಲಿ ಜೈಲಿಲ್ಲ, ಸೊಳ್ಳೆಗಳಿಲ್ಲ, ಅಲ್ಲಿ ಹುಟ್ಟಿದವರೆಲ್ಲ ಕನಿಷ್ಠ ತೊಂಬತ್ತು ವರ್ಷ ಬದುಕುತ್ತಾರೆಂಬ ಸಂಗತಿಗಳು ಗೊತ್ತೇ ಆಗಲಿ-ಲ್ಲವಂತೆ. ಅಂದರೆ ಒಂದು ಊರಿನಲ್ಲಿ ಹತ್ತಾರು ವರ್ಷಗಳಿದ್ದರೂ ಅಕ್ಕಪಕ್ಕದವರೇ ಅಪರಿಚಿತರಾಗಿ ಇರುವಾಗ, ಬೇರೆ ದೇಶದಲ್ಲಿ ಒಂದೆರಡು ವಾರ ಇದ್ದಾಕ್ಷಣ, ತಿರುಗಾಡಿದ ಮಾತ್ರಕ್ಕೆ ಎಲ್ಲವೂ ಗೊತ್ತಾಗುವುದಿಲ್ಲ. ಗೊತ್ತಾಗಬೇಕೆಂದಿಲ್ಲ.

ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು ರಿಯೋ ಡಿ ಜನೈರೋಗೆ ಹೋಗಿ ಬಂದಿದ್ದರು. ಯಾವುದೇ ಕಾರ್ಯನಿಮಿತ್ತ ಬೇರೆ ಊರಿಗೆ ಹೋದಾಗ, ಆ ನಗರದಲ್ಲಿ ಒಂದು ದಿನ ವಾಸವಾಗಿದ್ದರು. ಇಡೀ ದಿನ ಹತ್ತಾರು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಬಂದರು. ಆದರೆ ನೋಡಲೇಬೇಕಾದ ಏಸು ಕ್ರಿಸ್ತನ (ಡಿ ಕ್ರೈಸ್ಟ್ ಡಿ ರೀಡಿಮರ್) ಪ್ರತಿಮೆಯನ್ನೇ ನೋಡಿರಲಿಲ್ಲ. ‘ಏನು ಸ್ವಾಮಿ, ಶ್ರವಣಬೆಳಗೊಳಕ್ಕೆ ಹೋಗಿ ಗೊಮ್ಮಟನನ್ನು ನೋಡದೇ ಬಂದಂತಾಯಿತು ನಿಮ್ಮ ಕತೆ!’ ಎಂದು ಹೇಳಿದೆ. ಅವರ ಮುಖ ಪೆಚ್ಚಾಯಿತು.

ಇದು ಕೇವಲ ಅವರೊಬ್ಬರದೇ ಕತೆಯಲ್ಲ. ಬಹಳ ಮಂದಿಯ ಅನುಭವ. ನನ್ನ ಪರಿಚಿತರೊಬ್ಬರು ಕೆಲವು ದಿನಗಳ ಹಿಂದೆ ಜರ್ಮ-ನಿಯ ಬ್ಲ್ಯಾಕ್ -ರೆಸ್ಟ್‌ಗೆ ಹೋಗಿದ್ದರು. ಅಲ್ಲಿ ಮೂರು ದಿನ ತಂಗಿದ್ದರು. ಆದರೆ, ಅದಕ್ಕೆ ಹೊಂದಿಕೊಂಡಿರುವ ಸ್ಟ್ರಾಸ್‌ಬರ್ಗ್-ಗಾಗಲಿ, ಬೇಡನ್ ಬೇಡನ್ ಎಂಬ ಅತಿ ಸುಂದರ ಊರುಗಳಿಗಾಗಲಿ ಹೋಗದೇ ಮರಳಿದ್ದರು.

ಕೆಲವು ಸಲ ಈ ಯಡವಟ್ಟುಗಳಿಗೆ ಟ್ರಾವೆಲ್ ಏಜೆಂಟ್ ಕಾರಣ-ನಾಗಿರುತ್ತಾನೆ. ಮೂಲತಃ ಅವನಿಗೂ ಗೊತ್ತಿರುವುದಿಲ್ಲ. ಪ್ರವಾಸಿಗ-ರಿಗೆ ಸರಿಯಾದ ಮಾಹಿತಿ ಕೊಡುವುದಿಲ್ಲ. ಇಂಥ ಊರಿಗೆ ಇಂಥ ತಾಣಗಳನ್ನೂ ತೋರಿಸಬೇಕು ಎಂಬ ಸಿದ್ಧ ಪ್ರವಾಸಿಪಟ್ಟಿ ಅವನ ಮುಂದಿರುತ್ತದೆ. ಅಷ್ಟನ್ನೇ ತನ್ನ ಗ್ರಾಹಕರಿಗೆ ಹೇಳುತ್ತಾನೆ. ಅದನ್ನು ಆತ ಹಲವು ವರ್ಷಗಳಿಂದ ಹೇಳುತ್ತಾ ಬಂದಿರುವುದರಿಂದ ಅವನಿಗೆ ರೂಢಿಯಾಗಿರುತ್ತದೆ. ಹೀಗಾಗಿ ನಾವು ಪ್ರಮುಖ ಊರಿಗೋ, ನಗರಕ್ಕೋ ಹೋದರೂ ಸುತ್ತಮುತ್ತಲ ಪ್ರಸಿದ್ಧ ಅಥವಾ ಜನಪ್ರಿಯ ತಾಣಗಳನ್ನು ನೋಡದೇ ವಾಪಸ್ ಬರುತ್ತೇವೆ. ನೋಡಬೇಕಾದು-ದನ್ನೇ ನೋಡದೇ ‘ಬರಿಗಣ್ಣ’ಲ್ಲಿ ಬರುತ್ತೇವೆ.

ಅನುಭವಿ ಪ್ರವಾಸಿಗರಿಗೂ ಈ ರೀತಿಯಾಗುವುದುಂಟು. ಕಾರಣ ಯಾವುದೇ ದೇಶಕ್ಕೆ ಮೊದಲ ಬಾರಿಗೆ ಹೋಗುವ ಅನುಭವಿ ಪ್ರವಾಸಿಗರಿಗೂ ಆ ದೇಶ ಅಪರಿಚಿತವಾಗಿರುತ್ತದೆ. ಹೀಗಾಗಿ ಇವೆಲ್ಲ ಸಹಜ. ಹೋಗಿ ಬಂದರೂ ಎಲ್ಲವೂ ಗೊತ್ತಾಗಲೇಬೇಕೆಂದಿಲ್ಲ. ಗೈಡ್‌ಗಳ ಸಹಾಯ ಪಡೆದರೂ ಅವರು ಎಲ್ಲವನ್ನೂ ಹೇಳಿಬಿಡು-ತ್ತಾರೆಂದೇನಿಲ್ಲ. ಅಲ್ಲದೇ ಎಲ್ಲ ವಿಷಯಗಳು ಗೈಡ್‌ಗಳಿಗೂ ಗೊತ್ತಿಲ್ಲದಿರಬಹುದು.

ನಾನು ಮಲೇಶಿಯಾಕ್ಕೆ ಹತ್ತಾರು ಸಲ ಹೋಗಿದ್ದೇನೆ. ಕೇವಲ ಕೌಲಲಂಪುರ ಮಾತ್ರ ಅಲ್ಲ, ಸುತ್ತಮುತ್ತಲಿನ ಹತ್ತಾರು ಊರು-ಗಳನ್ನು ಸಹ ನೋಡಿದ್ದೇನೆ. ಒಮ್ಮೆ ಕುಚಿಂಗ್ ಎಂಬ ಊರಿಗೆ ಸಾಯಂಕಾಲ ಹೋಗಿ, ಬೆಳಗ್ಗೆ ಬಂದಿದ್ದೆ. ಆ ಊರಿನ ಬಗ್ಗೆ ಏನೇನೂ ಗೊತ್ತಾಗಿರಲಿಲ್ಲ. ಆ ಊರಿಗೆ ನಾನೂ ಹೋಗಿದ್ದೆ ಎಂದಷ್ಟೇ ಹೇಳಿಕೊಳ್ಳಬಹುದಿತ್ತು. ಆದರೆ, ಅದಾಗಿ ಒಂದು ವರ್ಷದ ನಂತರ ಮತ್ತೊಮ್ಮೆ ಕುಚಿಂಗ್‌ಗೆ ಹೋಗುವ ಅವಕಾಶ ಬಂದೊದಗಿತ್ತು. ಕುಚಿಂಗ್ ನಗರವನ್ನ ಪ್ರವೇಶಿಸುತ್ತಿದ್ದಂತೆ ಅಲ್ಲಲ್ಲಿ ಬೆಕ್ಕುಗಳ ಪ್ರತಿಮೆಗಳನ್ನು ನಿಲ್ಲಿಸಲಾಗಿತ್ತು. ನಗರದ ಮಧ್ಯಭಾಗದ ವೃತ್ತದಲ್ಲಿ ಹತ್ತಾರು ಅಡಿ ಎತ್ತರದ ಬೆಕ್ಕಿನ ಪ್ರತಿಮೆಗಳು ಗಮನ ಸೆಳೆಯುವಂತಿತ್ತು. ಕೆಲವರು ತಮ್ಮ ಮನೆಯ ಮುಂದೆ ಸಹ ಮಾರ್ಜಾಲಗಳ ಪ್ರತಿಮೆಯನ್ನು ನಿಲ್ಲಿಸಿದ್ದರು.

ಈ ನಗರಕ್ಕೂ, ಬೆಕ್ಕಿಗೂ ಯಾವ ಸಂಬಂಧ?

ಮಲಯ ಭಾಷೆಯಲ್ಲಿ ಕುಚಿಂಗ್ ಅಂದ್ರೆ ಬೆಕ್ಕು ಎಂದರ್ಥ. ಒಂದು ಕಾಲದಲ್ಲಿ ಈ ನಗರವನ್ನು ಆಳಿದ ರಾಜರಿಗೆ ಬೆಕ್ಕುಗಳೆಂದರೆ ಪಂಚ ಪ್ರಾಣವಾಗಿತ್ತಂತೆ. ಅರಮನೆ ತುಂಬೆಲ್ಲ ಬೆಕ್ಕುಗಳನ್ನು ಸಾಕಿಕೊಂಡಿದ್ದ ನಂತೆ. ಅವನಿಗೆ ಬೆಕ್ಕುಗಳ ಬಗೆಗೆ ಅದೆಂಥ ಮೋಹವಿತ್ತೆಂದರೆ, ತನ್ನ ನಗರಿಗೆ ಬೆಕ್ಕಿನ ಹೆಸರನ್ನೇ ಇಟ್ಟನಂತೆ.

ಕುಚಿಂಗ್‌ನಲ್ಲಿ ಬೆಕ್ಕಿನ ಮ್ಯೂಸಿಯಂ ಇದೆ. ಅಲ್ಲಿ ಮಾರ್ಜಾಲಗಳ ಸುಮಾರು ಐದು ಸಾವಿರ ವರ್ಷಗಳ ಇತಿಹಾಸದ ಸಂಪೂರ್ಣ ವಿವರಗಳಿವೆ. ಬೆಕ್ಕಿಗೆ ಸಂಬಂಽಸಿದ ಪುಸ್ತಕ, -ಟೋ, ಸಿನಿಮಾಗಳ ಅಪೂರ್ವ ಸಂಗ್ರಹವಿದೆ. ಬೆಕ್ಕಿನ ಬಗ್ಗೆ ಮಾಡಿದ ಸಂಶೋಧನೆ ಗ್ರಂಥ ಗಳನ್ನು ಇಲ್ಲಿ ಇಡಲಾಗಿದೆ. ಬೆಕ್ಕಿನ ಬಗೆಗಿರುವ ಎಲ್ಲ ಮಾಹಿತಿಯೂ ಇಲ್ಲಿ ಲಭ್ಯ.

ಈ ಮ್ಯೂಸಿಯಂ ಸನಿಹ ಮಿಯಾಂ ಮಿಯಾಂ ಕ್ಯಾಚ್‌ಕೆ- ಎಂಬ ರೆಸ್ಟೋರೆಂಟ್ ಇದೆ. ಇಡೀ ನಗರವನ್ನು ಬೆಕ್ಕನ್ನು ಗಮನ ದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ಬೆಕ್ಕೇ ಸರ್ವಸ್ವ. ಬೆಕ್ಕಿಗೆ ಇರು ವಷ್ಟು ಗೌರವ, ಸ್ಥಾನಮಾನ ಮನುಷ್ಯರಿಗೂ ಇಲ್ಲ. ಮೊದಲ ಸಲ ಈ ನಗರಕ್ಕೆ ಭೇಟಿ ನೀಡಿದಾಗ ಈ ಯಾವ ಸಂಗತಿಗಳೂ ಕಣ್ಣಿಗೆ ಬಿದ್ದಿರಲಿಲ್ಲ. ಕುಚಿಂಗ್‌ನಲ್ಲಿ ಎರಡು ದಿನ ಕಳೆದ ನಂತರ ಬೆಕ್ಕನ್ನೇ ಗಮನದಲ್ಲಿರಿಸಿಕೊಂಡು ಕಟ್ಟಿದ ನಗರವೊಂದರ ದರ್ಶನವಾಯಿತು. ಮೇಲಿಂದ ನೋಡಲು  ಎಲ್ಲ ನಗರಗಳಂತೆ ಕಾಣುವ ಕುಚಿಂಗ್‌ನ ಬೀದಿ ಬೀದಿ ಅಲೆದ ನಂತರ ಹೊಸಲೋಕದ ದರ್ಶನವಾಯಿತು.

ಇಂಥದ್ದೊಂದು ಒಳನೋಟವಿಲ್ಲದೇ ಯಾವ ಊರು, ದೇಶ ವನ್ನು ನೋಡಲಾಗುವುದಿಲ್ಲ  ಹಾಗೂ ನೋಡಲೂಬಾರದು.

Tags

ವಿಶ್ವೇಶ್ವರ್ ಭಟ್

ಇವರ ಊರು ಉತ್ತರ ಕನ್ನಡದ ಕುಮಟಾದ ಮೂರೂರು. ಓದಿದ್ದು ಎಂ.ಎಸ್ಸಿ ಹಾಗೂ ಎಮ್.ಎ. ನಾಲ್ಕು ಚಿನ್ನದ ಪದಕ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ವೃತ್ತಿಯ ಆರಂಭದಲ್ಲಿ ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಆನಂತರ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ ದ ಮಾಜಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ ತನಕ ಬರೆದಿದ್ದು 65 ಪುಸ್ತಕಗಳು. ವಿಜಯ ಕರ್ನಾಟಕದಲ್ಲಿದ್ದಾಗ ಬರೆದಿದ್ದು ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಐವತ್ತಕ್ಕೂ ಹೆಚ್ಚು ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ. ಪ್ರಸ್ತುತ ವಿಶ್ವವಾಣಿಯ ಪ್ರಧಾನ ಸಂಪಾದಕ. ಇವರ ಅಂಕಣಗಳು ‘ನೂರೆಂಟು ವಿಶ್ವ’ ಮತ್ತು ’ಇದೇ ಅಂತರಂಗ ಸುದ್ದಿ’ ಗುರುವಾರ ಮತ್ತು ಭಾನುವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close