About Us Advertise with us Be a Reporter E-Paper

ವಿರಾಮ

ಕುಳಬಾನ – ಈ ಉರುವಲು ಪುರಾತನ

* ಪ್ರಹ್ಲಾದ್ ವಾ ಪತ್ತಾರ ಯಡ್ರಾಮಿ

ಸಗಣಿಯನ್ನು ತಟ್ಟಿ, ಒಣಗಿಸಿ, ಗೂಡು ಮಾಡಿ ಸಂಗ್ರಹಿಸಿದರೆ, ಹಳ್ಳಿಗಳಲ್ಲಿ ಹಬ್ಬ, ಬಾಣಂತನದ ಸಮಯದಲ್ಲಿ ಒದಗುವ ಉತ್ತಮ ಉರುವಲು. ಗ್ಯಾಸ್ ಬಳಕೆಯ ಜನಪ್ರಿಯತೆಯಿಂದ, ಇಂದು ಕ್ರಮೇಣ ಮರೆಯಾಗುತ್ತಿರುವ ಬಡವರ ಇಂಧನ ಇದು.

ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ವಿಭೂತಿಯಾದೆ, ತಿಪ್ಪೆಗೆ ಹಾಕಿದರೆ ಗೊಬ್ಬರವು ನೀನಾದೆ. ಇದು ಸಗಣಿಯ ಬಳಕೆಯ ಬಹುರೂಪಗಳು. ಬಯಲುಸೀಮೆಯ ಹಳ್ಳಿಗಳ ಪ್ರವೇಶ ಮಾಡುತ್ತಲೇ ರಸ್ತೆಯ ಇಕ್ಕೆಲಗಳಲ್ಲಿ ಮೊದಲಿಗೆ ಸ್ವಾಗತ ಕೊರುವವು ತಿಪ್ಪೆಗಳು. ತಿಪ್ಪೆಯ ಅಕ್ಕ ಪಕ್ಕ ಗೋಪುರಾಕಾರದ ಗೂಡುಗಳು. ನುಣುಪಾದ ಮೈ . ಅರೇ ಇವೇನು ಎಂದು ಕುತೂಹಲದಿಂದ ನೋಡಿದರೆ, ಅದೇ ಕುಳಬಾನ. ಎಲ್ಲಾ ಹಳ್ಳಿಗಳಲ್ಲಿ ಕುಳಬಾನ ಗೂಡು ಕಾಣುವದು ಸಹಜ.

ಕುಳ್ಳು ತಯಾರಿ
ಮನೆಯ ದನ ಕರ ಹಾಕಿದ ಹೆಂಡಿ ಎಲ್ಲಾ ಸೇರಿಸಿ ಗುಡ್ಡೆ ಹಾಕುವರು. ಗುಡ್ಡೆ ಹಾಕಿದ ಸಗಣಿಗೆ ನೀರು ಬೆರಸಿ ಹದವಾಗಿ ಕಲಸಿಕೊಳ್ಳಲಾಗುವದು. ಹದಮಾಡಿಕೊಂಡ ಸಗಣಿಯನ್ನ ಉಂಡೆ ಮಾಡಿಕೊಂಡು ತೊಗರಿ ,ಜೋಳ , ಸೆಂಗಾ.. ಹೀಗೆ ಯಾವುದಾದರೂಧಾನ್ಯದ ಬಳಸಿ ಗೋಲಾಕಾರದಲ್ಲಿ ಬೆರಣಿ ತಟ್ಟಲಾಗುವದು. ತಟ್ಟಿದ ಬೆರಣಿಯನ್ನು ಹಳೆ ಗೊಡೆಗೊ, ಕಲ್ಲು ಹಾಸಿನ ನೆಲಕ್ಕೊ ಬಡಿಯುವರು. ಎರಡು ಮೂರು ದಿನದ ನಂತರ, ತಿರುವಿ ಹಾಕಿ ಸೂರ್ಯನ ಬಿಸಿಲಿಗೆ ಹದವಾಗಿ ಒಣಗಿಸಲಾಗುವದು. ಈ ಬೆರಣಿ ತಟ್ಟುವದು ಒಂದು ಕಲೆ. ಈಗಿನ ಹೆಣ್ಣುಮಕ್ಕಳು ಇದರ ಉಸಾಬರಿಗೆ ಹೋಗುವದು ತೀರಾ ಅಪರೂಪ. ಜವಾರಿ ದನ ಕರುಗಳು ಹುಲ್ಲು , ಕಣಕಿ ತಿಂದು ಗಟ್ಟಿ ಸಗಣಿ ಹಾಕುವವು. ಗಟ್ಟಿ ಸಗಣಿಯಿಂದ ಮಾತ್ರ ಬೆರಣಿ ತಟ್ಟಬಹುದು. ತಳಿಯ ಹಸುಗಳ ಸಗಣಿ ಯಿಂದ ಬೆರಣಿ ಮಾಡುವುದು ಕಷ್ಟ.

ದೊಡ್ಡ ಮನೆಗಳಲ್ಲಿ ಹತ್ತಾರು ದನ ಕರ ಇದ್ದಾಗ ನಿತ್ಯ ಹೆಚ್ಚಿಗೆ ಎರಡು ರ್ಮೂ ಹೆಡಗಿ ಹೆಂಡಿ ಸಗ್ರಹವಾಗುವದು. ಇದರಿಂದ ಮೂವತ್ತು ನಲವತ್ತು ಕುಳ್ಳು ಸಿದ್ದವಾಗುವವು. ಒಣಗಿದ ಕುಳ್ಳುಗಳನ್ನ ಒಪ್ಪ ಓರಣವಾಗಿ ಜೋಡಿಸಿ ಗುಡು ಕಟ್ಟುತ್ತಾರೆ. ಇದನ್ನು ಗ್ರಾಮ್ಯವಾಗಿ ಕುಳಬಾನ ಎನ್ನುವರು. ಮನೆ ಹಿತ್ತಲ ಜಾಗದಲ್ಳಿ ನೀರು ನಿಲ್ಲದ ಎತ್ತರದ ಸ್ಥಳದಲ್ಲಿ ವೃತ್ತಾಕಾರ ಒಂದಿಷ್ಟು ಬೆರಣಿ ಜೊಡಿಸಿ ಅದರ ಮೇಲೆ ಬೆರಣಿ ಜೊಡಿಸಿಕೊಂಡು ಹೋಗುತ್ತಾರೆ. ನೋಡಲು ಪುಟ್ಟ ಗೋಪುರ ಆಕಾರ. ಹಾಳ ಮಣ್ಣು ಮತ್ತು ಸಗಣಿ ಮಿಶ್ರಣ ಮಾಡಿಕೊಂಡು ಬೆರಣಿ ಗೂಡಿಗೆ ಗಿಲಾವು ಮಾಡಲಾಗುವದು. ಕೆಲವು ಕಡೆ ಇದಕ್ಕೆ ಸುಣ್ಣ ಕೂಡ ಹಚ್ಚುತ್ತಾರೆ. ಮಳೆ ನೀರು ಬಿದ್ದರೂ ಗೂಉ ಹಸಿ ಆಗುವದಿಲ್ಲ . ಹಾಳಾಗುವದಿಲ್ಲ. ಕುಳಬಾನವನ್ನು ಮಳೆಗಾಲದಲ್ಲಿ ಮತ್ತು ಮನೆಯಲ್ಲಿ ಬಾಣೆಂತನ ಆದಾಗ ಉರುವಲಾಗಿ ಬಳಸುವರು.

ಮನೆಯಲ್ಲಿ ತಯಾರಾಗುವ ಅಡುಗೆಗೆ ಬರಣಿ ಉರುವಲಾಗಿ ಬಳಕೆಯಾಗುವದು. ಒಮ್ಮೆ ಬೆಂಕಿ ತಾಗಿಸಿದರೆ ನಿಧಾನವಾಗಿ ನೀಡುವದು. ಹೆಚ್ಚಿನ ತಾಪಮಾನ ಬೆರಣಿಯಿಂದ ಬಿಡುಗಡೆಯಾಗುವದು. ಅಡುಗೆ ಮಾಡುವಾಗ ಒಲೆಯಲ್ಲಿ ಕಟ್ಟಿಗೆ ಜೊತೆ ಉರುವಲಾಗಿ ಬಳಸುವದರಿಂದ ಉರಿರಹಿತ ಉಷ್ಣವು ಹೆಚ್ಚು ಹೊತ್ತು ಬಿಡುಗಡೆ ಮಾಡುವದು. ಸುಡುವಾಗ ಆರಂಭದಲ್ಲಿ ಒಂದಿಷ್ಟು ಹೊಗೆ ಬಂದರೂ ಇದು ವಾತಾವರಣ ಶುದ್ಧಗೊಳಿಸುವದು ಎನ್ನುವ ನಂಬಿಕೆ. ಧಾರ್ಮಿಕ ಕ್ರಿಯಾ ವಿಧಿ ವಿದಾನಗಳಲ್ಲಿ, ಶವ ಸಂಸ್ಕಾರಕ್ಕಾಗಿ, ಹೋಳಿ ಹುಣ್ಣಿಮೆಯಲ್ಲಿ ಕಾಮ ದಹನ ಸಂದರ್ಭದಲ್ಲಿ ಬೆರಣಿ ಬಳಕೆ ಮಾಡಲಾಗುವದು . ಶುದ್ಧವಾದ ಬೆರಣಿಯನ್ನು ಹೋಮಕುಂಡಕ್ಕೆ ಸಹ ಬಳಸಲಾಗುವದು. ಬಹುತೇಕ ಕರ್ನಾಟಕದ ಹಳ್ಳಿಗಳ ರೈತ ಕುಟುಂಬಗಳಲ್ಲಿ ಬೆರಣಿ ಉರುವಲಾಗಿ ಇಂದಿಗೂ ಅಲ್ಲಲ್ಲಿಬಳಕೆಯಲ್ಲಿದೆ. ಗ್ಯಾಸ್ ಇಂಧನ ಜನಪ್ರಿಯತೆ ಗಳಿಸಿದಂತೆಲ್ಲಾ ಬೆರಣಿ ಉಪಯೋಗ ಕಡಿಮೆಯಾಗುತ್ತಿದೆ.

ಬೆರಣಿ ಆನ್ ಲೈನ್ ಮಾರಾಟ
ಹಿಂದೂಗಳ ಧಾರ್ಮಿಕ ಆಚರಣೆಯಲ್ಲಿ ಹಸುವಿನ ಸಗಣಿಗೆ ಪವಿತ್ರ ಸ್ಥಾನವಿದೆ . ಮಂಗಳಕರ ಶುಭ ಸಂಕೇತ ಎಂದು ಸೂಚಿಸುತ್ತಾರೆ. ದೀಪಾವಳಿ ದಸರಾ, ಯುಗಾದಿಯಂತಹ ದೊಡ್ಡ ಹಬ್ಬಗಳಲ್ಲಿ, ಮದುವೆ, ಶ್ರಾದ್ಧ, ವಿವಿಧ ಧಾರ್ಮಿಕ ವಿಧಿ ವಿಧಾನಗಳಲ್ಲಿ ಸಗಣಿ ಮತ್ತು ಬೆರಣಿ ಬಳಕೆ ಮಾಡಲಾಗುವದು. ಅಂಗಡಿ ಬೆರಣಿ ಸಿಗುವದು ಅಪರೂಪ. ಅದಕ್ಕೆಂದೋ ಏನೊ, ಇತ್ತೀಚೆಗೆ ಆನ್ ಲೈನ್ ನಲ್ಲೂ ಬೆರಣಿ ಮಾರಾಟ ಆರಂಭವಾಗಿದೆ! ಈಗ ಹಳ್ಳಿಯ ರೈತ ಕುಟುಂಬಗಳಲ್ಲಿ ದನ ಕರು ಸಾಕುವದು ಕಡಿಮೆಯಾಗಿ, ಸಗಣಿ ಸಂಗ್ರಹವೂ ಕಡಿಮೆಯಾಗುತ್ತಿದೆ. ಜತೆಗೆ ಸರಕಾರವು ಗ್ಯಾಸ್ ಬಳಸಲು ಪ್ರೋತ್ಸಾಹ ನೀಡುತ್ತಿದೆ. ಹೀಗಾಗಿ ಹಳ್ಳಿಗಳಲ್ಲಿ ಅಲ್ಲೊಂದು ಇಲ್ಲೊಂದು ಕಡೆ ಮಾತ್ರ ಕುಳಬಾನ ನೋಡಲು ಕಾಣ ಸಿಗುತ್ತವೆ.

Tags

Related Articles

Leave a Reply

Your email address will not be published. Required fields are marked *

Language
Close