About Us Advertise with us Be a Reporter E-Paper

ಅಂಕಣಗಳು

 ನೀವು ಕರ್ಣನಾದರೆ ಪದವಿಯ ಕವಚ ಕಿತ್ತು ಬಿಸಾಡಿ!

-ದೇವಿ ಮಹೇಶ್ವರ ಹಂಪಿನಾಯ್ಡು

ನಮ್ಮ ನಾಡಿನಲ್ಲಿ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ರೈತನಿಗಿಂತ, ಮೊನ್ನೆ ಕೊಡಗಿನ ಭಯಾನಕ ಪ್ರವಾಹದ ಸಂತ್ರಸ್ತರಿಗಿಂತಲೂ ಹೆಚ್ಚು ನೋವು, ವೇದನೆ, ಕಣ್ಣೀರು ಯಮಯಾತನೆ ಅನುಭವಿಸುವ ಗತಿ ಸಾಕ್ಷಾತ್ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಬಂದಿದೆ ಎಂದರೆ ಅತಿಶಯೋಕ್ತಿಯಲ್ಲ. ಇವರ ನೋವನ್ನು ತಂದೆ ಎಚ್.ಡಿ. ದೇವೇಗೌಡರು ಬಿಟ್ಟರೆ ಯಾರೂ ಕೇಳುವವರಿಲ್ಲದಾಗಿದೆ. ಚುನಾವಣೆ ಪ್ರಚಾರದಲ್ಲಿ ನೀವುಗಳು ನನ್ನನ್ನು ಗೆಲ್ಲಿಸಿ ಅಧಿಕಾರ ನೀಡದಿದ್ದರೆ ನಾನು ಬದುಕುವುದಿಲ್ಲ ಎಂದು ಕಣ್ಣೀರಿಟ್ಟರೂ ನಮ್ಮ ಪ್ರಜೆಗಳು ಅವರಿಗೆ ರಾಜಾರೋಷವಾಗಿ ಮುಖ್ಯಮಂತ್ರಿಯಾಗುವಷ್ಟು ಮಮತೆಯನ್ನು ಮತಗಳ ಮೂಲಕ ತೋರದೆ ಕುಮಾರಸ್ವಾಮಿಯವರಿಗೆ ವಿಶ್ವಾಸ ದ್ರೋಹ(?) ಬಗೆದರು. ಪಾಪ, ಆದರೂ ಇವರು ಅದನ್ನು ಲೆಕ್ಕಿಸದೆ ತನ್ನ ಪಾಲಿಗೆ ಬಂದಿರುವ ಕೇವಲ ಮೂವತ್ತೇಳು ಸ್ಥಾನಗಳನ್ನು ಪಡೆದುಕೊಂಡೂ ತಮ್ಮ ಪಕ್ಷವನ್ನು ಕಡೆಗಣಿಸಿದ ಮತದಾರನ ಮುಖಕ್ಕೆ ಹೊಡೆದಂತೆ ಮುಖ್ಯಮಂತ್ರಿ ಅಲಂಕರಿಸಿ ತೋರಿಸಿ ಸಾಧನೆ ಮಾಡಿದರು.

ಸಿಎಂ ಅವರೇ ಉಲ್ಲೇಖಿಸುವ ದೈವೀನೀತಿಯಲ್ಲೇ ಹೇಳಬೇಕೆಂದರೆ, ‘ನೋಡಿ ಹಾಲು ಕುಡಿದ ಮಕ್ಕಳೇ ಬದುಕುವುದಿಲ್ಲ, ವಿಷ ಕುಡಿದ ಮಕ್ಕಳು ಬದುಕುತ್ತಾರೆಯೇ?’ ಎಂಬ ಮಾತಿನಂತೆ ನೂರ ಇಪ್ಪತ್ತು ಸ್ಥಾನಗಳನ್ನು ಗಳಿಸಿದ ಶಿಸ್ತಿನ ಬಿಜೆಪಿ ಪಕ್ಷವೇ ಮೂರು ಮುಖ್ಯಮಂತ್ರಿಗಳನ್ನು ಕಂಡಿದೆ. ಹಾಗೆಯೇ ಆರು ಕೋಟಿ ಕನ್ನಡಿಗರ ಮುಲಾಜಿನಲ್ಲಿಲ್ಲದೆ ಕೇವಲ ಪುಣ್ಯಾತ್ಮ ರಾಹುಲ್‌ಗಾಂಧಿಯ ಮುಲಾಜಿನಲ್ಲಿರುವೆ ಎಂದು ಸಂಕಲ್ಪಿಸಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುತ್ತೈದೆಯಾಗಿ ಐದು ವರ್ಷ ಆಡಳಿತ ನಡೆಸಲು ಸಾಧ್ಯವೇ? ಚುಂಚನಗಿರಿಯ ಕಾಲಭೈರವೇಶ್ವರಸ್ವಾಮಿ ಮೆಚ್ಚಿಯಾನೇ? ಇನ್ನು, ‘ಅಪ್ಪ ಕೊಟ್ಟದ್ದು ನಡೆಯೋವರೆಗೂ, ಜನ ಕೊಟ್ಟಿದ್ದು ಕೊನೆಯವರೆಗೂ’ ಎಂಬ ಗಾದೆ ಮಾತನ್ನಾದರೂ ವೇದ್ಯ ಮಾಡಿಕೊಂಡಿದ್ದರೆ ಇಂತಹ ಯಮಯಾತನೆಯಿಂದ ಪಾರಾಗಬಹುದಾದ ಅವಕಾಶವಿತ್ತು. ಇನ್ನೂ ಸರಳವಾಗಿ ಹೇಳಬೇಕೆಂದರೆ ಇಂದು ಕಾಲೇಜು ಮೆಟ್ಟಿಲು ಹತ್ತಲು ಮೂವತ್ತೈದು ಪರ್ಸೆಂಟ್ ಅಂಕಗಳನ್ನು ತೆಗದುಕೊಂಡ ವಿದ್ಯಾರ್ಥಿಯನ್ನು ಯಾವುದೇ ಪ್ರತಿಷ್ಠಿತ ಕಾಲೇಜು ಸಹಾ ಮೂಸಿ ನೋಡದಂತಹ ಪರಿಸ್ಥಿತಿ ಇದೆ. ಹಾಗೆಯೇ ತನ್ನ ಮಗ ಪ್ರಾಥಮಿಕ ತರಗತಿಯಲ್ಲಿ ಶೇ. ಮೂವತ್ತೈದು ಅಂಕ ಗಳಿಸಿ ಉತ್ತೀರ್ಣನಾದರೂ ಯೋಗ್ಯ ಅಪ್ಪ ಆ ಕಂದನನ್ನು ಸುಮ್ಮನೆ ಬಿಡದೆ ಸರಿಯಾಗಿ ಓದುವಂತೆ ದಂಡಿಸುತ್ತಾನೆ. ಅಷ್ಟರಮಟ್ಟಿನ ನೈತಿಕತೆ, ಬದ್ಧತೆ ಆ ತಂದೆಗೆ ಇರುತ್ತದೆ. ಇಂತಹದರಲ್ಲಿ ಅಖಂಡ ಕರ್ನಾಟಕದಲ್ಲಿ ಬರಿಯ ಸೀಮಿತ ಕ್ಷೇತ್ರಗಳಲ್ಲಿ ಮೂವತ್ತೇಳು ಸ್ಥಾನಗಳನ್ನು ಪಡೆದು ಉನ್ನತ ಪದವಿಯಲ್ಲಿ ಕೂರುವ ದುಸ್ಸಾಹಸ ಮಾಡುವುದು ಸಾಮಾನ್ಯನಿಂದ ಸಾಧ್ಯವಿಲ್ಲ. ಈ ವಿಚಾರದಲ್ಲೂ ಕುಮಾರಸ್ವಾಮಿಯವರ ನೋವು ಅರ್ಥವಾಗುತ್ತದೆ.

ಸಾಮಾನ್ಯ ಮಾನಸ್ಥನಿಗೆ ಯಾರಾದರೂ ಒಂದು ಬಾರಿ ನೋಯಿಸಿದರೆ ಅವನ ಮುಖವನ್ನಿರಲಿ, ಆತನ ನೆರಳನ್ನೂ ನೋಡಲು ನಿರಾಕರಿಸುವ ಮಹಾಸ್ವಾಮಿಗಳಿರುತ್ತಾರೆ. ತಮ್ಮನ್ನು, ತಮ್ಮ ತಂದೆಯನ್ನು ಮನಸ್ಸಿಗೆ ಬಂದಂತೆ ನಿಂದನೆ ಮಾಡಿದ ಮಂದಿಯೊಡನೆ ಒಂದೇ ತಟ್ಟೆಯಲ್ಲಿ ಉಣ್ಣುವುದಿದೆಯಲ್ಲಾ ಅದಕ್ಕಿಂತ ಯಾತನಾದಾಯಕ ದುರ್ಗತಿ ಮತ್ತೊಂದಿಲ್ಲ. ಇಲ್ಲೂ ಕುಮಾರಸ್ವಾಮಿಯವರ ಸಹನೆ ನೋವು ಏನೆಂಬುದು ಅನುಭವಿಸಿದವರಿಗೇ ಗೊತ್ತು. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರದು ಎಂಬ ಮಾತಿನಂತೆ ಅಡಿಕೆ ಇಟ್ಟುಕೊಂಡು ಆನೆ ಮೇಲೆ ಕೂರುವುದು ಎಷ್ಟು ಅವಮಾನಕರ ಎಂಬುದು ಬೇರೆಯವರಿಗೇನು ಗೊತ್ತು?

ಕಪ್ಪೆಯೊಂದು ಘೇಂಡಾಮೃಗಕ್ಕೆ ಸವಾಲು ಎಸೆದಂತೆ, ದೇವೇಗೌಡರಿಗೇ ಸವಾಲು ಎಸೆದು ತನ್ನ ತಲೆಯ ಯಾವುದೋ ಕುರಿಯ ತಲೆಯನ್ನು ಬಲಿಕೊಟ್ಟಂತೆ ಚಾಮರಾಜಪೇಟೆಯಲ್ಲಿ ಗೆದ್ದುಬಂದ ಜಮೀರನ ಜತೆಜತೆಯಲ್ಲೇ ಜುಗಲ್‌ಬಂದಿ ನಡೆಸುವ ಅನಿವಾರ್ಯತೆಗೆ ಒಳಗಾಗುವುದೇನು ಸುಮ್ಮನೆಯೇ? ಅಲ್ಲದೆ ಚುನಾವಣಾ ಪ್ರಚಾರದ ದಿನದಿಂದಲೂ ಸಾಮಾಜಿಕ ತಾಣಗಳಲ್ಲಿ ಅವರ ತೇಜೋವಧೆ ನಡೆಯುತ್ತಲೇ ಇದೆ. ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಗೇಲಿ, ಅವಹೇಳನಗಳು ಟ್ರೋಲ್‌ಗಳು ಯಥೇಚ್ಛವಾಗಿ ನಡೆದರೂ ಅದನ್ನೆಲ್ಲಾ ಎಡಗಾಲಲ್ಲಿ ಒದ್ದು ತನ್ನ, ತನ್ನ ಕುಟುಂಬದವರ ಇಚ್ಛೆಯಂತೆ ನಡೆದುಕೊಳ್ಳುವುದು ಸವಾಲಿನ ವಿಚಾರವೇ ಆಗಿದೆ.

ಈಗ ನೋಡಿ ತಾನು ಕರ್ಣ, ವಿಷಕಂಠ ಎಂದು ಸಭೆಯಲ್ಲಿ ಗೋಳಾಡುತ್ತಿರುವುದನ್ನು ನೋಡಿದರೆ ಚಕ್ರವ್ಯೂವೆಂಬ ಸಮ್ಮಿಶ್ರ ಸರಕಾರದಲ್ಲಿ ಅರ್ಜುನನಂತಹ ತಂದೆ ಇದ್ದರೂ ಅಭಿಮನ್ಯುವಿನಂತೆ ಹೋರಾಡಬೇಕಾದ ಅನಿವಾರ್ಯತೆ ಯಾವ ಪಾಪಿ ರಾಜಕಾರಣಿಗೂ ಬೇಡ. ಆತ್ಮಸಾಕ್ಷಿಗೆ ಆತ್ಮಗೌರವಕ್ಕೆ ವಿರುದ್ಧವಾದ ನಡೆಗಳು ಬದುಕಿನ ಭೂತಕಾಲದಲ್ಲಿ ವಿಷದಂತೆ ಉಳಿದಾಗ ತಾನು ವಿಷಕಂಠನೆಂದು ಹೇಳಿಕೊಳ್ಳುವುದು ಅನರ್ಥ, ಅಪಹಾಸ್ಯಕ್ಕೀಡಾಗುತ್ತದೆ. ಯಾವನಿಗೆ ಬೇಕು ಇಂತಹ ತಾಪತ್ರಯಗಳು, ಯಾವ ಪುರುಷಾರ್ಥಕ್ಕಾಗಿ ಬೇಕು ಈ ತೊಳಲಾಟಗಳು?

ಕುಮಾರಸ್ವಾಮಿಯವರೇನಾದರೂ ಯಾವುದೋ ನ್ಯಾಯಾಲಯದ ಶಿಕ್ಷೆಗೆ ಒಳಗಾಗಿದ್ದಾರೆಯೇ? ಪಾಪ, ಅವರೇನು ಕರ್ಮ ಮಾಡಿದ್ದರು ಇಂತಹ ಪರಿಸ್ಥಿತಿಯನ್ನು ಯಾರಿಗೇನು ದ್ರೋಹ ಬಗೆದಿದ್ದರು ಇಂತಹ ಯಾತನೆಗಳನ್ನು ಅನುಭವಿಸಲು? ಯಾವ ಶಾಪ ಇವರನ್ನು ಹೀಗೆ ನಡೆಸುತ್ತಿದೆ. ಇವರೇನು ಸರಕಾರಿ ಗುಮಾಸ್ತರೇ, ಅಯ್ಯೋ ಅಮಾನತು ಮಾಡುತ್ತಾರೆ, ವರ್ಗಾವಣೆ ಮಾಡುತ್ತಾರೆ, ವೇತನಕ್ಕೆ ಕತ್ತರಿ ಹಾಕುತ್ತಾರೆ ಎಂದು ಭಯಬೀಳಲು. ಇವರು ನಿಜವಾದ ಕರ್ಣ ಎನಿಸಿಕೊಳ್ಳುವುದು ಹೆಣಭಾರವಾಗಿರುವ ಮುಖ್ಯಮಂತ್ರಿ ಪದವಿಯೆಂಬ ಕವಚವನ್ನು ಕಿತ್ತು ರಾಜೀನಾಮೆ ಬಿಸಾಡಿ ಬರುವುದರಲ್ಲಿದೆ.

ರಾಜಕೀಯವೇನು ಜೀವಿತಾವಧಿಯ ದೊಡ್ಡ ಗುರಿಯಲ್ಲ, ಸಾಧನೆಯೂ ಅಲ್ಲ. ಬದುಕಿನಲ್ಲಿ ರಾಜಕಾರಣ ಎಂಬುದು ಒಂದು ಅವಕಾಶ. ಆದರೆ ಬದುಕೇ ಎಂದುಕೊಂಡರೆ ಮೂರ್ಖತನ. ರಾಜಕೀಯ ಮಾಡದೇ ಡಾ.ವೀರೇಂದ್ರ ಹೆಗ್ಗಡೆಯವರು, ಡಾ. ರಾಜ್‌ಕುಮಾರ್‌ರವರು, ಸರ್ ಎಂ. ವಿಶ್ವೇಶ್ವರಯ್ಯ ಅವರಂತಹ ಅನೇಕರು ಜಗತ್ಪ್ರಸಿದ್ಧಿ ಪಡೆದಿದ್ದಾರೆ. ರಾಜಕೀಯ ಮಾಡಿಯೂ ಮಹಾನುಭಾವರೆನಿಸಿದ ಸರ್ದಾರ್ ವಲ್ಲಭಬಾಯ್ ಪಟೇಲರು, ಲಾಲ್‌ಬಹಾದ್ದೂರ್ ಶಾಸ್ತ್ರಿ, ಅಟಲ್‌ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ ನಂತವರು ಕೆಸರಿನ ಕಮಲವಾಗಿದ್ದಾರೆ. ಆದರೆ ಇಂದಿನ ಜಾತಿಕಾರಣ, ಧರ್ಮಕಾರಣ, ಅಹಂಕಾರಣ, ಶೋಕಿಕಾರಣಗಳ ಸಮ್ಮಿಲನಗಳ ರಾಜಕಾರಣವೆಂಬ ಕೆಸರಿನಲ್ಲಿ ಹೊರಳಾಡಿ ಗೋಳಾಡಿ ನಗೆಪಾಟಲಿಗೆ ಕಾರಣವಾಗುವುದಕ್ಕಿಂತ ನೆಮ್ಮದಿಯಾಗಿ ಮನೆಯಲ್ಲಿ ಕೂರುವುದರಲ್ಲಿ ಖಂಡಿತಾ ಸಾರ್ಥಕತೆ ಇದೆ.

ದೇಶದ ಎಲ್ಲಾ ಸಮಸ್ಯೆಗಳಿಗೂ, ಅನಿಷ್ಟಗಳಿಗೂ ದರಿದ್ರಗಳಿಗೂ ರಾಜಕೀಯವೇ ಮೂಲ ಎಂಬಂತಾಗಿದೆ. ಭ್ರಷ್ಟಾಚಾರ, ಭಯೋತ್ಪಾದನೆ, ಕೋಮುವಾದ, ಮತಾಂತರ, ಆಧುನಿಕ ಬುದ್ದಿಜೀವಿಗಳು, ಪ್ರಗತಿಪರರೆಂಬ ಅಡ್ಡಕಸುಬಿಗಳು, ವೋಟ್‌ಬ್ಯಾಂಕ್ ಓಲೈಕೆ, ಅಹಿಂದ ಇವೆಲ್ಲವೂ ಇದರ ಅಸಹ್ಯ ತ್ಯಾಜ್ಯಗಳಾಗಿ ರೂಪ ಪಡೆದು ನಾರುತ್ತಿವೆ. ಇದರಿಂದಾಗಿ ಸಮಾಜ ಇಂದು ಸಂಪೂರ್ಣ ಬದಲಾಗುತ್ತಿದೆ. ರಾಜಕಾರಣಿಗಳನ್ನು ಗೌರವದಿಂದ ಕಾಣುವುದು ಪ್ರಜ್ಞಾವಂತರಲ್ಲಿ ನಶಿಸಿಹೋಗಿದೆ. ಒಬ್ಬ ಸೈನಿಕ ಇಬ್ಬರು ಭಯೋತ್ಪಾದಕರನ್ನು ಬಲಿಹಾಕಿದರೆ ಸಾಮಾಜಿಕ ತಾಣದಲ್ಲಿ ಅಭಿಮಾನದ ಕಹಳೆ ಮೊಳಗುತ್ತದೆ. ಅದೇ ಸೈನಿಕ ವೀರಮರಣ ಕೂಡಲೇ ಕಂಬನಿ ಹರಿಯುತ್ತದೆ. ಮೊನ್ನೆ ಹಿಮದಾಸ್ ರಾಷ್ಟ್ರಗೀತೆಯ ಅಭಿಮಾನಕ್ಕೆ ಕಣ್ಣೀರಿಟ್ಟಿದ್ದನ್ನು ದೇಶಪ್ರೇಮದ ಮಹಾಸಂಕೇತವಾಗಿ ಆರಾಧಿಸಿದ್ದಾರೆ. ಕೆರೆ ತುಂಬಿಸಿ ಬಾಗಿನ ಸಲ್ಲಿಸಿದ ಯಶ್ ರಂತಹ ಚಿತ್ರನಟರನ್ನು ನಮ್ಮ ಕನ್ನಡಿಗರು ನಿಜವಾದ ಹೀರೋಗಳಂತೆ ಪ್ರೀತಿಸುತ್ತಾರೆ. ಇಂತಹ ಸುಶಿಕ್ಷಿತ ಸಮಾಜ ವಿಸ್ತಾರವಾದಷ್ಟೂ ದೇಶಾಭಿಮಾನ, ಭಾಷಾಭಿಮಾನ ಬಲಗೊಂಡು ಪ್ರಾಮಾಣಿಕ ಸಮಾಜ ನಿರ್ಮಾಣವಾಗಿ ಹಣ, ಹೆಂಡ, ಜಾತಿ, ಧರ್ಮಗಳನ್ನು ನೋಡಿ ಮತ ಹಾಕುವವರ ಸಂಖ್ಯೆ ಇಳಿಮುಖವಾಗುವುದೇ ಹೊರತು ಇದನ್ನು ನಂಬಿಕೊಂಡು ಚುನಾವಣೆ ನಡೆಸುವವನಿಗೆ ಉಳಿಗಾಲವಿಲ್ಲವೆಂಬುದು ಸ್ಪಷ್ಟ.

ಚದುರಂಗದಾಟದಲ್ಲಿ ಕೆಟ್ಟ ಅನುಭವವನ್ನು ಅನುಭವಿಸಿ ವೈಯಕ್ತಿಕವಾಗಿ ಬಳಲಿಹೋಗಿದ್ದ ಚಿತ್ರನಟ ಅಂಬರೀಷ್ ಅವರು ಏಕಾಏಕಿ ರಾಜಕೀಯ ಸನ್ಯಾಸತ್ವವನ್ನು ಪಡೆದು ಆರೋಗ್ಯವನ್ನು ಕಾಪಾಡಿಕೊಳ್ಳುವುದರತ್ತ ಗಮನ ಹರಿಸಿದಂತೆ, ಕುಮಾರಸ್ವಾಮಿಯವರೂ ಮೊದಲು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರತ್ತ ಯೋಚಿಸಲಿ. ತುಂಬು ಸಂಸಾರ, ಹೆಂಡತಿ -ಮಕ್ಕಳು, ಅಭಿಮಾನಿಗಳು ಅವರಿಗಿದ್ದಾರೆ. ನೊಂದವರಿಗೆ ಸಹಾಯ ಮಾಡುವ ಮನಸ್ಸು, ಸಮಾಜಕ್ಕೆ ಮಿಡಿಯುವ ಕನಸು ಅವರಿಗಿದೆ. ಅತಿಯಾದರೆ ಅಮೃತವೂ ವಿಷವಾಗುವುದೆಂಬ ತಾತ್ವಿಕತೆಯನ್ನು ಸಿಎಂ ಅರ್ಥೈಸಿಕೊಳ್ಳಲಿ.

Tags

Related Articles

Leave a Reply

Your email address will not be published. Required fields are marked *

Language
Close