About Us Advertise with us Be a Reporter E-Paper

ಅಂಕಣಗಳು

ಹದ್ದುಮೀರಿದ ಮಾತಿನಿಂದ ಹುದ್ದೆಯ ಘನತೆಗೆ ಕುಂದು

ನನ್ನ ಕೈಯಲ್ಲೇ ಸರಕಾರ ಇದೆ, ನಾಳೆಯೇ ಏನು ಬೇಕಾದ್ರೂ ಮಾಡಬಹುದು ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯ ಗುದ್ದಾಟಕ್ಕೆ ಗುರುವಾರ ಹೊಸ ಮುನ್ನುಡಿ ಬರೆದಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದ ಜನರನ್ನು ದಂಗೆ ಏಳಿಸುತ್ತೇನೆ ಎಂದಿದ್ದಾರೆ. ಇದೇ ಮಾತಿಗೆ ಸಿಡಿಮಿಡಿಗೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂಥ ಬೆದರಿಕೆಗಳನ್ನೆಲ್ಲ ಬಿಟ್ಟುಬಿಡಿ, ಇದಕ್ಕೆಲ್ಲ ಬಗ್ಗುವುದಿಲ್ಲ ಎಂದು ಮಾರುತ್ತರ ನೀಡಿದ್ದಾರೆ.

ರಾಜಕೀಯವಾಗಿ ಇವರು ಏನೇ ಮಾಡಿ ಅವರ ಮಾತುಗಳನ್ನು ನಂಬಿ ದಂಗೆ ಏಳುವಷ್ಟು ದಡ್ಡರಲ್ಲ ಕರ್ನಾಟಕದ ಜನ. ಈಗಿನ ಎಲ್ಲ ಪಕ್ಷಗಳ ನಾಯಕರು ಗಲಾಟೆ ಮಾಡಿಸುವಷ್ಟು ದೊಡ್ಡವರೆ ಹೊರತು, ದಂಗೆ ಏಳಿಸುವಷ್ಟು ಶಕ್ತರಲ್ಲ. ಜನ ದಂಗೆ ಏಳಬೇಕಾದರೆ ಬೌದ್ಧಿಕ ನಾಯಕರ ಆಣತಿ ಬೇಕೇ ಹೊರತು ರಾಜಕೀಯ ನಾಯಕರ ಚಿತಾವಣಿಯಲ್ಲ. ಇದರ ಅರಿವು ಕುಮಾರಸ್ವಾಮಿಗೆ ಇದ್ದಂತೆ ಕಾಣುತ್ತಿಲ್ಲ. ಅದೂ ಅಲ್ಲದೆ ಒಬ್ಬ ವ್ಯಕ್ತಿಯ ಮಾತಿಗೆ ದಂಗೆ ಏಳುವ ಕಾಲ ಜಯಪ್ರಕಾಶ್ ನಾರಾಯಣರೊಂದಿಗೆ ಮುಗಿಯಿತು. ಆಗಲೂ ಕೂಡಾ ಜನ ಪರವಾಗಿ ಒಂದಾಗುತ್ತಿದ್ದರು. ಸತ್ಯಕ್ಕಾಗಿ ದಂಗೆ ಏಳುತ್ತಿದ್ದರು. ಅಂಥ ಸಾಧ್ಯತೆಗಳನ್ನು ನಾವು ಈಗಿನ ನಾಯಕರಿಂದ ಊಹಿಸಲೂ ಸಾಧ್ಯವಿಲ್ಲ.

ಮುಖ್ಯಮಂತ್ರಿಯಾಗಿ ಶಾಂತಿ ಮತ್ತು ಸಮಾಧಾನದ ಮಾತನಾಡಿಬೇಕಿದ್ದ ಕುಮಾರಸ್ವಾಮಿ ದಂಗೆ ಏಳಿಸುತ್ತೇನೆ ಎನ್ನುವುದು ಅವರ ಹುದ್ದೆಗೆ ಘನತೆ ತರುವುದಿಲ್ಲ. ತಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ರಾಜಕೀಯ ಎಳೆಯ ಮೇಲೆ ಪಕ್ಷದ ಹಿರಿಯರನ್ನೆಲ್ಲ ಬದಿಗೊತ್ತಿ ಮುಖ್ಯಮಂತ್ರಿಯಾದವರಾಗಿದ್ದರಿಂದ ಅವರಿಗೆ ರಾಜಕೀಯದ ಎಲ್ಲ ಪಟ್ಟುಗಳೂ ಕರಗತವಾದಂತಿಲ್ಲ. ನನ್ನ ಇಪ್ಪತ್ತು ತಿಂಗಳ ಆಡಳಿತ ನೋಡಿ ಅಧಿಕಾರ ಕೊಡಿ ಮನವಿ ಮಾಡಿದ್ದರು. ಅಧಿಕಾರ ನೇರವಾಗಿ ಸಿಗದಿದ್ದರೂ ಹ್ಯಾಗೋ ಮುಖ್ಯಮಂತ್ರಿಯಾದರು. ಆದರೆ ‘ಇಪ್ಪತ್ತು ತಿಂಗಳ ಆಡಳಿತ’ ಕಾಣುತ್ತಿಲ್ಲ. ಅದಕ್ಕೆ ಆಗಿನ ರಾಜಕೀಯ ಸನ್ನಿವೇಶವೂ ಹಾಗೇ ಇತ್ತು.

ಪ್ರತಿಪಕ್ಷದಲ್ಲಿ ಕುಳಿತಿದ್ದ ಕಾಂಗ್ರೆಸ್ ನಾಯಕರು ಮಾತನಾಡುತ್ತಿರಲಿಲ್ಲ. ಬಿಎಸ್‌ವೈ ಅಧಿಕಾರದ ಭಾಗವಾಗಿದ್ದರು. ಹಾಗಾಗಿ ಮಾಡಿದ್ದೆಲ್ಲವೂ ಚಂದವಾಗಿಯೇ ಕಂಡಿತ್ತು. ಈಗ ಅಧಿಕಾರ ಉಳಿಸಿಕೊಳ್ಳಲು ಹೆಣಗುತ್ತ ರಾಜಕೀಯ ಕಿತ್ತಾಟದಲ್ಲೇ ದಿನಕಳೆಯುತ್ತಿದ್ದಾರೆ. ಎನ್ನುವುದು ಎಲ್ಲರಿಗೂ ಗೊತ್ತಾಗುತ್ತಿದೆ. ಇವರ ಮಾತಿನ ಕಾವು ಆರುವ ಮುನ್ನವೇ ಬೆಂಗಳೂರಿನ ಡಾಲರ್ಸ್ ಕಾಲೋನಿಯ ಬಿಎಸ್‌ವೈ ಮುತ್ತಿಗೆ ಹಾಕಲು ಕೆಲವು ಕಾರ್ಯಕರ್ತರು ಬಂದಿದ್ದರು. ಅವರನ್ನು ಕಾರ್ಯಕರ್ತರು ಎಂದರೇ ಹೊರತು ಯಾರೂ ಕೂಡಾ ‘ಜನಸಮುದಾಯದ ದಂಗೆ’ ಎಂದು ಕರೆಯಲಿಲ್ಲ.

ಹಠ ಮತ್ತು ಸಿಟ್ಟಿಗೆ ಯಡಿಯೂರಪ್ಪನವರಿಗೆ ಕರ್ನಾಟಕ ರಾಜಕಾರಣದಲ್ಲಿ ಪರ್ಯಾಯವೇ ಇಲ್ಲ. ಆದ್ದರಿಂದಲೇ ಅವರು ಮುಖ್ಯಮಂತ್ರಿ ಹೇಳಿಕೆಗೆ ತಕ್ಷಣ ಪ್ರತಿಕ್ರಿಯಿಸಿ, ನಿಮಗೆ ರಾಜ್ಯದಲ್ಲಿ ಅಧಿಕಾರ ಇರಬಹುದು, ಕೇಂದ್ರದಲ್ಲಿ ನಮ್ಮ ಅಧಿಕಾರ ಇದೆ. ನೀವು ಏನು ಮಾಡಿದರು, ಅದಕ್ಕೆ ಪ್ರತಿಯಾಗಿ ಏನು ಮಾಡಬೇಕು ಎಂಬುದು ನಮಗೂ ಗೊತ್ತಿದೆ ಎಂದು ಮಾರುತ್ತರ ಇವರಿಬ್ಬರ ವಾಗ್ವಾದ ಬೇರೆಯದೇ ಹಂತ ತಲುಪುವ ಸೂಚನೆಗಳಿವೆ. ಯಾರೇ ಆಗಲಿ ಹದ್ದುಮೀರಿ ಮಾತನಾಡಬಾರದು ಹಾಗಾದರೆ ಹುದ್ದೆಯ ಘನತೆಗೆ ಕುಂದು ಬರುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close