ವಿಶ್ವವಾಣಿ

ಮಣ್ಣುಪಾಲಾಗದಿರಲಿ ಜನಾಶಯಗಳು

ಕರ್ನಾಟಕದ ರಾಜಕೀಯ ಮೇಲಾಟಗಳು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಅದು ದಿನದಿನಕ್ಕೆ ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಿದ್ದು, ಯಾವ ಹಂತಕ್ಕೆ ಬಂದು ನಿಲ್ಲುತ್ತದೆ ಎಂದು ಊಹಿಸಲಾಗುವುದಿಲ್ಲ. ಆದರೆ ಇಂಥ ಗೊಂದಲದ ನಡುವೆಯೇ ಅತಿವೃಷ್ಟಿಯಿಂದ ಆಗಿರುವ ಹಾನಿಯನ್ನು ಸಮೀಕ್ಷೆ ಮಾಡಲು ಕೂಡಲೇ ಕೇಂದ್ರದ ಎರಡು ತಂಡ ಕಳುಹಿಸಲು ಪ್ರಧಾನಿ ಭರವಸೆ ನೀಡಿರುವುದು ಸ್ವಾಗತಾರ್ಹ; ತಮ್ಮನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ನಿಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅತಿವೃಷ್ಟಿ ಹಾಗೂ ಒಳನಾಡಿನಲ್ಲಿ ಬರ ಪರಿಸ್ಥಿತಿ ತಲೆದೋರಿರುವ ಬಗ್ಗೆ ಮನವರಿಕೆ ಮಾಡಿ, 2000 ಕೋಟಿ ಪ್ಯಾಕೇಜ್ ಕೋರಿದ್ದಕ್ಕೆ ಪ್ರಧಾನಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿಗೆ ಇದು ಸ್ವಾಗತಾರ್ಹ ಬೆಳವಣಿಗೆ. ಕೇಂದ್ರದ ತಂಡ ರಾಜ್ಯಕ್ಕೆ ಬಂದರೆ ಅವರನ್ನು ಸ್ವಾಗತಿಸಿ, ವಾಸ್ತವವನ್ನು ವಿವರಿಸಲು ನಮ್ಮ ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಸನ್ನದ್ಧರಾಗಬೇಕು. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರಾಜ್ಯದಲ್ಲಿ ಆಗಿರುವ ಸಮಸ್ಯೆಯನ್ನು ಬಿಸಿಡಿ ಹೇಳಬೇಕು. ರಾಜಕಾರಣಿಗಳು ತಮ್ಮ ರಾಜಕೀಯ ಮಾಡುತ್ತ, ಅಧಿಕಾರಿಗಳು ಏನೋ ಒಂದು ಹೇಳಿ ಕಳಿಸಿದರೆ ಇವರೆಲ್ಲರೂ ರಾಜ್ಯದ ಜನತೆಗೆ ಮಾಡಿದ ದ್ರೋಹವಾಗುತ್ತದೆ. ಜನರ ನೋವಿನ ಯಾರೂ ಪಗಡೆಯಾಡದೆ ಸತ್ಯವನ್ನು ಮನವರಿಕೆ ಮಾಡಿಕೊಡಬೇಕು. ಇಲ್ಲದಿದ್ದರೆ ಕೇಂದ್ರದಿಂದ ಸಿಗಬಹುದಾದ ಆರ್ಥಿಕ ನೆರವು ನಮ್ಮ ಕೈ ತಪ್ಪುವ ಎಲ್ಲ ಸಾಧ್ಯತೆಗಳೂ ಇವೆ.

ಕಳೆದ ಆಗಸ್‌ಟ್ ಎರಡನೇ ವಾರದಲ್ಲಿ ಸುರಿದ ಭಾರಿ ಮಳೆಗೆ ಅಪಾರ ನಷ್ಟ ಸಂಭವಿಸಿದ್ದು, ಒಟ್ಟು 3,705.87 ಕೋಟಿ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಪುನರ್ವಸತಿ ಮತ್ತು ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕೊಡಗು ಮತ್ತಿತರ ಜಿಲ್ಲೆಗಳಿಗೆ 2,000 ಕೋಟಿ ರುಪಾಯಿಗಳ ಪ್ಯಾಕೇಜ್ ಘೋಷಿಸಿ ಕೂಡಲೇ ಅನುದಾನ ಬಿಡುಗಡೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ.

ಅಂತೆಯೇ ಕರ್ನಾಟಕದ ಒಳನಾಡಿನಲ್ಲಿ 17 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ಇಂಥ ವಿಚಾರಗಳಲ್ಲಿ ರಾಜಕೀಯ ಮಾಡಡುವುದು ಸೂಕ್ತವಲ್ಲ. ನಿಯೋಗದಲ್ಲಿ ಎಲ್ಲ ಪಕ್ಷದ ಸದಸ್ಯರನ್ನೂ ಆಹ್ವಾನಿಸಲಾಗಿತ್ತು ಬಿಜೆಪಿ ನಾಯಕರು ಬರಲಿಲ್ಲ ಎನ್ನುವುದು ಒಪ್ಪಿತವಲ್ಲ. ರಾಜಕೀಯವಾಗಿ ನಮ್ಮ ನಾಯಕರು ಏನೇನು ಮಾತನಾಡಿದರು ಎನ್ನುವು ಜನಮಾನಸದಲ್ಲಿ ಹೆಚ್ಚು ದಿನ ಉಳಿಯುವುದಿಲ್ಲ, ಅವರು ನಮಗಾಗಿ ಏನೇನು ಮಾಡುತ್ತಿದ್ದಾರೆ ಎನ್ನುವುದನ್ನು ಆಸೆಯ ಕಣ್ಣುಗಳಿಂದ ನೋಡುತ್ತಿರುತ್ತಾರೆ. ಅವರ ಆಶಯಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಪ್ರತಿಯೊಬ್ಬ ಜನನಾಯಕನದೂ ಆಗಿದೆ.

ಉತ್ತರ ಕರ್ನಾಟಕದ 86 ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದ್ದು ಅದನ್ನು ಎದುರಿಸಲು ರಾಜಕೀಯ ನಾಯಕರು ಕಿತ್ತಾಟದಿಂದ ಹೊರ ಬರಬೇಕಾದ ಅನಿವಾರ್ಯ ಇದೆ. ಈಗಾಗಲೇ ಕೆಲವು ತಾಲೂಕುಗಳಲ್ಲಿ ಕುಡಿಯುವ ನೀರು, ರಾಸುಗಳಿಗೆ ಮೇವಿನ ಸಮಸ್ಯೆ ಉದ್ಭವಿಸಿದೆ. ಬರದ ತಾಲೂಕುಗಳಲ್ಲಿ ಬರುವ ಬೇಸಿಗೆ ಇನ್ನಷ್ಟು ಸಂಕಷ್ಟವನ್ನು ತಂದೊಡ್ಡಬಹುದಾದ ಸೂಚನೆಗಳು ಈಗಾಗಲೇ ಗೋಚರಿಸಿದ್ದು ನಾಯಕರ ಇಚ್ಛಾಶಕ್ತಿ ಇಲ್ಲಿ ಕೆಲಸ ಮಾಡಬೇಕಿದೆ.