About Us Advertise with us Be a Reporter E-Paper

ಗುರು

ಕುಂಭಮೇಳ ಕೋಟಿ ಕೋಟಿ ಜನ ಸೇರುವ ಮಹಾಮೇಳ

* ಡಾ. ಗುರುರಾಜ ಪೋಶೆಟ್ಟಿಹಳ್ಳಿ

ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಸಮ್ಮೇಳನ ಎಂಬ ಖ್ಯಾತಿ ಭಾರತದ ಪ್ರಯಾಗರಾಜ್ (ಅಲಹಾಬಾದ್)ನಲ್ಲಿ ನಡೆಯುವ ಕುಂಭ ಮೇಳಕ್ಕಿದೆ. ಹನ್ನೆರಡು ವರ್ಷಗಳಿಗೊಮ್ಮೆ ಮಕರ ಸಂಕ್ರಾಂತಿಯಂದು ಆರಂಭಗೊಂಡು, ಸೋಮವತಿ ಅಮಾವಾಸ್ಯೆಗೆ ಈ ಮಹಾಮೇಳಕ್ಕೆ ಕೋಟಿಗಟ್ಟಲೆ ಜನರು ಸಾಕ್ಷಿಯಾಗುತ್ತಾರೆ. ಸುಮಾರು ಎರಡು ತಿಂಗಳ ಅವಧಿಯ ಈ ಮೇಳವನ್ನು ಕಣ್ತುಂಬಿಕೊಳ್ಳಲೆಂದೇ ದೇಶ, ವಿದೇಶಗಳಿಂದ ಜನ ಭೇಟಿ ನೀಡುತ್ತಾರೆ. ಈ ಮಹಾಮೇಳ ಅಧ್ಯಾತ್ಮಾನುಭೂತಿಯ, ಧಾರ್ಮಿಕ ಆಚರಣೆಗಳ, ಜನಪದ ಸೊಗಡಿನ ಅಪೂರ್ವ ಸಂಗಮ ಎನ್ನಲಡ್ಡಿಯಿಲ್ಲ. ಈ ವರ್ಷ ಜನವರಿ 15ರಂದು ಕುಂಭಮೇಳ ಆರಂಭ.

ನದಿಗಳೇ ನಮ್ಮ ಜೀವನಾಡಿ. ಸುಮಾರು ನಲವತ್ತು ಕೋಟಿ ಜನರು ಗಂಗಾನದಿಯನ್ನು ಅವಲಂಬಿಸಿದ್ದಾರೆಂದರೆ ವಿಸ್ಮಯವಾಗುತ್ತದೆ. ನಮ್ಮ ಪ್ರಾಚೀನರು ನದಿಗಳಿಗೆ ಕೃತಜ್ಞತೆಯನ್ನು ಸೂಚಿಸಲೋಸುಗ ದಡದಲ್ಲಿರುವ ದೈವವನ್ನು ಸೂಚ್ಯವಾಗಿಟ್ಟುಕೊಂಡು ನದಿಗಳನ್ನು ಗೌರವಿಸುವ ಅನೇಕ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಅವುಗಳಲ್ಲಿ ಕುಂಭಮೇಳಗಳೆಂದು ಪ್ರಸಿದ್ಧವಾಗಿರುವ ಜನಸಾಗರದ ಉತ್ಸವಗಳು ವಿಶಿಷ್ಟ. ಸಂಸ್ಕೃತಿಯ ವಿನಿಮಯ, ರಾಜಶಾಸನದ ಪರಿಣಾಮ, ಕಾನೂನು ಸುವ್ಯವಸ್ಥೆ, ಗುಪ್ತಚರ ವ್ಯವಸ್ಥೆ, ಗಡಿಗಳ ಭದ್ರತೆ, ತೆರಿಗೆ ಸಂಗ್ರಹ, ತನ್ಮೂಲಕ ಸಂಪತ್ತಿನ ವಿತರಣೆ, ನೀರಾವರಿ ವ್ಯವಸ್ಥೆಯನ್ನು ಸುಸ್ಥಿತವಾಗಿಡುವುದು, ಅದರ ಜೊತೆಯಲ್ಲಿಯೇ ನಮ್ಮನ್ನು ಸಾಕಿ ಸಲಹುವ ಆ ನದಿಗಳ ಶುದ್ಧೀಕರಣವನ್ನು ಫಲಾನುಭವಿಗಳೆಲ್ಲಾ ಸೇರಿ ಒಟ್ಟಾಗಿ ಮಾಡುವ ಕ್ರಿಯೆ.
ಕುಂಭಮೇಳಗಳ ಹಿನ್ನೆಲೆ

ಕುಂಭಮೇಳಗಳ ರೋಚಕ. ದೇವದಾನವರು ಅಮೃತಕ್ಕಾಗಿ ಕ್ಷೀರಸಾಗರ ಮಥನ ಮಾಡುತ್ತಾರೆ. ಒಪ್ಪಂದದಂತೆ ದೊರೆತ ಅಮೃತವನ್ನು ಹಂಚಿಕೊಳ್ಳುವ ಸಮಯ ಬರುತ್ತದೆ. ದಾನವರು ಅಮರತ್ವ ಪಡೆಯುವುದನ್ನು ತಪ್ಪಿಸಲು, ದೇವತೆಗಳು ಅಮೃತದ ಕುಂಭವನ್ನು ಮುಚ್ಚಿಡುತ್ತಾರೆ. ಅಸುರರು ದೇವತೆಗಳ ಹುನ್ನಾರವನ್ನರಿಯುತ್ತಾರೆ. ಇಬ್ಬರ ನಡುವೆ ಅಮೃತಕ್ಕಾಗಿ ಹನ್ನೆರಡು ದಿನಗಳ (ಅಂದರೆ ನಮ್ಮ ಹನ್ನೆರಡು ವರ್ಷ) ಯುದ್ಧವಾಗುತ್ತದೆ. ಈ ಸಂದರ್ಭದಲ್ಲಿ ಕಲಶದಿಂದ ಅಮೃತದ ಹನಿಗಳು ಭೂಮಿಯ ಮೇಲೆ ಅಲ್ಲಲ್ಲಿ ಬೀಳುತ್ತವೆ. ಮುಂದೆ ಅವೇ ನದಿಗಳಾಗಿ, ಶ್ರದ್ಧಾಕೇಂದ್ರಗಳಾಗಿ ಕೋಟ್ಯಂತರ ಭಕ್ತರನ್ನು ತಮ್ಮತ್ತ ಈ ಪೌರಾಣಿಕ ಘಟನೆಯ ಕುರುಹಾಗಿ, ಅಲ್ಲಿ ನಡೆಯುವ ಜಾತ್ರೆಗಳು ಕುಂಭಮೇಳಗಳೆಂದು ಪ್ರಸಿದ್ಧ. ಕುಂಭದಿಂದ ಅಮೃತದ ಹನಿಗಳು ಬಿದ್ದ ಪ್ರದೇಶಗಳೇ ಹರಿದ್ವಾರ, ಪ್ರಯಾಗ, ಉಜ್ಜಯಿನಿ ಹಾಗೂ ನಾಸಿಕ್. ಅಮೃತದ ಹನಿಗಳು ಬಿದ್ದವೆಂದು ಹೇಳಲಾಗುವ ಪುಣ್ಯ ಕಾಲವೆಂದು ಈ ನಾಲ್ಕೂ ಪ್ರದೇಶಗಳಲ್ಲಿ 12 ವರ್ಷಗಳಿಗೊಮ್ಮೆ ಕುಂಭ ಮೇಳ ನಡೆಸುವ ಪದ್ಧತಿ ಅನೂಚಾನವಾಗಿ ನಡೆದುಬಂದಿದೆ.

ಪ್ರಯಾಗ್ (ಅಲಹಾಬಾದ್)ಗೆ ಇನ್ನೊಂದು ಪೌರಾಣಿಕ ಹಿನ್ನೆಲೆಯಿದೆ. ಬ್ರಹ್ಮಾಂಡ ರಚನೆಗೆ ಮುನ್ನ ಬ್ರಹ್ಮದೇವನು ಈ ಸ್ಥಳದಲ್ಲಿ ಯಜ್ಞ ಆಚರಿಸಿದ್ದನೆಂದು ಇದರ ಪ್ರತೀಕವಾಗಿ ಇಲ್ಲಿನ ದಶಾಶ್ವಮೇಧ ಘಾಟ್‌ನಲ್ಲಿ ಬ್ರಹ್ಮಾಜಿ ಮಂದಿರ ನಿರ್ಮಿಸಲಾಗಿದೆ. ಕುಂಭಮೇಳದ ಉಲ್ಲೇಖವು ವಿಷ್ಣುಪುರಾಣ, ಭಾಗವತ, ಮಹಾಭಾರತ, ರಾಮಾಯಣಗಲ್ಲಿ ದಾಖಲಾಗಿದೆ.

ಗುರು ಆಯಾ ನದಿಗಳ ರಾಶಿಯನ್ನು ಪ್ರವೇಶಿಸಿದಾಗ ನಡೆಯುವುದೇ ಕುಂಭಮೇಳ. ಆ ಮೂಹೂರ್ತದಂದು ಸಂಗಮದಲ್ಲಿ ಸ್ನಾನ ಮಾಡಿದರೆ ಅನಂತಕೋಟಿ ಪಾಪಗಳು ನಾಶವಾಗುತ್ತವೆಂಬುದು ನಂಬಿಕೆ. ಹರಿದ್ವಾರದ ಗಂಗೆಯ (ಮೇಷರಾಶಿ) ಕುಂಭಮೇಳ, ಅಲಹಾಬಾದಿನ ಗಂಗಾ ಯಮುನಾ ಸರಸ್ವತಿ ತ್ರಿವೇಣಿ ಸಂಗಮದ ಕುಂಭಮೇಳ, ನಾಸಿಕದ ತ್ರ್ಯಂಬಕೇಶ್ವರನ ಸನ್ನಿಧಾನದ ಗೋದಾವರಿ (ಸಿಂಹರಾಶಿ) ಕುಂಭಮೇಳ ಹಾಗೂ ಕ್ಷಿಪ್ರಾ (ವೃಶ್ಚಿಕರಾಶಿ) ನದಿಯ ಕುಂಭಮೇಳ. ಮೂರು ವರ್ಷಗಳಿಗೊಮ್ಮೆ ಸರದಿಯಂತೆ ಈ ಮೇಳಗಳು ನಡೆಯುತ್ತವೆ. ನಮ್ಮಲ್ಲಿಯೂ ಕೃಷ್ಣಾನದಿಗೆ (ಕನ್ಯಾರಾಶಿ) ಹನ್ನೆರಡು ವರ್ಷಗಳಿಗೊಮ್ಮೆ ಗಂಗೋದ್ಭವವಾಗಿ ಕನ್ಯಾಗತದ ಮೇಳ ನಡೆಯುತ್ತದೆ. ಕಾವೇರಿ (ತುಲಾರಾಶಿ) ನದಿಗೆ ಭಾಗಮಂಡಲದ ತಲಕಾವೇರಿಯಲ್ಲಿ (ಕಾವೇರಿ, ಕನ್ನಿಕಾ, ಪೌರಾಣಿಕ ಸುಜ್ಯೋತಿ ನದಿಗಳ ಸಂಗಮ) ತೀರ್ಥೋದ್ಭವ ಮುಂತಾದ ಜಾತ್ರೆಗಳು ನಡೆಯುತ್ತವೆ. ತಮಿಳುನಾಡಿನ ಈರೋಡಿನ ತ್ರಿವೇಣಿ ಸಂಗಮ (ಕಾವೇರಿ, ಭವಾನಿ ಹಾಗೂ ಅಮುಧಾ ನದಿಗಳು), ತಿರುಮಕೂಡಲಿನ (ಕಾವೇರಿ, ಕಬಿನಿ ಹಾಗೂ ಪೌರಾಣಿಕ ಸ್ಫಟಿಕ ಮುಂತಾದವುಗಳಲ್ಲಿ ಈ ರೀತಿಯ ಉತ್ಸವಗಳು ನಡೆಯುತ್ತವೆ. ಹರಿದ್ವಾರ ಹಾಗೂ ಅಲಹಾಬಾದ್‌ನಲ್ಲಿ 6 ವರ್ಷಕ್ಕೊಮ್ಮೆ ಅರ್ಧ ಕುಂಭಮೇಳ ನಡೆಯುತ್ತವೆ.
ನಾಗಾ ಸಾಧುಗಳು

ಕುಂಭಮೇಳಗಳ ಪ್ರಮುಖ ಆಕರ್ಷಣೆ ಆಖಾರಾ ಎಂದು ಕರೆಸಿಕೊಳ್ಳುವ ನಾಗಾ ಸಾಧುಗಳು. ಮೈತುಂಬ ಬೂದಿ ಬಳಿದುಕೊಂಡು, ಆಯುಧಗಳನ್ನು ಹಿಡಿದುಕೊಂಡು ನಗ್ನವಾಗಿ ಮೆರವಣಿಗೆಯಲ್ಲಿ ಬರುವುದನ್ನು ನೋಡುವುದೇ ಒಂದು ರೋಮಾಂಚನಕಾರಿ ಅನುಭವ. ಮೊದಲ ಸ್ನಾನ ಇವರದ್ದೇ – ಇದನ್ನೇ ಶಾಹಿಸ್ನಾನ ಎನ್ನುವುದು. ಮೇಳದ ಇನ್ನೊಂದು ಪ್ರಮುಖ ಕ್ರಿಯೆ ದರ್ಶನ. ಕ್ಷೇತ್ರದ ಪ್ರಧಾನ ಏನೂ ಅಪಚಾರವಾಗದಂತೆ ಅತ್ಯಂತ ಪವಿತ್ರ ಹಾಗೂ ಭಕ್ತಿಭಾವದಿಂದ ದರ್ಶನ ಮಾಡುವುದು. ಅಲ್ಲದೇ ಅಲ್ಲಿ ನೆರೆದಿರುವ ಲಕ್ಷಾಂತರ ಸಾಧುಗಳ ದರ್ಶನ ಹಾಗೂ ಅವರ ಕೃಪಾದೃಷ್ಟಿಭಾಗ್ಯ. ಎಲ್ಲವೂ ಪುಣ್ಯದಾಯಕ ಹಾಗೂ ಭಾಗ್ಯವೆಂದು ಶ್ರದ್ಧಾಳುಗಳ ಅಚಲ ನಂಬಿಕೆ.

ಭಸ್ಮದಲ್ಲೇ ಮುಳುಗೆದ್ದಂತಿರುವ, ಜಟೆಗೂದಲಿನ, ಬೆತ್ತಲೆ ಸಾಧುಗಳ ಉಪಸ್ಥಿತಿಯಿಲ್ಲದೆ ಕುಂಭ ಮೇಳ ಸಂಪನ್ನವಾಗದು. ಈ ಸಾಧಕರಿಲ್ಲದೆ ಮಹಾ ಪೂರ್ಣ ಕುಂಭಮೇಳವೂ ಅಪೂರ್ಣವೇ! ಧ್ಯಾನ ಸಾಧನೆಗಾಗಿ, ತಂತ್ರ ಸಾಧನೆಗಾಗಿ ಹಿಮಾಲಯದ ಗುಹೆಗಳಲ್ಲಿ ವಾಸಿಸುವ ಈ ಸಾಧುಗಳು ಕುಂಭ ಸಮಯಕ್ಕೆ ಸರಿಯಾಗಿ ಹೊರ ಹೊರಡುತ್ತಾರೆ. ಈ ಸಾಧಕರು ಲೌಕಿಕ ಜಗತ್ತಿನ ಮುಖ ನೋಡುವುದು ಈಗಲೇ. ಹವಾಮಾನ ವೈಪರೀತ್ಯಗಳಲ್ಲಿಯೂ ನಿರ್ವಾಣದಲ್ಲಿರುತ್ತ, ಅನ್ನಾಹಾರಗಳ ಹಂಗಿಲ್ಲದೆ, ಊಹೆಗೂ ನಿಲುಕಲಾರದ ಸ್ಥಿತಿಗಳಲ್ಲಿ ಜೀವನ ನಡೆಸುವ ಈ ಸಾಧುಗಳು ಲೋಕಿಕರಿಗೆ ಒಂದು ಅಚ್ಚರಿಯೇ ಸರಿ. ಕುಂಭ ಮೇಳದಲ್ಲಿ ಸಾಧು ಸಂತರಿಗೆ ಹೆಚ್ಚಿನ ಗೌರವ, ಮನ್ನಣೆ. ಇವರನ್ನು ನೋಡಲೆಂದೇ ಮೇಳಕ್ಕೆ ಆಗಮಿಸುವವರ ಸಂಖ್ಯೆ ಸಾಕಷ್ಟಿದೆ. ಗಂಗೆಯಲ್ಲಿ ಈ ಸಾಧುಗಳು ಪುಣ್ಯ ಸ್ನಾನ ನಡೆಸಿದ ಅನಂತರವೇ ಸಾರ್ವಜನಿಕರ ಪುಣ್ಯ ಚಾಲನೆ ದೊರಕುತ್ತದೆ.
ಯಾವಾಗ?

ಮೊದಲ ಕುಂಭ ಸ್ನಾನ ಸಂಕ್ರಾಂತಿಯ ದಿನ, ಅಂದರೆ ಜನವರಿ 15ಕ್ಕೆ ನಡೆಯಲಿದೆ. ಎರಡನೇ ಕುಂಭಸ್ನಾನವು ಪೌಷ್ಯ ಹುಣ್ಣಿಮೆಯಂದು ಜನವರಿ 21ರಂದು ನಡೆಯಲಿದೆ. ಮೌನಿ ಅಮಾವಾಸ್ಯೆಯ, ಫೆಬ್ರವರಿ 4 ರಂದು ಮೂರನೇ ಕುಂಭ ಸ್ನಾನದ ದಿನ. ಇವಿಷ್ಟೇ ಅಲ್ಲದೇ, ವಸಂತ ಪಂಚಮಿ ಫೆಬ್ರವರಿ 10ರಂದು, ಮಾಘ ಹುಣ್ಣಿಮೆ ಫೆಬ್ರವರಿ 19 ಮತ್ತು ಮಾರ್ಚ್ 4ರ ಮಹಾಶಿವರಾತ್ರಿಯಂದು ವಿಶೇಷ ಕುಂಭ ಸ್ನಾನ ನಡೆಯುತ್ತದೆ.

ಕುಂಭ : ಕುಂಭ ಎನ್ನುವ ಪದವು ಮೂಲತಃ ಸಂಸ್ಕೃತದಿಂದ ಬಂದಿದೆ. ಆಡುಭಾಷೆಯಲ್ಲಿ ಮಡಕೆ, ಕಲಶ ಎಂದೂ ಕರೆಯುತ್ತಾರೆ. ಭಾರತೀಯ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕುಂಭ ಎನ್ನುವುದು ದ್ವಾದಶ ರಾಶಿಗಳಲ್ಲಿ ಒಂದಾಗಿದೆ. ಈ ಹೆಸರಿನ ಅಡಿಯಲ್ಲೇ ಉತ್ಸವ ನಡೆಯುತ್ತದೆ. ಮೇಳ ಎಂದರೆ ಉತ್ಸವ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗುರು ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸುವ ಶುಭ ಸಂದರ್ಭವೇ ಕುಂಭಮೇಳ. ಕುಂಭಮೇಳದ ಗಣನೆಯು ಸೂರ್ಯ, ಚಂದ್ರ ಮತ್ತು ಗುರುಗ್ರಹದ ಸ್ಥಾನವನ್ನು ಆಧರಿಸಿರುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close