About Us Advertise with us Be a Reporter E-Paper

ಯಾತ್ರಾಯಾತ್ರಾ panel 1

ಕುರುಕ್ಷೇತ್ರ ಮಹಾಭಾರತದ ಕುರುಹುಗಳ ನಾಡು

ಮೇಲ್ಗಿರಿ ದಾಸ್ ಚೀಕಲಪರ್ವಿ

ಹುಟ್ಟಿನಿಂದಲೇ ನಮ್ಮ ಜನನದೊಂದಿಗೆ ಅನುರ ಣಿಸುವ ರಾಮಾಯಣ ಮತ್ತು ಮಹಾ ಭಾರತ ಮಹಾಕಾವ್ಯಗಳು ಒಂದಿಲ್ಲೊಂದು ಕಾರಣಗಳಿಂದ ನಮಗೆ ಇಷ್ಟವಾಗುತ್ತವೆ. ಮಹಾಭಾರತದ ಯುದ್ಧ ಪ್ರಸಂಗವಂತೂ ಮೈ ನವಿರೇಳಿಸುವ ಕಥನ ಕುತೂಹಲ. ಸ್ವಲ್ಪ ಸೋಜಿಗವಾಗುವಷ್ಟು ವಿಸ್ಮಯಗಳು. ಇಡೀ ಮನುಕುಲವೇ ನಾಶಹೊಂದುವಷ್ಟು ಸಾವು ನೋವುಗಳು , ಭೀಷ್ಮ , ದ್ರೋಣ, ಕೃಪಾಚಾರ್ಯರಂಥಾ ಅತಿರಥಮಹಾರಥರ ದಂಡೇ ಇರುವ ಕೌರವರ ಸೋಲು, ಇಚ್ಛಾಮರಣಿಯಾದ ಭೀಷ್ಮರ ಕೊನೆಯ ದಿನಗಳು, ಕೃಷ್ಣನಿಂದ ಅರ್ಜುನನಿಗೆ ಗೀತೋಪದೇಶ, ಅಭಿಮನ್ಯು, ಕರ್ಣ, ಅಶ್ವತ್ಥಾಮರ ಸಾವಿನ ಹಿಂದಿರುವ ರೋಚಕತೆ. ಹೀಗೆ ಹತ್ತು ಹಲವು ವಿಚಾರಗಳಿಂದ ವಿಲಕ್ಷಣವು , ಪವಿತ್ರವೂ ಆದ ಯುಗ ಪಲ್ಲಟದ ಕೊನೆಯ ಘಟ್ಟಕ್ಕೆ ಸಾಕ್ಷಿಯಾದ, ಕೃಷ್ಣನ ಇರುವಿಕೆಯನ್ನು ಈಗಲೂ ತನ್ನ ಒಡಲಲ್ಲಿ ತುಂಬಿಕೊಂಡಿರುವ ಬೇರೊಂದು ಸ್ಥಳ ನಮ್ಮ ದೇಶದಲ್ಲಿ ಸಿಗಲಿಕ್ಕಿಲ್ಲಾ .

ಸರೋವರಗಳ ತಾಣ ಕುರುಕ್ಷೇತ್ರ, ಬ್ರಹ್ಮ ದೇವರು ಭೂಮಿಯ ಸೃಷ್ಟಿಯನ್ನು ಕುರುಕ್ಷೇತ್ರದಲ್ಲಿರುವ ವಿಶಾಲವಾದ ಬ್ರಹ್ಮ ಸರೋವರ ದಿಂದ ಪ್ರಾರಂಭಿಸಿದರಂತೆ, ಸುಮ್ಮನೆ ನೋಡಿದರೆ ಸಾಕು ಮನಸ್ಸಿಗೆ ಮುದನೀಡುವ ಸ್ಥಳ. ಸರಸ್ವತಿ ನದಿಯ ಸನ್ನಿಧಾನವಿರುವ ಈ ಸ್ಥಳದಲ್ಲಿ ಸೂರ್ಯ ಗ್ರಹಣದ ಸಮಯದಲ್ಲಿ ಮಾಡುವ ಸ್ನಾನ ಹಾಗು ಕರ್ಮಗಳಿಗೆ ಅಶ್ವಮೇಧ ಯಜ್ಙ ಮಾಡಿದಷ್ಟು ವಿಶೇಷ ಫಲ ಸಿಗುವುದಂತೆ. ಇಷ್ಟೊಂದು ಪ್ರಾಚೀನ ಸರೋವರದ ಸ್ನಾನ ಘಟ್ಟಗಳು ಇಲ್ಲಿ ಕಟ್ಟಾಗಿವೆ. ಪ್ರಶಾಂತವಾಗಿ ಕೆಲ ಹೊತ್ತು ಕಾಲ ಕಳೆಯಲು ಊರಿನ ಹೃದಯ ಭಾಗದಲ್ಲಿ ಇರುವ ಅತ್ಯಂತ ಮಹತ್ವದ ಸ್ಥಳ ಇದಾಗಿದೆ.

ಬ್ರಹ್ಮ ಸರೋವರಕ್ಕೆ ಹತ್ತಿರವಿರುವುದು ಸನ್ನಿಹಿತ ಸರೋವರ, ಹದಿನೆಂಟು ದಿನಗಳ ಯುದ್ಧದ, ಪ್ರತಿದಿನ ಪಾಂಡವರ ಹಾಗು ಕೌರವರ ಬಣಗಳು ಸಂಜೆ (ನಿಯಮದಂತೆ ಸೂರ್ಯಾಸ್ತದ ನಂತರ ಯುದ್ಧಮಾಡುವಂತಿರಲಿಲ್ಲಾ) ಸೇರಿ ನಾಳಿನ ಯುದ್ಧದ ಸ್ಥಳ ನಿಗದಿ ಮಾಡುವ ಸ್ಥಳ, ಇದಲ್ಲದೆ ಜಗತ್ತಿನ ಎಲ್ಲಾ ತೀರ್ಥಗಳು ಬಂದು ಇಲ್ಲಿ ಸನ್ನಿಹಿತವಾಗಿರುವ ಕಾರಣ ಇದಕ್ಕೆ ಸನ್ನಿಹಿತ ಎಂಬ ಹೆಸರುಬಂದಿದೆಯಂತೆ, ಅಪರ ಕರ್ಮಗಳನ್ನು(ಶ್ರಾದ್ಧ) ಮಾಡಲು ಬಹಳ ಸಂಖ್ಯೆಯಲ್ಲಿ ಹಿಂದೂಗಳು ಇಲ್ಲಿಗೆ ಬರುತ್ತಾರೆ, ಯುದ್ಧದ ನಂತರ ಪಾಂಡವರು ಯುದ್ಧದಲ್ಲಿ ಮಡಿದ ತಮ್ಮೆಲ್ಲ ದಾಯಾದಿಗಳ ಶ್ರಾದ್ಧ ಮಾಡಿದ ಸ್ಥಳ.ಮಹಾಭಾರತದ ವನ ಪರ್ವದಲ್ಲಿ ಇದರ ಉಲ್ಲೇಖವಿದೆಯಂತೆ.

ಪಕ್ಕದಲ್ಲಿಯೇ ಇರುವ ದುಃಖ ಭಂಜನ ಮಹಾದೇವನ ಸನ್ನಿಧಾನ ನಿಮ್ಮನ್ನು ಆಕರ್ಷಿಸುತ್ತದೆ. ದಧೀಚಿ ಋಷಿಗಳು ಶಿವನ ಉಪಾಸನೆಯನ್ನು ಮಾಡಿದ ಸ್ಥಳ ,ಭಾಗವತದ ಉಲ್ಲೇಖದಂತೆ ವಿರಹ ತಪ್ತರಾದ ಗೋಪಿಕಾಸ್ತ್ರಿಯರನ್ನು ಭೇಟಿ ಯಾಗಲು ಕೃಷ್ಣ ಉದ್ಧವನ ಮೂಲಕ ಇಲ್ಲಿಗೆ ಹೇಳಿ ಕಳಿಸಿದ ಸ್ಥಳ.ದುಃಖ ಭಂಜನನಿಗೆ ಅಭಿಷೇಕದ ಮಜ್ಜನವನ್ನು ಭಕ್ತರು ಮಾಡಬಹುದು.

ದಕ್ಷಿಣ ಭಾರತದ ಗುಡಿಗಳಲ್ಲಿ ದೇವರನ್ನು ಮುಟ್ಟುವುದು ಬಿಡಿ ಗರ್ಭ ಗುಡಿ ಪ್ರವೇಶಿಸುವುದು ಸಹಾ ನಮಗಾಗದು. ಉತ್ತರದಲ್ಲಿ ನೀವು ಬಹುತೇಕ ಯಾವ ದೇವರ ವಿಗ್ರಹವನ್ನೂ ಮುಟ್ಟಿ ನಮಸ್ಕರಿಸ ಬಹುದು. ಅಲ್ಲಿ ಜಗತ್ತಿನ ಒಡೆಯನಾದ ಶ್ರೀ ಕೃಷ್ಣ ಮುದ್ದಿನ ಕಾನಾ ಆಗುತ್ತಾನೆ, ಐದು ವರ್ಷದ ಪೋರನಿಗೆ ತೋರುವ ಮಮಕಾರ ವನ್ನು ಉತ್ತರ ಭಾರತೀಯರು ನಿರ್ವ್ಯಾಜ್ಯದಿಂದ ಕೃಷ್ಣನಿಗೆ ಧಾರೆಯೆರುಯುತ್ತಾರೆ. ಶ್ರೀರಾಮನನ್ನು ಅವರು ರಾಮ್ ಲಲ್ಲಾ ಎಂದೇ ಕರೆಯುತ್ತಾರೆ.ದಕ್ಷಿಣ ಭಾರತದಲ್ಲಿ ಆಗುವ ದೇವರ ಪೂಜೆಗಳು ಆಗಮ ಶಾಸ್ತ್ರದ ವಿಸ್ತೃತ ವಿಧಿ ನಿಯಮಾವಳಿ ಗಳಿಂದ ಕೂಡಿದ್ದರೆ ಉತ್ತರದಲ್ಲಿ ಅನನ್ಯವಾದ ಭಕ್ತಿಯೊಂದೇ ದೇವರಿಗೆ ಸಲ್ಲಿಸುವ ಮಹಾ ಪೂಜೆ. ದೇವರ ಅಖಂಡ ನಾಮ ಸ್ಮರಣೆ, ರಾಮಾಯಣ ಭಾರತಗಳ ನಿರಂತರ ಪಾರಾಯಣಗಳೇ ದೇವರಿಗೆ ಸಲ್ಲಿಸುವ ಷೋಡಶೋಪಚಾರಗಳು.

ದ್ರೋಣರು ರಚಿಸಿದ ಚಕ್ರವ್ಯೂಹದಲ್ಲಿ ವೀರ ಮರಣವನ್ನು ಹೊಂದಿದ ಅಭಿಮನ್ಯು ಮಡಿದ ಅಭಿಮನ್ಯು ಕುಂಡ ಹಾಗು ಅದಿತಿ ದೇವಿ ತಪಸ್ಸು ಮಾಡಿ ಸೂರ್ಯ ಪಡೆದ ಸೂರ್ಯ ಕುಂಡ ಪ್ರೇಕ್ಷಣೀಯ ಸ್ಥಳಗಳು, ಕುಷ್ಠ ಮೊದಲಾದ ಆದಿವ್ಯಾಧಿ ಪರಿಹರಿಸುವ ಆರೋಗ್ಯಪ್ರದ ಕುಂಡಗಳು. ಅಭಿಮನ್ಯು ಇಲ್ಲಿ ಮಡಿದಿದ್ದರಿಂದ ಇದನ್ನು ಸ್ಥಳೀಯರು ಅಮೀನ್ ಎಂಬ ಹೆಸರಿನಿಂದ ಕರೆಯುತ್ತಾರೆ.

ಕಾಮ್ಯಕೇಶ್ವರ ಮಹಾದೇವ

ಪಾಂಡವರು ಕೃಷ್ಣನ ಅಣತಿಯಂತೆ ಇಲ್ಲಿದ್ದು ರುದ್ರ ದೇವರ ಉಪಾಸನೆ ಮಾಡಿದ್ದ ಸ್ಥಳ. ಸರೋವರದ ಮಧ್ಯದಲ್ಲಿ ಹಚ್ಚ ಹಸಿರಿನ ಪ್ರಕೃತಿಯ ತೊಟ್ಟಿಲಲ್ಲಿರುವ ಪ್ರಾಚೀನವಾದ ದೇವಸ್ಥಾನ ನೋಡಲು ನಯನ ಮನೋಹರವಾಗಿದೆ. ಹತ್ತಿರದಲ್ಲಿಯೇ ಇರುವ ಇನ್ನೊಂದು ಮಹಾದೇವನ ದೇವಸ್ಥಾನ ಸ್ಥಾನೇಶ್ವರ ಮಹಾಭಾರತ ಯುದ್ಧದಲ್ಲಿ ತಮಗೆ ಜಯಸಿಗಲೆಂದು ಪಾಂಡವರು ರುದ್ರದೇವರನ್ನು ಪ್ರಾರ್ಥಿಸಿದ ಸ್ಥಳ ಇದಾಗಿದೆ.

ಜ್ಯೋತಿ ಸಾರ

ಕುರುಕ್ಷೇತ್ರದಲ್ಲಿ ಇರುವ ಮತ್ತೊಂದು ಪ್ರೇಕ್ಷಣೀಯ ಹಾಗು ತುಂಬಾ ಮುಖ್ಯವಾದ, ಇಡೀ ವಿಶ್ವಕ್ಕೆ ಜೀವನದ ಸಂದೇಶವನ್ನು ಅರ್ಜುನನನ್ನು ನಿಮಿತ್ತವಾಗಿಟ್ಟುಕೊಂಡು ಕೃಷ್ಣ ಕೊಟ್ಟ ಭಗವ ದ್ಗೀತೆಯಸಂದೇಶದ ಸ್ಥಳವೇ ಜ್ಯೋತಿ ಸಾರದ ಸರೋವರ.

ಇದೆಲ್ಲದರ ಜತೆಗೆ ಭೀಷ್ಮರು ಮರಣ ಶಯ್ಯೆಯಲ್ಲಿದ್ದಾಗ ಅರ್ಜುನ ಬಾಣ ಹೂಡಿ ಪಾತಾಳ ಗಂಗೆಯನ್ನು ತರಿಸಿದ ಸ್ಥಳ, ಚಿಕ್ಕಂದಿನಲ್ಲಿ ನಂದಗೋಪ ಕೃಷ್ಣ ಬಲರಾಮರಿಗೆ ಮಾಡಿಸಿದ ದುರ್ಗಾ ದೇವಿ ಮಂದಿರ, ಭೀಷ್ಮರು ಯುದ್ಧ ಮಾಡುತ್ತಾ ಬಿದ್ದ ನರೊಕೊತ್ತಾನ ಸರೋವರ ಹಾಗು ಇನ್ನು ಹತ್ತು ಹಲವಾರು ಪೌರಾಣಿಕ, ಐತಿಹಾಸಿಕ ಸ್ಥಳಗಳಿವೆ. ಸುಮಾರು ಮುನ್ನೂರಕ್ಕೂ ಹೆಚ್ಚು ಸರೋವರುಗಳು, ಕೂಪಗಳು, ಹದಿನೇಳುಯುದ್ಧ ಭೂಮಿ ಗಳು, ಯುದ್ಧಕಾಲದ ಕೆಲ ಪಳಯುಳಿಕೆಗಳನ್ನು ನೋಡಲು ಕುರು ಕ್ಷೇತ್ರದ ಮ್ಯೂಸಿಯಂ, ಹೀಗೆ ನೋಡ ಬಯಸುವ ತಾಣಗಳಿಗೆ ಲೆಕ್ಕವೇ ಇಲ್ಲಾ. ಈಗಿನ ಹರಿಯಾಣ ಹಾಗು ಪಂಜಾಬಿನ ಬಹುತೇಕ ಪ್ರದೇಶದಲ್ಲಿ ಭಾರತ ಯುದ್ಧದ ಕುರುಹುಗಳಿವೆ. ನನ್ನ ನಿಯಮಿತ ನಾನು ನೋಡಿದ ಕೆಲವೇ ಕೆಲವು ಸ್ಥಳಗಳ ಪರಿಚಯ ಮಾಡಿಸಲು ಪ್ರಯತ್ನ ಮಾಡಿದ್ದೇನೆ.

ದೆಹಲಿಯಿಂದ ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಸುಮಾರು 4 ತಾಸುಗಳ ಪ್ರಯಾಣ, ಸುಮಾರು 150 ಕಿ.ಮೀ ದೂರದಲ್ಲಿ ಅಮೃತಸರಕ್ಕೆ ಹೋಗುವ ನ್ಯಾಷನಲ್ ಹೈ ವೇ ಒಂದರಲ್ಲಿ ಪೀಪ್ಲಿ ಎಂಬ ಊರು ಸಿಗುತ್ತದೆ. ಅಲ್ಲಿಂದ ಹದಿನೈದು ಕಿಲೋ ಮೀಟರ್ ದೂರದಲ್ಲಿ ಕುರುಕ್ಷೇತ್ರವಿದೆ. ದೆಹಲಿಯ ಕಶ್ಮೀರಿ ಗೇಟ್ ಬಸ್ ಸ್ಟ್ಯಾಂಡಿನಿಂದ ನಿಮಗೆ ದೆಹಲಿ ಹಾಗು ಹರಿಯಾಣಾ ರಾಜ್ಯ ಸಾರಿಗೆ ಸಂಸ್ಥೆಗಳ ಸಿಗುತ್ತವೆ.

Tags

Related Articles

Leave a Reply

Your email address will not be published. Required fields are marked *

Language
Close