About Us Advertise with us Be a Reporter E-Paper

ಅಂಕಣಗಳು

ಮಂಗನ ಕಾಯಿಲೆ ಹರಡಲು ಮನುಷ್ಯರ ನಿರ್ಲಕ್ಷ್ಯವೇ ಕಾರಣ…!

- ಶಶಿಧರ ಹಾಲಾಡಿ

ಮಲೆನಾಡು ಮತ್ತು ಕರಾವಳಿಯ ಕಾಡುಗಳಲ್ಲಿ ಬೆಟ್ಟ ಪ್ರದೇಶಗಳಲ್ಲಿ ಓಡಾಡಿದರೆ ಸಾಸಿವೆಕಾಳು ಗಾತ್ರದ ಪುಟಾಣಿ ಕೀಟಗಳು ನಮ್ಮ ದೇಹಕ್ಕೆ ಅಂಟಿಕೊಳ್ಳುತ್ತವೆ. ತಮ್ಮ ಬಾಯಿಯನ್ನು ನಮ್ಮ ಚರ್ಮಕ್ಕೆ ದೊಳಗೆ ಎಷ್ಟು ಬಿಗಿಯಾಗಿ ಇಟ್ಟು ಕಚ್ಚುತ್ತವೆ ಅಂದರೆ, ಇವನ್ನು ಬರಿಗೈಯಿಂದ ಕಿತ್ತೆಸೆಯುವುದು ಕಷ್ಟ. ಸೂಜಿ ಸಹಾಯದಿಂದಲೋ, ಚಿಮ್ಮಟಬಳಸಿಯೋ ಅದನ್ನು ಕೀಳಬೇಕಾಗಬಹುದು. ಒಮ್ಮೆ ಚರ್ಮಕ್ಕೆ ಅಂಟಿದರೆ ಒಂದೆರಡು ದಿನಗಳ ತನಕ ಅಲ್ಲೇ ಬೇರೂರುವ ಜೀವಿಗಳು ಇವು. ಇದರಿಂದಾಗ ನವೆ, ತುರಿಕೆ, ಒಂದೆರಡು ಹನಿ ರಕ್ತ ದಾನ ಇಷ್ಟನ್ನು ಬಿಟ್ಟರೆ ಬೇರೇನೂ ತೊಂದರೆ ಇರಲಾರದು.

ಆದರೆ ಈ ಪುಟಾಣಿ ಕೀಟಗಳು ಇಂದು ರೋಗವಾಹಕಗಳಾಗಿ ನಮ್ಮ ಮಲೆನಾಡಿನಲ್ಲಿ ಭಯದ ರಿಂಗಣವನ್ನೇ ಸೃಷ್ಟಿಸಿಬಿಟ್ಟಿವೆ. ಉಣುಗು, ಒಣಗು, ಉಣ್ಣಿ ಎಂಬ ಈ ಕೀಟಗಳಲ್ಲಿ ಕೆಲವು ದೊಡ್ಡ ಗಾತ್ರದವೂ ಉಂಟು. ಕಾಡಿನಲ್ಲಿರುವ ಮಂಗಗಳಿಗೆ ಬರುವ ‘ಮಂಗನ ಕಾಯಿಲೆ’ಯನ್ನು ಮನುಷ್ಯರಿಗೆ ಹರಡುವಲ್ಲಿ ಈ ಉಣುಗುಗಳ ಪಾತ್ರ ಹಿರಿದು ಎಂದು ಗುರುತಿಸಲಾಗಿದೆ. ಕೆ ಎಫ್ ಡಿ ಅಥವಾ ಮಂಗನ ಕಾಯಿಲೆಯ ಸೋಂಕಿನಿಂದ ಬಳಲುವ ಮಂಗಗಳು ಮೈ ಮೇಲೆ ವಾಸಿಸುವ ಈ ಉಣುಗುಗಳು, ಆ ಸೋಂಕಿನ ಕ್ರಿಮಿಗಳನ್ನು ತಮ್ಮ ದೇಹದಲ್ಲಿ ಅಡಗಿಸಿಕೊಂಡಿರುತ್ತವೆ. ಈ ರೋಗವಾಹಕ ಹುಳುಗಳು, ಕಾರಣಾಂತರದಿಂದ ಕಾಡಿಗೆ ಬರುವ ಮನುಷ್ಯನ ದೇಹಕ್ಕೆ ಅಂಟಿಕೊಂಡಾಗ ಮಂಗನ ಲಕ್ಷಣ ಮನುಷ್ಯನಲ್ಲಿ ತೀವ್ರವಾಗಿ ಕಾಣಿಸಿಕೊಂಡೀತು, ಆ ರೋಗವು ಮಾರಣಾಂತಿಕವೂ ಆದೀತು.

ಮಲೆನಾಡಿನ ಸಾಗರ ಸುತ್ತ ಮುತ್ತಲಿನ ಕಾಡಿನಂಚಿನ ಹಳ್ಳಿಗಳಲ್ಲಿ ಇಂದು ಮಂಗನ ಕಾಯಿಲೆ ಭೀತಿ ಹರಡಿದೆ. ಮಂಗನ ಕಾಯಿಲೆಯಿಂದ ಈ ವರ್ಷ ಹತ್ತಾರು ಜನ ಮೃತ ಪಟ್ಟಿದ್ದು, 20ಕ್ಕೂ ಹೆಚ್ಚು ಜನರಿಗೆ ಜ್ವರ ಬಂದಿರುವುದು ಖಚಿತಪಟ್ಟಿದೆ. ಇದರಿಂದಾಗಿ ಆ ಕಾಯಿಲೆ ಕಂಡು ಬಂದ ಹಳ್ಳಿಗಳ ಸುತ್ತ ಮುತ್ತ ಮಂಗನ ಕಾಯಿಲೆಯ ಕುರಿತು ಭೀಕರ ಭಯ ಸೃಷ್ಟಿಯಾಗಿದೆ. ಒಂದೇ ಊರಿನಲ್ಲಿ ಈ ಕಾಯಿಲೆಯಿಂದ ಐದಾರು ಜನ ಮೃತಪಟ್ಟ ದುರ್ಘಟನೆ ಊರಿನ ಜನರಿಗೆ ಇನ್ನಿಲ್ಲದ ಆತಂಕ ತಂದಿದೆ. ಸಣ್ಣ ತಲೆನೋವು ಮೈಕೈ ನೋವು ಬಂದರೂ ತಮಗೆ ಎಲ್ಲಿ ಈ ಮಾರಣಾಂತಿಕ ಕಾಯಿಲೆ ಅಮರಿಕೊಂಡಿರಬಹುದು ಎಂಬ ಗಾಬರಿ, ಕಳವಳ, ದಿಗಿಲು. ಹಲವರು ತಮ್ಮ ಮನೆಗಳಿಗೆ ಬೀಗ ಜಡಿದು ದೂರದ ನೆಂಟರ ಮನೆಗಳಿಗೆ ತೆರಳುತ್ತಿದ್ದಾರೆ. ಮಲೆನಾಡಿನ ಪ್ರಮುಖ ಚಟುವಟಿಕೆಯಾದ ‘ಅಡಿಕೆ ಕೊಯ್ಲು’ ಮಾಡಲು, ತೋಟಕ್ಕೆ ಹೋಗಲು ಜನ ಹೆದರುತ್ತಿದ್ದಾರೆ. ಮಂಗನ ಕಾಯಿಲೆ ಕುರಿತು ಹೆಚ್ಚಿನ ಮಾಹಿತಿ, ವೈದ್ಯಕೀಯ ಬೆಂಬಲ ಇಲ್ಲದೇ ಕಾಡಿನಂಚಿನ ನೂರಾರು ಹಳ್ಳಿಗಳು ಸಕಾರಣವಾಗಿಯೇ ಬೆದರಿವೆ, ಹೆದರಿವೆ.

ಕಾಡಿನಲ್ಲಿರುವ ಉಣುಗುಗಳಿಂದ ಈ ಕಾಯಿಲೆ ಮನುಷ್ಯನಿಗೆ ಹರಡುತ್ತದೆಂಬುದು ಪ್ರಮಾಣೀಕೃತ. ಅಂದ ಮಾತ್ರಕ್ಕೆ, ಉಣುಗುಗಳಿಂದಾಗಿ ಈ ರೋಗ ಮನುಷ್ಯನಿಗೆ ಬಂತು ಎಂದು ಈ ಪುಟ್ಟ ಕೀಟಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಹುದೇ? ಅಥವಾ ಮಂಗನಿಗೆ ಬರುವ ಕಾಯಿಲೆಯು, ಮನುಷ್ಯನಿಗೆ ತಗುಲಿ ತೊಂದರೆ ಕೊಡುವುದರಿಂದಾಗಿ ಮಂಗಗಳನ್ನು ಅಪರಾಧಿ ಎನ್ನಬಹುದೆ? ಮಂಗ ಸತ್ತ ಪ್ರಕರಣ ಕಂಡು ಬಂದ ನಂತರವಷ್ಟೇ ಈ ಮನುಷ್ಯನಿಗೆ ಬರುವ ಕುರಿತು ವ್ಯಾಪಕ ಪ್ರಚಾರ ಅದಾಗಲೇ ನಡೆದಿದೆ. ಕೆಲವು ಮಾಧ್ಯಮಗಳು ಮಂಗಗಳನ್ನು ಖಳನಾಯಕನಂತೆ ಬಿಂಬಿಸುವ ಚಿತ್ರ-ವಿಚಿತ್ರ ಎನಿಸುವ ವರದಿಗಳನ್ನು ಅದಾಗಲೇ ಪದೇಪದೆ ಬಿತ್ತರಿಸಿ, ಅಮಾಯಕ ಮಂಗಗಳಿಗೆ ಕೆಟ್ಟ ಹೆಸರು ತರುವಲ್ಲಿ ಯಶಸ್ವಿಯಾಗುತ್ತಿವೆ. ಇತ್ತ ಸರಕಾರದ ಇಲಾಖೆಗಳು ಸಹ ಸತ್ತ ಮಂಗನನ್ನು ಹುಡುಕಿಕೊಟ್ಟರೆ 500ರು. ಬಹುಮಾನ ಎಂಬರ್ಥದ ಮತಿಹೀನ ಪ್ರಕಟಣೆಗಳನ್ನು ನೀಡಿವೆ! ಕಾಯಿಲೆಯಿಂದ ಸತ್ತ ಮಂಗಗಳನ್ನು ಹುಡುಕಲು ಕಾಡಿಗೆ ಹೋಗುವವರು ಸೋಂಕಿಗೆ ಒಳಗಾಗುವ ಸಾಧ್ಯತೆ ಒಂದೆಡೆಯಾದರೆ, 500 ರು. ಮಂಗಗಳನ್ನು ಸಾಯಿಸುವ ಕೆಲಸಕ್ಕೂ ಕೈ ಹಾಕುವಂತೆ ಮಾಡುವ ಸಾಧ್ಯತೆಯೂ ಇದೆ.

ಮಂಗನ ಕಾಯಿಲೆಯನ್ನು ಮನುಷ್ಯರಲ್ಲಿ ಮೊದಲ ಬಾರಿಗೆ ಪತ್ತೆಹಚ್ಚಿದ್ದು 1956-57 ರಲ್ಲಿ. ಸೊರಬ ತಾಲ್ಲೂಕಿನ ಕ್ಯಾಸನೂರು ಅರಣ್ಯದ ಅಂಚಿನ ಹಳ್ಳಿಗಳಲ್ಲಿ ಇದು ಕಂಡು ಬಂದಿದ್ದರಿಂದ ಕ್ಯಾಸನೂರು ಫಾರೆಸ್‌ಟ್ ಡಿಸೀಸ್ (ಕೆಎಫ್‌ಡಿ)ಟಿ ಎಂಬ ಇಂಗ್ಲಿಷ್ ಹೆಸರನ್ನು ಈ ಕಾಯಿಲೆಗೆ ಕೊಟ್ಟವರು ನಮ್ಮವರೇ. ನಂತರದ ದಿನಗಳಲ್ಲಿ ಮಂಗಗಳು ಸಾಯುವುದಕ್ಕೂ ಈ ರೋಗ ಹೊರಡುವುದಕ್ಕೂ ಸಂಬಂಧ ಕಂಡುಬಂದಿದ್ದರಿಂದ ‘ಮಂಗನ ಕಾಯಿಲೆ’ ಎಂಬ ಹೆಸರು ಪ್ರಚಾರಕ್ಕೆ ಬಂತು. ದಟ್ಟ ಕಾಡಿನಲ್ಲಿ ಇರುವ ಮಂಗಗಳಿಗೆ ಬರುತ್ತಿದ್ದ ಈ ರೋಗ ಮನುಷ್ಯನಿಗೆ ಅಂಟುವುದು ಒಂದು ವಿಚಿತ್ರ ವಿದ್ಯಮಾನ, ಮಾನವ ನಿರ್ಮಿತ ದುರಂತ.

ಕಳೆದ ಅರ್ಧ ಶತಮಾನದಲ್ಲಿ ನಡೆದ ವ್ಯಾಪಕ ಅರಣ್ಯ ನಾಶವೇ ಈ ರೋಗ ಹರಡುವಿಕೆಗೆ ಮುಖ್ಯ ಕಾರಣ ಎಂದು ಪರಿಸರ ತಜ್ಞರು ಮತ್ತು ಶರಾವತಿ ಯೋಜನೆಯಲ್ಲಿ ವೃತ್ತಿ ನಿರ್ವಹಿಸಿದ ತಂತಜ್ಞರು ಅಭಿಪ್ರಾಯಪಟ್ಟಿದ್ದಾರೆ. 1940ರ ದಶಕದಲ್ಲಿ ಶರಾವತಿ ನದಿಗೆ ಮೊದಲ ಅಣೆಕಟ್ಟು ಕಟ್ಟಲಾಯಿತು. ಹಿರೇಭಾಸ್ಕರ ಎಂಬ ಊರಿನ ಅಣೆಕಟ್ಟೆ ಅದು. ನಂತರದ ದಶಕದಲ್ಲಿ ಆ ಅಣೆಕಟ್ಟೆಯನ್ನು ಮುಳುಗಿಸುವಷ್ಟು ದೊಡ್ಡದಾದ ಲಿಂಗನಮಕ್ಕಿ ಅಣೆಕಟ್ಟು ಮೇಲೆದ್ದಿತು. ಈ ಅಣೆಕಟ್ಟು ನಿರ್ಮಾಣದಿಂದ ನಾಶಗೊಂಡ ಅರಣ್ಯ ಎಷ್ಟು , ಅದರ ಮೌಲ್ಯ ಎಷ್ಟು ಎಂಬುದರ ನಿಖರವಾದ ಲೆಕ್ಕಗಳೇ ಇಲ್ಲ. ಭಾರೀ ಪ್ರಮಾಣದ ದಟ್ಟ ಅರಣ್ಯವು ಈ ಯೋಜನೆಯ ಹಿನ್ನೀರಿನಲ್ಲಿ ಮುಳುಗಿ ಹೋಯಿತು. ದೇಶಕ್ಕೆ ಸ್ವಾತಂತ್ರ್ಯ ದೊರೆತ ಹುಮ್ಮನಸ್ಸಿನ ಆ ದಿನಗಳಲ್ಲಿ ಅರಣ್ಯ ನಾಶದ ವಿರುದ್ಧ ಧ್ವನಿಯೆತ್ತವ ಶಕ್ತಿ, ಅರಿವು ಯಾರಿಗೂ ಇರಲಿಲ್ಲ. ಹೊಸದಾಗಿ ದಾಸ್ಯವಿಮುಕ್ತ ಭಾರತವು ಅಭಿವೃದ್ಧಿ ಹೊಂದುವುದೇ ಮುಖ್ಯ ಎನಿಸಿದ್ದ 1950ರ ದಶಕದಲ್ಲಿ ಪರಿಸರ ರಕ್ಷಣೆಯ ಕೂಗು ಇನ್ನೂ ಎದ್ದಿರಲಿಲ್ಲ. ದುರಂತವೆಂದರೆ ಸಾಗರ ತಾಲೂಕಿನ ದಟ್ಟ ಅರಣ್ಯದ ಅಂಚಿನಲ್ಲಿ ವಾಸಿಸುತ್ತಿದ್ದ ಸಾವಿರಾರು ಕುಟುಂಬಗಳು ಆ ನೀರಿನಿಂದಾಗಿ ನಿರಾಶ್ರಿತರಾದರು. ಎರಡೆರಡು ಅಣೆಕಟ್ಟುಗಳಿಗೆ ತಮ್ಮ ಸಂಸ್ಕೃತಿಯನ್ನು, ಜೀವನವನ್ನು ಬಲಿ ಕೊಡಬೇಕಾದ ದೌರ್ಭಾಗ್ಯ ಆ ಜನರದ್ದು. ಅಣೆಕಟ್ಟಿನಲ್ಲಿ ಸಂಗ್ರಹಗೊಂಡ ನೀರಿನಿಂದಾಗಿ ಜೋಗದಲ್ಲಿ ಉತ್ಪಾದನೆಗೊಂಡ ವಿದ್ಯುತ್ ಇಡೀ ರಾಜ್ಯವನ್ನು ದಶಕಗಳ ಕಾಲ ಬೆಳಗಿದ್ದು, ರಾಜ್ಯವನ್ನು ಪ್ರಗತಿಪಥದತ್ತ ನಡೆಸಿದ್ದು ಇತಿಹಾಸ.

ಶರಾವತಿ ಯೋಜನೆಯಿಂದ ಮುಳುಗಡೆಗೊಂಡ ಅರಣ್ಯದಿಂದಾಗಿ ನೆಲೆ ಕಳೆದುಕೊಂಡ ಮಂಗಗಳು ಮತ್ತು ಇತರ ಪ್ರಾಣಿಗಳು ಮಾನವನ ವಸತಿ ಯತ್ತ ಚಲಿಸಿದವು. ಮನುಷ್ಯ ಮತ್ತು ಪ್ರಾಣಿ ಪ್ರಪಂಚದ ಸಂಪರ್ಕ, ಸಂಘರ್ಷ ಅಧಿಕವಾಯಿತು. ಮಂಗನನ್ನು ಕಾಡುತ್ತಿದ್ದ ಈ ಕಾಯಿಲೆಯು ಕಾಡಿನ ಬಳಿ ಹೋದ ಮನುಷ್ಯನಿಗೂ ಅಮರಿಕೊಂಡಿತು, ಮಾರಕ ಎನಿಸತೊಡಗಿತು. ಕಾಡಿನಂಚಿನ ಹಳ್ಳಿಯ ಜನರು ಸೌದೆಗಾಗಿ, ಸೊಪ್ಪಿಗಾಗಿ, ದನ ಕರು ಮೇಯಿಸಲು ಕಾಡನ್ನು ಪ್ರವೇಶಿಸಿದಾಗ ಮಂಗನ ಕಾಯಿಲೆಗೆ ಒಳಗಾಗುವ ಸಾಧ್ಯತೆ ಅಧಿಕ ಆಯಿತು. ಹರಡುವ ಈ ಜ್ವರದ ಸೋಂಕಿಗೆ ಪರಿಣಾಮಕಾರಿಯಾದ ಚಿಕಿತ್ಸೆ ಇಲ್ಲದ ಕಾರಣದಿಂದಾಗಿ ಸಾಯುವ ಸಂಖ್ಯೆಯೂ ಹೆಚ್ಚಳಗೊಂಡಿತು.

ಇಲ್ಲಿ, ನಮ್ಮ ಸರಕಾರದ, ನಮ್ಮನ್ನು ಆಳುವವರ ಪಾತ್ರ, ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. 1957 ರಲ್ಲಿ ಪತ್ತೆಯಾದ ಮಂಗನ ಕಾಯಿಲೆಗೆ ಇಂದಿಗೂ ಸಮರ್ಪಕವಾದ ಚಿಕಿತ್ಸೆ ಇಲ್ಲ ಎಂಬ ವಿಚಾರ ದಿಗ್ಭ್ರಮೆ ಹುಟ್ಟಿಸುತ್ತದೆ. ಪ್ರತಿ ವರ್ಷ ಅಥವಾ ಎರಡು ವರ್ಷಗಳಿಗೊಮ್ಮೆ ಈ ಕಾಯಿಲೆಯಿಂದ ಉಂಟಾಗುವ ಅನಾಹುತ, ಮರಣಗಳು ಸುದ್ದಿಯಾಗುತ್ತವೆ. 1980ರ ದಶಕದಲ್ಲಂತೂ ಮಲೆನಾಡಿನ ಸಾಗರ ಮಾತ್ರವಲ್ಲ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅರಣ್ಯದಂಚಿನ ಹಳ್ಳಿಗಳಲ್ಲಿ ಈ ರೋಗ ಸಾಂಕ್ರಾಮಿಕವಾಗಿ ಹರಡಿ ಹಲವು ಪ್ರಾಣಳಿಗೆ ಎರವಾಗಿತ್ತು. ಪಶ್ಚಿಮಘಟ್ಟದ ಉದ್ದಕ್ಕೂ ಅರಣ್ಯದ ಅಂಚಿನ ಹಳ್ಳಿಗಳಲ್ಲಿ ಪದೇ ಪದೇ ರೋಗ ಕಂಡುಬಂದಿದೆ. ಪ್ರತಿ ಬಾರಿಯೂ ‘ಈ ರೋಗಕ್ಕೆ ಔಷಧವಿಲ್ಲ, ಅಪಾಯಕಾರಿ, ಎಚ್ಚರಿಕೆಯಿಂದಿರಿ’ ಮೊದಲಾದ ಹೇಳಿಕೆಗಳು, ಪ್ರಕಟಣೆಗಳು ಕಂಡುಬರುತ್ತಿವೆ. ಈಚೆಗಂತೂ ಮಂಗಗಳೇ ಇದಕ್ಕೆ ಕಾರಣ ಎಂಬ ಅರ್ಥದ ವರದಿಗಳು ಬಿತ್ತರಗೊಂಡು, ಮನುಷ್ಯ ನಿರ್ಮಿತ ಈ ಸಮಸ್ಯೆಗೆ ಅಮಾಯಕ ಮಂಗಗಳನ್ನು ಹೊಣೆ ಹೊಣೆಗೇಡಿತನ ಕಂಡುಬಂದಿದೆ.

ಹಾಗಾದರೆ ಮಂಗನ ಕಾಯಿಲೆಯನ್ನು ತಡೆಯಲು ಏನು ಮಾಡಬೇಕಿತ್ತು? ಮುಂದೆ ಏನಾಗಬೇಕು? ಈ ನಿಟ್ಟಿನಲ್ಲಿ ಸರಕಾರದ ಇಲಾಖೆಗಳ ಜವಾಬ್ದಾರಿ ಗಹನವಾದದ್ದು. ಈವರೆಗೆ ಅವು ತೋರಿರುವ ನಿರ್ಲಕ್ಷ್ಯ ಅಕ್ಷಮ್ಯ. ಶಿವಮೊಗ್ಗದಲ್ಲಿ ಈ ರೋಗದ ಕುರಿತಾದ ಸಂಶೋಧನೆಗೆಂದು ಕಲ್ಪಿಸಲಾಗಿದ್ದ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳುಗೆಡವಲಾಗಿದೆ, ಸ್ಥಗಿತಗೊಳಿಸಲಾಗಿದೆ. 1957 ರಿಂದ ಬೇಡ, 1980ರ ದಶಕದಿಂದಲಾದರೂ ಪ್ರಚಾರದಲ್ಲಿರುವ ಇಂತಹ ಮಾರಣಾಂತಿಕ ರೋಗವನ್ನು ತಡೆಯಲು ನಿಜಕ್ಕೂ ನಮ್ಮ ಸರಕಾರಕ್ಕೆ ಅಸಾಧ್ಯವಾಗಿತೇ? ಲಸಿಕೆ ಕಂಡು ಹಿಡಿಯುವ ಕೆಲಸ ಬಿಡಲಿ, ಕನಿಷ್ಠ ಈ ರೋಗ ವ್ಯಕ್ತಿಗೆ ತಗುಲಿದೆಯೇ ಇಲ್ಲವೇ ಎಂದು ತ್ವರಿತವಾಗಿ ಪತ್ತೆ ಹಚ್ಚುವ ವ್ಯವಸ್ಥೆಯನ್ನು ಇನ್ನಾದರೂ ನಮ್ಮ ಆರೋಗ್ಯ ಇಲಾಖೆ ಮಾಡಬಹುದಲ್ಲ?

ಮಂಗನ ಕಾಯಿಲೆಯ ರಕ್ತ ಪರೀಕ್ಷೆಯನ್ನು ಪೂನಾದ ಲ್ಯಾಬೋರೇಟರಿಯಲ್ಲಿ ಮಾಡಿಸುವ ಪದ್ದತಿ ಈಗ ಇದೆ. ಸಾಗರ ಸುತ್ತಮುತ್ತಲಿನ ಹಳ್ಳಿಯ ಜನರು ಜ್ವರ ಬಂದ ಕೂಡಲೇ ಭಯಭೀತರಾಗಿ ಹೋಗುವುದು ದೂರದ ಕರಾವಳಿಯಲ್ಲಿರುವ ಮಣಿಪಾಲಕ್ಕೆ! ಹತ್ತಿರದ ತಾಲೂಕು ಕೇಂದ್ರದ ಸಾಗರ ಅಥವಾ ಜಿಲ್ಲಾ ಕೇಂದ್ರವಾದ ‘ಮಲೆನಾಡಿನ ಹೆಬ್ಬಾಗಿಲು’ ಆಗಿರುವ ಅಲ್ಲ . ಏಕೆಂದರೆ, ಅಲ್ಲೆಲ್ಲೂ ಮಂಗನ ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆಯೇ ಅಭಿವೃದ್ದಿಗೊಂಡಿಲ್ಲ. ಸಾಗರದಿಂದ ಸುಮಾರು 150 ಕಿ ಮೀ ದೂರದ ಮಣಿಪಾಲದ ಖಾಸಗಿ ಆಸ್ಪತ್ರೆಗಳಲ್ಲಿ ಸೇರ್ಪಡೆಗೊಂಡ ಜನರಲ್ಲಿ ಹಲವರು ಗುಣಮುಖರಾಗಿ ತಮ್ಮ ಹಳ್ಳಿಗೆ ವಾಪಸ್ ಆಗಿದ್ದಾರೆ. ಇನ್ನು ಕೆಲವರು ಆ ರೋಗಕ್ಕೆ ಬಲಿಯಾಗಿದ್ದಾರೆ.

ಮಲೆನಾಡಿನ ಗ್ರಾಮೀಣರನ್ನು ಕಾಡುತ್ತಿರುವ ಮಂಗನ ಕಾಯಿಲೆ ತಡೆಯಲು, ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ಜವಾಬ್ದಾರಿ ಸರಕಾರದ ಅಂಗ ಸಂಸ್ಥೆಗಳ ಮೇಲಿದೆ. ವರ್ಷ ಅಥವಾ ಎರಡು ವರ್ಷಗಳಿಗೊಮ್ಮೆ ಮರುಕಳಿಸುವ ಈ ರೋಗವನ್ನು ಧೈರ್ಯವಾಗಿ ಎದುರಿಸಲು ಹಳ್ಳಿಯ ಜನರಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ಮಾಡಬೇಕು. ಶಿವಮೊಗ್ಗದಲ್ಲೋ, ಸಾಗರದಲ್ಲೋ ಸುಸಜ್ಜಿತ ಸಂಶೋಧನಾ ಕೇಂದ್ರವನ್ನು ಆರಂಭಿಸುವ ಮೂಲಕ, ಸರಕಾರ ಆ ಭಾಗದ ಜನರಿಗೆ ಬೆಂಬಲವಾಗಿ ನಿಲ್ಲಬೇಕಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close