About Us Advertise with us Be a Reporter E-Paper

ಸಿನಿಮಾಸ್

ಬೆಂಗಳೂರಿನ ಬಸವನಗುಡಿಯ ಲಂಬೋದರನಿಗೆ ಎಲ್ಲರೂ ಜೈ ಅನ್ನಿ

ಮಠ ಖ್ಯಾತಿಯ ಗುರು ಪ್ರಸಾದ್, ಯೋಗಿಯ ಬಗ್ಗೆ ಮಾತನಾಡುತ್ತಾ ‘ಮುಂದೊಂದು ದಿನ ಈತ ದೊಡ್ಡ ನಟನಾಗಿ ಬೆಳೆಯುತ್ತಾನೆ, ಅದಕ್ಕೆ ಬೇಕಿರುವ ಕೌಶಲಗಳು ಇವನಲ್ಲಿವೆ’ ಎಂದಿದ್ದರು. ದಶಕದ ಸಿನಿ ಜರ್ನಿಯಲ್ಲಿ ಯೋಗಿ ಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ಒಂದಿಷ್ಟು ಸಿನಿಮಾಗಳು ಸೋತಿವೆ ನಿಜ ಆದರೆ ಯೋಗಿ ತಮ್ಮ ಪಾತ್ರ ನಿರ್ವಹಣೆಯಲ್ಲಿ ಎಲ್ಲೂ ಸೋತಿಲ್ಲ. ಇದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾ, ಮುಂದಿನ ಹೆಜ್ಜೆಗಳನ್ನು ಎಚ್ಚರಿಕೆಯಿಂದ ಇಡುತ್ತೇನೆ. ಇದೋ ‘ಲಂಬೋದರ’ನಿಂದಲೇ ಅದರ ಆರಂಭ ಎನ್ನುತ್ತಾ ತಮ್ಮ ಸಿನಿಮಾ ಬಗ್ಗೆ ವಿಶ್ವವಾಣಿ ಸಿನಿಮಾಸ್ ಜತೆಗೆ ಮಾತನಾಡಿದ್ದಾರೆ

ಲಂಬೋದರ ಬಿಡುಗಡೆ ಹೊಸ್ತಿಲಿನಲ್ಲಿದ್ದೀರಿ, ತಳಮಳ ಹೇಗಿದೆ?
ನಾವು ಎಂಥದ್ದೇ ಸಿನಿಮಾ ಅದು ಬಿಡುಗಡೆಯಾಗಿ ಜನರು ಸೂಪರ್ ಅನ್ನುವವರೆಗೂ ಸಣ್ಣ ಭಯ ಇದ್ದೇ ಇರುತ್ತದೆ. ಈಗ ಕೂಡಾ ನನ್ನ ಸಿನಿಮಾವನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ತುಂಬಿದ ಭಯ ಇದೆ. ಪರೀಕ್ಷೆ ಬರೆದಾಗಿದೆ, ರಿಸಲ್‌ಟ್ ಬರುವುದಷ್ಟೇ ಬಾಕಿ.

ಸಿನಿಮಾದ ಟ್ರೇಲರ್ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ, ನಿರೀಕ್ಷೆಯನ್ನು ಹುಟ್ಟುಹಾಕಿದೆ, ಇದರ ಬಗ್ಗೆ ಏನು ಹೇಳ್ತಿರಾ?
ಸಿದ್ಲಿಂಗು ಸಿನಿಮಾ ಇಷ್ಟಪಟ್ಟವರಿಗೆ ಈ ಸಿನಿಮಾ ಕೂಡಾ ಇಷ್ಟವಾಗುತ್ತದೆ ಎಂಬ ನಿರೀಕ್ಷೆ ಆರಂಭದಿಂದಲೂ ಇತ್ತು. ನೋಡಿ ಜನರು ಒಳ್ಳೆ ಮಾತುಗಳನ್ನಾಡುವಾಗ ನಮ್ಮ ಭರವಸೆ ಹೆಚ್ಚಿತು.

ಸಿನಿಮಾದ ಗೆಲುವಿನ ಬಗ್ಗೆ ನಿಮ್ಮ ಭರವಸೆ ಏನು ?
ನಮ್ಮಲ್ಲಿ ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳು ಕಡಿಮೆ. ಇಂಥದೊಂದು ಪ್ರಯತ್ನ ಈ ಲಂಬೋದರ. ಈ ಸಿನಿಮಾ ನೋಡುವಾಗ ಪ್ರತಿ ದೃಶ್ಯವೂ ನನ್ನ ಜೀವದಲ್ಲೇ ನಡೆದಿದೆ, ಅಥವಾ ಹೀಗೊಬ್ಬ ನನ್ನ ಫ್ರೆಂಡ್ ಇದ್ದ ಎಂದು ಪ್ರೇಕ್ಷಕನಿಗೆ ಅನ್ನಿಸುತ್ತದೆ. ಇದರ ಕತೆಯನ್ನು ಎಲ್ಲೋ ಎಸಿ ರೂಮ್‌ನಲ್ಲಿ ಕುಳಿತು ಬರೆದಿಲ್ಲ. ಇಡೀ ಸಿನಿಮಾ ಒಂದಿಷ್ಟು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಮಾಡಿದ್ದು. ಹಾಗಾಗಿ ಜನರಿಗೆ ಬೇಗ ಕನೆಕ್‌ಟ್ ಆಗುತ್ತದೆ. ಆ್ಯಕ್ಷನ್ ಸಿನಿಮಾಗಳನ್ನು ನಾನೂ ಮಾಡಿದ್ದೇನೆ. ಇದು ಎಂಟರ್‌ಟೈನರ್, ಆದರೆ ಎಲ್ಲರಿಗೂ ಕನೆಕ್‌ಟ್ ಆಗುವುದಿಲ್ಲ, ಯಾರೂ ಯಾವಾಗಲೂ ಹೊಡೆದಾಟ ಮಾಡುತ್ತಾ ಇರುವುದಿಲ್ಲ. ಲಂಬೋದರನಂಥ ಪಾತ್ರಗಳು ನಮ್ಮ ನಿಮ್ಮ ನಡುವೆ ಸಾಕಷ್ಟು ಇರುತ್ತವೆ. ನಮ್ಮೆಲ್ಲರೊಳಗಿನ ಕತೆಯನ್ನೇ ತೆಗೆದುಕೊಂಡು ಸಿನಿಮಾ ಮಾಡಿರುವುದರಿಂದ ಇದು ಪ್ರೇಕ್ಷಕರಿಗೆ ಹತ್ತಿರವಾಗುತ್ತದೆ ಎಂಬ ನಂಬಿಕೆ ನನ್ನದು.

ನಿರ್ದೇಶಕರ ಜತೆ ಕೆಲಸ ಮಾಡಿದ ಅನುಭವ ಹೇಗಿತ್ತು?
ಅವರಿಗಿದು ಮೊದಲನೇ ‘ಕಾಲಾಯ ತಸ್ಮೈ ನಮಃ’ ಸಿನಿಮಾದಲ್ಲಿ ಇವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇವರು ಕತೆ ಹೇಳಲು ಬಂದಾಗ, ಅಂಥದ್ದೇ ಯಾವುದೋ ಒಂದು ಫುಲ್ ಆ್ಯಕ್ಷನ್ ಸಿನಿಮಾದ ಕತೆ ಹೊತ್ತು ಬಂದಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ಅವರು ಒಂದು ಹೊಸ ರೀತಿಯ ಕತೆಯನ್ನು ತಂದಿದ್ದರು, ಕತೆ ಕೇಳಿದ ತಕ್ಷಣ ನಾನು ಸಿನಿಮಾ ಮಾಡಲು ಒಪ್ಪಿದೆ. ನನಗೆ ಅಂದು ಏನು ಹೇಳಿದ್ದರೋ ಅದನ್ನೇ ಹಾಗೇ ತೆರೆಯ ಮೇಲೆ ತಂದಿದ್ದಾರೆ. ತಲೆಯ ಒಳಗಷ್ಟೇ ಇದ್ದರೆ ಸಾಲದು ಅದನ್ನು ತೆರೆಯ ಮೇಲೆ ತರುವ ಬುದ್ಧಿವಂತಿಕೆ ಬೇಕು, ಅದು ಇವರಿಗಿದೆ.

ಲಂಬೋದರ ಬಗ್ಗೆ ಹೇಳಿ
ತುಂಟ ತರ್ಲೆ ಹುಡುಗ ಅವನು. ಎಲ್ಲರೊಳಗೂ ಇರುವಂಥ ವಯೋ ಸಹಜ ಕುತೂಹಲಗಳು ಅವನಲ್ಲಿಯೂ ಇರುತ್ತದೆ. ಸ್ಕೂಲು ಕಾಲೇಜು ಮುಗಿದು ಇನ್ನೇನು ಕೆಲಸಕ್ಕೆ ಸೇರಬೇಕು ಎನ್ನುವಷ್ಟರಲ್ಲಿ, ಅವನೇ ಮಾಡಿಕೊಂಡ ತಪ್ಪಿಗೆ ಒಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದನ್ನು ಅವನು ಹೇಗೆ ಎದುರಿಸುತ್ತಾನೆ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕು. ಮಕ್ಕಳು ತಪ್ಪು ಮಾಡಿದಾಗ ಬೇರೆಯವರಿಗಿಂತ ಮೊದಲು ಅದನ್ನುವಿರೋಧಿಸುತ್ತಾರೆ. ಅದನ್ನು ಕೇಳುವ ಮನಸ್ಥಿತಿಯಲ್ಲಿ ಅವರು ಇರುವುದಿಲ್ಲ. ಇದು ಎಂತಹ ಸಂಘರ್ಷಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ನಮ್ಮ ಸಿನಿಮಾದಲ್ಲಿ ಕಟ್ಟಿಕೊಟ್ಟದ್ದೇವೆ.

ಪೊರಕೆಯಲ್ಲಿ ಏಟು ತಿಂದಿದ್ದೀರಾ.. ಹೇಗಿತ್ತು ಈ ಶೂಟಿಂಗ್ ಅನುಭವ
ನಾನು ಮನೆಯಲ್ಲಿ ಒದೆ ತಿಂದಿದ್ದು ಕಡಿಮೆ. ಒಮ್ಮೆ ಯಾವಾಗಲೋ ನಮ್ಮಮ್ಮ ಬೆಲ್‌ಟ್ನಲ್ಲಿ ಹೊಡೆದಿದ್ದರು. ಆದರೆ ಯಾವತ್ತೂ ಪೊರಕೆ ಚಪ್ಪಲಿಯಲ್ಲಿ ಎಲ್ಲಾ ಏಟು ತಿಂದಿರಲಿಲ್ಲ. ಸಿನಿಮಾ ಅಂತ ಬಂದಾಗ ನಾವು ಆ ಪಾತ್ರ ಏನು ಕೇಳುತ್ತದೆಯೋ ಅದನ್ನೆಲ್ಲಾ ಕೊಡಬೇಕು. ನಮ್ಮ ಆಚೆ ಇಡಬೇಕು. ಆಗ ಮಾತ್ರ ಒಳ್ಳೆಯ ಸಿನಿಮಾ ಕೊಡಲು ಸಾಧ್ಯ. ನಿರ್ದೇಶಕರು ‘ಸಿನಿಮಾದಲ್ಲಿ ಬೇಕಿತ್ತು, ನೀವು ಒಪ್ಪಿದರೆ ಮಾತ್ರ ಮಾಡಿಸುತ್ತೇನೆ’ ಎಂದರು. ನಾನು ಒಪ್ಪದೇ ಇರಲು ಕಾರಣವಿರಲಿಲ್ಲ, ನಾನೇ ಆ ಪಾತ್ರದ ತಾಯಿಯಾಗಿದ್ದರೆ ಹಾಗೆಯೇ ಮಾಡುತ್ತಿದ್ದೆ ಅನ್ನಿಸುತ್ತದೆ. ಇಲ್ಲಿ ನನ್ನ ತಾಯಿ ಪಾತ್ರ ಮಾಡಿರುವ ಅರುಣ ಬಾಲರಾಜ್ ಒಂದೇ ಟೇಕ್‌ನಲ್ಲಿ ಮುಗಿಸಿದರು. ಸೀನ್ ಮುಗಿದ ನಂತರ ಪೆಟ್ಟಾಯಿತಾ ಎಂದು ಪದೇ ಪದೇ ಬಂದು ಸಾರಿ ಕೇಳುತ್ತಿದ್ದರು. ಇದೆಲ್ಲಾ ಎಂದು ಅನುಭವ.

ಸಿನಿಮಾದಲ್ಲಿ ನಿಮಗೆ ಇಷ್ಟವಾದ ಅಂಶಗಳೇನು?
ಸಿನಿಮಾದಲ್ಲಿ ಒಂದು ಸಂಭಾಷಣೆ ಬರುತ್ತದೆ, ನೀನು ಈವರೆಗೂ ತುಂಬಾ ಹುಡುಗಿಯರ ಮೇಲೆ ಆಸೆ ಪಟ್ಟಿದ್ದೀಯ, ಆದರೆ ಯಾರನ್ನೂ ಪ್ರೀತಿಸಿಲ್ಲ ಎಂದು. ಮತ್ತೊಂದು ಕಡೆ, ಲಂಬೋದರನಿಗೆ ಅನ್ನಿಸುತ್ತದೆ, ನನ್ನ ತಾಯಿ ಕೂಡಾ ಒಂದು ಕಾಲದದಲ್ಲಿ ಹುಡುಗಿಯಾಗಿದ್ದಳು, ಎಲ್ಲರೊಳಗೂ ಒಬ್ಬ ತಾಯಿ ಇರುತ್ತಾಳೆ ಅವಳನ್ನು ಗೌರವಿಸಬೇಕು. ಹೀಗೆ ಸಂದರ್ಭಕ್ಕೆ ತಕ್ಕ ಒಂದಿಷ್ಟು ಸಂಭಾಷಣೆಗಳು ಬರುತ್ತವೆ. ಇದು ನಿಮ್ಮನ್ನು ಕಾಡದೇ ಬಿಡದು.

ಲಂಬೋದರನ ಮೂಲಕ ಏನು ಹೊರಟಿದ್ದೀರಿ?
ಈ ಸಿನಿಮಾ ಕತೆ ಮಾಡುವಾಗಲೇ ನಾವು ಅಂದುಕೊಂಡಿದ್ದು, ನಾನು ಹೇಳುವುದು ಪ್ರೇಕ್ಷಕ ಕೇಳುವುದು ಆಗಬಾರದು. ಅವರ ಮನಸ್ಸಿನೊಳಗೆ ಒಂದಿಷ್ಟು ಆಲೋಚನೆ ಹುಟ್ಟಬೇಕು. ಇದೇ ಕಾರಣಕ್ಕೆ ಇಡೀ ಸಿನಿಮಾ ನೋಡುವಾಗ ಪ್ರತಿ ದೃಶ್ಯವೂ ಪ್ರೇಕ್ಷಕನ ಬದುಕಿನಲ್ಲಿಯೂ ನಡೆದಿದೆ ಅನ್ನಿಸಬೇಕು ಅಂಥ ದೃಶ್ಯಗಳನ್ನೇ ಹೆಣೆದು ಸಿನಿಮಾ ಮಾಡಿದ್ದೇವೆ. ಹಾಗಾಗಿ ನಾವು ಏನೂ ಹೇಳುವುದಿಲ್ಲ, ಸಿನಿಮಾದಿಂದ ನನ್ನಲ್ಲಿ ಏನು ಬದಲಾವಣೆ ಆಯಿತು ಎನ್ನುವುದನ್ನು ಪ್ರೇಕ್ಷಕ ಹೇಳಬೇಕು.

ಯೋಗಿ ಸಿನಿಗ್ರಾಫ್‌ನಲ್ಲಿ ಒಂದಿಷ್ಟು ಸಿನಿಮಾಗಳು ಗೆಲುವು ಪಡೆಯಲಿಲ್ಲ, ಇದಕ್ಕೆ ಕಾರಣವೇನು?
ಸೋಲು ಗೆಲುವು ನಮ್ಮ ಕೈಯಲ್ಲಿ ಇರುವುದಿಲ್ಲ. ನನ್ನ ಪ್ರಯತ್ನವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಸಿನಿಮಾ ಕತೆ ಹೇಳುವಾಗ ಹೇಳಿದ್ದನ್ನೇ ತೆರೆಯ ಮೇಲೆ ತಂದರೆ ಸಿನಿಮಾ ನಿಜವಾಗಿಯೂ ಜನರಿಗೆ ಇಷ್ಟವಾಗುತ್ತದೆ. ಆದರೆ ಅದು ಸಾಧ್ಯವಾಗದಿದ್ದಾಗ ಸಿನಿಮಾ ಸೋಲುತ್ತದೆ. ಯೋಗಿ ನೀನು ಇಲ್ಲಿ ತಪ್ಪು ಮಾಡಿದ್ದೀಯಾ ಎಂದು ತೋರಿಸಿಕೊಟ್ಟರೆ ಅದನ್ನು ಖಂಡಿತ ತಿದ್ದಿಕೊಳ್ಳುತ್ತೇನೆ. ಉಳಿದಿದ್ದು ನನ್ನ ಕೈ ಮೀರಿದ ವಿಚಾರ.

ಇಷ್ಟು ದಿನದಲ್ಲಿ ನೀವು ಕಲಿತ ?
ಲಂಬೋದರನಿಂದಲೇ ಆ ಬದಲಾವಣೆಯನ್ನು ನೀವು ಗಮನಿಸುತ್ತೀರಾ. ನನಗೆ ಹೊಂದಿಕೆಯಾಗುವ ಪಾತ್ರಗಳನ್ನಷ್ಟೇ ನಾನು ಮಾಡುತ್ತೇನೆ. ಒಮ್ಮೆಲೆ ನೂರಾರು ಜನರಿಗೆ ಹೊಡೆಯುವಂಥ ಲಾಜಿಕ್ ಇಲ್ಲದ ಕತೆಗಳನ್ನು ಮಾಡುವುದಿಲ್ಲ. ಎಲ್ಲರೂ ಇಷ್ಟ ಪಡುವಂಥ ಪಾತ್ರಗಳನ್ನಷ್ಟೇ ಮಾಡುತ್ತೇನೆ. ಆ್ಯಕ್ಷನ್ ಸಿನಿಮಾವಾದರೂ ನನಗೆ ಹೊಂದಿಕೆಯಾಗುವಂಥ ಕತೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇನೆ.

Tags

Related Articles

Leave a Reply

Your email address will not be published. Required fields are marked *

Language
Close