About Us Advertise with us Be a Reporter E-Paper

ಯಾತ್ರಾ

ಪ್ರವಾಸದಲ್ಲೊಂದು ಕನ್ನಡಭಾವ… ಭಾಷೆಗೆ ಭಾಷೆ ಶತ್ರುವಲ್ಲ, ಹೃದಯಗಳ ಹೊಲಿಯುವ ಸೂಜಿದಾರ..

- ಎಸ್.ಪಿ.ವಿಜಯಲಕ್ಷ್ಮಿ

ಕಿವಿಗೆ ತಾಗುವಾಗ, ಏನೊ ನೆಪದಲ್ಲಿ ಮುಂದಿನ ಮಾತು ಕೇಳಿಸಿಕೊಳ್ಳದೆ ಹೊರಟೇ ಹೋಗಿದ್ದರು, ನನ್ನ ಮಾತುಗಳನ್ನೆಲ್ಲ ನನ್ನೊಳಗೇ ಉಳಿಸಿ… ಹೀಗೆಂದ ಮಾತ್ರಕ್ಕೆ ಒಬ್ಬಿಬ್ಬರೊಂದಿಗಿನ ಅನುಭವವೇ ಬದುಕಲ್ಲ. ಬಹಳಷ್ಟು ಮರಾಠಿಗರು ತುಂಬ ವಿಶ್ವಾಸ, ಪ್ರೀತಿಯಿಂದಲೇ ಸಖ್ಯ ಬೆಳೆಸಿ, ಈಗಲೂ ಬೆಂಗಳೂರಿಗೆ ಬಂದವರು ಮನೆಗೆ ಭೇಟಿಕೊಡುತ್ತಾರೆ.

ಐದು ವರ್ಷದ ಹಿಂದಿನ ಮಾತು. ರಷ್ಯಾ-ಸ್ಕಾಂಡಿನೇವಿಯ ಪ್ರವಾಸದ ಸಮಯ. ನಾವು ಸಾಮಾನ್ಯವಾಗಿ ಪ್ಯಾಕೇಜ್ ಗ್ರೂಪಿನಲ್ಲೇ ಪ್ರವಾಸ ಮಾಡುವ ಹವ್ಯಾಸ. ಇದು ಬಜೆಟ್ ಮತ್ತು ತೊಂದರೆ, ಶ್ರಮರಹಿತ ಎನ್ನುವುದೇ ಪ್ರಮುಖ ಕಾರಣ. ಕಂಪೆನಿ ಮುಂಬೈ ಮೂಲದ್ದಾದ್ದರಿಂದ ಗುಂಪಿನಲ್ಲಿ ಮರಾಠೀ ಭಾಷಾ ಮಂದಿಯೇ ಹೆಚ್ಚು. ಈ ಬಾರಿಯೂ, ಕನ್ನಡಿಗರು ಕೇವಲ ನಾಲ್ಕು ಮಂದಿ. ನಮಗೆ ತಿಳಿದಿದೆ ಗಡಿಯ ವಿಚಾರ ಬಂದಾಗೆಲ್ಲ ನೆರೆಯವರೊಂದಿಗೆ ತಕರಾರು, ಧುಸುಮುಸು, ಒಂದಿಷ್ಟು ತಳಮಳ, ಹಾರಾಟ ಹೋರಾಟ ಕನ್ನಡನಾಡಿಗೆ ಇದ್ದಿದ್ದೇ. ಆದರೆ, ಇದು ಪ್ರವಾಸಿಗರಾದ ನಮಗೂ ಪುಟ್ಟ ಸವಾಲಾಗಿತ್ತೆನ್ನುವುದು ಖೇದದ ಸಂಗತಿ.

ಇದು ಗಡಿಯಲ್ಲ, ಗುಡಿಯಲ್ಲ, ಭಾಷೆ-ನೆಲದ ತಿಕ್ಕಾಟದ ಉರಿಗಳು ಕೆರಳುವ ವೇದಿಕೆಯೂ ಅಲ್ಲ, ಬಂದಿರೋದು ಲೋಕದಂದವ ನೋಡಕ್ಕೆ, ನೋಡಿ ಅರಳುವುದಕ್ಕೆ, ಸಾದ್ಯವಿದ್ದರೆ ಒಂದಿಷ್ಟು ಬೆಳೆವುದಕ್ಕೆ. ಊಹ್ಞೂಂ, ಅದು ಹೇಗೊ ಅಗತ್ಯವಿಲ್ಲದ ಸಣ್ಣದೊಂದು ಕೆರಳಿಕೆ ಒಂದಿಬ್ಬರಲ್ಲಾದರೂ ಹೆಡೆಯೆತ್ತಿಬಿಡುತ್ತದೆ. ಹೋರಾಟಗಳು ರಾಜಕೀಯ ನೆಲೆಯಲ್ಲಿರಲಿ. ಕಾನೂನು ಸಮಸ್ಯೆಗಳ ಸತ್ಯಾಸತ್ಯತೆಯನ್ನು ನಿರ್ಧರಿಸುತ್ತವೆ. ನಾನು ಕನ್ನಡ, ನೀನು ತಮಿಳು, ಅವಳು ಮರಾಠಿ, ಮಲೆಯಾಳಿ ಎಂದು ನಾವ್ಯಾಕೆ ಸುಖಾಸುಮ್ಮನೆ ಮುಖ ಬಿಮ್ಮಗಿಟ್ಟುಕೊಳ್ಳುವುದು. ಗಡಿ-ಭಾಷೆಯಾಚೆ ಅರಳುವ ಹಾದಿಯಲ್ಲಿ ಹೊರಟಾಗ, ನಾವೆಲ್ಲರೂ ಭಾರತೀಯರಲ್ಲವೇ? ಹೀಗೆ ಯೋಚಿಸುವಂತೆ ಮಾಡಿದ್ದು ಒಂದೆರಡು ಕಹಿ ಪ್ರಸಂಗಗಳು..!

ನಮ್ಮ ಸಹಪ್ರವಾಸಿಗ ಆ ದಿನ ಹಿಡಿದುಬಂದ ಬ್ಯಾಗಿನ ಬಣ್ಣ ಕೆಂಪು-ಹಳದಿಯಾಗಿತ್ತು. ಅವು ನನ್ನಲ್ಲಿ ಭಾಷಾ ಆರ್ದ್ರತೆಯ ಸೆಲೆ ಒಡೆದೇಬಿಟ್ಟವು. ‘ಓ ಕನ್ನಡದ ಬಾವುಟ..’ ಹೀಗೊಂದು ಸಂಭ್ರಮದ ಉದ್ಗಾರ ನನ್ನ ತುಟಿಯಿಂದ ಅವರಲ್ಲಿ ಕೆರಳಿಕೆ ಕಂಡಿತು. ‘ವ್ಹಾಟ್, ಕನ್ನಡದ ಬಾವುಟ..?’ ಸಂಶಯ, ಅಸಹನೆ, ಅಪನಂಬಿಕೆ ಒಗ್ಗೂಡಿದ ಪ್ರತಿಕ್ರಿಯೆ ಅದಾಗಿತ್ತು. ಮಾತು ಹಿಂದಿಯಲ್ಲಿ ಮುಂದುವರೆಯಿತು, ‘ಹೌದು, ಕೆಂಪು-ಹಳದಿ ಕರ್ನಾಟಕ ಬಾವುಟದಲ್ಲಿರೋ ಬಣ್ಣಗಳು’ ನಾನೆಂದೆ. ‘ಅಂದರೆ, ಕರ್ನಾಟಕಕ್ಕೇ ಬಾವುಟ ಇದೆಯಾ?’, ‘ಹೌದು..’ ,‘ಮೈ ಗಾಡ್, ಇದು ಅನ್ಯಾಯ’ ‘ಯಾಕೆ, ಅರ್ಥವಾಗಲಿಲ್ಲ’, ‘ದೇಶಕ್ಕೊಂದೇ ಬಾವುಟ, ನ್ಯಾಷನಲ್ ಫ್ಲಾಗ್ ಇರುವಾಗ, ಪ್ರತ್ಯೇಕ ಧ್ವಜ ಹೊಂದಿರೋದು ದೇಶದ್ರೋಹವಾಗತ್ತೆ. ಭಾರತದ ಸಾರ್ವಭೌಮತ್ವವನ್ನು ಧಿಕ್ಕರಿಸಿದಂತಾಗುತ್ತೆ..’ ಭಾಷಣ ಚೂರು ಭೀಷಣವಾಗಿತ್ತು.

ಹೀಗೊಂದು ವಾದ ಅಂದಾಜಿಲ್ಲದೆ ನನಗೆ ದಿಗ್ಭ್ರಮೆಯಾಯಿತು. ನಿಧಾನಕ್ಕೆ, ‘ವೈವಿಧ್ಯತೆಯಲ್ಲೂ ಏಕತೆ ಭಾರತದ ಮಂತ್ರ. ನಿಮ್ಮಂತೆ ನಮಗೂ ಭಾರತವೇ ತಾಯಿ. ನಮ್ಮ ಕನ್ನಡ ಪ್ರೀತಿಗೆ, ಕನ್ನಡ ಅಸ್ಮಿತೆಗೆ, ಎದೆಯೊಳಗಣ ಭಾಷಾ ಆರ್ದ್ರತೆಗೆ ಹೀಗೊಂದು ರೂಪ ಕೊಟ್ಟಿದ್ದೇವೆ. ನಮ್ಮ ಸಂಸ್ಕೃತಿಯನ್ನು ಹೇಳುವ ಅರಿಶಿನ-ಕುಂಕುಮವೇ ಈ ಬಣ್ಣಗಳ ಸಂಕೇತ. ಕನ್ನಡ ಕಾರ್ಯಕ್ರಮಗಳಲ್ಲಿ, ಕನ್ನಡದ ಅಳಿವು-ಉಳಿವಿನ ಪ್ರಶ್ನೆಗಳಲ್ಲಿ, ಕನ್ನಡ ಸಂಭ್ರಮಿಸುವಲ್ಲಿ ಇದರ ಬಳಕೆಯಾಗುತ್ತಿದೆ. ರಾಷ್ಟ್ರಧ್ವಜಕ್ಕೆ ಪರ್ಯಾಯವಾಗಿ ಅಲ್ಲವೇ ಅಲ್ಲ. ಕೇಸರಿ-ಬಿಳಿ-ಹಸಿರು ನಮ್ಮ ಮೊದಲ ಅಸ್ಮಿತೆ, ಕೆಂಪು-ಹಳದಿ ಹುಟ್ಟಿದ ಅಸ್ಮಿತೆ ಅಷ್ಟೆ…’ ಎನ್ನುವಾಗ ಕಣ್ಣಂಚಲ್ಲಿ ನೀರು ಕಟ್ಟಿತ್ತು. ಅವರ ಮುಖವೇನೂ ಸಡಿಲಾಗಲಿಲ್ಲ. ‘ಐ ಡೋಂಟ್ ಅಗ್ರೀ’ ಎಂದರು. ಮಾತು ತಣ್ಣನೆಯ ಕಿಸಿರಲ್ಲಿ ಮುಗಿಯಿತು ಪೋರ್ಚುಗಲ್ ಪ್ರವಾಸ.

ಬೆಂಗಳೂರಿಗೆ ಬಂದವರು ಮನೆಗೂ ಬರುತ್ತಾರೆ..!
ಮುಂಬೈನ ಮಹಿಳೆಯೊಬ್ಬರು ನನ್ನೊಂದಿಗೆ ಮರಾಠಿಯಲ್ಲೇ ಮಾತಾಡಲು ಯತ್ನಿಸುತ್ತಿದ್ದರು. ‘ಮೇಡಂ, ನಂಗೆ ಮರಾಠಿ ಬರಲ್ಲ. ನೀವು ಹೇಳುವುದೇನೂ ಅರ್ಥವಾಗ್ತಿಲ್ಲ. ದಯವಿಟ್ಟು ಹಿಂದಿ ಅಥವಾ ಇಂಗ್ಲೀಷಿನಲ್ಲಿ ಹೇಳಿ’ ನಯವಾಗಿ ಹೇಳಿದೆ. ‘ಯಾಕೆ ನಿಮಗೆ ಮರಾಠಿ ಬರಲ್ವಾ, ಕಲೀಬಹುದಲ್ವಾ..?’
‘ಕಲಿಯಬಾರದೆಂದೇನಿಲ್ಲ, ಅದರ ಅಗತ್ಯ ಬಿದ್ದಿಲ್ಲ. ಹುಟ್ಟಿನಿಂದ ಕರ್ನಾಟಕದಲ್ಲೆ ಇರುವವಳು. ಹೀಗೆ ಬಂದಾಗ ಹೊರರಾಜ್ಯದವರೊಡನೆ ಮಾತಾಡಲು ಹಿಂದಿಯಿದೆ, ಇಂಗ್ಲೀಷ್ ಇದೆ. ಮಹಾರಾಷ್ಟ್ರದಲ್ಲಿರುವ ಸಂದರ್ಭ ಬಂದಿದ್ದರೆ ಖಂಡಿತಾ ಕಲೀತಿದ್ದೆ’ ನಕ್ಕು ಹೇಳಿದೆ. ಅವರ ಮುಖದಲ್ಲಿ ಬಿಗಿಯಿತ್ತು. ತಮಾಷೆಯೆಂದರೆ, ಅವರ ಮಗ ಬೆಂಗಳೂರಿನಲ್ಲಿ ಇಂಜಿನಿಯರ್. ಇವರು ವರ್ಷದಲ್ಲಿ ನಾಲ್ಕು ತಿಂಗಳು ಬೆಂಗಳೂರಿನಲ್ಲಿರುತ್ತಾರಂತೆ.

ತಕ್ಷಣ ಕೇಳಿದೆ, ‘ಹಾಗಾದರೆ, ನಿಮಗೆ ಸ್ವಲ್ಪವಾದ್ರೂ ಕನ್ನಡ ಬರುತ್ತೆ ಅಲ್ವಾ ?’, ‘ನಂಗೆ ಬೆಂಗಳೂರಲ್ಲಿ ತುಂಬಾ ಕಷ್ಟ. ಯಾರಿಗೂ ಮರಾಠಿ ಬರಲ್ಲ. ಹಣ್ಣು, ಹಾಲು ಅಂತ ಅಂಗಡಿಗೆ ಹೋದ್ರೆ ಎಷ್ಟು ಕಷ್ಟವಾಗತ್ತೆ..’ ತಮ್ಮ ಸಂಕಟ(?)ಬಿಚ್ಚಿಡ್ತಾ ಹೋದ್ರು. ಕೇಳಿ ನನ್ನ ತಲೆ ತಿರುಗಿತು. ‘ನೀವು ಕನ್ನಡ ಕಲೀಬಹುದಿತ್ತಲ್ಲ, ವರ್ಷಕ್ಕೆ ನಾಲ್ಕು ತಿಂಗಳು ಬೆಂಗ್ಳೂರಲ್ಲಿರ್ತೀರಾ’ ‘ಓ ಐ ಕೆನಾಟ್..’ ಉತ್ತರ.
‘ಹಾಗಿದ್ರೆ ಅಂಗಡಿಗೆ ಹೋದಾಗ ಹಿಂದಿ, ಇಂಗ್ಳೀಷಿನಲ್ಲಿ ಕೇಳಿ. ನಮ್ಮ ಸೊಪ್ಪು ತರಕಾರಿ ಮಾರೋರೂ ಚೂರುಪಾರು ಈ ಭಾಷೆಗಳ ಮಾತಾಡ್ತಾರೆ. ಮರಾಠಿ ಅವರಿಗೆ ಅನಿವಾರ್ಯತೆಯಲ್ಲ. ಬದುಕಿನ ಪ್ರಶ್ನೆ ಬಂದಾಗ ಯಾರು ಎಲ್ಲಿದ್ರೂ ಅಲ್ಲಿಯ ಭಾಷೆ ಇದ್ರಲ್ಲಿ ಅಹಂ ಬೇಡ. ನಾವು ಕನ್ನಡಿಗರು ಯಾವ ಪಾತ್ರೆಗೆ ಹಾಕಿದ್ರೂ ನೀರಿನಂತೆ ಆ ಆಕಾರಕ್ಕೆ ಹೊಂದ್ಕೊಂಡ್ಬಿಡ್ತೀವಿ. ನಮಗೆ ಯಾವ ಭಾಷೆಯ ಕುರಿತೂ ಅಸಹನೆ ಇಲ್ಲ. ಅನಿವಾರ್ಯವಿದ್ದರೆ ಎಲ್ಲವನ್ನೂ ಕಲೀತೀವಿ. ಆದರೆ, ಭಾಷೆಗೆ ಅವಮಾನವಾಗೋದನ್ನ, ಭಾಷೆ ಕಡೆಗಣಿಸೋದನ್ನ, ನಮ್ಮತನವನ್ನ ಬಲಿಕೊಡೋದನ್ನ ಯಾವ ಭಾಷೆಯವರಾದ್ರೂ ಇಷ್ಟಪಡಲ್ಲ, ನಾವೂ ಅಷ್ಟೆ…’

ಇಷ್ಟು ಹೇಳಲು ತುಟಿಯೊಡೆದಿತ್ತು. ಮೊದಲೆರಡು ವಾಕ್ಯ ಕಿವಿಗೆ ತಾಗುವಾಗ, ಏನೊ ನೆಪದಲ್ಲಿ ಮುಂದಿನ ಮಾತು ಕೇಳಿಸಿಕೊಳ್ಳದೆ ಹೊರಟೇ ಹೋಗಿದ್ದರು, ನನ್ನ ಮಾತುಗಳನ್ನೆಲ್ಲ ಉಳಿಸಿ… ಹೀಗೆಂದ ಮಾತ್ರಕ್ಕೆ ಒಬ್ಬಿಬ್ಬರೊಂದಿಗಿನ ಅನುಭವವೇ ಬದುಕಲ್ಲ. ಬಹಳಷ್ಟು ಮರಾಠಿಗರು ನಮ್ಮೊಡನೆ ತುಂಬ ವಿಶ್ವಾಸ, ಪ್ರೀತಿಯಿಂದಲೇ ಸಖ್ಯ ಬೆಳೆಸಿ, ಈಗಲೂ ಬೆಂಗಳೂರಿಗೆ ಬಂದವರು ಮನೆಗೆ ಭೇಟಿಕೊಡುತ್ತಾರೆ.

ಮರಾಠಿ ಹುಡುಗಿಯ ಕನ್ನಡ ಪ್ರೀತಿ!
ಒಂದು ಪ್ರಸಂಗ ಹೇಳಲೇಬೇಕು.. ಬಿ.ಎ. ಓದುವ ಪುಣೆಯ ಮರಾಠಿ ಹುಡುಗಿ ಮಿತಾಲಿ, ಅವಳಿಗಿಂತ ವಯಸ್ಸಿನಲ್ಲಿ ದೊಡ್ಡವಳಾದ ನನ್ನಲ್ಲಿ ತುಂಬಾ ಪ್ರೀತಿ ಬೆಳೆಸಿಕೊಳ್ಳಲು ಕನ್ನಡವೇ ಕಾರಣವಾಯ್ತು. ಬಸ್ಸಿನಲ್ಲಿ ಈ ಬಾರಿ ಮನರಂಜನೆ ಹಾಡುಗಳು. ನಾನೇ ಬರೆದ ‘ಬಾ ಬಾ..’ ಕವಿತೆ ಹಾಡಿದಾಗ, ರಾಗಕ್ಕೆ ಸೋತವರು ಅನೇಕ, ‘ವಿ ವಾಂಟ್ ಮೀನಿಂಗ್..’ ಕೂಗಿದರು. ಈಗಾಗಲೇ ಈ ಹಾಡು ಕೇಳಿದ್ದ ಮಿತಾಲಿ ತಕ್ಷಣ ಮುಂದೆ ಬಂದವಳೇ, ನನ್ನಿಂದ ಒಂದೊಂದು ಸಾಲನ್ನು ಹಾಡಿಸುತ್ತ, ಅದರರ್ಥ ಇಂಗ್ಲೀಷಲ್ಲಿ ಕೇಳುತ್ತ, ಮರಾಠಿಯಲ್ಲಿ ತರ್ಜುಮೆ ಮಾಡುತ್ತಾ, ಹಾಡು ಮುಗಿದಾಗ, ಅಲ್ಲೊಂದು ಭಾಷೆಯಾಚೆಗಿನ ಬೆಳಕು ಅನೇಕರ ಮುಖದಲ್ಲಿ.. ‘ವಾಹ್, ವ್ಹಾಟ್ ಎ ನೋಬಲ್ ಥಾಟ್…’ ಎಂದು ಮೆಚ್ಚಿ ಚಪ್ಪಾಳೆ ಹೊಡೆದಿದ್ದು ಮರಾಠಿಗರಾದ ಮ್ಯಾನೇಜರ್…! ಇಲ್ಲಿ ಭಾಷೆಯ ಯಾವ ಇರಲಿಲ್ಲ. ಇಷ್ಟೇ ಆಗಿದ್ದರೆ ಇದು ವಿಶೇಷವೇನಿರಲಿಲ್ಲ.

ಸೈಂಟ್‌ಪೀಟರ್ಸ್‌ಬರ್ಗ್‌ನಿಂದ ಮಾಸ್ಕೋಗೆ ರೈಲು ಹತ್ತಿದಾಗ ಮಿತಾಲಿ, ‘ಅಂಕಲ್ ಪ್ಲೀಸ್ ನೀವು ನನ್ನ ಸೀಟಲ್ಲಿ ಕೂತು, ನಿಮ್ಮ ಸೀಟ್ ನನಗೆ ಬಿಟ್ಟುಕೊಡ್ತೀರಾ, ನಾನು ಹಾಡು ಕಲಿಯಬೇಕಿದೆ’ ಎಂದಾಗ ನನ್ನವರಿಗೆ ಸಖೇದಾಶ್ಚರ್ಯ. ನಾಲ್ಕು ಗಂಟೆಗಳು ನನ್ನ ಪಕ್ಕ ಕೂತ ಹುಡುಗಿ, ಹಾಡನ್ನು ಇಂಗ್ಲೀಷಿನಲ್ಲಿ ಬರೆದುಕೊಂಡು, ಪ್ರತಿ ಸಾಲಿನ ಉಚ್ಛಾರಣೆ, ರಾಗ ಹೇಳಿಸಿಕೊಳ್ಳುತ್ತ, ತಿದ್ದಿಕೊಂಡು ಹದ ಮಾಡಿಕೊಳ್ತಾ ನನ್ನಂತೇ ಹಾಡಿ ತೋರಿಸಿಬಿಟ್ಟಳು. ‘ಆಂಟಿ, ಕಾಲೇಜ್ ಸೋಷಿಯಲ್ ದಿನ ನಾನು ಈ ಹಾಡನ್ನೆ ಹಾಡ್ತೀನಿ’ ಪುಣೆಯ ಮರಾಠಿ ಹುಡುಗಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೀಗೆನ್ನುತ್ತ ನನ್ನೆದೆಗೊಳವ ಕಲಕಿ, ಕಣ್ಣಿಂದ ಖುಷಿಯ ಹನಿಯೊಂದನ್ನು ತುಳುಕಿಸಿಯೇಬಿಟ್ಟಳು. ಇಲ್ಲಿ ಗಡಿ, ಗುಡಿ, ನಾಡು, ನೆಲ, ಭಾಷೆಯ ಯಾವ ಹಂಗೂ ಇರಲಿಲ್ಲ. ಒಳಿತೆಲ್ಲವೂ ಇರಲಿ, ಒಳಿತು ಮಾತ್ರ ನನ್ನೆದೆಯ ಹೊಗಲಿ ಎನ್ನುವ ಈ ಸಹಜ ಸಹನೆ ಮಾತ್ರವೇ ನಿಜವಾದ ಮಾನವಪ್ರೇಮ, ವಿಶ್ವಮಾನವ ಚಿಂತನೆಯಾಗಿತ್ತು….!

ಸ್ಮಾರ್ಟ್‌ಫೋನ್ ಇರಲಿಲ್ಲ, ಹೆಚ್ಚು ಸಂಪರ್ಕ ಸಾಧಿಸಲಾಗಲಿಲ್ಲ. ದಿನಗಳು ಕಳೆದಿದ್ದವು. ದಿನ ಫೋನ್ ರಿಂಗಣಿಸಿತ್ತು, ‘ಆಂಟಿ ಮಿತಾಲಿ ಹಿಯರ್… ನಿಮ್ಮ ಹಾಡು ಹಾಡಿದೆ. ಅದು ‘ಗ್ರೇಟ್ ಮೊಮೆಂಟ್’ ಆಗಿತ್ತು…’ ಎನ್ನುತ್ತ ಅರ್ಧಗಂಟೆ ಮಾತಾಡಿದ ಪುಟ್ಟ ಹುಡುಗಿಯ ವಿಶಾಲಹೃದಯದ ಸಂಭ್ರಮ ಕಣ್ಣಿಗೆ ಕಾಣದಿದ್ದರೂ, ಕಿವಿಯಲ್ಲಿ ನಿಚ್ಚಳವಾಗಿ ಕಂಡಿತ್ತು. ‘ಭಾಷೆಗೆ ಭಾಷೆ ಶತ್ರುವಲ್ಲ, ಅದು ಹೃದಯಗಳ ಹೊಲಿಯುವ ಸೂಜಿದಾರ’ ಎಂದು ಪ್ರತಿಪಾದಿಸಿತ್ತು..!

ಈಗಷ್ಟೇ ಕನ್ನಡದ ಹಬ್ಬ ಆಚರಿಸಿದ್ದೀವಿ. ಈ ತಿಂಗಳೆಲ್ಲ ಕನ್ನಡ ಎದೆಯ ತುಂಬ ಭೋರ್ಗರೆವ ನದಿಯಾಗಿ ಬಿಟ್ಟಿರುತ್ತದೆ. ಇದು ಸದಾಕಾಲಕ್ಕೂ ಇರಬೇಕು. ಯಾವ ಭಾಷೆಯ ಕುರಿತೂ ಕಿಸಿರಿಲ್ಲ. ಆದರೆ, ‘ನಮ್ಮ ಅಸ್ಮಿತೆ ಕನ್ನಡ, ಕನ್ನಡದ ಅಸ್ಮಿತೆ ಕರ್ನಾಟಕ, ಇವೆರಡರ ಅಸ್ಮಿತೆ ಕನ್ನಡಿಗ. ನಮ್ಮ ಸಹನೆಯ ಮಂತ್ರ ನಮಗೆ ಮುಳುವಾಗದಿರಲಿ.

Tags

Related Articles

Leave a Reply

Your email address will not be published. Required fields are marked *

Language
Close