About Us Advertise with us Be a Reporter E-Paper

ಅಂಕಣಗಳು

ಭಾಷೆಗಳ ಸೇತುವೆ ಕಟ್ಟಿತೊಂದು ಔಷಧದ ಪೊಟ್ಟಣ!

ಕೇವಲ 30 ವರ್ಷ ಹಿಂದಿನ ಕತೆ. ನಮ್ಮೂರಲ್ಲಿ ಮನೆಮನೆಗೆ ಪೇಪರ್ ಹಾಕಿಸಿಕೊಳ್ಳುವ ಪದ್ಧತಿ ಇರಲಿಲ್ಲ. ಬಸ್ಸಿಂದಿಳಿದ ಮೇಲೆ ಮೂರು ಮೈಲಿ ನಡೆದು ಸೇರಬೇಕಿದ್ದಂಥ ನನ್ನ ಅಜ್ಜೀಮನೆಗಂತೂ ವೃತ್ತಪತ್ರಿಕೆ ಹಾರುವ ತಟ್ಟೆಯಷ್ಟೇ ಪರಕೀಯ ಪ್ರತ್ಯೇಕ ಹೇಳಬೇಕಿಲ್ಲ. ಹಾಗಿದ್ದ ಪರಿಸರದಲ್ಲಿ ಅಕ್ಷರಗಳಿಗಾಗಿ ಹಪಹಪಿಸುತ್ತಿದ್ದ ನಾವು ಕಿರಾಣಿ ಅಂಗಡಿ ಕಿಟ್ಟಪ್ಪ ಬೇಳೆ, ಬೆಲ್ಲಗಳನ್ನು ಕಟ್ಟಿಕೊಡುತ್ತಿದ್ದ ಪೇಪರ್ ತುಣುಕುಗಳನ್ನೇ ಬಿಡಿಸಿ, ಅಲ್ಲಿದ್ದ ಅಕ್ಷರಗಳನ್ನು ಗಬಗಬ ಓದಿಕೊಳ್ಳುತ್ತಿದ್ದೆವು. ಮೂರು ದಶಕಗಳ ಹಿಂದಿನ ಪರಿಸ್ಥಿತಿಯೇ ಹೀಗಾದರೆ ಇನ್ನು 150 ವರ್ಷಗಳಷ್ಟು ಹಿಂದಿನ ಕರ್ನಾಟಕದ ಪರಿಸ್ಥಿತಿ ಹೇಗಿದ್ದಿರಬಹುದು? ಚಿತ್ರದುರ್ಗದ ಒಬ್ಬರು ಯಾವುದೋ ಆಯುರ್ವೇದ ಔಷಧಕ್ಕಾಗಿ ಕಲಕತ್ತೆಯ ಔಷಧ ಭಂಡಾರವೊಂದನ್ನು ಸಂಪರ್ಕಿಸಿದ್ದರು. ಔಷಧ ಪಾರ್ಸೆಲ್ ಆಗಿ ಚಿತ್ರದುರ್ಗಕ್ಕೆ ಬಂತು. ಕಷಾಯ, ಚೂರ್ಣ, ಗುಳಿಕೆಗಳ ಪೆಟ್ಟಿಗೆಯನ್ನು ಭಂಡಾರದವರು ಪೇಪರ್‌ನಲ್ಲಿ ಸುತ್ತಿಟ್ಟಿದ್ದರು. ಆ ಕಾಗದವನ್ನು ನೆಲದ ಮೇಲೆ ಬಿಡಿಸಿಟ್ಟು ತದೇಕಚಿತ್ತದಿಂದ ನೋಡಿದ ಚಿತ್ರದುರ್ಗದ ಹುಡುಗನಿಗೆ ಖುಷಿನಿರಾಶೆಗಳೆರಡೂ ಒಟ್ಟೊಟ್ಟಿಗೆ ಆದವು. ಓದಲು ಪೇಪರ್ ಸಿಕ್ಕಿತಲ್ಲಾ ಎಂಬ ಖುಷಿ; ಓದಲು ಬಾರದ ವಿಚಿತ್ರ ಲಿಪಿಯಲ್ಲಿದೆಯಲ್ಲಾ ಎಂಬ ನಿರಾಶೆ! ಒಂದಿನಿತೂ ಅರ್ಥವಾಗದಿದ್ದರೂ ಆತನಿಗೆ ಆ ಸುರುಳಿ ಸುತ್ತಿದ ಜಿಲೇಬಿ ಲಿಪಿ ಮೋಡಿಮಾಡಿತು. ಇವನ್ನೆಲ್ಲ ಓದಲು ಬರುವಂತಿದ್ದರೆ ಎಷ್ಟು ಚೆನ್ನಿತ್ತು! ಮನಸ್ಸಿನಲ್ಲೇ ಹೇಳಿಕೊಂಡ. ಮಾತ್ರವಲ್ಲ ತನ್ನ ತಡೆಯಲಾರದ ತುಡಿತವನ್ನು ಓರಗೆಯವರಲ್ಲೂ ತೋಡಿಕೊಂಡ. ಎಷ್ಟು ಮುದ್ದಾಗಿದೆ; ಈ ಭಾಷೆಯನ್ನು ನನಗೆ ಓದಲು ಸಾಧ್ಯವಾಗುವಂತಿದ್ದರೆ! ಎಂದು ಆತ ಹೇಳಿದಾಗ ಸಂಬಂಧಿಕರೊಬ್ಬರು, ಅದಕ್ಕೇನಂತೆ! ನಾನೇ ಮುಂದಿನ ವಾರ ಕಲಕತ್ತೆಗೆ ಹೋಗುವವನಿದ್ದೇನೆ. ಈ ಭಾಷೆಯನ್ನು ಕಲಿಯಲು ಸಹಾಯಕವಾಗುವ ಪುಸ್ತಕಗಳನ್ನು ಅಲ್ಲಿಂದ ತಂದುಕೊಡುತ್ತೇನೆ ಎಂದರು. ರೊಟ್ಟಿ ಜಾರಿ ತುಪ್ಪಕ್ಕೆ ಬೀಳುವುದೆಂದರೆ ಇದೇ ತಾನೆ!

ಕಲಕತ್ತೆಗೆ ಹೋದವರು ಮಾತು ತಪ್ಪಲಿಲ್ಲ. ವಾಪಸು ಬರುವಾಗ ಹಲವಾರು ಬಂಗಾಳಿ ಪುಸ್ತಕಗಳನ್ನು ಹೊತ್ತುತಂದು ಈ ಹುಡುಗನ ಉಡಿಗೆ ಹಾಕಿದರು. ಜತೆಗೆ, ಕಲಕತ್ತೆಯಲ್ಲಿ ಆಗ ಪ್ರಚಾರ, ಎರಡನ್ನೂ ಪಡೆದಿದ್ದ ಈಶ್ವರಚಂದ್ರ ವಿದ್ಯಾಸಾಗರರ ವಿಳಾಸವನ್ನೂ ಸಂಪಾದಿಸಿ ತಂದಿದ್ದರು. ಈ ಹುಡುಗ ಭಂಡಧೈರ್ಯ ಆವಾಹಿಸಿಕೊಂಡು ಅವರಿಗೆ ಪತ್ರಿಸಿದ. ನನಗೆ ಬಂಗಾಳಿ ಭಾಷೆ ಕಲಿಯಲೇಬೇಕೆಂಬ ಮಹದಾಸೆ ಹುಟ್ಟಿದೆ. ಹೇಗಾದರೂ ಕಲಿಸಿ. ಆಸಕ್ತಿ, ಶ್ರದ್ಧೆಯಿಂದ ಕಲಿಯುತ್ತೇನೆ ಎಂಬುದು ಪತ್ರದ ಒಕ್ಕಣೆ. ಸರಿ, ಸ್ವತಃ ಈಶ್ವರಚಂದ್ರ ವಿದ್ಯಾಸಾಗರರಿಂದಲೇ ಕರೆಸ್ಪಾಂಡೆನ್‌ಸ್ ಕೋರ್ಸ್ ಪ್ರಾರಂಭವಾಯಿತು! ಪತ್ರದ ಮೂಲಕ ಭಾಷೆಯ ಕಲಿಕೆ! ಅದೆಷ್ಟು ಪತ್ರಗಳನ್ನು ಈತ ಅವರಿಗೆ ಬರೆದನೋ ಅದಕ್ಕೆ ದುಪ್ಪಟ್ಟು ಸಂಖ್ಯೆ ಮತ್ತು ತೂಕದ ಅವರು ಇವನಿಗೆ ಕಳಿಸಿದರು. ಹುಡುಗ ಬಂಗಾಳಿ ವರ್ಣಮಾಲೆ ಕಲಿತು, ಡಿಕ್ಷ್‌ನರಿಯೊಂದನ್ನು ಸಂಪಾದಿಸಿ, ಹಲವಾರು ಉದ್ಗ್ರಂಥಗಳನ್ನು ಹಗಲಿರುಳು ಪಾರಾಯಣ ಮಾಡಿ ಅಂತೂ ಅರ್ಧ ವರ್ಷ ಕಳೆವಷ್ಟರೊಳಗೆ ಭಾಷೆಯ ಮೇಲೆ ತಕ್ಕಮಟ್ಟಿನ ಪ್ರಭುತ್ವ ಸಾಧಿಸಿಯೇಬಿಟ್ಟ. ಈತನ ಪ್ರಗತಿಯನ್ನು ಕಂಡು ಸಂತುಷ್ಟರಾದ ವಿದ್ಯಾಸಾಗರರು ಶಿಕ್ಷಣದ ಅಂತಿಮ ಪರೀಕ್ಷೆ ಎಂಬಂತೆ ತನ್ನದೊಂದು ಕಾದಂಬರಿಯನ್ನು ಆತನಿಗೆ ಕೊಟ್ಟು, ಇದನ್ನು ಬೇಕಾದರೆ ಕನ್ನಡಕ್ಕೆ ಅನುವಾದ ಮಾಡು ಎಂದು ಸಲಹೆ ಕೊಟ್ಟರು. ಸಲಹೆಯಲ್ಲ, ಆಜ್ಞೆ ಎಂಬಂತೆ ಅದನ್ನು ಶಿರಸಾವಹಿಸಿದ ಹುಡುಗ ಕೆಲವೇ ತಿಂಗಳುಗಳಲ್ಲಿ ಅದನ್ನು ಅತ್ಯಂತ ಅಚ್ಚುಕಟ್ಟಾಗಿ ಕನ್ನಡಕ್ಕೆ ತಂದೇಬಿಟ್ಟ. ಪ್ರಕಟವಾಗಿ ವರ್ಷವಾಗುವುದರೊಳಗೆ ಅದು ಮದರಾಸು ವಿಶ್ವವಿದ್ಯಾಲಯದ ಒಂದೆರಡು ಪದವಿ ತರಗತಿಗಳಿಗೆ ಪಠ್ಯವೂ ಆಗಿಬಿಟ್ಟಿತು!

ಹಾಗೆ ಬಂಗಾಲಕ್ಕೂ ಕನ್ನಡನಾಡಿಗೂ ಅಕ್ಷರಗಳ ಸೇತುವೆ ಕಟ್ಟಿದ ಮಹನೀಯರೇ ಬಿಂಡಿಗನವಿಲೆ ವೆಂಕಟಾಚಾರ್ಯರು. ಈಶ್ವರಚಂದ್ರ ವಿದ್ಯಾಸಾಗರರ ಭ್ರಾಂತಿವಿಲಾಸ ಕಾದಂಬರಿಯನ್ನು ಕನ್ನಡಕ್ಕೆ ತಂದಾಗ ವೆಂಕಟಾಚಾರ್ಯರ ವಯಸ್ಸು ಬಹುಶಃ ಇಪ್ಪತ್ತೈದೋ ಆರೋ ಅಷ್ಟೆ. ಭ್ರಾಂತಿವಿಲಾಸ, ಶೇಕ್‌ಸ್ಪಿಯರ್‌ನ ಕಾಮಿಡಿ ಆಫ್ ಎರರ್‌ಸ್ ನಾಟಕದ ರೂಪಾಂತರ. ಅದು ಕಾದಂಬರಿಯಷ್ಟೇ ಅಲ್ಲದೆ ನಾಟಕರೂಪದಲ್ಲೂ ಪ್ರಸಿದ್ಧವಾಗಿತ್ತು. ಅದನ್ನು ಓದಿದಾಗ ವೆಂಕಟಾಚಾರ್ಯರಿಗೆ, ಅಬ್ಬಬ್ಬ! ಎಂಥ ಅದ್ಭುತ ಕಥಾವಸ್ತು! ಈ ಅನನ್ಯ ಕೃತಿ ಕನ್ನಡದ ಕನ್ನಡಿಯಲ್ಲಿ ಪಡಿಮೂಡಲೇಬೇಕು ಎಂಬ ಬಯಕೆ ಹುಟ್ಟಿಕೊಂಡಿತಂತೆ. ಹಗಲಿರುಳು ತಪಸ್ಸಿನಂತೆ ಕೂತು ಆ ಕಾದಂಬರಿಯನ್ನು ಕನ್ನಡಕ್ಕೆ ತಂದ ಮೇಲೆ ಅವರಿಗೆ ಸಾಹಿತ್ಯದ ರುಚಿ ರುಚಿಯಲ್ಲ ಹುಚ್ಚೇ ಹತ್ತಿತೆನ್ನಬೇಕು. ಈಶ್ವರಚಂದ್ರರ ಸೀತಾವನವಾಸ ಮತ್ತು ಶಕುಂತಲಾ ಎಂಬ ಮತ್ತೆರಡು ಕಾದಂಬರಿಗಳು ಅನುವಾದವಾಗಿ ಬಂದವು. ಅದರ ಹಿಂದೆಯೇ ರಮೇಶಚಂದ್ರದತ್ತ, ಶಚೀಶಚಂದ್ರ ಬಾಬು, ಯೋಗೀಂದ್ರನಾಥ ಚಟ್ಟೋಪಾಧ್ಯಾಯ, ಶಾಸ್ತ್ರಿ, ಯೋಗೀಂದ್ರನಾಥ ಬೋಸ್, ನನಿಲಾಲ ವಂದ್ಯೋಪಾಧ್ಯಾಯ ಹೀಗೆ ಹಲವಾರು ಬಂಗಾಳಿ ಸಾಹಿತಿಗಳನ್ನು ಕನ್ನಡಕ್ಕೆ ಸೆಳೆದುತಂದರು ವೆಂಕಟಾಚಾರ್ಯರು. ಒಂದರ್ಥದಲ್ಲಿ ಅವರು ಬಂಗಾಳದ ಉದ್ಯಾನದಲ್ಲಿ ಅಡ್ಡಾಡಿ ತಂದ ಜೇನನ್ನು ಕನ್ನಡದ ಗೂಡಿನಲ್ಲಿ ತುಂಬಿದರು. ಚಿಕ್ಕದೊಡ್ಡ ಬೆಟ್ಟಗುಡ್ಡಗಳನ್ನು ಹತ್ತುಹತ್ತುತ್ತ ಉತ್ಸಾಹ ಹೆಚ್ಚಿ ಕೊನೆಗೆ ಎಲ್ಲಕ್ಕಿಂತ ಉನ್ನತವಾದ ಪರ್ವತಾಗ್ರಕ್ಕೆ ಕಣ್ಣು ಹಾಯುವುದು ಸಹಜ ತಾನೆ? ಹಾಗೆ ಒಂದು ದಿನ ವೆಂಕಟಾಚಾರ್ಯರಿಗೆ ಬಂಕಿಮಚಂದ್ರರ ಕೃತಿಗಳನ್ನೂ ಕನ್ನಡಕ್ಕೆ ತರುವ ಹೆಬ್ಬಯಕೆ ಹುಟ್ಟಿತು. ಬಂತು ನೋಡಿ ಕನ್ನಡಕ್ಕೆ ಆನಂದ ಮತ್ತು ಆ ಮೂಲಕ ವಂದೇ ಮಾತರಂ!

ವೆಂಕಟಾಚಾರ್ಯರು ಕನ್ನಡಿಗರ ವಾಚನಾಭಿರುಚಿಯನ್ನು ಹೇಗೆ ಬಡಿದೆಬ್ಬಿಸಿದರೆಂದರೆ ಅನಕೃ ತಾನು ಕಾದಂಬರಿಕಾರನಾಗಿ ರೂಪುಗೊಳ್ಳುವುದಕ್ಕೆ ಕಾರಣಪುರುಷರೇ ಗಳಗನಾಥರು ಮತ್ತು ವೆಂಕಟಾಚಾರ್ಯರು ಎಂದು ಸರ್ಟಿಫಿಕೇಟ್ ಕೊಟ್ಟುಬಿಟ್ಟಿದ್ದಾರೆ. ವಿಜ್ಞಾನ ಲೇಖಕರಾಗಿ ದೊಡ್ಡ ಹೆಸರು ಮಾಡಿದ ಜಿ.ಟಿ. ನಾರಾಯಣರಾಯರು ತನ್ನ ಆತ್ಮಕತೆಯಲ್ಲಿ ಬಿ.ಪಿ. ಕಾಳೆಯವರ ಪತ್ತೇದಾರಿ ಪುಸ್ತಕಗಳು, ಗಳಗನಾಥ, ಬಿ. ವೆಂಕಟಾಚಾರ್ಯ ಮೊದಲಾದವರ ಐತಿಹಾಸಿಕ ಕಾದಂಬರಿಗಳು ನನ್ನಲ್ಲಿ ಸುಪ್ತವಾಗಿದ್ದಿರಬಹುದಾದ ಕನ್ನಡ ಪ್ರೇಮವನ್ನು ಜಾಗೃತಗೊಳಿಸಿದವು ಎಂದು ಮುಕ್ತಕಂಠದಿಂದ ಹೇಳಿಕೊಂಡಿದ್ದಾರೆ. ಹೀಗೆ ಒಂದಲ್ಲ ಎರಡುಮೂರು ತಲೆಮಾರುಗಳನ್ನೇ ವೆಂಕಟಾಚಾರ್ಯರ ಅನುವಾದಿತ ಕಾದಂಬರಿಗಳು ಸಮ್ಮೋಹಗೊಳಿಸಿದವು. ಒಂದು ರೀತಿಯಲ್ಲಿ, ಬಂಗಾಳಿ ಕಾದಂಬರಿಗಳನ್ನು ಬಂಗಾಲಿಗಳಿಗಿಂತ ಕನ್ನಡಿಗರೇ ಹೆಚ್ಚು ಆಳವಾಗಿ, ವಿಸ್ತಾವಾಗಿ ಓದಿಕೊಂಡರು ಎಂದರೂ ಅತಿಶಯೋಕ್ತಿ ಆಗಲಿಕ್ಕಿಲ್ಲ! ವೆಂಕಟಾಚಾರ್ಯರ ಮೂಲಕ ಹುಟ್ಟಿದ ಈ ಬಂಗಾಳಿ ಭಾಷೆಯ ಪ್ರೀತಿ ಕನ್ನಡ ನೆಲದಲ್ಲಿ ಹೇಗೆ ಹಬ್ಬಿತೆಂದರೆ ಕುವೆಂಪು, ಬೇಂದ್ರೆ, ಬಿಎಂಶ್ರೀ, ಗೋಕಾಕ, ವಿಸೀ, ವೆಂಕಣ್ಣಯ್ಯ, ಗೋವಿಂದ ಪೈ, .ಆರ್. ಕೃಷ್ಣಶಾಸ್ತ್ರಿ, ಪಾವೆಂ ಮೊದಲಾದವರೆಲ್ಲ ಕನ್ನಡದಷ್ಟೇ ಸಹಜವಾಗಿ ಬಂಗಾಳಿಯಲ್ಲೂ ವ್ಯವಹರಿಸಬಲ್ಲವರಾದರು. ಸಾಹಿತ್ಯದ ಜೊತೆಗೆ ಹುಟ್ಟಿದ್ದ ಸ್ವಾತಂತ್ರ್ಯ ಹೋರಾಟದ ಕೆಚ್ಚನ್ನೂ ವೆಂಕಟಾಚಾರ್ಯರ ಕೃತಿಗಳು ಕನ್ನಡದ ನೆಲದಲ್ಲಿ ಬಿತ್ತಿದವು, ಹಬ್ಬಿದವು.

ವೆಂಕಟಾಚಾರ್ಯರು ಹುಟ್ಟಿದ್ದು 1845ರಲ್ಲಿ. ಹಿರೀಕರ ಊರು ಕೊಳ್ಳೇಗಾಲವಾದರೂ ಹುಟ್ಟಿಬೆಳೆದದ್ದು ಬಿಂಡಿಗನವಿಲೆಯಲ್ಲಿ. ತಂದೆ ಗರುಡಾಚಾರ್ಯರು ಸುತ್ತಲಿನ ನಾಲ್ಕೂರುಗಳಿಗೆ ಹೆಸರಾದ ಸಂಸ್ಕೃತ ಪಂಡಿತ. ಕಠೋರ ಸನಾತನಿ. ದಿನವೂ ಮುಂಜಾನೆ ಮೈಲುಗಳಷ್ಟು ದೂರದಲ್ಲಿದ್ದ ಕಾವೇರಿಯಲ್ಲೇ ಅವರ ಸ್ನಾನ. ಹೋಗುವ ಬರುವ ದಾರಿಯುದ್ದಕ್ಕೂ ಮಗನಿಗೆ ಅಮರಪಾಠ. ಹೀಗೆ ಮನೆಯಿಂದ ನದಿಗೆ ಹೋಗಿಬರುವ ಕೆಲಸ ಮಾಡುತ್ತಲೇ ವೆಂಕಟಾಚಾರ್ಯರು ಸಂಸ್ಕೃತದ ಪಾವಟಿಗೆಗಳನ್ನೂ ಇಷ್ಟಿಷ್ಟೇ ಅಪ್ಪನನ್ನು ಮುಟ್ಟಲು ಯತ್ನಿಸುತ್ತಿದ್ದರು. ಚಿಕ್ಕಂದಿನಿಂದಲೂ ಅವರಿಗೆ ಕತೆ ಹೇಳುವುದು, ಕತೆ ಕೇಳುವುದು ಎರಡರಲ್ಲೂ ಅಪರಿಮಿತ ಆಸಕ್ತಿ. ಕಂಡುಂಡ ಅನುಭವಗಳನ್ನು ಕಣ್ಣೆದುರಲ್ಲಿ ನಡೆಯುತ್ತಿದೆಯೇನೋ ಎಂಬಂತೆ ಮಾತಿನಲ್ಲೇ ಮರುಸೃಷ್ಟಿಸುವ ಕಸುಬುಗಾರಿಕೆ ಚಿಕ್ಕಂದಿನಿಂದಲೂ ಇತ್ತು; ಮತ್ತದು ತಂದೆಯ ಗಮನಕ್ಕೂ ಬಿತ್ತು. ಓದಿ ಉದ್ಧಾರವಾಗಲಿ ಎಂದು ತಂದೆ ಗರುಡಾಚಾರ್ಯರು ತಮ್ಮ ಈ ವಂಶದ ಕುಡಿಯನ್ನು ಶಾಲೆಗೆ ಸೇರಿಸಿದರು. ಇಳಿಜಾರಿನಲ್ಲಿ ನೀರು ಹರಿದಂತೆ ಹುಡುಗ ಶಾಲೆಗೆ ಸೇರಿದ್ದಷ್ಟೇ ಅನಾಯಾಸವಾಗಿ ಈಜಿಕೊಂಡು ಮುಂದುಮುಂದಿನ ಕ್ಲಾಸುಗಳಿಗೆ ಹೋಗಿಬಿಟ್ಟ. ಹದಿನಾರಕ್ಕೆಲ್ಲ ಓದು ಮುಗಿಯಿತು. ಗೌರ್ಮೆಂಟ್ ನೌಕರಿ ಸಿಕ್ಕಿತು. ಅಕೌಂಟೆಂಟ್ ಆಗಿ ಲೆಕ್ಕ ಬರೆವ ಕೆಲಸದಿಂದ ತನ್ನ ಉದ್ಯೋಗಪರ್ವ ಪ್ರಾರಂಭಿಸಿದ ವೆಂಕಟಾಚಾರ್ಯರು ಕಾಲಕ್ರಮೇಣ ಡಿವಿಜನ್ ಹೆಡ್‌ಮುನ್ಷಿಯಾಗಿ, ಜಿಲ್ಲಾ ನ್ಯಾಯಾಲಯದ ಶಿರಸ್ತೇದಾರರಾಗಿ, ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ, ಕೊನೆಗೆ ನರಸಿಂಹರಾಜಪುರಕ್ಕೆ ಮುನ್ಸೀಫರಾಗಿ ನಿಯುಕ್ತರಾದರು. ಚಿತ್ರದುರ್ಗದಲ್ಲಿ ಪ್ರಾರಂಭವಾದ ನೌಕರಿಯ ನೌಕಾಯತ್ರೆ ಅವರನ್ನು ಶಿವಮೊಗ್ಗ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು ಜಿಲ್ಲೆಗಳಲ್ಲೆಲ್ಲ ಸುತ್ತಾಡಿಸಿ ಕೊನೆಗೆ ಬೆಂಗಳೂರಲ್ಲಿ ನೆಲೆ ನಿಲ್ಲುವಂತೆ ಮಾಡಿತು.

ಪ್ರಾರಂಭದಲ್ಲಿ ಹೇಳಿದಂತೆ, ವೆಂಕಟಾಚಾರ್ಯರು ಕನ್ನಡಕ್ಕೆ, ಕನ್ನಡಸಾಹಿತ್ಯಕ್ಕೆ ಪ್ರವೇಶಿಸಿದ ವಿಚಿತ್ರ ಮತ್ತು ಆಕಸ್ಮಿಕ. ಕೆಲವೊಮ್ಮೆ ಮಹತ್ಕಾರ್ಯಗಳು ನಡೆಯುವುದಕ್ಕೊಂದು ಸಣ್ಣ ನೆಪ ಬೇಕಾಗುತ್ತದೆ ವಾಲ್ಮೀಕಿಯ ಕಾವ್ಯ ಹೊಮ್ಮಲು ನಿಷಾದ ನೆಪವಾದಂತೆ. ಅಂಥದೊಂದು ದೈವಪ್ರೇರಣೆಯಂಥ ಘಟನೆಯಿಂದ ಲೇಖನಿ ಹಿಡಿದ ವೆಂಕಟಾಚಾರ್ಯರು ಮತ್ತೆ ಹಿಂದಿರುಗಿ ನೋಡಲಿಲ್ಲ; ಲೇಖನಿಗೆ ವಿರಾಮ ಕೊಡಲಿಲ್ಲ. ಹಗಲೆಲ್ಲ ಸಾರ್ವಜನಿಕ ಜೀವನ; ಸರಕಾರೀ ತರಲೆತಾಪತ್ರಯಗಳ ಜಂಜಾಟ. ಆದರೆ ರಾತ್ರಿಯಾದೊಡನೆ ಸಾಹಿತ್ಯಸಂನ್ಯಾಸಿ! ತನ್ನ ಕೋಣೆಯಲ್ಲಿ ಒಂದು ಕೃಷ್ಣಾಜಿನ ಹಾಕಿ ಎದುರಲ್ಲೊಂದು ಚಿಕ್ಕ ಮೇಜಿಟ್ಟುಕೊಂಡು ಹಾಳೆಗಳನ್ನೂ ಶಾಯಿಯ ಬುಡ್ಡಿಯನ್ನೂ ಜೋಡಿಸಿಕೊಂಡರೆಂದರೆ ಮುಗಿಯಿತು; ಉರುಳಿ ಹಗಲಾದದ್ದೂ ತಿಳಿಯುತ್ತಿರಲಿಲ್ಲ! ತನ್ನ ಪ್ರತಿಭೆಯ ಪರ್ವಕಾಲದಲ್ಲಿ ವೆಂಕಟಾಚಾರ್ಯರು ತಿಂಗಳಿಗೊಂದು ಕಾದಂಬರಿಯಂತೆ ಕೃಷಿ ಮಾಡಿದ್ದೂ ಉಂಟು! ನಿದ್ದೆಗೆಟ್ಟು ದೇಹಾರೋಗ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಯಾರಾದರೂ ಸಲಹೆ ಕೊಟ್ಟರೆ ಆಚಾರ್ಯರು ನಗುತ್ತ ಕನ್ನಡದ ಸೇವೆಗೆ ಮೀಸಲಿಡದ ಆರೋಗ್ಯದಿಂದೇನು ಎನ್ನುತ್ತಿದ್ದರಂತೆ. 1902ರಲ್ಲಿ ನಿವೃತ್ತಿ ದೊರೆತ ನಂತರವಂತೂ ಹಗಲಿರುಳೂ ಪ್ರವೃತ್ತಿಯೇ ಅವರ ವೃತ್ತಿಯಾಯಿತು. ಕಲಕತ್ತೆಯಿಂದ ತರಿಸಿದ ಪುಸ್ತಕಗಳ ಆಮೂಲಾಗ್ರ ಓದು, ಹೊಸ ಕಾದಂಬರಿಗಳ ಪ್ರತೀಕ್ಷೆ, ನಿರಂತರ ಅಧ್ಯಯನ, ಮತ್ತು ಅವುಗಳ ಅನುವಾದಯಜ್ಞ ಇಷ್ಟರಲ್ಲೇ ಬಹುತೇಕ ವೇಳೆಯೆಲ್ಲ ಸೋರಿಹೋಯಿತು. ಆದರೆ ಸೋರಿದ್ದೆಲ್ಲ ಕನ್ನಡದ ಮಣ್ಣಲ್ಲೇ ಇಂಗಿತೆಂಬುದೇ ಸಮಾಧಾನ. ಅವರು ಅನುವಾದಿಸಿದ್ದು ಒಟ್ಟು 75 ಕೃತಿಗಳನ್ನು. ಅವುಗಳಲ್ಲಿ 60ಕ್ಕೂ ಹೆಚ್ಚಿನವು ಕಾದಂಬರಿಗಳು. ಅಡವಿಯ ಹುಡುಗಿ, ಆನಂದ ಮಠ, ಇಂದಿರಾ, ಉನ್ಮಾದಿನೀ, ಕಮಲಾಕಾಂತ, ಕಪಾಲ ಕುಂಡಲ, ದೇವಿ ಚೌಧುರಾಣಿ, ರಾಮೇಶ್ವರನ ಅದೃಷ್ಟ, ರಾಧಾರಾಣಿ, ರಜನಿ, ಮೃಣ್ಮಯೀ, ರಮಾಬಾಯಿ, ಅಹಲ್ಯಾಬಾಯಿ, ಯುಗಳಾಂಗುರೀಯ, ಸೀತಾರಾಮ, ಶಾಂತಿ, ಪರಿಮಳಾ, ಗ್ರಾಮ್ಯಕಥಾ, ವಿಷವೃಕ್ಷ, ಮಾಧವೀಲತಾ, ಇದೊಂದು ಚಿತ್ರ, ರಾಜಸಿಂಹ, ಚಂದ್ರಶೇಖರ, ಅಮೃತಪುಲಿನ ಕೆಲವು ಹೆಸರುಗಳಷ್ಟೆ.

ವೆಂಕಟಾಚಾರ್ಯರು ಒಂದಲ್ಲ ಹಲವು ಕಾರಣಗಳಿಗೆ ನಮಗೆ ಮುಖ್ಯರಾಗುತ್ತಾರೆ. ಬಂಗಾಳದ ಸರ್ವಪ್ರಥಮ ಕಾದಂಬರಿ ಎಂದೇ ಪರಿಗಣಿಸಲ್ಪಟ್ಟ ಮತ್ತು ಬಂಕಿಮರ ಪ್ರಥಮ ಕೃತಿಯಾದ ದುರ್ಗೇಶ ನಂದಿನಿ ಕನ್ನಡಕ್ಕೆ ಬಂದದ್ದು ವೆಂಕಟಾಚಾರ್ಯರ ಮೂಲಕ. ಹಾಗೆಯೇ ಆನಂದ ಮಠ ಮತ್ತು ಅದರಲ್ಲಿ ಪ್ರಕಟವಾದ ವಂದೇ ಮಾತರಂ ಕನ್ನಡಿಗರಿಗೆ ಮೊದಲ ಬಾರಿಗೆ ಪರಿಚಯವಾದದ್ದೂ ಇವರ ಮೂಲಕವೇ. ಬಹುಶಃ ಈಗಿನ ತಲೆಮಾರಿಗೆ ಮರೆತುಹೋಗಿರುವ ಅಥವಾ ತಿಳಿದೇ ಇಲ್ಲದ ಸಂನ್ಯಾಸಿ ದಂಗೆ ಎಂಬ ಹೆಸರಿನ ನೆಲದಲ್ಲಿ ನಡೆದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟದ ಕಥಾನಕವೇ ಆನಂದ ಮಠದ ವಸ್ತು. ಹಾಗಾಗಿ ಆ ಕಾದಂಬರಿ ಕೇವಲ ಸಾಹಿತ್ಯವನ್ನಷ್ಟೇ ಕನ್ನಡಕ್ಕೆ ತರಲಿಲ್ಲ; ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಕನ್ನಡಿಗರ ಕೆಚ್ಚೆದೆಯಲ್ಲಿ ಹೊತ್ತಿಸುವ ಕೆಲಸವನ್ನೂ ಸದ್ದಿಲ್ಲದೆ ಮಾಡಿತು. ಅದೇ ಬಂಕಿಮರು ಬರೆದ ಪ್ರಬಂಧಗಳ ಸಂಕಲನವನ್ನು ಲೋಕರಹಸ್ಯ ಎಂಬ ಹೆಸರಲ್ಲಿ ಅನುವಾದಿಸಿ 1898ರಲ್ಲಿ ವೆಂಕಟಾಚಾರ್ಯರು ಪ್ರಕಟಿಸಿದರು. ಇದು ಕನ್ನಡದಲ್ಲಿ ಪ್ರಕಟವಾದ ಮೊದಲ ಪ್ರಬಂಧ ಸಂಕಲನ ಕೂಡ ಹೌದು! ಪ್ರಬಂಧವೆಂಬ ಪ್ರಕಾರಕ್ಕೆ ಮಾರುಹೋದ ಆಚಾರ್ಯರು ಸ್ವತಂತ್ರವಾಗಿ ಹಲವಾರು ಲಲಿತ ಪ್ರಬಂಧಗಳನ್ನು ಕನ್ನಡದಲ್ಲಿ ಬರೆದರು. ಅವು ಮುಂದೆ ದಾಡಿಯ ಹೇಳಿಕೆ, ಚಿತ್ರವಿಚಿತ್ರಾವಳಿ ಎಂಬ ಹೆಸರಲ್ಲಿ ಪುಸ್ತಕರೂಪದಲ್ಲಿ ಬಂದವು. ಜೊತೆಗೆ ಆಚಾರ್ಯರು ಅವಕಾಶ ತೋಷಿಣೀ ಎಂಬ ಹೆಸರಿನ ಒಂದು ಸಾಹಿತ್ಯಿಕ ಪತ್ರಿಕೆಯನ್ನೂ ಒಂದು ವರ್ಷ ನಡೆಸಿದರು. ಅದರಲ್ಲಿ ಅವರ ಹಲವು ಅನುವಾದಿತ ಕೃತಿಗಳು ಧಾರಾವಾಹಿಗಳಾಗಿ ಬಂದವು. ಸ್ವತಂತ್ರ ರಚನೆಗಳೂ ಪ್ರಕಟವಾದವು. ಉಳಿದವರ ಕತೆ ಕವನಗಳಿಗೂ ಅಲ್ಲಿ ಸಾಕಷ್ಟು ಜಾಗ ಸಿಕ್ಕಿತು. ಆಚಾರ್ಯರು ಬಂಗಾಳಿ ಸಾಹಿತ್ಯವನ್ನು ಕನ್ನಡದಲ್ಲಿ ಬರೆದುದು ಆ ಭಾಷೆಯನ್ನು ಕನ್ನಡಿಗರಿಗೆ ಕಲಿಸುವ ಕೆಲಸವನ್ನೂ ಬಹಳ ಪ್ರೀತಿಯಿಂದ ಮಾಡಿದರು. ಅವರ ಮನೆಮಂದಿಯೆಲ್ಲ ಬಂಗಾಳಿಯಲ್ಲಿ ವ್ಯವಹರಿಸುತ್ತಿದ್ದರು. ನೆರೆಹೊರೆಯ ಮಂದಿಗೂ ಆ ಭಾಷೆ ಲೀಲಾಜಾಲವಾಗಿತ್ತು. ಬಂಗಾಳಿ ಭಾಷೆಯ ಮೇಲೆ ಆಚಾರ್ಯರ ಹಿಡಿತ ಎಷ್ಟು ಬಿಗಿಯಾಗಿತ್ತೆಂದರೆ ರಾಮಕೃಷ್ಣ ಆಶ್ರಮದ ಸಂನ್ಯಾಸಿಗಳು ಕೂಡ ಅವರ ಮನೆಗೆ ಆಗಾಗ ಬಂದು ಚರ್ಚೆ ನಡೆಸುತ್ತಿದ್ದರಂತೆ. ಬೇರೆಲ್ಲ ಸಂಗತಿ ಬಿಡಿ, ರವೀಂದ್ರನಾಥ ಟಾಗೋರರ ತಂದೆ ದೇವೇಂದ್ರನಾಥರು ವೆಂಕಟಾಚಾರ್ಯರನ್ನು ಕಣ್ಣಾರೆ ಕಾಣಬೇಕೆಂದು ಬಯಸಿ ಬಂದರಂತೆ.

ವಿವೇಕಾನಂದರು ತಮ್ಮ ಭಾರತ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದದ್ದು, ಬೆಂಗಳೂರಿಗೂ ಆಗಮಿಸಿದ್ದು, ಇಲ್ಲಿಂದ ಮೈಸೂರಿಗೆ ಹೋಗಿ ಅಲ್ಲಿ ಒಡೆಯರ್‌ರನ್ನು ಕಂಡು ಮಾತಾಡಿಸಿದ್ದು ಇವೆಲ್ಲ ನಮಗೆ ಗೊತ್ತಿರುವ ವಿವರಗಳು. ಗೊತ್ತಿರದ ವಿವರ ಏನೆಂದರೆ ಅವರು ಇಲ್ಲಿಗೆ ಬಂದಾಗ ಉಳಿದುಕೊಂಡದ್ದು ವೆಂಕಟಾಚಾರ್ಯರ ಮನೆಯಲ್ಲಿ ಎಂಬುದು! ವಿವೇಕಾನಂದರು ಕರ್ನಾಟಕಕ್ಕೆ ಬಂದಾಗ ಆಗಿನ್ನೂ ಚಿಕಾಗೊದ ಸರ್ವಧರ್ಮ ಸಂಸತ್ತು ನಡೆದಿರಲಿಲ್ಲ. ಹಾಗಾಗಿ ವಿವೇಕಾನಂದರಿಗೆ ಇನ್ನೂ ಮುಂದೆ ಸಿಗಲಿದ್ದ ವಿಶ್ವಖ್ಯಾತಿ ಸಿಕ್ಕಿರಲಿಲ್ಲ. ಆದರೆ ಓರ್ವ ತೇಜಸ್ವೀ ಸಂನ್ಯಾಸಿಯೆಂಬ ಸಂಗತಿಯಂತೂ ವ್ಯಾಪಕವಾಗಿ ಅವರನ್ನು ನೋಡಲು, ಮಾತಾಡಿಸಲು, ಭಕ್ತಿಯಿಂದ ಕೈ ಮುಗಿದು ಕಾಲಿಗೆರಗಿ ಆಶೀರ್ವಾದ ಪಡೆಯಲು ಜನರ ದಂಡು ಬರುತ್ತಿತ್ತು. ವಿವೇಕಾನಂದರಿಗೆ ಕರ್ನಾಟದೊಳಗಿದ್ದರೂ ತಾನು ಹೂಗ್ಲಿ ನದಿಯ ಆಚೀಚಿನ ಪಟ್ಟಣವೊಂದರಲ್ಲಿ ಇದ್ದೇನೇನೋ ಎಂಬಂಥ ವಾತಾವರಣ ಸೃಷ್ಟಿಯಾಗಿತ್ತು. ಯಾಕೆಂದರೆ ಅವರು ತಂಗಿದ್ದ ವೆಂಕಟಾಚಾರ್ಯರ ಮನೆ ಸಂಪೂರ್ಣ ಬಂಗಾಳಿಮಯ! ಮನೆಯವರು ಮಾತ್ರವಲ್ಲದೆ ಆ ಕೇರಿಯ ಬಹುತೇಕರು ಅತ್ಯಂತ ಶುದ್ಧವಾದ ಬಂಗಾಳಿಯಲ್ಲೇ ವಿವೇಕರ ಜೊತೆ ವ್ಯವಹರಿಸುತ್ತಿದ್ದರು! ವಿವೇಕರು ಓದಿಕೊಂಡ ಅಷ್ಟೂ ಬಂಗಾಳಿ ಸಾಹಿತ್ಯವನ್ನು ವೆಂಕಟಾಚಾರ್ಯರ ಮನೆಮಂದಿ ಚರ್ಚಾಕೂಟದಲ್ಲಿ ಪ್ರೌಢಿಮೆಯಿಂದ ಓದಿಕೊಂಡಿದ್ದರು! ನೂರಾರು ಸಂಸ್ಥಾನಗಳಾಗಿ ಹರಿದು ಛಿದ್ರವಾಗಿರುವಂತೆ ಕಂಡರೂ ಈ ದೇಶದ ಆತ್ಮ ಒಂದೇ ಎಂಬ ಭಾವ ವಿವೇಕಾನಂದರಲ್ಲಿ ಗಟ್ಟಿಯಾದದ್ದು ಆ ಸಂದರ್ಭದಲ್ಲೇ ಎನ್ನಬಹುದು.

ಕಾವೇರಿಯಲ್ಲಿ ಕಳೆದೊಂದು ಶತಮಾನದಲ್ಲಿ ಸಾಕಷ್ಟು ನೀರು ಹರಿದಿದೆ. ಕನ್ನಡ ಸಾಕಷ್ಟು ಬೆಳೆದಿದೆ; ಬದಲಾವಣೆಗಳಿಗೆ ತನ್ನನ್ನು ಒಡ್ಡಿಕೊಂಡಿದೆ. ಅನಕೃ, ತರಾಸುರಂಥ ದೈತ್ಯಪ್ರತಿಭೆಗಳನ್ನೇ ಮರೆತು ಮುಂದೋಡುತ್ತಿರುವ ಈಗಿನ ಆಧುನಿಕ ಜಗತ್ತಿಗೆ ವೆಂಕಟಾಚಾರ್ಯರ ನೆನಪು ಎಷ್ಟು ಆದೀತು ಎಂಬುದು ಸಂಶಯವೇ. ಅವರು ಆಗಿನ ಕಾಲದಲ್ಲಿ ಅನುವಾದಿಸಿ ಪ್ರಕಟಿಸಿದ ಈಗಿನ ನಮಗೆ ಪಳೆಯುಳಿಕೆಯಂತೆ ಕಾಣಬಹುದು. ಆ ಕೃತಿಗಳ ಭಾಷೆ ಪುಸ್ತಕದ ಹಾಳೆಗಳ ನಡುವಲ್ಲಿ ಇಟ್ಟು ಮರೆತ ಎಲೆಯಂತೆ ಭಾಸವಾಗಬಹುದು. ಆದರೆ ವೆಂಕಟಾಚಾರ್ಯರು ಬಂಗಾಳಿಯಲ್ಲಿ ಆಸಕ್ತಿ ತಾಳಿ ಕೃತಿಗಳನ್ನು ಕನ್ನಡಕ್ಕೆ ತರದೇಹೋಗಿದ್ದರೆ ನಾವೀಗ ಉಸಿರಾಡುತ್ತಿರುವ ಕನ್ನಡ ಈಗಿರುವಂತೆ ಇರದೆ ಕೊಂಚವಾದರೂ ಬೇರೆಯಾಗಿರುತ್ತಿತ್ತು ಎನ್ನುವುದಂತೂ ನಿಜ.

ಕನ್ನಡದ ತೇರನ್ನು ಎಳೆಯುತ್ತಿರುವ ನಮ್ಮ ಕೈಗಳ ಕೆಳಗೆ ಆ ಹಗ್ಗದಲ್ಲಿ ಎಂದೋ ಇಟ್ಟಿದ್ದ ಯಾರದೋ ಕೈಯ ಒಂದಷ್ಟು ಶಕ್ತಿಯೂ ಸೇರಿಕೊಂಡಿದೆ ಎಂದು ನಾವು ಭಾವಿಸುವುದೇ ನಮ್ಮ ಬದುಕಿಗೆ ಒಂದಷ್ಟು ಅರ್ಥ ಬಂದೀತು; ಮತ್ತದು ಬರಹಕ್ಕೆ ಒಂದಷ್ಟು ವಿನಯ ತಂದೀತು

Tags

ರೋಹಿತ್ ಚಕ್ರತೀರ್ಥ

ಶಿಕ್ಷಣ ಕ್ಷೇತ್ರದಲ್ಲಿ ಕನ್ಸ್‌ಲ್ಟೆಂಟ್‌ ಆಗಿರುವ ಅಂಕಣಕಾರರು, ಕನ್ನಡದ ಕೆಲವೇ ಕೆಲವು ವಿಜ್ಞಾನ ಲೇಖಕರಲ್ಲಿ ಒಬ್ಬರು. ಇದುವರಗೆ ಪ್ರಕಟವಾಗಿರುವ ಗಣಿತ, ವಿಜ್ಞಾನ, ರಾಜಕೀಯ ವಿಷಯದ ಪುಸ್ತಕಗಳು ಎಲ್ಲ ವರ್ಗದ ಓದುಗರಿಗೂ ಉಪಯುಕ್ತವಾದುದು. ಇವರ ಅಂಕಣ ಚಕ್ರವ್ಯೂಹವನ್ನು ಪ್ರತೀ ಮಂಗಳವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close