ವಿಶ್ವವಾಣಿ

ರೈತರಲ್ಲಿ ಸಾಲಮನ್ನಾದ ಭ್ರಮೆ ಹುಟ್ಟಿಸುವುದನ್ನು ಬಿಡಿ!

ರಾಜ್ಯದಲ್ಲಿ ಕಳೆದ 4 ವರ್ಷಗಳ ಅವಧಿಯಲ್ಲಿ ಮೂರು ವರ್ಷಗಳಲ್ಲಿ ತೀವ್ರ ಬರಗಾಲ ಉಂಟಾದ ಹಿನ್ನಲೆಯಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡಲು ರೈತರು, ರೈತ ಪ್ರತಿನಿಧಿಗಳು, ಸಹಕಾರಿಗಳು ಮತ್ತು ಜನಪ್ರತಿಗಳಿಂದ ಬೇಡಿಕೆ ಇರುತ್ತದೆ. ಆಯವ್ಯಯ ಭಾಷಣದ ಚರ್ಚೆಯ ಸಂದರ್ಭದಲ್ಲಿ ವಿಧಾನ ಮಂಡಲದ ಅನೇಕ ಮಾನ್ಯ ಸದಸ್ಯರು ಸಹಕಾರ ಸಂಘಗಳಲ್ಲಿ ಸಾಲ ಪಡೆದ ಹೆಚ್ಚಿನ ರೈತರಿಗೆ ಪ್ರಸ್ತುತ ಘೋಷಣೆಯಾಗಿರುವ ಸಾಲ ಮನ್ನಾ ಯೋಜನೆಯಿಂದ ಪ್ರಯೋಜನವಾಗುವುದಿಲ್ಲವೆಂದು ಪ್ರಸ್ತಾಪಿಸಿದ ಹಿನ್ನಲೆಯಲ್ಲಿ, ದಿನಾಂಕ  ರಂದು ವಿಧಾನಸಭೆಯಲ್ಲಿ 2018-19 ನೇ ಸಾಲಿನ ಆಯವ್ಯಯ ಭಾಷಣದ ಚರ್ಚೆಯ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಪಡೆದು ದಿನಾಂಕ 10.7.2018 ರವರೆಗೆ ಹೊರಬಾಕಿ ಹೊಂದಿದ ರೈತರಿಗೂ ರು. 1.00 ಲಕ್ಷದವರೆಗೂ ಸಾಲ ಮನ್ನಾ ಮಾಡುವುದಾಗಿ ಘೋಷಿಸಿರುತ್ತಾರೆ.

ಮೇಲೆ ಓದಲಾದ ದಿನಾಂಕ:09.08.2018 ರಂದು ನಡೆದ ಚಿವ ಸಂಪುಟ ಕಾರ್ಯಸೂಚಿ ಕ್ರಮ ಸಂಖ್ಯೆ-9 ರಲ್ಲಿ ರಾಜ್ಯದ ರೈತರು ಸಹಕಾರ ಸಂಘ/ಸಹಕಾರ ಬ್ಯಾಂಕುಗಳಿಂದ ಅಲ್ಪಾವಧಿ ಬೆಳೆ ಸಾಲ ಪಡೆದು  10.7.2018 ಕ್ಕೆ ಹೊಂದಿರುವ ಹೊರಬಾಕಿಯಲ್ಲಿ ಒಂದು ಕುಟುಂಬಕ್ಕೆ  ಗರಿಷ್ಟ ರು. 1.00 ಲಕ್ಷದವರೆಗಿನ ಸಾಲ ಮನ್ನಾ ಮಾಡುವ ಪ್ರಸ್ತಾವನೆಗೆ ಅನುಮೋದನೆ ದೊರೆತಿರುತ್ತದೆ. ಮೇಲೆ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

ಸರಕಾರದ ಆದೇಶ ಸಂಖ್ಯೆ: ಸಿಒ 163 ಸಿಎಲ್‌ಎಸ್ 2018, ಬೆಂಗಳೂರು, ದಿನಾಂಕ 14.08.2018 ರಾಜ್ಯದ ಸಹಕಾರ ಸಂಸ್ಥೆಗಳು/ಬ್ಯಾಂಕುಗಳು ವಿತರಿಸಿದ ಅಲ್ಪಾವಧಿ ಬೆಳೆ ಸಾಲದ ಪೈಕಿ ದಿನಾಂಕ: 10.7.2018ಕ್ಕೆ ಹೊಂದಿರುವ ಹೊರಬಾಕಿ ಮೊತ್ತದಲ್ಲಿ ಒಂದು ರೈತ  ಗರಿಷ್ಟ ರು. 1 ಲಕ್ಷಗಳವರೆಗಿನ ಸಾಲವನ್ನು ಮನ್ನಾ ಮಾಡಲು ತೀರ್ಮಾನಿಸಿ, ಕೆಲವು ಷರತ್ತುಗಳೊಂದಿಗೆ ಆದೇಶ ಹೊರಡಿಸಲಾಗಿದೆ.

ಇದು ಸಾಲ ಮನ್ನಾ ಕುರಿತು ಕ್ಯಾಬಿನೆಟ್ ನಡವಳಿಯ ಯಥಾವತ್ ಉಲ್ಲೇಖವಾಗಿದೆ. ಇದಕ್ಕೆ ತಗಲುವ ವೆಚ್ಚ ಬರೋಬ್ಬರಿ ಮೂವತ್ತೆಂಟು ಸಾವಿರ ಕೋಟಿಯಷ್ಟು ಎಂದು ಅಂದಾಜಿಸಲಾಗಿದೆ. ಮೊನ್ನೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮತ್ತೊಂದು ತೀರ್ಮಾನವನ್ನು ಕೈಗೊಂಡು ರಾಷ್ಟ್ರೀಕೃತ ಬ್ಯಾಂಕ್‌ಗಳ ಎರಡು ಲಕ್ಷಗಳ ವರೆಗಿನ ಸಾಲಮನ್ನಾ ಘೋಷಣೆ ಮಾಡಲಾಗಿದೆ. ಇದನ್ವಯ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ  ಲಕ್ಷ ರುಪಾಯಿಗಳ ವರೆಗೆ ಸುಸ್ತಿಸಾಲ ಹಾಗೂ ಇಪ್ಪತ್ತೈದು ಸಾವಿರ ರುಪಾಯಿಗಳ ವೆಗಿನ ಚಾಲ್ತಿ ಸಾಲವನ್ನು ಮನ್ನಾ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಸರಕಾರ ಹೇಳಿರುವ ಅಂಕಿ-ಸಂಖ್ಯೆಗಳ ಪ್ರಕಾರ ಇದರಿಂದಾಗಿ ಸುಮಾರು ಮೂವತ್ತೆರಡು  ಸಾವಿರ ಕೋಟಿ ರೂಪಾಯಿಗಳ ಹೆಚ್ಚಿನ ಹೊರೆ ಸರಕಾರದ ಮೇಲೆ ಬೀಳಲಿದೆ. ಅದೇ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮತ್ತೊಂದು ಹೆಜ್ಜೆ ದಾಪುಗಾಲಿಕ್ಕಿ ಲೇವಾದೇವಿಯವರಿಂದ ಪಡೆದ ಸಾಲವನ್ನೂ ಮುಕ್ತಗೊಳಿಸುವುದಕ್ಕಾಗಿ ಮತ್ತೊಂದು ಕಾನೂನನ್ನು ಜಾರಿಗೆ ತಂದು ಋಣಮುಕ್ತ ಕಾಯ್ದೆಗೆ  ಹೊರಡಿಸುವ ಮೂಲಕ ರಾಷ್ಟ್ರಪತಿಯವರ ಅನುಮೋದನೆಗೆ ಕಳುಹಿಸಿಕೊಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಬಡವರು, ಕೂಲಿಕಾರ್ಮಿಕರು, ಬೀದಿಬದಿ ವ್ಯಾಪಾರಸ್ಥರು, ಜೀವನೋಪಾಯಕ್ಕಾಗಿ ಖಾಸಗಿ ವ್ಯಕ್ತಿಗಳಿಂದ ಪಡೆದುಕೊಳ್ಳಲಾಗುವ ಸಾಲದಿಂದ ಮುಕ್ತಿಯನ್ನು ನೀಡಲಾಗುತ್ತಿದೆ ಎಂದು ಸರಕಾರ ಹೇಳಿಕೊಳ್ಳುತ್ತಿದೆ. ಹಾಗಾಗಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ರಾಜ್ಯದ ಜನತೆಗೆ ಸಾಲಮನ್ನಾ ಭಾಗ್ಯದ ಬೃಹತ್ ಗಂಟನ್ನು ಕೊಡುಗೆಯನ್ನಾಗಿ ನೀಡಲಾಗುತ್ತಿದೆ ಎಂದು ಬಿಂಬಿಸಿಕೊಳ್ಳಲಾಗುತ್ತಿದೆ.

          ಸಾಲಮನ್ನಾ ಎಂಬ ಮೆಘಾ ಧಾರವಾಹಿ ತಾರ್ಕಿಕ ಅಂತ್ಯವನ್ನು ಕಂಡುಕೊಳ್ಳುವುದು ಯಾವಾಗ? ಅಲಿಬಾಬಾನ ಜಾದು ಕೆಲಕ್ಷಣದ ವರೆಗೆ  ಮಾಡಬಹುದಾದರೂ ಹಸಿವೆಯನ್ನು ನೀಗಿಸುವುದಿಲ್ಲ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಎಲ್ಲಾ ರೀತಿಯ ಘೋಷಣೆಗಳು ಹೊರಹೊಮ್ಮುತ್ತಲೆ ಇವೆ. ಆದರೆ ವಸ್ತುನಿಷ್ಟ ಅನುಷ್ಠಾನ ಈವರೆಗೆ ಜಾರಿಗೊಂಡಿರುವುದಿಲ್ಲ. ಸಿದ್ದರಾಮಯ್ಯನವರ ನೇತೃತ್ವದ ಹಿಂದಿನ ಸರಕಾರ ಚುನಾವಣೆ ಸಮೀಪದಲ್ಲಿ ಸಹಕಾರಿ ಸಂಸ್ಥೆಗಳಿಂದ ಪಡೆದ ಸಾಲವನ್ನು ಮನ್ನಾಗೊಳಿಸಿತ್ತು. ಆದರೆ ಮನ್ನಾಗೊಂಡ ಪ್ರಮಾಣದ ಹಣ ಇಂದಿಗೂ ಬಿಡುಗಡೆಗೊಂಡಿರುವುದಿಲ್ಲ. ಕುಮಾರಸ್ವಾಮಿಯವರು ಹೇಳಿಕೊಂಡಿರುವಂತೆ ಹಿಂದಿನ ಸರಕಾರದ ಸಾಲಮನ್ನಾ ಯೋಜನೆಯ ಹೊರೆ ಸುಮಾರು ಎಂಟು ಸಾವಿರ ಕೋಟಿಯಷ್ಟು ಹಣವನ್ನು ಈಗಿನ  ಭರಿಸಬೇಕಾಗಿದೆ. ಹಾಗಿದ್ದೂ ಈಗಿನ ಸರಕಾರ ಸರಿಸುಮಾರು ಎಂಬತ್ತು ಸಾವಿರ ಕೋಟಿ ರೂಪಾಯಿಯಷ್ಟು ಬೃಹತ್ತಾದ ಹೊರೆಯನ್ನು ಹೊತ್ತುಕೊಳ್ಳಲು ಸನ್ನದ್ಧವಾಗಿದೆಯೆಂದು ಮೇಲಿಂದ ಮೇಲೆ ಕುಮಾರಸ್ವಾಮಿಯವರು ಹೇಳಿಕೊಳ್ಳುತ್ತಿರುವುದರ ಹಿಂದಿನ ಮರ್ಮವಾದರೂ ಏನು?

ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಸಾಲದಿಂದ ರೈತ ಋಣಮುಕ್ತನಾಗಲು ಸಂಬಂಧಿಸಿದ ಆಯಾ ಬ್ಯಾಂಕ್‌ಗಳು ಋಣಮುಕ್ತ ಪತ್ರವನ್ನು ನೀಡಿದಾಗ ಮಾತ್ರ. ರಾಷ್ಟ್ರೀಕೃತ ಬ್ಯಾಂಕ್‌ಗಳ ಅಧಿಕಾರಿಗಳಿಂದಾಗಲಿ, ರಿಸರ್ವ್ ಬ್ಯಾಂಕ್‌ನ ಅಧಿಕಾರಿಗಳಾಗಲಿ ಇಲ್ಲಿಯವರೆಗೂ ಲಿಖಿತ ಸಮ್ಮತಿಯನ್ನು ಸರಕಾರಕ್ಕೆ ಸಲ್ಲಿಸಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ! ಅದಕ್ಕಾಗಿಯೆ  ಮೇಲಿಂದ ಮೇಲೆ ಯಾವ ಆಧಾರದ ಮೇಲೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಪಡೆದ ಸಾಲದಿಂದ ರೈತನನ್ನು ಮುಕ್ತಿಗೊಳಿಸಲಾಗುತ್ತಿದೆಯೆಂದು ಸರಕಾರ ಹೇಳಿಕೊಳ್ಳುತ್ತಿದೆ. ಸರಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ನಡುವೆ ಹಂತಹಂತವಾಗಿ ಸಾಲಮನ್ನಾ ಹಾಗೂ ಸಾಲಮನ್ನಾ ಪ್ರಮಾಣದ ಹಣ ಹಾಗೂ ಬಡ್ಡಿಯ ಪ್ರಮಾಣವನ್ನು ಸರಕಾರ ತುಂಬುವ ಪ್ರಸ್ತಾವವಕ್ಕೆ ಬ್ಯಾಂಕ್‌ಗಳಿಂದ ಒಪ್ಪಿಗೆ ದೊರೆತಿದೆಯೆ ಎಂದು ಪುನಃ ಪ್ರಶ್ನಿಸುತ್ತಿರುವುದರಲ್ಲಿ ಅರ್ಥವಿಲ್ಲ ಎನ್ನಲಾಗುವುದಿಲ್ಲ. ಅಷ್ಟಕ್ಕೂ ರಾಜ್ಯ ಸರಕಾರದ ಆರ್ಥಿಕ ಸ್ಥಿತಿಗತಿ ಉತ್ತಮವಾಗಿದೆಯೆ? ಈಗಾಗಲೇ ಮೂರು ಲಕ್ಷ ಕೋಟಿಯಷ್ಟು ಸಾಲದ  ಹೊತ್ತಿರುವ ರಾಜ್ಯ ಸರಕಾರ ಇಷ್ಟು ಪ್ರಮಾಣದ ಸಾಲ ಮನ್ನಾದ ಹಣವನ್ನು ಹೊಂದಿಸುವಷ್ಟು ಸಶಕ್ತವಾಗಿದೆಯೆ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಹಿಂದಿನವರು ಸಂಪೂರ್ಣವಾಗಿ ನಗರವು ನೀರಿನಿಂದ ಮುಳುಗಡೆಯಾಗಬಹುದಾದ ಅಪಾಯದ ಮಟ್ಟವನ್ನು ಗುರುತು ಹಾಕಿಟ್ಟಿದ್ದಾರೆ ಎಂದು ಭಾವಿಸೋಣ. ಅಪಾಯದ ಮಟ್ಟವನ್ನು ತಲುಪುವಷ್ಟು ನೀರಿನ ಏರಿಕೆಯಾಗುತ್ತಿದ್ದಾಗ ಏರುತ್ತಿರುವ ನೀರಿನ ಪ್ರಮಾಣವು ಅಪಾಯದ ಮಟ್ಟವನ್ನು ತಲುಪುವುದಕ್ಕೆ ಮುಂಚಿತವಾಗಿ ಗುರುತಿಸಲಾದ ಅಪಾಯದ ಮಟ್ಟವನ್ನೆ ಅಳುಕಿಸಿ ಹೊಸದಾದ ಅಪಾಯದ ಮಟ್ಟವನ್ನು ಎತ್ತರದಲ್ಲಿ ಗುರುತಿ ಹಾಕಿದಲ್ಲಿ ಬದುಕಲು ಸಾಧ್ಯವಾದಿತೆ?!  ಅಂತಹದೊಂದು ದುಸ್ಸಾಹಸಕ್ಕೆ ಕೈಹಾಕುತ್ತಿರುವರೆ?

ರೈತರನ್ನು ಋಣಮುಕ್ತಗೊಳಿಸುವ ಸರಕಾರದ ಯಾವುದೇ ಕ್ರಮವನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ರೈತರ ಹಿತಕಾಯುವ ಎಲ್ಲ ಸಾಧ್ಯತೆಗಳನ್ನು ಹೊಸ ಆಯಾಮದೊಂದಿಗೆ ಪ್ರಯೋಗಿಸಬೇಕಾದ ಅನಿವಾರ್ಯತೆ ಎಲ್ಲ ನಾಗರೀಕ ಸರಕಾರಗಳ ಮುಂದಿದೆ. ಆದರೆ ರೈತರನ್ನು ಸಾಲವನ್ನಾ ಮಾಡಲಾಗಿದೆಯೆಂಬ ಭ್ರಮೆಯಲ್ಲಿ ತೇಲಿಸಿಬಿಡುವುದಕ್ಕಿಂತ ರೈತನೊಬ್ಬನು ಮುಂದೆಂದೂ ಸಾಲಗಾರನಾಗದಂತೆ ಸದೃಢಗೊಳಿಸುವ ಯೋಜನೆಗಳ ಬಗ್ಗೆ ಚಿಂತಿಬೇಕಾಗಿದೆ. ಇಲ್ಲಿಯವರೆಗೂ ನೂತನ ಸರಕಾರದಿಂದ ಅದರ ಬಗ್ಗೆ ಚರ್ಚೆಯಾಗದಿರುವುದು ದುರದೃಷ್ಟಕರ. ಸಾಲಮನ್ನಾ ಕುರಿತಂತೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಸರಕಾರ ಈ  ಪುಡಿಗಾಸಿನಷ್ಟು ಹಣವನ್ನೂ ಸಹ ಸಾಲ ನೀಡಿದ ಬ್ಯಾಂಕ್‌ಗಳಿಗೆ ನೀಡದಿರುವುದನ್ನು ಗಮನಿಸಬಹುದಾಗಿದೆ. ಅದಕ್ಕಾಗಿಯೆ ದಿನಕ್ಕೊಂದು ಹೇಳಿಕೆಯನ್ನು ಕುಮಾರಸ್ವಾಮಿಯವರು ನೀಡುತ್ತಿರುವುದಕ್ಕೆ ಕಾರಣಗಳಾದರೂ ಏನಿರಬಹುದು? ಸಮ್ಮಿಶ್ರ ಸರಕಾರದಲ್ಲಿ ಎಲ್ಲವೂ ಸರಿಯಾಗಿಲ್ಲ. ಉಭಯ ಪಕ್ಷಗಳ ನಾಯಕರು ಹಾಗೂ ಶಾಸಕರಲ್ಲಿ ಸಮನ್ವಯತೆ ಮೂಡಿರುವುದಿಲ್ಲ. ಕಗ್ಗಂಟಾಗಿರುವ ಸಂಪುಟ ವಿಸ್ತರಣೆಯ ನಂತರ ರಾಜಕೀಯ ಬೆಳವಣಿಗೆಗಳು ಯಾವ ಮಾರ್ಗವನ್ನು ಅನುಸರಿಸಿದರೂ ಅಚ್ಚರಿಯಿಲ್ಲ! ಇತ್ತಿಚೆಗೆ ಸಿದ್ಧರಾಮಯ್ಯನವರು ಸಮಾರಂಭವೊಂದರಲ್ಲಿ ಮಾನಾಡುತ್ತ ಜನಾಶಿರ್ವಾದವಿದ್ದರೆ ಪುನಃ ನಾನು ಮುಖ್ಯಮಂತ್ರಿಯಾಗಬಲ್ಲೆ ಎಂದು ನೀಡಿರುವ ಹೇಳಿಕೆ ಕೆಲದಿನಗಳಲ್ಲಿ ಬಹಳಷ್ಟು  ಅನಿರೀಕ್ಷಿತ ಬೆಳವಣಿಗೆಗಳಿಗೆ ಕಾರಣವಾಗಬಹುದು. ಇದನ್ನು ಮನಗಂಡಿರುವ ಕುಮಾರಸ್ವಾಮಿಯವರು ಈ ಸರಕಾರವು ಬಹಳಷ್ಟು ದಿನಗಳವರೆಗೆ ಸಾಗಲಾರದೆಂಬ ಅಂಶವನ್ನು ಮನಗಂಡಿರುವಂತೆ ಭಾಸವಾಗುತ್ತಿದೆ. ಅದರಿಂದಾಗಿಯೆ ಇಂತಹ ಅತಿರೇಕದ ಘೋಷಣೆಗಳಿಂದ ಗೊಂದಲದಲ್ಲಿರುವ ಶಾಸಕರನ್ನು ಬಂಡಾಯವೇಳದಂತೆ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನಕ್ಕೆ ಕೈಹಾಕಿದಂತಾಗಿದೆ ಎಂದು ರಾಜಕೀಯ ಮೊಗಸಾಲೆಯಲ್ಲಿ ಚರ್ಚೆಯಾಗುತ್ತಲಿದೆ. ಅಷ್ಟಕ್ಕೂ ಸರಕಾರ ಉರುಳಿ ಬಿದ್ದಲ್ಲಿ ಮುಂದೆ ಅಸ್ತಿತ್ವಕ್ಕೆ ಬರಲಿರುವ ಸರಕಾರವನ್ನು ಪೇಚಿಗೆ ಸಿಲುಕಿಸುವುದಕ್ಕಾಗಿ ನಮ್ಮ ಸರಕಾರವಿದ್ದಾಗ ಕೈಗೊಂಡಿರುವ ನಿರ್ಣಯಗಳೆಲ್ಲವನ್ನೂ ಜಾರಿಗೆ ತನ್ನಿ ಎಂದು ಟೀಕಿಸಲು ಅನುವಾಗುವ ಪ್ರಭಲ  ಕುಮಾರಸ್ವಾಮಿಯವರು ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆಯೆ? ಕಾದು ನೋಡದೆ ಅನ್ಯ ಮಾರ್ಗವಿಲ್ಲ.