Breaking Newsದೇಶಪ್ರಚಲಿತ
ಮತ್ತೆ ಹೇಳುತ್ತೇನೆ…. ಮೋದಿ ಭ್ರಷ್ಟ!

ದೆಹಲಿ: ರಫೇಲ್ ಒಪ್ಪಂದಕ್ಕೆೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ಮುಂದುವರಿಸಿರುವ ಕಾಂಗ್ರೆೆಸ್ ಅಧ್ಯಕ್ಷ ರಾಹುಲ್ ಗಾಂಧಿ, ‘ಮೋದಿ ಒಬ್ಬ ಭ್ರಷ್ಟ, ಅವರು ಕೇವಲ ಅನಿಲ್ ಅಂಬಾನಿಗೆ ಮಾತ್ರ ಪ್ರಧಾನಿಯಾಗಿದ್ದಾರೆ’ ಎಂದು ಕುಟುಕಿದ್ದಾರೆ.
ರಫೇಲ್ ಒಪ್ಪಂದದಲ್ಲಿ ಅನಿಲ್ ಅಂಬಾನಿ ಅವರ ರಿಲಾಯನ್ಸ್ ಡಿಫೆನ್ಸ್ ಏವಿಯೇಷನ್ ಸಂಸ್ಥೆೆಯನ್ನು ಆಯ್ಕೆ ಮಾಡಿಕೊಂಡಿದ್ದು ಫ್ರಾನ್ಸ್ ದೇಶದ ಡಸ್ಸಾಲ್ಟ್ ಏವಿಯೇಷನ್ ಸಂಸ್ಥೆೆ ಎಂದು ಫ್ರಾನ್ಸ್ ಮಾಧ್ಯಮಗಳು ಗುರುವಾರ ವರದಿ ಮಾಡಿವೆ. ಇದರ ಬೆನ್ನಲ್ಲೇ ದೆಹಲಿಯ ಪಕ್ಷದ ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆೆಸ್ ಅಧ್ಯಕ್ಷ, ಕೇಂದ್ರ ರಕ್ಷಾ ಮಂತ್ರಿ ನಿರ್ಮಲಾ ಸೀತರಾಮನ್ ಅವರ ಫ್ರಾನ್ಸ್ ಪ್ರವಾಸವನ್ನು ಪ್ರಶ್ನಿಸಿದರು.
ಡಸ್ಸಾಲ್ಟ್ ಕಂಪನಿಯ ಅಧಿಕಾರಿಯು ಕಳೆದ ವರ್ಷ ತಮ್ಮ ಸಹೊದ್ಯೋಗಿಗಳಿಗೆ ರಿಲಾಯನ್ಸ್ ಜತೆಗಿನ ಒಪ್ಪಂದ ತಮ್ಮ ಕಂಪನಿಗೆ ತೀರಾ ಅನಾನುಕೂಲಕರವಾದ ಒಪ್ಪಂದ ಹಾಗೂ ಷರತ್ತುಗಳನ್ನು ಹಾಕಲಾಗಿದೆ. ಭಾರತದಿಂದ ರಫೇಲ್ ಒಪ್ಪಂದವನ್ನು ಪಡೆಯಬೇಕಾದರೆ ಈ ಷರತ್ತುಗಳಿಗೆ ಒಪ್ಪಲೇಬೇಕಾಗಿದೆ ಎಂದು ಹೇಳಿರುವ ವರದಿಯನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.
‘ಈ ಅಂಶದಿಂದ ಒಂದಂತು ಸ್ಪಷ್ಟವಾಗಿದೆ ಪ್ರಧಾನಿ ಭ್ರಷ್ಟರಾಗಿದ್ದಾರೆ. ಮತ್ತೊಮ್ಮೆ ಹೇಳುತ್ತಿದ್ದೇನೆ ಭಾರತದ ಪ್ರಧಾನಿ ಒಬ್ಬ ಭ್ರಷ್ಟ. ಆದರೆ ದುರಾದೃಷ್ಟಕರ ಅವರು ಭ್ರಷ್ಟಾಚಾರದ ವಿರುದ್ಧ ಪ್ರಚಾರ ಮಾಡಿಕೊಂಡು ಅಧಿಕಾರಕ್ಕೆೆ ಬಂದಿದ್ದಾರೆ. ಮೋದಿ ಅವರು ನಮಗೆ ಪ್ರಧಾನಿಯಾಗಿಲ್ಲ. ಅವರು ಕೇವಲ ಅನಿಲ್ ಅಂಬಾನಿಗೆ ಮಾತ್ರ ಪ್ರಧಾನಿಯಾಗಿದ್ದಾರೆ’ ಎಂದರು.
ಇನ್ನು ದೇಶದಲ್ಲಿ ರಫೇಲ್ ವಿಚಾರವಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಯಾಗಿರುವ ಮಧ್ಯೆ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರು ಫ್ರಾನ್ಸ್ ಪ್ರವಾಸವನ್ನು ಪ್ರಶ್ನಿಸಿದ್ದಾರೆ. ‘ಈಗ ನಿರ್ಮಲಾ ಸೀತರಾಮನ್ ಅವರು ದಿಢೀರನೆ ಫ್ರಾನ್ಸ್ಗೆ ಭೇಟಿ ನೀಡುತ್ತಿದ್ದಾರೆ. ಅದು ಡಸ್ಸಾಲ್ಟ್ಗೆ ಭೇಟಿ ನೀಡುತ್ತಿದ್ದು, ಹೀಗೆ ಆತುರದಲ್ಲಿ ತೆರಳುವ ಅಗತ್ಯ ಏನಿದೆ?’ ಎಂದು ಪ್ರಶ್ನಿಸಿದ್ದಾರೆ.
‘ರಕ್ಷಣಾ ಸಚಿವರ ಈ ಭೇಟಿಯ ಹಿಂದೆ ಡಸ್ಸಾಲ್ಟ್ ಕಂಪನಿ ಮೇಲೆ ಒತ್ತಡ ಹೇರುವ ಉದ್ದೇಶವಿದೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಮತ್ತೊಂದು ವಿಚಾರ ಎಂದರೆ, ಡಸ್ಸಾಲ್ಟ್ ಕಂಪನಿಗೆ ಅತಿ ದೊಡ್ಡ ಒಪ್ಪಂದವೊಂದು ಸಿಕ್ಕಿದ್ದು, ಅದು ಭಾರತೀಯ ಸರಕಾರ ಏನು ಹೇಳುತ್ತದೋ ಅದನ್ನು ಪಾಲಿಸಲು ಸಿದ್ಧವಾಗಿದೆ. ಆದರೆ ಡಸ್ಸಾಲ್ಟ್ ಕಂಪನಿಯ ಆಂತರಿಕ ದಾಖಲೆಗಳನ್ನು ಪರಿಶೀಲಿಸಿದರೆ ನಿಜವಾದ ಸಂಗತಿ ಅರ್ಥವಾಗುತ್ತದೆ’ ಎಂದು ರಾಹುಲ್ ತಿಳಿಸಿದ್ದಾರೆ.