About Us Advertise with us Be a Reporter E-Paper

ಅಂಕಣಗಳು

ಒತ್ತಾಯದ ಸನ್ಯಾಸದ ಬದಲು ಒಪ್ಪಿತ ಮಾರ್ಗ ಹುಡುಕಲಿ

ಯಾಪಲರವಿ

ಹೀಗೆ ಬರೆಯಲು ಬೇಸರ, ಆದರೂ ಬರೆಯುವುದು ಅನಿವಾರ್ಯ. ಒಂದೆರಡು ದಿನಗಳ ಹಿಂದೆ ಅಗಲಿದ ಸ್ವಾಮಿಗಳು ಮತ್ತದರ ಸುತ್ತ ಸುತ್ತಿಕೊಳ್ಳುತ್ತಿರುವ ಅಸಹ್ಯ ಕತೆಗಳ ಕೇಳಲು ಮುಜುಗರ. ಈ ದೇಶದಲ್ಲಿ ಸಾವಿರಾರು ಮಠಗಳು, ಧಾರ್ಮಿಕ ಕ್ಷೇತ್ರಗಳು, ಸ್ವಾಮಿಗಳು, ಸಂತರು, ಯತಿಗಳು ಇದ್ದಾರೆ. ಆದರೆ ಬೆರಳೆಣಿಕೆಯಷ್ಟು ಮಾತ್ರ ಬ್ರಹ್ಮಚಾರಿಗಳು, ಮಿಕ್ಕವರೆಲ್ಲ ಒತ್ತಾಯದ ‘ಫೋರ್ಸ್‌ಡ್ ಬ್ಯಾಚುಲರ್’ಗಳೇ. ಬಾಲಕನೊಬ್ಬ ಮುಗ್ಧ ವಯಸಿನಲ್ಲಿ ತನಗೆ ಅರಿವಿಲ್ಲದಂತೆ ಸನ್ಯಾಸಿಯಾಗಿ ಅನುಭವಿಸಿದ ಯಾತನೆಯನ್ನು ಸ್ನೇಹಿತರೊಬ್ಬರು ಬರೆದ ಕವಿತೆಯಲ್ಲಿ  ಒತ್ತಾಯದ ಸನ್ಯಾಸದ ಭಯಾನಕತೆಯನ್ನು ಆ ಕವಿತೆ ಹೃದಯಂಗಮವಾಗಿ ವಿವರಿಸುತ್ತದೆ.

ಪರಂಪರೆಯ ಹೆಸರಿನಲ್ಲಿ, ಮಾಗದ ಮನಸುಗಳಿಗೆ ಸನ್ಯಾಸ ದೀಕ್ಷೆ ನೀಡಿ, ಅವರು ಲೈಂಗಿಕ ಬಯಕೆಯಿಂದ ಒದ್ದಾಡಿ, ಏಕಾಂತದಲಿ ನರಳುವ ಶಿಕ್ಷೆಯ ಅಗತ್ಯವಿದೆಯಾ? ಮಠಗಳು, ಸಮಾಜವನ್ನು ಉದ್ಧರಿಸುವ ಪರಿಕಲ್ಪನೆಯಿಂದ ಹುಟ್ಟಿದ ಶ್ರದ್ಧಾ ಕೇಂದ್ರಗಳು. ಅಲ್ಲಿ ನೆಲೆಸುವ ಸ್ವಾಮಿಗಳು ಸರ್ವಸಂಗ ಪರಿತ್ಯಾಗಿಗಳಾಗಿ ನೊಂದವರ ಕಣ್ಣೀರು ಒರೆಸಲಿ ಎಂಬ ಉದ್ದೇಶವೂ ಇದೆ. ಆದರೆ ಸ್ವಾಮಿಗಳಾದವರೇ ಕಾಮ ನಿಗ್ರಹದಲ್ಲಿ ತೊಳಲಾಡುತ್ತ ಕಣ್ಣೀರು ಹಾಕುವಂತಾದರೆ ಹೇಗೆ?

ಸಾವಿರಾರು  ಪರಂಪರೆಯ ಸನ್ಯಾಸ ಧರ್ಮಕ್ಕೆ ಅದರದೇ ಆದ ಘನತೆ-ಪರಂಪರೆ ಹಾಗೂ ಸೂಕ್ತ ತರಬೇತಿಯೂ ಇರುತ್ತಿತ್ತು. ಆಳವಾದ ಅಧ್ಯಯನ, ಯೋಗಾಭ್ಯಾಸ, ಧ್ಯಾನಗಳ ವಿಧಿ-ವಿಧಾನಗಳ ಮೂಲಕ ಮನಸ್ಸನ್ನು ತರಬೇತುಗೊಳಿಸಿ ಸ್ವ ಇಚ್ಛೆಯಿಂದ ಒಪ್ಪಿಕೊಂಡರೆ ಮಾತ್ರ ಸನ್ಯಾಸಿಗಳಾಗುವ ಅವಕಾಶವಿತ್ತು. ಮಠಗಳು ಕ್ರಮೇಣ ರಾಜಗೃಹಗಳಾದವು. ಅಪಾರ ಆಸ್ತಿ, ಹಣ ಹೊಂದಿರುವ ಐಷಾರಾಮಿ ಕೇಂದ್ರಗಳಾದವು. ರಾಜ ಮಹಾರಾಜರುಗಳು, ಅಧಿಕಾರ ಹೊಂದಿದವರ ಅಡ್ಡೆಗಳಾದವು. ಸರಳತೆಯ ಜಾಗದಲ್ಲಿ ಆಡಂಬರ ಆಕ್ರಮಿಸಿತು. ಧ್ಯಾನಗಳು ಹೋಗಿ ಉದ್ಯಾನವನಗಳಾದವು.

ಸನ್ಯಾಸದ ನಿರಾಡಂಬರ, ನಿರಂಜನ, ನಿರ್ಲಿಪ್ತ,  ಧೋರಣೆಗಳು ಮಾಯವಾದವು. ಕಾವಿ ದೇಹವೇರಿತಾದರೂ ದೇಹದ ಕಾವು ಆರಲಿಲ್ಲ. ಹೇಗೆ ಆರಿಸಿಕೊಳ್ಳಬೇಕೆಂಬ ಅರಿವು ಸಿಗಲಿಲ್ಲ. ಈ ಗೊಂದಲ ನೋಡಿಯೇ ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಪರ್ಯಾಯ ಮಾರ್ಗದ ಶರಣತ್ವ ಕಂಡುಹಿಡಿದರು. ಸಂಸಾರದಿಂದ ಸನ್ಮುಕ್ತಿಯ ಪಥ ತೋರಿದರು. ತಾನುಂಬುವ ಊಟದಷ್ಟೇ ತನ್ನಾಸೆಯ ರತಿಸುಖ ಅದುಮಿಡಲಾಗದು ಎಂದರಿತು, ಹೊಸ ಹಾದಿಯ ಮೂಲಕ ಸದ್ಗತಿಯ ಬೆಳಕ ಹಿಡಿದರು. ಆ ಕಾಲಘಟ್ಟದಲ್ಲೂ ಅಲ್ಲಮ, ಅಕ್ಕಮಹಾದೇವಿ, ಚನ್ನಬಸಣ್ಣ ಹಾಗೂ ಕೆಲ ಶರಣರು ತಮ್ಮ ಆತ್ಮಬಲದ ಮೂಲಕ  ಮಾರ್ಗದಲ್ಲಿ ಉಳಿದು ಬ್ರಹ್ಮಚರ್ಯದ ಘನತೆ ಮೆರೆದರು. ಆದರೆ ಅಲ್ಲಮನ ಹಾದಿ ಸುಲಭವಲ್ಲವೆಂದು ಗೊತ್ತಿದ್ದರೂ ಅದೇ ಪರಂಪರೆಯ ಲಿಂಗಾಯತ ವಿರಕ್ತ ಮಠಗಳು ಸನ್ಯಾಸ ಪರಂಪರೆಗೆ ಜೋತುಬಿದ್ದು ನಿರೀಕ್ಷಿಸಿದ ಯಶ ಕಾಣದೇ ಹೋದದ್ದು ವಿಪರ್ಯಾಸ.

ಆದರೂ ಇಲ್ಲಿಯವರೆಗೂ ಮಠಗಳು, ಮಠಾಧೀಶರ ಸಂಖ್ಯೆ ಸಾವಿರಗಟ್ಟಲೆ ಬೆಳೆಯುತ್ತ, ಸನ್ಯಾಸದ ಮೌಲ್ಯ ಕುಸಿಯುತ್ತಲೇ ಇದೆ. ಇದನ್ನು ತಡೆಯುವ ಮನಃಸ್ಥಿತಿ ನಮ್ಮಲ್ಲಿ ಬರದಿರಲು ಮಠಗಳು ಹೊಂದಿರುವ ಕೋಟ್ಯಂತರ ಬೆಲೆ ಬಾಳುವ ಸಂಪತ್ತು, ಮತ್ತದರ ಐಷಾರಾಮಿ ಜೀವನ ಕ್ರಮವೇ  ಹಿಂದೆ ಮಠಗಳಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಅಲ್ಲಿಯೇ ತಿಪ್ಪೆಸಾರಿಸಿ ಮುಚ್ಚಿಹಾಕುತ್ತಿದ್ದರು. ಆದರೀಗ ಕಾಲ ಬದಲಾಗಿದೆ. ವೈಜ್ಞಾನಿಕ ಯುಗದಲ್ಲಿ ಯುವಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ. ಆಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ ವ್ಯಕ್ತಿ ಮನೋಬಲ ಕಳೆದುಕೊಂಡು ವಿಚಲಿತನಾಗುತ್ತಿದ್ದಾನೆ. ಸನ್ಯಾಸಕ್ಕೆ ಬೇಕಾದ ಆಧ್ಯಾತ್ಮಿಕ ತರಬೇತಿ ವಿಧಾನ ದುರ್ಬಲಗೊಂಡಿದೆ. ವಿದ್ಯಾವಂತ ಸುಶಿಕ್ಷಿತ ತರುಣರನ್ನು ಮಠದ ಅಭಿವೃದ್ಧಿ ನೆಪದಲ್ಲಿ ಸನ್ಯಾಸಿಗಳೆಂದು ಘೋಷಿಸಿದರೂ ಅವರು ಆಡಳಿತದ ಮುಖ್ಯಸ್ಥರಾಗುತ್ತಾರೆಯೇ ಹೊರತು ಸ್ವಾಮಿಗಳಾಗಿ ಉಳಿಯುವುದಿಲ್ಲ. ವ್ಯವಹಾರ, ಸಾರ್ವಜನಿಕ ಒಡನಾಟದ ನೆಪದಲ್ಲಿ ಕಳೆದುಹೋಗಿ  ಬೀಳುತ್ತಾರೆ. ಕಾಮ, ಮನುಷ್ಯನನ್ನು ವಿಚಿತ್ರವಾಗಿ ಆಳುವ ಸಹಜ ಕ್ರಿಯೆ. ಅದರ ಸೆಳೆತದಿಂದ ಸರಳವಾಗಿ ತಪ್ಪಿಸಿಕೊಳ್ಳಲಾಗದು.

ದಾಂಪತ್ಯ ಬದುಕಿನ ಕಟ್ಟುಪಾಡುಗಳ ಮಧ್ಯೆ ಕೂಡ, ಹಣ, ಯೌವನ, ಅಧಿಕಾರ ಮದದಿಂದ ಮನುಷ್ಯ ಹಾದಿ ತಪ್ಪಿ ಹಳ್ಳ ಹಿಡಿದರೂ ಸಂಸಾರದ ಜವಾಬ್ದಾರಿಯಿಂದ ತನ್ನ ತಾ ನಿಗ್ರಹಿಸಿಕೊಳ್ಳುತ್ತಾನೆ. ಕನಿಷ್ಠ ತನ್ನ ಕುಟುಂಬದ ಇಮೇಜಿಗೆ ಹೆದರಿ. ಆದರೆ  ‘ಸೋ ಕಾಲ್‌ಡ್’ ಸನ್ಯಾಸಿಗಳು ವಿಲಾಸಿಗಳಾಗಲು ಮನಸು ಮಾಡಿದರೆ ಮುಗಿಯಿತು, ಎಲ್ಲ ಸರ್ವನಾಶ. ಸಾಂಸಾರಿಕ ಹೊಣೆಗಾರಿಕೆ, ಆರ್ಥಿಕ ಅಭದ್ರತೆ,  ನಿರ್ವಹಣೆಯ ಸಂಕಷ್ಟವಿಲ್ಲದ ಸ್ವಾಮಿಗಳು ಸ್ವೇಚ್ಛಾಚಾರಿಗಳಾಗಿಬಿಡುತ್ತಾರೆ. ನೂರಕ್ಕೆ ತೊಂಬತ್ತರಷ್ಟು ಸನ್ಯಾಸ ಇವತ್ತು ಈ ವಿನಾಶಕಾರಿ ಸ್ಥಿತಿಯಲ್ಲಿರುವುದು ಓಪನ್ ಸೀಕ್ರೆಟ್. ಆಧುನಿಕ ಸೋಷಿಯಲ್ ಮೀಡಿಯಾಗಳು ಮತ್ತು ಅವುಗಳ ಸಾಧನಗಳು ಬಹು ಬೇಗ ಖಾಸಗಿತನವನ್ನು ಎಕ್‌ಸ್ ಪೋಸ್ ಮಾಡುವುದರಿಂದ ಈಗ ಎಲ್ಲ ಬಟಾ ಬಯಲು. ‘ಅಯ್ಯೋ ಇರಲಿ, ಅವೆಲ್ಲ ಇದ್ದದ್ದೇ ನಾವೇ ಸ್ವಲ್ಪ ಹೊಂದಿಕೊಂಡರಾಯಿತು’ ಎಂಬ ಭಕ್ತರ ಉದಾಸೀನ ಬೇರೆ. ಆದರೆ ಈಗ ಪರಿಸ್ಥಿತಿ ಬಿಗಡಾಯಿಸಿ ಅಸಹ್ಯಕರ ಹಂತ ತಲುಪಿದೆ.

ವಯೋವೃದ್ಧರಾದ ಪೇಜಾವರ  ಸಣ್ಣ ಪುಟ್ಟ ತಪ್ಪು ಮಾಡಿದರೆ ಸರಿ, ಆದರೆ ಇಂತಹ ದೊಡ್ಡ ದೌರ್ಬಲ್ಯ ಹೊಂದಿರಬಾರದು’ ಎಂಬ ಬಹಿರಂಗ ಹೇಳಿಕೆ ನೀಡಿದ್ದಾರೆ. ಅವರ ಪ್ರಕಾರ ಒಪ್ಪಿಕೊಳ್ಳಬಹುದಾದ ಸಣ್ಣ ತಪ್ಪುಗಳು ಯಾವುವು, ಒಪ್ಪಲಾಗದ ದೊಡ್ಡ ತಪ್ಪುಗಳು ಯಾವುದೆಂಬುದನ್ನು ಬಿಡಿಸಿ ಹೇಳಿ ನಮ್ಮ ಅನುಮಾನ ಬಗೆಹರಿಸಲಿ. ಜಪ, ತಪ, ಪೂಜೆ, ಅನುಷ್ಠಾನಗಳ ಮರು ವ್ಯಾಖ್ಯಾನವೂ ಆಗಲಿ. ಒತ್ತಾಯದ ಸನ್ಯಾಸದ ಬದಲಾಗಿ ಒಪ್ಪಿತ ಮಾರ್ಗ ಕಂಡು ಹಿಡಿದು, ಮಠಗಳ ಹಾಗೂ ಸನ್ಯಾಸಿಗಳ ಮಾನ-ಪ್ರಾಣ ಕಾಪಾಡುವ ದಾರಿ  ಸ್ವಾಮಿಗಳಾದವರಿಗೂ ಸ್ವಲ್ಪ ಏನೋ ದೌರ್ಬಲ್ಯ ಇರೋದೆ, ಇರಲಿ ಬಿಡಿ ಅನ್ನುವುದಾದರೆ ಧರ್ಮ,ಅರ್ಥ, ಕಾಮ, ಮೋಕ್ಷಗಳ ಸ್ವರೂಪ ಬದಲಾಯಿಸಿ. ಹೇಗಿರಬೇಕೆಂಬುದನ್ನು ಬಹಿರಂಗವಾಗಿ ಹೇಳಿಬಿಡಿ. ಇದು ಕೇವಲ ಯಾವುದೋ ಒಂದು ಪರಂಪರೆಯ ಮಠಗಳ ಸಮಸ್ಯೆಯಲ್ಲ. ಎಲ್ಲ ಧರ್ಮಗಳ, ಎಲ್ಲ ಪಂಥಗಳ ಸಮಸ್ಯೆ. ಅತ್ಯಾಚಾರ, ಅನಾಚಾರವಿಲ್ಲದೆ ‘ಸಬಕೋ ಸನ್ಮತಿ ದೇ ಭಗವಾನ್’ ವಾತಾವರಣ ನಿರ್ಮಾಣವಾಗುವಂತೆ ಮಠಾಧೀಶರು ಆಲೋಚನೆ ಮಾಡಿ ಸನ್ಯಾಸಕೊಂದು ಸಂರಕ್ಷಣೆ ನೀಡಲಿ.

Tags

Related Articles

Leave a Reply

Your email address will not be published. Required fields are marked *

Language
Close