‘ಗೋ-ಮಯ’ ವಿಜ್ಞಾನ ವಿವರಣೆಯಲ್ಲಿ ನೈಜತೆಯಿರಲಿ

Posted In : ಸಂಗಮ, ಸಂಪುಟ

ಜೂನ್ 1ರಂದು ಪತ್ರಿಕೆಯೊಂದರಲ್ಲಿ ಪ್ರಕಟವಾದ ನಾಗೇಶ ಹೆಗಡೆಯವರ ‘ಆಧುನಿಕ ಬದುಕಿನ ಪ್ರತಿಕ್ಷಣವೂ ಗೋ-ಮಯ’ ಎಂಬ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಈ ಕೆಳಗಿನ ಸಾಲುಗಳನ್ನು ಬರೆಯುತ್ತಿದ್ದೇನೆ. ವೈಜ್ಞಾನಿಕ ಅಂಕಣವೆಂಬ ಹೆಸರಿನಲ್ಲಿ ಪ್ರಕಟವಾದ ಈ ಲೇಖನದಲ್ಲಿ ವೈದ್ಯಕೀಯ ರಂಗಕ್ಕೆ ಕುರಿತಾದ ಹಲವಾರು ಮಿಥ್ಯೆಗಳು ಹಾಗೂ ಉತ್ಪ್ರೇಕ್ಷೆಗಳಿರುವುದರಿಂದ, ಈ ಲೇಖನದ ಸತ್ಯಾಸತ್ಯತೆಗಳನ್ನು ಜನರ ಮುಂದಿರಿಸುವುದು ಸಮಾಜದ ಬಗ್ಗೆ ಕಾಳಜಿಯಿರುವ ಓರ್ವ ಪ್ರಜ್ಞಾವಂತ ವೈದ್ಯೆಯಾಗಿ ನನ್ನ ಜವಾಬ್ದಾರಿ ಎಂದು ನನಗನ್ನಿಸುತ್ತಿದೆ.

ವೈದ್ಯಕೀಯಕ್ಕೆ ಸಂಬಂಧ ಪಟ್ಟಂತೆ ಅಲ್ಲಿ ಬರೆದಿರುವುದೆಲ್ಲಾ ಸುಳ್ಳು ಎಂದು ನಾನು ಹೇಳಲು ಪ್ರಯತ್ನಿಸುತ್ತಿಲ್ಲ. ಆದರೆ ಅದರಲ್ಲಿ ಹಲವು ಉತ್ಪ್ರೇಕ್ಷೆಗಳೂ, ಕೆಲವು ಕಟ್ಟುಕತೆಗಳೂ ಇರುವುದು ಮೇಲ್ನೋಟಕ್ಕೇ ಸ್ಪಷ್ಟವಾಗಿ ಕಾಣುತ್ತಿತ್ತು. ಇದರ ಬಗ್ಗೆ ನಾನು ಫೇಸ್‌ಬುಕ್‌ನ ಮೂಲಕ ನಾಗೇಶ ಹೆಗಡೆಯವರ ಗಮನ ಸೆಳೆದಾಗ, ಅವರು ನನಗೆ ಯಾವ ಸ್ಪಷ್ಟೀಕರಣವನ್ನೂ ನೀಡದೆ ‘ನಿಮ್ಮ ಪ್ರಾಕ್ಟೀಸ್‌ಅನ್ನು ಅಪ್‌ಡೇಟ್ ಮಾಡಿಕೊಳ್ಳಿ’ ಎಂಬ ಹಾರಿಕೆಯ ಉತ್ತರ ನೀಡಿದರು. ನನ್ನಂತೆ ಇನ್ನು ಕೆಲವು ವೈದ್ಯರೂ ಈ ಬಗ್ಗೆ ಪ್ರತಿಕ್ರಿಯೆಗಳನ್ನು ನೀಡಿದ್ದರು. ವೈದ್ಯರಲ್ಲದ ಹಲವರೂ ಈ ಲೇಖನದ ಬಗ್ಗೆ ತಮಗಿರುವ ಅನುಮಾನವನ್ನು ವ್ಯಕ್ತಪಡಿಸಿದ್ದರು. ಮೇಲಿನ ಲೇಖನದಲ್ಲಿರುವ ಹಲವಾರು ವಿಷಯಗಳು ವಿಶ್ವಾಸಾರ್ಹವೇ ಎಂಬ ಶಂಕೆ ನನಗಿದ್ದರೂ, ಆ ವಿಷಯಗಳು ನನ್ನ ಪರಿಣತಿಯ ಕ್ಷೇತ್ರಗಳಲ್ಲವಾದ್ದರಿಂದ, ವೈದ್ಯಕೀಯ ಕ್ಷೇತ್ರದ ವಿಷಯಗಳ ಬಗ್ಗೆ ಅವರು ಕೊಟ್ಟಿರುವ ಮಾಹಿತಿಯ ಬಗ್ಗೆಯಷ್ಟೇ ಇಲ್ಲಿ ಬರೆಯಹೊರಟಿದ್ದೇನೆ.

ಈಗ ಹೆಗಡೆಯವರ ಲೇಖನದಲ್ಲಿ ದನದ ಶರೀರದ ಭಾಗಗಳಿಂದ ಉತ್ಪಾದಿಸಿ, ವೈದ್ಯಕೀಯದಲ್ಲಿ ದಿನವೂ ಉಪಯೋಗಿಸಲಾಗುತ್ತವೆ ಎಂದು ಹೇಳಲಾಗಿರುವ ಉತ್ಪನ್ನಗಳ ಮೇಲೆ ಒಂದೊಂದಾಗಿ ಗಮನಹರಿಸೋಣ. ಭಾರತದಲ್ಲಿ ಆರು ಕೋಟಿಗೂ ಹೆಚ್ಚು ಮಧುಮೇಹದ ರೋಗಿಗಳಿದ್ದಾರೆ ಎಂದು ಹೇಳುವ ಹೆಗಡೆಯವರು, ಈ ರೋಗಿಗಳಿಗೆಲ್ಲಾ ದನಗಳ ಮೇದೋಜೀರಕ ಗ್ರಂಥಿಗಳಿಂದ ತೆಗೆದ ಇನ್ಸುಲಿನ್‌ಅನ್ನೇ ಬಳಸುತ್ತಾರೆ ಎನ್ನುತ್ತಾರೆ. ಈ ವಾಕ್ಯದ ಕನ್ನಡ ಅರ್ಥವನ್ನು ವಿಶ್ಲೇಷಿಸಿದರೆ, ಈ ಆರು ಕೋಟಿ ಮಧುಮೇಹಿಗಳೂ ಬಳಸುತ್ತಿರುವುದು ದನದ ದೇಹದಿಂದ ಉತ್ಪತ್ತಿಯಾದ ಇನ್ಸುಲಿನ್‌ಅನ್ನು ಮಾತ್ರ, ಡಯಾಬಿಟಿಸ್ ರೋಗಕ್ಕೆ ಬೇರೆ ಚಿಕಿತ್ಸೆ ಇಲ್ಲವೇ ಇಲ್ಲ ಎಂದಾಯಿತಲ್ಲವೇ? ಈ ವಾಕ್ಯ ಎಷ್ಟರ ಮಟ್ಟಿಗೆ ಸುಳ್ಳು ಎಂದು ನೀವೇ ಯೋಚಿಸಿ. ಮಧುಮೇಹದಲ್ಲಿ ಟೈಪ್1 ಹಾಗೂ ಟೈಪ್2 ಎಂಬ ಎರಡು ಮುಖ್ಯ ವಿಧಗಳಿವೆ. ಇದರಲ್ಲಿ ಟೈಪ್1 ಡಯಾಬಿಟಿಸ್‌ಗೆ ಇನ್ಸುಲಿನ್‌ಅನ್ನು ಮುಖ್ಯ ಔಷಧಿಯಾಗಿ ಬಳಸಿದರೆ, ಎರಡನೇ ವಿಧದ ಡಯಾಬಿಟಿಸ್‌ಗೆ ‘ಓರಲ್ ಹೈಪೋಗ್ಲೈಸೀಮಿಕ್ಸ್‌’ ಎಂಬ ವರ್ಗಕ್ಕೆ ಸೇರಿದ ಮಾತ್ರೆಗಳನ್ನು ಬಳಸುತ್ತಾರೆ.

ಈ ಮಾತ್ರೆಗಳಿಗೂ ದನದ ದೇಹಕ್ಕೂ ಯಾವ ಥರದ ಸಂಬಂಧವೂ ಇಲ್ಲ. ಹಾಗಾದರೆ, ಇನ್ಸುಲಿನ್ ಬಳಸುವ ಎಲ್ಲರೂ ಆಕಳಿನ ದೇಹದಿಂದ ಉತ್ಪತ್ತಿಯಾದ ಇನ್ಸುಲಿನ್‌ಅನ್ನೇ ಬಳಸುವುದೇ ಎಂದು ನೀವು ಗಾಬರಿಯಾಗಬೇಡಿ. ಇನ್ಸುಲಿನ್ ಎಂಬ ಔಷಧಿಯನ್ನು ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಆವಿಷ್ಕರಿಸಿದ್ದು ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳಿಂದಲೇ ಹೌದಾದರೂ, ಈ ಔಷಧಿಯ ಉತ್ಪಾದನೆ ನಡೆಯುತ್ತಿದ್ದುದು ಬರಿ ಹಸುವಿನ ದೇಹದಿಂದ ಮಾತ್ರವಲ್ಲ. ಪ್ರಾಣಿಜನ್ಯ ಇನ್ಸುಲಿನ್‌ಗಳಲ್ಲಿ  Bovine insulin ಮತ್ತು Porcine insulin ಎಂಬ ದನ ಹಾಗೂ ಹಂದಿಯ ದೇಹದಿಂದ ಉತ್ಪಾದಿಸಲ್ಪಟ್ಟ ಎರಡು ವಿಧದ ಇನ್ಸುಲಿನ್‌ಗಳಿವೆ. ಆದರೆ ಕಳೆದ ಕೆಲವು ದಶಕಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾದ ್ಕ Recombinant DNA technology ಎಂಬ ವಿಧಾನದಿಂದ ಲ್ಯಾಬೊಲೇಟರಿಗಳಲ್ಲಿ ಈಗ ಹಲವಾರು ವಿಧದ ಔಷಧಿಗಳನ್ನು ಉತ್ಪಾದಿಸಲಾಗುತ್ತದೆ.

ಇವುಗಳಲ್ಲಿ ಇನ್ಸುಲಿನ್ ಕೂಡಾ ಒಂದು. ಹಾಗಾಗಿ ಈಗ ಬಳಸಲಾಗುವ ಬಹಳಷ್ಟು ಇನ್ಸುಲಿನ್‌ಗಳು ಈ ವಿಧಾನದಿಂದ ಉತ್ಪಾದಿಸಲ್ಪಟ್ಟ, ಅತ್ಯಂತ ಸುಧಾರಿತ ಹಾಗೂ ಉತ್ಕೃಷ್ಟ ಮಟ್ಟದ ಇನ್ಸುಲಿನ್‌ಗಳಾಗಿದ್ದು ಇವುಗಳ ರಾಸಾಯನಿಕ ರಚನೆ ಮನುಷ್ಯನ ದೇಹದಲ್ಲಿ ಸ್ವಾಭಾವಿಕವಾಗಿ ಉತ್ಪತ್ತಿಯಾಗುವ ಇನ್ಸುಲಿನ್‌ಗೆ ಸಮಾನವಾಗಿದೆ. ಇದರಲ್ಲಿಯೂ ಶಾರ್ಟ್ ಆ್ಯಕ್ಟಿಂಗ್, ಲಾಂಗ್ ಆ್ಯಕ್ಟಿಂಗ್ ಇತ್ಯಾದಿಯಾಗಿ, ಇಂಜೆಕ್ಷನ್ ತೆಗೆದುಕೊಂಡ ತಕ್ಷಣವೇ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಲ್ಲ, ದೇಹದಲ್ಲಿ ಹಲವು ಗಂಟೆಗಳ ಕಾಲ ಉಳಿದು ಇಡೀ ದಿನ ರಕ್ತದಲ್ಲಿರುವ ಸಕ್ಕರೆಯ ಅಂಶದ ಮೇಲೆ ಪರಿಣಾಮ ಬೀರಬಲ್ಲ ಹೀಗೆ ಹತ್ತಾರು ರೀತಿಯ ಇನ್ಸುಲಿನ್‌ಗಳು ಬಳಕೆಯಲ್ಲಿವೆ. ಹೀಗಾಗಿ ಇನ್ಸುಲಿನ್‌ನಿಂದಾಗುವ ಅಡ್ಡ ಪರಿಣಾಮಗಳು ಕಮ್ಮಿಯಾದದ್ದು ಮಾತ್ರವಲ್ಲ, ಮಧುಮೇಹದ ನಿಯಂತ್ರಣ ಕೂಡಾ ಹೆಚ್ಚು ಪರಿಣಾಮಕಾರಿಯಾಗಿ ಆಗುತ್ತದೆ. ಅಷ್ಟು ಮಾತ್ರವಲ್ಲ, ಇನ್ಸುಲಿನ್‌ನ ಜೀವರಾಸಾಯನಿಕ ರಚನೆಯನ್ನೇ ಬದಲಿಸುವ ಮಟ್ಟಿಗೆ ವಿಜ್ಞಾನ ಮುಂದುವರೆದಿದೆ.

ಈಗ ವಿಶ್ವದೆಲ್ಲೆಡೆ ಬಳಸಲಾಗುವ ಇನ್ಸುಲಿನ್‌ನಲ್ಲಿ ಬಹುಭಾಗ ಬಯೋಸಿಂಥೆಸಿಸ್ ಎಂಬ ಪ್ರಕ್ರಿಯೆಯಿಂದ ಬ್ಯಾಕ್ಟೀರಿಯಾ ಹಾಗೂ ಯೀಸ್ಟ್‌‌ಗಳನ್ನು ಬಳಸಿ ತಯಾರಿಸಿದ ಇನ್ಸುಲಿನ್ ಆಗಿದೆ ಎಂದು ‘ಆಕ್ಸ್‌‌ಫರ್ಡ್ ಹ್ಯಾಂಡ್‌ಬುಕ್ ಆಫ್ ಎಂಡೋಕ್ರೈನಾಲಜಿ ಆಂಡ್ ಡಯಾಬಿಟಿಸ್’ ಉಲ್ಲೇಖಿಸುತ್ತದೆ. ಈ ಹೊಸ ಇನ್ಸುಲಿನ್ ಹಾಗೂ ಹಂದಿಯ ದೇಹದಿಂದ ಉತ್ಪಾದಿಸಿದ ಇನ್ಸುಲಿನ್‌ಗೆ ಹೋಲಿಸಿದರೆ, ಗೋವಿನ ದೇಹದಿಂದ ಉತ್ಪಾದಿಸಿದ ಇನ್ಸುಲಿನ್‌ನಿಂದ ಆಗುವ ಅಡ್ಡ ಪರಿಣಾಮಗಳು ಹೆಚ್ಚು ಎಂದು ಕೂಡಾ ಹೇಳುತ್ತಾರೆ ಮೇಲಿನ ವೈದ್ಯಕೀಯ ಪುಸ್ತಕದ ಲೇಖಕರು. ಭಾರತದಲ್ಲಿ, ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದಾಗ ಕೂಡ ತಾವು ಎಂದೂ ಪ್ರಾಣಿಜನ್ಯ ಇನ್ಸುಲಿನ್‌ಅನ್ನು ಬಳಸಿಲ್ಲ ಎಂದು ನನ್ನ ಹಲವಾರು ವೈದ್ಯ ಸ್ನೇಹಿತರು ಅಭಿಪ್ರಾಯ ಪಟ್ಟಿದ್ದಾರೆ.

ಹ್ಯೂಮನ್ ಇನ್ಸುಲಿನ್‌ನ ಎಲ್ಲಾ ಬ್ರ್ಯಾಂಡ್‌ಗಳೂ ದುಬಾರಿಯಲ್ಲ; ಅಗ್ಗವಾಗಿ ದೊರೆಯುವ ಹಾಗೂ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಚೆನ್ನಾಗಿ ನಿಯಂತ್ರಿಸಬಲ್ಲ ಹಲವಾರು ಬಗೆಯ ಬಯೋಸಿಂಥೆಟಿಕ್ ಇನ್ಸುಲಿನ್‌ಗಳು ಲಭ್ಯವಿವೆ; ಹೀಗಾಗಿ ಪ್ರಾಣಿಜನ್ಯ ಇನ್ಸುಲಿನ್‌ಅನ್ನು ಬಳಸಬೇಕಾಗಿರುವ ಅನಿವಾರ್ಯ ಖಂಡಿತ ಇಲ್ಲ ಎಂದು ಅವರೆಲ್ಲ ಸಹಮತ ವ್ಯಕ್ತಪಡಿಸಿದ್ದಾರೆ. ಅಥವಾ ಯಾವುದೋ ಒಂದು ಅತ್ಯಂತ ವಿರಳವಾದ, ಕ್ಲಿಷ್ಟವಾದ ಪೇಶೆಂಟ್ ಗ್ರೂಪ್‌ನಲ್ಲಿ ಪ್ರಾಣಿಜನ್ಯ ಇನ್ಸುಲಿನ್‌ಅನ್ನು ಇನ್ನೂ ಬಳಸುತ್ತಿದಾರೆ ಎಂದುಕೊಂಡರೂ, ಈ ಹೇಳಿಕೆಗೂ ಹೆಗಡೆಯವರ ಉಲ್ಲೇಖಕ್ಕೂ ಅಜಗಜಾಂತರವಿದೆ. ಹಾಗಾಗಿ, ಭಾರತದಲ್ಲಿರುವ ಆರು ಕೋಟಿ ಮಧುಮೇಹಿಗಳಿಗೂ ಗೋವಿನ ದೇಹದಿಂದ ಉತ್ಪತ್ತಿಯಾದ ಇನ್ಸುಲಿನ್‌ಅನ್ನೇ ವೈದ್ಯರು ಕೊಡುತ್ತಾರೆ ಎನ್ನುವುದು ಉತ್ಪ್ರೇಕ್ಷೆಯಾಗುತ್ತದೆ. ಈ ರೀತಿ ಉತ್ಪ್ರೇಕ್ಷಿತ ಹೇಳಿಕೆಗಳಿಂದ ಜನಸಾಮಾನ್ಯರ ಮೇಲೆ ಯಾವ ರೀತಿಯ ಪರಿಣಾಮಗಳಾಗಬಹುದು ಎಂದು ಯೋಚಿಸಿದಾಗ ದುಃಖ ಹಾಗೂ ಆತಂಕವಾಗುತ್ತದೆ.

ಇನ್ನು, ರಕ್ತದ ಒತ್ತಡ ತೀರಾ ಕಡಿಮೆಯಾದಾಗ ಅದನ್ನು ಹೆಚ್ಚಿಸಲು ಹಾಗೂ ಹೃದ್ರೋಗದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ದನದ ಅಡ್ರಿನಾಲಿನ್ ಗ್ರಂಥಿಯಿಂದ ತೆಗೆದ ಎಪಿನೆಫ್ರಿನ್ ಎಂಬ ಔಷಧವನ್ನೇ ವೈದ್ಯರು ಶಿಫಾರಸು ಮಾಡುತ್ತಾರೆ ಎಂದು ಬರೆಯುತ್ತಾರೆ ಲೇಖಕರು. ಮೇಲೆ ವಿಶ್ಲೇಷಿಸಿದ ಇನ್ಸುಲಿನ್, ಇಲ್ಲಿ ಬರೆದಿರುವ ಎಪಿನೆಫ್ರಿನ್ ಅಥವಾ ಅಡ್ರಿನಾಲಿನ್ ಇವೆಲ್ಲವೂ ಮಾನವ ದೇಹದಲ್ಲಿ ಸ್ವಾಭಾವಿಕವಾಗಿ ಉತ್ಪಾದನೆಯಾಗುವ ಹಾರ್ಮೋನುಗಳು. ಮಾನವ ದೇಹದಲ್ಲಿರುವ ಬಹಳಷ್ಟು ಹಾರ್ಮೋನುಗಳು, ಬಹಳಷ್ಟು ಪ್ರಾಣಿಗಳ ದೇಹದಲ್ಲಿಯೂ ಇವೆ. ಹಾಗಾಗಿ ಅಡ್ರಿನಾಲಿನ್‌ಅನ್ನು ಪ್ರಾಣಿಗಳ ದೇಹದಿಂದ ಉತ್ಪಾದಿಸಿ ಸಂಸ್ಕರಿಸಬಹುದಾದರೂ, ಇದು ದುಬಾರಿ ವಿಧಾನವಾಗಿದೆ. ಅಡ್ರಿನಾಲಿನ್‌ಅನ್ನು ಕೃತಕವಾಗಿ ಲ್ಯಾಬ್‌ಗಳಲ್ಲಿ ಉತ್ಪಾದಿಸುವ ವಿಧಾನ 1906ರಷ್ಟು ಹಿಂದಿನಿಂದಲೇ ಪ್ರಚಲಿತದಲ್ಲಿದೆ. ಇದರಿಂದಾಗಿ ಅಡ್ರಿನಾಲಿನ್ ಎಂಬ ಜೀವರಕ್ಷಕ ಹಾರ್ಮೋನು ಮಾರುಕಟ್ಟೆಯಲ್ಲಿ ಅಗ್ಗವಾಗಿ ದೊರಕುವುದಕ್ಕೆ ಸಾಧ್ಯವಾಗಿದೆ ಎಂದು “Drug news and Perspective’ ’ ಎಂಬ ಜರ್ನಲ್‌ನಲ್ಲಿ 2001ರಲ್ಲಿ ಪ್ರಕಟವಾಗಿದೆ. ಅರಿವಳಿಕೆ ಹಾಗೂ ತೀವ್ರ ನಿಗಾ ವಿಭಾಗಗಳಲ್ಲಿ ಪ್ರತಿನಿತ್ಯವೂ ಈ ಔಷಧಿಯನ್ನು ಬಳಸುವ ನನ್ನ ವೈದ್ಯಸ್ನೇಹಿತರು ಅವರು ಬಳಸುವ ಅಡ್ರಿನಾಲಿನ್ ಕೃತಕವಾಗಿ ಲ್ಯಾಬ್‌ಗಳಲ್ಲಿ ತಯಾರಿಸಿದುದಾಗಿದೆ ಎಂದು ತಿಳಿಸುತ್ತಾರೆ.

ಹೆಗಡೆಯವರ ಲೇಖನದಲ್ಲಿ, ವಿಟಮಿನ್ ಬಿ12 ಜೀವಸತ್ವದ ಕೊರತೆ ಇದ್ದವರಿಗೆ ದನಗಳ ಯಕೃತ್ತಿನಿಂದ ತೆಗೆಯಲಾದ ಲಿವರ್ ಎಕ್ಸ್‌‌ಟ್ರಾಕ್ಟ್‌‌ಅನ್ನು ಕೊಡಲಾಗುತ್ತದೆ ಎಂದು ಬರೆಯಲಾಗಿದೆ. ವಾಸ್ತವದಲ್ಲಿ ಲಿವರ್ ಎಕ್ಸ್‌‌ಟ್ರಾಕ್ಟ್‌ ಎಂಬುದು ಆಧುನಿಕ ವೈದ್ಯ ವಿಜ್ಞಾನದಲ್ಲಿ ವಿಟಮಿನ್ ಬಿ12ನ ಕೊರತೆಗೆ ಔಷಧಿಯಾಗಿ ಬಳಕೆಯಾಗುವುದೇ ಇಲ್ಲ. ಲಿವರ್ ಎಕ್ಸ್‌‌ಟ್ರಾಕ್ಟ್‌ ಮಾರುಕಟ್ಟೆಯಲ್ಲಿ ಲಭ್ಯವಿರುವುದು ಒಂದು Food supplement ಆಗಿ ಮಾತ್ರ. 2006ರಲ್ಲಿ “The Haematology Journal’ ಎಂಬ ಜರ್ನಲ್ ನಲ್ಲಿ ಪ್ರಕಟವಾದ “The diagnosis and treatment of Vitamin B12 deficiency: an update’ ಎಂಬ ಆರ್ಟಿಕಲ್‌ನಲ್ಲಿ ಲಿವರ್ ಎಕ್ಸ್‌‌ಟ್ರಾಕ್ಟ್‌‌ನ ಉಲ್ಲೇಖ ಎಲ್ಲೂ ಇಲ್ಲ. ಮಾರುಕಟ್ಟೆಯಲ್ಲಿ, ಇಂಟರ್ನೆಟ್‌ನಲ್ಲಿ ಲೆಕ್ಕವಿಲ್ಲದಷ್ಟು ವಿಷಯಗಳು ಲಭ್ಯವಿರುತ್ತವೆ. ಹಾಗೆಂದು ಅದನ್ನು ವೈದ್ಯರು ಶಿಫಾರಸು ಮಾಡುತ್ತಾರೆ ಎಂದೂ ಇಲ್ಲ, ಅವನ್ನು ಕೊಂಡುಕೊಂಡು ರೋಗಿಗಳು ಬಳಸಬೇಕೆಂದು ಮೊದಲೇ ಇಲ್ಲ. ಸುಮಾರು ನೂರು ವರ್ಷಗಳ ಹಿಂದೆ, ಆಧುನಿಕ ವೈದ್ಯವಿಜ್ಞಾನ ಶೈಶವಾವಸ್ಥೆಯಲ್ಲಿದ್ದಾಗ, ವಿಟಮಿನ್ ಬಿ12ನ ಕೊರತೆಯಲ್ಲಿ ಲಿವರ್ ಎಕ್ಸ್‌‌ಟ್ರಾಕ್ಟ್‌‌ಗಳ ಉಪಯುಕ್ತತೆಯ ಬಗ್ಗೆ ಸಂಶೋಧನೆಗಳು ನಡೆದಿದ್ದವಾದರೂ ಇದು ಈಗ ಪ್ರಚಲಿತದಲ್ಲಿರುವ ಚಿಕಿತ್ಸೆ ಅಲ್ಲ.

ಈ ಲೇಖನ ಓದಿದ ಕೆಲವಷ್ಟು ಜನರಾದರೂ, ವಿಟಮಿನ್ ಬಿ12ನ ಕೊರತೆ ಬಂದರೆ ತಾವು ಡಾಕ್ಟರನ್ನು ಕಾಣುವುದೇ ಬೇಡ, ಏಕೆಂದರೆ ಡಾಕ್ಟರ್ ಕೊಡುವ ದನದ ಯಕೃತ್ತಿನ ಅಂಶವನ್ನು ತಾವಂತೂ ಔಷಧಿಯಾಗಿ ತಿನ್ನುವುದಿಲ್ಲ, ಹಾಗಾಗಿ ವೈದ್ಯರ ಬಳಿ ಹೋಗಿ ಏನು ಪ್ರಯೋಜನ ಎಂದು ಅಂದುಕೊಂಡರೆ, ಇದರಿಂದ ವಿಟಮಿನ್ ಕೊರತೆ ಉಲ್ಬಣವಾಗಿ, ಅನೀಮಿಯಾ, ನರಗಳ ದೌರ್ಬಲ್ಯದಂತಹ ಕಾಯಿಲೆಗಳು ಕಾಣಿಸಿಕೊಂಡರೆ ಅದಕ್ಕೆ ಯಾರು ಹೊಣೆ? ಆದರೆ ಸತ್ಯ ಏನೆಂದರೆ, ವಿಟಮಿನ್ ಬಿ12ನ ಕೊರತೆಗೆ ಚಿಕಿತ್ಸೆ, ಕಡಿಮೆಯಿರುವ ವಿಟಮಿನ್ ಅಂಶವನ್ನು ದೇಹಕ್ಕೆ ಸೇರಿಸುವುದು ಅಷ್ಟೇ; ಅದು ಆಹಾರದ ರೂಪದಲ್ಲಿರಬಹುದು, ಅಥವಾ ಕೊರತೆ ಬಹಳ ತೀವ್ರವಾಗಿದ್ದರೆ ಮಾತ್ರೆ ಇಂಜಕ್ಷನ್‌ಗಳ ರೂಪದಲ್ಲಿರಬಹುದು. ಈ ಎಲ್ಲ ಔಷಧಿಗಳು ಬಹಳ ಕಮ್ಮಿ ಬೆಲೆಗೇ ಲಭ್ಯವಿವೆ. ಹಾಗಾಗಿ ವಿಟಮಿನ್ ಬಿ12ನ ಕೊರತೆಗೆ ಲಿವರ್ ಎಕ್ಸ್‌‌ಟ್ರಾಕ್ಟ್‌‌ಅನ್ನು ಕೊಡುವ ಅವಶ್ಯಕತೆಯಿಲ್ಲ, ಮಾಡರ್ನ್ ಮೆಡಿಸಿನ್‌ನಲ್ಲಿ ವೈದ್ಯರು ಅದನ್ನು ಶಿಫಾರಸು ಮಾಡುವುದಿಲ್ಲ.

ಮೆದುಳಿಗೆ ಏಟು ಬಿದ್ದು ತಲೆಯ ಶಸ್ತ್ರಚಿಕಿತ್ಸೆ ಮಾಡುವ ಆವಶ್ಯಕತೆ ಬಂದಾಗ, ಶಸ್ತ್ರಚಿಕಿತ್ಸೆ ಮಾಡಿ ತೆಗೆದ ಭಾಗಗಳಿಗೆ ದನದ ಮೆದುಳಿನ ಡ್ಯೂರಾ ಮ್ಯಾಟರ್‌ಅನ್ನು ಹಾಕಿ ಹೊಲಿಯಲಾಗುತ್ತದೆ ಎಂದು ಹೆಗಡೆಯವರು ಬರೆದಿದ್ದಾರೆ. ತಲೆಯ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಹಲವಾರು ಬಗೆಯ ವಸ್ತುಗಳನ್ನು ಬಳಸಲಾಗುತ್ತದೆ. ಅದರಲ್ಲಿ ದನದ ಹಾಗೂ ಇತರ ಪ್ರಾಣಿಗಳ ದೇಹದ ಭಾಗಗಳಿಂದ ಉತ್ಪಾದಿಸುವ ಬೇರೆಬೇರೆ ವಸ್ತುಗಳು ಕೂಡ ಇವೆ. ಆದರೆ ತಲೆಯ ಶಸ್ತ್ರಚಿಕಿತ್ಸೆಗೆ ಬಳಸಲಾಗುವ ವಸ್ತುಗಳಲ್ಲಿ ಪ್ರಾಣಿಜನ್ಯ ಪ್ರಾಡಕ್ಟ್‌‌ಗಳನ್ನು ಬಳಸುವುದು ಸರ್ವೇಸಾಮಾನ್ಯವಲ್ಲ. ಆಧುನಿಕ ವೈದ್ಯಶಾಸ್ತ್ರದಲ್ಲಿ ಅತ್ಯಂತ ಸಾಮಾನ್ಯವಾಗಿ ಬಳಸಲಾಗುವ ಡ್ಯೂರಲ್ ಗ್ರಾಫ್ಟ್‌‌ಗಳು ಮನುಷ್ಯನ ದೇಹದ ಇತರ ಭಾಗಗಳಿಂದ ಪಡೆದ ಗ್ರಾಫ್ಟ್‌‌ಗಳಾಗಿವೆ (autologous tissues) ಅಥವಾ ಕೃತಕವಾಗಿ ರಾಸಾಯನಿಕವಾಗಿ ಸೃಷ್ಟಿಸಿದವುಗಳಾಗಿವೆ ಎಂದು Plastic and reconstructive surgery ಎಂಬ ಜರ್ನಲ್‌ನಲ್ಲಿ 2012ರಲ್ಲಿ ಪ್ರಕಟವಾಗಿದೆ.
ಇನ್ನು ಸ್ಟೀರಾಯ್ಡ್‌ ಔಷಧಿಗಳ ಬಗ್ಗೆ ಹೆಗಡೆಯವರು ಬರೆದಿರುವ ವಿಷಯ ಬಹಳ ನಾಟಕೀಯವಾಗಿದ್ದು ಸತ್ಯದಿಂದ ಬಹುದೂರವಿದೆ.

ಸ್ಟೀರಾಯ್ಡ್‌‌ಗಳನ್ನು ಔಷಧಿಗಳಾಗಿ ಬಳಸಲಾಗುತ್ತದೆ ಎಂದು ಅವರು ಹೇಳುವ ಕಾಯಿಲೆಗಳಲ್ಲಿ ಅಸ್ತಮಾಗೆ ಸ್ಟೀರಾಯ್ಡ್‌‌ಅನ್ನು ಬಳಸಲಾಗುವುದು ನನಗೆ ಗೊತ್ತಿದೆ. ಅದೊಂದು ಕಾಯಿಲೆಯನ್ನು ಬಿಟ್ಟು ಸ್ಟೀರಾಯ್ಡ್‌‌ಗಳನ್ನು ಬಳಸಲಾಗುತ್ತದೆ ಎಂದು ಅವರು ಕೊಡುವ ಉದಾಹರಣೆಗಳು ವೈದ್ಯಕೀಯ ಭಾಷೆಯಲ್ಲಿ ಯಾವ ಕಾಯಿಲೆಗಳು ಎಂದು ನನಗೆ ಹಾಗೂ ನನ್ನಂಥ ಬೇರೆ ವೈದ್ಯರಿಗೆ ಅರ್ಥವಾಗಲಿಲ್ಲ. ಹೊಟ್ಟೆಯಲ್ಲಿ ತಳಮಳ, ಪ್ರಸವದ ಸಮಯದಲ್ಲಿ ತೊಂದರೆ, ಹಿರಿಯರ ರಕ್ತನಾಳದಲ್ಲಿ ಗಂಟು ಅಂದರೆ ಕಾಯಿಲೆಗಳ ಹೆಸರುಗಳೇ? ಅಥವಾ ಅವರು ಉಲ್ಲೇಖಿಸುತ್ತಿರುವುದು ರೋಗಲಕ್ಷಣಗಳನ್ನೇ (Symptoms) ನನಗೆ ಗೊತ್ತಿಲ್ಲ. ಈ ಮೇಲಿನ ಸಿಂಪ್ಟಮ್‌ಗಳು ಹಲವಾರು ಕಾಯಿಲೆಗಳಿಂದ ಬರಬಹುದಾಗಿದ್ದು, ವೈದ್ಯರು ಚಿಕಿತ್ಸೆ ಕೊಡುವುದು ನಿರ್ದಿಷ್ಟವಾದ ರೋಗಕ್ಕೇ ಹೊರತು, ರೋಗಲಕ್ಷಣಗಳಿಗಲ್ಲ. ಹೊಟ್ಟೆ ತಳಮಳ ಬಂದಾಗಲೆಲ್ಲ, ಪ್ರಸವದ ಸಮಯದಲ್ಲಿ ತೊಂದರೆ ಬಂದಾಗಲೆಲ್ಲ ವೈದ್ಯರು ಸ್ಟೀರಾಯ್ಡ್‌‌ಗಳನ್ನು ಕೊಡಹೊರಟರೆ, ರೋಗಿಗಳ ಸ್ಥಿತಿ ಏನಾಗಬಹುದೋ ನನಗೆ ಊಹಿಸಲೂ ಆಗುತ್ತಿಲ್ಲ.

ಸ್ಟೀರಾಯ್ಡ್‌‌ಗಳ ವಿಷಯದಲ್ಲಿ ಕೊಡಲಾಗಿರುವ ಇನ್ನೊಂದು ಉದಾಹರಣೆ ‘ಹುಟ್ಟಿದ ಮಗುವಿಗೆ ತಾಯಿಯ ಹಾಲು ಜೀರ್ಣವಾಗದಿರುವುದು’ ಎಂದರೆ ವೈದ್ಯಕೀಯ ಭಾಷೆಯಲ್ಲಿ “Congenital lactose intolerance’ ಎಂಬ ಕಾಯಿಲೆ ಎಂದು ಅರ್ಥೈಸಿಕೊಂಡು ಈ ವಿವರಣೆಯನ್ನು ಬರೆಯುತ್ತಿದ್ದೇನೆ. ಮೊದಲನೆಯದಾಗಿ, ಇದೊಂದು ಅತ್ಯಂತ ವಿರಳವಾದ ಕಾಯಿಲೆಯಾಗಿದ್ದು, ಇದು ಹೆಚ್ಚಾಗಿ ಕಾಣಬರುವುದು ಫಿನ್‌ಲ್ಯಾಂಡ್ ದೇಶದ ನವಜಾತ ಶಿಶುಗಳಲ್ಲಿ. ಅಲ್ಲಿಯೂ ಕೂಡಾ 60,000 ಮಕ್ಕಳಲ್ಲಿ ಒಬ್ಬರಲ್ಲಿ ಮಾತ್ರ ಇದು ಕಂಡುಬರುತ್ತದೆ ಎಂದು ‘ನ್ಯಾಷನಲ್ ಲೈಬ್ರೆರಿ ಆಫ್ ಮೆಡಿಸಿನ್’ನ ಜಾಲತಾಣ ಹೇಳುತ್ತದೆ. ಇನ್ನು ಲ್ಯಾಕ್ಟೊಸ್ ಇಂಟಾಲರೆನ್ಸ್‌‌ಗೆ ಚಿಕಿತ್ಸೆ ಸ್ಟೀರಾಯ್ಡ್‌‌ಗಳೇ? ಖಂಡಿತಾ ಅಲ್ಲ. Congenital lactose intolerance ಇರುವ ಮಕ್ಕಳಿಗೆ ಚಿಕಿತ್ಸೆ ಎಂದರೆ ಅವರು ಕುಡಿಯುವ ಹಾಲಿನಲ್ಲಿ ಲ್ಯಾಕ್ಟೊಸ್‌ನ ಅಂಶ ಇರದಂತೆ ನೋಡಿಕೊಳ್ಳುವುದು. ಇದಕ್ಕಾಗಿ ಹಲವಾರು ಬಗೆಯlactose free ಹಾಲುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ (Guidelines on the treatment of Lactose intolerance, American Academy of Paediatrics). ಕಳೆದ ಹದಿನೈದು ವರ್ಷಗಳಿಂದ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ನನ್ನ ಪತಿ, ಲ್ಯಾಕ್ಟೊಸ್ ಇಂಟಾಲರೆನ್ಸ್‌ ಇರುವ ಹಲವು ಮಕ್ಕಳಿಗೆ ಚಿಕಿತ್ಸೆ ಕೊಟ್ಟಿದ್ದು, ಲ್ಯಾಕ್ಟೊಸ್ ಇಂಟಾಲರೆನ್ಸ್‌‌ನ ಚಿಕಿತ್ಸೆಯಲ್ಲಿ ಸ್ಟೀರಾಯ್ಡ್‌‌ಗಳು ಎಂದೂ ಬಳಕೆಯಾಗಿಲ್ಲ ಎಂದು ಹೇಳುತ್ತಾರೆ.

ಔಷಧವಾಗಿ ಬಳಸುವ ಸ್ಟೀರಾಯ್ಡ್‌‌ಗಳಲ್ಲಿ ಹಲವಾರು ವಿಧಗಳಿವೆ. ವೈದ್ಯಕೀಯ ರಂಗದಲ್ಲಿ ಸಾಮಾನ್ಯವಾಗಿ ಬಳಸಲಾಗುವ Cor costeroidಗಳು, ಈಸ್ಟ್ರೋಜನ್, ಪ್ರೊಜೆಸ್ಟರೋನ್ ನಂತಹ ಹಾರ್ಮೋನುಗಳು ಇವೆಲ್ಲವನ್ನೂ ವಾಣಿಜ್ಯ ಮಟ್ಟದಲ್ಲಿ ಸಿಂಥೆಟಿಕ್ ಆಗಿ ಉತ್ಪಾದಿಸಬಹುದಾಗಿದೆ. Paediatric Endocrine Disorders ಎಂಬ ಪುಸ್ತಕದಲ್ಲಿ ವೈದ್ಯ ಲೇಖಕರು ಈ ವಿವರಗಳನ್ನು ನೀಡಿದ್ದಾರೆ. ಮಾಡರ್ನ್ ಮೆಡಿಸಿನ್‌ನಲ್ಲಿ ಪ್ರಾಣಿಜನ್ಯ ಸ್ಟೀರಾಯ್ಡ್‌‌ಗಳನ್ನು ಬಳಸುತ್ತಾರೆ ಎಂದು ನಾನು ವೈದ್ಯಕೀಯ ಕಾಲೇಜಿನಲ್ಲಿ ಓದಿಲ್ಲ, ಅಥವಾ ಬಳಸುವುದೇ ಹೌದು ಎಂದುಕೊಂಡರೂ ಪ್ರಾಣಿಜನ್ಯ ಸ್ಟೀರಾಯ್ಡಗಳು ವ್ಯಾಪಕವಾಗಿ ಬಳಸಲಾಗುವಂಥ ಔಷಧಿಗಳು ಖಂಡಿತಾ ಅಲ್ಲ. ಹಲವು ಜಾಲತಾಣಗಳನ್ನು ಹುಡುಕಿದಾಗಲೂ ಈ ಬಗ್ಗೆ ವೈಜ್ಞಾನಿಕ ಮಾಹಿತಿ ನನಗೆ ದೊರಕಲಿಲ್ಲ. ಸ್ಟೀರಾಯ್ಡ್‌‌ಗಳನ್ನು ಪ್ರತಿನಿತ್ಯ ತಮ್ಮ ಪ್ರಾಕ್ಟೀಸ್‌ನಲ್ಲಿ ಬಳಸುವ ನನ್ನ ವೈದ್ಯಮಿತ್ರರೂ ಕೂಡಾ ದನದ ದೇಹದಿಂದ ಉತ್ಪಾದಿಸಲ್ಪಟ್ಟ ಸ್ಟೀರಾಯ್ಡ್‌‌ಅನ್ನು ತಮ್ಮ ಪ್ರಾಕ್ಟೀಸ್‌ನಲ್ಲಿ ಎಂದೂ ಬಳಸಿಲ್ಲ ಎಂದೇ ಹೇಳುತ್ತಾರೆ. ನಿಜ ವಿಷಯ ಹೀಗಿರುವಾಗ ಸ್ಟೀರಾಯ್ಡ್‌‌ಗಳ ಬಳಕೆಯ ಕಾರಣಗಳನ್ನು ತಪ್ಪಾಗಿ ಉಲ್ಲೇಖಿಸಿದ್ದು ಮಾತ್ರವಲ್ಲದೆ, ವೈದ್ಯರು ಕೊಡುವ ಸ್ಟೀರಾಯ್ಡ್‌‌ಗಳೆಲ್ಲ ದನದ ದೇಹದಿಂದ ಬಂದವುಗಳೇ ಎಂಬ ಅರ್ಥ ಬರುವಂತೆ ಬರೆದಿರುವ ಸಾಲುಗಳ ಉದ್ದೇಶ ಏನು ಎಂದು ಎಲ್ಲರೂ ಒಮ್ಮೆ ಯೋಚಿಸಬೇಕಾಗುತ್ತದೆ.

ಆಧುನಿಕ ವೈದ್ಯಶಾಸ್ತ್ರದಲ್ಲಿ ಪ್ರತಿನಿತ್ಯವೂ ಬಳಕೆಯಾಗುತ್ತಿದೆಯೆಂದು ಲೇಖನದಲ್ಲಿ ಹೇಳಲಾಗಿರುವ ಪ್ರಾಣಿಜನ್ಯ ಕೊಲಾಜೆನ್‌ನ ಮೂಲ ಕೇವಲ ಹಸು ಮಾತ್ರ ಅಲ್ಲವೇ ಅಲ್ಲ. Journal of Applied Pharmaceutical Scienceನಲ್ಲಿ 2015ರಲ್ಲಿ ಪ್ರಕಟವಾದ Collagen: Animal Sources and Biomedical Application ಎಂಬ ವೈದ್ಯಕೀಯ ಲೇಖನದಲ್ಲಿ ಕೊಲಾಜೆನ್‌ನ ವಿವಿಧ ಮೂಲಗಳು ಯಾವುವು ಎಂಬ ವಿವರಗಳಿವೆ. ಇದರಲ್ಲಿ ದನ ಹಾಗೂ ಹಂದಿಯ ದೇಹ ಕೊಲಾಜೆನ್‌ನ ಮುಖ್ಯ ಮೂಲಗಳಾಗಿರುವುದು ಹೌದಾದರೂ, ದನದಿಂದ ಉತ್ಪತ್ತಿಯಾದ ಕೊಲಾಜೆನ್ ಬಳಕೆಯಿಂದ ಬರುವ Bovine Spongiform Encephalitis ನಂತಹ ಪ್ರಾಣಾಂತಿಕ ರೋಗಗಳಿಂದಾಗಿ ಮತ್ತು ಈ ಕೊಲಾಜೆನ್‌ನಿಂದ ಉಂಟಾಗುವ ಅಲರ್ಜಿಕ್ ರಿಯಾಕ್ಷನ್‌ಗಳಿಂದಾಗಿ, ಈಗ ಕೊಲಾಜೆನ್‌ಗೆ ಪರ್ಯಾಯ ಮೂಲವನ್ನು ಹುಡುಕುವುದು ಅವಶ್ಯಕವಾಗಿದೆ ಎನ್ನುತ್ತಾರೆ. ದನದ ಮೂಲದ ಕೊಲಾಜೆನ್‌ಗೆ ಹೋಲಿಸಿದರೆ ಹಂದಿಯ ದೇಹದಿಂದ ಪಡೆದ ಕೊಲಾಜೆನ್‌ನಿಂದ ಆಗುವ ಅಲರ್ಜಿಯ ಸಮಸ್ಯೆ ಕಡಿಮೆ ಎಂದು ಕೂಡಾ ಅದೇ ಲೇಖನದಲ್ಲಿ ಉಲ್ಲೇಖವಾಗಿದೆ. ಇದು ಇನ್ಸುಲಿನ್‌ನ ವಿಷಯದಲ್ಲಿಯೂ ಅನ್ವಯವಾಗುತ್ತದೆ.

ಹಂದಿಯ ದೇಹದ ಕೊಲಾಜೆನ್ ಮತ್ತು ಇನ್ಸುಲಿನ್‌ನ ರಚನೆ ಹಾಗೂ ಮಾನವ ಕೊಲಾಜೆನ್ ಮತ್ತು ಇನ್ಸುಲಿನ್ ರಚನೆಗೆ ಹತ್ತಿರದ ಸಾಮ್ಯವಿರುವುದೇ ಇದಕ್ಕೆ ಕಾರಣ. ಬೊವೈನ್ ಕೊಲಾಜೆನ್‌ನ ಉಪಯೋಗಗಳ ಬಗ್ಗೆ ಬರೆಯುವ ಹೆಗಡೆಯವರು, ಇಲ್ಲಿಯೂ ಸ್ಟೀರಾಯ್ಡ್‌ ವಿಷಯದಲ್ಲಿ ಕೊಟ್ಟಂಥ ಅಸ್ಪಷ್ಟ ಮಾಹಿತಿಗಳನ್ನೇ ಕೊಟ್ಟಿದ್ದಾರೆ. ಹಿರಿಯ ನಾಗರಿಕರಿಗೆ ಮೂತ್ರದ ಸಮಸ್ಯೆ ಉಂಟಾದರೆ ಗೋವಿನ ಕೊಲಾಜೆನ್‌ಅನ್ನೇ ಚಿಕಿತ್ಸೆಯಾಗಿ ಬಳಸುತ್ತಾರೆ ಎನ್ನುತ್ತಾರೆ. ಅಂದರೆ ಮೂತ್ರ ನಿಯಂತ್ರಣದ ಸಮಸ್ಯೆಗೆ ಗೋವಿನ ಕೊಲಾಜೆನ್ ಬಿಟ್ಟರೆ ಬೇರೆ ಚಿಕಿತ್ಸೆಯೇ ಇಲ್ಲ ಎಂದು ಅರ್ಥವಾಯಿತಲ್ಲವೇ? ಹೆಗಡೆಯವರು ಕೊಟ್ಟ ಈ ಉದಾಹರಣೆಯಲ್ಲಿ ಹಲವಾರು ತಪ್ಪು ಮಾಹಿತಿಗಳಿವೆ. ಮೊದಲನೆಯದಾಗಿ, ಹಿರಿಯರಲ್ಲಿ ಉಂಟಾಗುವ ಮೂತ್ರ ನಿಯಂತ್ರಣದ ಸಮಸ್ಯೆಗೆ (Stress incontinence) ಹತ್ತಾರು ವಿಧದ ಚಿಕಿತ್ಸೆಗಳು ಲಭ್ಯವಿವೆ. ಪ್ರಾಣಿಜನ್ಯ ವಸ್ತುಗಳಿಗೆ ಎಲ್ಲೆಲ್ಲಿಯ ಸಂಬಂಧವೂ ಇರದ ಹಲವು ಮಾತ್ರೆಗಳು ಮತ್ತು ಬೇರೆಬೇರೆ ಶಸ್ತ್ರಚಿಕಿತ್ಸಾ ವಿಧಾನಗಳಿವೆ. ಈ ಮೇಲಿನ ಎಲ್ಲಾ ಚಿಕಿತ್ಸೆಗಳೂ ವಿಫಲವಾದರೆ, Injectable bulking agents ಎಂಬ ವಸ್ತುಗಳನ್ನು ಬಳಸುತ್ತಾರೆ.

ಇವು ಸಿಂಥೆಟಿಕ್ ಹಾಗೂ ಪ್ರಾಣಿಜನ್ಯ ಮೂಲ (ಕೊಲಾಜೆನ್)ಗಳೆರಡರಿಂದಲೂ ಸಿಗುತ್ತವೆ. ಮೇಲೆ ಹೇಳಿದಂತೆ ಇದು ಮೂತ್ರ ನಿಯಂತ್ರಣದ ಸಮಸ್ಯೆ ಇರುವ ಎಲ್ಲರಿಗೂ ಕೊಡುವ ಚಿಕಿತ್ಸೆಯಲ್ಲ, ಎಲ್ಲರಿಗೆ ಅದು ಹೊಂದಿಕೆ ಆಗುವುದೂ ಇಲ್ಲ. ಮತ್ತೊಂದು ವಿಷಯವೆಂದರೆ, ಹೆಗಡೆಯವರು ಹೇಳಿದಂತೆ ಈ ಇಂಜಕ್ಷನ್‌ಗಳನ್ನು ಸೇರಿಸುವುದು ರಕ್ತಕ್ಕಲ್ಲ, ಮೂತ್ರನಾಳದ ಸುತ್ತಮುತ್ತಲಿನ ಜಾಗಕ್ಕೆ (Periurethral Injections). ಬೇರೆ ವಿಧದ ಶಸ್ತ್ರಚಿಕಿತ್ಸೆಗಳಿಗೆ ಹೋಲಿಸಿದರೆ, ಇದು ಅಷ್ಟೊಂದು ಪರಿಣಾಮಕಾರಿ ಚಿಕಿತ್ಸೆಯಲ್ಲ ಹಾಗೂ ಹಲವು ಹೊಸ ಚಿಕಿತ್ಸೆಗಳ ಆವಿಷ್ಕಾರದಿಂದಾಗಿ ಈ ಚಿಕಿತ್ಸೆಯ ಬಳಕೆ ಈಗ ಬಹಳಷ್ಟು ಕಡಿಮೆಯಾಗಿದೆ. ಈ ಮೇಲಿನ ಎಲ್ಲಾ ಮಾಹಿತಿಯೂ Medscape ಎಂಬ ಜಾಲತಾಣದಲ್ಲಿರುವ, ಹಲವು ರಿಸರ್ಚ್ ಆರ್ಟಿಕಲ್‌ಗಳನ್ನು ಪರಿಶೀಲಿಸಿ ಬರೆದ “Injectable bulking agents for incontinence’ ಎಂಬ ವೈದ್ಯಕೀಯ ಲೇಖನದಲ್ಲಿ ಲಭ್ಯವಿವೆ. ಆದರೆ ಈ ಸತ್ಯ ಗೊತ್ತಿರದ ಹಲವು ಹಿರಿಯರು, ಹೆಗಡೆಯವರ ಲೇಖನದಲ್ಲಿರುವ ಮಾಹಿತಿಯನ್ನೇ ನಿಜ ಎಂದು ನಂಬಿ, ಮೂತ್ರ ನಿಯಂತ್ರಣದ ತೊಂದರೆಗೆ ವೈದ್ಯರ ಸಲಹೆ ತೆಗೆದುಕೊಳ್ಳುವ ಗೋಜಿಗೇ ಹೋಗದಿರುವುದು ಒಳ್ಳೆಯದು ಎಂದುಕೊಂಡರೆ ಆಶ್ಚರ್ಯವೇನಿಲ್ಲ.

‘ಆಸ್ಪತ್ರೆಗಳಲ್ಲಿ ದಿನವೂ ಬಳಕೆಯಾಗುವ ಡ್ರೆಸಿಂಗ್‌ಗಳಲ್ಲೂ ಕೊಲಾಜೆನ್‌ನ ಲೇಪ ಇರುತ್ತದೆ’ ಎಂಬ ಹೇಳಿಕೆಯಲ್ಲೂ ನನಗೆ ಉತ್ಪ್ರೇಕ್ಷೆ ಕಾಣುತ್ತದೆ. ಆಸ್ಪತ್ರೆಗಳಲ್ಲಿ ಬಳಸುವ ಡ್ರೆಸ್ಸಿಂಗ್‌ಗಳಲ್ಲಿ ನೂರಾರು ವಿಧಗಳಿವೆ. ಇವು ಹತ್ತಿಯಿಂದ ಹಿಡಿದು ಹಲವಾರು ಸಸ್ಯಮೂಲಗಳಿಂದ, ರಾಸಾಯನಿಕಗಳಿಂದ, ಬ್ಯಾಕ್ಟೀರಿಯಾಗಳಿಂದ ಹಾಗೂ ಬೇರೆಬೇರೆ ಪ್ರಾಣಿಗಳ ದೇಹದಿಂದ ಪಡೆದುದಾಗಿವೆ. Journal of Advanced Research ನಲ್ಲಿ ಕಳೆದ ತಿಂಗಳಷ್ಟೇ ಪ್ರಕಟವಾದ  Review article ಒಂದರಲ್ಲಿ ಇವನ್ನು ವಿವರವಾಗಿ ಚರ್ಚಿಸಲಾಗಿದೆ. ಪ್ರತಿ ಡ್ರೆಸ್ಸಿಂಗ್‌ಗೂ ತನ್ನದೇ ಆದ ವಿಶೇಷತೆಗಳಿವೆ. ಪ್ರಾಣಿಜನ್ಯ ಕೊಲಾಜೆನ್ ಇರುವ ಡ್ರೆಸ್ಸಿಂಗ್‌ಗಳನ್ನು ಪ್ರತಿಯೊಂದು ಗಾಯದ ಡ್ರೆಸಿಂಗ್‌ನಲ್ಲಿಯೂ ಖಂಡಿತ ಬಳಸುವುದಿಲ್ಲ. ಕೆಲವು ಬಗೆಯ ಸಂಕೀರ್ಣವಾದ ಗಾಯಗಳಲ್ಲಿ ಮಾತ್ರ ಇವುಗಳನ್ನು ಬಳಸಲಾಗುತ್ತದೆ. ಮೇಲೆ ಹೇಳಿದಂತೆ ಇವು ದನದ ಶರೀರದಿಂದ ಮಾತ್ರವಲ್ಲ ಬೇರೆಬೇರೆ ಪ್ರಾಣಿಗಳ ಶರೀರದ ಭಾಗಗಳಿಂದ ಪಡೆದುದಾಗಿವೆ. ಆದರೆ, ಡ್ರೆಸಿಂಗ್‌ಗಳಲ್ಲಿ ನೂರಾರು ವಿಧಗಳಿವೆ, ಅವುಗಳ ಮೂಲಗಳೂ ಹಲವಾರಿವೆ ಎಂಬುದನ್ನು ಹೆಗಡೆಯವರು ಎಲ್ಲಿಯೂ ಉಲ್ಲೇಖಿಸಿಲ್ಲ. ಡ್ರೆಸಿಂಗ್ ಎಂದರೆ ಕೊಲಾಜೆನ್ ಎಂದುಕೊಳ್ಳಬೇಕು, ಹಾಗಿದೆ ಅವರು ಬರೆದಿರುವ ಧಾಟಿ.

ವೈದ್ಯವಿಜ್ಞಾನದಲ್ಲಿ Cataract ಎಂದು ಕರೆಯಲಾಗುವ ಕಣ್ಣಿನ ವ್ಯಾಧಿಗೆ ಸಾಮಾನ್ಯ ಭಾಷೆಯಲ್ಲಿ ‘ಕಣ್ಣಿನ ಪೊರೆ’ ಎನ್ನುತ್ತಾರೆ. Cataract ಎಂದರೆ ಕಣ್ಣಿನ ಕಪ್ಪು ಭಾಗದ ಹಿಂದಿರುವ ಮಸೂರ ಅಪಾರದರ್ಶಕ ಆಗತೊಡಗುವುದು. ಈ ‘ಕಣ್ಣಿನ ಪೊರೆ’ಯ ಚಿಕಿತ್ಸೆಗೂ ಕೊಲಾಜೆನ್‌ಗೂ ಎಲ್ಲಿಯ ಸಂಬಂಧ ಎಂದು ಎಷ್ಟು ಯೋಚಿಸಿದರೂ ನನಗೆ ಹೊಳೆಯಲಿಲ್ಲ. ಕಣ್ಣಿನ ತಜ್ಞರಾದ ಕೆಲವು ವೈದ್ಯಮಿತ್ರರನ್ನು ಕೇಳಿದೆ, ಅವರಿಗೂ ಗೊತ್ತಾಗಲಿಲ್ಲ. ಕೊನೆಗೆ, Cataract ನಿಂದ ಬಾಧಿತವಾದ ಮಸೂರವನ್ನು ತೆಗೆದ ಮೇಲೆ ಕಣ್ಣಿನೊಳಗೆ ಕೂರಿಸಲಾಗುವ ಕೃತಕ ಮಸೂರದಲ್ಲೇನಾದರೂ (Intraocular lens) ಕೊಲಾಜೆನ್ ಇದೆಯೇ ಎಂದು ಅನುಮಾನ ವ್ಯಕ್ತಪಡಿಸಿದೆ. ಖಂಡಿತ ಇಲ್ಲ ಎಂದರು.

. Intraocular lens ಗಳಲ್ಲಿ ಬಳಸುವುದು ಸಿಲಿಕಾನ್, ಆಕ್ರಿಲಿಕ್, PMMA ಮುಂತಾದ ಸಿಂಥೆಟಿಕ್ ವಸ್ತುಗಳನ್ನು ಎಂದು ತಿಳಿಸಿದರು. American Sociaety of Catarct and Refractive surgery ಯವರು ಪ್ರಕಟಿಸಿದ”Excellence in Cataract Surgery’ ಎಂಬ ವೈದ್ಯಕೀಯ ಪುಸ್ತಕದಲ್ಲಿ ಈ ಕೃತಕ ಮಸೂರಗಳನ್ನು ಯಾವ ಮೂಲಗಳಿಂದ ತಯಾರಿಸುತ್ತಾರೆ ಎಂಬ ವಿವರಗಳಿವೆ.
Chondroitinಹಾಗೂ Glucosamine ಗಳ ಉಲ್ಲೇಖ ಮಾಡುವ ಹೆಗಡೆಯವರು, ‘ಎಲ್ಲ ಬಗೆಯ ಕೀಲುನೋವುಗಳಿಗೂ ಇದನ್ನು ಔಷಧವಾಗಿ ಬಳಸುತ್ತಾರೆ’ ಎನ್ನುತ್ತಾರೆ. ಇದೂ ಕೂಡ ಸತ್ಯಕ್ಕೆ ಸ್ವಲ್ಪ ದೂರವಾದ ಹೇಳಿಕೆಯೇ. ಅವರು ಹೇಳಿರುವಂತೆ Chondroitin ಹಾಗೂ Glucosamine ಒಂದೇ ವಸ್ತು ಅಲ್ಲ. Glucosamine ಎಂಬುದು ಶೆಲ್ ಫಿಶ್‌ಗಳ ಕವಚದಿಂದ ಸಂಸ್ಕರಿಸಿದ ಹಾಗೂ ಕೃತಕವಾಗಿಯೂ ತಯಾರಿಸಬಹುದಾದ ವಸ್ತುವಾಗಿದೆ (ಹಾಗಾಗಿ ಗ್ಲುಕೋಸಮೈನ್‌ಅನ್ನು ದನಗಳ ದೇಹದಿಂದ ತೆಗೆಯುತ್ತಾರೆ ಎನ್ನುವುದು ತಪ್ಪು ಹೇಳಿಕೆಯಾಗುತ್ತದೆ)Chondroitin ಎನ್ನುವ ವಸ್ತುವನ್ನು ಹಂದಿ, ದನ ಹಾಗೂ ಶಾರ್ಕ್‌ನಂತಹ ಸಸ್ತನಿಗಳ ದೇಹದಿಂದ ಪಡೆಯಬಹುದಾಗಿದೆ. ಕೃತಕವಾಗಿ ಪ್ರಯೋಗಾಲಯದಲ್ಲೂ ತಯಾರಿಸಬಹುದಾಗಿದೆ (www.arthritis.org ಜಾಲತಾಣದಲ್ಲಿ ವಿವರಗಳಿವೆ). ಮೇಲಿನ ಹಲವು ಉದಾಹರಣೆಗಳಂತೆಯೇ, ಗಂಟುನೋವಿಗೆ ಲಭ್ಯವಿರುವ ಚಿಕಿತ್ಸೆಗಳು ಹಲವಿವೆ, ಕೊಲಾಜೆನ್‌ನಿಂದ ಪಡೆದ ವಸ್ತುಗಳು ಮಾತ್ರವಲ್ಲ.

ಕೆಲವು ವರ್ಷಗಳ ಹಿಂದೆ Chondroitin ಹಾಗೂ Glucosamineಗಳ ಆವಿಷ್ಕಾರವಾದಾಗ ಇದು Osteoarthritis ಎಂಬ ನಿರ್ದಿಷ್ಟ ಬಗೆಯ ಗಂಟುನೋವಿನ ಚಿಕಿತ್ಸೆಯಲ್ಲಿ ಸಹಕಾರಿ ಎಂದು ಸಂಶೋಧಕರು ಭಾವಿಸಿದ್ದರು (ಹೆಗಡೆಯವರು ಬರೆದಂತೆ, ಎಲ್ಲ ಬಗೆಯ ಗಂಟುನೋವುಗಳಲ್ಲಿಯೂ ಅಲ್ಲ ಎನ್ನುವುದನ್ನು ಗಮನಿಸಿ) ಆದರೆ ಕಾಲಕ್ರಮೇಣ ನಡೆದ ಹಲವು ಸಂಶೋಧನೆಗಳಿಂದ ಇದೊಂದು ಪರಿಣಾಮಕಾರಿಯಾದ ಚಿಕಿತ್ಸೆ ಅಲ್ಲ ಎಂದು ಸಾಬೀತಾಯಿತು(Glucosamine and Chondroitin for the treatment of Osteoarthritis, World Journal of Orthopaedics, 2017) ಕೆಲವು ವರ್ಷಗಳ ಹಿಂದೆ ವೈದ್ಯರ ಶಿಫಾರಸಿನ ಮೇಲೆ (Prescription) ಕೊಡಲಾಗುತ್ತಿದ್ದ ಇವುಗಳು ಈಗ ಬಹುತೇಕ ದೇಶಗಳಲ್ಲಿ ಒಂದು ಔಷಧಿಯಾಗಿ ಅಲ್ಲ, food supplement ಆಗಿ ಮಾತ್ರ ಲಭ್ಯವಿವೆ. ಕೊನೆಯದಾಗಿ, ಹೆಪಾರಿನ್‌ನ ವಿಷಯಕ್ಕೆ ಬರುತ್ತೇನೆ. ಹೆಪಾರಿನ್ ಎನ್ನುವುದು ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಒಂದು ವಸ್ತುವಾಗಿದ್ದು, ಇದನ್ನು ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ರಕ್ತನಾಳ ಹಾಗೂ ಶ್ವಾಸಕೋಶಗಳಲ್ಲಿ ರಕ್ತ ಹೆಪ್ಪುಗಟ್ಟುವ ಕಾಯಿಲೆ (Deep vein thrombosis, Pulmonary embolism) ಇತ್ಯಾದಿಗಳಲ್ಲಿ ಬಳಸುತ್ತಾರೆ. ಇದೊಂದು ಪ್ರಾಣಿಜನ್ಯ ಪದಾರ್ಥವಾಗಿದ್ದು ಇದನ್ನು ಕೃತಕವಾಗಿ ಉತ್ಪಾದಿಸುವ ಹಲವು ಪ್ರಯತ್ನಗಳು ನಡೆದಿವೆಯಾದರೂ, ಕೃತಕ ಹೆಪಾರಿನ್ ಅನ್ನು ದೊಡ್ಡ ಮಟ್ಟದಲ್ಲಿ ಉತ್ಪಾದಿಸುವುದಕ್ಕೆ ಈ ವರೆಗೆ ಸಾಧ್ಯವಾಗಿಲ್ಲ.

ಹೆಪಾರಿನ್‌ನ ಉತ್ಪಾದನೆಯ ಎರಡು ಮುಖ್ಯ ಮೂಲಗಳು ಹಂದಿಯ ಕರುಳು ಹಾಗೂ ದನದ ಶ್ವಾಸಕೋಶ ಮತ್ತು ಕರುಳು ಎಂದು ಹದಿನೈದು ವರ್ಷಗಳ ಹಿಂದೆ ಎಂಬಿಬಿಎಸ್‌ನಲ್ಲಿ ಪಠ್ಯಪುಸ್ತಕದಲ್ಲಿ ಓದಿದ್ದೆ. ಆದರೆ ಪ್ರಪಂಚದೆಲ್ಲೆಡೆ ಈಗ ಬಳಸಲಾಗುವ ಫಾರ್ಮಾಸ್ಯುಟಿಕಲ್ ಹೆಪಾರಿನ್‌ಅನ್ನು ಉತ್ಪಾದಿಸುವುದು ಹಂದಿಯ ಕರುಳಿನ ಭಾಗದಿಂದ ಮಾತ್ರ ಎಂದು ಇತ್ತೀಚೆಗಿನ ಸಂಶೋಧನೆಗಳು ಹೇಳುತ್ತವೆ (Engineered heparins as new anticoagulant drugs, Bioengineering and Translational Medicine 2017). ಹೆಪಾರಿನ್‌ಅನ್ನು ತಮ್ಮ ದೈನಂದಿನ ಪ್ರಾಕ್ಟೀಸ್‌ನಲ್ಲಿ ಹೆಚ್ಚಾಗಿ ಬಳಸುವ ಜನರಲ್ ಸರ್ಜನ್‌ಗಳು ಇದು ಸರಿಯಾದ ಮಾಹಿತಿ ಎಂದು ಅನುಮೋದಿಸಿದ್ದಾರೆ. ಹೀಗಾಗಿ ದನದ ವಿಷಯ ಬಂದಾಗ ಹಿಪಾರಿನ್‌ಅನ್ನು ಉಲ್ಲೇಖಿಸುವುದು ಈಗ ಪ್ರಸ್ತುತವಾದ ಮಾಹಿತಿ ಅಲ್ಲ. ಹಿಂದೆ ದನದ ದೇಹದಿಂದ ಇದನ್ನು ಉತ್ಪಾದಿಸಲಾಗಿದೆ ಎಂಬುದು ಹೌದಾದರೂ, ಆಗಲೂ ಹಂದಿಯ ದೇಹದಿಂದ ದೊರಕುವ ಹಿಪಾರಿನ್ ವ್ಯಾಪಕವಾಗಿ ಪ್ರಚಲಿತದಲ್ಲಿತ್ತು. ಹೀಗಿರುವಾಗ, ಝೆಕ್ ದೇಶದಲ್ಲಿ ರೋಗಿಗಳ ಮಾರಣಹೋಮ ನಡೆಸಲು ನರ್ಸ್ ಆರಿಸಿಕೊಂಡದ್ದು ದನದ ಹಿಪಾರಿನ್‌ಅನ್ನೇ ಎನ್ನುವ ಮಾಹಿತಿ ಅಷ್ಟೊಂದು ನಿಖರವಾಗಿ ಹೆಗಡೆಯವರಿಗೆ ಎಲ್ಲಿಂದ ಸಿಕ್ಕಿತೋ?! ಹೆಗಡೆಯವರ ಲೇಖನದ ಕೊನೆಯ ಕೆಲವು ವಾಕ್ಯಗಳಂತೂ ಬಹಳವೇ ಸಿನಿಮೀಯ ಶೈಲಿಯಲ್ಲಿವೆ. ಟನ್‌ಗಟ್ಟಲೆ ರಕ್ತವನ್ನು ಬಕೆಟ್‌ಗಳಲ್ಲಿ ಸಂಗ್ರಹಿಸಿ ಕೆಂಪಗೆ ಕಾದ ಗಾಣದ ಮೇಲೆ ಸಿಂಪಡಿಸಿ ಅದ್ಯಾವುದೋ ಪುಡಿ ತಯಾರಿಸುತ್ತಾರೆ ಎಂದು ಹೇಳುತ್ತಾರೆ.

ರಕ್ತವನ್ನು ಕಾದ ಗಾಣದ ಮೇಲೆ ಸಿಂಪಡಿಸಿದರೆ ಅದು ಕರಟಿ ಹೋಗಬಹುದೇ ಹೊರತು, ಅದರಿಂದ ಯಾವ ಪುಡಿ ತಯಾರಾಗಬಹುದು? ನೀವೇ ಯೋಚಿಸಿ. ಅಥವಾ ಅದ್ಯಾವುದೋ ಪವಾಡದಿಂದ ಏನೋ ಒಂದು ಪುಡಿಯ ಉತ್ಪಾದನೆ ಆಗುತ್ತದೆ ಎಂದೇ ಅಂದುಕೊಂಡರೂ, ಅದನ್ನು ಎಲ್ಲಿ ಬಳಸುತ್ತಾರೆ ಎಂದು ಇಡಿಯ ಲೇಖನದಲ್ಲಿ ಎಲ್ಲೂ ಬರೆದಿಲ್ಲ. ಅಂದರೆ, ಈ ಸಾಲನ್ನು ಲೇಖನದ ಕೊನೆಗೆ ಕ್ಲೈಮ್ಯಾಕ್ಸ್‌‌ಗೆಂದು ಬರೆದದ್ದು ಎಂದು ಅನಿಸುವುದಿಲ್ಲವೇ? ಇನ್ನು, ಲೇಖನದ ಕೊನೆಯ ವಾಕ್ಯದಲ್ಲಿ ವೈಜ್ಞಾನಿಕತೆಯ ಲವಲೇಶವೂ ಇಲ್ಲ. ಮನಸ್ಸಿಗೆ ನೋವಾದರೆ ಗ್ಲಿಸರಿನ್ ಹಚ್ಚಿಕೊಂಡು ಅಳುವ ಜನ ನಮ್ಮಲ್ಲಿ ಎಷ್ಟಿದ್ದಾರೆ? ಬುದ್ಧಿಜೀವಿಗಳಿಗೆ ವಿಚಾರದಾರಿದ್ರ್ಯವಿರುವುದು ಎಲ್ಲರಿಗೂ ಗೊತ್ತಿದೆ, ಈಗ ಅದಕ್ಕೆ ಭಾವನಾ ದಾರಿದ್ರ್ಯವೋ ಸೇರಿಕೊಂಡಿತೇ? ಸಿನಿಮಾ ತಾರೆಗಳು ನಟನೆಯ ಸಂದರ್ಭದಲ್ಲಿ ಕೃತಕ ಕಣ್ಣೀರು ಬರಿಸಲು ಗ್ಲಿಸರಿನ್ ಬಳಸುವುದು ಗೊತ್ತು.

ಅದರ ಜತೆಗೆ ಈಗ ಬುದ್ಧಿಜೀವಿಗಳ ಅಳುವ ಕಾರ್ಯವನ್ನು ಸುಗಮಗೊಳಿಸಲು ಕೂಡಾ ಗ್ಲಿಸರಿನ್‌ಅನ್ನು ಬಳಸಲಾಗುತ್ತದೆಯೇನೋ, ನನಗೆ ಗೊತ್ತಿಲ್ಲ. ಈ ಗ್ಲಿಸರಿನ್‌ಗೂ ಕೂಡಾ ಸಸ್ಯ ಹಾಗೂ ಪ್ರಾಣಿಮೂಲಗಳು ಎರಡೂ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದು, ಇದು ವೈದ್ಯವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯವಲ್ಲವಾದ್ದರಿಂದ, ಗ್ಲಿಸರಿನ್‌ನ ಸುದ್ದಿಯನ್ನು ಇಲ್ಲಿಗೇ ಬಿಡುತ್ತೇನೆ. ಒಟ್ಟಿನಲ್ಲಿ ನಾನು ಬರೆದಿರುವುದರ ತಾತ್ಪರ್ಯ ಇಷ್ಟು: ವೈಜ್ಞಾನಿಕ ಲೇಖನವೆಂಬ ಹೆಸರಿನಲ್ಲಿ ಪ್ರಕಟವಾದ ನಾಗೇಶ ಹೆಗಡೆಯವರ ಲೇಖನದಲ್ಲಿ ಹಲವು ಲೋಪದೋಷಗಳಿವೆ. ವಿಜ್ಞಾನವೆಂಬ ಹೆಸರಿನಲ್ಲಿ ಹಲವು ತಪ್ಪು ಮಾಹಿತಿಗಳನ್ನೂ, ಅರ್ಧ ಸತ್ಯಗಳನ್ನೂ, ಬಹಳಷ್ಟು ಅಪ್ರಸ್ತುತ ವಿಷಯಗಳನ್ನೂ ಓದುಗರ ಮುಂದಿಟ್ಟಿದ್ದಾರೆ.

ವೈದ್ಯವಿಜ್ಞಾನದಲ್ಲಿ ದನದ ಶರೀರದ ಭಾಗಗಳ ಬಳಕೆ ಎಂದೂ ಆಗಿಲ್ಲ ಅಥವಾ ಆಗುತ್ತಿಲ್ಲ ಎಂದು ನಾನೆಲ್ಲೂ ಹೇಳಹೋಗಿಲ್ಲ. ಆದರೆ ಹೆಗಡೆಯವರು ‘ಕೆಲವು’, ‘ಹಲವು’ ಎಂಬ ಯಾವ ಶಬ್ದಗಳನ್ನೂ ಬಳಸದೆ, ಅದೆಷ್ಟೋ ಔಷಧಿಗಳಿಗೆ ದನದ ದೇಹವೊಂದೇ ಮೂಲ, ಈ ಔಷಧಿಗಳಿಗೆ ಪರ್ಯಾಯ ಆಕರಗಳೇ ಇಲ್ಲ, ದನದ ದೇಹದ ಭಾಗಗಳನ್ನು ಉಪಯೋಗಿಸುವುದನ್ನು ಬಿಟ್ಟರೆ ಕೆಲವು ರೋಗಗಳಿಗೆ ಬೇರೆ ಚಿಕಿತ್ಸೆಯೇ ಇಲ್ಲ ಎಂಬಂಥ ಧಾಟಿಯಲ್ಲಿ ಬರೆದಿರುವ ವಿಷಯಗಳ ವಿಶ್ವಾಸಾರ್ಹತೆಯನ್ನು ನಾನಿಲ್ಲಿ ಪ್ರಶ್ನಿಸಿದ್ದೇನೆ. ಇರುವ ವಿಷಯವನ್ನು ಇರುವಂತೆ ವೈದ್ಯಕೀಯ ಲೇಖನಗಳ ಸಾಕ್ಷ್ಯಾಧಾರಗಳ ಮೂಲಕ ನಿಮ್ಮ ಮುಂದಿಟ್ಟಿದ್ದೇನೆ. ಕಾಯಿಲೆಯಿಂದ ಸಂತ್ರಸ್ತರಾದ, ಆಗಲೇ ಬಳಲಿರುವ ರೋಗಿಗಳಿಗೆ ತಪ್ಪು ಮಾಹಿತಿ ಕೊಟ್ಟು, ಅವರನ್ನು ಇನ್ನಷ್ಟು ವಿಹ್ವಲಗೊಳಿಸುವಂತಹ ಹೇಳಿಕೆಗಳನ್ನು ಕೊಡುವ ಮೊದಲು ವಿಷಯದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅತ್ಯಂತ ಅಗತ್ಯವಾಗುತ್ತದೆ. ವಿಜ್ಞಾನ ಲೇಖನದಲ್ಲಿ ಉತ್ಪ್ರೇಕ್ಷಿತ ಹೇಳಿಕೆಗಳನ್ನು ಕೊಡುವುದು, ಹಲವು ಅರ್ಧಸತ್ಯಗಳ ನಡುವೆ ಒಂದಷ್ಟು ಸುಳ್ಳುಗಳನ್ನೂ ನಯವಾಗಿ ಸೇರಿಸುವುದು, ವೈದ್ಯವಿಜ್ಞಾನದಲ್ಲಿ ಆಕಳಿನ ದೇಹದ ಉತ್ಪನ್ನಗಳನ್ನು ಎಲ್ಲೆಲ್ಲಿಯೂ ಬಳಸುವುದೊಂದೇ ಪರಮಸತ್ಯ ಎಂಬಂತೆ ಬಿಂಬಿಸುವುದು ಖಂಡಿತ ಸರಿಯಲ್ಲ ಎಂದು ನನಗನ್ನಿಸುತ್ತದೆ.

ಆಧುನಿಕ ವೈದ್ಯವಿಜ್ಞಾನದಲ್ಲಿ ಸಾವಿರಾರು ಬಗೆಯ ಔಷಧಿಗಳು, ಇತರ ಚಿಕಿತ್ಸಾಕ್ರಮಗಳು ಬಳಕೆಯಲ್ಲಿವೆ. ಇದರಲ್ಲಿ ಬೆರಳೆಣಿಕೆಯಷ್ಟು ಮಾತ್ರ ಪ್ರಾಣಿಜನ್ಯವಾಗಿವೆ. ಹಲವು ಪ್ರಾಣಿಜನ್ಯ ವಸ್ತುಗಳ ಬಳಕೆ ಈಗ ನಿಂತು ಹೋಗಿದೆ. ಉಳಿದವುಗಳಿಗೂ ಪರ್ಯಾಯ ಆಕರಗಳನ್ನು ಹುಡುಕುವಂತಹ ಸಂಶೋಧನೆಗಳು ಪ್ರತಿನಿತ್ಯ ಪ್ರಪಂಚದಾದ್ಯಂತ ನಡೆಯುತ್ತಲೇ ಇವೆ. ಹಾಗಾಗಿ ಮಾಡರ್ನ್ ಮೆಡಿಸಿನ್‌ನ ಅಸ್ತಿತ್ವ ಗೋಹತ್ಯೆಯ ಮೇಲೆ ಖಂಡಿತಾ ಅವಲಂಬಿತವಾಗಿಲ್ಲ. ಹೆಗಡೆಯವರ ಲೇಖನವನ್ನೋದಿ ತಬ್ಬಿಬ್ಬಾದ ಅಥವಾ ಭಯಭೀತರಾದ ಒಬ್ಬಿಬ್ಬರು ರೋಗಿಗಳಿಗಾದರೂ ಈ ಲೇಖನವನ್ನೋದಿ ಸ್ವಲ್ಪ ನೆಮ್ಮದಿ ದೊರಕಿದರೆ, ಈ ಸ್ಪಷ್ಟನೆಯನ್ನು ಬರೆಯಲು ನಾನು ಪಟ್ಟ ಪ್ರಯತ್ನ ಸಾರ್ಥಕ ಎಂದುಕೊಳ್ಳುತ್ತೇನೆ.

ಈ ಲೇಖನವನ್ನು ಬರೆಯಲು ಉಪಯುಕ್ತ ಮಾಹಿತಿಗಳನ್ನು ಕೊಟ್ಟು ಸಹಕರಿಸಿದ ಈ ತಜ್ಞವೈದ್ಯರು ಹಾಗೂ ಹಿತೈಷಿಗಳಿಗೆ ನಾನು ಆಭಾರಿ:
ಡಾ. ಅನಿಲ್ ಗೋಪಾಲಕೃಷ್ಣ, ವಾರಿಂಗ್ಟನ್, ಯುಕೆ
ಡಾ. ಅಮಿತ್ ಕಿಶೋರ್, ಮಾಂಚೆಸ್ಟರ್, ಯುಕೆ
ಡಾ. ಆದಿತ್ಯ ಭಾರದ್ವಾಜ್, ಮಂಗಳೂರು
ಡಾ. ದಿವ್ಯಾ ಸ್ವಾಮಿ, ಮಾಂಚೆಸ್ಟರ್, ಯುಕೆ
ಮಿಸ್ ಜೆನಿಫರ್ ಹೈಡ್, ಫಾರ್ಮಸಿಸ್ಟ್‌, ಮಾಂಚೆಸ್ಟರ್, ಯುಕೆ.
ಡಾ. ಮಧುಸೂದನ್ ರಂಗಯ್ಯ, ಲಂಡನ್, ಯುಕೆ
ಡಾ. ನಾಂದಾ ಕೋ, ಮಾಂಚೆಸ್ಟರ್, ಯುಕೆ
ಡಾ. ಪ್ರತೀಕ್ ಅಗರ್ವಾಲ್, ದೆಹಲಿ
ಡಾ. ರಾಮಶರಣ್ ಲಕ್ಷ್ಮೀನಾರಾಯಣ, ಡರ್ಬಿ, ಯುಕೆ
ಡಾ. ಶುಭಾ ಶಿವತೇಜ, ಬೆಂಗಳೂರು
ಡಾ. ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್, ಯುಕೆ
ಡಾ. ಸುದರ್ಶನ ಗುರುರಾಜ ರಾವ್, ಕೆನಡಾ

– ಡಾ. ವೈಶಾಲಿ ದಾಮ್ಲೆ
ಮಾಂಚೆಸ್ಟರ್, ಯುಕೆ

2 thoughts on “‘ಗೋ-ಮಯ’ ವಿಜ್ಞಾನ ವಿವರಣೆಯಲ್ಲಿ ನೈಜತೆಯಿರಲಿ

  1. ನಾಗೇಶ ಹೆಗಡೆಯವರ ಪ್ರತಿಕ್ರಿಯೆ ಏನು ? ಪ್ರಜಾವಾಣಿಯು ನಿಷ್ಪಕ್ಷಪಾತ ನೀತಿಯನುಸಾರ ಈ ಲೇಖನವನ್ನೂ ಪ್ರಕಟಿಸುತ್ತದೆಯೇ ? ಅಂಧಾಭಿಮಾನಿಗಳನ್ನು ಹೊರತುಪಡಿಸಿ ನಿಜ ತಿಳಿಯಲು ಅಭಿಮಾನಿ ಗಳು ಸಹಕರಿಸುತ್ತಾರೆಯೇ ? ( ಎಡ ,ಬಲ ,ಬಡಗಳಲ್ಲಿ ರುವವರು)

  2. well written. a certain segment of our society, in order to justify their thoughts relating to cow and its utility etc are spreading canards. it is necessary to write as you have done to give clarity on the subject. keep writing.

Leave a Reply

Your email address will not be published. Required fields are marked *

eighteen + 14 =

Tuesday, 16.01.2018

ಶ್ರೀಹೇಮಲಂಬಿ, ದಕ್ಷಿಣಾಯನ. ಹೇಮಂತಋತು, ಪುಷ್ಯ ಮಾಸ, ಕೃಷ್ಣಪಕ್ಷ, ಅಮಾವಾಸ್ಯೆ, ಮಂಗಳವಾರ, ನಕ್ಷತ್ರ ಪೂರ್ವಾಷಾಢ, ಯೋಗ-ವ್ಯಾಘಾತ, ಕರಣ-ಚತುಷ್ಟಾತ್.

ರಾಹುಕಾಲಗುಳಿಕಕಾಲಯಮಗಂಡಕಾಲ
03.00-4.30 12.00-1.30 09.00-10.30

Read More

 

Tuesday, 16.01.2018

ಶ್ರೀಹೇಮಲಂಬಿ, ದಕ್ಷಿಣಾಯನ. ಹೇಮಂತಋತು, ಪುಷ್ಯ ಮಾಸ, ಕೃಷ್ಣಪಕ್ಷ, ಅಮಾವಾಸ್ಯೆ, ಮಂಗಳವಾರ, ನಕ್ಷತ್ರ ಪೂರ್ವಾಷಾಢ, ಯೋಗ-ವ್ಯಾಘಾತ, ಕರಣ-ಚತುಷ್ಟಾತ್.

ರಾಹುಕಾಲಗುಳಿಕಕಾಲಯಮಗಂಡಕಾಲ
03.00-4.30 12.00-1.30 09.00-10.30

Read More

Back To Top