Breaking Newsಪ್ರಚಲಿತರಾಜ್ಯ
ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಲಿ: ಸಿ.ಎಂ.ಇಬ್ರಾಹಿಂ

ವಿಜಯಪುರ: ಮುಸ್ಲಿಂ ಸಮುದಾಯದ ತ್ರಿವಳಿ ತಲಾಖ್ ವಿಚಾರವಾಗಿ ತರಾತುರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸಿದ ಕೇಂದ್ರ ಸರಕಾರ ಇಂದು ರಾಮಮಂದಿರ ನಿರ್ಮಾಣ ವಿಷಯದಲ್ಲಿ ಮೌನ ವಹಿಸಿದೆ. ರಾಮ ಮಂದಿರ ನಿರ್ಮಾಣಕ್ಕೆ ಯಾರೂ ಸಹ ವಿರೋಧ ವ್ಯಕ್ತಪಡಿಸಿಲ್ಲ. ಈ ಕುರಿತು ಶೀಘ್ರವೆ ಸೌಹಾರ್ದ ಸಭೆ ಕರೆದು ಸುಗ್ರೀವಾಜ್ಞೆ ಹೊರಡಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಸವಾಲು ಹಾಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಮ ಮಂದಿರ ನಿರ್ಮಾಣಕ್ಕೆ ಯಾರೂ ಸಹ ವಿರೋಧ ವ್ಯಕ್ತಪಡಿಸಿಲ್ಲ. ಮುಸ್ಲಿಂ ಮಹಿಳೆಯರಿಗೆ ಸಂಬಂಧಿಸಿದ ತ್ರಿವಳಿ ತಲಾಖ್ ವಿಷಯಕ್ಕೆ ವಹಿಸಿದ ಆಸಕ್ತಿ ಕೇಂದ್ರ ಸರಕಾರ ರಾಮ ಮಂದಿರ ನಿರ್ಮಾಣಕ್ಕೆ ವಹಿಸಿಲ್ಲ ಎಂದೇ ತೋರುತ್ತಿದೆ. ಕೂಡಲೇ ಪರಸ್ಪರ ಸಭೆ ಕರೆದು ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸಬೇಕು ಎಂದರು.
ಟಿಪ್ಪು ಸುಲ್ತಾನ್ ಜಯಂತ್ಯುತ್ಸವಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಧರ್ಮಗುರುಗಳು, ಮುಸ್ಲಿಂ ಶಾಸಕರು, ಪ್ರಮುಖರನ್ನೊಳಗೊಂಡ ವಿಶೇಷ ಸಭೆಯನ್ನು ಆಯೋಜಿಸಲಾಗುವುದು ಎಂದು ಇಬ್ರಾಹಿಂ ಪ್ರಕಟಿಸಿದರು.ಇಸ್ಲಾಂ ಧರ್ಮದಲ್ಲಿ ಜಯಂತಿ ಆಚರಣೆಗೆ ಅವಕಾಶವಿಲ್ಲ, ಭಾವಚಿತ್ರ ಪೂಜೆಗೂ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಯಾವ ರೀತಿಯಾಗಿ ಅರ್ಥಪೂರ್ಣವಾಗಿ ಟಿಪ್ಪು ಜಯಂತಿ ಆಚರಣೆ ಮಾಡಬೇಕು ಎಂಬ ವಿಷಯವನ್ನು ಸುದೀರ್ಘವಾಗಿ ಚರ್ಚಿಸಲಾಗುವುದು ಎಂದರು.
ಟಿಪ್ಪು ಸುಲ್ತಾನ್ ಅವರ ಬಗ್ಗೆ ಕೆಲವು ವ್ಯಕ್ತಿಗಳು ಹಗುರವಾಗಿ ಮಾತನಾಡುತ್ತಿರುವುದರಿಂದ ನೋವಾಗುತ್ತಿದೆ. ಟಿಪ್ಪು ಸುಲ್ತಾನ್ ಅನೇಕ ದೇವಾಲಯಗಳಿಗೆ ದತ್ತಿ ನೀಡಿದ ಸರ್ವಧರ್ಮ ಸಮನ್ವಯಕ ಎಂದು ಸಮರ್ಥಿಸಿಕೊಂಡರು.
ಬೀಫ್ ಎಕ್ಸ್ಪೋರ್ಟ್ನಲ್ಲಿ ಬಿಜೆಪಿ ಸಂಸದರ ಪಾತ್ರವೇ ದೊಡ್ಡದಿದೆ. ಗೋಹತ್ಯೆಯನ್ನು ನಿಷೇಧಿಸುವ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ತಮ್ಮ ಅಧಿಕಾರವಿರುವ ಗೋವಾ ಮೊದಲಾದ ರಾಜ್ಯಗಳಲ್ಲಿ ಏಕೆ ಗೋಹತ್ಯೆ ನಿಷೇಧಿಸುವುದಿಲ್ಲ. ಅಲ್ಲಿರುವ ಗೋಮಾತೆ ಬಿಜೆಪಿ ನಾಯಕರಿಗೆ ಮಲತಾಯಿಯೇ? ಅಥವಾ ಚಿಕ್ಕಮ್ಮಳೇ?
– ಸಿ.ಎಂ.ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ