ವಿಶ್ವವಾಣಿ

ಬಂದ್‌ಗಳಲ್ಲಿ ಬಳಲುವ ಸಾಮಾನ್ಯರ ಜೀವನ

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆದಿದ್ದ ಭಾರತ್ ಬಂದ್‌ಗೆ ಮಿಶ್ರ ವ್ಯಕ್ತವಾಗಿದೆ. ಬಂದ್ ಕರೆ ನೀಡಿದ್ದವರು ಯಶಸ್ವಿ ಎನ್ನುತ್ತಿದ್ದಾರೆ, ಆಡಳಿತದವರು ಸುಳ್ಳು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವುದಂತೂ ಸತ್ಯ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಿಂದ ಪೆಟ್ರೋಲ್ ಬೆಲೆ ರು. 83ರ ಗಡಿ ದಾಟಿದ್ದರೆ, ಡೀಸೆಲ್ 76ರ ಗಡಿ ದಾಟಿದೆ. ಅದು ಎಲ್ಲದರ ಮೇಲೂ ಪರಿಣಾಮ ಬೀರುತ್ತಿದೆ. ಇದನ್ನೇ ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಪ್ರಯಾಣ ದರ ಹೆಚ್ಚಿಸಲು ಮುಂದಾಗಿದೆ; ಅದು ಎಲ್ಲ ಸಾರಿಗೆ ವ್ಯವಸ್ಥೆಯ ಮೇಲೂ ಪರಿಣಾಮ ಬೀರಲಿದೆ. ಆಡಳಿತ ಮತ್ತು ಪ್ರತಿಪಕ್ಷಗಳ ಎಲ್ಲ ರಾಜಕೀಯ ಮೇಲಾಟದಲ್ಲೂ ಸಣಕಲಾಗುತ್ತಿರುವವನು ಮಾತ್ರ ಜನಸಾಮಾನ್ಯ. ಬಂದ್ ಅನ್ನು ಒಂದು ಹಬ್ಬ ಎನ್ನುವಂತೆ ಆಚರಿಸುವವರೂ ಇದ್ದಾರೆ. ಇದನ್ನು ರಾಷ್ಟ್ರದ್ರೋಹ ಎನ್ನುವವರೂ ಇದ್ದಾರೆ. ಎಲ್ಲರೂ ಜನಸಾಮಾನ್ಯರ ಮೇಲೆ ಇರುವ ಆರ್ಥಿಕ ಹೊರೆ ಇಳಿಸಲು ತಾವು ಶ್ರಮಿಸುತ್ತಿರುವುದಾಗಿ ಹೇಳಿದರೂ ಎಲ್ಲರದೂ ರಾಜಕೀಯ ನಾಟಕ ಎನ್ನುವುದು ಹಲವಾರು ಬಂದ್‌ಗಳಲ್ಲಿ ಜನಸಾಮಾನ್ಯರಿಗೆ ಮನದಟ್ಟಾಗಿದೆ. ಸೋಮವಾರ ನಡೆದ ಬಂದ್ ಕೂಡಾ ಅದರ ಭಾಗ.

ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಅವರು ದಿಲ್ಲಿಯಲ್ಲಿ ಮಹಾತ್ಮ ಗಾಂಧಿಯವರ ಸಮಾಧಿಗೆ ನಮಿಸಿ ನಂತರ ಪ್ರತಿಭಟನಾ ಸ್ಥಳಕ್ಕೆ ಬಂದು ತೈಲ ದರ ತಕ್ಷಣ ಇಳಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದರು. ಇದೆಲ್ಲದರ ನಡುವೆ ಉತ್ತರ ಭಾರತದಲ್ಲಿ ಕೆಲವು ಕಡೆ ಉದ್ರಿಕ್ತ ವಾತಾವರಣವೂ ನಿರ್ಮಾಣವಾಗಿತ್ತು. ಕರ್ನಾಟಕದಲ್ಲಿ ಕಲ್ಲು ತೂರಾಟದಂಥ ಘಟನೆಗಳನ್ನು ಹೊರತುಪಡಿಸಿದರೆ ಜನಜೀವನದ ಮೇಲೆ ಭಾರೀ ಪರಿಣಾಮ ಬೀರಲಿಲ್ಲ ಎನ್ನುವುದಕ್ಕೆ ನಾವು ಸಮಾಧಾನಪಟ್ಟುಕೊಳ್ಳಬೇಕು.

ಬಿಹಾರದ ರಾಂಚಿಯ ಜಹನಾಬಾದ್‌ನಲ್ಲಿ ರೈಲು ತಡೆದು ಮತ್ತು ಸಿಪಿಐ ಮುಖಂಡರು ಪ್ರತಿಭಟನೆ ಮಾಡಿದರು. ಬಿಹಾರದಾದ್ಯಂತ ಸಂಚಾರ ಸ್ಥಗಿತಗೊಳಿಸಲು ಆರ್‌ಜೆಡಿ ಮತ್ತು ಸಿಪಿಐ ನವರು ಪ್ರಯತ್ನ ನಡೆಸಿದರು.

ಬಂದ್ ಯಶಸ್ವಿಯಾಗದಂತೆ ಮಾಡಲು ಬಿಜೆಪಿ ಹಲವು ಕಡೆ ಪ್ರಯತ್ನಿಸಿದ್ದೂ ಸುಳ್ಳಲ್ಲ. ಬಿಜೆಪಿ ಅಧಿಕಾರದಲ್ಲಿರುವ ಕಡೆಗಳಲ್ಲಿ ಒಂದು ಗಂಟೆ ಹೆಚ್ಚು ಕೆಲಸ ಮಾಡುವಂತೆ ಪಕ್ಷ ಕರೆ ಕೊಟ್ಟಿತ್ತು.

ಕಾಂಗ್ರೆಸ್ ಕರೆ ನೀಡಿದ ಭಾರತ್ ಬಂದ್‌ಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಬೆಂಬಲ ನೀಡಿರಲಿಲ್ಲ. ಬಂದ್‌ಗೆ ಕರೆ ನೀಡುವ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರಿಂದ ಕಾಂಗ್ರೆಸ್‌ಗೆ ಆರಂಭದಲ್ಲೇ ಹಿನ್ನಡೆಯಾಗಿತ್ತು. ಈ ಬಂದ್‌ಗಳು ನಿತ್ಯ ದುಡಿದು ಬದುಕುವ ಜನರನ್ನು ಹೈರಾಣಾಗಿಸುವುದಂತೂ ನಿಜ.