About Us Advertise with us Be a Reporter E-Paper

ವಿ +

ಕೂಡು ಕುಟುಂಬದಲ್ಲಿ ಬಾಳಿದರೆ ಸ್ವರ್ಗ ಸುಖ

- ಮಾಲತೇಶ ಖ. ಅಗಸರ, ಕ.ವಿ.ವಿ. ಧಾರವಾಡ

ಮಾತುಗಳೇ ಮೌನವಾದ ಪ್ರಸ್ತುತ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಎಷ್ಟು ಜನರಿದ್ದೀರಾ? ಎಂದು ಪ್ರಶ್ನೆ ಹಾಕುವ ಮೊದಲೇ ನನ್ನ ಕಾಲುಗಳು ತುದಿಗಾಲಲ್ಲಿ ನಿಂತು ನನ್ನ ತುಟಿಗಳು ಉತ್ತರ ಹೇಳಲು ತವಕಿಸುತ್ತದೆ. ಏಕೆಂದರೆ ನನ್ನದು ಅಜ್ಜಿ, ಅಮ್ಮ, ಅಪ್ಪ, ಚಿಕ್ಕಪ್ಪ, ಅಣ್ಣ, ಅಕ್ಕ, ಹೀಗೆ ಮೂವತ್ತು ರೆಂಬೆ ಕೊಂಬೆಗಳಿಂದ ಕೂಡಿದ ಬೃಹತ್ ಆಲದ ಮರದಂತಿದೆ ನನ್ನ ಕುಟುಂಬ. ಇಲ್ಲಿ ಎಲ್ಲರೂ ಕೂಡಿ ಸಹಬಾಳ್ವೆ ನಡೆಸುವ ರೀತಿ ವಿಶೇಷವಾದದು. ಅದು ಭೂಲೋಕದ ಮೇಲಿರುವ ಸ್ವರ್ಗದಂತೆ. ಕೂಡು ಸದ್ಯಸರ ನಿಷ್ಕಲ್ಮಶ ಭಾವನೆಗಳಿಂದ ನಿರ್ಮಿತವಾದ ಈ ಮನೆಯಲ್ಲಿ ನಡೆದಷ್ಟು ದಾರಿ ಸಲೀಸಾಗುತ್ತದೆ.

ಸದಾ ಗದ್ದಲ ಗಲಿಬಿಲಿಗಳಿಂದ ಕೂಡಿದ ವಾತಾವರಣದಲಿ ಜೀವ ತಳೆಯುವದೇ ಒಂದು ಅಮೃತಾನುಭವ.
ಏಕೆಂದರೆ ಅವಿಭಕ್ತ ಕುಟುಂಬ ಎಂಬುದು ಕಣ್ಣಿರು ಒರೆಸುತ್ತದೆ, ಖುಷಿಯನ್ನು ಹಂಚುತ್ತೆ, ಕಾಲೆಳೆಯುತ್ತದೆ, ಧೈರ್ಯ ತುಂಬುತ್ತದೆ, ಕೈ ಹಿಡಿಯುತ್ತದೆ. ಏನೇ ಕಷ್ಟ ಕಾರ್ಪಣ್ಯಗಳು ಬಂದರು ತಮ್ಮ ಕಷ್ಟಗಳೆಂದು ಭಾವಿಸಿ ಪರಸ್ಪರರ ಹಾತ್‌ಗೆ ಸಾಥ್ ನೀಡಿ ಮುನ್ನುಗಲು ಪ್ರೇರಣೆಯನ್ನು ನೀಡುತ್ತಾರೆ. ಅವಿಭಕ್ತ ಕುಟುಂಬದಲ್ಲಿ ನಮ್ಮ ಪ್ರೌಢಿಮೆಯ ಪರಿಧಿಯೊಳಗೆ ದೊಡ್ಡವರು ಚಿಕ್ಕವರು ಎಂಬ ಕೀಳರಿಮೆ ಇಲ್ಲದೆ ಪರಸ್ಪರರ ಭಾವನೆಗಳಿಗೆ ಸ್ಪಂದಿಸುತ್ತಾ ಕುಟುಂಬವನ್ನು ಮುನ್ನಡೆಸುವ ರೀತಿ ಅಮೋಘವಾದದು.

ಕೂಡು ಕುಟುಂಬ: ಮೌಲ್ಯಗಳ ಅರಮನೆ
ಹಬ್ಬ ಹರಿದಿನಗಳಲ್ಲಿ ಪೂರ್ವಸಿದ್ಧತೆ ಮಾಡಿಕೊಳ್ಳುವ ಬಗೆ, ವೈವಿಧ್ಯಮಯ ತಿಂಡಿ ತಿನಿಸುಗಳನ್ನು ತಯಾರಿಸುವದು, ಒಟ್ಟಿಗೆ ಕೂತು ಹರಟುತ್ತಾ ಸವಿಯುವ ಭೋಜನವು ಬೊಂಬಾಟ ಭೋಜನವೇ ಸರಿ. ಇಲ್ಲಿ ಹಿರಿಯರ ಮಾತುಗಳೆ ವೇದವಾಕ್ಯಗಳಾಗಿರುತ್ತವೆ. ‘ಕೂಡಿ ಬಾಳಿದರೆ ಸ್ವರ್ಗಸುಖ’ವೆಂಬ ಪೂರ್ವಜರ ನಾಣ್ಣುಡಿಯಂತೆ ಅಕ್ಷರಶಃ ಸತ್ಯ. ಇಂತಹ ಅವಿಭಕ್ತ ಕುಟುಂಬಗಳಲ್ಲಿ ಸಿಗುವ ಪ್ರೀತಿ, ವಾತ್ಸಲ್ಯ, ಮಮತೆ, ಸಂಬಂಧಗಳ ಮೌಲ್ಯಗಳು ಬೇರೆಲ್ಲಿಯೂ ಸಿಗುವ ಉದಾಹರಣೆಗಳೆ ಇಲ್ಲ.

ಇತ್ತೀಚಿನ ದಿನಗಳಲ್ಲಿ ಇಂತಹ ಕುಟುಂಬಗಳ ಪ್ರಮಾಣ ಕುಗ್ಗುತ್ತಿರುವದಕ್ಕೆ ಕಾರಣ ಹುಡುಕಿದರೆ ಕೆಲವೊಂದು ವಿಚಾರಗಳು ಮೈಜುಮ್ ಎನ್ನಿಸುತ್ತವೆ. ತಮ್ಮ ಮಕ್ಕಳಿಗೆ ತಮ್ಮ ಕುಟುಂಬದವರನ್ನು ಗುರುತಿಸುವಷ್ಟು ಮೌಲ್ಯಗಳನ್ನು ತುಂಬಲು ವಿಫಲವಾಗುತ್ತಿದೆ ನಮ್ಮ ಈಗಿನ ಪೀಳಿಗೆ. ಯಂತ್ರಗಳಂತೆ ಜೀವಿಸುತ್ತಿರುವವರಿಗೆ ಒಂದೇ ಮನೆಯಲ್ಲಿದ್ದರೂ, ಕೂತು ಮಾತನಾಡುವಷ್ಟು ಸಮಯ ಈಗಿಲ್ಲ. ತನ್ನ ವಿನಾಶಕೆ ತಾನೇ ಅಡಿಪಾಯ ಹಾಕಿಕೊಳ್ಳುತ್ತಿರುವದು ಈ ಕಾರಣಗಳಿಂದಲೇ. ಕುಟುಂಬದೊಳಗಿನ ಭಾವನಾತ್ಮಕ ಸಂಬಂಧಗಳು ಕಳೆಗುಂದಿ ಆನ್‌ಲೈನ್ ಸಂಬಂಧವಾಗಿ ಮಾರ್ಪಾಡಾಗುತ್ತಿವೆ. ಮುಂದೆ ನಮ್ಮ ಕುಟುಂಬದವರೇ ನಮಗೆ ಅಪರಿಚಿತರಂತೆ ಕಾಣುವ ಎಲ್ಲ ಲಕ್ಷಣಗಳು ಕಣ್ಣ ಮುಂದಿದೆ. ಇದೇ ಸ್ಥಿತಿ ಮುಂದುವರಿದರೆ ಎಲ್ಲ ಇದ್ದು ಕಳೆದುಕೊಂಡ ಭಾವ ನಮ್ಮನ್ನು ಕಾಡಲೂಬಹುದು.

ನಾವು ಹೊಂದಿರುವ ಸಂಬಂಧಗಳೇ ನಮ್ಮ ಜೀವನಕೆ ಶ್ರೇಷ್ಠ ಮೌಲ್ಯವನ್ನು ನೀಡುತ್ತವೆ. ಸ್ವಾರ್ಥ, ಲಾಭವನ್ನು ತ್ಯಜಿಸಿ ಎಲ್ಲರ ಜತೆ ಕೂಡಿ ನಲಿದಾಡಿ, ಮಾತನಾಡಿಕೊಂಡಿದ್ದಾಗ ಮಾತ್ರ ಕರುಣೆ ಮತ್ತು ವಾತ್ಸಲ್ಯಗಳ ನಿಸ್ವಾರ್ಥತೆಯ ಗೂಡೆಂಬ ಅರಮನೆಯೊಳು ಜೀವಿಸುವ ಕಾಲ ಸನ್ನಿಹಿತವಾಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close