ಸಾಲ ಮಾಡಿ, ಮರುಪಾವತಿಸಿದವನೇ ಮೂರ್ಖ!

Posted In : ಅಂಕಣಗಳು, ಪ್ರಥಮ ಪೂಜೆ

ಸಾಲ ಮಾಡಿ ತುಪ್ಪ ತಿನ್ನಬಾರದು ಎಂಬುದು ಹಳೆ ಗಾದೆ. ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬುದು ಅದರ ನಂತರದ ಗಾದೆ. ಸಾಲ ಮಾಡಿ ತುಪ್ಪ ತಿಂದು, ಸರಕಾರ ಸಾಲಮನ್ನಾ ಮಾಡುವ ತನಕ ಕಾಯ್ತಿರು ಎಂಬುದು ಹೊಸ ಗಾದೆ. ಈ ದೇಶದಲ್ಲಿ ಸಾಲ ಮಾಡಿ, ಕಟ್ಟದಿರುವವನೇ ಪುಣ್ಯವಂತ ಎಂಬಂತಾಗಿದೆ. ವರ್ಷದಿಂದ ವರ್ಷಕ್ಕೆ ಬ್ಯಾಂಕುಗಳ ಎನ್‌ಪಿಎ ಹೆಚ್ಚುತ್ತಲೇ ಇದೆ. ಇದಕ್ಕೆ ಕಾರಣ ಸಾಲ ಮಾಡಿದವರು ಮರುಪಾವತಿ ಮಾಡದಿರುವುದು. ಈಗೊಂದು ಹತ್ತಿಪ್ಪತ್ತು ವರ್ಷದ ಹಿಂದೆ ಸಾಲಕೊಟ್ಟ ಬ್ಯಾಂಕಿನವರು ವಸೂಲಿಗೆ ಮನೆಗೆ ಬರುತ್ತಾರೆ ಎಂದರೆ ಅದೊಂದು ಮರ್ಯಾದೆಯ ವಿಷಯವಾಗಿತ್ತು. ಸಾಲ ಕಟ್ಟದಿದ್ದರೆ ಆಸ್ತಿ, ಮಾನ ಎರಡೂ ಹರಾಜುಗುತ್ತದೆ ಎಂಬ ಭಯವಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಸಾಲ ಕಟ್ಟದೆಯೂ ಹಾಯಾಗಿರಬಹುದು. ಒಂದೋ ಸರಕಾರ ಮನ್ನಾ ಮಾಡಬಹುದು. ಹಾಗೊಮ್ಮೆ ಆಗದಿದ್ದರೂ ಬ್ಯಾಂಕಿನೊಂದಿಗೆ ಒಂದು ಹೊಂದಾಣಿಕೆ ಮಾಡಿಕೊಂಡು ಮರುಪಾವತಿ ಮೊತ್ತ ಕಡಿಮೆ ಮಾಡಿಕೊಳ್ಳಬಹುದು. ಮಲ್ಯನ ರೀತಿ ವಿದೇಶಕ್ಕೆ ಪರಾರಿಯಾಗಿ ಹಾಯಾಗಿಯೂ ಇರಬಹುದು. ಸಾಲ ಮಾಡದವನೇ ಈಗ ಮೂರ್ಖ!

ಇದೆಲ್ಲದರ ಪರಿಣಾಮ ಬ್ಯಾಂಕುಗಳ ಆರೋಗ್ಯ ಹದಗೆಡುತ್ತಿದೆ. ಉದ್ಯಮದಲ್ಲಿನ ನಷ್ಟ ದೊಡ್ಡ ಮಟ್ಟದಲ್ಲಿ ಎನ್‌ಪಿಎ ಸೃಷ್ಟಿಯಾಗಿದೆ. ಸುಮಾರು ಏಳು ಲಕ್ಷ ಕೋಟಿ ರು. ಉದ್ಯಮಗಳ ಸಾಲ ಬಾಕಿ ಇದೆ. ಉದ್ಯಮಗಳ ಸಾಲ ಮನ್ನಾ ಮಾಡಲು ಸರಕಾರದ ಮೇಲೆ ಬೇರೆ ಬೇರೆ ಒತ್ತಡ ಇದೆ. ಉದ್ಯಮವೇ ಮುಚ್ಚಿದರೆ ಉದ್ಯೋಗಾವಕಾಶಗಳ ಕೊರತೆಯೂ ಆಗುತ್ತದೆ. ಅದರ ಜತೆಗೆ ಉತ್ಪಾದನೆ ಕೊರತೆಯಾಗುತ್ತದೆ. ಸರಕಾರಗಳ ಮೇಲೆ ವಿವಿಧ ರೀತಿಯ ಒತ್ತಡಗಳೂ ಇರುತ್ತವೆ ಎಂಬುದೂ ಸತ್ಯ. ಇನ್ನೊಂದೆಡೆ ವರ್ಷದಿಂದ ವರ್ಷಕ್ಕೆ ಕೃಷಿ ಸಾಲ ಕಟ್ಟದವರ ಸಂಖ್ಯೆ ಹೆಚ್ಚುತ್ತಿದೆ. ಉತ್ತರಪ್ರದೇಶ ಹಾಗೂ ಪಂಜಾಬ್, ಕರ್ನಾಟಕದಲ್ಲಿ ಕೃಷಿ ಸಾಲವನ್ನು ಶರತ್ತುಬದ್ಧವಾಗಿ ಮನ್ನಾ ಮಾಡಿದ ನಂತರ ಈಗ ದೇಶಾದ್ಯಂತ ಕೃಷಿ ಸಾಲಮನ್ನಾ ಮತ್ತು ಉದ್ಯಮಿಗಳ ಸಾಲಮನ್ನಾ ಕುರಿತ ಚರ್ಚೆ.

ಕೃಷಿ ಸಾಲಮನ್ನಾ ಮಾಡುವುದು ಕೆಟ್ಟ ಪದ್ಧತಿ. ಅದೇ ನೀವು ಉದ್ಯಮಿಗಳ ದೊಡ್ಡ ದೊಡ್ಡ ಸಾಲ ಮನ್ನಾ ಮಾಡುವುದು ಆರ್ಥಿಕತೆಗೆ ಒಳ್ಳೆಯದು ಎನ್ನಲಾಗುತ್ತಿದೆ. ಹೀಗಿದ್ದರೂ ರೈತರ ಸಾಲಮನ್ನಾಕ್ಕೆ ಮಾತ್ರ ಯಾಕೆ ವಿರೋಧ ವ್ಯಕ್ತವಾಗುತ್ತದೆ ಎಂಬ ಪ್ರಶ್ನೆ ಏಳುತ್ತದೆ. ಆರ್‌ಬಿಐ ಮಾಜಿ ಗವರ್ನರ್ ರಘುರಾಮ ರಾಜನ್ ವರು ‘ವಿವಿಧ ರಾಜ್ಯ ಸರಕಾರಗಳ ಸಾಲಮನ್ನಾ ಯೋಜನೆಗಳು ಸಾಲದ ಮಾರುಕಟ್ಟೆ ಹಾಳು ಮಾಡುತ್ತಿದೆ’ ಎಂದಿದ್ದರು. ಎಸ್‌ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರು ಕೂಡ ‘ಕೃಷಿ ಸಾಲ ಮನ್ನಾ ಯೋಜನೆಗಳು ಸಾಲದ ಶಿಸ್ತು ಕೆಡಿಸುತ್ತಿವೆ’ ಎಂದಿದ್ದರು. ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್ ಮಾರ್ಚ್‌ನಲ್ಲಿ ಕೊಚ್ಚಿಯಲ್ಲಿ ಮಾತನಾಡುತ್ತ, ‘ದೊಡ್ಡ ಸಾಲ ಮಾಡಿರುವ ಉದ್ಯಮಿಗಳಿಗೆ ಸಹಾಯ ಮಾಡುವ ಅಗತ್ಯವಿದೆ. ಇದು ದೇಶದ ಆರ್ಥಿಕತೆ ಚುರುಕುಗೊಳಿಸಲು ಸಹಾಯಮಾಡಲಿದೆ’ ಎಂದಿದ್ದಾರೆ. ಲೆಕ್ಕಾಚಾರದ ದೃಷ್ಟಿಯಿಂದ ನೋಡಿದರೆ ಕೃಷಿಸಾಲ ಮನ್ನಾ ಏನೇನೂ ಅಲ್ಲ. ಲೋಕಸಭೆ ಸಾರ್ವಜನಿಕ ಲೆಕ್ಕಪತ್ರ ತಪಾಸಣಾ ಸಮಿತಿ ವರದಿ ಪ್ರಕಾರ ನಮ್ಮ ದೇಶದ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳ ಎನ್‌ಪಿಎ ಅಥವಾ ಕೆಟ್ಟ ಸಾಲದ ಮೊತ್ತ 6.8 ಲಕ್ಷ ಕೋಟಿ ರು. ಅದರಲ್ಲಿ ಕೃಷಿ ಸಾಲದ ಪಾಲು ಕೇವಲ ಶೇ.1ರಷ್ಟು. ಉದ್ಯಮಿಗಳು ಇದರ ಶೇ.70ರಷ್ಟು ಪಾಲು ಹೊಂದಿದ್ದಾರೆ.

ಕೇಂದ್ರ ಸರಕಾರ ರೈತರ ಸಾಲಮನ್ನಾ ಬಗ್ಗೆ ರಾಜ್ಯಗಳು ನಿರ್ಧಾರ ಕೈಗೊಳ್ಳಬಹುದು. ಆದರೆ ಅದರ ಮೊತ್ತವನ್ನು ಕೇಂದ್ರ ಸರಕಾರ ಯಾವ ಕಾರಣಕ್ಕೂ ಭರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗೆ ನೋಡಿದರೆ ಕೃಷಿ ಮತ್ತು ಕೈಗಾರಿಕೆ ಎರಡೂ ರಾಜ್ಯದ ವ್ಯಾಪ್ತಿಯ ವಿಷಯ. ಕೃಷಿ ಸಾಲಮನ್ನಾದ ಹೊಣೆಯನ್ನು ರಾಜ್ಯಗಳೇ ಹೊರಬೇಕು ಎನ್ನುವ ಕೇಂದ್ರ ಸರಕಾರ, ಉದ್ಯಮಿಗಳ ಸಾಲಮನ್ನಾ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತದೆ. ಬಾಕಿ ಇರುವ 6.8 ಲಕ್ಷ ಕೋಟಿ ರು.ಗಳಲ್ಲಿ ಸುಮಾರು ನಾಲ್ಕು ಲಕ್ಷ ಕೋಟಿ ರು.ಗಳ ಸಾಲಮನ್ನಾ ಮಾಡಲು ಯೋಚನೆ ಮಾಡುತ್ತಿದೆ. ದೇಶದ ಸ್ಟೀಲ್ ಕಂಪನಿಗಳು ನಷ್ಟದಲ್ಲಿವೆ. ಅವುಗಳ ಸುಮಾರು 1.4 ಲಕ್ಷ ಕೋಟಿ ರು. ಸಾಲಬಾಕಿಯನ್ನು ಕೇಂದ್ರ ಸರಕಾರ ಮನ್ನಾ ಮಾಡಿದರೂ ಮಾಡಬಹುದು. ಭೂಷಣ್ ಸ್ಟೀಲ್‌ನ ನಷ್ಟ 44,478 ಕೋಟಿ ರು. ಇದು ಪಂಜಾಬ್‌ನ ರೈತರ ಸಾಲಕ್ಕಿಂತ (36000 ಕೋಟಿ ರು.) ಹೆಚ್ಚು. ಜಿಂದಾಲ್ ಸ್ಟೀಲ್ 44,140 ಕೋಟಿ ರು. ಬಾಕಿ ಉಳಿಸಿಕೊಂಡಿದೆ.

ಉತ್ತರಪ್ರದೇಶದ ರೈತರ ಸಾಲ ಮನ್ನಾ ಮೊತ್ತಕ್ಕಿಂತ ಇದು ಹೆಚ್ಚು. ಮಹಾರಾಷ್ಟ್ರ ರೈತರ ಒಟ್ಟು ಸಾಲ ಮನ್ನಾ ಮಾಡಲು 30,500 ಕೋಟಿ ರು. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಎಸ್ಸಾರ್ ಸ್ಟೀಲ್ ಒಂದರ ಸಾಲ ಬಾಕಿ 34,929 ಕೋಟಿ ರು. ಇದೆ. ಈಗ ಹೇಳಿ ಯಾವ ಸಾಲಮನ್ನಾ ದೇಶಕ್ಕೆ ಒಳ್ಳೆಯದು? ಎಂದು ಸಹಜವಾಗಿ ಕೇಳಬಹುದು. ಇಂಥ ಲೆಕ್ಕಾಚಾರವನ್ನು ಇಟ್ಟುಕೊಂಡೇ ನಮ್ಮ ಆರೋಗ್ಯ ಸಚಿವ ರಮೇಶ್‌ಕುಮಾರ್ ಅವರು ರೈತರಿಗೆ ‘ಸಾಲ ಕಟ್ಟಬೇಡಿ’ ಎಂದು ಕರೆ ನೀಡಿದ್ದಾರೆ. ನಮ್ಮ ರೈತರೇನಾದರೂ ಸಾಲ ಬಾಕಿ ಉಳಿಸಿಕೊಂಡಿದ್ದರೆ ಅದಕ್ಕೆ ನಮ್ಮ ರಾಜಕಾರಣಿಗಳೇ ಕಾರಣ. ಪಡೆದ ಸಾಲ ಮರಳಿಸುವಲ್ಲಿ ನಮ್ಮ ರೈತರು ನಿಜಕ್ಕೂ ನಿಯತ್ತಾಗಿದ್ದರು. ತುಂಬ ಕಷ್ಟದ ಸಂದರ್ಭದಲ್ಲಿ, ಇನ್ನೇನೂ ದಾರಿಯೇ ಇಲ್ಲ ಎಂದಾಗ ಮಾತ್ರ ಸಾಲ ಕಟ್ಟದೇ ಇರುತ್ತದ್ದರೇ ಹೊರತು, ಉದ್ದೇಶಪೂರ್ವಕವಾಗಿ ಸಾಲ ಕಟ್ಟದೇ ಇರುತ್ತಿರಲಿಲ್ಲ. ಆದರೆ ಬರ ಇದೆ, ರೈತರ ಸ್ಥಿತಿ ತುಂಬ ಕಷ್ಟವಿದೆ ಎಂಬ ಕಾರಣಕ್ಕೆ ಒಮ್ಮೆ ಸಾಲ ಮನ್ನಾ ಮಾಡಲಾಯಿತು.

ಅದು ಅಷ್ಟಕ್ಕೇ ಸೀಮಿತವಾಗದೇ ಅದು ರಾಜಕೀಯ ಅಥವಾ ಮತ ಸೆಳೆಯುವ ಮಾರ್ಗವಾಗಿ ಪರಿಣಮಿಸಿತು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಆಡಳಿತದಲ್ಲಿದ್ದ ಪಕ್ಷ ಸಾಲಮನ್ನಾ ಬಗ್ಗೆ ಒಲವು ತೋರುತ್ತದೆ. ಪ್ರತಿಪಕ್ಷಗಳು ಅದನ್ನು ಖಂಡಿತಾ ವಿರೋಧಿಸುವುದಿಲ್ಲ. ಯಾಕೆಂದರೆ ಮತಗಳನ್ನು ಕಳೆದುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಇದೇ ಕಾರಣಕ್ಕೆ ಎಲ್ಲ ಪಕ್ಷಗಳ ಪ್ರಣಾಳಿಕೆಯಲ್ಲೂ ಸಾಲಮನ್ನಾ ಭರವಸೆ ಕಾಣಿಸಿಕೊಳ್ಳುತ್ತದೆ. ಸಾಲ ಮನ್ನಾ ಎಂಬುದು ಕೇವಲ ರೈತಪರ ಕಾಳಜಿಯಾಗಂತೂ ಉಳಿದಿಲ್ಲ. ಈಗೇನಿದ್ರೂ ಅದು ಮತಗಳನ್ನು ಬಲೆಗೆಹಾಕಿಕೊಳ್ಳುವ ತಂತ್ರವಾಗಿ ಬದಲಾಗಿದೆ. ಸಚಿವ ರಮೇಶ್‌ಕುಮಾರ್ ಅವರು ರೈತರೇ ಸಾಲ ಕಟ್ಟಬೇಡಿ ಎಂದು ಪ್ರೋತ್ಸಾಹ ನೀಡುತ್ತಿದ್ದಾರೆ. ಯಾಕೆಂದರೆ ರಾಜ್ಯ ಸರಕಾರ ರೈತರ ಸಾಲವನ್ನು ಶರತ್ತುಬದ್ಧವಾಗಿ ಮನ್ನಾ ಮಾಡಿದೆ.

ಕೇಂದ್ರ ಸರಕಾರವೂ ಸಹಕಾರ ನೀಡಿದರೆ ದೊಡ್ಡಮಟ್ಟದಲ್ಲಿ ರೈತರ ಸಾಲ ಮನ್ನಾಾ ಆಗಬಹುದು. ಅದರಿಂದ ಮುಂದಿನ ಚುನಾವಣೆಗೆ ಕಾಂಗ್ರೆಸ್‌ಗೆ ಸಹಾಯವಾಗುತ್ತದೆ. ಅದಕ್ಕೆ ಈಗ ಉದ್ಯಮಿಗಳ ಸಾಲ ಮನ್ನಾ ಮಾಡುವವರು, ರೈತರ ಸಾಲ ಮನ್ನಾ ಮಾಡುತ್ತಿಲ್ಲ ಎಂದು ಬಿಂಬಿಸಲಾಗುತ್ತಿದೆ. ಈಗಿನದ್ದು, ಹಿಂದಿನ ಕೇಂದ್ರ ಸರಕಾರ ಎಂಬ ಬೇಧವಿಲ್ಲ. ಯುಪಿಎ ಸರಕಾರ ಇದ್ದಾಗ ಅಂದರೆ ಹಿಂದಿನ ದಶಕದಲ್ಲಿ 10 ಲಕ್ಷ ಕೋಟಿ ರು. ಉದ್ಯಮಿಗಳ ಸಾಲಬಾಕಿ ಮನ್ನಾ ಮಾಡಲಾಗಿದೆ. ಇದಕ್ಕೆ ಕಾರಣವೂ ಇದೆ. ದೇಶದ ಜಿಡಿಪಿಗೆ ಕೈಗಾರಿಕೆಗಳ ಕೊಡುಗೆ ಶೇ.29.02 ನಷ್ಟು. ಕೃಷಿಯದ್ದು ಶೇ.6.1.ರಷ್ಟು. ಬೇರೆ ದೇಶಗಳಿಗೆ ಹೋಲಿಸಿದರೆ ಇದು ಹೆಚ್ಚು. ಕೃಷಿ ಹಾಗೂ ಅದರ ಆಧಾರಿತ ಉದ್ಯೋಗಗಳನ್ನೆಲ್ಲ ತೆಗೆದುಕೊಂಡರೆ ಜಿಡಿಪಿಗೆ ಅದರ ಕೊಡುಗೆ ಶೇ.15ರವರೆಗೂ ತಲುಪಬಹುದು. ಆದರೆ ಉದ್ಯೋಗ ಸೃಷ್ಟಿ ಹಾಗೂ ಜಿಡಿಪಿಯ ಕೊಡುಗೆಯಲ್ಲಿ ಕೈಗಾರಿಕೆಯ ಪಾತ್ರ ಪ್ರಮುಖವಾದುದು.

ಸಚಿವರೊಬ್ಬರು ಸಾಲಕಟ್ಟಬೇಡಿ ಎಂದು ಹೇಳುವುದು ಎಷ್ಟು ಸಮಂಜಸ? ವಾದದ ದೃಷ್ಟಿಯಿಂದ ರಮೇಶ್‌ಕುಮಾರ್ ಸರಿಯಾಗೇ ಹೇಳುತ್ತಿದ್ದಾರೆ ಅನ್ನಿಸಬಹುದು. ಆದರೆ ಅದು ಮಾಡುವ ಪರಿಣಾಮ ಮಾತ್ರ ಹಾಳು. ಸಾಲಕಟ್ಟಲು ಸಾಧ್ಯವೇ ಇಲ್ಲದೆ ಬಾಕಿ ಉಳಿಸಿಕೊಳ್ಳುವುದು ಬೇರೆ. ಸಾಲ ಕಟ್ಟಲು ಸಾಧ್ಯವಿದ್ದೂ, ಕಟ್ಟದಿರುವುದು ಬೇರೆ. ಸರಕಾರ ಹೇಗೂ ಸಾಲಮನ್ನಾ ಮಾಡುತ್ತದೆ ಎಂದು ಸಾಲಕಟ್ಟದಿರುವುದು ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ. ಸಾಲಮನ್ನಾ ಮಾಡಿದ ನೀತಿ ಕೂಡ ಇದಕ್ಕೆ ಕಾರಣ. ಸಾಲ ಕಟ್ಟಿದವನಿಗೆ ಸಾಲಮನ್ನಾದ ಯಾವ ಸಹಾಯವೂ ಸಿಗುವುದಿಲ್ಲ. ಅದೇ ಕಟ್ಟದೆ ಬಾಕಿ ಇರಿಸಿಕೊಂಡವನ ಸಂಪೂರ್ಣ ಸಾಲಮನ್ನಾ ಆಗುತ್ತದೆ. ಹೀಗಿರುವಾಗ ಯಾವ ಮೂರ್ಖ ಸಾಲ ಕಟ್ಟುತ್ತಾನೆ? ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದವನಿಗೆ ಏನಾದರೂ ಅನುಕೂಲ ಮಾಡಿಕೊಡಬೇಕು. ಸಾಲ ಮರುಪಾವತಿ ಮಾಡುವುದಕ್ಕೆ ಪ್ರೋತ್ಸಾಹ ನೀಡಬೇಕು.

ಅಂದಾಗ ಮಾತ್ರ ನಿಯತ್ತಾಗಿ ಸಾಲ ಕಟ್ಟುವುದನ್ನು ಹೆಚ್ಚಿಸಬಹುದು. ಅದು ಬಿಟ್ಟು ಕೈಗಾರಿಕೋದ್ಯಮಿಗಳ ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಲಾಗುತ್ತಿದೆ. ನಮ್ಮದೂ ಮಾಡಲಿ ಬಿಡಿ. ಅವರು ಲಕ್ಷ ಕೋಟಿ. ರು. ಬಾಕಿ ಉಳಿಸಿಕೊಂಡಿದ್ದಾರೆ, ರೈತರದ್ದು ಸಾವಿರ ಕೋಟಿ ರು.ಗಳ ಲೆಕ್ಕದಲ್ಲಿದೆ. ಅದನ್ನೇ ಮಾಡುವವರು, ಇದನ್ನೂ ಮಾಡಲಿ ಎಂದು ವಾದ ಮಾಡುವುದು ವಿನಾಶಕಾರಿಯಾದೀತು. ಈ ವಾದ ಹೇಗಿದೆಯೆಂದರೆ ಮೂರು ಕೊಲೆ ಮಾಡಿದವನೇ ಹಾಯಾಗಿದ್ದಾನೆ, ಹಾಗಾಗಿ ಒಂದು ಕೊಲೆ ಮಾಡಲು ಹೆದರಬೇಡಿ. ಒಂದು ಕೊಲೆ ಮಾಡಿದ ಆರೋಪಿಯನ್ನು ಬಂಧಿಸಲು ಪೊಲೀಸರು ಬಂದಾಗ, ಸ್ವಾಮಿ ಮೊದಲು ಮೂರು ಕೊಲೆ ಮಾಡಿದವನನ್ನು ಬಂಧಿಸಿ. ನಂತರ ನನ್ನನ್ನು ಬಂಧಿಸಿ. ಮೂರು ಕೊಲೆ ಮಾಡಿದವನನ್ನು ಬಿಟ್ಟು, ಒಂದು ಕೊಲೆ ಮಾಡಿದವನನ್ನು ಬಂಧಿಸಲು ನಿಮಗೆ ಯಾವ ನೈತಿಕತೆಯಿದೆ ಎಂದು ಕೇಳಿದಂತಾಗುತ್ತದೆ. ಬ್ಯಾಂಕುಗಳಿಗೆ ಮಲ್ಯ ದೊಡ್ಡ ಮೊತ್ತದ ಸಾಲ ಬಾಕಿ ಇರಿಸಿಕೊಂಡಿದ್ದಾರೆ.

ಅವನನ್ನೂ ಶಿಕ್ಷಿಸಿ ಎಂದು ಹೇಳಬಹುದೇ ಹೊರತು, ಅವನು ಕಟ್ಟಿಲ್ಲ ಅದಕ್ಕೆ ನಾನೂ ಕಟ್ಟಿಲ್ಲ. ಅವನನ್ನ ಕರ್ಕೊಂಡು ಬನ್ನಿ ಮೊದಲು, ಆಮೇಲೆ ನಾನು ಸಾಲ ಕಟ್ಟುತ್ತೇನೆ ಎನ್ನಲಾಗುವುದಿಲ್ಲ. ಅದು ಸರಿಯೂ ಅಲ್ಲ. ದೊಡ್ಡ ತಪ್ಪು ಮಾಡಿದವರು ಇದ್ದಾರೆ ಎಂಬ ಕಾರಣಕ್ಕೆ ಸಣ್ಣ ತಪ್ಪು ಮಾಫ್ ಮಾಡಲು ಸಾಧ್ಯವೇ? ಸಾಧ್ಯವಿಲ್ಲ ಎಂದಾದರೆ ದೊಡ್ಡ ಸಾಲಗರಾರರನ್ನು ತೋರಿಸಿ, ಸಣ್ಣ ಸಾಲಗಾರರು ಸಾಲ ಕಟ್ಟಲೇ ಬೇಡಿ ಎಂದು ಹೇಳುವುದೂ ತಪ್ಪಾಗುತ್ತದೆ. ರಮೇಶ್‌ಕುಮಾರ್ ಅವರು ಇಂಥ ಪೊಳ್ಳುವಾದಕ್ಕೆ ಇಳಿಯಬಾರದಿತ್ತು. ರಮೇಶ್‌ಕುಮಾರ್ ಅವರ ಮಾತಿನ ಪ್ರಕಾರ ಈಗ ಸಾಲ ಮಾಡಿ, ಮರುಪಾವತಿ ಮಾಡುವವನೇ ಮೂರ್ಖ! ಆದರೆ ದೇವರಲ್ಲಿ ಬೇಡುವುದಿಷ್ಟೇ, ಯಾರೇನೇ ಹೇಳಲಿ ನಮ್ಮ ರೈತರಿಗೆ ಸಾಲ ಮರುಪಾವತಿ ಮಾಡುವ ಶಕ್ತಿಕೊಡು. ನಮ್ಮ ರೈತರು ಯಾರದೋ ಕೃಪೆಯಿಂದ ಜೀವಿಸುವುದು ಬೇಡ. ಅವರ ಶಕ್ತರಾಗಿ, ಆತ್ಮಾಭಿಮಾನಿಗಳಾಗಿ ಬದುಕುವಂತಾಗಲಿ. ಸಾಲಮನ್ನಾ ಮಾಡಿ ತಾವೇನೋ ರೈತರಿಗೆ ಸಹಾಯ ಮಾಡಿದ್ದೇವೆ ಎಂದು ಬೀಗುವ ಅವಕಾಶ ರಾಜಕಾರಣಿಗಳಿಗೆ ಸಿಗದಿರಲಿ.

2 thoughts on “ಸಾಲ ಮಾಡಿ, ಮರುಪಾವತಿಸಿದವನೇ ಮೂರ್ಖ!

Leave a Reply

Your email address will not be published. Required fields are marked *

9 − eight =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top