About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಲೋಕಸಭೆ ಚುನಾವಣೆ: ಡಿಕೆಸು ಹಾದಿ ಸಲೀಸು, ಮಂಡ್ಯಕ್ಕೆ ದೊಡ್ಡಗೌಡ್ರು….?

- ಮತ್ತೀಕೆರೆ ಜಯರಾಮ್ ರಾಮನಗರ

ರಾಮನಗರ: ಲೋಕಸಭೆ ಚುನಾವಣೆಯಲ್ಲೂ ಜೆಡಿಎಸ್ ಮತ್ತು ಕಾಂಗ್ರೆಸ್ ದೋಸ್ತಿ ಖಚಿತವಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ನಿಂದ ಹಾಲಿ ಸಂಸದ ಡಿ.ಕೆ.ಸುರೇಶ್ ಸ್ಪರ್ಧೆ ನಿಶ್ಚಿಯವಾಗಿದ್ದು, ಮಂಡ್ಯದಲ್ಲಿ ಜೆಡಿಎಸ್‌ನಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಲ್ಲವೇ ಅವರ ಮೊಮ್ಮಗ ಕುಮಾರಸ್ವಾಮಿ ಪೈಕಿ ಯಾರು ಅಖಾಡಕ್ಕೆ ಧುಮುಕುತ್ತಾರೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.

ಸಚಿವ ಡಿ.ಕೆ.ಶಿವಕುಮಾರ್ ಅವರು ಸಮ್ಮಿಶ್ರ ಸರಕಾರಕ್ಕೆ ಆಧಾರಸ್ತಂಭವಾಗಿ ನಿಂತಿರುವ ಕಾರಣ ದೊಡ್ಡಗೌಡರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಧಾರೆ ಎರೆಯಲಿದ್ದಾರೆ. 12 ಸ್ಥಾನಗಳಿಗಾಗಿ ಬೇಡಿಕೆ ಸಲ್ಲಿಸಿರುವ ದೇವೇಗೌಡ ಅವರು ಕಾಂಗ್ರೆಸ್‌ನ ಕೆಲ ಹಾಲಿ ಸಂಸದರ ನಿದ್ದೆಗೆಡಿಸಿದ್ದಾರೆ. ಆದರೆ, ಅವರ ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರ ಸೇರಿಲ್ಲದಿರುವುದು ಡಿಕೆಎಸ್ ಸಹೋದರರು ನಿಟ್ಟುಸಿರು ಬಿಡುವಂತೆ ಮಾಡಿದೆ.

ಕೊಕ್ ನೀಡುವ ಸಾಧ್ಯತೆ: ಈಚೆಗಷ್ಟೇ ಉಪ ಚುನಾವಣೆಯಲ್ಲಿ ದಾಖಲೆ ಗೆಲುವು ಸಾಧಿಸಿರುವ ಎಲ್.ಆರ್.ಶಿವರಾಮೇಗೌಡ ಅವರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಕೊಕ್ ನೀಡುವ ಸಾಧ್ಯತೆ ಹೆಚ್ಚಿದೆ. ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಳುವಳಿ ನೀಡಿರುವ ದೇವೇಗೌಡ ಅವರ ಚಿತ್ತ ಬೆಂಗಳೂರು ಉತ್ತರದ ಜತೆಗೆ ಮಂಡ್ಯದ ಕಡೆಯೂ ನೆಟ್ಟಿದೆ. ಅವರ ಮತ್ತೊಬ್ಬ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಹೆಸರು ಕೂಡ ಮಂಡ್ಯದಲ್ಲಿ ಹರಿದಾಡುತ್ತಿದೆ.

ತಮ್ಮ ಸ್ಪರ್ಧೆ ಉಪ ಚುನಾವಣೆಗೆ ಸೀಮಿತವೆಂದು ಮೊದಲು ಹೇಳಿದ್ದ ಶಿವರಾಮೇಗೌಡ ಅವರು ಗೆದ್ದ ಸಾರ್ವತ್ರಿಕ ಚುನಾವಣೆಗೂ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ಒಂದೊಮ್ಮೆ ದೇವೇಗೌಡ ಅಥವಾ ನಿಖಿಲ್ ಕುಮಾರಸ್ವಾಮಿ ಪೈಕಿ ಯಾರೇ ಸ್ಪರ್ಧಿಸಿದರೂ ಮಂಡ್ಯ ಲೋಕಸಭಾ ಕ್ಷೇತ್ರ ದೇಶದ ಗಮನ ಸೆಳೆಯಲಿದೆ. ಜೆಡಿಎಸ್ ಭದ್ರಕೋಟೆಯಾಗಿರುವ ಇಲ್ಲಿ ಬಿಜೆಪಿ ಆಟ ನಡೆಯದು. ಇಲ್ಲಿನ ಕದನ ಅಷ್ಟೇನೂ ಕುತೂಹಲವಲ್ಲ.

ನಿಖಿಲ್ ಪರ ಬ್ಯಾಟಿಂಗ್: ಅಗಲಿರುವ ಮೇರು ಚಿತ್ರನಟ ಅಂಬರೀಶ್ ಅವರ ಪುತ್ರ ಅಭಿಷೇಕ್ ಗೌಡ ಅವರನ್ನು ಮಂಡ್ಯದಿಂದ ಕಣಕ್ಕಿಳಿಸುವಂತೆ ಹಾಸನದ ಮಾಜಿ ಸಚಿವ ಎ.ಮಂಜು ಹೇಳಿಕೆ ನೀಡಿದ ಇತ್ತ ಮಂಡ್ಯದಲ್ಲಿ ಜೆಡಿಎಸ್ ಪಾಳೆಯ ನಿಖಿಲ್ ಕುಮಾರಸ್ವಾಮಿ ಪರ ಬ್ಯಾಟಿಂಗ್‌ಗೆ ಇಳಿದಿದೆ. ನಿಖಿಲ್ ಅವರನ್ನೇ ಅಭ್ಯರ್ಥಿಯಾಗಿಸುವಂತೆ ಜಿಪಂ ಸದಸ್ಯರ ನಿಯೋಗವು ದೇವೇಗೌಡ, ಕುಮಾರಸ್ವಾಮಿ, ಎಚ್.ವಿಶ್ವನಾಥ್ ಅವರಿಗೆ ಖುದ್ದು ಮನವಿ ಸಲ್ಲಿಸಿ ಒತ್ತಡ ಹೇರಿದೆ.

ಈ ಬೆಳವಣಿಗೆ ನಡುವೆಯೇ ಮದ್ದೂರು ತಾಲೂಕಿನ ಭಾರತಿನಗರದಲ್ಲಿ ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ, ತಮ್ಮ ತಾತ ದೇವೇಗೌಡ ಅವರ ರಾಜಕೀಯ ಜೀವನದ ಕಡೆಯ ಚುನಾವಣೆ ಸ್ಪರ್ಧೆ ಮಂಡ್ಯದಿಂದಲೇ ಆಗುವ ಸುಳಿವು ನೀಡಿದ್ದಾರೆ. ಇಷ್ಟಲ್ಲದೆ, ದೇವೇಗೌಡ ಅವರನ್ನು ದೊಡ್ಡ ಅಂತರದಿಂದ ಆರಿಸಿ ಕಳುಹಿಸಲು ಕಾರ್ಯಕರ್ತರು ಪಣತೊಡಬೇಕಿದೆ ಎನ್ನುವ ಕರೆಯನ್ನೂ ನೀಡಿದ್ದಾರೆ. ಹೀಗಾಗಿ ಜೆಡಿಎಸ್ ಹುರಿಯಾಳು ವಿಚಾರದಲ್ಲಿ ಕುತೂಹಲ ಹೆಚ್ಚಿದೆ.

ಅಂಬಿ ಕುಟುಂಬಕ್ಕೆ ಮಣೆ?: ಮಂಡ್ಯದಿಂದ ಅಂಬರೀಶ್ ಅವರ ಪತ್ನಿ ಸುಮಲತಾ ಅಥವಾ ಪುತ್ರ ಅಭಿಷೇಕ್ ಗೌಡ ಪೈಕಿ ಒಬ್ಬರಿಗೆ ಜೆಡಿಎಸ್‌ನ ಲೋಕಸಭೆ ಟಿಕೆಟ್ ನೀಡಬೇಕೆನ್ನುವ ಕೂಗು ಸಹ ಅಭಿಮಾನಿಗಳಿಂದ ಕೇಳಿ ಬರುತ್ತಿದೆ. ಅಂಬರೀಶ್ ಅವರ ಅಗಲಿಕೆ ವೇಳೆ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಮಂಡ್ಯ ಜಿಲ್ಲೆ ಕಂಬನಿ ಮಿಡಿದು, ಹೊಳೆಯನ್ನೇ ಹರಿಸಿತು. ಅನುಕಂಪದ ಲಾಭ ಪಡೆದು, ಮತ್ತಷ್ಟು ಸುಲಭವಾಗಿ ಗೆಲ್ಲಲು ಜೆಡಿಎಸ್ ವರಿಷ್ಠರು ಅಂಬರೀಶ್ ಕುಟುಂಬಕ್ಕೆ ಮಣೆ ಹಾಕುವರೇ ಎನ್ನುವ ಪ್ರಶ್ನೆಯೂ ಎದುರಾಗಿದೆ.

ಒಂದೊಮ್ಮೆ ಅಂಬರೀಶ್ ಅವರ ಕುಟುಂಬಕ್ಕೆ ಅವಕಾಶ ಕಲ್ಪಿಸಿದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಂಡ್ಯ ಮಟ್ಟಿಗೆ ಮತ್ತಷ್ಟು ಗಟ್ಟಿಗೊಳ್ಳಲಿದೆ. ಯಾವುದೇ ಕಾಂಗ್ರೆಸ್ ಮುಖಂಡರೂ ಅಷ್ಟು ಸುಲಭವಾಗಿ ಒಳೇಟು ಹಾಕಲು ಸಾಧ್ಯವಿರುವುದಿಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಹೀಗಾಗಿ ಮಂಡ್ಯ ಜೆಡಿಎಸ್ ಟಿಕೆಟ್‌ಗೆ ಸುಮಲತಾ ಅಥವಾ ಗೌಡ ಪೈಕಿ ಒಬ್ಬರು ವಾರಸುದಾರರಾದರೂ ಅಚ್ಚರಿಪಡಬೇಕಿಲ್ಲ.

ತೆರೆಮರೆಗೆ ಸರಿದ ಲಕ್ಷ್ಮಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದ ಜೆಡಿಎಸ್ ಟಿಕೆಟ್ ಮೇಲೆ ಕಣ್ಣಿಟ್ಟು, ಐಆರ್‌ಎಸ್ ಉದ್ಯೋಗ ತೊರೆದು ಬಂದ ಲಕ್ಷ್ಮಿ ಅಶ್ವಿನ್‌ಗೌಡ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಿಸುವ ಭರವಸೆ ನೀಡಲಾಗಿತ್ತು. ಕಡೆಗೆ ಅಲ್ಲೂ ಮಣೆ ಹಾಕದ ಪರಿಣಾಮ ಜೆಡಿಎಸ್ ಪಾಳೆಯದಿಂದಷ್ಟೇ ಅಲ್ಲದೆ ರಾಜಕಾರಣದಿಂದಲೇ ಲಕ್ಷ್ಮಿ ಅವರು ದೂರ ಸರಿದಿದ್ದಾರೆ. ಮುಂದೆಯೂ ವರಿಷ್ಠರು ತಮ್ಮ ಮೇಲೆ ಕಟಾಕ್ಷ ತೋರುತ್ತಾರೆ ಎನ್ನುವ ಅವರಲ್ಲಿ ಉಳಿದಂತೆ ಕಾಣುತ್ತಿಲ್ಲ.

ಸಮ್ಮಿಶ್ರ ಸರಕಾರದಲ್ಲಿ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಗಳಿಗೆ ಶಾಸಕರೇ ಕಚ್ಚಾಡುತ್ತಿದ್ದಾರೆ. ಮಿತ್ರ ಪಕ್ಷವಾದ ಕಾಂಗ್ರೆಸ್‌ನ ಶಾಸಕರನ್ನು ಸಮಾಧಾನಪಡಿಸುವುದಕ್ಕೆ ಹರಸಾಸಹ ನಡೆಸುತ್ತಿರುವ ಕುಮಾರಸ್ವಾಮಿ ಅವರು ಸ್ವಪಕ್ಷೀಯ ಶಾಸಕರ ಮೂಗಿಗೆ ತುಪ್ಪ ಸವರಿದ್ದಾರೆ. ಈ ನಡುವೆ ಅಧಿಕಾರ ಭಾಗ್ಯವನ್ನು ಎದುರು ನೋಡುತ್ತಿರುವ ಮುಖಂಡರು, ಕಾರ್ಯಕರ್ತರಿಗೆ ಸಾಕಷ್ಟು ನಿರಾಸೆಯಾಗಿದೆ. ಹಿಂದೆಯೂ ಸಮ್ಮಿಶ್ರ ಸರಕಾರವಿದ್ದಾಗ ನಿಗಮ, ಮಂಡಳಿ ಅಧಿಕಾರ ಕಾರ್ಯಕರ್ತರಿಗೆ ಮರೀಚಿಕೆಯಾಗಿತ್ತು. ಈಗಲೂ ಅದೇ ಪರಿಸ್ಥಿತಿಯಿದೆ.

ದುಷ್ಮನ್ ಅಲ್ಲ ದೋಸ್ತಿ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ತುಮಕೂರಿನ ಕುಣಿಗಲ್, ಬೆಂಗಳೂರು ನಗರದ ಆನೇಕಲ್, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳು ಸೇರಿವೆ. ಇಲ್ಲಿ ಎರಡು ದಶಕದಿಂದ ಹಾವು ಮುಂಗುಸಿಯಂತೆ ಕಚ್ಚಾಡಿಕೊಂಡೇ ಬಂದಿದ್ದ ದೇವೇಗೌಡ ಮತ್ತು ಡಿಕೆಶಿ ಕುಟುಂಬದ ನಡುವೆ ದೋಸ್ತಿ ಏರ್ಪಟ್ಟಿದೆ. ಈ ಕಾರಣದಿಂದಲೇ ಬೆಂಗಳೂರು ಗ್ರಾಮಾಂತರದಲ್ಲಿ ಸಂಸದ ಡಿ.ಕೆ.ಸುರೇಶ್ ಹಾದಿ ಸುಗಮವೆನಿಸಿದೆ.

2002ರ ಕನಕಪುರ ಲೋಕಸಭಾ ಕ್ಷೇತ್ರದ ಉಪ ದೇವೇಗೌಡ ಮತ್ತು ಡಿ.ಕೆ.ಶಿವಕುಮಾರ್ ಸೆಣೆಸಿದ್ದರು. ಆಗ ದೇವೇಗೌಡ ಗೆದ್ದರೆ, 2013ರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭೆ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಎದುರು ಡಿ.ಕೆ.ಸುರೇಶ್ ಗೆಲುವು ಸಾಧಿಸಿದರು. ರಾಮನಗರ ಉಪ ಚುನಾವಣೆ ಕದನದಲ್ಲಿ ಅನಿತಾ ಅವರಿಗೆ ಸಂಸದ ಸುರೇಶ್ ಸಾರಥಿಯಾಗಿ ನಿಂತರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು 2009ರಲ್ಲಿ ಎಚ್.ಡಿ.ಕುಮಾರಸ್ವಾಮಿ ಪ್ರತಿನಿಧಿಸಿದ್ದರು. ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮೂರು ಪಕ್ಷಗಳಿಗೂ ಸಮಬಲವಿದೆ. ಸುರೇಶ್ ಬೆಂಬಲಕ್ಕೆ ಜೆಡಿಎಸ್ ನಿಲ್ಲುವುದರಿಂದ ಅವರ ಸುಗಮವೆನಿಸಿದೆ. ಬಿಜೆಪಿಯಿಂದ ಡಿ.ವಿ.ಸದಾನಂದಗೌಡ ಅಥವಾ ಸಿ.ಪಿ.ಯೋಗೇಶ್ವರ್ ಪೈಕಿ ಒಬ್ಬರು ಕಣಕ್ಕಿಳಿದರೆ, ತೀವ್ರ ಹಣಾಹಣಿ ಏರ್ಪಡಲಿದೆ. ಉಳಿದಂತೆ ಯಾರೇ ಅಭ್ಯರ್ಥಿಯಾದರೂ ಸುರೇಶ್ ಗೆಲುವಿನ ನಾಗಾಲೋಟಕ್ಕೆ ತಡೆ ಒಡ್ಡುವುದು ಅಸಾಧ್ಯದ ಮಾತೇ ಸರಿ. ಮೂರು ಜಿಲ್ಲೆಗಳಲ್ಲಿ ಚಾಚಿಕೊಂಡಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ತೆಕ್ಕೆಯಲ್ಲಿರುವುದು ಬೆಂಗಳೂರು ದಕ್ಷಿಣ ಮಾತ್ರವೇ. 3 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದರೆ, 4 ಕ್ಷೇತ್ರಗಳು ಕಾಂಗ್ರೆಸ್ ವಶದಲ್ಲಿವೆ. ಗ್ರಾಮಾಂತರ ಪ್ರದೇಶಕ್ಕಿಂತ ನಗರ, ಮತದಾರರೇ ಅಧಿಕ ಸಂಖ್ಯೆಯಲ್ಲಿರುವುದು ಈ ಕ್ಷೇತ್ರವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸುವಂತೆ ಮಾಡಲು ಪ್ರೇರಣೆಯಾಗಿದೆ.

ಮಂಡ್ಯ ಜೆಡಿಎಸ್ ಭದ್ರಕೋಟೆ: ಮಂಡ್ಯ ಜಿಲ್ಲೆಯ ಏಳು ಮತ್ತು ಮೈಸೂರು ಜಿಲ್ಲೆಗೆ ಸೇರಿದ ಕೆ.ಆರ್.ನಗರ ಒಳಗೊಂಡಿರುವ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಭದ್ರಕೋಟೆಯೇ ಸರಿ. ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರೇ ಆಯ್ಕೆಯಾಗಿದ್ದಾರೆ. ಬಿಜೆಪಿಗೆ ಇಲ್ಲಿನ್ನೂ ಗಟ್ಟಿ ನೆಲೆ ಇಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿ ಪಕ್ಷಗಳು. ಮೈತ್ರಿಯೊಂದಿಗೆ ಎದುರಿಸಿದ ಉಪ ಜೆಡಿಎಸ್ ದೊಡ್ಡ ಅಂತರದ ಗೆಲುವನ್ನು ಕಂಡಿದೆ. ಹೀಗಾಗಿ ಸಾರ್ವತ್ರಿಕ ಚುನಾವಣೆ ಹೋರಾಟದ ಬಗ್ಗೆ ದಳಪತಿಗಳು ತಲೆಕೆಡಿಸಿಕೊಂಡಿಲ್ಲ. ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ 5,69,302 ಮತ್ತು ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ 2,44,377 ಮತಗಳನ್ನು ಪಡೆದಿದ್ದಾರೆ. ಇದು ಮಂಡ್ಯದಲ್ಲಿ ದಾಖಲೆ ಗೆಲುವಿನ ಅಂತರ. ಅಂತೆಯೇ ಬಿಜೆಪಿಗೆ ಗರಿಷ್ಠ ಮತಗಳನ್ನು ಪಡೆದ ಉತ್ಸಾಹವಿದೆ. ಹಾಗೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಗಮನದಲ್ಲಿಟ್ಟುಕೊಂಡು ರೈತಪರ ಕಾರ್ಯಕ್ರಮಗಳನ್ನು ಘೋಷಿಸಿ, ಮೋಡಿ ಮಾಡಿದ್ದೇ ಆದಲ್ಲಿ ಮತಗಳಿಕೆ ಪ್ರಮಾಣ ಮತ್ತೊಂದಿಷ್ಟು ಏರಿಕೆ ಆಗಬಹುದೇ ಹೊರತು ಗೆಲುವಿನ ದಡ ಸೇರುವುದು ಅಸಾಧ್ಯ.

Tags

Related Articles

Leave a Reply

Your email address will not be published. Required fields are marked *

Language
Close