ವಿಶ್ವವಾಣಿ

ಲೋಕಸಭಾ ಚುನಾವಣೆ ಹೊಂದಾಣಿಕೆಯಿಂದ ‘ಕೈ’ಗೆ ನಷ್ಟ: ಕೃಷ್ಣಬೈರೇಗೌಡ

ಬೆಳಗಾವಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊ‌ಂಡರೆ ಕಾಂಗ್ರೆಸ್‍‍ಗೆ ನಷ್ಟವಾಗಲಿದೆ. ಈ ಕುರಿತು ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಮಂಗಳವಾರ ಬೆಳಗಾವಿ ಪ್ರವಾಸಿ‌ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆ ಕುರಿತಾಗಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಸಮ್ಮಿಶ್ರವಾಗಿ ಸ್ಪರ್ಧಿಸುವುದೆಂದು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್,ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಸ್ಪರ್ಧಿಸುವುದು ಖಚಿತ ಈ‌ ನಿರ್ಧಾರಕ್ಕೆ ಎರಡೂ ಪಕ್ಷದವರು ಬದ್ಧರಾಗಿದ್ದಾರೆ. ಸಮನ್ವಯ, ಸಮ್ಮಿಶ್ರ ಸರಕಾರ ಮಾಡುವಾಗ ನಮ್ಮ ಅನುಕೂಲಕ್ಕೆ ತಕ್ಕಂತೆ ಆಗುತ್ತೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ಅನುಕೂಲವೂ ಆಗಬಹುದು, ಆಗದೆಯೂ ಇರಬಹುದು ಎಂದರು.

ಇಂದು ದೇಶದಲ್ಲಿ ಇಂಥ ಪ್ರಯೋಗ ನಡೆಯಬೇಕಾದ ಅನಿವಾರ್ಯತೆ ಇದೆ. ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ತೀರ್ಮಾನವಾಗಿರುವ ಹಾಗೆ ಅನೇಕ ರಾಜ್ಯದಲ್ಲಿ ಹೊಂದಾಣಿಕೆ ಮಾಡುವಂತೆ ಸೂಚಿಸಿದ್ದಾರೆ.
ಹೊಂದಾಣಿಕೆ ಮಾಡಿಕೊಳ್ಳಬೇಕೆಂಬುದು ತಾತ್ವೀಕವಾಗಿ ತೀರ್ಮಾನವಾಗಿದ್ದರೂ ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.

ಕರ್ನಾಟಕ ಒಂದು:
ರಾಜ್ಯದಲ್ಲಿ ಆಡಳಿತ ನಡೆಸಿದ‌ ಸರಕಾರಗಳು ಉತ್ತರ ಕರ್ನಾಟಕಕ್ಕೆ ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ಬೇಧ ಭಾವ ಯಾರೂ ಮಾಡಿಲ್ಲ. ‌ಅಖಂಡ ಕರ್ನಾಟಕ ಒಂದಾಗಿರಬೇಕು. ನ್ಯೂನತೆಯ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕೆ ವಿನಃ ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ ಎಂದರು.