About Us Advertise with us Be a Reporter E-Paper

ವಿವಾಹ್

ದೀರ್ಘ ಪ್ರೇಮದ ಒಳಗುಟ್ಟು..!

• ಡಾ. ಗುರುರಾಜ ಕರ್ಜಗಿ

ನಾನೊಮ್ಮೆ ಪಾಶ್ಚಾತ್ಯ ದೇಶದಲ್ಲಿದ್ದಾಗ ಒಬ್ಬರು ‘ನಿಮಗೆ ಮದುವೆಯಾಗಿ ಎಷ್ಟು ವರ್ಷವಾಯಿತು?’ ಎಂದು ಕೇಳಿದರು.  ‘ಇಪ್ಪತ್ತೆಂಟು ವರ್ಷ’ ಎಂದೆ. ಆವರು, ‘ಒಬ್ಬಳೇ ಹೆಂಡತಿಯೊಂದಿಗೆ ಅಷ್ಟು ವರ್ಷ ಹೇಗಿದ್ದೀರಿ?’ ಎಂದು ಆಶ್ಚರ್ಯ ಪಟ್ಟರು. ಆಗ ನಾನೇ ‘ನನ್ನದೇನೂ ವಿಶೇಷವಲ್ಲ, ನನ್ನ ಅಜ್ಜ, ಅಜ್ಜಿ ದಂಪತಿಗಳಾಗಿ ಎಪ್ಪತ್ತು ವರ್ಷಗಳ ಕಾಲ ಇದ್ದರು’ ಎಂದಾಗ ಅವರಿಗದನ್ನು ನಂಬಲಾಗಲಿಲ್ಲ.

ನನ್ನಜ್ಜ, ಅಜ್ಜಿ ಚೆನ್ನಾಗಿಯೇ ಬದುಕಿದರು. ಅಂದರೆ ಅವರಲ್ಲಿ ಜಗಳ, ಮನಸ್ತಾಪ, ವಿಚಾರ ಭೇದ ಇರಲಿಲ್ಲ ವೆಂದಲ್ಲ. ಒಂದೊಂದು ಬಾರಿ ಜಗಳವಾಡುತ್ತಿದ್ದರೆ ಏಳೇಳು ಜನ್ಮದಲ್ಲಿ ವೈರಿಗಳಾಗಿದ್ದರೇನೋ ಎನಿಸುತಿತ್ತು. ಆದರೆ ಅದು ಕೆಲವು  ಮಾತ್ರ. ಊಟ ಮುಗಿದ ಮೇಲೆ ನನ್ನಜ್ಜ ವರ್ತಮಾನ ಪತ್ರಿಕೆ ಓದುವರು. ಆಗ ನಮ್ಮ ಅಜ್ಜಿ ಪಕ್ಕದಲ್ಲೇ ಕೂತು ಕೇಳಬೇಕು. ಆಕೆ ಅಲ್ಲಿಲ್ಲದಿದ್ದರೆ ಅವಳನ್ನು ಹುಡುಕಾಡಿ, ಕರೆದುಕೊಂಡು ಬಂದು ಕೂಡಿಸಿಕೊಳ್ಳುವರು. ಆಕೆಗೋ ಪೂರ್ತಿ ಕಿವುಡು. ಕೂಗಿದರೂ ಕೇಳಿಸುತ್ತಲಿರಲಿಲ್ಲ. ಆದರೆ ಅಜ್ಜ ಆಕೆಗೆ ಅಂದಿನ ರಾಜಕೀಯ, ದಿನದ ವಾರ್ತೆಗಳನ್ನೆಲ್ಲ ವರ್ಣಿಸಿ ಹೇಳುವರು. ಆಕೆ ನಡುನಡುವೆ ನಕ್ಕು, ‘ಹೌದೇ ಇಂದಿರಮ್ಮ ಹಾಗಂದಳೇ? ಮುರಾರಿ (ಮುರಾರ್ಜಿ) ಏನಂತಾರೆ ಅದಕ್ಕೆ?’ ಅವರು ಹೇಳುವುದೇನೋ, ಅವಳು ಕೇಳುವುದೇನೋ?  ಸುಮಾರು ಒಂದು ತಾಸು ತಪ್ಪದೇ ನಡೆಯುತ್ತಿತ್ತು.

ಒಂದು ದಿನ ನಾನು ಅಜ್ಜನನ್ನು ಕೇಳಿದೆ, ‘ಅಜ್ಜ, ನೀನು ಯಾಕೆ ಅಜ್ಜಿಗೆ ಪೇಪರ್ ಓದಿ ಹೇಳುತ್ತೀ? ಆಕೆಗೆ ಏನೂ ತಿಳಿಯುವುದೂ ಇಲ್ಲ, ಕೇಳಿಸುವುದೂ ಇಲ್ಲ.’ ಅಜ್ಜ ಹೇಳಿದ, ‘ನನಗೆ ಗೊತ್ತಿಲ್ಲೇನು ಆಕೆಗೆ ಕೇಳಿಸುವುದಿಲ್ಲ ವೆಂದು? ಗಂಡಾ ತನಗೋಸ್ಕರ ಒಂದು ತಾಸು ಕುಳಿತು ಏನೋ ವಿಚಾರ ಹೇಳುತ್ತಾರೆ ಎಂಬ ತೃಪ್ತಿ ಆಕೆಗೆ. ಅದಕ್ಕೆ ಹೀಗೆ ಮಾಡುತ್ತೇನೆ,’ ನಾನು ಅಜ್ಜಿಯನ್ನು ಕೇಳಿದೆ, ‘ಅಜ್ಜಿ, ನಿನಗೆ  ತಿಳಿಯುವುದಿಲ್ಲ, ಕೇಳಿಸು ವುದೂ ಇಲ್ಲ, ಯಾಕೆ ಕೂತು ಕೇಳುತ್ತೀ?’ ಆಕೆ ಹೇಳಿದಳು, ‘ಹುಚ್ಚಪ್ಪಾ, ನನಗೇನು ತಿಳಿದೀತೋ ರಾಜ ಕಾರಣ? ಯಾರಿಗೆ ಬೇಕೋ ಅದು? ನಾ ಯಾಕೆ ಸುಮ್ಮನೇ ಕೂತು ಕೇಳ್ತೀನಿ ಗೊತ್ತದ ಏನು? ನಾ ಕೇಳಿದರ ಅವರಿಗೊಂದು ಸಮಾಧಾನ, ಅವರಿಗೆ ಸಮಾಧಾನ ಆದರ ಅಷ್ಟೇ ಸಾಕು ನನಗ.’

ಎಷ್ಟು ಅದ್ಭುತ ಈ ಬದುಕುವ ರೀತಿ? ಗಂಡನ ತೃಪ್ತಿಗೆಂದು ಹೆಂಡತಿ, ಹೆಂಡತಿಯ ಪ್ರೀತಿಗಾಗಿ ಪ್ರಯತ್ನಿಸುವ ಗಂಡ, ಅದೂ ಮದುವೆಯಾಗಿ ಐವತ್ತು  ನಂತರ. ಅವರ ದೀರ್ಘ ದಾಂಪತ್ಯದ ಗುಟ್ಟು ಇದು. ಬದುಕಿನ ಸಂಬಂಧಗಳು ತುಂಬ ನಾಜೂಕು. ಅವುಗಳನ್ನು ಭದ್ರ ಮಾಡುವ ಒಂದೇ ಸಾಧನ ತ್ಯಾಗ. ತ್ಯಾಗ ಬಹು ದೊಡ್ಡದಾಗಬೇಕಿಲ್ಲ. ಸಣ್ಣ ಪುಟ್ಟ ಹೊಂದಾಣಿಕೆಗಳು, ಪರಸ್ಪರ ಆಸಕ್ತಿಗಳನ್ನು ಗಮನಿಸಿ ಅವುಗಳಿಗೆ ಪ್ರಾಮುಖ್ಯತೆ ನೀಡಿದಾಗ ಸಂತೃಪ್ತಿ ತಾನಾಗಿ ಮೂಡುತ್ತದೆ.

ನಾನೇ ಹೆಚ್ಚು ನಾನೇ ಸದಾ ಗೆಲ್ಲಬೇಕು ಎಂಬ ಅಹಂಕಾರದಿಂದ ಸಂಬಂದದ ಬೆಸುಗೆ ಬಿಚ್ಚಿ ಹೋಗುತ್ತದೆ. ಸುಖೀ ಸಂಸಾರದಲ್ಲಿ ಯಾರೂ ಗೆಲ್ಲುವುದಿಲ್ಲ, ಯಾರೂ ಸೋಲುವುದಿಲ್ಲ. ಮತ್ತೊಬ್ಬರ  ಮೆಚ್ಚಿಕೊಳ್ಳುತ್ತ ಅವರ ಕೊರತೆಗಳನ್ನು ಮರೆಯುತ್ತಾ ಸಾಗಿದಾಗ ನೂರು ವಸಂತಗಳು ಉರುಳಿದರೂ, ದಾಂಪತ್ಯ ಮದುವೆಯ ದಿನದ ಸುವಾಸನೆಯನ್ನು ಉಳಿಸಿಕೊಳ್ಳುತ್ತದೆ. ಬದುಕು ಸಾರ್ಥಕವಾಗುತ್ತದೆ.

(ಕರುಣಾಳು ಬಾ ಬೆಳಕೆ ಪುಸ್ತಕದಿಂದ ಆಯ್ದ ಭಾಗ)

Tags

Related Articles

Leave a Reply

Your email address will not be published. Required fields are marked *

Language
Close