About Us Advertise with us Be a Reporter E-Paper

ವಿವಾಹ್

ಪ್ರೀತಿಗೆ ರೂಪವಿಲ್ಲ, ಹೃದಯ ಮಾತ್ರ!

ಶ್ವೇತಾ. ಕೆ.ಪಿ.

ಪಾರಿಜಾತ. ಬಟ್ಟಲು ಕಂಗಳ ಚೆಲುವೆ. ಮಾತು ಆಡಿದರೆ ಎಲ್ಲಿ ಬಾಯಿ ನೋಯುತ್ತದೆ ಎಂಬಷ್ಟು ನಾಜೂಕು. ಉದ್ದನೆಯ ಕೇಶರಾಶಿ. ಅಪ್ಪಅಮ್ಮನ ಮುದ್ದಿನ ಒಬ್ಬಳೇ ಮಗಳು. ಯಾವುದಕ್ಕೂ ಕೊರತೆ ಬಾರದಂತೆ ರಾಜಕುಮಾರಿಯಂತೆ ಬೆಳೆಸಿದ್ದರು. ಅವಳು ರೂಪದಲ್ಲೂ, ಗುಣದಲ್ಲೂ ಅಪರಂಜಿ. ಇಪ್ಪತ್ತರ ಹರೆಯದ ಚೆಲುವೆಯ ಹಿಂದಿಂದೆ ಅವಳ ಕಾಲೇಜಿನ ಹುಡುಗರ ದಂಡೇ ದೌಡಾಯಿಸುತ್ತಿತ್ತು. ಅವಳ ಒಂದು ಮಾತಿಗಾಗಿ ಹಾತೊರೆಯುವ ಅದೆಷ್ಟೋ ಜೀವಗಳಿದ್ದವು. ಇವಳು ಮಾತ್ರ ತಾನಾಯಿತು, ತನ್ನ ಕಾಲೇಜಾಯಿತು, ಮನೆಯಾಯಿತು ಎಂಬಂತಿದ್ದಳು. ಹಾಗೋ ಹೀಗೋ ಒಬ್ಬ ಖಡಕ್ ಹುಡುಗ ಕಾಡಿ ಬೇಡಿ ಇವಳನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡ. ಭವಿಷ್ಯದ ಕನಸು ಕಾಣದವಳ ಕನಸಿನ ರಾಜಕುಮಾರನಾದ. ಅವಳ ಜೀವನದಲ್ಲಿ ಬೆರೆತುಹೋದ.

ಒಂದೆರಡು ವರುಷ ಪ್ರೀತಿಯ ಸುತ್ತಾಟ ಬಳಿಕ ಮನೆಯಲ್ಲಿ ಮದುವೆಗೂ ಒಪ್ಪುಗೆಯ ಮುದ್ರೆ ಸಿಕ್ಕಿತು. ಇನ್ನೊಂದು ತಿಂಗಳು ಮದುವೆ ಇರುವಾಗಲೇ ಹುಟ್ಟಿನಿಂದ ಅಲ್ಲಿಯವರೆಗೆ ಕಷ್ಟಗಳೇ ಸೋಕದ ಇವಳ ಬದುಕಿಗೆ ಬರಸಿಡಿಲು ಬಡಿದೇ ಬಿಟ್ಟಿತು. ಇವಳು ಹೋಗುತ್ತಿದ್ದ ಆಟೋರಿಕ್ಷಾ ಅಪಘಾತಕ್ಕೊಳಕ್ಕಾಗಿ ಕೈಕಾಲು ಕಳೆದುಕೊಂಡಳು. ಹಸಮಣೆಯನ್ನೇರಬೇಕಾದವಳು ಹಾಸಿಗೆ ಹಿಡಿದಳು. ನೋಡಲು ಅಷ್ಟು ಸುಂದರಿಯಾದರೂ, ಅಷ್ಟು ದಿನಗಳು ಪ್ರೀತಿ ತೇರನ್ನೇರಿ ಸುತ್ತಾಡಿದವನಿಂದಲೂ ತಿರಸ್ಕೃತಗೊಂಡಳು. ನೀನೇ ಜೀವ, ನೀನೇ ಸರ್ವಸ್ವ ಎಂದು ಹೇಳುತ್ತಿದ್ದವನು ನೀನ್ಯಾರೋ ನನಗೆ ಗೊತ್ತಿಲ್ಲಎಂದು ಹೇಳುವಷ್ಟು ಕಠೋರನಾದ. ದಿಕ್ಕುತೋಚದಂತಾದಳು ಪಾರಿಜಾತ. ಧೃತಿಗೆಡದಂತೆ ತಂದೆತಾಯಿ ಭರವಸೆಗಳ ಮಹಾಪೂರ ಹರಿಸಿದರೂ ಏನೂ ಪ್ರಯೋಜನವಾಗಲಿಲ್ಲ. ದಿನೇದಿನೆ ಬದುಕುವ ಆಸೆಯೇ ಕಮರಿ ಹೋಯಿತು. ಒಂದಲ್ಲಾ ಎರಡಲ್ಲಾ ಮೂರು ಆಘಾತಗಳಿಂದ ತಕ್ಷಣ ಹೊರಬರುವಷ್ಟು ಗಟ್ಟಿತನವೂ ಅವಳಲ್ಲಿರಲಿಲ್ಲ. ಮದುವೆ ಮಾಡಿಸಿದರೆ ಸರಿಹೋದಳೇನೋ ಎಂಬ ಭರವಸೆಯಲ್ಲಿ ಅವಳ ಅಪ್ಪಅಮ್ಮ ವಧುಪರೀಕ್ಷೆಯನ್ನು ಚಾಲುಗೊಳಿಸಿದರು. ಅವಳ ಫೋಟೋ ನೋಡಿ ಫಿದಾ ಆಗಿ ಸಾಲು ಸಾಲಾಗಿ ಬರುತ್ತಿದ್ದ ಹುಡುಗರ ದಂಡು ಹತ್ತಿರದಿಂದ ನೋಡಿ, ಕೈಕಾಲು ಇಲ್ಲವೆಂದು ಗಾಯದ ಮೇಲೆ ಬರೆ ಎಳೆದಂತೆ ಗೇಲಿ ಮಾಡಿ ಹೋಗುತ್ತಿದ್ದರು. ನೋವಿನಿಂದ ಮೇಲೇಳಬೇಕೆಂಬ ಹಪಾಹಪಿಯಲ್ಲಿದ್ದವಳಿಗೆ  ಗಂಡುಗಳ ಮಾತುಗಳು ಗುಂಡುಗಳಾಗಿ ಮನಸ್ಸಿಗೆ ನಾಟಿ ಘಾಸಿಗೊಳಿಸಿದವು. ವಯಸ್ಸು ಮೂವತ್ತೈದು ದಾಟಿತು. ಅಂದ ಚೆಂದ, ಕೈಕಾಲು ನೆಟ್ಟಗಿದ್ದರೆ ಮಾತ್ರ ಹುಡುಗರು ಬರುವುದು, ಇನ್ಯಾರು ನನ್ನ ಕೈ ಹಿಡಿಯುವರು, ಇನ್ನೆಂಥ ಮದುವೆ ಎಂದು ಮಗುಮ್ಮಾಗಿ ಹೋದಳು. ಇದ್ದವಳೊಬ್ಬ ಮಗಳಿಗೆ ಇಂಥ ದುಃಸ್ಥಿತಿ ಬಂತಲ್ಲಾ ಎಂದು ಅವಳ ಅಪ್ಪಅಮ್ಮ ಕಣ್ಣೀರಿನಲ್ಲಿ ಕೈತೊಳೆದರು.

ಮದುವೆ ಬಗ್ಗೆ ಮನಸ್ಸಿನಲ್ಲಿ ಆಸೆಗಳೇ ಬತ್ತಿ ಹೋದ ಹೊತ್ತಿನಲ್ಲಿ ಬಂದನೊಬ್ಬ ಕನಸಿನ ಬುತ್ತಿ ಹೊತ್ತು. ಕಾಲಿಲ್ಲದವಳಿಗೆ ಊರುಗೋಲು ಆಗಿ ನಿಲ್ಲುವೆ ಎಂದು ಪಟ್ಟು ಹಿಡಿದ. ಅವನ ಮನೆಯಲ್ಲಿ ನಕಾರದ ಛಾಯೆ ನುಸಿಳಿದ್ದರೂ ಅದನ್ನೆಲ್ಲಾ ಅಲ್ಲಗೆಳೆದು ಅವಳನ್ನೇ ವರಿಸುವೆ ಎಂದು ಮುಂದೆ ಬಂದ. ಆದರೆ, ಅದು ಅವಳ ಮೇಲಿನ ಕನಿಕರದಿಂದಲ್ಲ, ಪ್ರೀತಿಯಿಂದ ಎಂಬುದು ನಂಬಲೇಬೇಕಾದ ಸತ್ಯ. ಅವನ ಒಳ್ಳೆಯ ಮನಸ್ಸಿಗೆ ಪಾರಿಜಾತ ಮಾರುಹೋದಳು. ನಾನೂ ಮದುವೆಯಾಗಿ ಹೊಸ ಜೀವನ ಕಟ್ಟಿಕೊಳ್ಳಬಹುದೆಂದೆನಿಸಿ, ಅವನೊಂದಿಗೆ ಸಂಸಾರನೌಕೆಯನ್ನೇರಿದಳುಪತಿಪತ್ನಿ ಮಾದರಿ ದಂಪತಿಯಾಗಿ ಬದುಕು ಕಟ್ಟಿದರು.

ಹುಡುಗಿ ಕಪ್ಪು, ಮುಖದ ತುಂಬಾ ಮೊಡವೆಗಳು, ಒಂದು ರೌಂಡ್ ದಪ್ಪ, ಕಡ್ಡಿಯಂತಿದ್ದಾಳೆ, ಕುಳ್ಳಕ್ಕಿದ್ದಾಳೆ ಅನ್ನೋ ಕ್ಷುಲ್ಲಕ ಕಾರಣಗಳನ್ನೊಡ್ಡಿ ಹುಡುಗಿಯನ್ನು ತಿರಸ್ಕರಿಸುವ ಈಗಿನ ಕಾಲಘಟ್ಟದಲ್ಲಿ ನೊಂದ ಜೀವಕ್ಕೆ ಬೆಳಕಾಗಿ ಬಂದ ಸೂರಜ್‌ನಂಥವರು ಎಷ್ಟು ಮಂದಿ ಇದ್ದಾರು ಹೇಳಿ? ಕೇವಲ ಹುಡುಗರು ಮಾತ್ರ ಹೀಗೆ ಹೇಳುತ್ತಾರೆ ಎನ್ನುತ್ತಿಲ್ಲ. ಹುಡುಗಿಯರೂ ಅದೇ ಹಾದಿಯಲ್ಲಿದ್ದಾರೆ ಅನ್ನೋದು ಸತ್ಯ. ಆದರೆ, ಇಬ್ಬರಿಗೂ ಒಂದು ಮಾತು. ಮದುವೆಯಾಗಿ ಸಹಬಾಳ್ವೆಯಿಂದ ಜೀವನ ಮಾಡಲು ಅಂದ ಚೆಂದವಲ್ಲ, ಹೃದಯದ ಪ್ರೀತಿಯ ಒರತೆ ಬೇಕು. ಬೆಳ್ಳಗೆಯ ಹೊಳೆಯುವ ಚರ್ಮವೂ ವರ್ಷಗಳು ಉರುಳಿದ ಬಳಿಕ ಸುಕ್ಕು ಹಿಡಿಯದೇ ಇರದು. ಆದರೆ, ಪ್ರೀತಿಗೆ ಮುಪ್ಪಿಲ್ಲ. ಸಾವಿಲ್ಲ. ಇನ್ನು ಮುಂದೆ ಸಂಗಾತಿಯನ್ನು ಆಯ್ಕೆ ಮಾಡುವಾಗ ಅವರು ಬೆಳ್ಳಗಿದ್ದಾರೋ ಇಲ್ಲವೋ ಎಂಬುದನ್ನು ನೋಡದೇ ಅವರಿಂದ ನಮ್ಮ ಜೀವನ ಬೆಳ್ಳಗೆ ಹೊಳೆಯುವುದೋ ಇಲ್ಲವೋ ಎಂಬುದನ್ನು ಆಲೋಚಿಸಿ. ಬಾಹ್ಯ ಸೌಂದರ್ಯವಲ್ಲ, ಆಂತರಿಕ ಸೌಂದರ್ಯಕ್ಕೆ ಮಣೆ ಹಾಕಿ.

Tags

Related Articles

Leave a Reply

Your email address will not be published. Required fields are marked *

Language
Close