About Us Advertise with us Be a Reporter E-Paper

Breaking Newsದೇಶಪ್ರಚಲಿತ

ಅಂದಿನಿಂದ ಇಂದಿನವರೆಗೆ ಕರ್ನಾಟಕ-ಗೋವಾ ಮಹದಾಯಿ ಹೋರಾಟದ ಹಾದಿ

ದೆಹಲಿ: ಹಲವು ದಶಕಗಳಿಂದ ಉತ್ತರ ಕರ್ನಾಟಕದ ಜನರ ಬಯಕೆಯಾಗಿದ್ದ ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ನ್ಯಾಯಾಧೀಕರಣ ತೀರ್ಪು ಪ್ರಕಟಿಸಿದ್ದು, ಕರ್ನಾಟಕಕ್ಕೆೆ 13.5 ಟಿಎಂಸಿ ನೀಡಿದೆ. ನ್ಯಾಯಾಧಿಕರಣದ ತೀರ್ಪು ರಾಜ್ಯದ ಜನರಿಗೆ ಸಂಪೂರ್ಣ ಸಂತೋಷ ನೀಡದಿದ್ದರೂ ತಾತ್ಕಾಲಿಕ ತೃಪ್ತಿ ನೀಡಿದೆ. ಇದರೊಂದಿಗೆ ಮಹದಾಯಿ ವಿಚಾರಕ್ಕೆೆ ತಾರ್ಕಿಕ ಅಂತ್ಯ ಸಿಕ್ಕಿದೆ.

ಕರ್ನಾಟಕ ಮಹದಾಯಿ ನದಿಯಿಂದ ಒಟ್ಟು 36.5 ಟಿಎಂಸಿ ನೀರು ಕೇಳಿತ್ತು. ಆದರೆ ಕೊಟ್ಟಿದ್ದು ಮಾತ್ರ 13.5 ಟಿಎಂಸಿ. ಮಂಗಳವಾರ ಈ ವಿಚಾರವಾಗಿ ತೀರ್ಪು ಪ್ರಕಟಿಸಿದ ನ್ಯಾಯಾಧಿಕರಣ, ಕುಡಿಯುವ ನೀರಿಗೆ 5.5 ಟಿಎಂಸಿ ನೀಡಿದ್ದು ಅದರಲ್ಲಿ ಕಳಸಾ ಬಂಡೂರಿಗೆ 4 ಟಿಎಂಸಿ ಹಾಗೂ ಮಹದಾಯಿ ವ್ಯಾಪ್ತಿಗೆ 1.5 ಟಿಎಂಸಿ ನೀಡಿದೆ. ಕಳಸಾ-ಬಂಡೂರಿ ವ್ಯಾಪ್ತಿಯಲ್ಲಿ ಕಳಸಾಗೆ 1.12 ಟಿಎಂಸಿ, ಬಂಡೂರಿಗೆ 2.18 ಟಿಎಂಸಿ ನೀರು ನೀಡಿದೆ. ಇನ್ನು ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಗೆ 8 ಟಿಎಂಸಿ ನೀಡಿದೆ. ನ್ಯಾಯಾಧಿಕರಣದ ತೀರ್ಪಿಗೆ ಉಭಯ ರಾಜ್ಯಗಳಿಂದಲೂ ಅಪಸ್ವರ ಕೇಳಿ ಬಂದಿದ್ದು, ಗೋವಾ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳು ಬಂದಿವೆ.

ರಾಜ್ಯದ ಮನವಿಗಿಂತ ಕಡಿಮೆ ನೀರು ನೀಡಿರುವುದರಿಂದ ನ್ಯಾಯಾಧಿಕರಣದ ತೀರ್ಪು ಸಂಪೂರ್ಣವಾಗಿ ಸಂತೋಷ ತಂದಿಲ್ಲವಾದರೂ, ತಾತ್ಕಾಲಿಕ ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲಿ ಚರ್ಚೆ ಮಾಡಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ವಿಚಾರದ ಬಗ್ಗೆೆ ನಿರ್ಧಾರ ತೆಗೆದುಕೊಳ್ಳಲಾಗುವುದು.
ಮೋಹನ್ ಕಾತರಕಿ, ರಾಜ್ಯ ಸರ್ಕಾರದ ಪರ ಹಿರಿಯ ವಕೀಲ

ಮಹದಾಯಿ ಹೋರಾಟದ ಹಿನ್ನೆೆಲೆ?
ಮಹದಾಯಿ ನದಿ ನೀರು ವಿವಾದ ಸುಮಾರು ಐದು ದಶಕಗಳ ಹಿಂದಿನದ್ದಾಗಿದೆ. ದಶಕಗಳಿಂದ ರೈತರು ಹಾಗೂ ಮಹದಾಯಿಗೆ ಸಂಬಂಧಿಸಿದ ಸಂಘಟನೆಗಳು ಪ್ರತಿಭಟನೆ, ಹೋರಾಟಗಳನ್ನು ನಡೆಸುತ್ತಾ ಬಂದಿದ್ದು, ಈ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ನ್ಯಾಯಮಂಡಳಿಯ ತೀರ್ಪು ಪ್ರಕಟ ವಿಳಂಬವಾಗಿತ್ತು.

ಮಹದಾಯಿ ವಿವಾದದ ಪ್ರಮುಖ ಅಂಶಗಳು

 • ಗೋವಾದಲ್ಲಿ ಮಹದಾಯಿ ನದಿಯನ್ನು ಮಾಂಡೋವಿ ಎಂದು ಕರೆಯಲಾಗುತ್ತದೆ. ಗೋವಾ ರಾಜಧಾನಿ ಪಣಜಿ ಮಾಂಡೋವಿ ನದಿ ತೀರದಲ್ಲಿದೆ.
 •  ದೇಶದ ಅತ್ಯಂತ ಚಿಕ್ಕ ನದಿಗಳಲ್ಲಿ ಮಹದಾಯಿಯೂ ಒಂದಾಗಿದೆ.
 •  ಮಾಂಡೋವಿ ಮಳೆಯಾಶ್ರಿತ ನದಿಯಾಗಿದ್ದು, ಕರ್ನಾಟಕದ ಬೆಳಗಾವಿ ಜಿಲ್ಲೆಯ ಭೀಮಾಗಢದಲ್ಲಿ ಹುಟ್ಟುತ್ತದೆ.
 • ಮಹದಾಯಿ ನದಿ ಕರ್ನಾಟಕದಲ್ಲಿ 35 ಕಿ.ಮೀ. ಹಾಗೂ ಮಹಾರಾಷ್ಟ್ರದಲ್ಲಿ 52 ಕಿ.ಮೀ ನಷ್ಟು ದೂರ ಗೋವಾದಲ್ಲಿ ಹರಿದು ಬಳಿಕ ಅರಬ್ಬಿ ಸಮುದ್ರ ಸೇರುತ್ತದೆ.
 • ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಗಡಿ ಪ್ರದೇಶಗಳ ಜನರು ಕುಡಿಯುವ ನೀರಿಗಾಗಿ ಮಹದಾಯಿ ನದಿಯನ್ನ ಆಶ್ರಯಿಸಿದ್ದಾರೆ.
 • 1970ರಲ್ಲಿ ಪ್ರಸಿದ್ಧ ಜಲ ತಜ್ಞ ದಿವಂಗತ ಎಸ್.ಜಿ.ಬಾಳೇಕುಂದ್ರಿ ಮೊದಲ ಬಾರಿಗೆ ಮಹದಾಯಿ ನದಿ ತಿರುವು ಯೋಜನೆ ರೂಪಿಸಿದ್ದರು.
 • ಮಹದಾಯಿ ನದಿ ನೀರು ಮಲಪ್ರಭಾ ನದಿಗೆ ಹರಿಸುವುದು ಮತ್ತು  ನವಿಲುತೀರ್ಥ ಜಲಾಶಯದಲ್ಲಿ ನೀರು ಶೇಖರಿಸುವುದು ಈ ಯೋಜನೆಯ ಉದ್ದೇಶ.
 • ಮುಂಬೈ-ಕರ್ನಾಟಕ ಭಾಗದ ಕುಡಿಯುವ ನೀರಿಗಾಗಿ ಮಹದಾಯಿಯಿಂದ 7.56 ಟಿಎಂಸಿ ನೀರು ಬಿಡಬೇಕೆಂಬುದು ಕರ್ನಾಟಕದ ಬೇಡಿಕೆ.
 • ಮಹದಾಯಿ ನದಿಯ ಉಪನದಿಗಳಾದ ಕಳಸಾ ಮತ್ತು ಬಂಡೂರಿಗೆ ಬ್ಯಾರೇಜ್ ನಿರ್ಮಾಣ ಮಾಡುವುದು ಕರ್ನಾಟಕದ ಉದ್ದೇಶ.
 • ಈ ಯೋಜನೆಯಿಂದ 180 ಹಳ್ಳಿಗಳು ಮತ್ತು ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆೆ  ಕುಡಿಯುವ ನೀರಿನ ಪೂರೈಕೆ.
 • 2002ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕಳಸಾ-ಬಂಡೂರಿ ಯೋಜನೆ ಆರಂಭ.
 • ಆಗಿನ ಗೋವಾ ಸಿಎಂ ಮನೋಹರ್ ಪರಿಕ್ಕರ್ ನೇತೃತ್ವದ ಬಿಜೆಪಿ ಯೋಜನೆಗೆ ಆಕ್ಷೇಪ.
 • ಸುಪ್ರೀಂಕೋರ್ಟ್ ಮೆಟ್ಟಿಲೇರಿ ಪರಿಸರದ ಕಾರಣ ನೀಡಿ ಯೋಜನೆ ರದ್ದು ಮಾಡುವಂತೆ ಗೋವಾ ಸರಕಾರ ವಾದ.
 • 2010ರಲ್ಲಿ ಯುಪಿಎ-2 ಸರಕಾರದಿಂದ ಮಹದಾಯಿ ನದಿ ನೀರು ನ್ಯಾಯಾಧಿಕರಣ ಸ್ಥಾಪನೆ.
 • ಮಹದಾಯಿ ನದಿಯಿಂದ ರಾಜ್ಯಕ್ಕೆೆ 7.56 ಟಿಎಂಸಿ ನೀರು ಹರಿಸುವ ಕರ್ನಾಟಕದ ವಾದವನ್ನು ನ್ಯಾಯಾಧಿಕರಣ ಮಧ್ಯಂತರ ಆದೇಶದಲ್ಲಿ ನಿರಾಕರಿಸಿತ್ತು.
 • ಕರ್ನಾಟಕಕ್ಕೆೆ ಮಹದಾಯಿ ನದಿ ನೀರು ಹರಿಸಲು ಅವಕಾಶ ಕೊಟ್ಟರೆ 700 ಹೆಕ್ಟೇರ್‌ಗಳಷ್ಟು ಅರಣ್ಯ ಪ್ರದೇಶ ಮುಳುಗಡೆ ಎಂದು ಗೋವಾ ಸರಕಾರ ವಾದ.

ಈ ಹಿಂದೆ ನಡೆದ ವಿಚಾರಣೆಯಲ್ಲಿ ಕರ್ನಾಟಕ ಹಾಗೂ ಗೋವಾ ವಾದಗಳೇನು? 

ಗೋವಾದ ವಾದವೇನು?

 • ಕರ್ನಾಟಕ ಕಳಸಾ ಬಂಡೂರಿ ಯೋಜನೆಯನ್ನು ಕುಡಿಯುವ ನೀರಿಗಾಗಿ ಮಾಡುತ್ತಿಲ್ಲ. ನೀರಾವರಿಗೆಂದೇ ಮಾಡಲಾಗಿರುವ ಯೋಜನೆ.
 • ಮಲಪ್ರಭಾವು ಮಹದಾಯಿಗಿಂತ ಮೂರು ಪಟ್ಟು ದೊಡ್ಡ ನದಿ. ಆ ನದಿಯಲ್ಲಿ ಕರ್ನಾಟಕ ಕಟ್ಟಿರುವ ಅಣೆಕಟ್ಟಿನಲ್ಲಿ ನೀರು ಭರ್ತಿ ಆಗದ ಹಿನ್ನೆೆಲೆಯಲ್ಲಿ ಮಹದಾಯಿಯನ್ನು ತಿರುಗಿಸಲು ಕರ್ನಾಟಕ ಮುಂದಾಗಿದ್ದು ಇದಕ್ಕೆೆ ಅವಕಾಶ ನೀಡಬಾರದು.
 • ಹುಬ್ಬಳ್ಳಿ- ಧಾರವಾಡ ಮಹದಾಯಿಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ನದಿ ಕೊಳ್ಳದ ಹೊರಗಿನ ಪ್ರದೇಶಗಳಿಗೆ ಯಾವ ಕಾರಣಕ್ಕೂ ನೀರು ಹರಿಸಲು ಅವಕಾಶ ನೀಡಬಾರದು.
 • ಹುಬ್ಬಳ್ಳಿ-ಧಾರವಾಡದ ಜನಸಂಖ್ಯೆೆಯ ಏರಿಕೆಯ ಬಗ್ಗೆೆ ಕರ್ನಾಟಕ ಕೊಟ್ಟಿರುವ ಮಾಹಿತಿ ಉತ್ಪ್ರೇಕ್ಷೆಯಿಂದ ಕೂಡಿದೆ
  2044ರ ಹೊತ್ತಿಗೆ ಆ ಭಾಗದ ಜನಸಂಖ್ಯೆೆ ಅಷ್ಟೊಂದು ಪ್ರಮಾಣದಲ್ಲಿ ಏರಲು ಸಾಧ್ಯವೇ ಇಲ್ಲ.
 • ಕರ್ನಾಟಕವು ಮಹದಾಯಿ ಕೊಳ್ಳದಲ್ಲಿ ಲಭ್ಯವಿರುವ ನೀರಿನ ಮೇಲು ಅಂದಾಜು (199.6 ಟಿಎಂಸಿ) ಮಾಡಿದೆ
  ಅಷ್ಟೊಂದು ನೀರು ಮಹಾದಾಯಿಯಲ್ಲಿ ಇಲ್ಲವೇ ಇಲ್ಲ.
 • ಕರ್ನಾಟಕ ನೀರಿನ ತಿರುವು ಯೋಜನೆಗಳನ್ನು ಜಾರಿಗೊಳಿಸಿದರೆ ಪರಿಸರದ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ.
 • ಕರ್ನಾಟಕ ತನ್ನ ಬೇಡಿಕೆಯನ್ನು ಸಮರ್ಥಿಸಿಕೊಳ್ಳಲು ಆಧರಿಸಿರುವ ದಾಖಲೆಗಳಲ್ಲಿ ಲೋಪವಿದೆ. ಮಳೆಯ ಪ್ರಮಾಣ ಮತ್ತು ನೀರಿನ ಲಭ್ಯತೆಯ ಪ್ರಮಾಣ ಬಗ್ಗೆೆ ಸಲ್ಲಿಸಿರುವ ದಾಖಲೆ ನಂಬಲು ಸಾಧ್ಯವಿಲ್ಲ.
 • ಅನೇಕ ವರ್ಷಗಳ ಕಾಲ ಏಕ ಪ್ರಮಾಣದ ಮಳೆ ಮತ್ತು ನೀರಿನ ಅಳತೆಯನ್ನು ನಮೂದಿಸಲಾಗಿದೆ. ಇದು ಹೇಗೆ ಸಾಧ್ಯ? ಇದು ಬದಲಾಗಬೇಕಲ್ಲವೇ ?
 • ಕರ್ನಾಟಕ ತನ್ನ ಯೋಜನೆಗಳ ಪರಿಸರ ಅಧ್ಯಯನ ನಡೆಸಿಲ್ಲ. ಅಷ್ಟೇ ಅಲ್ಲದೆ ಕರ್ನಾಟಕವು ಮಹದಾಯಿ ಕೊಳ್ಳದ ನೀರಿನ ಲೆಕ್ಕ ಹಾಕಲು ಆಧರಿಸಿರುವ ಕೇಂದ್ರ ಜಲ ಮಂಡಳಿಯ ವರದಿಯಲ್ಲೇ ಲೋಪವಿದೆ.
 • ಕರ್ನಾಟಕದ ಲೆಕ್ಕಾಚಾರದ ಪ್ರಕಾರ ಮಹದಾಯಿ ಕೊಳ್ಳದಲ್ಲಿ ಬೀಳುವ ಮಳೆಯ ಪ್ರಮಾಣಕ್ಕಿಂತ ನದಿಯಲ್ಲಿ ಹೆಚ್ಚು ನೀರಿದೆ ಇದು ಹೇಗೆ ಸಾಧ್ಯ.
 • ಸಮುದ್ರಕ್ಕೆೆ ಸೇರುವ ನೀರು ವ್ಯರ್ಥ ಎಂಬ ಕರ್ನಾಟಕದ ನಿಲುವು ಆಧಾರ ರಹಿತವಾದದ್ದು. ನೀರು ಸಮುದ್ರ ಸೇರುವ ಪ್ರಕ್ರಿಯೆಗೆ ನೈಸರ್ಗಿಕ ಮಹತ್ವವಿದೆ.
 • ಗೋವಾದ ಮೀನುಗಾರಿಕೆ ಮತ್ತು ನೌಕಾಯನಗಳು ಸಮುದ್ರ ಸೇರುವ ನೀರನ್ನು ಅವಲಂಬಿಸಿಕೊಂಡಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಬೇಸಿಗೆಯಲ್ಲಿ ಸಮುದ್ರಕ್ಕೆೆ ಸೇರಲು ಮಹದಾಯಿಯಲ್ಲಿ ನೀರೇ ಇರುವುದಿಲ್ಲ.
 • ಗೋವಾಕ್ಕೆೆ ಅಗತ್ಯಗಳನ್ನು ಪೂರೈಸಲು 94 ಟಿಎಂಸಿ ನೀರು ಸಾಕು ಎಂಬುದು ಕರ್ನಾಟಕದ ವಾದ
 • ಗೋವಾದ ಹೊಸ ಮಾಸ್ಟರ್‌ ಪ್ಲಾನ್ ಪ್ರಕಾರ 144 ಟಿಎಂಸಿ ನೀರು ಬೇಕಿದೆ. ಈಗಾಗಲೇ ನ್ಯಾಾಯಾಧಿಕರಣದ ಗಮನಕ್ಕೆೆ ತಂದಿದ್ದೇವೆ. ಇನ್ನು ಜಲ ವಿದ್ಯುತ್, ಅರಣ್ಯ ಸಂರಕ್ಷಣೆ ಮುಂತಾದ ಅಂಶಗಳನ್ನು ಪರಿಗಣಿಸಿದ್ದೇ ಆದರೆ ಗೋವಾಕ್ಕೆೆ 222 ಟಿಎಂಸಿ ನೀರು ಬೇಕು.
 • ಕರ್ನಾಟಕ ಮತ್ತು ಕರ್ನಾಟಕದ ಪರ ತಜ್ಞ ಸಾಕ್ಷಿಗಳು ಇದೆಲ್ಲವನ್ನು ಪರಿಗಣಿಸಿ ಅಧ್ಯಯನ ನಡೆಸಿಲ್ಲ. ನಾವು ಮಳೆ ನೀರು ಕೊಯ್ಲು ಕಡ್ಡಾಯ ಮಾಡಿದ್ದೇವೆ. ಆದರೆ ಮಳೆ ಕೊಯ್ಲಿನಿಂದಾಗಿ ಸಂಗ್ರಹವಾಗುವ ನೀರು ಖಾಸಗಿ ಸ್ವತ್ತಾಗಿದ್ದು ರಾಜ್ಯದ ನದಿ, ಜಲಾಶಯಗಳಿಗೆ ಸೇರುವುದಿಲ್ಲ. ಆದ್ದರಿಂದ ಈ ನೀರಿನ ಪ್ರಮಾಣವನ್ನು ಲೆಕ್ಕ ಹಾಕಲು ರಾಜ್ಯಕ್ಕೆೆ ಸಾಧ್ಯವಾಗುವುದಿಲ್ಲ ಎಂದು ಗೋವಾ ಹೇಳಿದೆ.
 • 16 ಚೆಕ್ ಡ್ಯಾಂಗಳ ಮೂಲಕ ಈ ನೀರಿನ ಸಂಗ್ರಹಕ್ಕೆೆ ಪ್ರಯತ್ನ ನಡೆಸಲಾಗುತ್ತಿದೆ.
 • ಗೋವಾದಲ್ಲಿ 9 ನದಿಗಳಿವೆ. ಕರ್ನಾಟಕದಲ್ಲಿ 35 ನದಿಗಳಿವೆ, ಮಹದಾಯಿ ಗೋವಾದ ಜೀವನದಿಯಾಗಿದೆ. ಆದರೆ ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಸಾಕಷ್ಟು ನದಿಗಳಿವೆ.
 • ಕರ್ನಾಟಕ ತನ್ನ ನೀರಿನ ಬೇಡಿಕೆಯಲ್ಲಿ ಪರಿಸರ ಬಳಕೆಗೆ ನೀರನ್ನೆೆ ಹಂಚಿಲ್ಲ. ಪರಿಸರಕ್ಕೆೆ ನೀರು ನೀಡುವುದು ಕೇವಲ ಗೋವಾದ ಬಾಧ್ಯತೆಯಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರ ಕೂಡ ಪರಿಸರಕ್ಕೆೆಂದು ನೀರು ನೀಡಬೇಕು
  ಸಮುದ್ರಕ್ಕೆೆ ನೀರು ಸೇರುವುದು ನೈಸರ್ಗಿಕ ಪ್ರಕ್ರಿಯೆ.

ಕರ್ನಾಟಕದ ವಾದವೇನು?

 • ಹುಬ್ಬಳ್ಳಿ- ಧಾರವಾಡಕ್ಕೆೆ ಕುಡಿಯುವ ನೀರಿಗೆ ಸೂಕ್ತ ಪರ್ಯಾಯವಿಲ್ಲ. ಅವಳಿ ನಗರಕ್ಕೆೆ ಕುಡಿಯಲು 7.56 ಟಿಎಂಸಿ ನೀರು ಮಹದಾಯಿ ಬೇಕು
 • ಕೇಂದ್ರ ಜಲ ಆಯೋಗದ ಪ್ರಕಾರ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಬೇಕು.
 • ಮಹದಾಯಿಯ ನೀರು ಹು-ಧಾಕ್ಕೆೆ ಕುಡಿಯಲು ಸಿಕ್ಕರೆ ಮಲಪ್ರಭದ ಮೇಲಿನ ಒತ್ತಡ ಕಡಿಮೆ ಆಗಿ ಅದರ ನೀರನ್ನು ನೀರಾವರಿಗೆ ಬಳಸಬಹುದು.
 • ಗೋವಾ 113 ಟಿಎಂಸಿ ನೀರು ಮಹದಾಯಿಯಲ್ಲಿದೆ ಎನ್ನುತ್ತದೆ. ಆದರೆ 173 ಟಿಎಂಸಿ ಮಹದಾಯಿ ನೀರಿಗೆ ಬೇಡಿಕೆ ಸಲ್ಲಿಸುತ್ತದೆ.
 • ಗೋವಾ ಮಂಡಿಸಿರುವ ವಾದ ಸರಿಯಲ್ಲ ಮತ್ತು ತಪ್ಪು ದಾರಿಗೆಳೆಯುತ್ತಿದೆ.
 • ಅಂತಾರಾಜ್ಯ ನದಿಗಳಲ್ಲಿ ನೀರಿನ ಬಳಕೆಗೆ ಸಂಬಂಧಿಸಿದಂತೆ ಯಾವುದೇ ರಾಜ್ಯವು ಇನ್ನೊಂದು ರಾಜ್ಯದ ಅನುಮತಿ ಪಡೆಯಬೇಕು ಎಂಬುದಿಲ್ಲ.
 • ಒಂದು ರಾಜ್ಯದ ಯೋಜನೆಯಿಂದ ಮತ್ತೊಂದು ರಾಜ್ಯಕ್ಕೆ ಹಾನಿ ಆಗುತ್ತದೆ ಎಂದರೆ ಮಾತ್ರ ದೂರು ಸಲ್ಲಿಸಬಹುದು.

 

Tags

Related Articles

Leave a Reply

Your email address will not be published. Required fields are marked *

Language
Close