About Us Advertise with us Be a Reporter E-Paper

ಗುರು

ಸಂಪತ್ತಿನ ಅಧಿದೇವತೆ ಕೊಲ್ಹಾಪುರದ ಮಹಾಲಕ್ಷ್ಮಿ

ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು

ಸಂಪತ್ತು, ಐಶ್ವರ್ಯ, ಆರೋಗ್ಯ, ಆಯಸ್ಸು, ಅಧಿದೇವತೆಯೆನಿಸಿದ ಮಹಾಲಕ್ಷ್ಮಿ ದೇವಿಯ ಮಂದಿರ, ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದಲ್ಲಿದೆ. ಪುಣೆಯಿಂದ ಸುಮಾರು 250ಕಿಮೀ ದೂರದಲ್ಲಿ, ಪಂಚಗಂಗಾ ನದಿಯ ತಟದ ಮೇಲಿರುವ ಈ ದೇವಾಲಯ ದಕ್ಷಿಣ ಕಾಶಿ, ಅಂಬಾಬಾಯಿ ದೇವಸ್ಥಾನ ಎಂಬ ಹೆಸರುಗಳಿಂದಲೂ ಗುರುತಿಸಲ್ಪಡುತ್ತದೆ.

ಪೌರಾಣಿಕ ಹಿನ್ನೆಲೆ

ಲಕ್ಷ್ಮಿ ಹಾಗೂ ವಿಷ್ಣು ಇಲ್ಲಿ ಜತೆಯಾಗಿ ನೆಲೆಸಿರುವುದರಿಂದ, ಈ ದೇವಾಲಯಕ್ಕೆ ಅವಿಮುಕ್ತೇಶ್ವರ ದೇವಸ್ಥಾನವೆಂದೂ ಹೆಸರಿದೆ. ಪ್ರಾಚೀನ ಕಾಲದಲ್ಲಿ, ಕೊಲ್ಹಾಸುರನೆಂಬ ದೈತ್ಯ, ರಕ್ಷಾಲಯದ ಅರಸನಾದ ಕಾಶಿ ಎಂಬ ದೈತ್ಯನನ್ನು ಸಂಹರಿಸಿ, ತಾನೇ ರಾಜನಾಗಿ ಕದಂಬ ಹಾಗೂ ನಾಲ್ಕು ಮಕ್ಕಳೊಡನೆ ಇಲ್ಲಿ ಜೀವಿಸಲಾರಂಬಿಸಿದನಂತೆ. ಕೊಲ್ಹಾಸುರ ಅಸುರನು ಋಷಿಮುನಿಗಳಿಗೆ, ದೇವತೆಗಳಿಗೆ ನೀಡುತ್ತಿದ್ದ ಉಪಟಳ ತಡೆಯಲಾರದೆ ಅವರು ದೇವಿಗೆ ಮೊರೆಯಿಟ್ಟಾಗ, ಭುವಿಗೆ ಆಗಮಿಸಿದ ಮಹಾಲಕ್ಷ್ಮಿ ದೇವಿ, ಕೊಲ್ಹಾಸುರ ಅಸುರನನ್ನು ಸಂಹರಿಸಿದಳಂತೆ. ದೇವಿಯು ಅಸುರನನ್ನು ವಧಿಸಿದ ಸ್ಥಳವೇ ತೀರ್ಥಕ್ಷೇತ್ರವೆನಿಸಿ ಕೊಲ್ಹಾಪುರವೆಂಬ ಹೆಸರು ಬಂತು. ಅಂದಿನಿಂದ ಮಹಾಲಕ್ಷ್ಮಿ, ಅಂಬಾಬಾಯಿಯೆನಿಸಿ ಇಲ್ಲಿಯೇ ನೆಲೆಸಿದ್ದಾಳೆ ಎಂಬ ಪೌರಾಣಿಕ ಹಿನ್ನೆಲೆ ಇದೆ.

19 ತುಪಾಕಿಗಳ ರಾಜ್ಯ ಕೊಲ್ಹಾಪುರ

ಹಿಂದಿನ ದಿನಗಳಲ್ಲಿ, ಕೊಲ್ಹಾಪುರ ಸಂಸ್ಥಾನದ ಭಾಗವಾಗಿದ್ದ ಕರವೀರ ಎಂದು ಕರೆಯಲಾಗುತ್ತಿತ್ತು. 7ನೆಯ ಶತಮಾನದಲ್ಲಿ, ಚಾಲುಕ್ಯರ ಅರಸನಾದ ಕರ್ಣದೇವನಿಂದ ಈ ದೇವಾಲಯ ನಿರ್ಮಾಣವಾಯಿತು. ಮುಂದಿನ ದಿನಗಳಲ್ಲಿ, ಅಧಿಕಾರ ವಹಿಸಿಕೊಂಡ ಶಿಲಾಹಾರ ಯಾದವರು ಈ ದೇವಾಲಯವನ್ನು ಅಭಿವೃದ್ಧಿ ಪಡಿಸಿರುವದಾಗಿ ಐತಿಹಾಸಿಕ ಹಿನ್ನೆಲೆ ಇದೆ. ಮುಂದೆ, ಭೋಸ್ಲೆ ಸಾಮ್ರಾಜ್ಯದ ಆಳ್ವಿಕೆಯಲ್ಲಿ, ಕೊಲ್ಹಾಪುರವು 19 ತುಪಾಕಿಗಳ ರಾಜ್ಯವೆಂದು ಹೆಸರಾಗಿತ್ತೆನ್ನಲಾಗಿದೆ.

ಮಹಾರಾಷ್ಟ್ರದ ಪ್ರಮುಖ ನಗರವೆನಿಸಿದ ಕೊಲ್ಹಾಪುರ, ಮಹಾಲಕ್ಷ್ಮಿಯನ್ನು ಅದಿಷ್ಠಾನ ದೇವತೆಯನ್ನಾಗಿ ಹೊಂದಿರುವ ಶಕ್ತಿಪೀಠವೂ ಹೌದು. ಶಿಲುಬೆಯಾಕಾರದಲ್ಲಿರುವ ಮಹಾಲಕ್ಷ್ಮಿ ಮಂದಿರದ ಕೆತ್ತನೆ, ಚಾಲುಕ್ಯ ಅರಸರ ಹೋಲುತ್ತದೆ. ಈ ದೇವಸ್ಥಾನದಲ್ಲಿರುವ ಮಹಾಲಕ್ಷ್ಮಿಯ ಮೂರ್ತಿ ಸ್ವಯಂಭೂ ವಿಗ್ರಹವೆನಿಸಿದೆ. ಕಪ್ಪುಶಿಲೆಯಲ್ಲಿ ನಿರ್ಮಿತ ಮೂರು ಅಡಿ ಎತ್ತರದ ಪುರಾತನ ಚತುರ್ಭುಜ ಮೂರ್ತಿಗೆ ಯಾವ ಬದಲಾವಣೆಯ ಅಳವಡಿಕೆಯನ್ನೂ ಮಾಡದೆ, ಮೂಲ ವಿಗ್ರಹದ ಸ್ವರೂಪವನ್ನು ರಕ್ಷಿಸಿಕೊಂಡು ಬರಲಾಗಿದೆ. ಶಿಲಾವೇದಿಕೆಯ ಮೇಲೆ, ಸುಮಾರು 40ಕಿಗ್ರಾಂ ತೂಕದ ರತ್ನದ ಹರಳುಗಳಿಂದ ನಿರ್ಮಿತ, ಗಧಾದಾರಿಯಾಗಿ ವಿರಾಜಮಾನಳಾದ ಮಹಾಲಕ್ಷ್ಮಿಯ ವಿಗ್ರಹ, ಪಶ್ಚಿಮಾಭಿಮುಖವಾಗಿದೆ. ಮಹಾಲಕ್ಷ್ಮಿಯ ಗರ್ಭಗುಡಿಗೆ ವೈಭವೋಪೇತವಾದ ಚಿನ್ನದ ತೋರಣವಿದೆ. ಪಶ್ಚಿಮ ದಿಕ್ಕಿನಲ್ಲಿ ಸ್ಥಾಪಿತ ದೇವಾಲಯದ ಮಹಾದ್ವಾರದ ಮೂಲಕ ದೇವಾಲಯದ ಪ್ರವೇಶಿಸುತ್ತಿದ್ದಂತೆಯೇ ದೀಪಸ್ಥಂಭಗಳು, ಸಾಲಂಕ್ರತ ಕಮಾನುಗಳು ಹಾಗೂ ಮರದ ಕೆತ್ತನೆಯುಳ್ಳ ಗರುಡಗಂಭಗಳನ್ನು ಕಾಣಬಹುದಾಗಿದೆ. ಗರುಡಗಂಭದಲ್ಲಿ ದೇವಿಯ ಕಡೆಗೆ ಮುಖ ಮಾಡಿರುವ ಗರುಡನ ವಿಗ್ರಹವಿದೆ. ಗರ್ಭಗುಡಿಯ ಗೋಡೆಯ ಮೇಲೆ, ಶ್ರೀ ಚಕ್ರದ ಕೆತ್ತನೆಯನ್ನು ಕಾಣಬಹುದಾಗಿದೆ. ಮಹಾಲಕ್ಷ್ಮಿಯ ವಿಗ್ರಹದ ಹಿಂಬಾಗದಲ್ಲಿ ಮಾತೆಯ ವಾಹನವೆನಿಸಿದ ಶಿಲಾನಿರ್ಮಿತ ಸಿಂಹದ ವಿಗ್ರಹವಿದೆ. ದೇವಿಯ ಕಿರೀಟದ ಮೇಲೆ, ಶಿವಲಿಂಗ ಮತ್ತು ಹಾವಿನ ಹೆಡೆಗಳನ್ನು ಕಾಣಬಹುದು. ಎತ್ತರ ಹಾಗೂ ಸುಂದರ ಗೋಪುರಗಳಿಂದಾವೃತ ಮಂದಿರದ ಹೊರ ಆವರಣದಲ್ಲಿ, ನವಗ್ರಹ, ತುಳಜಾ ಭವಾನಿ, ಹಾಗೂ ಮಹಿಷಾಸುರ ಮರ್ದಿನಿ ದೇವಾಲಯಗಳಿವೆ.

ಪೂಜಾ ಕೈಂಕರ್ಯಗಳು

ಪ್ರತಿ ಶುಕ್ರವಾರ ಇಲ್ಲಿ, ವೈಭವದಿಂದ ಮಹಾಲಕ್ಷ್ಮಿಯ ಪಲ್ಲಕ್ಕಿ ಉತ್ಸವವನ್ನು ಜರುಗಿಸಲಾಗುತ್ತದೆ. ಸೂರ್ಯರಶ್ಮಿ, ಈ ದೇವಿಯ ವಿಗ್ರಹವನ್ನು ಸ್ಪರ್ಶಿಸಿ, ದೇವಿಯ ವಿಗ್ರಹಕ್ಕೆ ಮೆರುಗು ನೀಡುತ್ತವೆ. ದೇಶ ವಿದೇಶಗಳಿಂದ ಮಹಾಲಕ್ಷ್ಮಿಯ ದರ್ಶನ ಕೋರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನವರಾತ್ರಿಯ ಸಮಯದಲ್ಲಿ ಆಗಮಿಸುತ್ತಾರೆ. ಭಕ್ತರು ಆಗಮಿಸುವ, ಚೈತ್ರ ಪೂರ್ಣಿಮೆ ಹಾಗೂ ನವರಾತ್ರಿ ಸಮಯದಲ್ಲಿ, ವಿಶೇಷ ಪೂಜೆಅನುಷ್ಟಾನಗಳನ್ನು ನಡೆಸಲಾಗುತ್ತದೆ. ಬೆಳಗಿನ ಸಮಯ ಕಾಕಡರಾತಿಯಿಂದ ಪೂಜಾ ವಿಧಾನಗಳು ಅಲಂಕಾರ, ಆಭರಣ ಸಮರ್ಪಣೆಯಾಗಿ, ಸುಮಾರು 12.30ಗಂಟೆಗೆ ಮಂಗಳಾರತಿಯಾಗುತ್ತದೆ. ಸಾಯಂಕಾಲ ಏಳು ಗಂಟೆಗೆ ಭೋಗಾರತಿ ಪೂಜೆ ನೆರವೇರಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಸಂಗೀತೋತ್ಸವವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮಹಾಲಕ್ಷ್ಮಿಯ ಸನ್ನಿಧಿಯಲ್ಲಿ ದೇಶದ ಪ್ರಖ್ಯಾತ ಸಂಗೀತಗಗಾರರ ಗಾನಸುಧೆ ಕೇಳುಗರಿಗೆ ರಸದೌತಣವೇ ಸರಿ. ನವರಾತ್ರಿ ಉತ್ಸವದ ಸಮಯ, ಮಹಾಲಕ್ಷ್ಮಿಯ ಉತ್ಸವ ಮೂರ್ತಿ, ಮೆರವಣಿಗೆಯಲ್ಲಿ ಕೊಲ್ಹಾಸುರನನ್ನು ಸಂಹರಿಸಲು ದೇವಿಗೆ ಸಹಾಯ ಮಾಡಿದ ಟೀಮ್ಲಾ ಬಾಯಿ ದೇವಸ್ಥಾನದವರೆಗೆ ಸಾಗಿ ಅಲ್ಲಿಯೇ ಇಬ್ಬರಿಗೂ ಪೂಜೆ ಸಲ್ಲಿಸಲಾಗುತ್ತದೆ.

ಹೋಗೋದು ಹೇಗೇ?

ತಿರುಪತಿಯ ಬಾಲಾಜಿಯ ಮಾಡಿ. ಕೊಲ್ಹಾಪುರದ ಲಕ್ಷ್ಮಿಯ ದರ್ಶನ ಮಾಡದಿದ್ದರೆ, ತಿರುಪತಿಯ ಯಾತ್ರೆಅಪೂರ್ಣ ಎಂಬ ನಂಬಿಕೆಯಿದೆ. ಕರ್ನಾಟಕದ ಬೆಳಗಾವಿ ಮಹಾನಗರದಿಂದ ಕೊಲ್ಹಾಪುರ 110ಕಿಮೀ ದೂರದಲ್ಲಿದೆ. ಮಹಾಲಕ್ಷ್ಮಿ ಮಂದಿರದಿಂದ ಕೊಲ್ಹಾಪುರ ಛತ್ರಪತಿ ಶಾಹು ಮಹಾರಾಜ ರೈಲು ನಿಲ್ದಾಣ ಸುಮಾರು 4ಕಿಮೀ ದೂರದಲ್ಲಿದೆ. ದೇಶದ ಎಲ್ಲಾ ಭಾಗಗಳಿಂದಲೂ ಕೊಲ್ಹಾಪುರಕ್ಕೆ ರೈಲು ವ್ಯವಸ್ಥೆ ಇದೆ. ಹತ್ತಿರದ ವಿಮಾನ ನಿಲ್ದಾಣವಾದ ಉಜಲೈವಾಡಿ ಸುಮಾರು 13ಕಿಮೀ ದೂರದಲ್ಲಿದೆ.

Tags

Related Articles

Leave a Reply

Your email address will not be published. Required fields are marked *

Language
Close