About Us Advertise with us Be a Reporter E-Paper

ಗುರು

ಭಯವೆಂಬ ಮರ್ಕಟದ ಬೆಂಬೆತ್ತಿ…

- ಸಚಿನ್‌ಕೃಷ್ಣ

ನೀವು ನೋಡಿರಬಹುದು. ಕೆಲವೊಮ್ಮೆ ಅನುಭವಿಸಿರಲೂಬಹುದು ಥಿಯೇಟರ್‌ನಲ್ಲಿ ಭಯಂಕರ ಭೂತದ ಸಿನಿಮಾ ವೀಕ್ಷಿಸುತ್ತಿರುವಾಗ ಪರದೆಯ ಮೇಲೆ ಆ ಭೂತದ ನೆರಳು ಕಾಣಿಸಿದರೆ ಸಾಕು ಜೋರಾಗಿ ಬೆಚ್ಚಿಬೀಳುವ ಅನುಭವವಾಗುತ್ತದೆ. ಈ ಭಯವೆಂಬುದು ಹಾಗೆ. ಅದು ಕಿರಿಯರಿಂದ ಹಿರಿಯರನ್ನು ಬಿಡದೆ ಭಯ ಮರ್ಕಟದಂತೆ ಕಾಡುತ್ತಲೇ ಇರುತ್ತದೆ.

ಸಾಮಾನ್ಯವಾಗಿ ಅಮ್ಮ ಮಗುವಿಗೆ ಊಟ ಮಾಡಿಸುವಾಗ, ಮಗು ಊಟ ಮಾಡಲು ಅಣಕವಾಡಿದರೆ ಅದಾವುದೋ ಕತ್ತಲ ಸಂದಿಯನ್ನು ತೋರಿಸಿ ‘ಅಲ್ನೋಡು ಗುಮ್ಮ.. ಕರಿತೀನಿ ನೋಡು.. ಬಂದ್ರೆ ಅದು ನಿನ್ನ ತಿಂದ್ಬಿಡುತ್ತೇ’ ಎನ್ನುತ್ತಲೇ ಮಗುವಿಗೆ ಊಟ ಮಾಡಿಸುವ ಜತೆ ಮಗುವಿನ ಮನಸ್ಸಿನಲ್ಲಿ ಭಯದ ಹುಟ್ಟಿಗೆ ನಾಂದಿ ಹಾಡಿದ್ದು ಅಲ್ಲಿಂದಲೇ ಇರಬೇಕು. ಬರುಬರುತ್ತಾ ಮಗು ಕಂಡೊಡನೆ ಭೂತದ ಕಲ್ಪನೆಯಲ್ಲಿ ಬೆಳೆದು ದೊಡ್ಡದಾಗುತ್ತಾ, ಕಡೆಗೊಮ್ಮೆ ಕತ್ತಲೆ ಅಂದ್ರೆ ಭೂತ ಅನ್ನೋ ನಂಬಿಕೆಯನ್ನು ತನ್ನ ಮನಸ್ಸಿನಲ್ಲಿ ಅಚ್ಚೊತ್ತಿಕೊಂಡು ಬಿಟ್ಟಿರುತ್ತದೆ.

ಇನ್ನು ಪರೀಕ್ಷೆ ಬರೆಯೋ ಸಂದರ್ಭದಲ್ಲಿ ಓದಿದ್ದೆಲ್ಲ ಎಲ್ಲಿ ಮರೆತು ಹೋಗುವುದೋ ಏನೋ! ಎಂದು ಭಯಪಡುವ ವಿದ್ಯಾರ್ಥಿ ಜೀವನವನ್ನ ನಾವೆಲ್ಲರೂ ಸವಿದು ಬಂದಿಲ್ಲವೇ. ಚೆನ್ನಾಗಿ ಓದಿದ್ದರೂ ಪರೀಕ್ಷಾ ಸಮಯದಲ್ಲಿ ಮುಖ್ಯ ಸಂಗತಿಗಳನ್ನು ಮರೆತು ಪರೀಕ್ಷಾ ಭವನದಿಂದ ಬಂದಮೇಲೆ ‘ಅಯ್ಯೋ ಗೊತ್ತಿತ್ತು. ಮರೆತು ಬಿಟ್ಟೆನಲ್ಲ.’ ಎಂದು ಕೈ ಕೈ ಹಿಸುಕಿಕೊಂಡು ಇದ್ದದ್ದೆ. ಈ ಪರೀಕ್ಷೆ ಭಯದಿಂದ ವಿದ್ಯಾರ್ಥಿಗಳು ಸಂಕಟಪಡುತ್ತಾರೆ. ಈ ಭಯ ಅವರನ್ನು ಹೇಗೆ ತಪ್ಪು ದಾರಿಯಲ್ಲಿ ನಡೆಯಲು ಪ್ರೇರಣೆಯನ್ನು ನೀಡುತ್ತದೆ ಎಂಬುದನ್ನು ವಿವರಿಸಬೇಕಿಲ್ಲ.

ವೈಯಕ್ತಿಕ ನೆಲೆಯಲ್ಲಿ ಎಲ್ಲರನ್ನು ಕಾಡುತ್ತಿರುವ ಭೀತಿ ಬಹುಮುಖದ್ದು. ನಾನಾ ತೆರನಾದ ರೋಗಗಳ ಭಯ, ವಿಷ ಜಂತುಗಳ ಭಯ, ಭೂತ, ಪ್ರೇತ, ಪಿಶಾಚಿಗಳ ಭಯ, ಮಡಿ ಮೈಲಿಗೆಯ ಭಯ, ಮಂತ್ರ ಮಾಟಗಳ ಭಯ, ಬಡತನ ದೈನ್ಯಾವಸ್ಥೆಗಳ ಭಯ, ಪ್ರೀತಿ ಪಾತ್ರ ವ್ಯಕ್ತಿಗಳ ಅಗಲಿಕೆಯ ಭಯ, ವ್ಯಾಪಾರ ಸೋಲಿನ ಭಯ, ರಹಸ್ಯವಾಗಿ ಮಾಡಿದ ತಪ್ಪು ಇತರರಿಗೆ ತಿಳಿದೀತೆಂಬ ಭಯ, ನಂಬಿದವರು ಮೋಸ ಮಾಡಿದರೆ ಎಂಬ ಭಯ, ವಿರೋಧಿಗಳಿಗೆ ಸೇಡಿನ ಭಯ, ಸಾಲಗಾರನಾಗಿ ಬಿಡುವ ಭಯ, ಸಾಲದ ಭಾರದಿಂದ ಪಾರಾಗಲು ಕಳ್ಳಕಾಕರ ಭಯ, ಸಾವಿನ ಭಯ, ನರಕದ ಭಯ, ಇತ್ತೀಚಿಗೆ ರಾಜಕಾರಣಿಗಳದ್ದೂ ಭಯವೇ. ಭಯದ ಭಯಂಕರ ಪಾಶ ಪ್ರತಿಯೊಬ್ಬರನ್ನು ಹೇಗೆ ಕಂಗೆಡಿಸುತ್ತದೆ ಎಂಬುದನ್ನು ವಿವರಿಸುವ ಅಗತ್ಯವೇನಿಲ್ಲ. ಯಾಕಂದ್ರೆ ಎಲ್ಲರೂ ಒಂದಲ್ಲ ಒಂದು ಭಯದಲ್ಲಿ ಮಿಂದವರೇ ಅಲ್ವೇ..

ರೂಢ ಮೂಲವಾದ ಭಯದಿಂದ ಮನುಷ್ಯರಲ್ಲಿ ವಿಪರೀತ ವರ್ತನೆಗಳುಂಟಾಗುತ್ತವೆ. ಭಯಗ್ರಸ್ಥರಾದ ಜನ ಮಾಡದ ಪಾತಕಗಳಿಲ್ಲ. ವರ್ಷ ಒಂದರಲ್ಲಿ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಸತ್ತರೆ ಮನುಷ್ಯನ ಭಯಕ್ಕೆ ಒಂದು ಲಕ್ಷ ಹಾವುಗಳು ಬಲಿಯಾಗುವುವೆಂಬುದು ತಜ್ಞರ ಅಂಬೋಣ. ನಾಗರೀಕರೆನಿಸಿಕೊಂಡ ಜನರು ಭಯದಿಂದ ಅತ್ಯಂತ ಹೀನ ಕೃತ್ಯಗಳನ್ನು ಎಸಗುತ್ತಾರೆ. ಕೊಲೆ ಸುಲಿಗೆ ಮಾಡುತ್ತಾರೆ. ಯುದ್ದದ ಕಿಡಿಯನ್ನೂ ಹೊತ್ತಿಸುತ್ತಾರೆ. ಇವೆಲ್ಲವುಗಳ ಹಿನ್ನೆಲೆಯಲ್ಲಿ ಮನುಷ್ಯರ ಮನಸ್ಸಿನ ಆಳದಲ್ಲಿ ಹುದುಗಿದ್ದು ಕೆಲಸ ಮಾಡುವ ಸೂಕ್ಷ್ಮಾತಿಸೂಕ್ಷ್ಮ ಕಾರಣವೇ ಭಯ. ಅಮೇರಿಕಾ ಎಂದರೆ ಪ್ರಗತಿಶೀಲ ಭೀತಿ, ಅರಬ್ಬರಿಗೆ ಯಹೂದಿಗಳ ಭೀತಿ, ಯಹೂದಿಗಳಿಗೆ ಅರಬ್ಬರ ಭೀತಿ, ಬಿಳಿ ಜನರಿಗೆ ಕರಿ ಜನರ ಭೀತಿ, ಕರಿ ಜನರಿಗೆ ಬಿಳಿ ಜನರ ಭೀತಿಯಲ್ಲಿಯೇ ಬದುಕುತ್ತಿರುವುದುಂಟು. ಭಯವನ್ನೇ ಬಂಡವಾಳವನ್ನಾಗಿ ಮಾಡಿ ಹೆಚ್ಚಿನ ಲಾಭ ಗಳಿಸುತ್ತಿರುವುದು ಜಗಜ್ಜಾಹೀರು.

ನಿಯಂತ್ರಣ ಹೇಗೆ?
ಭಯವೆಂದರೆ ಹಾಗೇ ಹೀಗೆ ಅಂತೆಲ್ಲ ಹೇಳಿದ ಮೇಲೆ ಅದಕ್ಕೆ ತಕ್ಕ ಪರಿಹಾರವಿಲ್ಲವೇ ಎಂಬುದು ಕೂಡ ಮಿಲಿಯನ್ ಡಾಲರ್ ಪ್ರಶ್ನೆ ಅಲ್ವೇ. ಭಯ ಹುಟ್ಟಿಗೆ ಕಾರಣವಾದ ನಮ್ಮಿಂದಲೇ ಅದರ ನಿಯಂತ್ರಣ, ನಾಶಕ್ಕೂ ಅದಕ್ಕನುಗುಣವಾಗಿ ಸ್ವಾಮಿ ವಿವೇಕಾನಂದರ ಜೀವನದ ಒಂದು ಘಟನೆ ಇಲ್ಲಿ ಸೂಕ್ತವೆನಿಸುತ್ತದೆ.

ಸ್ವಾಮೀಜಿಯವರು ಪರಿವ್ರಾಜಕರಾಗಿ ಸಂಚರಿಸುತ್ತಿದ್ದ ದಿನಗಳವು. ಒಮ್ಮೆ ಅವರು ಕಾಶಿಯಲ್ಲಿ ತಂಗಿದ್ದರು. ಅಲ್ಲಿನ ದುರ್ಗಾಮಾತೆಯ ದೇವಾಲಯವನ್ನು ನೋಡಿ ಹಿಂತಿರುಗುವಾಗ ದಾರಿಯ ಒಂದು ಬದಿಯಲ್ಲಿ ಎತ್ತರವಾದ ಗೋಡೆ. ಇನ್ನೊಂದು ಬದಿಯಲ್ಲಿ ವಿಶಾಲವಾದ ಸರೋವರ. ಕಿರಿದಾರಿಯಲ್ಲಿ ಅವರು ನಡೆದು ಹೋಗುತ್ತಿದ್ದಾಗ ದೊಡ್ಡ ಕೋತಿಗಳ ಗುಂಪು ಅವರನ್ನು ಅಟ್ಟಿಸಿಕೊಂಡು ಬಂತು. ಜೋರಾಗಿ ಕಿರುಚುತ್ತಾ ಕೋತಿಗಳ ಗುಂಪು ಅವರನ್ನು ಅಟ್ಟಿಸಿಕೊಂಡು ಹಿಡಿಯಲು ಬಂದವು.

ಅವು ಸಮೀಪಿಸುತ್ತಿದ್ದಂತೆ ಸ್ವಾಮೀಜಿ ಇನ್ನೂ ವೇಗವಾಗಿ ಓಡಲು ಪ್ರಾರಂಭಿಸಿದರು. ಇವರು ವೇಗ ಹೆಚ್ಚಿಸಿದಂತೆ ಆ ಕೋತಿಗಳು ಇನ್ನೂ ವೇಗವಾಗಿ ಓಡುತ್ತಾ ಸ್ವಾಮೀಜಿಯವರನ್ನು ಕಚ್ಚಲು ಬಂದವು. ಇನ್ನು ತಪ್ಪಿಸಿಕೊಳ್ಳಲು ಅಸಾಧ್ಯವೆನಿಸಿತು. ಇದ್ದಕ್ಕಿದ್ದಂತೆ ಒಬ್ಬ ವೃದ್ದ ಸನ್ಯಾಸಿ ಸ್ವಾಮೀಜಿ ಅವರನ್ನು ಕುರಿತು ಗಟ್ಟಿಯಾಗಿ ಕೂಗಿಕೊಂಡ, ‘ಓಡಬೇಡಿ.. ಎದುರಿಸಿ’ ಆ ಮಾತನ್ನು ಕೇಳಿದೊಡನೆ ಸ್ವಾಮೀಜಿ ಹಿಂದಿರುಗಿ ಧೈರ್ಯದಿಂದ ಕೋತಿಗಳನ್ನು ಎದುರಿಸಿದರು. ಅವರು ಹಿಂದಿರುಗಿ ಧೈರ್ಯದಿಂದ ಅವುಗಳನ್ನು ದಿಟ್ಟಿಸಿ ನೋಡಿದಾಗ ಅವು ಹಿಂಜರಿಯತೊಡಗಿದವು. ಕೊನೆಗೆ ಕೋತಿಗಳೇ ಆರಂಭಿಸಿದವು.

ಇದು ಬರೀ ಕೋತಿಗಳ ಕಥೆಯಲ್ಲ. ಎಲ್ಲರ ಬದುಕಿಗೂ ಮಹಾಪಾಠ. ಭಯನಕವಾದುದನ್ನು ಎದುರಿಸಿ ನಾವು ಭಯ ವಿಹ್ವಲರಾಗಿ ಓಡಿ ಹೋಗದಿದ್ದರೆ ದೃಢ ನಿಷ್ಠೆಯಿಂದ ಎದುರಿಸಿದರೆ ಕೋತಿಗಳಂತೆ ಕಷ್ಟಕಂಟಕಗಳೂ ದೂರಕ್ಕೋಡುವುವು. ಭಯದ ಭಾವನೆಗಳನ್ನು ಕಿತ್ತೆಸೆದು, ನಿರ್ಭೀತಿಯ ಭಾವನೆಗಳನ್ನು ಧೈರ್ಯ, ಸ್ಥೈರ್ಯ, ಶಕ್ತಿ ಸಹನೆಯ ಭಾವನೆಗಳನ್ನು ನಮ್ಮ ಮನಸ್ಸಿನಲ್ಲಿ ಬಿತ್ತಿ ಬೆಳೆಸಲು ಸಾಧ್ಯ ಎನ್ನುವುದು ಬೆಳಕಿನಷ್ಟು ಸತ್ಯ.

Tags

Related Articles

Leave a Reply

Your email address will not be published. Required fields are marked *

Language
Close