“ಮಾಲಿ” ಎಂಬ ಒಡೆಯಲಾಗದ ಒಗಟು

Posted In : ಪುರವಣಿ, ವಿರಾಮ

ಮೈಸೂರಿನ ಟಿ.ಎಸ್.ವೇಣುಗೋಪಾಲ್ ಮತ್ತು ಶೈಲಜಾ ದಂಪತಿಗಳು ವಿಶೇಷ ರೀತಿಯ ಸಂಗೀತಸೇವೆಯಲ್ಲಿ ತೊಡಗಿದ್ದಾರೆ. ಸಂಗೀತ ವಿದ್ವಾಂಸರ ಜೀವನಫಚಿಂತನೆ, ಸಂಗೀತಸಂಸ್ಕೃತಿ ಕುರಿತಾದ ಗಂಭೀರ ಚಿಂತನೆಗಳಿಗೆ ಮುಡಿಪಾದ ‘ರಾಗಮಾಲಾ’ ಪುಸ್ತಕಮಾಲಿಕೆ ಯನ್ನು ಸಂಪಾದಿಸಿ ಹೊರತರುತ್ತಿದ್ದಾರೆ. ಇದುವರೆಗೆ ಅವರು ತಂದ, ಸಂಗೀತದ ಕೇಳ್ವಿಯ ಕುರಿತಾದ ‘ಕೇಳು ಜನಮೇಜಯ’, ಪಂಡಿತ ರಾಜೀವ ತಾರಾನಾಥ್, ಎಂ.ಎಸ್.ಸುಬ್ಬುಲಕ್ಷ್ಮಿ, ಟಿ.ಎಂ.ಕೃಷ್ಣ , ಪಂ.ರವಿಶಂಕರ್ ಮುಂತಾದವರ ಕುರಿತ ಮೌಲಿಕ ಸಂಪುಟಗಳು ರಸಿಕಫಸಹೃದಯಫವಿಮರ್ಶಕರ ಶ್ಲಾಘನೆ ಗಳಿಸಿವೆ. ಪ್ರಬುದ್ಧ ಸಂಪಾದಕೀಯ, ಹಿರಿಯ ವಿದ್ವಾಂಸರ ಲೇಖನಗಳು, ಅಪರೂಪದ ಹಳೆಫಹೊಸ ಛಾಯಾಚಿತ್ರಗಳು, ಸಂಗೀತಾನುಭವದ ಕುರಿತ ಅಖಂಡ ಚಿಂತನೆಗಳು ಇವರ ಪ್ರತಿಯೊಂದು ಆವೃತ್ತಿಯ ವೈಶಿಷ್ಟ್ಯ.

‘ಮಾಲಿಕೆಯ ಏಳನೇ ಕೃತಿಯಾಗಿ ‘ಭೃಂಗಿ ನಡೆಯ ಮಾಲಿ’ ಪ್ರಕಟವಾಗಿದೆ. ಕೊಳಲು ವಿದ್ವಾಂಸ, ವಿಕ್ಷಿಪ್ತ ಪ್ರತಿಭೆ ಟಿ.ಆರ್.ಮಹಾಲಿಂಗಂ ಬಗ್ಗೆ ಈ ಕೃತಿ. ಕೃತಿಯಲ್ಲಿ ಸಂಪಾದಕರು ಬರೆದ ಲೇಖನದ ಆಯ್ದ ಭಾಗ ಇಲ್ಲಿದೆ. ಗ ತದ ಕಥನವೊಂದನ್ನು ಕಟ್ಟುವುದು ಚರಿತ್ರಕಾರನ ಮುಂದಿರುವ ಅತಿದೊಡ್ಡ ಸವಾಲು. ತಾನು ಕಂಡಿಲ್ಲದ ಕಾಲಘಟ್ಟದ, ತಾನು ನೋಡಿಲ್ಲದ ಬದುಕೊಂದನ್ನು ಕುರಿತು ವಸ್ತುನಿಷ್ಠವಾಗಿ ಬರೆಯುವುದು ಕಷ್ಟ. ಅದರಲ್ಲೂ ಹೀಗೆ ಕಟ್ಟಬೇಕಾದ ಬದುಕನ್ನು ಕುರಿತು ಇರುವ ಮಾಹಿತಿಯೆಲ್ಲವೂ ಅಪೂರ್ಣ, ಅಸ್ಪಷ್ಟ ಹಾಗೂ ವಿರೋಧಾತ್ಮಕವಾಗಿದ್ದರಂತೂ ಅದು ಇನ್ನೂ ಇಕ್ಕಟ್ಟಿನ ವಿಚಾರ. ಇನ್ನು ಆ ವ್ಯಕ್ತಿತ್ವವೂ ತೀರಾ ಸರಳವಾಗಿ ಇಂತಿಷ್ಟೇ ಎಂದು ಹೇಳಲಾಗದ, ಸ್ಪಷ್ಟ ಗ್ರಹಿಕೆಗೆ, ಸುಲಭ ವಿಶ್ಲೇಷಣೆಗೆ ದಕ್ಕದ, ಅಕ್ಷರಗಳ, ಪದಗಳ, ವಾಕ್ಯಗಳ ನಡುವಿನ ಸ್ಪೇಸ್ನಿಂದ ಜಾರಿ ಹೋಗಿ, ಮುಷ್ಠಿಯಿಂದಾಚೆಗೆ ಉಕ್ಕಿ ಹರಿದುಹೋಗುವ, ಇನ್ನೂ ಏನೋ ಹೇಳಬೇಕಿತ್ತು, ಎಂದು ನಮ್ಮನ್ನು ಚಡಪಡಿಸುವಂತೆ ಮಾಡುವ ಮಾಲಿ ಎಂಬ ಅಸಾಧಾರಣ ಸಂಗೀತ ಪ್ರತಿಭೆ, ಯುಗಪುರುಷ, ವಿಲಕ್ಷಣ ಮನುಷ್ಯ, ಹುಚ್ಚ, ಕುಡು ಕ, ಸಂತ ಹೀಗೆ ಏನೇನೋ ರೂಪಗಳಲ್ಲಿ ಎಲ್ಲರಲ್ಲೂ ದಿಗಿಲು ಹುಟ್ಟಿಸಿದ, ಕೊಳಲಿಗೊಬ್ಬನೇ ಮಾಲಿ ಎನಿಸಿಕೊಂಡ ಟಿ.ಆರ್. ಮಹಾಲಿಂಗಂ ಅವರ ಬದುಕು, ಸಂಗೀತವನ್ನು ಕಟ್ಟುವುದು ನಿಜವಾಗಿಯೂ ಅಸಾಧ್ಯ.

ಹಾಗೊಮ್ಮೆ ಕಟ್ಟಿದರೂ ಅದು ಅಪೂರ್ಣ. ಏಳು ವರ್ಷದ ಎಳೆಯ ಕೈಗಳು ಕೊಳಲಿನಲ್ಲಿ ಭೈರವಿಯ ಅಟ್ಟತಾಳದ ವೀರಿಬೋಣಿ ವರ್ಣ ನುಡಿಸಿದರೆ, ಹಾಡುತ್ತಿದ್ದಾರೇನೋ ಎನ್ನುವ ಭ್ರಮೆ ಮನಸ್ಸಿನಲ್ಲಿ ಮೂಡುತ್ತಿತ್ತು. ಯಾವ ಗುರುವಿನ ಮಾರ್ಗದರ್ಶನವೂ ಇಲ್ಲದೆ ಹಾಗೊಂದು ಭೈರವಿಯನ್ನು ನುಡಿಸಿದ ಕೈಗಳು ಅಂದು ವೇಣುವಾದನದಲ್ಲಿ ಪ್ರಮುಖ ಹೆಸರಾಗಿದ್ದ ಪಲ್ಲಡಂ ಸಂಜೀವರಾಯರ ಮುಂದೆ ಕೊಳಲು ನುಡಿಸಿದಾಗ ಇದನ್ನು ಕೊಳಲು ನುಡಿಸುವುದು ಎನ್ನುತ್ತಾರೆಯೇ ಎನ್ನುವಂತಹ ತಿರಸ್ಕಾರದಲ್ಲಿ ಒಂದೂ ಮಾತನಾಡದೇ ಎದ್ದುಹೋದಾಗ, ಆ ಎಳೆಯ ಮನದಲ್ಲಿ ಮೂಡಿದ್ದ ಭಾವವಾದರೂ ಏನಿರಬಹುದು? ಅದೇ ಮುಂದೆ ಒಂದು ಸೃಜನಶೀಲ ಕಿಚ್ಚಾಗಿ ಹೊಸದೊಂದು ಕೊಳಲುವಾದನ, ಇಲ್ಲ, ಹೊಸ ಸಂಗೀತದ ಹುಟ್ಟಿಗೇ ಕಾರಣವಾಯಿತೇ? ಆಟವಾಡುವ ಅದಮ್ಯ ಆಸೆಯನ್ನು ಅಪ್ಪನ ಒತ್ತಡದಿಂದಾಗಿ ಬದಿಗೊತ್ತಿ ಒಲ್ಲದ ಮನದಿಂದ ಆಡುವ ಹೊತ್ತಿನಲ್ಲಿ ಕಛೇರಿ ನುಡಿಸಲು ಹೋಗಿ ತನ್ನ ಕಳೆದುಹೋದ ಬಾಲ್ಯದ ನೆನಪುಗಳಿಂದ ತಳಮಳಿಸಿದ ಜೀವ ಪ್ರಜ್ಞಾಪೂರ್ವಕವಾಗಿ ಸಂಗೀತ ಕಛೇರಿಗಳಿಗೆ ಒಪ್ಪಿಕೊಂಡು ನಂತರ ಚಕ್ಕರ್ ಕೊಡುತ್ತಿತ್ತೇ? ಇವೆಲ್ಲವೂ ಸೇರಿ ಮಾಲಿ ಎನ್ನುವ ಅಗಾಧ ಪ್ರತಿಭಾವಂತ, ದುರಂತ ನಾಯಕನನ್ನು ಸೃಷ್ಟಿಸಿತೇ? ಹಲವಾರು ಅಸಂಗತತೆಗಳು, ಅಸಾಧ್ಯ ಹಟ, ಅಪರೂಪದ ಮಾನವೀಯತೆ, ಉದಾತ್ತ ಮನೋಭಾವ, ವಿಚಿತ್ರವಾದ ಸಿಟ್ಟು ಇವುಗಳು ಸಂಗಮಿಸಿದ ಮಾಲಿಯ ವ್ಯಕ್ತಿತ್ವ ಅತ್ಯಂತ ಸಂಕೀರ್ಣ ಸ್ವರೂಪದ್ದಾಗಿತ್ತು. ಹಾಗಾಗಿ ಮಾಲಿ ಎಂಬ ಈ ವೈಚಿತ್ರ್ಯವನ್ನು ಕುರಿತು ಇರುವ ಎಲ್ಲ ಕಥನಗಳನ್ನೂ ನಾವಿಲ್ಲಿ ಸಂಗ್ರಹಿಸಿ ಇಡಬಹುದು ಅಷ್ಟೆ.

ಅವರ ಗೆಳೆಯರು, ಅವರೊಂದಿಗೆ ಸಂಗೀತವನ್ನು ಹಂಚಿಕೊಂಡವರು ಹೀಗೆ ಹಲವರ ಮಾತುಗಳನ್ನು ಒಂದೆಡೆ ಒಟ್ಟುಮಾಡಬಹುದು. ಆದರೆ ಅದೂ ಅಪೂರ್ಣವಾಗೇ ಉಳಿಯಬಹುದು. ಟಿ.ಆರ್. ಮಹಾಲಿಂಗಂ ರಾಮಸ್ವಾಮಿ ಅಯ್ಯರ್ ಮತ್ತು ಬೃಹದಾಂಬಾಳ್ ಅವರ ಮಗ. ಅವರು ಹುಟ್ಟಿದ್ದು ತಿರುವಿಡೈಮರಡೂರ್ ಗ್ರಾಮದಲ್ಲಿ 1926ರ ನವೆಂಬರ್ 6ರಂದು. ಮಗುವಿಗೆ ಆ ಊರಿನ ಪ್ರಸಿದ್ಧ ದೇವತೆ ಮಹಾಲಿಂಗಸ್ವಾಮಿಯ ಹೆಸರನ್ನೇ ಇಟ್ಟರು. ಆರು ಮಕ್ಕಳ ದೊಡ್ಡ ಕುಟುಂಬ. ತಂದೆಗೆ ಕೃಷಿಯ ಜೊತೆಗೆ ಒಂದು ಸಣ್ಣ ಪೆಟ್ಟಿಗೆ ಅಂಗಡಿಯೂ ಇತ್ತು. ಮೂರು ವರ್ಷದ ಮಗುವಿಗೆ ಕೈಮೇಲೆ ದೊಡ್ಡ ಬೊಕ್ಕೆ ಎದ್ದಾಗ ಚಿಕಿತ್ಸೆಗೆಂದು ತಿರುಚಿನಾಪಳ್ಳಿಯ ಅಜ್ಜಿಯ ಮನೆಗೆ ಕಳುಹಿಸಿದರು. ಆದರೆ ಅವರು ಮತ್ತೆ ತಿರುವಿಡೈಮರಡೂರಿಗೆ ವಾಪಸ್ಸಾಗಲಿಲ್ಲ.

ಬದಲಾಗಿ ಒಂದೆರಡು ವರ್ಷಗಳಲ್ಲಿ ಇಡೀ ಕುಟುಂಬವೇ ತಿರುಚ್ಚಿಗೆ ಬಂದುಬಿಟ್ಟಿತು. ತಿರುಚ್ಚಿಯಲ್ಲಿ ಅವರ ಸಂಬಂಧಿಕರಾದ ಜಾಲ್ರ ಗೋಪಾಲ ಅಯ್ಯರ್ ಇದ್ದರು. ಅವರಿಗೆ ಸಂಗೀತ ಚೆನ್ನಾಗಿ ಬರುತ್ತಿತ್ತು. ಅವರು ಹರಿಕಥೆಯಲ್ಲಿ ಜಾಲ್ರ ನುಡಿಸುತ್ತಿದ್ದರು. ಹಾಗಾಗಿ ಅವರ ಹೆಸರಿಗೆ ಜಾಲ್ರ ಎಂಬುದು ಸೇರಿಕೊಂಡಿತಂತೆ. ಅವರಿಗೆ ಕೊಳಲು, ಹಾರ್ಮೋಚನಿಯಂ, ಪಿಟೀಲು, ಹಾಡುಗಾರಿಕೆ ಎಲ್ಲವೂ ಬರುತ್ತಿತ್ತು. ಮನೆಯ ಮಕ್ಕಳೆಲ್ಲಾ ಅವರ ಬಳಿ ಸಂಗೀತಕ್ಕೆ ಸೇರಿದರು. ಮಹಾಲಿಂಗಂ ತುಂಬಾ ನಿತ್ರಾಣದ ಹುಡುಗ ಎಂದು ಅವನಿಗೆ ಹಾಡು ಕಲಿಸಲು ಪ್ರಾರಂಭಿಸಿದರು. ಅವರಣ್ಣ ಗೌತಮ ಕೊಳಲನ್ನು ಮತ್ತು ಸಹೋದರಿ ದೇವಕಿ ಹಾಡುಗಾರಿಕೆಯನ್ನು ಕಲಿಯಲಾರಂಭಿಸಿದರು. ಶಾಲೆಯಲ್ಲಿ ಮತ್ಯಾರೋ ಹುಡುಗನ ಕೊಳಲುವಾದನ ಮಾಲಿಯನ್ನು ಆಕರ್ಷಿಸಿತು. ಯಾರಿಗೂ ಕಾಣದೆ ಗುಟ್ಟಾಗಿ ಕೊಳಲನ್ನು ಅಭ್ಯಾಸಮಾಡಲು ಪ್ರಾರಂಭಿಸಿದ. ಗೋಪಾಲ ಅಯ್ಯರ್ ಮಾಲಿಯ ಕೊಳಲಿನ ಪ್ರೀತಿಯನ್ನು ಕುರಿತು ತಂದೆಗೆ ತುಂಬಾ ಹೇಳಿದರು.

ಆದರೆ ಅವರು ಮಗನಿಗೆ ಕೊಳಲು ಕಲಿಸಲು ಬಿಲ್ಕುಲ್ ಸಿದ್ಧವಿರಲಿಲ್ಲ. ಕೊಳಲು ಕಲಿಯುವುದರಿಂದ ಮಾಲಿಯ ಆರೋಗ್ಯಕ್ಕೆ ತೊಂದರೆಯಾಗುತ್ತದೆ ಎಂಬುದು ಅವರ ಭಾವನೆಯಾಗಿತ್ತು. ಆದರೆ ವೀರಿಬೋಣಿ ವರ್ಣವನ್ನು ಮಾಲಿ ತ್ರಿಕಾಲದಲ್ಲಿ ನುಡಿಸುವುದನ್ನು ಕೇಳಿದ ಗೋಪಾಲ ಅಯ್ಯರ್ ಹಿಗ್ಗಿಹೋದರು. ಅಪ್ಪನಿಗೆ ಅದನ್ನು ಕೇಳಿಸಿ ಮಗನ ಹಿರಿಮೆಯನ್ನು ಪರಿಚಯಿಸಿದರು. ಅಪ್ಪನಿಗೆ ಒಪ್ಪಿಕೊಳ್ಳುವುದು ಅನಿವಾರ್ಯವಾ ಯಿತು. ಮಾಲಿಗೆ ಹಾಡುಗಾರಿಕೆ ಕಲಿಸುವುದನ್ನು ನಿಲ್ಲಿಸಿ ಗೋಪಾಲ ಅಯ್ಯರ್ ಕೊಳಲಿನಲ್ಲಿ ವಾತಾಪಿ ನುಡಿಸುವುದನ್ನು ಹೇಳಿಕೊಟ್ಟರು. ಮಾಲಿ ಏಕಸಂಧಿಗ್ರಾಹಿ. ಅವರಿಗೆ ಒಂದು ಹಾಡು, ಒಂದು ಆಲಿಕೆ, ಸಾಕಿತ್ತು. ಕೃತಿಯ ಮೂಲರೂಪವನ್ನು ಕೊಟ್ಟರೆ ಸಾಕಿತ್ತು, ಮಾಲಿ ಅದಕ್ಕೆ ರಕ್ತಮಾಂಸ ಸೇರಿಸಿ ಜೀವ ತುಂಬಿಬಿಡುತ್ತಿದ್ದರು.

ಅವರಿಗಿದ್ದ ಪ್ರತಿಭೆ ಅಸಾಧಾರಣ. ಅವರ ವಯಸ್ಸಿಗೆ ಊಹಿಸಲು ಸಾಧ್ಯವಾಗದ ಅದ್ಭುತವಾದ ಪ್ರತಿಭೆ ಅವರದ್ದು. ಪಾಪಾ ವೆಂಕಟರಾಮಯ್ಯನವರ ಮಕ್ಕಳಾದ ತ್ಯಾಗರಾಜನ್ ಹಾಗೂ ನಾಗರಾಜನ್ ಮಾಲಿಗೆ ಆಟದ ಗೆಳೆಯರು. ಒಮ್ಮೆ ಮಾಲಿ ಇತರ ಹುಡುಗರೊಂದಿಗೆ ಪಾಪಾ ಅವರ ಮನೆಯ ಮೇಲೆ ಗಾಳಿಪಟ ಹಾರಿಸುತ್ತಿದ್ದರು. ಕೆಳಗೆ ಜಯಮ್ಮಾಳ್ ತಮ್ಮ ಮಗಳು ಬಾಲಸರಸ್ವತಿ ಹಾಗೂ ಪಾಪಾ ಅವರಿಗೆ ತೋಡಿರಾಗದ ಕದ್ದನುವಾರಿಕಿ ಕಲಿಸುತ್ತಿದ್ದರು. ಪಾಪಾ ಸರಿಯಾಗಿ ಬರುವವರೆಗೆ ಅಭ್ಯಾಸ ಮಾಡುತ್ತಲೇ ಇರುತ್ತಿದ್ದರು. ಆಗ ಎಲ್ಲರಿಗೂ ಆಶ್ಚರ್ಯ ಮೂಡಿಸುವ ಘಟನೆಯೊಂದು ನಡೆಯಿತು. ಗಾಳಿಪಟ ಹಾರಿಸಿ ಕೆಳಗೆ ಬಂದ ಮಾಲಿ ಕದ್ದನುವಾರಿಕಿ ಕೃತಿಯನ್ನು ಒಂದೂ ತಪ್ಪಿಲ್ಲದೆ ನುಡಿಸಿದರಂತೆ. ಆದರೆ ಪಾಪಾ ಅವರಿಗೆ ಅದು ಇನ್ನೂ ಬಂದಿರಲಿಲ್ಲ! ಮಾಲಿ ಗಾಳಿಪಟ ಹಾರಿಸುತ್ತಿರಲಿ ಅಥವಾ ಇನ್ನೇನೇ ಮಾಡುತ್ತಿರಲಿ, ಕಲಿಯಬೇಕು ಎನ್ನುವುದು ಅವರ ಮನಸ್ಸಿಗೆ ಬಂದರೆ, ಎಷ್ಟೇ ದೊಡ್ಡ ಕೃತಿಯನ್ನಾದರೂ ಸುಮ್ಮನೆ ಕೇಳಿಯೇ ಮನನ ಮಾಡಿಕೊಳ್ಳುತ್ತಿದ್ದರು.

ಮಾಲಿಗೆ ಈ ಪ್ರಾರಂಭಿಕ ಶಿಕ್ಷಣವಾದ ಮೇಲೆ ಕಲಿಕೆಯ ಅವಶ್ಯಕತೆ ಬರಲೇ ಇಲ್ಲ. ಅವರ ಸಹೋದರಿ ದೇವಕಿ ಅವರಿಗೆ ಒಂದು ರೀತಿಯ ಪ್ರೇರಣೆ. ದೇವಕಿಯನ್ನು ಕಂಡರೆ ಮಾಲಿಗೆ ತುಂಬಾ ಪ್ರೀತಿ. ಆದರೆ ಆಕೆ ಕಿರಿಯ ವಯಸ್ಸಿನಲ್ಲೇ ತೀರಿಕೊಂಡರು. ಆಕೆ ಚೆನ್ನಾಗಿ ವಯೋಲಿನ್ ನುಡಿಸುತ್ತಿದ್ದರು. ಮಾಲಿಗೆ ವಯೋಲಿನ್ ಅಂದರೆ ತುಂಬಾ ಇಷ್ಟ. ಆದರೆ ಭಾವನಾತ್ಮಕವಾಗಿ ವಯೋಲಿನ್ ಹಿಡಿದಾಗೆಲ್ಲಾ ಸಹೋದರಿಯ ನೆನಪಾಗಿ, ನುಡಿಸುವುದಕ್ಕೆ ಕಷ್ಟವಾಗುತ್ತದೆಂದು ಒಂದು ಕಡೆ ಹೇಳಿಕೊಂಡಿದ್ದಾರೆ. ಮಾಲಿ ಕೊಳಲಿನಲ್ಲಿ ಎಷ್ಟು ಬೇಗ ಔತ್ತಮ್ಯ ಸಾಧಿಸಿಕೊಂಡರೆಂದರೆ, ಪಕ್ಕವಾದ್ಯಕ್ಕೆ ಕಲಾವಿದರನ್ನು ಹುಡುಕುವುದೇ ಕಷ್ಟವಾಯಿತು.

ಕಿರಿಯರಿಂದ ನಿಭಾಯಿಸುವುದಕ್ಕೆ ಆಗುತ್ತಿರಲಿಲ್ಲ. ಹಿರಿಯರು ಈ ಪುಟ್ಟ ಹುಡುಗನಿಗೆ ನುಡಿಸುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಆದರೆ ಕೆಲವೇ ದಿನಗಳಲ್ಲಿ ದಿಗ್ಗಜರೆಲ್ಲರೂ ಮಾಲಿಗೆ ಪಕ್ಕವಾದ್ಯ ಸಹಕಾರ ನೀಡಲು ಮುಗಿಬೀಳಲಾರಂಭಿಸಿದರು. ಮಾಲಿಯ ತಂದೆ ಕೂಡ ಪ್ರತಿಭಾವಂತರು. ಅವರು ಒಂದು ಚರಕವನ್ನು ಆವಿಷ್ಕರಿಸಿದ್ದರು. ಆದರೆ ಅದನ್ನು ಸರ್ಕಾರ ಒಪ್ಪಿಕೊಳ್ಳಲಿಲ್ಲ ಎಂದು ಟಿ.ವಿ. ಗೋಪಾಲಕೃಷ್ಣನ್ ತಮ್ಮ ಸಂದರ್ಶನದಲ್ಲಿ ನೆನಪಿಸಿಕೊಂಡರು. ಆದರೆ ಅವರು ತಮ್ಮ ಪ್ರತಿಭೆಯನ್ನು ಬೆಳಸಿಕೊಳ್ಳಲು ಹೋಗದೆ ಮಾಲಿಯ ಪ್ರತಿಭೆಯಲ್ಲಿ ತಮ್ಮ ಭವಿಷ್ಯ ಕಂಡುಕೊಳ್ಳಲು ಪ್ರಯತ್ನಿಸಿದರು.

ವಿದ್ವಜ್ಜನರ ನಡುವೆ ಹೀಗೊಂದು ಘನತೆ ಗೌರವಗಳು ದೊರಕುವ ಮೊದಲೇ ಬಾಲಪ್ರತಿಭೆಯೆನಿಸಿಕೊಂಡಿದ್ದ ಮಾಲಿಯನ್ನು ಅವರ ತಂದೆ ಸರ್ಕಸ್ ಕೋತಿಯನ್ನು ಊರಿಂದ ಊರಿಗೆ ಪ್ರದರ್ಶನಕ್ಕೆ ಕೊಂಡೊಯ್ಯುವಂತೆ ಕರೆದೊಯ್ಯುತ್ತಿದ್ದರು. ಮಾಲಿ ಯ ವಿದ್ಯಾಭ್ಯಾಸ ಎರಡನೆಯ ಕ್ಲಾಸಿಗೇ ಮುಗಿದಿತ್ತು. ಮಗು ಆಟವನ್ನಂತೂ ಆಡಲೇ ಇಲ್ಲ. ವಾರದಲ್ಲಿ ಮೂರು ಕಛೇರಿಗಳು ಮತ್ತು ಎಷ್ಟೋ ಬಾರಿ ಅದಕ್ಕಿಂತಲೂ ಹೆಚ್ಚು ಕಾರ್ಯಕ್ರಮಗಳು ಆಗುತ್ತಿದ್ದವು. ಮನೆಯವರಿಗೆ ಮಾಲಿಯೇ ಅನ್ನದಾತರಾಗಿದ್ದರು. ಬಾಲ್ಯ, ಹರೆಯಗಳ ಸಹಜ ಸುಖದ ಕ್ಷಣಗಳಿಗೇ ಪುರುಸೊತ್ತಿಲ್ಲದೆ ಅವರ ಬದುಕಿನ ಅಮೂಲ್ಯವಾದ ಇಪ್ಪತ್ತು ವರುಷಗಳು ಬರೀ ಒತ್ತಡದಲ್ಲೇ ಕಳೆದುಹೋದವು. ಮಾಲಿಯವರಿಗೆ ಚಿಕ್ಕವಯಸ್ಸಿನಲ್ಲಿ ಮಾರ್ಗದರ್ಶನ ನೀಡಲು ಯಾರೂ ಮುಂದೆ ಬರಲಿಲ್ಲ.

ಅಷ್ಟೇ ಅಲ್ಲ, ಅವರ ಪ್ರತಿಭೆಯನ್ನು ಒಪ್ಪಿಕೊಳ್ಳುವುದಕ್ಕೂ ತಯಾರಿರಲಿಲ್ಲ. ಆ ಕಾಲದ ಕೊಳಲು ಸಾಮ್ರಾಟ್ ಪಲ್ಲಡಂ ಸಂಜೀವರಾವ್ ಅವರ ಬಳಿಗೆ ಮಾಲಿಯನ್ನು ಅವರ ತಂದೆ ರಾಮಸ್ವಾಮಿ ಅಯ್ಯರ್ ಕರೆದುಕೊಂಡು ಹೋದರು. ಅವರ ಮುಂದೆ ಮಾಲಿಯವರು ಭೈರವಿ ವರ್ಣ ಮತ್ತು ತೋಡಿ ರಾಗದ ಎಂದುಕು ದಯರಾದು ರಾ ನುಡಿಸಿದರು. ಪಲ್ಲಡಂ ಮಾತನಾಡದೇ ಎದ್ದು ಹೋದರು. ನಂತರ ಅವರ ಹಿಂದೆಯೇ ಹೋಗಿ ಮಾತನಾಡಿಸಿದ್ದಕ್ಕೆ ‘ಅವನು ನುಡಿಸುವುದು ಕೊಳಲು ನುಡಿಸುವ ಕ್ರಮವೇ?’ ಎಂದರಂತೆ. (ಈ ಘಟನೆ ಕುರಿತಂತೆ ಇನ್ನೊಂದು ಅಭಿಪ್ರಾಯವೂ ಇದೆ. ‘ಮಾಲಿಗೆ ಕಲಿಸುವುದಕ್ಕೆ ಏನೂ ಉಳಿದಿಲ್ಲ. ಅವನಿಗೆ ಎಲ್ಲಾ ಬರುತ್ತದೆ’ ಎಂದು ಪಲ್ಲಡಂ ಹೇಳಿದರು ಎನ್ನುವ ಮಾತೂ ಇದೆ) ತಂದೆ ಮತ್ತು ಮಗನಿಗೆ ಇದರಿಂದ ತುಂಬಾ ನಿರಾಸೆಯಾಯಿತು.

ಆದರೆ ಆ ಸಂದರ್ಭದಲ್ಲಿ ಅಲ್ಲೇ ಇದ್ದ ವಯೋಲಿನ್ ವಿದ್ವಾಂಸರಾದ ಮುರುಂಗಪುರಿ ಗೋಪಾಲಕೃಷ್ಣ ಅಯ್ಯರ್ ಹಾಗೂ ಮೃದಂಗ ವಿದ್ವಾನ್ ತಂಜಾವೂರು ವೈದ್ಯನಾಥ ಅಯ್ಯರ್ ಮಾಲಿಯ ವಾದನವನ್ನು ಮೆಚಿ ಕೊಂಡು ಪ್ರೋತ್ಸಾಹದ ಮಾತುಗಳನ್ನು ಆಡಿದ್ದು ಅವರಿಗೆ ಸ್ವಲ್ಪ ಸಮಾಧಾನ ನೀಡಿತ್ತು. ಆರಂಭದಲ್ಲಿ ಮಾಲಿಯವರಿಗೆ ಇಂತಹ ನಿರಾಸೆ ಹಲವು ಬಾರಿಯಾಗಿದೆ. ಅವರ ತಂದೆ ಮಗನನ್ನು ಅಣ್ಣಾಮಲೈ ವಿಶ್ವವಿದ್ಯಾನಿಲಯದಲ್ಲಿ ಆಗಷ್ಟೇ ಪ್ರಾರಂಭವಾಗಿದ್ದ ಸಂಗೀತ ಶಾಲೆಗೆ ಕರೆದುಕೊಂಡು ಹೋದರು. ಪ್ರಾಂಶುಪಾಲರಾಗಿದ್ದ ಸಭೇಶ ಅಯ್ಯರ್ ಮಾಲಿ ನುಡಿಸುವುದನ್ನು ಕೇಳಿ ‘ಮಾಲಿ ನಾಗಸ್ವರ ಕಲಿಯುವುದು ಒಳ್ಳೆಯದು’ ಎಂದರಂತೆ.

ಆ ಮಾತನ್ನು ವ್ಯಂಗ್ಯವೆಂದು ಭಾವಿಸಿ ಮಾಲಿಯ ತಂದೆ ಕೆಂಡಾಮಂಡಲವಾಗಿಬಿಟ್ಟರು. ಒಬ್ಬ ಬ್ರಾಹ್ಮಣ ಹುಡುಗ ನಾಗಸ್ವರ ಕಲಿಯುವುದೆಂದರೇನು ಎಂದು ಅವರು ಸಿಟ್ಟುಗೊಂಡಿದ್ದರು. ಆದರೆ ಸಭೇಶ ಅಯ್ಯರ್ ಜೊತೆ ಇದ್ದವರು ಹೇಳುವುದೇ ಬೇರೆ. ಮಾಲಿಯವರನ್ನು ಅವರು ವ್ಯಂಗ್ಯ ಮಾಡಲಿಲ್ಲ. ಆಗ ಆ ಕಾಲೇಜಿನಲ್ಲಿ ಕೊಳಲು ಕಲಿಸುವವರು ಯಾರೂ ಇರಲಿಲ್ಲ. ಜೊತೆಗೆ ಮಾಲಿ ನಾಗಸ್ವರದಲ್ಲಿ ಮುಂದೆ ಬರಬಹುದು ಎಂದು ಅವರಿಗೆ ನಿಜವಾಗಿ ಅನ್ನಿಸಿತ್ತು. ಹಾಗಾಗಿ ಆ ಮಾತನ್ನು ಹೇಳಿದರು ಎನ್ನುತ್ತಾರೆ. ಅಕಸ್ಮಾತ್ ಆ ಸಲಹೆಯನ್ನು ಒಪ್ಪಿಕೊಂಡಿದ್ದರೆ ಮಾಲಿ ಮೊದಲ ಬ್ರಾಹ್ಮಣ ನಾಗಸ್ವರ ಕಲಾವಿದರಾಗುತ್ತಿದ್ದರು.

ಆದರೆ ರಾಮಸ್ವಾಮಿ ಅಯ್ಯರ್ ಎಷ್ಟು ಸಿಟ್ಟಾಗಿದ್ದರೆಂದರೆ ಮಾಲಿ ನಾಗಸ್ವರ ಕಲಿಯುವ ಪ್ರಶ್ನೆಯೇ ಇರಲಿಲ್ಲ. ವಿಪರ್ಯಾಸವೆಂದರೆ ಮಾಲಿಗೆ ಅದೇ ವಿಶ್ವವಿದ್ಯಾನಿಲಯದಲ್ಲಿ ಈ ಘಟನೆಯಾದ ಮೂರೇ ವರ್ಷಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳುವ ಅವಕಾಶ ದೊರಕಿತು. ಆನರಬಲ್ ವಿ.ಎಸ್. ಶ್ರೀನಿವಾಸ ಶಾಸಿಗಳು ಮಾಲಿಯನ್ನು ಕಾರ್ಯಕ್ರಮ ನೀಡಲು ಆಹ್ವಾನಿಸಿದರು. ಆಗ ಮಾಲಿಯು ಕಾನಡಾ ರಾಗದಲ್ಲಿ ನಾಲ್ಕು ಕಳೆಯಲ್ಲಿ ರಾಗ ತಾನ ಪಲ್ಲವಿಯನ್ನು ನುಡಿಸಿ ಎಲ್ಲರನ್ನೂ ದಂಗುಬಡಿಸಿದರು ಎಂದು ಆಗ ಅಲ್ಲಿ ವಿದ್ಯಾರ್ಥಿಯಾಗಿದ್ದ ವಿದ್ವಾನ್ ಎಸ್ ರಾಮನಾಥನ್ ನೆನಪಿಸಿಕೊಳ್ಳುತ್ತಿದ್ದರು. ಅವರದು ಅಸಾಧ್ಯ ಪ್ರತಿಭೆ.

ಆದರೆ ಅವರ ಸಂಗೀತದಲ್ಲಿ ಒಂದು ಸಂಪ್ರದಾಯದ ಕೊರತೆ ಇದೆ ಎಂದು ಹಲವರಿಗೆ ಅನ್ನಿಸಿತ್ತು. ಒಮ್ಮೆ ಮಾಲಿಯವರ ಕಛೇರಿಗೆ ಪಾಲ್ಘಾಟ್ ಮಣಿ ಅಯ್ಯರ್ ಅವರ ಮೃದಂಗ ಪಕ್ಕವಾದ್ಯ ನಿಗದಿಯಾಗಿತ್ತು. ಮಾಲಿ ದೊಡ್ಡಕೃತಿಯೊಂದನ್ನು ಮೂರೇ ನಿಮಿಷಕ್ಕೆ ನುಡಿಸಿಬಿಟ್ಟರು. ಅದು ಸಾಂಪ್ರದಾಯಿಕವಲ್ಲ. ಸಾಂಪ್ರದಾಯಿಕವಲ್ಲದ ಅವರ ಸಂಗೀತಕ್ಕೆ ಪಕ್ಕವಾದ್ಯ ನುಡಿಸಲು ಸಾಧ್ಯವಿಲ್ಲ ಎಂದು ಮಣಿ ಅಯ್ಯರ್ ಎದ್ದುಬಿಟ್ಟರಂತೆ. ಕೊನೆಗೆ ಸಂಘಟಕರು ಸಮಾಧಾನ ಮಾಡಿ ಅವರನ್ನು ಕೂರಿಸಿದರಂತೆ. ಮಣಿ ಅಯ್ಯರ್ ಮಾಲಿಯವರ ತಂದೆಗೆ ‘ಮಗ ಪ್ರತಿಭಾವಂತ, ಆದರೆ ಅವನಿಗೆ ಮಾರ್ಗದರ್ಶನದ ಅವಶ್ಯಕತೆಯಿದೆ’ ಎಂದರಂತೆ.

ಆಗ ಅವರನ್ನು ವಿಜಯನಗರಂನಲ್ಲಿದ್ದ ದ್ವಾರಂ ವೆಂಕಟಸ್ವಾಮಿ ನಾಯ್ಡು ಅವರ ಬಳಿ ಕರೆದುಕೊಂಡು ಹೋಗುವ ಸಲಹೆ ಬಂತು. ಅವರು ಸುಮಾರು ಎರಡು ವರ್ಷ ಅಲ್ಲಿದ್ದರು ಎಂದು ದ್ವಾರಂ ಮಂಗತಾಯಾರು ಸಂದರ್ಶನದಲ್ಲಿ ಹೇಳಿದರು. ಮಾಲಿಯವರಿಗೆ ದ್ವಾರಂ ಅವರ ಬಗ್ಗೆ ಅಪಾರ ಗೌರವವಿತ್ತು ಎಂದು ಎಲ್ಲರಿಗೂ ತಿಳಿದಿತ್ತು. ಅವರು ದ್ವಾರಂ ಅವರನ್ನು ನಾಯ್ಡುಗಾರು ಎಂದೇ ಕರೆಯುತ್ತಿದ್ದರು. ನಾಯ್ಡುಗಾರು ಅವರ ಸ್ವರಶುದ್ಧತೆ, ನಾದಗುಣ ಮತ್ತು ಅವರ ಸಂಗೀತದಲ್ಲಿರುವ ನೆಮ್ಮದಿ, ಪ್ರಶಾಂತತೆಗಳನ್ನು ಮಾಲಿ ಇಷ್ಟಪಡುತ್ತಿದ್ದರು. ಒಮ್ಮೆ ಚಿಕ್ಕ ಹುಡುಗ ಮಾಲಿ ನುಡಿಸುತ್ತಿದ್ದಾಗ ಸಭಿಕರಲ್ಲಿ ಜಿ.ಎನ್. ಬಾಲಸುಬ್ರಹ್ಮಣ್ಯ ಹಾಗೂ ಸಂಗೀತ ಪ್ರಪಂಚದ ಭೀಷ್ಮ ಎನಿಸಿಕೊಂಡಿದ್ದ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಇದ್ದರು. ಬಾಲಕ ನುಡಿಸುವುದನ್ನು ಕೇಳುತ್ತಾ ‘ಇನ್ನು ನಾವು ಸಂಗೀತ ಬಿಟ್ಟು ಬೇರೇನಾದರೂ ಕೆಲಸ ಹುಡುಕಿಕೊಳ್ಳುವುದೇ ಸರಿ ಎನಿಸುತ್ತದೆ’ ಎಂದು ಮಾತನಾಡಿಕೊಂಡರು.

ವೇಣುಗೋಪಾಲ್ ದಂಪತಿಗೆ ಅಭಿನಂದನೆ ಸಲ್ಲಿಸಲು ಮತ್ತು ‘ರಾಗಮಾಲಾ’ ಸಂಚಿಕೆಗಳನ್ನು ತರಿಸಿಕೊಳ್ಳಲು: 9900082773, ಇಮೇಲ್: [email protected]

Leave a Reply

Your email address will not be published. Required fields are marked *

two × two =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Friday, 20.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಪಂಚಮಿ, ಶುಕ್ರವಾರ, ನಿತ್ಯನಕ್ಷತ್ರ-ಮೃಗಶಿರಾ, ಯೋಗ-ಶೋಭನ, ಕರಣ-ಬವ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 20.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಪಂಚಮಿ, ಶುಕ್ರವಾರ, ನಿತ್ಯನಕ್ಷತ್ರ-ಮೃಗಶಿರಾ, ಯೋಗ-ಶೋಭನ, ಕರಣ-ಬವ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top