About Us Advertise with us Be a Reporter E-Paper

ಅಂಕಣಗಳು

ಮನ್ಸೂರರ ಮಾತೋಶ್ರೀಯವರ ಬೇಡಿಕೆ ದಿಢೀರೆಂದು ಈಡೇರಿದ್ದು!

- ಎಸ್. ಷಡಕ್ಷರಿ

ಇಲ್ಲಿರುವ ಘಟನೆ ಸುಪ್ರಸಿದ್ದ ಹಿಂದೂಸ್ತಾನಿ ಗಾಯಕರಾಗಿದ್ದ ಮಲ್ಲಿಕಾರ್ಜುನ ಮನ್ಸೂರ್ ಅವರ ನಿಜಜೀವನದ ಘಟನೆ.

ಅದು ಅವರು ಪ್ರಸಿದ್ಧರಾಗುತ್ತಿದ್ದ ಕಾಲ. ಅವರ ತಾಯಿಯವರಿಗೆ ಶ್ರೀಶೈಲ ಬೆಟ್ಟದ ಮಲ್ಲಿಕಾರ್ಜುನನ ದರ್ಶನ ಮಾಡಬೇಕೆಂಬ ಆಸೆಯಿತ್ತು. ಒಮ್ಮೆ ಮಲ್ಲಿಕಾರ್ಜುನರು ತಾಯಿಯವರನ್ನು ಕರೆದುಕೊಂಡು ಶ್ರೀಶೈಲಕ್ಕೆ ಹೊರಟರು. ಶ್ರೀಶೈಲ ತಲುಪಿದರು. ದೇವರ ದರ್ಶನಕ್ಕೆ ಮುಂಚೆ ಪುಷ್ಕರಣಿಯಲ್ಲಿ ಸ್ನಾನಕ್ಕಾಗಿ ಇಳಿದರು. ತಮ್ಮ ಕೋಟನ್ನು ಮೆಟ್ಟಿಲ ಮೇಲೆ ಕಳಚಿಬಿಟ್ಟಿದ್ದರು. ಒಂದೆರಡು ಮುಳುಗು ಹಾಕಿ ಮೇಲೆ ಬರುವಷ್ಟರಲ್ಲಿ ಅವರ ಕೋಟನ್ನು ಯಾರೋ ಕದ್ದೊಯ್ದಿದ್ದರು. ಮರುಪ್ರಯಾಣದ ಟಿಕೇಟುಗಳು ಮತ್ತು ಹಣವೆಲ್ಲ ಕೋಟಿನಲ್ಲಿದ್ದವು. ಒಮ್ಮಿಂದೊಮ್ಮೆಲೆ ಬರಿಗೈಯವರಾಗಿಬಿಟ್ಟ ಅವರು ದಿಕ್ಕುತೋಚದೆ ಕುಳಿತುಬಿಟ್ಟರು. ಆಗ ಅವರಿಗೆ ಧೈರ್ಯ ತುಂಬಿದ್ದು ಅವರ ತಾಯಿ. ದೇವರು ಕಾಪಾಡುತ್ತಾನೆ. ಏನಾದರೊಂದು ವ್ಯವಸ್ಥೆಯಾಗುತ್ತದೆ ಎಂದೆಲ್ಲ ಸಾಂತ್ವನ ಹೇಳಿದರು.

ಆಗ ಮಧ್ಯರಾತ್ರಿಯಾಗಿತ್ತು. ತಾಯಿಯವರು ಮಗನನ್ನು ಮಲ್ಲಿಕಾರ್ಜುನ ದೇವಾಲಯದ ಹೆಬ್ಬಾಗಿಲಿಗೆ ಕರೆದುಕೊಂಡು ಹೋದರು. ದೇವಾಲಯದ ಹೆಬ್ಬಾಗಿಲು ಮುಚ್ಚಿತ್ತು. ತಾಯಿಯವರು ಒಂದಷ್ಟು ಹಾಡು ಮಗು ಎಂದರು. ಮಲ್ಲಿಕಾರ್ಜುನರು ಹಾಡಲು ಆರಂಭಿಸಿದರು. ಹಾಡುತ್ತಾ ಹಾಡುತ್ತಾ ಮೈಮರೆತರು. ಎಷ್ಟು ಹೊತ್ತು ಹಾಡಿದರೋ ಆದರೆ ಆ ನಡುರಾತ್ರಿಯಲ್ಲಿ ಪುರೋಹಿತರೊಬ್ಬರು ಬಂದು ದೇವಾಲಯದ ಬಾಗಿಲನ್ನು ತೆಗೆದರು. ಇವರಿಗೆಲ್ಲ ಮಲ್ಲಿಕಾರ್ಜುನನ ದರ್ಶನ ಮಾಡಿಸಿದರು.

ಎಲ್ಲರೂ ದೇವರಲ್ಲಿ ತಮ್ಮತಮ್ಮ ಬೇಡಿಕೆಗಳನ್ನು ಹೇಳಿಕೊಳ್ಳುತ್ತಿದ್ದರು. ಆಗ ಅವರ ತಾಯಿ ಮಲ್ಲಿಕಾರ್ಜುನ! ನೀನು ಇರುವುದೇ ಸತ್ಯವಾಗಿದ್ದರೆ, ನನ್ನನ್ನು ನಿನ್ನೊಳಕ್ಕೆ ಕರೆದುಕೋ. ಸಾಕಷ್ಟು ವಯಸ್ಸಾಗಿರುವ ನನಗೆ ಇನ್ನೂ ಬದುಕಬೇಕೆಂಬ ಆಸೆಯಿಲ್ಲ. ನಿನ್ನಲ್ಲಿ ನನ್ನ ಕೋರಿಕೆ ಇಷ್ಟೇ ಎಂದು ಬೇಡಿಕೊಂಡರು. ತಾಯಿಯ ಕೋರಿಕೆಯನ್ನು ಕೇಳಿದ ಮಲ್ಲಿಕಾರ್ಜುನರು ನಾವು ನಿನ್ನನ್ನು ಕಳುಹಿಸಿಕೊಡದಿದ್ದರೆ, ಮಲ್ಲಿಕಾರ್ಜುನ ನಿನ್ನನ್ನು ಹೇಗೆ ಕರೆಸಿಕೊಳ್ಳುತ್ತಾನೆ? ಎಂದು ನಗೆಯಾಡಿದರು.

ದೇವರ ದರ್ಶನದಿಂದ ಸಂತೋಷಗೊಂಡಿದ್ದ ಎಲ್ಲರೂ ಹೊರಕ್ಕೆ ಬಂದರು. ಮಲ್ಲಿಕಾರ್ಜುನ ಮನ್ಸೂರರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದ ಸಹಪ್ರಯಾಣಿಕರೊಬ್ಬರು ಹಿಂತಿರುಗಿ ಹೋಗಲು ಬೇಕಾದಷ್ಟು ಹಣವನ್ನು ಸಾಲವಾಗಿ ಕೊಡುತ್ತೇನೆಂಬ ಭರವಸೆ ನೀಡಿದರು.

ಮರುದಿನ ಅವರು ಶ್ರೀಶೈಲದ ಇನ್ನುಳಿದ ಪ್ರೇಕ್ಷಣೀಯ ಪುಣ್ಯಕ್ಷೇತ್ರಗಳನ್ನೆಲ್ಲ ದರ್ಶಿಸಿದರು. ಅಂದು ರಾತ್ರಿ ಶ್ರೀಶೈಲದಲ್ಲೇ ಕಳೆದು ಮುಂಜಾನೆ ಸೂರ್ಯೋದಯಕ್ಕೆ ಮುಂಚೆ ರೈಲುನಿಲ್ದಾಣಕ್ಕೆ ಹೋಗಬೇಕಿತ್ತು. ಎಲ್ಲರೂ ರಸ್ತೆಯ ಪಕ್ಕದಲ್ಲಿದ್ದ ಕಲ್ಲುಚಪ್ಪಡಿಗಳ ಮೇಲೆ ವಸ್ತ್ರಗಳನ್ನು ಹಾಸಿ ಮಲಗಿಕೊಂಡರು. ಎಲ್ಲರಿಗೂ ಗಾಢನಿದ್ದೆ.

ಜಾವ ಮಲ್ಲಿಕಾರ್ಜುನರಿಗೆ ದಿಢೀರೆಂದು ಎಚ್ಚರವಾಯಿತು. ಏಕೆಂದರೆ ಎತ್ತಿನ ಗಾಡಿಗಳ ಸದ್ದು, ಎತ್ತಿನ ಕೊರಳಿನ ಗಂಟೆಗಳ ಸದ್ದು ಕೇಳಿಸುತ್ತಿತ್ತು. ಅವರು ಏಳಬೇಕೆನ್ನುವಷ್ಟರಲ್ಲಿ ಎತ್ತಿನ ಗಾಡಿಯೊಂದು ಧಡಧಡ ಸದ್ದು ಮಾಡುತ್ತ ಇವರು ಮಲಗಿದ್ದಲ್ಲಿಯೇ ಬಂತು. ಮಲ್ಲಿಕಾರ್ಜುನರ ಕಾಲಿನ ಮೇಲೆ ಗಾಡಿಯ ಚಕ್ರ ಹರಿಯಿತು. ಏನಾಗುತ್ತಿದೆ ಎಂಬುದರ ಅರಿವು ಅವರಿಗಾಗುವಷ್ಟರಲ್ಲಿ ಅದೇ ಎತ್ತಿನ ಗಾಡಿ ಅವರ ತಾಯಿಯ ಮೇಲೆ ಹರಿದು ಹೋಗಿತ್ತು. ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಅವರ ತಾಯಿ ಸಾವಿಗೀಡಾಗಿದ್ದರು. ಬಹುಶಃ ಶ್ರೀಶೈಲದ ಮಲ್ಲಿಕಾರ್ಜುನ ನಿನ್ನೊಳಕ್ಕೆ ಕರೆದುಕೋ’ ಎಂದು ಆ ತಾಯಿ ಮಾಡಿದ ಪ್ರಾರ್ಥನೆಯನ್ನು ಕೇಳಿಸಿಕೊಂಡಿದ್ದನೋ ಏನೋ? ಆಕೆಯ ಬೇಡಿಕೆ ಈಡೇರಿಬಿಟ್ಟಿತ್ತು.

ಈ ಘಟನೆಯನ್ನು ಮನ್ಸೂರರ ನನ್ನ ರಸಯಾತ್ರೆ ಎಂಬ ಗ್ರಂಥದಲ್ಲಿ ನಮೂದಿಸಿದ್ದಾರೆ. ಮುಂದಿನ ತಿಂಗಳ ಡಿಸೆಂಬರ್ ಮೂವತ್ತೊಂದರಂದು ಮನ್ಸೂರರ ಜನ್ಮದಿನ! ಅವರ ಪುಣ್ಯಸ್ಮರಣೆಗೆ ಪ್ರಣಾಮಗಳು. ಪರಮಾತ್ಮನ ಸನ್ನಿಧಿಯಲ್ಲಿ ಮಂಡಿಸುವ ಬೇಡಿಕೆಗಳನ್ನು ಕರುಣಾಮಯನಾದ ಪರಮಾತ್ಮನು ದಿಢೀರೆಂದು ಈಡೇರಿಸುತ್ತಾನೆ ಎಂಬುದನ್ನು ಈ ಘಟನೆ ಸೂಚಿಸುತ್ತದೆಯೇ? ಆದರೆ ಪರಮಾತ್ಮನು ಬೇಡಿಕೆ ಮಂಡಿಸುವವರ ಪ್ರಾಮಾಣಿಕತೆಯನ್ನೂ ನೋಡುತ್ತಾನಲ್ಲವೇ?

Tags

Related Articles

Leave a Reply

Your email address will not be published. Required fields are marked *

Language
Close