ವಿಶ್ವವಾಣಿ

ಮನೋರಥ: ಚಿತ್ತ ಚಾಂಚಲ್ಯದ ಚಿತ್ರ

ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಕತಾಹಂದರ ಹೊಂದಿರುವ ‘ಮನೋರಥ’ ಇಂದು ರಾಜ್ಯದಾದ್ಯಂತ ಸುಮಾರು 80ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಗೆ ಬರುತ್ತಿದೆ.

ಅನಿಮೇಶನ್ ಎಕ್ಸಪರ್ಟ್ ಎಂ. ಪ್ರಸನ್ನ ಕುಮಾರ್ ಈ ಚಿತ್ರಕ್ಕೆ ಕತೆ, ಚಿತ್ರಕತೆ ಬರೆದು ನಿರ್ದೇಶನದ ಜತೆಗೆ ನಿರ್ಮಾಣದ ಹೊಣೆಯನ್ನೂ ವಹಿಸಿಕೊಂಡಿದ್ದಾರೆ. ಚಿತ್ರದ ಕತಾಹಂದರದ ಬಗ್ಗೆ ಮಾತನಾಡುವ ಪ್ರಸನ್ನ ಕುಮಾರ್, ‘ಮನುಷ್ಯನ ಮನಸ್ಥಿತಿ ಮೇಲೆ ಇಡೀ ಚಿತ್ರ ಸಾಗುತ್ತದೆ. ಮಾನಸಿಕ ದೌರ್ಬಲ್ಯ ಇರುವ ಜೀವನದಲ್ಲಿ ಒಂದಷ್ಟು ಘಟನೆಗಳು ನಡೆಯುತ್ತವೆ. ಆಗ ಅವನ ಮನಸ್ಸಿನಲ್ಲಿ ಏನೇನು ನಡೆಯುತ್ತದೆ. ಆತ ಹೇಗೆ ವರ್ತಿಸುತ್ತಾನೆ ಎಂಬುದರ ಸುತ್ತ ಚಿತ್ರ ಸಾಗುತ್ತದೆ. ಸೈಕಾಲಜಿಯಲ್ಲಿ ಹೇಳಲಾಗುವ ಒಂದು ಫೋಬಿಯಾ ಖಾಯಿಲೆ ಸುತ್ತ ನಡೆಯುವ ಘಟನೆಗಳೆ ಚಿತ್ರದ ಕತಾಹಂದರ’ ಎನ್ನುತ್ತಾರೆ.

‘ಇದೊಂದು ಪ್ರಯೋಗಾತ್ಮಕ ಚಿತ್ರ. ಈ ಚಿತ್ರವನ್ನು ನೋಡುತ್ತಿದ್ದರೆ ಮಕ್ಕಳನ್ನು ಪೋಷಕರು ಹೇಗೆ ನೋಡಿಕೊಳ್ಳುತ್ತಾರೆ ಎಂಬ ವಿಷಯ ಪ್ರಮುಖವಾಗಿ ಗೋಚರಿಸಲಿದ್ದು, ಅಮ್ಮ ಮಗನ ಸೆಂಟಿಮೆಂಟ್ ಇದೆ. ಮನೋರೋಗ ತಜ್ಞರೊಂದಿಗೆ ಸಮಾಲೋಚಿಸಿದ ನಂತರ ಚಿತ್ರದ ಕಥೆ ಬರೆದಿದ್ದು, ಇದರಲ್ಲಿರುವ ಫೋಬಿಯಾದ ಬಗ್ಗೆ ಪ್ರೇಕ್ಷಕರು ತಿಳಿದುಕೊಳ್ಳಬೇಕು. ಎರಡು ಪದರಗಳಿಂದ ಕೂಡಿದ ಕಥೆ ಇದರಲ್ಲಿದೆ. ಮಾನವನ ಮಿದುಳು ಸೀಮಿತ ಕಳೆದುಕೊಂಡಾಗ ಆತನಿಂದ ಏನೇನು ಅನಾಹುತಕಾರಿ ಘಟನೆಗಳು ನಡೆಯುತ್ತದೆ ಎಂಬುದನ್ನು ಇಲ್ಲಿ ಹೇಳುತ್ತಿದ್ದೇವೆ. ಈ ಚಿತ್ರಕ್ಕೆ ಎರಡು ಕ್ಲೈಮ್ಯಾಕ್ಸಗಳಿದೆ. ಚಿತ್ರವನ್ನು ಮೊದಲಿಂದ ನೋಡಿದರೆ ಮಾತ್ರ ಚಿತ್ರ ಅರ್ಥವಾಗುತ್ತದೆ.’ ಎಂಬುದು ನಿರ್ದೇಶಕರ ಮಾತು.

‘ಎಸ್.ವಿ.ಎಂ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಮನೋರಥ’ ಚಿತ್ರದಲ್ಲಿ ರಾಜ್ ಚರಣ್ ನಾಯಕನಾಗಿ ಮತ್ತು ಅಂಜಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಘು, ದಮಯಂತಿ, ವಿಠಲ್ ಭಟ್, ನಾಗೇಂದ್ರ ಮೊದಲಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಚಂದ್ರು ಓಬಯ್ಯ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಮುರಳಿ ಕ್ರಿಶ್ ‘ಮನೋರಥ’ ಚಿತ್ರದ ದೃಶ್ಯಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಚೆಲುವ ಮೂರ್ತಿ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ‘ಒನ್ಸ್ ಅಗೇನ್ ಬುದ್ದಿವಂತರಿಗೆ ಮಾತ್ರ’ ಎಂಬ ಅಡಿಬರವಿರುವ ‘ಮನೋರಥ’ ಚಿತ್ರ ಎಷ್ಟರ ಮಟ್ಟಿಗೆ ಪ್ರೇಕ್ಷಕರ ಮನಗೆಲ್ಲಲಿದೆ ಎಂಬುದು ಇದೇ ವಾರಾಂತ್ಯಕ್ಕೆ ಗೊತ್ತಾಗಲಿದೆ. ಬೆಂಗಳೂರು ಮತ್ತು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.