ವಿಶ್ವವಾಣಿ

ಹಲವೆಡೆ ಒತ್ತಾಯಪೂರ್ವಕ ಬಂದ್, ಬಾಗಲಕೋಟೆಯಲ್ಲಿ ‘ಕೈ’ ಕಿರಿಕ್..!

ಬೆಂಗಳೂರು: ದೇಶದಾದ್ಯಂತ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟಿಸುತ್ತಿದ್ದು, ರಾಜ್ಯದಲ್ಲೂ ಬಂದ್ ಬಿಸಿ ತಟ್ಟಿದೆ. ಆದರೆ ಕೆಲವೆಡೆ ಕಲ್ಲುತೂರಾಟ, ಹೊಡೆದಾಟ, ಬಲವಂತವಾಗಿ ಅಂಗಡಿ-ಮುಂಗಟ್ಟು ಬಂದ್ ಮಾಡಿಸಿದಂತಹ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯಲ್ಲಿ ಬಂದ್‍ಗೆ ಬೆಂಬಲ ನೀಡದ್ದಕ್ಕೆ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪರಿಣಾಮ ಕಾರು ಜಖಂಗೊಂಡಿರುವ ಘಟನೆ ನಡೆದಿದೆ. ಅತ್ತ ಯಾದಗಿರಿಯಲ್ಲೂ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಕೂಡ ಬಲವಂತವಾಗಿ ಅಂಗಡಿಗಳನ್ನು ಮುಚ್ಚಲಾಗಿದೆ.

ಇನ್ನು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಫುಟ್‍ಪಾತ್ ವ್ಯಾಪಾರಿಗಳ ಮೇಲೆ ದರ್ಪ ಮೆರೆದಿದ್ದಾರೆ ಎನ್ನಲಾಗಿದೆ. ಬಂದ್ ನೆಪದಲ್ಲಿ ವ್ಯಾಪಾರಿಗಳ ಮೇಲೆ ಕಾರ್ಯಕರ್ತರು ಕಿರಿಕ್ ಮಾಡಿದ್ದು, ಹಣ್ಣಿನ ಬುಟ್ಟಿಗಳಿಗೆ ಸೈಕಲ್ ಮೂಲಕ ಡಿಕ್ಕಿ ಹೊಡೆಸಿ ದುರ್ವರ್ತನೆ ತೋರಿದ್ದಾರೆ. ಇದರಿಂದ ಬೆದರಿದ ಮಹಿಳಾ ವ್ಯಾಪಾರಿಗಳು ತಮ್ಮ ಹಣ್ಣಿನ ಬುಟ್ಟಿ ಹೊತ್ತು ಸಾಗಿದ್ದಾರೆ.