About Us Advertise with us Be a Reporter E-Paper

ಸಿನಿಮಾಸ್

ಮಾನ್ಯ: ಎಂಥವರನ್ನು ಮಂತ್ರಮುಗ್ಧಗೊಳಿಸುವ ಅಭಿಜಾತೆ!

ಬಿ.ಗಣಪತಿ

ನಗೆ ಕೆಲವು ಮಕ್ಕಳನ್ನು ನೋಡಿದಾಗ ಬೆರಗು, ಅಚ್ಚರಿ, ವಿಸ್ಮಯ ಅನಿಸುತ್ತದೆ. ಜತೆಗೆ ನಾವೆಲ್ಲಾ ನಮ್ಮ ನಮ್ಮ ಬಾಲ್ಯವನ್ನು ಇಂದಿನ ಮಕ್ಕಳಂತೆ ಬಹುಮುಖಿಯಾಗಿ ಬಳಸಿಕೊಂಡಿಲ್ಲ, ಬೆಳೆಸಿಕೊಂಡಿಲ್ಲ. ಏಕಮುಖಿಯಾಗಿ ನಮ್ಮ ಶಕ್ತಿ, ಸಾಮರ್ಥ್ಯವನ್ನು ನಾವೇ ಕಂಡುಕೊಳ್ಳುವಲ್ಲಿ ಸೋತೆವೇನೋ ಅಂತಲೇ ಕಾಡುತ್ತದೆ. ನಮ್ಮ ಸಿನಿಮಾ ರಂಗದಲ್ಲಿ ಬಹಳಷ್ಟು ಬಾಲಕಲಾವಿದರು ಬಂದು ಹೋಗುತ್ತಾರೆ. ಬೇಬಿ ಇಂದಿರಾ, ಬೇಬಿ ರೇಖಾ, ಬೇಬಿ ಶ್ಯಾಮಿಲಿಯಂಥವರು ಅವರ ಬಾಲ್ಯ ಮುಗಿದು ಪ್ರೌಢಕ್ಕೆ ಬಂದರೂ, ನಾಯಕಿಯರಾಗಿ ತಂತಮ್ಮ ಅಭಿವ್ಯಕ್ತಿಯ ಮೂಲಕ ನೆಲೆ ಊರಿದಾಗಲೂ ಸ್ಮೃತಿಯಲ್ಲಿ ಅಚ್ಚೊತ್ತಿರುವುದು ಅವರ ಬಾಲಾಭಿವ್ಯಕ್ತಿಯ ಲೀಲೆಗಳೇ. ಆ ಪುಟ್ಟ ವಯಸ್ಸಿನಲ್ಲೂ ಕಥೆ, ಚಿತ್ರಕಥೆ, ಅದರ ಆಂತರ್ಯದ ಭಾವಸೂಕ್ಷ್ಮಗಳನ್ನು ಅರಿತು ಅಭಿನಯಿಸುವುದಿದೆಯಲ್ಲ ಅದು ಹುಡುಗಾಟವೇ? ಅದ್ಭುತ ಅಂತ ಅನಿಸದೇ? ನಿಜಕ್ಕಾದರೆ ಇವರು, ಇಂಥ ಪ್ರತಿಭೆಗಳೇ ಹುಟ್ಟು ಪ್ರತಿಭೆಗಳು. ಈ ಸಾಲಿನಲ್ಲಿ ನನ್ನ ಕಣ್ಣಿಗೆ ಬಿದ್ದ ಪೋರಿ ಬೇಬಿ ಮಾನ್ಯ.

ನಾನು ಈ ಪುಟ್ಟ ಬಾಲೆಯ ಚುರುಕುತನ, ಗ್ರಹಿಸುವಿಕೆ, ಭಾವನೆಗಳನ್ನು ತತ್‌ಕ್ಷಣ ಪಡಿಮೂಡಿಸುವ ಕಲೆ, ಪಾತ್ರಗಳನ್ನ ಅರ್ಥೈಸಿಕೊಳ್ಳುವ ಜಾಣ್ಮೆ, ಕ್ಷಣಾರ್ಧದಲ್ಲಿ ನಿರ್ದೇಶಕರು ನಿರೀಕ್ಷೆ ಮಾಡುವ ರಸಗಳನ್ನ ಹೊಮ್ಮಿಸುವ ಬಗೆ ಕಂಡು ದಂಗಾಗಿದ್ದೇನೆ. ಕಾರಣ ಬೇಬಿ ಮಾನ್ಯ ಇನ್ನೂ ಆರನೇ ಕ್ಲಾಸಿನ ಚಕೋರಿ. ಹನ್ನೊಂದರ ಹರೆಯ. ಈಗಾಗಲೇ ಕನ್ನಡ ಧಾರಾವಾಹಿ ಪ್ರಪಂಚದಲ್ಲಿ, ಚಿತ್ರರಂಗದಲ್ಲಿ ತನ್ನದೇ ಆದ ಪ್ರತಿಭೆ, ಅಭಿವ್ಯಕ್ತಿಯ ಶಿಲ್ಪವನ್ನು ದಾಖಲಿಸಿದವಳು. ‘ಗೀತಾಂಜಲಿ’ ಧಾರಾವಾಹಿ, ‘ದಂಡುಪಾಳ್ಯ-3’, ‘ಸಂದಿಗ್ಧ’ ಚಿತ್ರಗಳಲ್ಲಿ ಹೆಸರು ಮಾಡಿದವಳು. ‘ಸಿಗ್ನೇಚರ್’, ‘ಪ್ರೊಡಕ್ಷನ್ ನಂ.-26’ ಮತ್ತು ಶಿವಣ್ಣ ಹಾಗೂ ಪ್ರಜ್ವಲ್ ದೇವರಾಜ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾಳೆ. ಮುಂದಿನ ತಿಂಗಳು ಮಾನ್ಯಳ ತಂದೆ ಭಾಸ್ಕರ್ ಪೂಜಾರಿ ಅವರದ್ದೇ ಎರಡನೇ ಪ್ರೊಡಕ್ಷನ್ನಿನಲ್ಲಿ ಬಾಲನಾಯಕಿ ಯಾಗಿಯೂ ಪ್ರಮೋಷನ್ ಹೊಂದಲಿದ್ದಾಳೆ.

ಹದವಾದ ಎತ್ತರ, ಗೋಧಿ ಬಣ್ಣ, ದುಂಡು ಮುಖ, ಚುರುಕು, ಚೂಟಿ ಅಷ್ಟೇ ಕಣ್ಣುಗಳು, ಕಂಡರೆ ಮೌನಿ, ಮಾತಿಗಿಳಿದರೆ ಚಿನಕುರುಳಿ. ಅಗಾಧವಾದ ಫೋಟೋಜೆನಿಕ್. ಸಹಜವಾಗಿ ಕಂಡಾಗ ಮಾಮೂಲಿ ಬಾಲಕಿಯಾಗಿ ಕಾಣುವ ಮಾನ್ಯ, ಕ್ಯಾಮರಾ ಕಣ್ಣಿನಲ್ಲಿ ಆಕೃತಿಗೊಳ್ಳುವ ರೀತಿ ಅಚ್ಚರಿ ಮೂಡಿಸುತ್ತದೆ. ಒಬ್ಬ ಕಲಾವಿದೆ, ಕಲಾವಿದನಿಗೆ ವರವಾಗಿ ಸಲ್ಲಬೇಕಾದದ್ದೂ ಇದೇ. ಅದು ಮಾನ್ಯಳಿಗೆ ದೈವದತ್ತ.

ಈ ಮಾನ್ಯಳನ್ನ ಕಂಡಾಗ ನನಗೆ ನನ್ನ ಬಾಲ್ಯವೆಲ್ಲ ಬರಿದೇ ಬರಿದು ಅನ್ನಿಸಿದ್ದು. ಇಷ್ಟು ಚಿಕ್ಕ ಟಪೋರಿ, ತಾನು ಓದುವ ವಿಜಯನಗರ ‘ಬೆಂಗಳೂರು ಸೆಂಟರ್ ಸ್ಕೂಲ್’ನಲ್ಲಿ ಕ್ಲಾಸಿಗೇ ಫಸ್‌ಟ್. ಪ್ರಿನ್ಸಿಪಾಲ್ ಪ್ರಸಾದ್ ಶೆಟ್ಟಿ ಅವರ ಮುದ್ದಿನ ವಿದ್ಯಾರ್ಥಿ. ಹರ್ಷಕುಮಾರ್ ಕ್ಲಾಸ್ ಟೀಚರ್ ಅವರ ಪೆಟ್ ಸ್ಟುಡೆಂಟ್. ಭರತನಾಟ್ಯ, ಯಕ್ಷಗಾನ ಕಲಿಕೆಕರಗತ. ಫಿಲ್‌ಮ್ ನೃತ್ಯಕ್ಕೆ ವಯಸ್ಸಿಗೆ ಮೀರಿದ ಹೆಜ್ಜೆ ಹಾಕುತ್ತಾಳೆ. ಬುದ್ಧಿವಂತೆ. ಯೋಗ ಕಲಿಯುವ ಹುರುಪು. ಹೀಗೆ ಅಭಿನಯ, ಓದು, ಹವ್ಯಾಸ ಜತೆಗೆ ಹೆತ್ತವರ ಸುಖದುಃಖಗಳ ಬಗ್ಗೆ ಈಗಲೇ ಕಾಳಜಿ. ಏಕಕಾಲದಲ್ಲಿ ಅದೆಷ್ಟು ರೂಪ. ಅದೆಂತಹ ಎನರ್ಜಿ. ನಗುಮೊಗದ ಮಾನ್ಯ ಇಂದಿನ ಅವಳ ತಲೆಮಾರಿಗೆ ಸ್ಪೂರ್ತಿ, ಮಾದರಿ. ಮಕ್ಕಳೆಂದರೆ ಹೀಗೆ ಇರಬೇಕು, ಪುಟಾಣಿ.

ಮಾನ್ಯ ಭಾಸ್ಕರ್ ಪೂಜಾರಿ, ಪೂರ್ಣಿಮಾ ಪೂಜಾರಿ ಅವರ ಎರಡನೇ ಮಗಳು. ಮೊದಲ ಮಗ ಮಂಜುನಾಥ. ಭಾಸ್ಕರ್ ಪೂಜಾರಿ ಅವರು ಮೂಲತಃ ಕುಂದಾಪುರದ ಕೊರಾಡಿಯವರು. ಹೊಟೇಲ್ ಉದ್ಯಮಿಯಾಗಿ ಬೆಳಗಾವಿಯಲ್ಲಿ, ಬೆಂಗಳೂರಿನಲ್ಲಿ ಹೆಚ್ಚು ಕಮ್ಮಿ ಎರಡು ದಶಕ ದುಡಿದ ಇವರು, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಲ್ಲಿ ನೌಕರರಾಗಿದ್ದವರು. ಕೆಲಸಕ್ಕೆ ರಾಜಿನಾಮೆ ಕೊಟ್ಟು ಬಿಜಿನೆಸ್‌ಗೆ ಇಳಿದವರು. ಕನ್ನಡ ರಕ್ಷಣಾ ವೇದಿಕೆಯ ಧುರೀಣರೂ ಕೂಡ. ಹಂಬಲಿಗ. ಕನಸುಗಾರ. ಜೀವನದ ಪಯಣದಲ್ಲಿ ಹಲವು ಏರಿಳಿತ ಕಂಡ ಈಗ ಮಗಳ ಅಭಿನಯದ ಒತ್ತಾಸೆಗೆ ಸ್ವತಃ ಚಿತ್ರನಿರ್ಮಾಣಕ್ಕೂ ಕೈಹಾಕಿದವರು. ‘ಸಿಗ್ನೇಚರ್’ ಎಂಬ ಸಿನಿಮಾಕ್ಕೆ ಪತ್ನಿ ಪೂರ್ಣಿಮಾ ನೇತೃತ್ವದಲ್ಲಿ 2 ಕೋಟಿಯ ಬಂಡವಾಳಕ್ಕೆ ಅದ್ವೈರ್ಯ ವಹಿಸಿದ್ದಾರೆ. ಶೇ.70 ರಷ್ಟು ಚಿತ್ರೀಕರಣ ನಡೆದು ಮುಂದುವರೆದಿದೆ. ಪೋಸ್‌ಟ್ ಪ್ರೊಡಕ್ಷನ್ ಹಂತದಲ್ಲೇ ಶರಣ್, ದೊಡ್ಡ ರಂಗೇಗೌಡರಂಥವರ ಮೆಚ್ಚುಗೆ, ಹಿಂದಿಗೆ ರೈಟ್‌ಸ್, ಟಿವಿಗೆ ಒಳ್ಳೆ ಆಫರ್ ಪಡಕೊಂಡವರು. ‘ಸಿಗ್ನೇಚರ್’ ಗುರು ಮದ್ಲೇಸರ ಅವರ ಪ್ರಥಮ ನಿರ್ದೇಶನದ ಚಿತ್ರ. ಕಥೆ ಭಾಸ್ಕರ್ ಪೂಜಾರಿ ಅವರದೇ. ವಿಜಯ್ ನಾಯಕ. ನಾಯಕಿ. ವಿ.ಮನೋಹರ್ ಅಪರೂಪದ ಹಾಡುಗಳನ್ನು ನೀಡಿದ್ದಾರೆ.

ಮಗಳ ಆಸಕ್ತಿಗಾಗೇ ನಿರ್ಮಾಪಕನಾದೆ. ಅವಳ ಭವಿಷ್ಯ ಬಣ್ಣದ ನೆಲದಲ್ಲೇ ಇದೆ ಅಂತ ಅನ್ನಿಸಿದೆ. ಓದು, ನೃತ್ಯ, ಗ್ರಾಸ್ಪಿಂಗ್ ಎಲ್ಲದರಲ್ಲೂ ಮೊದಲ ಸ್ಥಾನದಲ್ಲಿದ್ದಾಳೆ. ‘ಬೆಂಗಳೂರು ಸೆಂಟರ್ ಸ್ಕೂಲಿ’ನವರ ಸಹಕಾರ, ಪ್ರೀತಿ ಬೆಲೆ ಕಟ್ಟಲಾಗದ್ದು. ಅವಳು ಸ್ಕೂಲಿಗೆ ಹೋಗದಿದ್ದಾಗ ವಾಟ್‌ಸ್ಆ್ಯಪ್ ಮೂಲಕ ನೋಟ್‌ಸ್, ಹೋಮ್‌ವರ್ಕ್ ಕಳಿಸುತ್ತಾರೆ. ಹಿಂದಿನ ಪ್ರಿನ್ಸಿಪಾಲ್ ಡಾ ಪ್ರಸಾದ್ ಶೆಟ್ಟಿ, ಈಗಿನ ಪ್ರಿನ್ಸಿಪಾಲ್ ಸೀಮಾ ಪ್ರಸಾದ್ ಶೆಟ್ಟಿ, ಕ್ಲಾಸ್ ಟೀಚರ್ ಹರ್ಷಕುಮಾರ್ ಬೆಂಬಲವೇ ಮಾನ್ಯ ಓದು, ಅಭಿನಯ ಎರಡರಲ್ಲೂ ನಂಬರ್ ಒನ್ ಅನ್ನುವಂತೆ ಮುಂದು ವರೆಯಲು ಸಾಧ್ಯವಾಗಿದೆ. ಇಂಡಸ್ಟ್ರಿಯಲ್ಲಿ ಎಲ್ಲರೂ ಪ್ರೀತಿಸುತ್ತಾರೆ. ಮಾಧ್ಯ ಮದವರೂ ಅಕ್ಕರೆ ತೋರಿದ್ದಾರೆ. ಕಷ್ಟವೋ, ಸುಖವೋ ಮಗಳಿಗಾಗಿ ಸಿನಿಮಾ ರಂಗದಲ್ಲೇ ಮುಂದುವರೆಯಲು ತೀರ್ಮಾನಿಸಿದ್ದೇವೆ’ ಎಂದು ಪೂಜಾರಿ ದಂಪತಿ ನುಡಿಯುತ್ತಾರೆ. ಮಾನ್ಯಳಿಗೆ ಭವಿಷ್ಯವಿದೆ. ವರ್ತಮಾನದಲ್ಲಿ ಬಾಲ ಕಲಾವಿದೆಯಾಗಿ ಪ್ರಜ್ವಲಿಸುತ್ತಿರುವ ಮಾನ್ಯಳಿಗೆ ಅವಕಾಶಗಳು ಹುಡುಕಿ ಬರುತ್ತಿವೆ. ಅವಳು ಬಹು ಬೇಡಿಕೆಯ ಬಾಲನಟಿ. ಪ್ರಾಯಶಃ ಮುಂದೆ ನಾಯಕಿಯಾಗಿಯೂ ತನ್ನ ಪ್ರತಿಭೆಯನ್ನು ಪ್ರೂವ್ ಸಾಧ್ಯತೆ ನಿಚ್ಚಳ. ಕರಾವಳಿಯ ಉಪ್ಪು ನೀರಲಿ ರುಚಿಯೂ ಜಾಸ್ತಿ, ಹಟವೂ ಹೆಚ್ಚು. ಅಂದುಕೊಂಡದ್ದನ್ನು ಸಾಧಿಸುವ ಛಲವೂ ನಿರಂತರ. ಜಯಮಾಲಾ, ರಾಧಿಕಾ ನಡೆದ ದಾರಿಯಲ್ಲಿ ಪೂಜಾರಿ ಜನಾಂಗದ ಕಿರುಮೊಗ್ಗು ಮಾನ್ಯ ನಿರೀಕ್ಷೆ ಮೀರಿ ಬೆಳಗಲಿ ಅನ್ನುವುದು ನನ್ನ ಹಾರೈಕೆ.

Tags

Related Articles

Leave a Reply

Your email address will not be published. Required fields are marked *

Language
Close