About Us Advertise with us Be a Reporter E-Paper

ಅಂಕಣಗಳುಗುರು

ಮಠ-ಮಾನ್ಯಗಳು ಶಿಕ್ಷಣದ ಹೆಸರಿನಲ್ಲಿ ವ್ಯವಹಾರ ನಡೆಸಬಾರದು, ಹಣ ಸಂಗ್ರಹ ನಿಷೇಧಿಸಲ್ಪಡಬೇಕು

ಶ್ರೀ ಯದುಗಿರಿ ಯತಿರಾಜ್ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ

ದೇವರು, ಧರ್ಮ, ಜಾತಿ, ಪಂಗಡಗಳ ಹೆಸರಿನಲ್ಲಿ ಒಡೆದು ಹೋದ ಸಮಾಜವನ್ನು, ಸಂಸ್ಕೃತಿಯನ್ನು ಒಗ್ಗೂಡಿಸುವ, ಒಂದಾಗಿ ಸುವ ಕೆಲಸಕ್ಕೆ ಮಠ, ಮಾನ್ಯಗಳು ಟೊಂಕ ಕಟ್ಟಬೇಕಾಗಿ ದ್ದವು. ಸಮಾಜವನ್ನ ಮಾನವೀಯ ತಳಹದಿಯ ಮೇಲೆ ಕಟ್ಟುವ ಕೈಂಕರ್ಯಕ್ಕೆ ಕಟಿ ಬದ್ಧರಾಗ ಬೇಕಿತ್ತು. ಐಹಿಕ, ಲೌಕಿಕ, ಭೋಗಗಳಿಂದ ದೂರ ನಿಂತು ಸರಳ, ಸಹಜ, ಸುಂದರ ಸಮಾಜದ ನಿರೂಪಣೆಗೆ ಮುಂದಾಳುತ್ವ ವಹಿಸಬೇಕಿತ್ತು. ಇಹ ಮತ್ತು ಪರದ ಮಧ್ಯೆಯ ಸಾರ್ಥಕ ಬದುಕಿನ ಪಾಠ, ಪಾಠಶಾಲೆಮಠ, ಮಠಾಧಿಪತಿಗಳಾಗಬೇಕಿತ್ತು. ಭವದಲ್ಲಿದ್ದೂ ಭವದ ಬಂಧನವನ್ನ ಆ ಬಿಡುಗಡೆಯ ಅಹಲ್ಲಾದಕತೆ ಯಲ್ಲಿ ಬದುಕುವ ಸೌಂದರ್ಯದ, ರುಚಿಸ್ವಾದದ ಕಡೆ ಇಡಿಯ ಮಾನವ ಕುಲ ಮುಖ ಮಾಡುವ ಮಹಾ ಅಭಿಯಾನಕ್ಕೆ ಮಠ, ಮಠಾಧೀಶರುಗಳು ‘ಸಂಸ್ಕಾರ ಶೀಲ’ ಚಳವಳಕ್ಕೆ ಸ್ವತಃ ತಾವೇ ಮಾದರಿ ಆಗಬೇಕಿತ್ತು. ತ್ಯಾಗ, ತ್ಯಜಿಸುವಿಕೆ, ನಿರ್ವ್ಯಾಮೋಹ, ಬರಿದು ಗೊಳ್ಳುವಿಕೆ, ಬಯಲಾಗುವಿಕೆ ಗಳನ್ನೇ ‘ವೃತ’ವಾಗಿಸಿಕೊಳ್ಳಬೇಕಾದ ಸ್ವಾಮೀಜಿಗಳು ಮೋಹ, ಲೋಭ, ಮದ, ಮತ್ಸರ ದಂತಹ ಅರಿಷಡ್‌ವೈರಿಗಳ ಸ್ನೇಹಿತರಾಗುತ್ತಿದ್ದಾರೆ. ಅವರೇ ಜಾತಿ, ಮತ, ಧರ್ಮ, ಪಂಗಡ ಗಳ ಜನಕರೂ, ಪೋಷಕರೂ, ಪ್ರೇರಕರೂ ರಾಜಕೀಯ, ಮಠ, ಮಠಾಧಿಪತಿ ಗಳಿಗೆ ನಿಷಿದ್ಧ ಎಂದರೆ ‘ಅದೇ ನಮ್ಮ ಕಸುಬು’ ಅನ್ನುವಂತೆ ಸ್ವಭಾವವಾಗಿಸಿಕೊಂಡಿದ್ದಾರೆ. ಸಮ್ಮಿಶ್ರ ಸರಕಾರದ ವಕ್ತಾರಿಕೆಯನ್ನ, ಉಳಿಸುವಿಕೆಯನ್ನ ದೇವರು, ಧರ್ಮ ಬಳಸಿ ಭಾವನಾತ್ಮಕವಾಗಿ, ಹೈಜಾಕ್ ಮಾಡುವ ತಂತ್ರವನ್ನ ಹೈಟೆಕ್ ಆಗಿ ಕಳೆದ ಮೂರು ದಿನಗಳ ಹಿಂದೆ ಸಮಾಜದ ಘೋಷಿತ ಯಂಗ್ ಸ್ವಾಮೀಜಿಯೊಬ್ಬರು ನೇರ ನಿರ್ವಹಿಸಿದ್ದು ಸಾತ್ವಿಕ ಸಮಾಜವನ್ನ ಬೆಚ್ಚಿ ಬೀಳಿಸಿದೆ. ಬಿಡ ಬೇಕಾದವರು ಹಿಡಿದುಕೊಳ್ಳುತ್ತಿದ್ದಾರೆ. ಪರಿತ್ಯಾಗಿ ಗಳುಪರಮ ಸ್ವಾರ್ಥಿಗಳು, ಪಕ್ಷಪಾತಿ ಗಳು, ವ್ಯಾವಹಾರಿಕರೂ ಆಗುತ್ತಿದ್ದಾರೆ. ಇಂಥ ನನ್ನ ಅನುಭವ, ಒಡ ನಾಟ, ಒಬ್ಬ ಪತ್ರಕರ್ತನಾಗಿ ನನ್ನ ಪಯಣದಲ್ಲಿ ಒಬ್ಬ ನಿಸ್ವಾರ್ಥಿ, ನಿಜ ಜಂಗಮ, ಸಮೂಹ ನಿಷ್ಠ, ಭವದ ಎಲ್ಲಾ ಹರಿಹಂಗುಗಳ ತೊರೆದು ಮಾನವ ಸಮಾಜದ ಉನ್ನತಿ, ಸೇವಾಮನೋಭಾವದ ಅನ್ವರ್ಥಿ, ಸನ್ಯಾಸ ಧರ್ಮದ ನಿಜ ಪಾರಿಪಾಲಕ, ಸರಳ, ಸಾತ್ವಿಕ ಸ್ವಾಮೀಜಿಗಳನ್ನ ಕಂಡೆ. ಮಠ, ಪೀಠಾಧಿಪತಿ ಮತ್ತು ಮಠದ ಪರಿಸರ, ಪರ್ಯಾವರಣ ಹೇಗಿರಬೇಕು ಅನ್ನುವುದಕ್ಕೆ ಇವರು ತೋರು ಬೆರಳಾಗಿದ್ದಾರೆ. ಅನುಷ್ಠಾನ ಪ್ರಜ್ಞೆ ಸಾಕ್ಷಾತ್ ಇವರಲ್ಲಿ ಎರಕಗೊಂಡಿದೆ. ‘ಮುಷ್ಠಿಭಿಕ್ಷ’ ಪರಿಪಾಲಕ. ಸಂಗ್ರಹ ನನಗೆ ನಿಷಿದ್ಧ’ ಎಂದೇ ಬದುಕಿದ ಸೇವಾದುರಂಧರರು. ಮನುಕುಲಕ್ಕೆ ಅರಿವಿನ ಶಿಕ್ಷಣದ ಅಗತ್ಯವಿದೆ. ಶಿಕ್ಷಣದ ಹೆಸರಿನಲ್ಲಿ ದಂಧೆ, ವ್ಯವಹಾರ, ಹಣ ಸಂಗ್ರಹದ ವಾಂಛೆ ಯನ್ನ ಮಠಮಾನ್ಯಗಳಿಂದ ಕಿತ್ತೊಗೆಯುವ ಅಭಿಯಾನದ ಜರೂರತ್ತಿದೆ ಎಂದೇ ಬದುಕಿದ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿಗಳು ಇಂದಿನ ‘ಸ್ವಾಮೀಜಿ’ಗಳಲ್ಲೇ ಅತಿ ವಿಶಿಷ್ಟರು. ತೇಜೋಪೂರ್ಣರು. ಅನುಷ್ಠಾನ ನಿಷ್ಠರು. ಸಮೂಹ ನಿಷ್ಠರು. ಸರಳರು. ಅವರ ಅನುಭವ, ಅನುಭಾವ ಪ್ರಜ್ಞೆ ಮತ್ತು ಮಠ ಮಾನ್ಯಗಳ ಅಲಂಕಾರ, ಆಡಂಬರ ಹಾಗೇ ಮಡಿಭ್ರಷ್ಟಾಚಾರಹುಸಿಗಳ ಭದ್ರ ಕೋಟೆಗಳನ್ನ ಕೆಡಹಿ ಬಟ್ಟಂಬಯಲಲ್ಲಿ ಕುಳಿತ ಯೋಗಿ. ಕಂಡರೆ ಸಾಕ್ಷಾತ್ ಗುರುರಾಯರ ತದ್‌ರೂಪಿಯಂತೇ ಕಂಗೊಳಿಸುವ ಶ್ರೀ ಯತಿರಾಜ ಜೀಯರ್ ಪ್ರಚಾರಕ್ಕಿಲ್ಲದ ಪರಿವ್ರಾಜಕರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸುಖ, ಸಮೃದ್ಧಿ, ಶಾಂತಿ, ಸಹಬಾಳ್ವೆ ದಕ್ಕಬೇಕು ಎಂಬ ನಿಜವಾದ ಧ್ಯೇಯೋದ್ದೇಶ, ಕಾಳಜಿ, ಕಳಕಳಿ ಹೊಂದಿದ ತಪೋನಿಷ್ಠರು. ಕಾಯಕ ತತ್ವ ಪ್ರತಿಪಾದಕರು. ಸ್ವಾಮೀಜಿ ಅಂದರೆ ಹೀಗಿರಬೇಕು ಎಂದು ಯಾರಿಗೂ ಅನ್ನಿಸ ಬಹುದಾದ ಶ್ರೀ ಯದುಗಿರಿ ಯತಿರಾಜ ನಾರಾಯಣ ಜೀಯರ್ ಅವರ ಚಾತುರ್ಮಾಸ್ಯ ಸಮಾಪ್ತಿಗೊಳ್ಳುವ ಈ ಶುಭಾವಸರದಲ್ಲಿ ‘ವಿಶ್ಚವಾಣಿ’ ವಿಶೇಷ ಸಂದರ್ಶನ ನಿಮಗಾಗಿ

ವಿಶ್ವವಾಣಿ: ಸ್ವಾಮೀಜಿಗಳೇ, ಸ್ವಾಮಿ ರಾಮಾನುಜಾಚಾರ್ಯರ ಕೃಪೆ, ಕಟಾಕ್ಷ, ಸಾಮಾಜಿಕ ಸಮಾನತೆಯ ದಿವ್ಯ ಪರಂಪರೆಯಾದ ಶ್ರೀ ಯದುಗಿರಿ ಯತಿರಾಜ ಮಠದ ಪೂರ್ವ ವೃತ್ತಾಂತದ ಸಹಿತ, ತಾವು ಪಟ್ಟವೇರಿದ ಕ್ಷಣಗಳವರೆಗಿನ ಸ್ಥೂಲ ನೋಟಗಳನ್ನ ತಾವು ನೀಡಬಹುದೇ?

ಸ್ವಾಮೀಜಿ: ಅವಶ್ಯವಾಗಿ. ಈ ಮಠದ ಹುಟ್ಟು ಅದರ ಆಶಯ, ಸರ್ವಸಮಾನ ಸಾಮಾಜಿಕ ವ್ಯವಸ್ಥೆಯ ಪರಿಕಲ್ಪನೆಯೇ ಅಸ್ತಿವಾರ. ಶ್ರೀ ರಾಮಾನುಜರ ಬಹು ಕನಸು ಮತ್ತು ಭವಿಷ್ಯದ ನಿರೀಕ್ಷೆಯ ಸಾಕಾರ ಸ್ವರೂಪವೇ ಯದುಗಿರಿ ಯತಿರಾಜ ಮಠ.

ಸ್ವಾಮಿ ರಾಮಾನುಜರು ತಮಿಳುನಾಡಿನಿಂದ ಕರ್ನಾಟಕಕ್ಕೆ ಬರಬೇಕಾಗತ್ತೆ. ಅಂದಿನ ಆ ಪರಿಸ್ಥಿತಿಯಲ್ಲಿ ಅಲ್ಲಿ ಇರಲಿಕ್ಕಾಗಲಿಲ್ಲ ಅವರಿಗೆ. ಕರ್ನಾಟಕ ಇರುವುದ ರಲ್ಲಿ ಸುರಕ್ಷಿತ ಎಂದೆನಿಸಿ ನಾಲ್ಕೈದು ಶಿಷ್ಯರೊಡನೆ ಪಾದಯಾತ್ರೆ ಆರಂಭಿಸುತ್ತಾರೆ. ಮೊಟ್ಟ ಮೊದಲು ಅವರು ಬಂದಿದ್ದು ಸಾಲಿಗ್ರಾಮ, ರಾಮನಾಥಪುರ. ಅಲ್ಲಿಂದ ತೊಂಡನೂರಿಗೆ ಬರ್ತಾರೆ. ಅಲ್ಲಿ ಆಗ ಬಿಟ್ಟೆದೇವ ರಾಜ್ಯಭಾರ ಮಾಡ್ತಿರ್ತಾನೆ. ಅವನ ಮಗಳಿಗೆ ಏನೋ ಮಾನಸಿಕ ಕಾಯಿಲೆ ಆಗಿ ಗುಣ ಪಡಿಸಕ್ಕೆ ಆಗದೆ ಬಹಳ ನೊಂದಿರುತ್ತಾರೆ. ಆಗ ಅಲ್ಲಿಗೆ ರಾಮಾನುಜರು ಬರುತ್ತಾರೆ. ತೊಂಡನೂರು ನಂದಿ ಹೆಸರಿನ ಆಸ್ಥಾನದಲ್ಲಿದ್ದ ಶಿಷ್ಯ, ಅವನಿಗೆ ತಮ್ಮ ಗುರುಗಳು ತಮಿಳುನಾಡಿನಿಂದ ಬಂದಿದ್ದಾರೆ. ಅವರು ಈ ಕಾಯಿಲೆಯನ್ನ ಗುಣಪಡಿಸಬಹುದು, ಅವರನ್ನ ಕರೆದು ಕೊಂಡು ಬರಲಾ? ಅಂತ ಅರಸ ಬಿಟ್ಟಿದೇವರಲ್ಲಿ ಕೇಳ್ತಾರೆ. ಆಮೇಲೆ ರಾಮಾನುಜರು ಅರಮನೆ ಪ್ರವೇಶ ಮಾಡಿದ ಕ್ಷಣದಿಂದಲೇ ಅವಳ ಬುದ್ಧಿಭ್ರಮಣೆ ಕಡಿಮೆಯಾಗಿ, ಅವರ ದರ್ಶನ ಮಾಡಿ, ಶ್ರೀಪಾದರ ತೀರ್ಥ ತೆಗೆದುಕೊಂಡ ಮೇಲೆ ಪೂರ್ಣ ಗುಣವಾಗುತ್ತದೆ. ಬಿಟ್ಟಿದೇವ ಪ್ರಭಾವಿತನಾಗ್ತಾನೆ. ರಾಮಾನುಜರ ಶಿಷ್ಯ ನಾಗ್ತಾನೆ. ಆಗ ಅವರು ಅವನಿಗೆ ವಿಷ್ಣುವರ್ಧನ ಅಂತ ಮರುನಾಮಕರಣ ಮಾಡು ತ್ತಾರೆ. ಅಲ್ಲಿಂದ ಅವರ ಯಾತ್ರೆ ಶುರುವಾಗುತ್ತೆ. ಕರ್ನಾಟಕದಲ್ಲಿ ಪಂಚನಾರಾಯಣ ಕ್ಷೇತ್ರಗಳನ್ನ ಸ್ಥಾಪನೆ ಮಾಡ್ತಾರೆ. ಮೊಟ್ಟ ಮೊದಲ ದೇವಸ್ಥಾನ ಅಂದರೆ ತೊಂಡನೂರ ನಂಬಿ ನಾರಾಯಣ ದೇವಸ್ಥಾನ. ಅಲ್ಲಿದ್ದಾಗಲೆ ಅವರಿಗೊಂದು ಕನಸು ಬೀಳತ್ತೆ. ಹತ್ತಿರದಲ್ಲೆ, ಯಾದವಗಿರಿ ಎನ್ನುವ ಊರಿದೆ. ಇಲ್ಲಿ ಹುತ್ತದಲ್ಲಿ ಭಗವಂತ, ನಾನಿ ದ್ದೀನಿ. ನೀನು ಬಂದು ಹುತ್ತ ಕರಗಿಸಿ ನನ್ನನ್ನ ಎಲ್ಲರಿಗೂ ಅಂತ. ಸ್ವಪ್ನ ಆದೇಶದಿಂದ ಪ್ರೇರೇಪಿತರಾಗಿ ಮೇಲುಕೋಟೆಗೆ ಬರ್ತಾರೆ. ಆ ಹುತ್ತವನ್ನು ಅಲ್ಲಿದ್ದ ಕಾಡು ಜನ ದೇವರು ಅಂತ ಪೂಜೆ ಮಾಡ್ತಿರ್ತಾರೆ. ಅವರು ಸಮಾಜದಲ್ಲಿ ಹಿಂದುಳಿ ದವರು. ಅವರ ಪದ್ಧತಿಯಲ್ಲಿ ಆ ಹುತ್ತವನ್ನ ಪೂಜಿಸ್ತಿರ್ತಾರೆ. ಇವರು ಬಂದಿದ್ದು ನೋಡಿ ಅವರಿಗೆ ಆತಂಕವಾಗತ್ತೆ. ಅವರ ಸಹಾಯದಿಂದಲೇ ಹುತ್ತ ಕರಗಿಸಿ, ಅವರಿಗೆ ದೈರ್ಯ ತುಂಬಿ ಇನ್ನು ಮುಂದೆ ನೀವು ಹೀಗಿರಬಾರದು ಅಂತ ಅವರಿಗೊಂದು ಹೊಸ ಹೆಸರು ನೀಡ್ತಾರೆ. ‘ತಿರುಕುಲತ್ತಾರ್’, ಶ್ರೇಷ್ಠ ಕುಲದವರು ಅಂತ. ವರ್ಷಗಳ ಹಿಂದೆ ಹಿಂದುಳಿದವರು, ಹರಿಜನ ಅಂತಿದ್ದವರನ್ನ ಸಮಾಜದ ಒಳಗೆ ಕರೆದು ಪುರಸ್ಕರಿಸಿದ ದೊಡ್ಡ ಕ್ರಾಂತಿಯದು. ಸಮಾಜದ ಆ ಪರಿಸ್ಥಿತಿಯಲ್ಲಿ ಸನ್ಯಾಸಿಯೊಬ್ಬ ಎಲ್ಲಿಂದಲೋ ಎಲ್ಲಿಗೋ ಬಂದು ಹರಿಜನರನ್ನ ದೇವಸ್ಥಾನಕ್ಕೆ ಪ್ರವೇಶ ಮಾಡಿಸ್ತಾರೆ. ಇಂಥ ಕ್ರಾಂತಿಕಾರಕ ಹೆಜ್ಜೆ ಇರಿಸಿದ ಮೊಟ್ಟ ಮೊದಲ ಸನ್ಯಾಸಿ. ಆಗ ಅವರು ಅಲ್ಲಿ ಮಠ ಸ್ಥಾಪಿಸ್ತಾರೆ. ಅದೇ ಈ ಮಠ. ಇಡೀ ಭಾರತದಲ್ಲಿ ರಾಮಾನುಜರಿಂದಲೇ ಸ್ಥಾಪಿತವಾದ ಏಕೈಕ ಮಠ ಎಂದರೆ ಅದು ಇದೊಂದೆ. ದೇವಸ್ಥಾನದ ಮುಂಬಾಗದಲ್ಲಿ ಇದೆ. ವರ್ಷಗಳ ಕಾಲ ಅವರು ಇಲ್ಲೇ ಇದ್ದು ದೇವಸ್ಥಾನದ ಸುಧಾರಣೆ ಮಾಡಿದರು, ಪೂಜೆ ಮಾಡ್ತಿದ್ರು.

ರಾಮಾನುಜರು ಕರ್ನಾಟಕದಲ್ಲಿ ಒಟ್ಟು 31 ವರ್ಷ ಇದ್ದರು. ಅವರು ಪ್ರಾರಂಭ ಮಾಡಿದ ಮಠವಿದು. ಇದರಲ್ಲಿ ಮೊದಲ ಪೀಠಾಧಿಪತಿಗಳು ರಾಮಾನುಜರು, ಅದಾದ ನಂತರ 40 ಸ್ವಾಮಿಗಳು ಪೀಠಾಧಿಪತಿಗಳಾಗಿದ್ದಾರೆ. ನಾವು 41ನೆಯವರು. ಇದು ಗೃಹಸ್ಥಾಶ್ರಮದಿಂದ ಸನ್ಯಾಸಾಶ್ರಮಕ್ಕೆ ಬರುವ ಪದ್ಧತಿಯ ಮಠ. ರಾಮಾನು ಜರಿಗೆ ಸಮಾಜದಲ್ಲಿ ಎಲ್ಲರಿಗೂ ಪ್ರಾತಿನಿಧ್ಯ ಇರಬೇಕು, ಎಲ್ಲರು ಮೋಕ್ಷ ಹೊಂದ ಬೇಕು ಎನ್ನುವುದಿತ್ತು. ತಮ್ಮ ಉಪದೇಶವಾದ ಮಂತ್ರವನ್ನ ಎಲ್ಲರಿಗೂ ಹಂಚಿದರು. ಹಿಂದುಳಿದವರನ್ನ ಮೇಲಕ್ಕೆ ಎತ್ತಿದರು. ದೇವಸ್ಥಾನಗಳನ್ನ ಸುಧಾರಿಸಿ ದರು. ತಿರುಪತಿ ಇರಬಹುದು, ಮೇಲುಕೋಟೆಯಲ್ಲಿ ಎಲ್ಲಾ ಜಾತಿಯವರಿಗೂ ದೇವರ ಸೇವೆ ಮಾಡೋದಕ್ಕೆ ಅವಕಾಶ ಇರಬೇಕು ಎನ್ನುವುದು ಅವರ ದೃಷ್ಟಿ ಯಾಗಿತ್ತು. ಇವತ್ತಿಗೂ ಮೇಲುಕೊಟೆಯಲ್ಲಿ ಭಗವಂತನ ಉತ್ಸವ ಹೊರಟರೆ ಮೊದಲು ಬರುವವನು ಹರಿಜನ. ಸಾಮರಸ್ಯ ಉಂಟು ಮಾಡುವುದು.

ವಿಶ್ವವಾಣಿ: ಉಳಿದ ಮಠಮಾನ್ಯಗಳಂತೆ, ಹೆಸರಿಗೆ ಪರಿತ್ಯಾಗ, ಮಠದ ಪಾರುಪತ್ಯ ಗಳೆಲ್ಲ ಸ್ವಾಮೀಜಿಗಳ ಕುಟುಂಬಿಕರಿಂದ. ಸಂಸಾರದ ಹೊರಗಿದ್ದೂ ಒಳಗೇ ಉಳಿಯುವ 90ರಷ್ಟು ಮಠಗಳೇ ನಮ್ಮಲ್ಲಿ ಇರುವುದು. ಈ ಮಠದಲ್ಲಿ ಅದೇ ಸಂಪ್ರದಾಯ ಇದೆಯೇ?

ಸ್ವಾಮೀಜಿ: ನಾವು ಅಂತ ಅಲ್ಲ, ಯತಿರಾಜ ಮಠದ ಪರಂಪರೆಯೇ ನೀವು ಹೇಳಿದ ನಿಷ್ಠಾಚಾರಕ್ಕೆ ವಿರುದ್ಧವಾಗಿದೆ. ಇಲ್ಲಿ ಸ್ವಾಮೀಜಿಗಳು ಪಟ್ಟ ಏರಿದ ನಂತರ ಅವರ ಕುಟುಂಬಿಕರಿಗೆ ಮಠದಲ್ಲಿ ಯಾವ ಪಾರುಪತ್ಯಗಳಿಗೂ ಅವಕಾಶವಿಲ್ಲ. ಅಧಿಕಾರ ದಲ್ಲೂ ಇರುವುದಿಲ್ಲ. ಆ ಅಂತರವನ್ನ ಶುದ್ಧವಾಗಿ, ಕಟುವಾಗಿ ಪಾಲಿಸಿಕೊಂಡು ಬಂದಿದ್ದೇವೆ.

ಒಂದು ಸಲ ಸನ್ಯಾಸತ್ವ ಸ್ವೀಕರಿಸಿದ ನಂತರ ನಮಗೂ ಪೂರ್ವಾಶ್ರಮಕ್ಕೂ ಸಂಬಂಧವಿಲ್ಲ. ಆ ಹೊರಟೋಗುತ್ತೆ. ಆ ಬಾಂದವ್ಯವೂ ಹೋಗುತ್ತೆ. ಸಂಬಂಧಗಳೇ ಉಳಿಯುವುದಿಲ್ಲ. ದೀಕ್ಷೆ ತಗೊಳ್ಳುವಾಗಲೇ ಸರ್ವಲೋಕ ಹಿತಕ್ಕಾಗಿ, ಸರ್ವ ಜನ ಹಿತಕ್ಕಾಗಿ ಅಂತ ಹೇಳ್ತೇವೆ ನಾವು. ಅದು ರಾಮಾನುಜರ ಸಿದ್ಧಾಂತ. ಅದನ್ನ ನಾವು ಪರಿಪಾಲಿಸ್ತೇವೆ. ಚೆನೈನಲ್ಲಿ ನಮ್ಮ ಶಾಖೆ ಇದೆ. ಆಂಧ್ರದಲ್ಲಿ ಸುಮಾರು 10 ಶಾಖೆಗಳಿವೆ. ನಾವು ಪರಿಕ್ರಮ ಮಾಡ್ತಾನೆ ಇರ್ತೀವಿ. ನವೆಂಬರ್ 25ಕ್ಕೆ 4 ವರ್ಷ ಆಯ್ತು ನಾವು ಬಂದು. 4 ವರ್ಷದಲ್ಲಿ 1,30,000 ಕಿ.ಮೀ ಪ್ರಯಾಣ ಮಾಡಿದ್ದೇನೆ.

ವಿಶ್ವವಾಣಿ: ತಾವು ಬಂದ ನಂತರ ಚದುರಿಹೋಗಿದ್ದ ರಾಮಾನುಜ ಪಂಥವನ್ನ ಒಗ್ಗೂಡಿಸಿದ್ದು ಹಾಗೂ ‘ವೈಷ್ಣವ ಪಂಥ’ದ ಶಿಷ್ಟತೆಯ ಚೌಕಟ್ಟನ್ನು ಒಡೆದು ಮಠವನ್ನು ಅಕ್ಷರಶಃ ಸಾಮೂಹಿಕರಣಗೊಳಿಸಿದ್ದು ತಾವು. ಆ ಬಗ್ಗೆ ಹೇಳಿ ಸ್ವಾಮೀಜಿ.

ಸ್ವಾಮೀಜಿ: ಕರ್ನಾಟಕದಲ್ಲಿ ರಾಮಾನುಜ ಅನುಯಾಯಿಗಳು ಅಲ್ಲಲ್ಲಿ ಚದುರಿ ಹೋಗಿದ್ದರು. ಅವರೆಲ್ಲ ಹೇಳಿಕೊಳ್ತಿದ್ರು ನಾವು ರಾಮಾನುಜರ ಶಿಷ್ಯರು ಅಂತ, ಆದರೆ ಅವರಲ್ಲಿ ಸಂಸ್ಕಾರ ಇರಲಿಲ್ಲ. ನಾನು ಅವರನ್ನೆಲ್ಲ ಸಂಪರ್ಕ ಮಾಡಬೇಕು ಎಂದುಕೊಂಡೆ. ಹೊನ್ನಾಳಿ, ದಾವಣಗೆರೆ, ಅರಸಿಕೆರೆ ಅಂತೆಲ್ಲ ಗ್ರಾಮ ಗ್ರಾಮಗಳಲ್ಲಿ ಪ್ರವಾಸ 4 ವರ್ಷದಲ್ಲಿ ಕನಿಷ್ಟ 50,000 ಜನ ಸಂಪರ್ಕಕ್ಕೆ ಬಂದರು. ಅಲ್ಲಲ್ಲಿ ಸಂಘಗಳನ್ನು ಮಾಡಿ 2017ರಲ್ಲಿ 1000 ರಾಮಾನುಜರ ಪ್ರತಿಮೆಗಳನ್ನ ಮಾಡಿ ಕೊಟ್ಟೆವು. ಈಗ ‘ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾ’ ಅಂತ ಮಾಡಿ ನಾವೇ ಮಾರ್ಗದರ್ಶನ ಮಾಡ್ತಿದ್ದೇವೆ. ಸಂಸ್ಕಾರ ಕೊಟ್ಟು, ನೈತಿಕತೆ ಕೊಟ್ಟು ಅವರು ಸಮಾಜ ದಲ್ಲಿ ಸ್ಥೈರ್ಯದಿಂದ ಬದುಕುವಂತೆ ಮಾಡಿದ್ದೇವೆ. ಇದೊಂದು ದೊಡ್ಡ ಸಾಧನೆ. ಯಾವುದೇ ಸಂಪ್ರದಾಯವಾಗಲಿ, ಯಾವುದೇ ಸ್ವಾಮೀಜಿಯಾಗಲಿ ಅವರು ಸಮಾಜ ಮುಖಿಯಾಗೇ ಇರಬೇಕು. ಯಾವುದೇ ಎಲ್ಲರನ್ನೂ ಆಧರಿಸ ಬೇಕು, ಆಶ್ರಯ ನೀಡಬೇಕು. ರಾಮಾನುಜ ಪಂಥದಲ್ಲಿ ಎಲ್ಲರಿಗೂ ಉಪದೇಶ ನೀಡ ಬೇಕು, ಎಲ್ಲರನ್ನೂ ಒಂದೇ ರೀತಿ ನೋಡಬೇಕು ಎನ್ನುವುದಿದೆ. ನಮ್ಮ ಮಠ ಮೊದಲು ಒಂದು ಪಂಥಕ್ಕೆ ಸೀಮಿತವಾಗಿತ್ತು, ಶ್ರೀ ವೈಷ್ಣವ ಪಂಥಕ್ಕೆ. ನಾನು ಬಾಲ್ಯದಿಂದಲೇ ಸಮಾಜದಲ್ಲಿ ಬೆಳೆದಿದ್ದರಿಂದ ನನಗೆ ಸಂಕುಚಿತ ಭಾವನೆ ಹಿಡಿಸಲಿಲ್ಲ. ನಾವು ಇಲ್ಲಿ ವಿಸ್ತಾರ ಮಾಡಿದೆವು. ಮಧ್ಯಾಹ್ನ 1ರಿಂದ 2 ಮಹಾ ಪ್ರಸಾದ ಕೊಡ್ತೀವಿ. 250ರಿಂದ 300 ಜನ ಬರ್ತಾರೆ. ರಿಕ್ಷಾ ಡ್ರೈವರ್‌ಗಳು, ಎಲ್ಲಾ ಬರ್ತಾರೆ. ಜಾತಿ ಏನೂ ನೋಡೋದಿಲ್ಲ. ಪ್ರತಿದಿನ ಹೊಟ್ಟೆ ತುಂಬ ಊಟ ಹಾಕ್ತೇವೆ. ಮಾಗಡಿ ರಸ್ತೆಯಲ್ಲಿ ‘ಮಡಿಲು’ ಅಂತ ಇದೆ. ಅಲ್ಲಿ 70ರಿಂದ 80 ಅನಾಥ ಮಕ್ಕಳು ಇದ್ದಾರೆ. ಅವರಿಗೆ ದಿನವೂ ಇಲ್ಲಿಂದ ಊಟ ಹೋಗ್ತದೆ. ನಮ್ಮದೊಂದು ಡೈರಿ ಇದೆ. ದಿನ ಅವರಿಗೆ ಹಾಲು ಕೊಡ್ತೇವೆ. ವರ್ಷಕ್ಕೊಮ್ಮೆ ಅವರ ಬಳಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿಸ್ತೀವಿ. ಎಲ್ಲರ ಜತೆ ಕೂತು ನಾನೂ ನೋಡುತ್ತೇನೆ. ಅವರಿಗೆ ಸ್ವಲ್ಪ ಬಟ್ಟೆ ಬರೆ ಕೊಡೋದು ಮಾಡ್ತೀವಿ. ಎರಡು ಶಾಲೆಗೆ ಊಟ ಕೊಡ್ತಿದ್ದೇವೆ. 500 ಮಕ್ಕಳಿಗೆ. ಎರಡನೇದು ಪ್ರತಿ ತಿಂಗಳು ಸ್ಲಂ ಏರಿಯಾಗೆ ಹೋಗಿ ಅಲ್ಲಿ ಪ್ರಸಾದ ವಿತರಣೆ ಮಾಡ್ತೀವಿ. ಇದರಿಂದ ಅವರ ಸಂಬಂಧಸಂಪರ್ಕ ಬೆಳೆಯತ್ತೆ. ಅವರಿಗೆಲ್ಲ ಸ್ವಾಮಿ ಗಳೆಂದರೆ ಭೇಟಿ ಕಷ್ಟ ಎನ್ನುವ ಮನೋಭಾವನೆ ಇರುತ್ತದೆ. ಇಲ್ಲಂತು ಬೆಳಗ್ಗಿನಿಂದ ಸಂಜೆಯವರೆಗೆ ಮುಕ್ತವಾಗಿ ಭೇಟಿಗೆ ಅವಕಾಶ ಇರತ್ತೆ. ಬೇರೆ ಬೇರೆ ಊರಿನಿಂದ ಬರ್ತಾರೆ. ನಮ್ಮ ದೃಷ್ಠಿಯಲ್ಲಿ ಅವರಿಗೊಂದು ನೆಮ್ಮದಿ ಕೊಡಬೇಕು. ಏನೋ ಕಷ್ಟ ಅಂತ ನಾವೇನು ಅವರ ಕಷ್ಟ ಪರಿಹಾರ ಮಾಡಲ್ಲ. ಕೂತು ಸ್ವಲ್ಪ ಮಾತಾಡಿ ಸಾಂತ್ವನ ನೀಡ್ತೇವೆ ಅಷ್ಟೆ.

ವಿಶ್ವವಾಣಿ: ತೊಂಡನೂರು ಶಾಪವಿಮೋಚನೆಯನ್ನ ತಾವು ಮಾಡಿದ್ದೀರಿ ಅನ್ನುವುದು ಪ್ರತೀತಿ?

ಸ್ವಾಮೀಜಿ: ನಾವು ನೈಮಿತ್ತಿಕ. ಎಲ್ಲವೂ ಸ್ವಾಮಿ ರಾಮಾನುಜರ ಕೃಪೆ. ತೊಂಡನೂರಲ್ಲಿ ಚಾತುರ್ಮಾಸ ಮಾಡಬೇಕೆಂದು ನಿರ್ಧಾರ ಮಾಡಿದ್ದೆವು. ಅದು ನಿರ್ಲಕ್ಷ್ಯಕ್ಕೆ ಒಳಗಾದ ಊರಾಗಿದೆ. ರಾಮಾನುಜರೇ ಕಟ್ಟಿಸಿದಂತ ಕೆರೆ ಇದೆ. ಇದಕ್ಕಾಗಿಯೇ ಆ ಊರಿಗೆ ಕೆರೆ ತೊಂಡನೂರು ಅಂತ ಹೆಸರು. ಎಲ್ಲಾ ಇದೆ. ಆದರೆ ಜನರಿಗೆ ಶಾಪಗ್ರಸ್ತ ಊರು ಎಂದು ಅಸಡ್ಡೆ ಇದೆ. ಚಿಕ್ಕ ಊರು, 400 ಮನೆಗಳಿವೆ, 2-3 ದೇವಸ್ಥಾನಗಳಿವೆ. ರೈತರೆಲ್ಲ ಬಂದು ಬರ ಇದೆ ಎಂದು ಕೇಳಿದಾಗ ರಾಮಾನುಜರೇ ನಿಂತು ಕೆರೆ ಕಟ್ಟಿಸಿದರು. ಇವತ್ತಿಗೂ ಸಮೃದ್ಧಿಯಾಗಿದೆ. ಭಾರತ ಸರ್ಕಾರ ಇದನ್ನ ಅತ್ಯಂತ ಪ್ರಾಚೀನ ಕೆರೆ ಅಂತ ಕರೆದಿದೆ. ಈ ವರ್ಷ ಕೆರೆ ತುಂಬಿದೆ, ನಾನೇ ಪೂಜೆ ಮಾಡಿದಿನಿ. ಮೇಲುಕೋಟೆಗೆ ಕುಡಿಯೋಕೆ ನೀರು ಅಲ್ಲಿಂದಲೇ ಹೋಗತ್ತೆ.

ತೊಂಡನೂರಲ್ಲಿ ನಾವು ಚಾತುರ್ಮಾಸ ಮಾಡಿದ್ವಿ. ಆಗ ಎಲ್ಲ ಅಲ್ಲಿ ಸೌಕರ್ಯಗಳಿಲ್ಲ ಅಲ್ಲೇಕೆ ಮಾಡ್ತೀರಿ ಅಂತ. ಅಲ್ಲಿ ಯಾವ ಸ್ವಾಮಿಗಳು ಹೋಗ್ತಿರಲಿಲ್ಲ. ನಾನು ಹಠ ಮಾಡಿ ಅಲ್ಲಿ ಹೋಗಬೇಕು ಅಂತ ನಿಂತೆ. ಪರಿವರ್ತನೆ ಆಯಿತು. ಮನೆ ಮನೆಗೆ ಹೋಗಿ ಜನರನ್ನ ಕರೆತಂದ್ವಿ. ಸತ್‌ಸಂಘ ಶುರು ಮಾಡಿದ್ವಿ. ಎಲ್ಲಾ ಬೇರೆ ಬೇರೆ ಜಾತಿಯವವರು. ಒಂದು ವಾರ ಕುತೂಹಲದಿಂದ ಬಂದು ಮಾತಾಡಿಸ್ತಿದ್ರು. ಆ ಸಮಯದಲ್ಲಿ ಎರಡು ತಿಂಗಳು ಅಲ್ಲಿ ಲಿಕ್ಕರ್ ಸ್ಟಾಪ್ ಆಗಿತ್ತು. ಆ ಊರಲ್ಲಿ ಯುವಕರೆಲ್ಲಾ ಊರು ಬಿಟ್ಟು ಹೋಗಬೇಕು ಆದರೆ ಈಗ ನೋಡಿದರೆ ಆಶ್ಚರ್ಯವಾಗತ್ತೆ. ಸ್ವಾಮಿಗಳು ಸಾಮಾನ್ಯರೊಡನೆ ಸಾಮಾನ್ಯನಾಗಿ ಇರಬೇಕಾಗತ್ತೆ. ಚಿಕ್ಕ ಚಿಕ್ಕ ಮಕ್ಕಳು ಕೂಡ ಶಾಲೆಗೆ ಹೋಗುವ ಮೊದಲು ಮಠಕ್ಕೆ ಬಂದು ಹೋಗುತ್ತಾರೆ. ಅವರಿಗೆ ಕಲ್ಲು ಸಕ್ಕರೆ, ಚಾಕಲೇಟ್ ಕೊಡ್ತಿದ್ದೆ. ನಾವು ಚಾತುರ್ಮಾಸ ಮುಗಿಸಿ ಹೊರಟಾಗ ಎಲ್ಲ ಅಳ್ತಿದ್ರು, ಹೋಗಬೇಡಿ, ಹೋಗಬೇಡಿ ಅಂತ. ಇನ್ಯಾವುದರಿಂದಲೂ ನಾವು ಅವರ ಮನಸನ್ನ ಗೆಲ್ಲಕ್ಕಾಗಲ್ಲ. ವಿಶ್ವಾಸದಿಂದ ಗೆಲ್ಲಬಹುದಷ್ಟೇ. ಆರ್ಥಿಕವಾಗಿ ಸಹಾಯ ಮಾಡಿದ್ವಿ. ಅಲ್ಲಿ ನಾವು ಹೆಲ್‌ತ್ ಕ್ಯಾಂಪ್ ಮಾಡುತ್ತಿದ್ವಿ. ‘ರಾಮಾನುಜ ಇಂಟರ್‌ಗ್ರೇಟೆಡ್ ಪ್ರಾಜೆಕ್‌ಟ್’ ಆಂತ ಮಾಡಿದೀವಿ. 24 ಹಳ್ಳಿಗಳನ್ನ ಆರಿಸಿಕೊಂಡು, ಅಲ್ಲಿ ಸರ್ವಾಂಗೀಣ ವಿಕಾಸ. ರಸ್ತೆ ಇರಲಿಲ್ಲ, ಅದಾಯ್ತು, ಅಲ್ಲಿ ಎಂಪಿ ಪುಟ್ಟರಾಜು ಅಂತ ಇದ್ದಾರೆ, ಅವರು ನಾವು ಹೇಳಿದ ತಕ್ಷಣ ರಸ್ತೆ ಮಾಡಿಕೊಟ್ಟಿದ್ದಾರೆ. ಅಲ್ಲೊಂದು ಬೆಟ್ಟ ಇದೆ, ಹುತ್ತದ ತಿಮ್ಮಪ್ಪ ಅಂತ, ಅದಕ್ಕೆ ರಸ್ತೆನೆ ಇರಲಿಲ್ಲ. ಅಲ್ಲಿಗೆ ವಯಸ್ಸಾದವರೆಲ್ಲ ಹೋಗೋಕೆ ಆಗ್ತಿರಲಿಲ್ಲ. ನಾನು ಊರವರನ್ನೆಲ್ಲಾ ಕರೆದು ಎಲ್ಲರ ಜತೆ ಸೇರಿ ರಸ್ತೆ ಮಾಡಿದ್ವಿ. ಈ ಬಾರಿ ಶ್ರಾವಣ ಶನಿವಾರ ಸುಮಾರು ಜನ ಅಲ್ಲಿಗೆ ಬಂದ್ರು. ಎಷ್ಟೋ ಜನ ಹೇಳಿದ್ರು ನಾವು ದರ್ಶನ ಮಾಡೆ ಇರಲಿಲ್ಲ ಅಂತ. ಅಲ್ಲಿ ರಾಮಾನುಜರ 36 ಅಡಿಯ ವಿಗ್ರಹ ಸ್ಥಾಪನೆ ಮಾಡಿದ್ದೀವಿ. ಅಲ್ಲಿ ಕಿಶ್ಚಿಯನ್ನರ ಹಸ್ತಕ್ಷೇಪ ಶುರುವಾಗಿತ್ತು. ಈಗ ಅದು ನಿಂತಿದೆ. ಮುಸ್ಲಿಂ ಹಾವಳಿ ಇತ್ತು, ಆದರೆ ಅಷ್ಟೊಂದು ಇಲ್ಲ. ಇನ್ನು ಸ್ವಲ್ಪ ವರ್ಷಗಳು ಬಿಟ್ಟಿದ್ರೆ ಅವರು ಅದನ್ನ ಆಕ್ರಮಿಸುತ್ತಿದ್ರು. ಸ್ವಚ್ಛ ಭಾರತ್ ಅಭಿಯಾನ ಅಂತಿತ್ತು. ಅದಕ್ಕೆ ನಾನೇ ಪೊರಕೆ ಹಿಡಿದುಕೊಂಡೆ, ದೇವಸ್ಥಾನದಿಂದ ಬೀದಿಯೆಲ್ಲಾ ಕ್ಲೀನ್ ಬಂದೆವು. ಇನ್ನೊಂದಿನ ಕೆರೆ ಕ್ಲೀನಿಂಗ್ ಇಟ್ಟುಕೊಂಡಿದ್ದೇವೆ. ಅದಕ್ಕೂ ಕೂಡ ಎಲ್ಲರೂ ಬಂದರು. ನಾವು ಮಠಾಧಿಪತಿಗಳು ಅಂತ ಕೂತರೆ ಆಗೋದಿಲ್ಲ, ನಾವು ಬೆರೆಯಬೇಕು. ಅದನ್ನ ನಾವು ಮಾಡ್ತಿದ್ದೇವೆ.

ನಾವು ಕಟ್ಟುಪಾಡಿಂದ ಹೊರಗೆ ಬಂದಿದ್ದೀವಿ. ಸಮಾಜದಲ್ಲಿ ಯಾರ ಮನೆಗೆ ಕರೆದರೂ, ಯಾರು ಕಷ್ಟದಲ್ಲಿರುತ್ತಾರೋ ಅವರ ಬಳಿ ಹೋಗಿ ಬರುತ್ತೇವೆ. ಹಾಸ್ಪಿಟಲ್ ವಿಸಿಟ್ ಇಟ್ಟುಕೊಂಡಿದ್ದೀವಿ. ‘ರಾಮಾನುಜ ಹೆಲ್‌ತ್ ಸರ್ವೀಸ್’ ಅಂತ ಶುರು ಮಾಡಿದ್ದೀವಿ. ಅದರ ಅಡಿಯಲ್ಲಿ ಹೆಲ್‌ತ್ ಕಾರ್ಡ್ ಮಾಡಿ ಮಾರ್ಕೇಟ್‌ನಲ್ಲಿರುವ ವ್ಯಾಪಾರಿಗಳಿಗೆ, ಹೆಲ್‌ತ್ ಕಾರ್ಡ್ ಕೊಟ್ಟು, ಮೂರ್ನಾಲ್ಕು ಹಾಸ್ಪಿಟಲ್‌ಗಳಿಗೆ ಟೈ ಅಪ್ ಮಾಡಿದ್ದೇವೆ. ಸುಗುಣ, ನಾರಾಯಣ ನೇತ್ರಾಲಯ, ಮಲ್ಲಿಗೆ, ಕ್ಯಾನ್ಸರ್ ಸೆಂಟರ್ ಮೊದಲಾದವುಗಳ ಜತೆ ಟೈ ಅಪ್ ಮಾಡಿದ್ದೇವೆ. ನಾವೂ ಸ್ವಲ್ಪ ಹಣ ಕೊಡುತ್ತೇವೆ. ನಮ್ಮಲ್ಲಿ ಒಂದಷ್ಟು ಡಾಕ್ಟರ್‌ಗಳ ತಂಡವಿದೆ. ಈ ಕ್ಯಾಂಪ್ ಮಾಡುವಾಗ ಅಲ್ಲಿಗೆ ಬರುತ್ತಾರೆ. ಈಗ ಹಾರ್ಟ್‌ಗೆ ಸಂಬಂಧಿಸಿದಂತೆ ಕ್ಯಾಂಪ್ ಮಾಡುತ್ತಿದ್ದೇವೆ. ದೃಷ್ಟಿ ಹಾಸ್ಪಿಟಲ್‌ನವರನ್ನು ಕರೆದುಕೊಂಡು ಹಳ್ಳಿಗೆ ಹೋಗಿ ಅಲ್ಲೇ ಆಪರೇಷನ್ ಮಾಡಿಸಿ, ಕನ್ನಡಕ ಕೊಡಿಸಿ ಬರುವಂಥ ಹೆಲ್‌ತ್ ಮಾಡುತ್ತಿದ್ದೇವೆ.

ವಿಶ್ವವಾಣಿ: ಗ್ರಾಮ ಭಾರತ, ಯುವಕರನ್ನ ಹಳ್ಳಿಗಳತ್ತ ಮುಖ ಮಾಡಿಸುವ, ಗೋರಕ್ಷಣೆ, ದೇಸೀ ತಳಿಗಳ ಅಭಿವೃದ್ಧಿ, ಸಾವಯುವ ಕೃಷಿ ಹೀಗೆ ನೆಲಮೂಲದ ಸಂಸ್ಕೃತಿ ರಕ್ಷಣೆಗೆ ಕಟಿಬದ್ಧರಾಗಿ ಕೆಲಸ ಮಾಡುತ್ತಿದ್ದೀರಿ ಅಂತಲೂ ಕೇಳಲ್ಪಟ್ಟೆಆ ಕುರಿತು ವಿವರಿಸಿ.

ಸ್ವಾಮೀಜಿ: ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಸುತ್ತಲಿನ ಯುವಕರನ್ನು ಕರೆದು ಎರಡುಮೂರು ಮೀಟಿಂಗ್ ಮಾಡಿ, ಅವರನ್ನು ತೊಡಗಿಸಿಕೊಳ್ಳುವಂತೆ ಮಾಡುವುದು. ಮತ್ತೊಂದು ಗೋಶಾಲೆ. ದೇಶಿ ಹಸುಗಳನ್ನು ಇಲ್ಲಿ ಇಡಬೇಕು ಅನ್ನುವ ಯೋಚನೆ ತೊಂಡನೂರಿಗೆ ದಕ್ಷಿಣ ಗೋವರ್ಧನ ಅಂತ ಹೆಸರಿಟ್ಟು, ಅಲ್ಲಿ 450 ಮನೆಗಳಿದ್ದು, ಒಂದೊಂದು ಮನೆಗೆ ಒಂದೊಂದು ನಾಟಿ ಹಸುಗಳನ್ನು ಕೊಡಲು ತೀರ್ಮಾನಿಸಿದ್ದೇವೆ. ಅದನ್ನು ಸಾಕಿಕೊಂಡರೆ ಅವರ ಬದುಕು ಹಸನಾಗುತ್ತದೆ. ನಮ್ಮಲ್ಲಿ ಸುಮಾರು 20 ದೇಸಿ ಹಸುಗಳು ಬಂದಿವೆ. ಗುಜರಾತ್, ಆಂಧ್ರ, ಕೇರಳ, ಮಾಹೋಲ್‌ನಿಂದ ಬಂದಿದೆ. ಪಂಜಾಬ್‌ನಿಂದ ಹಸುಗಳು ಬಂದಿವೆ. ತೊಂಡನೂರಿನಲ್ಲಿ ಇಕೋಫ್ರೆಂಡ್ಲಿ ಶೆಡ್ ಮಾಡುತ್ತಿದ್ದೇವೆ. ಅಲ್ಲಿ 100 ಹಸುಗಳನ್ನಿಟ್ಟು ಸಾಕಬೇಕೆಂಬ ಗುರಿ ಹೊಂದಿದ್ದೇವೆ. ಆ ಹಸುವಿನ ಹಾಲನ್ನು ಸಾರ್ವಜನಿಕರ ಬಳಕೆಗೆ ಮಕ್ಕಳಿಗೆ ನೀಡಬೇಕೆಂದುಕೊಂಡಿದ್ದೇವೆ. ಅದು ಈಗಾಗಲೇ ಆಗಬೇಕಿತ್ತು. ಸ್ವಲ್ಪ ಲೇಟ್ ಆಯ್ತು. ಪ್ರಾಯಶಃ ಇನ್ನೊಂದು ತಿಂಗಳಲ್ಲಿ ಶೆಡ್ ಮಾಡಿ ಹಸುಗಳನ್ನು ಅಲ್ಲಿ ಕಟ್ಟಿ ಸಾಕಬೇಕೆಂದಿದ್ದೇವೆ.

ಶಾಲೆಗೆ ಕಂಪ್ಯೂಟರ್ ಕೊಟ್ಟಿದ್ದೇವೆ. ಬೇಸಿಗೆ ರಜೆಯಲ್ಲಿ ಮಠದಲ್ಲೇ ಕಂಪ್ಯೂಟರ್ ಕ್ಲಾಸ್ ಮಾಡಿ ಸುತ್ತಲಿನ ಮಕ್ಕಳಿಗೆ ಬೇಸಿಕ್ ಕಂಪ್ಯೂಟರ್ ಕಲಿಸುತ್ತಿದ್ದೇವೆ. ನಾನು ಹೋದಾಗಲೆಲ್ಲ ಶಾಲೆಗೆ ಹೋಗಿ ಬರುತ್ತೇನೆ. ಅದು ಸರಕಾರಿ ಶಾಲೆ. ಸರಕಾರಿ ಶಾಲೆ ಉಳಿಸಬೇಕೆನ್ನುವುದು ನಮ್ಮ ಆಸೆ. ಈ ನಿಟ್ಟಿನಲಿ ಹಠ ತೊಟ್ಟಿದ್ದೇವೆ. ದೇವಸ್ಥಾನದಲ್ಲಿ ಪೂಜೆಗೆ ಅವಕಾಶಗಳನ್ನು ಮಾಡಿಕೊಡುವುದು, ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಮುಖ್ಯವಾಗಿ ವಾತಾವರಣ ಬದಲಾವಣೆಯಾಗಿದೆ. ಶನಿವಾರ, ಭಾನುವಾರಗಳಂದು ತೊಂಡನೂರಿಗೆ ಸುಮಾರು 1500 ಜನ ಬರುತ್ತಾರೆ. ದರ್ಶನ ಪಡೆದು ಮರಳುತ್ತಾರೆ. ಮೊದಲಿದ್ದ ಶಾಪಗ್ರಸ್ಥ ಊರು ಎಂಬ ಬಿರುದು ಈಗ ಹೋಗಲಾಡಿಸಲಾಗಿದೆ.

ವಿಶ್ವವಾಣಿ: ಮಠಗಳೆಲ್ಲವೂ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿ, ದುಡ್ಡಿನಿಂದ ದುಡ್ಡು ಮಾಡಲು ಹೊರಟ ಈ ಸಂದರ್ಭದಲ್ಲಿ, ತಮ್ಮ ಮಠ ಆ ದಿಕ್ಕಿನಲ್ಲಿ ಯಾವ ರೀತಿಯ ಯೋಚನೆ, ಯೋಜನೆ ಹೊಂದಿದೆ?

ಸ್ವಾಮೀಜಿ: ನಾವು ಶಿಕ್ಷಣ ಪ್ರವೇಶ ಮಾಡೋದಿಲ್ಲ. ನಾವು ಹಣ ಸಂಗ್ರಹ ಮಾಡೋದಿಲ್ಲ. ಮೊದಲಿಂದಲೂ ಅದೇ ಪರಂಪರೆ. 40 ಯತಿಗಳೂ ಸಹ ಮಠಗಳನ್ನು ಹಣ ಮೂಲದಿಂದ ಕಟ್ಟೋದು, ಶಾಲಾ ಕಾಲೇಜುಗಳನ್ನು ಕಟ್ಟೋದು ಮಾಡಿಲ್ಲ. ಸುಮಾರು ಜನ ಹೇಳುತ್ತಿದ್ದರು, ಅದನ್ನ ಮಾಡೋಣ, ಇದನ್ನು ಮಾಡೋಣ ಅಂತ. ನಾನು ಪೂರ್ತಿ ಅದನ್ನು ತಡೆದಿದ್ದೇನೆ. ಹಣ ಸಂಗ್ರಹ ಮಾಡಿದಷ್ಟೂ ಮನುಷ್ಯನ ಮನಸ್ಸು ಅದರ ಸಂಗ್ರಹಕ್ಕೆ, ಸಂರಕ್ಷಣೆಯತ್ತಲೇ ಹೋಗುತ್ತದೆ. ನಮಗೆ ಅದರ ಯೋಚನೆ ಇಲ್ಲ. ಏನೂ ಸಂಗ್ರಹವೇ ಮಾಡೋದಿಲ್ಲ. ನಾವು ಸಂಪರ್ಕವನ್ನೇ ಇಟ್ಟುಕೊಂಡಿಲ್ಲ. ಸ್ವ ಇಚ್ಛೆಯಿಂದ ಭಕ್ತರು ಕೊಟ್ಟರೆ ಅದನ್ನು ಮಠದ ಕಾರ್ಯಗಳಿಗೆ ವಿನಿಯೋಗಿಸುತ್ತೇವೆ.

ವಿಶ್ವವಾಣಿ: ಇಷ್ಟೆಲ್ಲ ಸಮಾಜಮುಖೀ ಕೆಲಸ ಮಾಡುವಾಗ ಆರ್ಥಿಕ ನೆಲೆಗಟ್ಟು ಏನು?

ಸ್ವಾಮೀಜಿ: ಏನಪ್ಪಾ ಎಂದರೆ ಒಂದೊಂದು ಯೋಜನೆಗೆ ಒಬ್ಬೊಬ್ಬರು ಪ್ರಾಯೋಜಕರು ಬರುತ್ತಾರೆ. ಹಸು ಖರೀದಿಸಬೇಕು ಅಂದರೆ ಯಾರೋ ಒಬ್ಬರು ಮುಂದೆ ಬಂದು ತೆಗೆಸಿಕೊಡುತ್ತಾರೆ. ಅದಕ್ಕಾಗಿ ಹಣ ಕೂಡಿಟ್ಟು, ಕಾಪಾಡುವ ಕೆಲಸ ನಾವು ಮಾಡುವು ದಿಲ್ಲ. ಮೊದಲಿನಿಂದಲೂ ಅದಿರಲಿಲ್ಲ. ಈಗಂತೂ ಬಹಳ ಸ್ಪಷ್ಟವಾಗಿದೆ. ಅಲ್ಲಿ ಏನು ಅದನ್ನು ಸಮಾಜಕ್ಕೆ ಕೊಡುವುದು. ಎಲ್ಲ ಮತ, ಜಾತಿಯವರನ್ನೂ ನಾವು ಗಣನೆಗೆ ತೆಗೆದುಕೊಳ್ಳುತ್ತೇವೆ. ಎಲ್ಲರ ಉನ್ನತಿಗಾಗಿ ಕೆಲಸ ಮಾಡುತ್ತೇವೆ.

ವಿಶ್ವವಾಣಿ: ಬೇರೆ ಮಠಗಳೆಲ್ಲ ರಾಜಕೀಯಕ್ಕೆ ಮೂಗು ಬಾಯಿ, ಕೈ ಕಾಲು ಎಲ್ಲ ತೂರಿಸುತ್ತಿವೆ. ವಿಧಾನಸೌಧದ ಎದುರೇ ಬಂದು ಇಂಥವರನ್ನು ಅಧಿಕಾರದಿಂದ ಇಳಿಸಬೇಡಿ. ಮತ್ತು ಇಂಥವರನ್ನು ಅಧಿಕಾರದಲ್ಲಿ ಕೂರಿಸಿ ಅಂತ ಹೇಳುವಲ್ಲಿಯವರೆಗೆ ಮಠಾಧೀಶರು ಬಂದಿದ್ದಾರೆ. ಏನು ಹೇಳುತ್ತೀರಿ ಈ ಬಗ್ಗೆ?

ಸ್ವಾಮೀಜಿ: ನಾವು ಅದಕ್ಕೆ ಪ್ರವೇಶವೇ ಮಾಡೋದಿಲ್ಲ. ಇಲ್ಲಿ ಯಾರು ಭಕ್ತರಾಗಿ ಅವರಿಗೆ ಉಪದೇಶವೋ, ಸಲಹೆಯನ್ನೋ ಕೊಟ್ಟು ಕಳುಹಿಸುತ್ತೇವೆ. ಸ್ಪಷ್ಟವಾಗಿ ಹೇಳಿದ್ದೇವೆ, ಇಲ್ಲಿ ರಾಜಕೀಯ ಪ್ರವೇಶ ಇಲ್ಲ ಅಂತ. ನಾವು ರಾಜಕೀಯಕ್ಕೆ ಬರೋದಿಲ್ಲ. ನಮಗೂ ರಾಜಕೀಯಕ್ಕೂ ಬಹಳ ದೂರ ಅಂತ. ತೀರಾ ಆತ್ಮೀಯರು ಇದ್ದಾರೆ. ಆದರೆ ಇದುವರೆಗೂ ಸರಕಾರದಿಂದ ಒಂದು ರುಪಾಯಿಯ ನೆರವೂ ಪಡೆದುಕೊಂಡಿಲ್ಲ. ನೆರವು ಕೇಳಿಲ್ಲ.

ವಿಶ್ವವಾಣಿ: ಒಟ್ಟೂ ನಮ್ಮ ದೇಶ, ರಾಜ್ಯದ ರಾಜಕೀಯದ ಬಗ್ಗೆ ಏನು ಹೇಳುತ್ತೀರಿ?

ಸ್ವಾಮೀಜಿ: ರಾಜಕೀಯದಲ್ಲಿ ಸ್ಥಿರತೆ ಇಲ್ಲ. ರಾಜ್ಯ, ಕೇಂದ್ರ ಇರಬಹುದು. ಸದ್ಯ ಸ್ಥಿರತೆ ಕಾಣಿಸುತ್ತಿದೆ. ಒಟ್ಟಿನಲ್ಲಿ ಸರಕಾರದಲ್ಲಿ ಸ್ಥಿರತೆ ಬೇಕು. ಎಲ್ಲರೂ ಸ್ವಾರ್ಥಿಗಳಾಗುತ್ತಿದ್ದಾರೆ. ನಾನು ಏನು ಹೇಳುತ್ತೇನೆ ಅಂದರೆ ಸರಕಾರಗಳಲ್ಲಿ ಕೆಲವರಾ ದರೂ ಜನರ ಬಗ್ಗೆ ಯೋಚನೆ ಮಾಡಬೇಕು. ಒಂದು ಕಡೆ ಶಿಕ್ಷಣ ವ್ಯವಸ್ಥೆ ಕುಸಿದಿದೆ. ಸರಕಾರಿ ಶಾಲೆಗಳೆಲ್ಲ ಮುಚ್ಚುತ್ತಿದ್ದಾವೆ. ಕನ್ನಡದ ಬಗ್ಗೆ ದುಸ್ಥಿತಿ ಬಂದಿದೆ. ಯಾರೂ ಯೋಚನೆ ಮಾಡುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಜನರ ಬದುಕು ಚೆನ್ನಾಗಿಲ್ಲ. ಅವೆಲ್ಲ ಸುಧಾರಣೆಯಾಗ ಬೇಕು. ಈ ಪಕ್ಷ ಆ ಪಕ್ಷ ಅಂತ ನಾನು ಹೇಳುತ್ತಿಲ್ಲ. ಒಂದು ದೃಢವಾದ ಸರಕಾರ ಬೇಕು. ಒಬ್ಬ ಶಾಸಕನೋ, ಸಚಿವನೋ ತಮ್ಮ ಕ್ಷೇತ್ರವನ್ನು ಸಿಸ್ಟಮ್ಯಾಟಿಕ್ ಆಗಿ ಮಾಡ ಬೇಕೆನ್ನುವ ಇರಾದೆಯನ್ನೇ ಹೊಂದಿಲ್ಲ. ಅವರಿಗೆ ಅಲ್ಲಿನ ರೋಡು, ದೀಪ, ಕುಡಿಯುವ ನೀರು, ಮೊದಲಾದ ಅತ್ಯವಶ್ಯಕ ವಸ್ತುಗಳನ್ನು ಒದಗಿಸಬೇಕೆಂದು ಅನ್ನಿಸುವುದೇ ಇಲ್ಲವಲ್ಲ.

ವಿಶ್ವವಾಣಿ: ತಮಗೆ ಅನ್ನಿಸಿಲ್ಲವೇ, ಈಗ ಹತ್ತು ವರ್ಷಗಳಿಂದೀಚೆಗೆ ಮಠ ಮಾನ್ಯಗಳು ಭೋಗದ ಕೇಂದ್ರಗಳಾಗುತ್ತಿವೆ. ಅದರಲ್ಲೂ ಈಗ ಒಂದೂವರೆ ವರ್ಷಗಳಲ್ಲಿ ಸೆರೆ ಮನೆಗೆ ಹೋಗಿ ಬಂದವರನ್ನು ನೋಡಿದರೆ..?

ಸ್ವಾಮೀಜಿ: ಖಂಡಿತಈಗಿನ ನೋಡಿದರೆ ಭಯ ಆಗುತ್ತದೆ. ಒಮ್ಮೊಮ್ಮೆ ಏನಪ್ಪಾ ಇದು, ಎಲ್ಲಿ ಹೋಗುತ್ತಿದ್ದೇವೆ ಅಂತ ಹೆದರಿಕೆಯಾಗುತ್ತದೆ. ನಾವು ಎಲ್ಲವುದನ್ನೂ ಬಿಟ್ಟು ಕಠೋರವಾದ ಅನುಷ್ಠಾನ ಮಾಡಿಕೊಂಡು, ಇಲ್ಲಿ ಯಾವುದೇ ಭೋಗ ಜೀವನವನ್ನೂ ನಡೆಸದೆ, ಒಂದು ಹೊತ್ತು ಊಟ ಮಾಡಿಕೊಂಡು (ಮೂರು ಹಿಡಿ ಅನ್ನ) ಬರುತ್ತಿದ್ದೇವೆ. ಪೂರ್ವಾಶ್ರಮದಲ್ಲೂ ಹಾಗೇ ಇತ್ತು. ಈಗಲೂ ಅದೇ ಕಠಿಣ ರೀತಿ ಮುಂದುವರಿಯುತ್ತಿದೆ. ಈಗಲೂ ಭವತಿ ಭಿಕ್ಷಾಂದೇಹಿ ಅಂತ ಕೇಳಿಯೇ, ಮೂರು ಹಿಡಿ ಅನ್ನವನ್ನು ಕಲಸಿ ತಿನ್ನುತ್ತೇವೆ. ನಮ್ಮಲ್ಲಿರುವ ಎಲ್ಲರದ್ದೂ ಬಳಿಕವೇ ನಾವು ಊಟ ಮಾಡುವುದು. ನಮಗೇ ನಾವು ಸರಳತೆಯಲ್ಲಿರಬೇಕು. ಭೋಗ ಜೀವನ ಖಂಡಿತಕ್ಕೂ ಸಲ್ಲದು. ತೀರಾ ಅವಶ್ಯಕತೆ ಎಂದರೆ ಓಡಾಡೋದಕ್ಕೆ ಒಂದು ವಾಹನ ಬೇಕು. ಮೊಬೈಲ್, ಟಿವಿ ಏನೂ ಬಳಕೆ ಮಾಡುವುದಿಲ್ಲ. ಪತ್ರಿಕೆ ಓದೋದನ್ನೂ ಬಿಟ್ಟುಬಿಟ್ಟಿದ್ದೆ. ವಿಶ್ವವಾಣಿ ಪ್ರಾರಂಭವಾದ ಮೇಲೆ ಅದೊಂದನ್ನು ತರಿಸಿಕೊಳ್ಳುತ್ತಿದ್ದೇನೆ. ಸಂಪರ್ಕಕ್ಕಾಗಿ ಸ್ಥಿರ ದೂರವಾಣಿ ಇಟ್ಟುಕೊಂಡಿದ್ದೇವೆ.

ವಿಶ್ವವಾಣಿ: ಮಠ ಸಮಾಜದ ಆತ್ಮಗಳು. ಆದರ್ಶಗಳು, ಕಣ್ಣುಗಳು, ಆದರೆ ಇದೇ ಕಲಿಷಿತಗೊಳ್ಳುತ್ತಿವೆಯಲ್ಲ. ಏನು ಹೇಳುತ್ತೀರಿ?

ಸ್ವಾಮೀಜಿ: ಅದು ನಿಜ. ಇಡೀ ವ್ಯವಸ್ಥೆ ಕುಸಿದು ಹೋಗುವುದಿಲ್ಲ. ಎಲ್ಲರೂ ಇರುತ್ತಾರೆ. ಅದು ಹೋದಂತೆ ಭಾಸವಾಗುತ್ತದೆ. ಆದರೆ ಅದು ಹೋಗುವುದಿಲ್ಲ. ಆದರೆ ಕೆಲವರು ರಾಜಕೀಯದ ಹಿಂದೆ ಹೊರಟುಹೋಗಿದ್ದಾರೆ. ಅಂದರೆ ಸರಕಾರ ದಿಂದ ಎಷ್ಟೆಷ್ಟು ತೆಗೆದುಕೊಳ್ಳಬಹುದೋ ಅದೆಲ್ಲವನ್ನೂ ಪಡೆಯುತ್ತಾರೆ. ಇಲ್ಲಿಗೆ ಬಂದು ಏನಾಗಬೇಕು?’ ಅಂತ ಕೇಳುತ್ತಾರೆ. ‘ಏನೂ ಆಗಬೇಕಿಲ್ಲ’ ಎಂದು ಕಳುಹಿಸುತ್ತೇವೆ.

ವಿಶ್ವವಾಣಿ: ಸ್ವಾಮೀಜಿಗಳು ಸಂತರಾಗಬೇಕು, ಸಮಾಜದ ಆಸ್ಥಿಯಾಗಬೇಕು. ಒಂದು ಸಮನ್ವಯ ಸಿದ್ಧಾಂತ ಇಟ್ಟುಕೊಳ್ಳಬೇಕು. ಸರ್ವೇಜನಾಃ ಸುಖಿನೋಭವಂತು ಎಂದು ಹೇಳಬೇಕು. ಇಂದು ಗೌಡರಿಗೆ ಒಂದು, ಒಂದು, ಉಳಿದವರಿಗೆ ಮತ್ತೊಂದು ಅಂತ ಆಗುತ್ತಿದೆ. ಕಾಣುತ್ತಿರುವುದು ಅದೇ.

ಸ್ವಾಮೀಜಿ: ಈಗ ಜಾತ್ಯಾತೀತ ಅಂತ ಹೇಳುತ್ತಾರೆ. ಅದು ಭ್ರಮೆಯಾಗಿದೆ. ಆದರೆ ನಮ್ಮ ಮಠದಲ್ಲಿ ಅಕ್ಷರಶಃ ಜಾತ್ಯಾತೀತ ನಿಲುವಿಗೆ ಬದ್ಧರಾಗಿದ್ದೇವೆ. ಯಾರು ಬಂದರೂ ಅವರ ಜಾತಿ ಯಾವುದು ಅಂತ ಕೇಳೋದಿಲ್ಲ. ಅವರನ್ನು ಕರೆದು ಕೂರಿಸಿ, ಪ್ರಸಾದ ಕೊಟ್ಟು ಕಳುಹಿಸುತ್ತೇವೆ.

ಮಠದ ಸಂಪರ್ಕ: ಬಾಲಾಜಿ-9449834236, ಶ್ರೀ ರಂಗರಾಜನ್ – 9448063158

Tags

Related Articles

Leave a Reply

Your email address will not be published. Required fields are marked *

Language
Close