ನಾನೂ ವಿಷ್ಣುವೂ ಮನೆಪಾಠ ಹೇಳಿಸಿಕೊಳ್ಳುತ್ತಿದ್ದೆವು

Posted In : ಅಂಕಣಗಳು, ಬಾಳ ಬಂಗಾರ

ಕಳೆದ ವಾರದ ಸಂಚಿಕೆಯಲ್ಲಿ ಒಂದು ತಪ್ಪಾಗಿತ್ತು ಅಂತ ತಿಳಿದು ಬಂತು. ವಂಶವೃಕ್ಷ ಸಿನಿಮಾದ ನಿರ್ದೇಶಕರು ಗಿರೀಶ್ ಕಾರ್ನಾಡ್ ಮತ್ತು ಬಿ.ವಿ ಕಾರಂತರು. ಆದರೆ ಕಳೆದ ವಾರ ನಿರ್ದೇಶಕರು ಗಿರೀಶ್ ಕಾಸರವಳ್ಳಿ ಎಂದು ತಪ್ಪಾಗಿ ಅಚ್ಚಾಗಿತ್ತು. ಪತ್ರಿಕೆಯ ಸಹೃದಯ ಓದುಗರೊಬ್ಬರು ಆ ಕುರಿತು ಪತ್ರ ಮುಖೇನ ಅಚ್ಚಿನ ಸಂದರ್ಭದಲ್ಲಾದ ಈ ತಪ್ಪನ್ನು ಸಂಬಂಧ ಪಟ್ಟವರ ಗಮನಕ್ಕೆ ತಂದಿದ್ದಲ್ಲದೆ, ವಂಶವೃಕ್ಷ ಸಿನಿಮಾ ಕುರಿತ ತಮ್ಮ ನೆನಪೊಂದನ್ನು ಹಂಚಿಕೊಂಡಿದ್ದರು. ಆ ಓದುಗರಿಗೆ ನನ್ನ ನಮನ. ಮಾನ್ಯ ಸಂಪಾದಕರು ಸುದ್ದಿಮನೆಯಲ್ಲಿ ಆಗುವ ತಪ್ಪುುಗಳು ಪ್ರಮಾದಗಳ ಕುರಿತು ಬರೆಯುತ್ತಿರುತ್ತಾರೆ. ಬರಿ ಓದಿ ತಿಳಿದಿದ್ದ ನನಗೆ ಅದರ ಅನುಭವ ಆದಂತಾಯಿತು. ತಪ್ಪುಗಳಾಗದಂತೆ ಎಷ್ಟೇ ಎಚ್ಚರಿಕೆ ವಹಿಸಿದರೂ ಅಲ್ಲೊಮ್ಮೆ ಇಲ್ಲೊಮ್ಮೆ ತಪ್ಪುಗಳು ನುಸುಳಿಬಿಡುವುದನ್ನು ಕಂಡು ಅಚ್ಚರಿಯೂ ಆಯಿತು. ಇದನ್ನು ಸಮರ್ಥನೆ ಎಂದು ಖಂಡಿತಾ ಭಾವಿಸಬೇಕಿಲ್ಲ. ಯಾವತ್ತೂ ಓದುಗನಿಗೆ ಅಕ್ಷರ ಮತ್ತು ಮಾಹಿತಿ ತಪ್ಪಿಲ್ಲದ ಓದನ್ನು ದಯಪಾಲಿಸುವುದೇ ಪತ್ರಿಕೆಗಳ ಧ್ಯೇಯ.

ತಪ್ಪು ಎಂದ ಕೂಡಲೆ ಒಂದು ವಿಚಾರ ನೆನಪಾಗುತ್ತಿದೆ. ನಾನು ವಿಷ್ಣು ಹಿಂದಿ ಮೇಷ್ಟ್ರ ಬಳಿ ಪಾಠ ಹೇಳಿಸಿಕೊಳ್ಳುತ್ತಿದ್ದ ವಿಚಾರ. ಎಲ್ಲರೂ ಶಾಲೆಯಲ್ಲಿ ಮಕ್ಕಳಾಗಿದ್ದಾಗ ಹೇಳಿಸಿಕೊಂಡರೆ ನಾನು ಮತ್ತು ವಿಷ್ಣು ದೊಡ್ಡವರಾಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾಗಲೂ ಪಾಠ ಹೇಳಿಸಿಕೊಳ್ಳುತ್ತಿದ್ದೆವು. ಒಂದೇ ಒಂದು ವ್ಯತ್ಯಾಸವೆಂದರೆ ಇದು ಸ್ಲೇಟು ಬಳಪ ಹಿಡಿದು ಮಾಡುವ ಅಕ್ಷರಾಭ್ಯಾಸವಾಗಿರಲಿಲ್ಲ. ಮುಂಚಿನಿಂದಲೂ ವಿಷ್ಣು ಹಿಂದಿಯಲ್ಲಿ ಸ್ವಲ್ಪ ವೀಕು. ವಿಷ್ಣುವಿಗೆ ಹಿಂದಿಯ ಅಕ್ಷರಾಭ್ಯಾಸ ಬೇಕಿರಲಿಲ್ಲ. ಅವರಿಗೆ ಸಿನಿಮಾಗಳಲ್ಲಿ ಸಂಭಾಷಣೆ ಹೇಳುವಷ್ಟು ಹಿಂದಿ ಮಾತ್ರ ಬೇಕಿದ್ದುದು. ಅಂದರೆ ಸಂವಹನಕ್ಕೆ ಸಹಾಯವಾಗುವಷ್ಟು ಹಿಂದಿ ಕಲಿಯಬೇಕು ಎಂಬುದು ಅವರಿಚ್ಚೆಯಾಗಿತ್ತು. ಬಹಳ ಹಿಂದೆ ಹೇಳಿದಂತೆ ನನಗೆ ಭಾಷೆಗಳ ಮೇಲೆ ವ್ಯಾಮೋಹ ತುಂಬಾ ಹೆಚ್ಚು. ಐದಾರು ಭಾಷೆಗಳು ನನಗೆ ಮಾತನಾಡಲು ಬರುತ್ತವೆ. ಹಿಂದಿಯೂ ಅಷ್ಟಿಷ್ಟು ಬರುತ್ತಿತ್ತು. ಚಿಕ್ಕಂದಿನಿಂದಲೂ ನನಗೆ ಭಾಷೆಗಳ ಕುರಿತು ಆಸಕ್ತಿ ಇದ್ದಿದ್ದರಿಂದ ಸಹಜವಾಗಿಯೇ ನನಗೆ ಅದು ಒಲಿದು ಬಂದಿತು. ವಿಷ್ಣುವಿಗೆ ಆ ಕುರಿತು ತುಂಬಾ ಹೆಮ್ಮೆ. ವೃತ್ತಿಪರ ಕಲಾವಿದರಿಗೆ ಭಾಷೆ ಎಷ್ಟು ಮುಖ್ಯ ಅನ್ನೋದು ಗೊತ್ತಿರುತ್ತದೆ. ಏಕೆಂದರೆ ಬೇರೆ ಭಾಷೆಯಲ್ಲಿ ಅವಕಾಶ ಸಿಕ್ಕಾಗಲೇ ಅದರ ಮಹತ್ವ ಅರ್ಥವಾಗೋದು. ಕೆಲಸಕ್ಕೆ ಅರ್ಜಿ ಸಲ್ಲಿಸುವಾಗ ನಾವು ನಮ್ಮ ಅರ್ಹತೆ, ಗಳಿಸಿದ ಪ್ರಶಸ್ತಿ ಪುರಸ್ಕಾರಗಳನ್ನು ಬರೆದುಕೊಳ್ಳುತ್ತೇವೆ. ಅದರ ಆಧಾರದ ಮೇಲೆ ಉದ್ಯೋಗದಾತರು ತೀರ್ಮಾನಿಸುತ್ತಾರೆ. ಅದೇ ಕಲಾವಿದರಿಗಾದರೆ ನಮ್ಮ ಬಯೋಡಾಟಾದಲ್ಲಿ ಬಹುಭಾಷೆ ತಿಳಿದಿದೆ ಎಂದಾದರೆ ಅದು ಪ್ಲಸ್ ಪಾಯಿಂಟು. ಇದರಿಂದ ನಟನೆಯ ಅವಕಾಶಗಳು ಹೆಚ್ಚುತ್ತವೆ. ಯಾವ ಚಿತ್ರರಂಗದಲ್ಲೂ ಕಷ್ಟ ಆಗೋದಿಲ್ಲ.

ನಾನಾದರೆ ಹಿಂದಿ ಮಧ್ಯಮ ಪರೀಕ್ಷೆಯನ್ನು ಪಾಸು ಮಾಡಿದ್ದೆ. ಜತೆಗೆ ನಮ್ಮ ನೆಂಟರಿಷ್ಟರಲ್ಲೂ ಕೆಲವರು ಕನ್ನಡೇತರ ಭಾಷೆಗಳನ್ನು ಮಾತನಾಡುವವರಿದ್ದರು. ಹೀಗಾಗಿ ತುಂಬಾ ಭಾಷೆಗಳ ಮೇಲೆ ನನಗೆ ಹಿಡಿತ ಸುಲಭವಾಗಿ ಸಿಕ್ಕಿತು. ಆದರೆ ವಿಷ್ಣುವರ್ಧನ್‌ಗೆ ಹಾಗಿರಲಿಲ್ಲ, ಅವರು ಬೆಳೆದ ವಾತಾವರಣವೇ ಬೇರೆಯಾದ್ದರಿಂದ ಅವರಿಗೆ ಕನ್ನಡವೇ ಮುಖ್ಯವಾಗಿ ಬರುತ್ತಿದ್ದದ್ದು. ಹಿಂದಿಯಲ್ಲಂತೂ ಸ್ವಲ್ಪ ವೀಕು. ಅವರಿಗೆ ಹಿಂದಿ ಸಿನಿಮಾಗಳ ಅವಕಾಶಗಳ ಬಂದಿದ್ದ ಸಂದರ್ಭದಲ್ಲಿ ಅಲ್ಲಿ ನಟಿಸುವಾಗ ಅವರಿಗೆ ಭಾಷೆಯ ತೊಡಕು ಹೆಚ್ಚಾಗಿ ಕಾಡುತ್ತಿತ್ತು. ಅದಕ್ಕೇ ಅವರು ನಿರ್ಧಾರ ಮಾಡಿದ್ದರು ಏನಾದರಾಗಲಿ ಮಾತನಾಡುವಷ್ಟು ಹಿಂದಿಯನ್ನು ಕಲಿತೇ ತೀರಬೇಕು ಎಂದು. ಈ ಕಾರಣಕ್ಕಾಗಿಯೇ ಹಿಂದಿ ಮೇಷ್ಟ್ರನ್ನು ನೇಮಿಸಿಕೊಂಡರು. ಅವರು ಪಾಠ ಹೇಳಿಕೊಡಲು ನಮ್ಮ ಮನೆಗೇ ಬರುತ್ತಿದ್ದರು. ಅವರು ನಿಜಕ್ಕೂ ಶಾಲೆ ಅಥವಾ ಕಾಲೇಜಿನಲ್ಲಿ ಶಿಕ್ಷಕರಾಗಿದ್ದರೋ ಇಲ್ಲವೋ ನನಗೆ ಸರಿಯಾಗಿ ನೆನಪಿಲ್ಲ. ನನಗೆ ತಿಳಿದಿದ್ದ ಹಾಗೆ ಅವರು ಸಿನಿಮಾ ಒಲವಿರಿಸಿಕೊಂಡಿದ್ದ ಹಿಂದಿ ಮತ್ತು ಕನ್ನಡ ಗೊತ್ತಿದ್ದ ವ್ಯಕ್ತಿ ಅಷ್ಟೇ. ಯಾರ ಮೂಲಕವೋ ವಿಷ್ಣು ಅವರನ್ನು ಹಿಡಿದು ಗೊತ್ತು ಮಾಡಿದ್ದರು. ಅವರು ನಿಜಕ್ಕೂ ಸಂಭಾಷಣೆ ಸ್ಪೆಷಲಿಸ್ಟ್ ಆಗಿದ್ದರು. ತುಂಬಾ ಸಿನಿಮಾ ನೋಡುತ್ತಿದ್ದರು ಅಂತ ಕಾಣಿಸುತ್ತೆ. ಅನೇಕ ಹಿಂದಿ ಸಿನಿಮಾಗಳ ಸಂಭಾಷಣೆಗಳನ್ನು ಪಟ್ಟಂತ ಹೇಳಿಬಿಡೋರು. ಅದನ್ನು ಕಂಡು ವಿಷ್ಣು ದಂಗು. ಅವರೂ ಮೇಷ್ಟ್ರ ಹಾಗೆ ಡಯಲಾಗ್ ಡೆಲಿವರಿ ಮಾಡಲು ಶತಪ್ರಯತ್ನ ನಡೆಸುತ್ತಿದ್ದರು.

ಹೀಗೆ ನಮ್ಮವರು ಸುಮ್ಮನೆ ಕುಳಿತುಕೊಳ್ಳುತ್ತಿರಲಿಲ್ಲ. ಏನಾದರೊಂದು ಮಾಡುತ್ತಿದ್ದರು. ಯಾವುದಾದರೂ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಿಝಿಯಾಗಿರುತ್ತಿದ್ದರು. ‘ಎಂಪ್ಟಿ ಮೈಂಡ್ ಈಸ್ ಎ ಡೆವಿಲ್ಸ್ ವರ್ಕ್‌ಶಾಪ್’ ಎಂಬ ಪ್ರಸಿದ್ಧ ಮಾತೊಂದಿದೆ. ಅಂದರೆ ‘ಖಾಲಿ ಬಿಟ್ಟ ಮನಸ್ಸು ದೆವ್ವದ ಕಾರ್ಯಾಗಾರ’ ಅಂತ. ಮನಸ್ಸನ್ನು ಯಾವತ್ತೂ ಖಾಲಿ ಬಿಡಬಾರದು ಅನ್ನುವುದರ ಅರ್ಥ ಏನೆಂದರೆ ಸದಾಕಾಲ ನಾವು ಯಾವುದಾದೊಂದು ಕೆಲಸದಲ್ಲಿ ತೊಡಗಿಸಿಕೊಂಡಿರಬೇಕು, ಸುಮ್ಮನೆಯೇ ಕೈ ಕಟ್ಟಿ ಕೂರುವ ಹಾಗಾಗಬಾದರು. ಆಗ ಮನಸ್ಸು ಮತ್ತು ಮೈ ಎರಡೂ ಜಡ್ಡು ಹಿಡಿಯುತ್ತದೆ, ಪ್ರಯೋಜನಕ್ಕೆ ಬಾರದ ಆಲೋಚನೆಗಳು ಆವರಿಸಿಕೊಳ್ಳುತ್ತವೆ. ಯಂತ್ರ, ಉಪಕರಣಗಳ ಕುರಿತು ಒಂದು ಮಾತು ಹೇಳುವುದಿದೆ, ‘ಅದನ್ನು ಉಪಯೋಗಿಸುತ್ತಿರಬೇಕು ಇಲ್ಲವಾದರೆ ಅದು ಹಾಳಾಗಿ ನಿಷ್ಪ್ರಯೋಜಕವಾಗುತ್ತದೆ’ ಎಂದು. ಅದೇ ಮಾತು ಮನಸ್ಸಿಗೂ ಅನ್ವಯವಾಗುತ್ತದೆ ಎನ್ನುವುದೇ ಮೇಲಿನ ಆಂಗ್ಲ ಉಕ್ತಿಯ ಸಾರಾಂಶ.

ಹಿಂದಿ ಮೇಷ್ಟ್ರು ಸಂಜೆ ಮನೆಗೇ ಬಂದು ಪಾಠ ಹೇಳಿಕೊಡುತ್ತಿದ್ದರು. ಅವರು ಅಧಿಕೃತ ಶಿಕ್ಷರಾಗಿಲ್ಲದೇ ಇದ್ದರೂ ವಿದ್ಯೆ ಹೇಳಿಕೊಡುವವರು ಯಾವತ್ತೂ ಗುರುಗಳೇ ಆಗುತ್ತಾರಲ್ಲವೆ. ಹೀಗಾಗಿ ಅವರು ನಮಗೆ ಶಿಕ್ಷಕರೇ. ಅವರು ತುಂಬಾ ಸಹೃದಯವಂತರೂ ಆಗಿದ್ದರು. ಅವರಿಂದ ನಾವು ಉರ್ದು ಭಾಷೆಯ ಗಂಧ ಗಾಳಿಯನ್ನೂ ಕಲಿತೆವು. ವಿಷ್ಣುವಿಗೆ ಉರ್ದು ಶಾಯರಿಗಳೆಂದರೆ ತುಂಬಾ ಇಷ್ಟ. ಕೆಲಸದಿಂದ ಬಂದಾಗಲೆಲ್ಲ ಗಝಲ್, ಶಾಯರಿಗಳನ್ನು ಕ್ಯಾಸೆಟ್ ಹಾಕಿ ಕೇಳುತ್ತಿದ್ದರು. ಹಿಂದೆಲ್ಲಾ ಅರ್ಥ ತಿಳಿಯದಿದ್ದಾಗ ತಿಳಿದವರನ್ನು ಕೇಳಿ ಶಾಯರಿಯ ಭಾವಾರ್ಥವನ್ನು ತಿಳಿದು ಸಂತಸಪಡುತ್ತಿದ್ದರು. ಆಮೇಲೆ ನಮಗೆ ಹಿಂದಿ ಮನೆಪಾಠ ಹೇಳಿಕೊಡಲು ಬರುತ್ತಿದ್ದವರನ್ನೇ ಉರ್ದು ಹೇಳಿಕೊಡಲು ಕೋರಿದೆವು. ಅವರೂ ಒಪ್ಪಿ ಹೇಳಿಕೊಟ್ಟರು. ನಾನು ಮತ್ತು ವಿಷ್ಣು ಇಬ್ಬರೂ ಜತೆಯಾಗಿ ಒಳ್ಳೆಯ ವಿದ್ಯಾರ್ಥಿ ಗೆಳೆಯರಂತೆ ಶಿಸ್ತುಬದ್ಧರಾಗಿ ಕುಳಿತು ಮೇಷ್ಟ್ರಿಂದ ಉರ್ದು ಭಾಷೆ ಕಲಿತೆವು. ಪ್ರೀತಿ, ಬದುಕಿನ ತತ್ತ್ವಗಳು ಶಾಯರಿ, ಗಝಲ್‌ಗಳಲ್ಲಿ ಮೂಡಿ ಬಂದಷ್ಟು ಗಾಢವಾಗಿ ಯಾವ ಪ್ರಕಾರದಲ್ಲೂ ಮೂಡಿ ಬಂದಿಲ್ಲ ಅಂತ ಆ ಮೇಷ್ಟ್ರು ಹೇಳುತ್ತಿದ್ದರು. ವಿಷ್ಣು ಬರಿಯ ತೆರೆಯ ಮೇಲೆ ಮಾತ್ರ ಪ್ರೇಮಿಯಾಗಿರಲಿಲ್ಲ, ಕ್ಯಾಮೆರಾ ಮುಂದೆ ಮಾತ್ರವೆ ಹೃದಯವಂತರಾಗಿರಲಿಲ್ಲ ನಿಜಬದುಕಿನಲ್ಲೂ ಅವರೂ ಹಾಗೆಯೇ ಇದ್ದವರು. ಅದಕ್ಕೆ ಅವರು ಜೀವನಪ್ರೀತಿ ಮತ್ತು ಶಾಯರಿಗಳ ಮೇಲಿದ್ದ ಒಲವೇ ಸಾಕ್ಷಿ ಎನ್ನಬಹುದು.

-ಭಾರತಿ ವಿಷ್ಣುವರ್ಧನ್

One thought on “ನಾನೂ ವಿಷ್ಣುವೂ ಮನೆಪಾಠ ಹೇಳಿಸಿಕೊಳ್ಳುತ್ತಿದ್ದೆವು

  1. Thanks for sharing such beautiful memory mam.
    Good to know some wonderful memories like this about our Legend Dr Vishnuvardhan and Dr Bharti Vishnuvardhan.

Leave a Reply

Your email address will not be published. Required fields are marked *

fifteen − 11 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

 

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

Back To Top