About Us Advertise with us Be a Reporter E-Paper

ವಿರಾಮ

ಮಿಷನರಿಗಳ ಕನ್ನಡ ವೃತ್ತಾಂತವು

ಡಾ. ಕಬ್ಬಿನಾಲೆ ವಸಂತ ಭಾರಧ್ವಜ್‌‌

ಮಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಮಿಷನರಿಗಳು ಕನ್ನಡವನ್ನು ಕಟ್ಟಿದ ಇತಿಹಾಸದ ವೃತ್ತಾಂತಗಳನ್ನು ದಾಖಲಿಸುವ ಈ ಕೃತಿ ಹಿರಿಯ ಜಾನಪದ ವಿದ್ವಾಂಸ ಪ್ರೊ. ಎ. ವಿ. ನಾವಡ ಅವರ ದಣಿವರಿಯದ ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಇಲ್ಲಿರುವ ಸಂಶೋಧನ ಲೇಖನಗಳು ಗ್ರಂಥ ಸಂಪಾದನೆ, ನಿಘಂಟು, ಅನುವಾದ ಕಾರ್ಯ, ಮೌಖಿಕ ಸಾಹಿತ್ಯ ಸಂಪಾದನೆ, ಜಾನಪದ ಶೋಧ ಮತ್ತು ದಾಸ ಸಾಹಿತ್ಯದ ಆಯಾಮಗಳನ್ನು ಕುರಿತು ಹಲವಾರು ಮಹತ್ವಪೂರ್ಣ ಸಂಗತಿಗಳನ್ನು ಹೊರಗೆಡಹುತ್ತವೆ. ಮಂಗಳೂರಿಗೆ ಕ್ರೆûಸ್ತಪಾದ್ರಿಗಳಾಗಿ ಸೇವೆಸಲ್ಲಿಸಲು ಬಂದ ಹೆಬಿಕ್, ಮ್ಯೊಗ್ಲಿಂಗ್, ವೈಗಲ್ ಕ್ರೆûಸ್ತಮತ ಪ್ರಚಾರಕಾರ್ಯದಲ್ಲಿ ಮಗ್ನರಾದರೆ, ಫರ್ಡಿನೆಂಡ್ ಕಿಟೆಲ್ ಅವರು ಮಾತ್ರ ಕನ್ನಡ ಸಾಹಿತ್ಯದ ನಿಷ್ಠಾವಂತ ಪರಿಚಾರಕರಾಗಿ ಕಂಡುಬರುವುದು ಗಮನಾರ್ಹ. ಅವರು ದಿನಾಂಕ 28 ಮಾರ್ಚ್ 1857 ರಂದು ಜೋಸೆನ್ ಹಾನ್‌ಸ್ ಎಂಬವರಿಗೆ ಬರೆದ ಪತ್ರದಲ್ಲಿ ‘ನನ್ನ ಮನೆ- ನಾಡು ಇರುವುದು ಬ್ರದರ್ಸ್‌ಗಳ ನಡುವೆ ಅಲ್ಲ. ಅದು ಹೌದೆಂದಾದರೆ ನಾನು ಮಿಷನ್ ಬಂಗ್ಲೆಯಲ್ಲೇ ನನ್ನ ಮನೆ-ನಾಡು ಎರಡೂ ಇರುವುದು ಕ್ರೆûಸ್ತೇತರರ ನಡುವೆಯೇ ಸರಿ’ ಎಂದು ಹೇಳಿದ ವಾಕ್ಯಗಳನ್ನು ಉಲ್ಲೇಖಿಸುತ್ತಾ ಲೇಖಕರು ‘ಹೀಗೆ ಸುವಾರ್ತಾಪ್ರಚಾರಕಾರ್ಯದಲ್ಲಿ ಕಿಟೆಲ್ ಸೋತರೂ ಕನ್ನಡವನ್ನು ಅರಗಿಸಿಕೊಳ್ಳುವ, ಪದಸಂಪತ್ತಿಯನ್ನು ಒಳಗಿಸಿಕೊಳ್ಳುವ ಕೆಲಸದಲ್ಲಿ ದೊಡ್ಡ ಗೆಲುವು ಕಂಡರು. ಅವರ ಭಾಷಾಧ್ಯಯನ ನೈಪುಣ್ಯ ಯಾರಿಗಾದರೂ ಬೆರಗು ತರುವಂತಹುದು. ಈ ಮೂಲಕ ಕಿಟೆಲರು ಹೊರಗಿನವರಾಗದೆ ಒಳಗಿನವರಾಗುವುದು ಸಾಧ್ಯವಾಯಿತು’ (ಪುಟ: 52) ಎಂದು ಸಮಂಜಸವಾಗಿ ಗ್ರಹಿಸಿದ್ದಾರೆ. ಹಾಗೆಯೇ ಕಿಟೆಲ್ ಅವರನ್ನು ಕನ್ನಡಿಗರು ಕೇವಲ ನಿಘಂಟು ರಚಕ ಎಂದಷ್ಟೆ ವಯ್ಯಾಕರಣಿ, ಸಾಹಿತ್ಯಚರಿತ್ರೆಕಾರ, ಗ್ರಂಥ ಸಂಪಾದನೆಕಾರ, ಸೃಜನಶೀಲ ಕವಿ, ಪಠ್ಯಪುಸ್ತಕ ರಚಕ, ಅನುವಾದಕ, ಶಾಸನ ತಜ್ಞ, ಸಂಸ್ಕೃತಿ ಚಿಂತಕ, ಸಂಸ್ಕೃತ ವೇದಪಂಡಿತ, ಲಿಂಗಾಯತ ಅಧ್ಯಯನಕಾರ, ಸಂಗೀತಜ್ಞ ಮುಂತಾಗಿ ಮೂಡಿಬಂದ ಒಬ್ಬ ಬಹುಶ್ರುತ ಭಾರತೀಯ ಚಿಂತಕನನ್ನಾಗಿ ಅವರನ್ನು ನೋಡಬೇಕೆಂಬ ಕಳಕಳಿಯನ್ನು ಹಂಚಿಕೊಂಡಿದ್ದಾರೆ.

ಮಿಷನರಿಗಳಿಂದ ಕನ್ನಡಿಗರಲ್ಲಿ ಉಂಟಾದ ಹೊಸ ಎಚ್ಚರವನ್ನು ಗುರುತಿಸುವ ಲೇಖಕರು ಮುದ್ರಣ ವ್ಯವಸ್ಥೆ, ಪಠ್ಯಪುಸ್ತಕ ರಚನೆ, ಹೊಸಗನ್ನಡದ ಅನಾವರಣ, ಕಾವ್ಯಸಂಗ್ರಹದ ವಿನೂತನ ಮಾದರಿ, ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆಯ ಹೊಸ ವ್ಯಾಕರಣದಲ್ಲಿ ಹೊಸದೃಷ್ಟಿ ಮುಂತಾದ ಹಲವಾರು ಹೊಸರೀತಿಯ ಸಾಂಸ್ಕೃತಿಕ ಅಧ್ಯಯನಕ್ಕೆ ಬೇಕಾದ ಕೀಲಿಕೈಯನ್ನು ಕೊಟ್ಟ ಇತಿಹಾಸದ ಹೆಜ್ಜೆಗುರುತುಗಳನ್ನು ಇಲ್ಲಿ ದಾಖಲಿಸಿದ್ದಾರೆ. ಬಿಬ್ಲಿಯಾಥಿಕಾ ಕರ್ಣಾಟಿಕಾ ಮಾಲಿಕೆಯಲ್ಲಿ ಪ್ರಕಟವಾದ ಗ್ರಂಥಗಳು, ಅನಂತರದ ಕಿಟೆಲ್ ಯುಗ ಮತ್ತು ರೈಸ್ ಯುಗದ ಪ್ರಕಟಣೆಗಳು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ರೂಪಿಸುವಲ್ಲಿ ಹೇಗೆ ಸಾಧನವಾಯಿತೆಂಬುದನ್ನೂ ಲೇಖಕರು ಇಲ್ಲಿ ಚರ್ಚಿಸಿದ್ದಾರೆ. ವಿಲಿಯಂ ಕೇರಿ ರಚಿಸಿದ ಎ ಗ್ರಾಮರ್ ಆಫ್ ದಿ ಕರ್ಣಾಟ ಲ್ಯಾಂಗ್ವೇಜ್ (17.08.1817) ದೂರದ ಕಲ್ಕತ್ತಾ ಹತ್ತಿರದ ಮುದ್ರಿತವಾಗಿ ಐತಿಹಾಸಿಕವಾಗಿ ಪ್ರಾಮುಖ್ಯ ಪಡೆದರೂ, ಹಲವು ದೋಷಪೂರ್ಣ ಹೆಣಿಗೆಗಳಿಂದ ಕೂಡಿರುವುದನ್ನು ಇಲ್ಲಿರುವ ಲೇಖನದಲ್ಲಿ ಗಮನಿಸಲಾಗಿದೆ. (ಈ ಗ್ರಂಥವು ಇದೇ ಲೇಖಕರ ಸಂಪಾದಕತ್ವದಲ್ಲಿ ಹಂಪಿ ವಿ.ವಿ.ಯ ಪ್ರಸಾರಾಂಗದಿಂದ ಇತ್ತೀಚೆಗೆ ಪ್ರಕಟವಾಗಿದೆ) ಕನ್ನಡ ಸಾಹಿತ್ಯದ ಸೇವೆಯಲ್ಲಿ ಜಾನ್ ಹ್ಯಾಂಡ್‌ಸ್, ಜಾನ್ ರೀವ್, ವೆಸ್ಲೆಯನ್ ಮೆಥಾಡಿಸ್‌ಟ್, ಜಾನ್ ಗ್ಯಾರೆಟ್, ಡೇನಿಯಲ್ ಸ್ಯಾಂಡರ‌್ಸನ್, ಜೆ.ಸ್ಟೀವೆನ್ಸನ್, ಹೆನ್ರಿ ಹೇಗ್ ಮುಂತಾದವರ ಪರಿಶ್ರಮವನ್ನೂ, ಬಾಸೆಲ್ ಮಿಷನ್ ಸಂಸ್ಥೆಯು ಮಂಗಳೂರು, ಹುಬ್ಬಳ್ಳಿ, ಧಾರವಾಡಗಳಲ್ಲಿ ಮಾಡಿದ ಸೇವೆಯನ್ನೂ ಇಲ್ಲಿ ಸ್ಮರಿಸಲಾಗಿದೆ.

ಮ್ಯೋಗ್ಲಿಂಗ್ ಸಂಪಾದಿಸಿದ ದಾಸರ ಪದಗಳು (1850) ಜನರ ನಾಲಗೆಯಿಂದ ನೇರವಾಗಿ ಸಂಗ್ರಹಿತವಾಗಿ ಅಕ್ಷರರೂಪ ಧರಿಸಿದ ಕಾರಣದಿಂದ ಮೌಖಿಕ ಸಾಹಿತ್ಯ ಸಂಪಾದನೆಯ ಶಿಸ್ತಿನ ಹಿನ್ನೆಲೆಯಲ್ಲಿ ಗಮನಿಸಬೇಕಾದ ಗ್ರಂಥ. ಅನಂತರದ ಕಾಲಘಟ್ಟದಲ್ಲಿ ಅನೇಕ ಪಾಠಭೇದ ಹಾಗೂ ಭಾಷಿಕ ವ್ಯತ್ಯಯಗಳಿಗೆ ಒಳಗಾಗಿ ಕೀರ್ತನೆಗಳಲ್ಲಿ ಉಂಟಾದ ಬದಲಾವಣೆಗಳನ್ನು ಅಧ್ಯಯನ ಮಾಡಲು ಕೂಡ ಇದು ಮುಖ್ಯ ಆಕರವಾಗಿದೆ. ಕರ್ನಾಟಕದ ವೈಷ್ಣವದಾಸರನ್ನು ಕುರಿತು ಎಂಬ ಲೇಖನ ದಾಸವರೇಣ್ಯರಾದ ಪುರಂದರದಾಸ, ಕನಕದಾಸರೊಂದಿಗೆ ಮಧ್ವದಾಸ, ವರಾಹ ತಿಮ್ಮಪ್ಪ ದಾಸ ಮುಂತಾದ ದಾಸರ ಬಗೆಗೆ ಹೆಚ್ಚಿನ ಮಾಹಿತಿಗಳನ್ನು ನೀಡುತ್ತದೆ. ಈ ಲೇಖನದ ಕೊನೆಯಲ್ಲಿರುವ ಟಿಪ್ಪಣಿಯಲ್ಲಿ ನೀಡಲಾದ ಮಾಹಿತಿಗಳು (ಕಾಟಿನಾಯಕನೆಂಬ ಹರಿದಾಸನು ಲಿಂಗಾಯತನಾಗಿ ಪರಿವರ್ತಿತನಾಗಿರುವುದು, ಅಳಗಿರಿ ಎನ್ನುವುದು ಬಹುಶಃ ಅಳಗರಮಲೆ ಎಂಬುದರ ತಪ್ಪುರೂಪ, ತಿಮ್ಮಪ್ಪದಲ್ಲಿ ಇರುವ ತಿಮ್ಮ ಅಂದರೆ ತಿರು ಮತ್ತು ಅವ, ಬ್ರಹ್ಮ, ವಿಷ್ಣು ಮತ್ತು ಶಿವ ಈ ಮೂರೂ ದೇವರುಗಳು ಇರುವ ಒಂದು ಗುಡಿಯು ಉಡುಪಿಯಲ್ಲಿದೆ ಇತ್ಯಾದಿ, ಪುಟ: 211-214) ಸಂಶೋಧನಾತ್ಮಕ ಮೌಲ್ಯವುಳ್ಳವುಗಳು ಎಂಬುದು ಗಮನಾರ್ಹ. ಏಸುಕ್ರಿಸ್ತನ ಜೀವನ ಗಾಥೆಯನ್ನು ಕಿಟೆಲ್ ವಿರಚಿತ ಕಥಾಮಾಲೆಯಲ್ಲಿ ಭಾಮಿನಿ, ವಾರ್ಧಕ ಷಟ್ಪದಿಗಳೂ, ಕೀರ್ತನೆಗಳಂತಹ ಛಂದೋಬಂಧಗಳೂ ಕುತೂಹಲಕರವಾಗಿದ್ದು, ಅನ್ಯದೇಶೀಯ ವಸ್ತುವೊಂದನ್ನು ಭಾರತೀಯ ಸಾಹಿತ್ಯ ಸಂದರ್ಭಕ್ಕೆ ದುಡಿಸಿಕೊಂಡ ನುಡಿಬಿನ್ನಾಣ ಮನಸ್ಸನ್ನು ಸೆಳೆಯುತ್ತದೆ ಎಂದಿದ್ದಾರೆ. ಇನ್ನು ಕನ್ನಡ ಜಾನಪದದ ವಿಚಾರವನ್ನು ಕುರಿತಾಗಿ ವೈಗಲ್ ಬರೆದ ಲೇಖನವು (1846) ಕನ್ನಡ ಜಾನಪದದ ಪ್ರಾಚೀನ ಪ್ರಸ್ತಾವ ಎಂಬ ಸಂಗತಿ (ಪುಟ: 215), ಜರ್ಮನ್ ಭಾಷೆಯಲ್ಲಿ ಹೆರ್ಮನ್ ಮ್ಯೋಗ್ಲಿಂಗ್ ಬರೆದ ಲೇಖನದಲ್ಲಿ (1860) ಕನಕದಾಸರ ಬಗೆಗಿನ ಸ್ಥಾಪಿತ ಐತಿಹ್ಯದ ಮಗ್ಗುಲು ಮಗುಚಿದ (ಪುಟ: 221) ಇತ್ಯಾದಿಗಳು ಕನ್ನಡ ಸಾಹಿತ್ಯ ಸಂಸ್ಕೃತಿಯ ಸಂದರ್ಭದಲ್ಲಿ ತುಂಬಾ ಮಹತ್ವವನ್ನು ಪಡೆಯುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ ಹೊಸಕಾಲದ ಹೊಸಿಲಲ್ಲಿರುವ ಯುವ ಸಂಶೋಧಕರಿಗೆ ಗಂಭೀರವಾದ ಅಧ್ಯಯನಕ್ಕೆ ಬೇಕಾದ ವ್ಯಾಪಕಸಾಮಗ್ರಿಗಳ ಮಿಂಚುನೋಟ ಈ ಗ್ರಂಥದಲ್ಲಿ ಯಥೇಚ್ಛವಾಗಿದೆ ಎನ್ನಬಹುದು.

Tags

Related Articles

Leave a Reply

Your email address will not be published. Required fields are marked *

Language
Close