About Us Advertise with us Be a Reporter E-Paper

ವಿರಾಮ

ಮೊಬೈಲ್ ಮೃತ್ಯುಚುಂಬನ!

ನಿನ್ನೆ ಕಾರ್ಯನಿಮಿತ್ತ ಬೆಂಗಳೂರಿನ ನಾಯಿಂಡನಹಳ್ಳಿಯಿಂದ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದೆ. ಮೆಟ್ರೋ ಪ್ರಯಾಣ ಸುರಕ್ಷಿತ, ಸಾಂಗ, ಸುಖ. ಮೈಸೂರು ರೋಡಿನಿಂದ ಸದ್ಯಕ್ಕೆ ಮೆಟ್ರೋ ನಿಲುಗಡೆ, ಆರಂಭ. ಹೀಗಾಗಿ ಬಹುತೇಕ ಸೀಟು ಗ್ಯಾರಂಟಿ. ನಾನು ಕುಳಿತಲ್ಲಿಂದಲೇ  ಒಳಗಿನಿಂದ ಉದ್ದಕ್ಕೂ ನೋಡಿದೆ. ಶೇ.70ರಷ್ಟು ಸೀಟುಗಳು ಭರ್ತಿ ಆಗಿದ್ದವು. ಮೆಟ್ರೋ ಒಳಗೆ ಗದ್ದಲ, ಗಲಾಟೆ ಏನೂ ಇರುವುದಿಲ್ಲ. ನಿಗದಿತ ನಿಲ್ದಾಣಗಳು ಬಂದಾಗ ಸ್ಥಿರ ಸೂಚನೆಯ ಧ್ವನಿ ಒಂದನ್ನ ಬಿಟ್ಟರೆ ಉಳಿದಂತೆ ಬಹುತೇಕ ಶಾಂತ. ಆದರೆ ನಿಮ್ಮ ನೆತ್ತಿಯನ್ನು ಮತಿಯನ್ನು ಕಿತ್ತು ಕೆಂಡವಾಗಿಸುವಂತಹ ಮೊಬೈಲ್ ಹಾವಳಿ ಮಾತ್ರ ನಿತ್ಯನಿರಂತರ. ಕೆಲವರು ಮೆಟ್ರೋ ಅನ್ನುವ ಪರಿಜ್ಞಾನವೂ ಇಲ್ಲದೆ ಅವರವರ ಮನೆಮಾರುಗಳಲ್ಲಿ ನಿಂತೋ, ಕುಳಿತೋ ಮಾತನಾಡುವಂತೆ ಮಾತನಾಡಿದರೆ, ಇನ್ನುಳಿದವರು ದಿವ್ಯಮೌನದ ಕವುದಿಯೊಳಗೆ ಕಿವಿಗಳೆರಡಕ್ಕೂ  (ಇಯರ್‌ಪೋನ್) ಹಾಕಿ ಮೊಬೈಲ್ ಒಳಗೆ ತಾವೋ, ತಮ್ಮೊಳಗೆ ಮೊಬೈಲೋ ಅನ್ನುವಂತೆ ಮುಳುಗಿರುತ್ತಾರೆ. ಮತ್ತೊಂದಿಷ್ಟು ಮಂದಿ ಕಿವಿಗಳಿಗೆ ವರ್ಧಕ ಹಾಕದೇ ಬರೀ ಕಣ್ಣುಗಳಿಂದ ಮೊಬೈಲ್‌ನಲ್ಲಿ ವಾಟ್ಸಪ್, ಫೇಸ್‌ಬುಕ್, ಟ್ವಿಟರ್ ಇತ್ಯಾದಿ ನೋಡುತ್ತಿರುತ್ತಾರೆ. ಇಡೀ ಮೆಟ್ರೋದ ಒಳಗೆ ಕುಳಿತ, ನಿಂತ ಯಾವುದೇ ಪ್ರಯಾಣಿಕರಿರಲಿ ಅವರು ಸುತ್ತಮುತ್ತ, ಅಕ್ಕಪಕ್ಕ, ಎಲ್ಲಿಯೂ ನೋಡುವುದಿಲ್ಲ. ಓದುವ ಹವ್ಯಾಸಕ್ಕೆ ಸಂಪೂರ್ಣ ಗೇಟ್‌ಪಾಸ್. ಕೇವಲ ಮೊಬೈಲ್, ಮೊಬೈಲ್ ಮತ್ತು ಮೊಬೈಲ್… ನೋಡು, ಕೇಳು, ಒತ್ತು. ಅವರವರೇ ಕಣ್ಣು ಕೀಲಿಸು,  ಅರಳಿಸು, ಕೆಲವು ಬಾರಿ ದೊಡ್ಡದಾಗಿ ನಗು. ಏಕಪಾತ್ರಾಭಿನಯ. ಹತ್ತುವರ್ಷಗಳ ಹಿಂದೆಯಾದರೆ ಹುಚ್ಚೆಂದು ಭಾವಿಸಿ, ಅನುಕಂಪ, ಕನಿಕರ ತೋರುವ ವ್ಯಾಪಾರ. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ಬದುಕು, ಭಾವ, ಉತ್ಕರ್ಷ, ಉನ್ಮಾದ ಎಲ್ಲವೂ ಮೊಬೈಲ್‌ನೊಂದಿಗೆ. ಮೊಬೈಲ್ ಇಲ್ಲದೇ ಬದುಕೇ ಇಲ್ಲ. ಬದುಕು ಅನ್ನುವುದು ಸಾರ್ಥಕ, ಅಪ್‌ಡೇಟ್ ಆಗಬೇಕಿದ್ದರೆ ಮೊಬೈಲ್ ಕೈ, ಕಿವಿ, ಕಣ್ಣು, ಬಾಯಿಗಳಲ್ಲಿ ಕೀಲಿಸಿಕೊಂಡಿರಬೇಕು. ಊಟ, ಆಹಾರ, ನಿದ್ದೆ, ವಿಶ್ರಾಂತಿ ಉಹೂಂ ಯಾವುದೂ ಬೇಡ. ಮೊಬೈಲ್ ಒಂದಿದ್ದರೆ ಸಾಕು.  ಬಂಗಾರ.

ಕಾಲಯಾಪನೆಯಲ್ಲಿ ಈ ಜಂಗಮವಾಣಿ ಇಂದು ಪ್ರಪಂಚವನ್ನೇ ಒಂದು ಮಾಡುತ್ತಿದೆ. ಕಿರಿದುಗೊಳಿಸುತ್ತಿದೆ. ಕ್ಷಣಕ್ಷಣದ ಸುದ್ದಿ, ಸಮಾಚಾರಗಳನ್ನು ಹೊತ್ತು ತರುವ ಮೂಲಕ ಹತ್ತಿರವಾಗಿಸುತ್ತಿದೆ. ಮಾಹಿತಿ ಕಣಜವಾಗಿಯೂ ಕೆಲಸ ಮಾಡುವ ಜೊತೆ ಇತಿಹಾಸದ ಅತ್ಯಪರೂಪದ, ಮಹತ್ವದ ದಾಖಲೆಗಳನ್ನೂ ಒದಗಿಸುತ್ತಿದೆ. ಆಡಿಯೋ, ವಿಡಿಯೋ, ಚಿತ್ರ, ಚಿತ್ರಿಕೆ ಹೀಗೆ ಈ ಮೊಬೈಲ್ ಏನನ್ನ ತರುತ್ತದೆ, ಕೊಡುತ್ತದೆ ಅಂತ ಕೇಳಿದರೆ ಅದೇನು ಕೊಡುವುದಿಲ್ಲ ಹೇಳಿ ಅನ್ನುವ ವರ್ತಮಾನ. ಹಳ್ಳಿ-ದಿಲ್ಲಿಗಳನ್ನ ಒಂದು ಮಾಡಿದೆ. ಕಲಿಕೆಯ ಪಠ್ಯವೂ, ವಾಹಕವೂ  ಪ್ರೀತಿ ಹಂಚುವ ಸುಲಭ, ಸಮೃದ್ಧ ಮಾಧ್ಯಮವಾಗಿದೆ. ಸಿನಿಮಾ, ಕಿರುಚಿತ್ರ, ಸಾಕ್ಷ್ಯಚಿತ್ರ ಎಲ್ಲವುಗಳ ಸ್ಟೋರೇಜ್ ಆಗಿದೆ. ಶುಭಾಶಯಗಳ, ಸುಖಾಶೀರ್ವಾದಗಳ, ಸಾವು, ನೋವು, ಅಪಘಾತಗಳ, ಹೀಗೆ ಮೊಬೈಲ್ ಎಲ್ಲವುಗಳ ತಾವಾಗಿ ಬದುಕನ್ನ ಸಂಪೂರ್ಣ ಆವರಿಸಿಕೊಂಡಿದೆ. ಮೊಬೈಲ್ ಅನ್ನುವ ವಸ್ತು, ವಿಷಯವನ್ನ ಧನಾತ್ಮಕವಾಗಿಯಷ್ಟೇ ನೋಡಿದರೆ ಅದರ ಉಪಯೋಗ, ಉಪಲಬ್ಧತೆ, ಸಾಂಗತ್ಯ, ಸಹಾಯ, ಪ್ರಾಯಶಃ ವರ್ತಮಾನದಲ್ಲಿ ಅದಕ್ಕೆ ಪರ್ಯಾಯವೂ ಇಲ್ಲ, ಸಾಟಿಯೂ ಇಲ್ಲ.

ಸರ್ವಶಕ್ತ; ಸರ್ವನಾಶ

ಸೆಲ್ಫಿಯಿಂದ ಸಾಗರದಾಚೆಯ ಜನ ಜಾಗದೊಂದಿಗಿನ ಸಜೀವ ಸಂವಹನದವರೆಗೆ  ಲಭ್ಯತೆಯ ವಿಶ್ವರೂಪ ಕ್ಷಣಕ್ಷಣಕ್ಕೆ ದರ್ಶನವಾಗುತ್ತಿದೆ. ಆದರೆ ಮೊಬೈಲ್ ಅನ್ನುವ ಮೊಬಿಲಿಟಿಯ ಋಣಾತ್ಮಕತೆಯ ಕುರಿತು ಒಮ್ಮೆ, ಒಂದೇ ಒಂದು ಬಾರಿ ಯೋಚಿಸಿದರೆ ಅದರ ದುರಂತ, ಅನಾಹುತ, ಅದು ಮಾಡುತ್ತಿರುವ ಸಾಮಾಜಿಕ, ಸಾಂಸ್ಕೃತಿಕ, ಜೈವಿಕ, ಭಾವನಾತ್ಮಕ, ಮಾನಸಿಕ, ಚಾರಿತ್ರಿಕ ಆಘಾತಗಳು ಮನುಷ್ಯ ಕುಲವನ್ನೇ ನಾಶ ಮಾಡಿ ಕೊನೆಗೊಂದು ದಿನ ಆಪೋಷನ ತೆಗೆದುಕೊಂಡು ಬಿಡುತ್ತದೇನೋ ಅನ್ನುವ ಮಟ್ಟಕ್ಕೆ ರುದ್ರಭೀಕರ ಮತ್ತು ಭೀಬತ್ಸವಾಗಿದೆ. ಮೊಬೈಲ್ ನಮ್ಮ ಬದುಕು, ಭಾವ, ಸಮಾಜದ ಹಾಸುಹೊಕ್ಕಾದ ವಸ್ತು. ಅದು  ಉಳಿದ ಜಾಗಗಳೇ ಇಲ್ಲ. ಆಯವ್ಯಯದಿಂದ, ಆಗುಹೋಗುಗಳವರೆಗೆ, ಹುಟ್ಟು ಸಾವಿನಿಂದ, ಬದುಕು ಕಟ್ಟುವ, ಕೆಡಹುವ ವರೆಗೆ, ಸಂಬಂಧ ಕುದುರುವುದರಿಂದ ಅದು ಕದಡುವ, ಕೆಡಹುವವರೆಗೆ, ಸಾಮಾಜಿಕ ಸಂಯಮ, ಸಮಗ್ರತೆ, ಸಮೃದ್ಧತೆ, ಸಾಮರಸ್ಯಗಳನ್ನ ಹುಟ್ಟುಹಾಕುವುದರಿಂದ ಆ ಎಲ್ಲಾ ವ್ಯವಸ್ಥೆಗಳನ್ನ ಕುಟ್ಟಿ ಪುಡಿಗೈದು ಸ್ಮಶಾನವಾಗಿಸುವವರೆಗೆ ಮೊಬೈಲ್ ಇಂದು ಸರ್ವತಂತ್ರ ಸ್ವತಂತ್ರ, ಸರ್ವಶಕ್ತ.

ಒಂದೇ ಒಂದು ಚಿತ್ರ, ಸುದ್ದಿ, ಕೂಗು, ಹಾಹಾಕಾರ, ಅಳು, ಆಕ್ರಂದನ ಕ್ಷಣಮಾತ್ರಲ್ಲಿ ನಾವು ನಿಂತ ಸಾಮಾಜಿಕ ಪರಿಸ್ಥಿತಿಯನ್ನ ಅಲ್ಲೋಲಕಲ್ಲೋಲ ಮಾಡಬಹುದು. ಮಾಡುತ್ತಿದೆ  ಮೊಬೈಲ್ ನಮಗೆ ಒದಗಿದ ಕೇವಲ ಧನಾತ್ಮಕ ವಸ್ತು, ಸಂವಹನ ಸೌಲಭ್ಯವಷ್ಟೇ ಅಲ್ಲ. ಅದು ಮನುಷ್ಯ ಕುಲವನ್ನ ಮುಗಿಸುವಷ್ಟು, ಸಾಮಾಜಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವಷ್ಟು ಅನಾಹುತಕಾರೀ ಆಗಂತುಕ. ಮಗುವಿನಿಂದ ಹಿಡಿದು ಮಾಗಿದ ವಯಸ್ಕರವರೆಗೂ ಈ ಮೊಬೈಲ್ ಭೂತ ಬೆಂಬಿಡದೇ ಕಾಡುತ್ತಿದೆ. ಮೊಬೈಲ್, ಬದುಕಿಗೆ ಪೂರಕವಾಗಿ ವರ್ತಿಸುವ ಬದಲು ಮಾರಕವೂ, ಮರ್ಮಾಘಾತಕಾರಿಯೂ ಆಗಿರುವುದು ವರ್ತಮಾನದ ವ್ಯಂಗ್ಯವೂ, ಅಚ್ಚರಿಯೂ ಆಗಿದೆ.  ಮನುಷ್ಯನೇ ಹುಟ್ಟುಹಾಕಿದ 21ನೇ ಶತಮಾನದ ಆಧುನಿಕ ಭಸ್ಮಾಸುರ ಯಾರು ಅಂದರೆ ಅಣುಬಾಂಬಿಗಿಂತ  ಭೀಕರ ಅದು ಮೊಬೈಲ್. ಮತ್ತು ಅದರ ಬಳಕೆಯ ಅಪರಿಮಿತತೆಯ ಪರಿಣಾಮ.

ಸಮೂಹ ಸನ್ನಿಮೂಲ

ಮೊಬೈಲ್ ಸಾಮಾಜಿಕರಲ್ಲಿ ನಿಧಾನವಾಗಿ ಅಮಾನುಷತೆ, ಅನಾಗರಿಕತೆ ಮತ್ತು ಭಾವಶೂನ್ಯತೆಯನ್ನ ತೀವ್ರಗೊಳಿಸುತ್ತಿರುವುದರ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ; ಆಗಿವೆ. ಆದರೆ ಅದು ಈಗ ಸೃಷ್ಟಿಸುತ್ತಿರುವ, ಸೃಜಿಸುತ್ತಿರುವ ಹೊಸ ಅವತಾರ ಏನೆಂದರೆ ಸಮೂಹ ಸನ್ನಿ. ವಾಟ್ಸಪ್, ಸಾಮಾಜಿಕ ಜಾಲತಾಣಗಳ ಮೂಲಕ ಸ್ವಯಂಕೃತ, ಉದ್ದೇಶಪೂರ್ವಕ ಚಿತ್ರಿತ ವಿಡಿಯೋಗಳು, ಆಡಿಯೋಗಳು, ಸುದ್ದಿಗಳು ಸಮೂಹ ಸಾವಿಗೆ, ವ್ಯಕ್ತಿಗತ ಸಾವುಗಳಿಗೆ ಕಾರಣವಾಗುತ್ತಿದೆ. ಅಥವಾ ಎಲ್ಲಿಯದ್ದೋ,  ಸಂದರ್ಭಗಳದ್ದೋ ವಿಡಿಯೋಗಳಿಗೆ ಮರುಸೃಷ್ಟಿ, ಮರುವ್ಯಾಖ್ಯಾನ ಮಾಡಿ ಅದನ್ನು ತಂತಮ್ಮ ಚೋದ್ಯ, ಕುಚೋದ್ಯ ಹಾಗೂ ಮೂಗಿನ ನೇರಕ್ಕೆ ಬಳಸಿಕೊಳ್ಳುವ ಖದೀಮರ ಆವುಟವೂ ಮೇರೆಮೀರುತ್ತಿದೆ. ಪಶ್ವಿಮ ಬಂಗಾಳದಲ್ಲಿ ಮುಸ್ಲಿಂ ಗುಂಪೊಂದು ಬ್ರಾಹ್ಮಣರೊಬ್ಬರನ್ನು ವಿವಸ್ತ್ರಗೊಳಿಸಿ, ಹೊಡೆದು, ಬಡಿದು, ತುಳಿದು ಹಿಂಸಿಸುವ, ಅದನ್ನು ತಡೆಯಲು ಬಂದ ಮಗಳನ್ನೂ ಅವಮಾನಿಸುವ ವಿಡಿಯೋ ವೈರಲ್ ಆಗಿತ್ತು. ಇದನ್ನು ಕಂಡು ದೇಶದ ವಿವಿಧ ಮೂಲೆಗಳಲ್ಲಿ ಗಲಾಟೆ, ದೊಂಬಿ, ಸಾವುಗಳೂ ಸಂಭವಿಸಿದವು. ಕೊನೆಗೆ ನೋಡಿದರೆ ಅದು ಪಶ್ಚಿಮ ಬಂಗಾಳದ್ದೂ ಅಲ್ಲ,  ವ್ಯಕ್ತಿ ಬ್ರಾಹ್ಮಣನೂ ಅಲ್ಲ, ಅದು ವ್ಯಕ್ತಿಗತ ದ್ವೇಷಾಸೂಯೆಗೆ ಸಂಬಂಧಿಸಿದ ಇನ್ನೆಲ್ಲಿಯದ್ದೋ ವಿಡಿಯೋ.

ಇದೇ ರೀತಿ ಮುಸ್ಲಿಂ ಯುವಕನನ್ನು (ಮೇಲ್ವರ್ಗದವರು ಎಂದು ಟಿಪ್ಪಣಿ ಹಾಕಿದ) ಸಾರ್ವಜನಿಕವಾಗಿ ಹೊಡೆದು ಸಾಯಿಸಿದ ವಿಡಿಯೋ ಒಂದು ದೇಶಾದ್ಯಂತ ಮಾರಾಮಾರಿಗೆ, ಕಾನೂನು ಭಂಗಕ್ಕೆ ಕಾರಣವಾಗಿತ್ತು. ಇದು ಕೂಡ ಹಿಂದೂ ಮುಸ್ಲಿಂ ಧರ್ಮಕಲಹ ಅಲ್ಲ ಅನ್ನುವುದು ನಂತರ ತಿಳಿಯಿತು. ಆದರೆ ಆ ಹೊತ್ತಿಗೆ ಸಾಕಷ್ಟು ರಕ್ತ ಚೆಲ್ಲಿ ಆಗಿತ್ತು. ಇಂದಿನ ಒಟ್ಟೂ ಪ್ರಪಂಚದ ವಿದ್ಯಮಾನ, ಭಾರತದ ಸೂಕ್ಷ್ಮ  ಪರಿಸ್ಥಿತಿಗಳಲ್ಲಿ ಧರ್ಮಕಲಹ, ಧಾರ್ಮಿಕ ಭಯೋತ್ಪಾದಕತೆ ಹೊಡೆದು ಕಾಣುತ್ತದೆ. ಜೆಹಾದಿ ಚಟುವಟಿಕೆ, ಪರ್ಯಾಯವಾಗಿ ಭಾರತದಲ್ಲಿ ಮತಾಂಧ ಹಿಂದೂ ಪುಂಡಪೋಕರಿಗಳ ಪ್ರತಿ ಆಘಾತಗಳು. ಇಂಥ ಸಂದರ್ಭದಲ್ಲಿ ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣ, ವಾಟ್ಸಪ್‌ಗಳಲ್ಲಿ ಕಿಡಿಗೇಡಿಗಳು ಪ್ರಚೋದಿತ ಆಡಿಯೋ, ವಿಡಿಯೋಗಳನ್ನ ಹರಿಬಿಡುವ ಮೂಲಕ ಮನಸು ಮನಸುಗಳನ್ನ, ಸಮಾಜ, ದೇಶಗಳನ್ನ ಪ್ರಕ್ಷುಬ್ಧಗೊಳಿಸುತ್ತಿದ್ದಾರೆ. ಅದನ್ನ ನಿರ್ಬಂಧಿಸಲಾಗದಷ್ಟು ನಮ್ಮ ನೆಟ್‌ವರ್ಕ್ ಬೆಳೆದಿದೆ. ತಂತ್ರಜ್ಞಾನ ಭಸ್ಮಾಸುರನನ್ನ ಸೃಜಿಸಬಲ್ಲದು. ಆದರೆ ಅದನ್ನು ನಿಯಂತ್ರಿಸುವ, ಹುಟ್ಟಡಗಿಸುವ ಕೆಲಸವನ್ನ ಮಾಡಲಾರದು. ನಮ್ಮ ಸಾಮಾಜಿಕ  ಬಹುತೇಕ ಕ್ರಿಯೇಷನ್‌ಸ್ಗಳು ಏಕಮುಖಿ. ವನ್‌ವೇ.

‘ಕೀಕಿ’ ಎಂಬ ಖೋಖೋ

ಕೆಲವು ದಿನಗಳ ಹಿಂದೆ ಬ್ಲೂವೇಲ್ ಎಂಬ ಸಾವಿನಾಟದ ಅಬ್ಬರವಿತ್ತು. ಪಾಶ್ಚಿಮಾತ್ಯ ದೇಶಗಳ ಖಯಾಲಿಯಾದ ಈ ಸಾವಿನಾಟ ಭಾರತದಲ್ಲಿ ಹಲವಾರು ಯುವಕ ಯುವತಿಯರ ಸಾವಿಗೆ, ಆತ್ಮಹತ್ಯೆಗೆ ಕಾರಣವಾಗಿದ್ದರೆ ಅದರ ಹವಿರ್ಭಾಗ ಸಲ್ಲಬೇಕಾದದ್ದು ಅಂತರ್ಜಾಲಕ್ಕೆ ಮತ್ತು ಸಾಮಾಜಿಕ ಜಾಲತಾಣಗಳಿಗೆ. ನಮ್ಮ ಇಂದಿನ ಯುವ ತಲೆಮಾರಿನ ಮನೋಭಾವ ಸಾವು, ಅನಾಹುತ, ವಿಚ್ಛಿದ್ರಕಾರಕ ಎಂಬ ಭೀಭತ್ಸಕಾರಿ ದೃಶ್ಯಾವಳಿಗಳನ್ನ ಕಂಡು ಹೇಸುವ, ಹೆದರುವ, ಹಿಂಜರಿಯುವ ಪ್ರಶ್ನೆಗಿಂತ,  ಅಳವಡಿಸಿಕೊಳ್ಳುವ, ಅನುಸರಿಸುವ, ಅಹ್ವಾನಿಸಿಕೊಳ್ಳುವ ಮನೋವಿಕೃತಿಯನ್ನ ಮೈಗೂಡಿಸಿಕೊಳ್ಳುತ್ತಿದೆ. ಆ ಬ್ಲೂವೇಲ್ ಆಟ-ಆತ್ಮಹತ್ಯೆ ಒಂದಿಷ್ಟು ತಗ್ಗಿತೇನೋ ಅನ್ನುವಷ್ಟರಲ್ಲಿ ಕಳೆದ ವಾರ ಕಾಣಿಸಿಕೊಂಡದ್ದು ‘ಕೀಕಿ’ ಆಟ.

ಕೀಕಿ ಆಟ ಚಲಿಸುವ ವಾಹನಗಳಿಂದ ಇಳಿದು, ತೆರೆದ ಬಾಗಿಲಿನ ಸಮಾಂತರ ರಸ್ತೆಯಲ್ಲಿ ಕುಣಿಯುವುದು. ಇದನ್ನ ಅದಾವ ಪರಮಾತ್ಮ ಹುಟ್ಟುಹಾಕಿದನೋ. ಈ ರೋಡ್ ನೃತ್ಯವನ್ನ ಚಿತ್ರೀಕರಿಸಿ ಜಾಲತಾಣಗಳಿಗೆ ಅಪ್‌ಲೋಡ್ ಮಾಡಿದರೆ ಅವರ ಶ್ರಮ ವಿಶ್ವ ಗೆದ್ದ ಸಂಭ್ರಮಕ್ಕೆ ಸಮ. ಇದು ಪಕ್ಕಾ ಅನಾಹುತಕಾರಿ. ಬಿಸಿಯಾಗಿರುವ ರಸ್ತೆ, ಚಲಿಸುವ  ತೆರೆದ ಬಾಗಿಲು, ನೃತ್ಯ. ಆ ನೃತ್ಯದ ಚಿತ್ರೀಕರಣ. ಈಗಾಗಲೇ ವಿದೇಶಗಳಲ್ಲಿ ಅಸಂಖ್ಯ ಸಾವಿಗೆ ಕಾರಣವಾದ ‘ಕೀಕಿ’ ಕಳೆದೆರಡು ವಾರಗಳಲ್ಲಿ ಭಾರತಕ್ಕೂ ಕಾಲಿಟ್ಟಿದೆ. ಕನ್ನಡದ ಕೆಲವು ಸಿನಿಮಾ ನಟ-ನಟಿಯರೆಂಬ ಅಂಡೆಪಿರ್ಕಿಗಳೂ ಕೀಕಿ ಆಟವಾಡಿ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬ ತನ್ನ ಐದು ವರ್ಷದ ಮಗುವಿನಿಂದ ಕೀಕಿ ಆಟ ಆಡಿಸಿದ ವಿಡಿಯೋ ಕೂಡ ಲಭ್ಯವಾಗಿದೆ. ಎಲ್ಲರ ವಿರುದ್ಧವೂ ಕೇಸ್ ದಾಖಲಾಗಿದೆ. ಆದರೂ ದಿನದಿಂದ ದಿನಕ್ಕೆ ಕೀಕಿ ಆಟ ವಿಸ್ತರಿಸುತ್ತಲೇ ಇದೆ.  ‘ಖೋ’ ಕೊಡುವ ಆಟ. ಒಬ್ಬರಿಂದ ಒಬ್ಬರಿಗೆ ದಾಟಿಸುವ ದಾರುಣ ಗೇಮ್.

ಮಕ್ಕಳ ಕಳ್ಳರೆಂದು ಕೊಲ್ಲುವ ಆಟ!

ಈಚೆಗೆ ನಿಮಗೆ ನೆನಪಿದೆ. ದೇಶಾದ್ಯಂತ ಮಕ್ಕಳ ಕಳ್ಳರೆಂದು ಅಮಾಯಕರನ್ನ ಅಮಾನುಷವಾಗಿ ಸಾರ್ವಜನಿಕರು ಕೊಲ್ಲುತ್ತಿರುವುದು.

ರಾಜಸ್ಥಾನದ ಕಾಲುರಾಂ ಎಂಬಾತನನ್ನು ಮಕ್ಕಳಕಳ್ಳ ಎಂದು ಭಾವಿಸಿ, ಚಾಮರಾಜಪೇಟೆಯ ಜನರು ಬಡಿದು ಸಾಯಿಸಿದರು. ಈ ಘಟನೆಯ ಸಂಬಂಧ 14 ಜನ ಆರೋಪಿಗಳ ಬಂಧನ. ಇದಕ್ಕೆ ಕಾರಣ, ವಾಟ್ಸಪ್‌ನಲ್ಲಿ ಮಕ್ಕಳ ಕಳ್ಳರ ಕುರಿತು ಜನರು ನೋಡಿದ್ದ ವಿಡಿಯೋ.

ಮಹಾರಾಷ್ಟ್ರದ  ಗ್ರಾಮದಲ್ಲಿ ಐದು ಮಂದಿಯನ್ನು ಬಡಿದು ಸಾಯಿಸಿದರು. ಕರ್ನಾಟಕದ ಗೋಸಾಯಿ ಜನಾಂಗದ ಈ ಐವರು ಅಲ್ಲಿಗೆ ಹೋಗಿದ್ದಾಗ, ಅವರನ್ನು ಮಕ್ಕಳ ಕಳ್ಳರು ಎಂದು ತಪ್ಪುಗ್ರಹಿಕೆಯಿಂದ ಜನರು ಸಾಯಿಸಿದರು. ಗೋಸಾಯಿ ಜನಾಂಗದ ವೃತ್ತಿಯು ‘ಭವತಿ ಭಿಕ್ಷಾಂದೇಹಿ’

 ಬೀದರ್ ಜಿಲ್ಲೆ, ಔರಾದ್ ತಾಲೂಕು, ಮುರ್ಕಿ ಗ್ರಾಮ. ಒಬ್ಬನನ್ನು ಜನರು ಬಡಿದು ಸಾಯಿಸಿದರು. ಇನ್ನಿಬ್ಬರ ಮೇಲೆ ತೀವ್ರ ಹಲ್ಲೆ. ಹಂದಿಕೇರಾ ಗ್ರಾಮದ ಮಹಮದ್ ಬಶೀರ್ ಎಂಬುವವರ ಆಹ್ವಾನದ ಮೇರೆಗೆ, ಹಳ್ಳಿಗೆ ಭೇಟಿ ನೀಡಲು ಮೂವರು  ಬಂದರು. ಇನ್ನೂ ನಂಬರು ಬರೆಯದ ಹೊಸ ಕಾರಿನಲ್ಲಿ ಬರುತ್ತಿದ್ದಾಗ, ಬಾಲ್ಕೂರ್ ತಾಂಡಾ ಬಳಿ ಕಾಫಿಗೆಂದು ಇಳಿದವರು, ಮಕ್ಕಳಿಗೆ ಚಾಕಲೇಟ್ ಕೊಡಲು ಯತ್ನಿಸಿದರು. ಇದನ್ನು ಕಂಡು, ಸಂಶಯಗೊಂಡ ಸ್ಥಳೀಯರು ಇವರನ್ನು ಮಕ್ಕಳ ಕಳ್ಳರೆಂದು ತಪ್ಪಾಗಿ ತಿಳಿದು, ಹೊಡೆಯಲು ಆರಂಭಿಸಿದರು. ಮಹಮದ್ ಬಶೀರ್ ಎಂಬ ಸ್ಥಳೀಯ ವ್ಯಕ್ತಿ ತಡೆಯಲು ಯತ್ನಿಸಿದರೂ, ಜನರ ಗುಂಪು ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ. ಅವರು ತಪ್ಪಿಸಿಕೊಂಡು, ತಮ್ಮ ಹೊಸ ಕೆಂಪು ಕಾರು ಹತ್ತಿ ವೇಗವಾಗಿ ಹೊರಟರು. ಈ  ಘಟನೆಯನ್ನು ವಿಡಿಯೋ ಚಿತ್ರೀಕರಣ ಮಾಡಿದ್ದ ಸ್ಥಳೀಯರು, ಮುಂದಿನ ಗ್ರಾಮವಾದ ‘ಮುರ್ಕಿ’ಯ ಜನರಿಗೆ ವಾಟ್ಸಪ್ ಕಳಿಸಿದರು. ‘ಮಕ್ಕಳ ಕಳ್ಳರು ಕಾರಿನಲ್ಲಿ ಬರುತ್ತಿದ್ದಾರೆ’ ಎಂಬ ಸಂದೇಶ ಕಳಿಸಿದರು. ಮುರ್ಕಿ ಗ್ರಾಮದ ಜನರು ರಸ್ತೆ ಮೇಲೆ ಮರ ಇಟ್ಟು, ರಸ್ತೆ ತಡೆದಿದ್ದರು. ಕಾರಿನಲ್ಲಿದ್ದವರು ಗಾಬರಿಯಿಂದ ಮರದ ಮೇಲೆ ಕಾರನ್ನು ಹಾಯಿಸಿದಾಗ, ಕಾರು ಉರುಳಿತು. ಸಿದ್ಧರಾಗಿದ್ದ ಸ್ಥಳೀಯರು ದೊಣ್ಣೆಯಿಂದ ಬಡಿದಾಗ, ಸಾಪ್‌ಟ್ವೇರ್ ಇಂಜಿನಿಯರ್ ಮಹಮದ್ ಅಜಾಮ್ ಮೃತನಾದ. ಇತರ ಇಬ್ಬರು ಗಾಯಗೊಂಡರು. ಈ ಘಟನೆಗೆ  ವಿಡಿಯೋ ಕಾರಣ ಎಂಬುದು ಸ್ಪಷ್ಟ.

ಕರಾಚಿಯಲ್ಲಿ 2016ರಲ್ಲಿ ಒಂದು ವಿಡಿಯೋ ತಯಾರಿಸಲಾಗಿತ್ತು. ಇದರ ಉದ್ದೇಶ ಮಕ್ಕಳ ಕಳ್ಳರ ವಿರುದ್ಧ ಜನಜಾಗೃತಿ. ನಾಲ್ಕಾರು ಮಕ್ಕಳು ಆಟವಾಡುವಾಗ, ಮೋಟರ್ ಬೈಕ್‌ನಲ್ಲಿ ಬಂದ ಇಬ್ಬರು, ಮಕ್ಕಳ ಪೈಕಿ ಒಬ್ಬನನ್ನು ಎತ್ತಿಕೊಂಡು ಹೋಗುತ್ತಾರೆ. ಕರಾಚಿಯ ‘ರೋಷನಿ ಹೆಲ್‌ಪ್ ಲೈನ್’ ಎಂಬ ಎನ್‌ಜಿಒ ಈ ವಿಡಿಯೋವನ್ನು ತಯಾರಿಸಿ, ಜನಜಾಗೃತಿಗೆಂದು ಪ್ರಚುರಪಡಿಸಲಾಗಿತ್ತು. ಕರಾಚಿಯಲ್ಲಿ ಪ್ರತಿವರ್ಷ 3,000 ಮಕ್ಕಳು ಅಪಹರಣಕ್ಕೆ ಒಳಗಾಗುತ್ತಾರೆ. ಈ ವಿಡಿಯೋವನ್ನು 6 ಮಿಲಿಯಬಾರಿ ಫೇಸ್‌ಬುಕ್‌ನಲ್ಲಿ  ಈ ವಿಡಿಯೋಕ್ಕೆ, ಸುಳ್ಳು ಅರ್ಥದ ಆಡಿಯೋ ಬೆರೆಸಿ, ಭಾರತದಾದ್ಯಂತ ವಾಟ್ಸಪ್‌ನಲ್ಲಿ ಹಂಚಲಾಗಿದೆ. ಈ ವಿಡಿಯೋದ ತಪ್ಪು ಸಂದೇಶವೇ ಮಹಾರಾಷ್ಟ್ರದಲ್ಲಿ ಐವರ ಸಾವಿಗೆ ಕಾರಣ ಎಂದು ಅಲ್ಲಿನ ಪೊಲೀಸ್ ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close