About Us Advertise with us Be a Reporter E-Paper

ಅಂಕಣಗಳು

ಮೋದಿ ಸರಕಾರಕ್ಕೆ ನಿರೀಕ್ಷಿತ ವಿಶ್ವಾಸ

ಸುಮಾರು 15 ವರ್ಷಗಳ ನಂತರ ಆಡಳಿತಾರೂಢ ಸರಕಾರದ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾಗಿ ತಾರ್ಕಿಕ ಅಂತ್ಯ ಕಂಡಿದೆ. ಸರಕಾರದ ವಿರುದ್ಧ ಪ್ರತಿಪಕ್ಷಗಳ  ಅತಿ ದೊಡ್ಡ ಅಸ್ತ್ರವಾದ ಅವಿಶ್ವಾಸ ನಿರ್ಣಯದ ಗೊತ್ತುವಳಿ ಲೋಕಭೆಯಲ್ಲಿ ನಪಾಸಾಗಿ ಮೋದಿ ಸರಕಾರ ನಿರೀಕ್ಷೆಯಂತೆಯೇ ತನ್ನ ಪಾಬಲ್ಯ ಮೆರೆಯುವಲ್ಲಿ ಯಶಸ್ವಿಯಾಗಿದೆ. ಎನ್‌ಡಿಎ ಸರಕಾರದ ಆಡಳಿತಾವಧಿಯ ಬಹುಪಾಲು ಕಡೆಯ ಅಧಿವೇಶನ ಸರಕಾರ ಮತ್ತು ಪ್ರತಿಪಕ್ಷಗಳ ನಡುವಿನ ಅಂತರವನ್ನು ಬಯಲು ಮಾಡಿದೆ. ಏಕೀಕೃತ ಒಕ್ಕೂಟ ರಚಿಸಿಕೊಂಡು ಪ್ರಧಾನಿ ಮೋದಿ ವಿರುದ್ಧ ಮತಕಣಕ್ಕಿಳಿಯುವ ಕಾಂಗ್ರೆಸ್‌ನ ಉಮೇದಿಗೆ ಈ ವಿಶ್ವಾಸ ಮತ ದೊಡ್ಡ ಸವಾಲೇ ಆಗಿತ್ತು. ತನ್ನನ್ನು ಧ್ರುವವಾಗಿರಿಸಿಕೊಂಡು ಬಿಜೆಪಿ ವಿರೋಧ ಒಕ್ಕೂಟ ರಚನೆ  ಎಂಬುದು ಪ್ರಾಯಶಃ ಕಾಂಗ್ರೆಸ್‌ಗೂ ಈಗ ಅರಿವಾಗಿರಬಹುದು. ಅವಿಶ್ವಾಸ ನಿರ್ಣಯ ಎಂದ ಮೇಲೆ ಸರಕಾರದ ನೀತಿ, ನಿಲುವುಗಳನ್ನು ಜರಡಿ ಹಿಡಿದು ಅವರ ಮುಖಕ್ಕೆ ಎತ್ತಿ ತೋರಿಸುವ ಮತ್ತು ಆ ಕಾರಣದಿಂದಾಗಿಯೇ ನೀವು ಆಡಳಿತ ಮಾಡಲು ಲಾಯಕ್ಕಲ್ಲ ಎಂದು ನಿರೂಪಿಸಲು ಇರುವ ಸುವರ್ಣ ಅವಕಾಶ. ಆದರೆ ಶುಕ್ರವಾರದ ಇಡೀ ದಿನದ ಕಲಾಪ ಗಮನಿಸಿದರೆ ಅವಿಶ್ವಾಸದ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ಪಾಳೆಯಗಳಲ್ಲಿ ಅಂತಹ ಗಂಭೀರತೆ ಕಾಣಲಿಲ್ಲ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪರಸ್ಪರರ  ಕೆಸರೆರೆಚಿಕೊಳ್ಳಲು ಮಾತಿನ ಬಾಣಗಳ ಪ್ರಯೋಗ ಆಯಿತೇನೋ ಎಂಬ ಭಾವನೆ ಇತ್ತು. ಸಂಖ್ಯಾಬಲದ ದೃಷ್ಟಿಯಿಂದ ಮೋದಿ ಸರಕಾರವನ್ನು ಉರುಳಿಸುವುದು ಪ್ರತಿಪಕ್ಷಗಳಿಗೆ ಅಸಾಧ್ಯ ಎಂಬ ವಾಸ್ತವದ ಹಿನ್ನೆಲೆಯಲ್ಲಿ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಸರಕಾರದ ಗಮನವನ್ನು ಪರಿಣಾಮಕಾರಿಯಾಗಿಯೇ ಸೆಳೆದು, ಅದು ಎಲ್ಲಿ, ಹೇಗೆ ವಿಫಲವಾಗಿದೆ ಎಂಬುದನ್ನು ಸಾದೋಹರಣವಾಗಿ ವಿಮಶೆರ್ಗೆ ಒಳಪಡಿಸುವ ಅವಕಾಶ ಇತ್ತು. ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ಎಂಬ ತನ್ನ ಹಳೆಯ ಆರೋಪವನ್ನು ಕಾಂಗ್ರೆಸ್ ಪುನರುಚ್ಛರಿಸಿದ್ದು ಬಿಟ್ಟರೆ ಅಂತಹ  ಗಂಭೀರ ವಿಚಾರಗಳ ಪ್ರಸ್ತಾಪ ಆಗಲೇ ಇಲ್ಲ. ಇಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಕ್ಕಿಂತ ಮುಂಬರುವ ಚುನಾವಣೆಯಲ್ಲಿ ತಮ್ಮ ತಮ್ಮ ನಿಲುವುಗಳನ್ನು ಪ್ರತಿಪಾದಿಸುವುದಕ್ಕಷ್ಟೇ ಚರ್ಚೆ ಸೀಮಿತವಾಗಿತ್ತು. ಕೊನೆಗೆ ಮೂಡುವ ಪ್ರಶ್ನೆ ಎಂದರೆ ಇದಕ್ಕೆ ಅವಿಶ್ವಾಸ ನಿರ್ಣಯ ಮಂಡಿಸುವ ಅಗತ್ಯವಿತ್ತೇ?

Tags

Related Articles

Leave a Reply

Your email address will not be published. Required fields are marked *

Language
Close