About Us Advertise with us Be a Reporter E-Paper

ಅಂಕಣಗಳು

ಮೋದಿ ನಿದ್ದೆಗೆಡಿಸಿರುವ ಮಾಯಾವತಿ-ಅಖಿಲೇಶ್

ಎಂಭತ್ತು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ನಿರೀಕ್ಷಯಂತೆ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡಿವೆ. ಆದರೆ ಈ ಹೊಂದಾಣಿಕೆಯಿಂದ ಕಾಂಗ್ರೆಸ್ ಪಕ್ಷವನ್ನು ದೂರವಿಟ್ಟಿರುವುದು ಅಚ್ಚರಿ ಮೂಡಿಸಿದೆ. ಏಕಾಂಗಿಯಾಗಿ ಬಿಜೆಪಿ ಅಥವಾ ಪ್ರಧಾನಿ ಮೋದಿ ಅವರನ್ನು ಎದುರಿಸಲು ಅಸಾಧ್ಯ ಎನ್ನುವುದು ಸತತ ಸೋಲುಗಳು ಈ ಎರಡೂ ಪಕ್ಷಗಳಿಗೆ ಪಾಠ ಕಲಿಸಿವೆ. ಈ ಕಾರಣದಿಂದಲೇ ಕಳೆದ 25 ವರ್ಷಗಳಿಂದ ಎದುರಾಳಿಗಳಾಗಿದ್ದ ಈ ಎರಡೂ ಪಕ್ಷಗಳು ಹೊಂದಾಣಿಕೆ ಸಾಧಿಸಿವೆ. ‘ಶತ್ರುವಿನ ಶತ್ರು ಎಂಬ ನಾಣ್ಣುಡಿ ಮತ್ತೊಮ್ಮೆ ಸಾಬೀತಾಗಿದೆ. ಬಿಜೆಪಿ ಇಬ್ಬರಿಗೂ ಸಮಾನ ಶತ್ರುವಾಗಿರುವುದು ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರು ಕೈ ಜೋಡಿಸಲು ಪ್ರಮುಖ ಕಾರಣ ಎನ್ನವುದರಲ್ಲಿ ಸಂದೇಹವಿಲ್ಲ.

ಈ ಮೈತ್ರಿ ಸಹಜವಾಗಿಯೇ ಬಿಜೆಪಿಯ ನಿದ್ದೆಗೆಡಿಸಿರುವುದರಲ್ಲಿ ಸಂಶಯವಿಲ್ಲ. ಸುದ್ದಿಗೋಷ್ಠಿಯಲ್ಲಿ ಮಾಯಾವತಿ ಅವರೂ ಇದನ್ನೇ ಹೇಳಿದ್ದಾರೆ. ಈ ಮೈತ್ರಿ ಅಪವಿತ್ರ, ದೇಶ ವಿರೋಧಿ ಅಭಿವೃದ್ಧಿ ವಿರೋಧಿ ಎಂದು ಬಿಜೆಪಿ ಏನೆಲ್ಲಾ ವಾದ ಮಂಡಿಸಿದರೂ ಪ್ರಧಾನಿ ಮೋದಿ ಅವರ ನಾಗಾಲೋಟಕ್ಕೆ ಕಡಿವಾಣ ಹಾಕಿರುವುದಂತೂ ಸುಳ್ಳಲ್ಲ. ಎರಡೂ ಪಕ್ಷಗಳ ಮತಗಳ ವಿಭಜನೆಯಿಂದ ಬಿಜೆಪಿ ಸುಲಭವಾಗಿ ಗೆಲುವಿನ ದಡ ಸೇರುತ್ತಿತ್ತು. ಕಳೆದ ಲೋಕಸಭಾ ಚುನಾವಣೆಯ ಅಂಕಿಂಶಗಳನ್ನು ಗಮನಿಸುವುದಾದರೆ ಬಿಜೆಪಿ ಪಡೆದ ಶೇ.42.3ರಷ್ಟು ಮತಗಳಷ್ಟನ್ನೇ ಎಸ್‌ಪಿ ಬಿಎಸ್‌ಪಿ ಪಡೆದಿದ್ದವು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇದೇ ರೀತಿ ಮತಗಳ ಹಂಚಿಕೆಯಾದರೆ ಬಿಜೆಪಿಯ ಅರ್ಧದಷ್ಟು ಸ್ಥಾನಗಳಿಗೆ ಕುತ್ತು ಬರುವುದರಲ್ಲಿ ಸಂಶಯವಿಲ್ಲ.

ಅಖಿಲೇಶ್ ಮತ್ತು ಮಾಯಾವತಿ ಜೋಡಿ ಯಾದವ, ಜಾಟ್ ಮತ್ತು ಮುಸ್ಲಿಂ ಸಮುದಾಯಗಳನ್ನು ಒಂದುಗೂಡಿಸುತ್ತದೆ. ಇದೀಗ ಹಿಂದೂ ಹೆಸರಿನಲ್ಲಿ ಮತಗಳ ಧ್ರುವೀಕರಣಕ್ಕೆ ಬೆವರು ಹರಿಸಬೇಕಾಗಿದೆ. ದೆಹಲಿಯ ಗದ್ದುಗೆ ಏರಬೇಕಾದರೆ ಉತ್ತರ ಪ್ರದೇಶವೇ ಹೆದ್ದಾರಿ. ಇಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಪಕ್ಷ ಅಥವಾ ಮೈತ್ರಿಕೂಟ ಅನಾಯಾಸವಾಗಿ ಸಂಸತ್ ಪ್ರವೇಶಿಸುವುದು ಸುಲಭ ಎನ್ನುವುದು ಅತಿಶಯೋಕ್ತಿ ಅಲ್ಲ. ಈ ಒಕ್ಕೂಟ ಈಗಾಗಲೇ ಬಿಜೆಪಿಗೆ ಸೋಲಿನ ಕಹಿ ಉಣಬಡಿಸಿದೆ. ಕಳೆದ ವರ್ಷ ನಡೆದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರ ಸೇರಿದಂತೆ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಎಸ್‌ಪಿ-ಬಿಎಸ್‌ಪಿ ಗೆಲುವು ಸಾಧಿಸಿತ್ತು. ಮಾಯಾವತಿ-ಅಖಿಲೇಶ್ ಜೋಡಿ ಎದುರಿಸಲು ಮೋದಿ-ಶಾ ಹೊಸ ಅಸ್ತ್ರಗಳ ಹುಡುಕಾಟ ನಡೆಸಬೇಕಾಗಿರುವುದು ಅನಿವಾರ್ಯ.

Tags

Related Articles

Leave a Reply

Your email address will not be published. Required fields are marked *

Language
Close